Breaking News
Home / ಲೇಖನಗಳು / ನಾಳೆಗಾಗಿ ಹೆಣ್ಣು ಮಕ್ಕಳನ್ನು ಗಟ್ಟಿಗೊಳಿಸಿರಿ

ನಾಳೆಗಾಗಿ ಹೆಣ್ಣು ಮಕ್ಕಳನ್ನು ಗಟ್ಟಿಗೊಳಿಸಿರಿ

ಅಬ್ದುಲ್ ಹಫೀಝ್ ನದ್ವಿ

ಹೊಳೆಯುವ ನಾಳೆಗಾಗಿ ಹೆಣ್ಣು ಮಕ್ಕಳನ್ನು ಸಶಕ್ತಗೊಳಿಸಿ ಎನ್ನುವ ಶೀರ್ಷಿಕೆಯಡಿಯಲ್ಲಿ ಕಳೆದ ಅಕ್ಟೋಬರ್ ಹನ್ನೊಂದಕ್ಕೆ ವಿಶ್ವ ಬಾಲಕಿಯರ ದಿನ ಆಚರಿಸಲಾಯಿತು. ಹೆಣ್ಣು ಮಕ್ಕಳ ರಕ್ಷಣೆ, ಅವರಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣ ಸೃಷ್ಟಿಸಲು ಯುಎನ್‍ಒ ಜಾಗತಿಕ ಮಟ್ಟದಲ್ಲಿ ಜಾಗೃತಿ ನಡೆಸಿತು.

ಆದರೆ ಇಸ್ಲಾಂ ಹೆಮ್ಮಕ್ಕಳ ಬಗ್ಗೆ ಏನೆನ್ನುತ್ತದೆ. ಪುರಷನಂತೆ ಮಹಿಳೆಯೂ ದೇವನ ವಿಶೇಷ ಸೃಷ್ಟಿ ಎಂದು ಪವಿತ್ರ ಕುರ್‍ಆನ್ ಹೇಳುತ್ತಿದೆ.” ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಉಂಟು ಮಾಡಿದನು ಮತ್ತು ಅವರೆರಡರಿಂದ ಅನೇಕಾನೇಕ ಸ್ತ್ರೀ ಪುರುಷನ್ನು ಲೋಕದಲ್ಲಿ ಹಬ್ಬಿಸಿದನು. ನೀವು ಯಾರ ಹೆಸರನ್ನೆತ್ತಿ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಕೇಳುತ್ತಿರುವಿರೋ ಆ ಅಲ್ಲಾಹನನ್ನು ಭಯಪಡಿರಿ” (4:1)

ಇಲ್ಲಿ ಪುರುಷನೂ ಮಹಿಳೆಯೂ ಒಂದೇ ಆತ್ಮದಿಂದ ಸೃಷ್ಟಿಸಲ್ಪಟ್ಟವರು ಎನ್ನುವ ಸತ್ಯವನ್ನು ಪವಿತ್ರ ಕುರ್‍ಆನ್ ಸೂಚಿಸಿದೆ. ಪುರುಷ ಮಹಿಳೆ ಒಂದೇ ಆತ್ಮದ ಎರಡು ಅಂಶಗಳು. ಈ ಎರಡು ಅಂಶಗಳು ಒಟ್ಟು ಸೇರಿದಾಗ ಅದು ಪೂರ್ಣವಾಗುವುದು. ಅಥವಾ ಜೀವನ ಅವರ ಇಬ್ಬರ ಸೇರುವಿಕೆಯಲ್ಲಿ ಪೂರ್ಣ ರೂಪವನ್ನು ಪಡೆಯುವುದು. ಮಹಿಳೆ ಪುರುಷರ ನಡುವೆ ಈ ಬಾಂಧವ್ಯ ಪ್ರೀತಿ, ವಿಶ್ವಾಸ, ಕರುಣೆಯ ಮೂಲವೂ ಆಗಿದೆ.

ದಂಪತಿಗಳ ನಡುವೆ ಇರುವ ಕರುಣೆ, ಪ್ರೀತಿ ದೇವನ ದೃಷ್ಟಾಂತ ಎಂದು ಪವಿತ್ರ ಕುರ್‍ಆನಿನ ದೃಷ್ಟಿಕೋನವಾಗಿದೆ. ” ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. (30:21)

ಹೆಣ್ಣು ಗಂಡು ಎಂಬ ತಾರತಮ್ಯವನ್ನು ಪವಿತ್ರ ಕುರ್‍ಆನ್ ಒಪ್ಪಿಲ್ಲ. ಪುರುಷ, ಮಹಿಳೆಗೆ ಸಮಾನವೋ, ಮಹಿಳೆ ಪುರುಷನಿಗೆ ಸಮಾನವೋ ಆಗುವುದು ಸಾಧ್ಯವಿಲ್ಲ ಎನ್ನುತ್ತದೆ. ಹಾಗೆ ಯತ್ನ ನಡೆಸುವುದು ಪ್ರಕೃತಿ ವಿರುದ್ಧ ಪ್ರವೃತ್ತಿಯಾಗುವುದು. ಮಹಿಳೆ, ಪುರುಷರನ್ನು ಪ್ರಕೃತಿ ಅವರಿಗೆ ಕೊಟ್ಟ ಸ್ಥಾನದಲ್ಲಿಯೇ ನೆಲೆಯೂರಿಸುತ್ತದೆ. ಪ್ರಕೃತಿ ಮಹಿಳೆ ಪುರುಷರಿಗೆ ಕೊಟ್ಟ ಸ್ಥಾನಗಳನ್ನೇ ಪ್ರಕೃತಿ ಧರ್ಮವಾಗಿ ಇಸ್ಲಾಮ್ ಅವರಿಗೆ ಪ್ರದಾನ ಮಾಡಿದೆ.

ಪ್ರವಾದಿವರ್ಯರು(ಸ) ಒಂದು ಹೆಣ್ಣು ಮಗು ಇದ್ದವರಿಗೆ ಅವಳನ್ನು ಜೀವಂತ ಹೂಳದೆ ನಿಂದಿಸದೆ, ಅವಳಿಗಿಂತ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಕೊಡೆದೆ ಬೆಳಸುವುದಾದರೆ ಆತನ ಸ್ವರ್ಗ ಪ್ರವೇಶ ಖಚಿತ (ಅಬೂದಾವೂದ್) ಎಂದಿದ್ದಾರೆ.

ಹೆಣ್ಣು ಮಕ್ಕಳು ಜನಿಸುವ ಹಕ್ಕಿಲ್ಲದ ನಾಡಾಗಿ ಭಾರತ ಬದಲಾಗಿದೆ. ಹೆಣ್ಣು ಭ್ರೂಣ ಹತ್ಯೆ ಕೊಲೆ ಅಪರಾಧವಾಗಿ ಕಾನೂನು ತಿದ್ದುಪಡಿ ಯತ್ನ ಕಠಿಣ ಮಾನವಹಕ್ಕು ಉಲ್ಲಂಘನೆಯಾಗಿ ಜನರ ಮನೋಭಾವ ತಿದ್ದುವ ಬಲವಾದ ಕ್ರಮಗಳು ಜರಗಬೇಕಾಗಿದೆ ಎಂದು ಸುಪ್ರೀಂಕೋರ್ಟು ಹೇಳಿತ್ತು. ಇದೇ ಅವಧಿಯಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಒಂದು ಕಸದ ರಾಶಿಯಲ್ಲಿ ಹೆಣ್ಣು ಭ್ರೂಣಗಳು ಕಂಡು ಬಂದಿದ್ದವು. ವಿಶ್ವದಲ್ಲೆ ಮಹಿಳಾ ದೌರ್ಜನ್ಯ ನಡೆಯುವ ದೇಶಗಳಲ್ಲಿ ಭಾರತಕ್ಕೆ ನಾಲ್ಕನೆ ಸ್ಥಾನವಿದೆ.

ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ತಲೆ ಕೆಳಗೆ ಹಾಕುತ್ತಿದ್ದ ಸಮಾಜ ಅರಬರದ್ದಾಗಿತ್ತು. ಆ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ (ಸ) ಜನಿಸಿದ್ದರು. ಹೆಣ್ಣು ಮಗುವನ್ನು ಜೀವಂತ ಅವರು ಹೂಳುತ್ತಿದ್ದರು. ಇದನ್ನು ಪವಿತ್ರ ಕುರ್‍ಆನ್ ಬಲವಾಗಿ ಖಂಡಿಸಿತು ಮತ್ತು ನಿಷೇಧಿಸಿತು.

” ಇವರ ಪೈಕಿ ಯಾರಿಗಾದರೂ ಮಗಳು ಹುಟ್ಟಿದ ಸುವಾರ್ತೆ ಕೊಟ್ಟಾಗ ಅವನ ಮುಖ ಕಳೆಗುಂದಿ ಹೋಗುತ್ತದೆ ಮತ್ತು ಅವನು ಸಿಡಿಮಿಡಿಗೊಳ್ಳುತ್ತಾನೆ. ಈ ವಾರ್ತೆಯ ಬಳಿಕ ಮುಖ ತೋರಿಸಲಾಗದೆ ಜನರಿಂದ ತಲೆ ಮರೆಸಿಕೊಳ್ಳುತ್ತಾನೆ. ಈ ಅಪಮಾನದೊಂದಿಗೆ ಮಗುವನ್ನುಳಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ. ಇವರು ಅಲ್ಲಾಹನ ಬಗ್ಗೆ ಎಂತಹ ಕೆಟ್ಟ ನಿರ್ಣಯ ಕೈಗೊಳ್ಳುತ್ತಾರೆಂದು ನೋಡಿರಿ” (16:58, 59)”

” ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವಾಗ, ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಿತು ಎಂದು”(81:8,9) ಭಾರತದಲ್ಲಿ ಹೆಣ್ಣು(ಭ್ರೂಣ) ಮಕ್ಕಳ ಹೆಚ್ಚು ಅಬಾರ್ಶನ್ ನಡೆಯುವ ಜಾಗ ತಮಿಳಾಡಿನ ಇಸಿಲಾಂಪೆಟ ಎಂದು ವರದಿಯಾಗಿತ್ತು ಇದು ಸ್ವಾರ್ಥಿಗಳ ಕ್ರೂರ ಮುಖವನ್ನು ಅನಾವರಣಗೊಳಿಸುತ್ತಿವೆ.

ತಮ್ಮ ಸುಖಾಡಂಬರವನ್ನು ರಕ್ಷಿಸುವ ಸ್ವಾರ್ಥವೇ ಗರ್ಭಪಾತಕ್ಕೆ ಕಾರಣ, ಇದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಶಿಕ್ಷೆಗಳಿರಬೇಕು. ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆ ಹುಟ್ಟುವ ಹಕ್ಕು ಮತ್ತು ಅವಳನ್ನು ಕಡೆಗಣಿಸದೆ ಸಂರಕ್ಷಣೆ ನೀಡಬೇಕೆಂದು ಪ್ರವಾದಿ(ಸ) ಕಲಿಸಿದ್ದಾರೆ.

ಪ್ರವಾದಿ(ಸ) ಹೇಳಿದರು” ಒಬ್ಬರಿಗೆ ಹೆಣ್ಣು ಮಗು ಹುಟ್ಟಿದರೆ ಆತನಿಗೆ ಸ್ವರ್ಗ ಕಡ್ಡಾಯವಾಯಿತು ಅಥವಾ ಆತನನ್ನು ನರಕದಿಂದ ವಿಮೋಚನೆಯಾಯಿತು. (ಮುಸ್ಲಿಂ). ಹೆಣ್ಣು ಮಕ್ಕಳಿಗೆ ಶಿಕ್ಷಣ, ಗೌರವದಿಂದ ಮದುವೆ ಮಾಡಿಕೊಡಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಮಹಿಳಾ ವಿಮೋಚನಾ ಆಂದೋಲನಕ್ಕೆ ಇನ್ನೂ ದಾಟಿ ಬರದ ಹಲವು ಹಕ್ಕುಗಳನ್ನು ಸಾವಿರದ ನಾನೂರು ವರ್ಷ ಮೊದಲು ಇಸ್ಲಾಮ್ ಮಹಿಳೆಗೆ ಕೊಟ್ಟಿತ್ತು ಮತ್ತು ಎಲ್ಲ ರೀತಿಯ ದಮನಗಳಿಂದ ಅವಳಿಗೆ ಪೂರ್ಣ ಸಂರಕ್ಷಣೆ ಕೊಟ್ಟಿತು.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *