Breaking News
Home / ಲೇಖನಗಳು / ಯುದ್ಧ : ಪ್ರವಾದಿಯವರ ನಿಲುಮೆ

ಯುದ್ಧ : ಪ್ರವಾದಿಯವರ ನಿಲುಮೆ

ಯೂಸುಫ್ ಉಮರಿ

ಆಧುನಿಕ ಇಸ್ಲಾಮೀ ಜಗತ್ತಿನಲ್ಲಿ ಪ್ರವಾದಿವರ್ಯರ(ಸ) ಯುದ್ಧ ನೀತಿ ಹೆಚ್ಚು ಪ್ರಧಾನವಾಗಿದೆ. ಇಸ್ಲಾಮಿನ ಟೀಕಾಕಾರರು, ವಿರೋಧಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ಹರಡುವ ವಿಷಯ ಇದು. ಪ್ರವಾದಿ, ಧರ್ಮ, ಜಿಹಾದ್ ಎಂಬ ನೆಲೆಯಲ್ಲಿ ಮೂರು ಸಾಂಕೇತಿಕ ಪದಗಳಲ್ಲಿರುವ ತಪ್ಪುಕಲ್ಪನೆ ಈ ವಾದಗಳಿಗೆ ಆಧಾರವೂ ಆಗಿದೆ. ಇಸ್ಲಾಮಿನ ಅರ್ಥ ವ್ಯಾಪ್ತಿಯಲ್ಲಿ ಈ ಸಾರ್ವತ್ರಿಕ ಅಭಿಪ್ರಾಯವನ್ನು ತಿದ್ದುಪಡಿ ಸಾಧ್ಯವಿದೆ. ಅದಕ್ಕಾಗಿ ಪ್ರವಾದಿಯ ಯುದ್ಧ ನಿಲುವಿನ ವಾಸ್ತವಿಕತೆ ಪ್ರಾಯೋಗಿಕತೆಗಳು ಮತ್ತು ಹಿನ್ನೆಲೆಯನ್ನು ವಿವರಿಸಲು ಇಸ್ಲಾಮಿನ ಮಾನವೀಯ ಮತ್ತು ಯುಕ್ತಿಯುತ ಸಾಕ್ಷ್ಯಗಳನ್ನು ಮುಂದಿಡಬಹುದು.

1. ಪ್ರವಾದಿ- ಎಲ್ಲ ಪ್ರವಾದಿಗಳು ಆಧ್ಯಾತ್ಮಿಕ ವ್ಯಕ್ತಿಗಳೇ. ಅವರು ಆಧ್ಯಾತ್ಮಿಕವನ್ನು ಹೇಳುತ್ತಾರೆ. ಸಾರ್ವಜನಿಕ ಸ್ಥಳಗಳಿಂದ ದೂರವಿದ್ದು ಪರಿಶುದ್ಧ ಜೀವನ ನಡೆಸಬೇಕಾದರವರು. ಇವೆಲ್ಲವೂ ಪ್ರವಾದಿಗಳ ಕುರಿತು ಜನ ಸಮಾನ್ಯರಲ್ಲಿರುವ ಅಭಿಪ್ರಾಯಗಳು. ಆದರೆ ಅವರನ್ನು ಜನರಿಗೆ ದೇವನ ಸಂದೇಶಗಳನ್ನು ನೀಡಲೆಂದೇ ಪ್ರತಿನಿಧಿಗಳಾಗಿ ಆಯ್ಕೆ ಮಾಡಲ್ಪಟ್ಟವರು. ಜನರ ನಡುವೆ ಬದುಕಿ ದೇವನ ಸಂದೇಶ ತಲುಪಿಸುವವರು. ಅದನ್ನು ಜೀವನದಲ್ಲಿ ತಂದು ಜನರಿಗೆ ಮಾದರಿಯಾಗುವ ವ್ಯಕ್ತಿಗಳು. ಪ್ರವಾದಿಗಳಲ್ಲಿ ಭೌತಿಕ ಮತ್ತು ಆಧ್ಯಾತ್ಮಿಕತೆ ಒಗ್ಗೂಡಿರುತ್ತದೆ. ಜನರ ನ್ಯಾಯಯುತ ಹಕ್ಕುಗಳನ್ನು ರಕ್ಷಿಸಲು ಶ್ರಮಿಸಿ ಆಧ್ಯಾತ್ಮಿಕ ಕ್ರಾಂತಿ ಇರುವವರಾಗಿ ಜನ ಸಮುದಾಯದಲ್ಲಿ ಅವರು ಜೀವಿಸುತ್ತಾರೆ.

2. ಧರ್ಮ- ಧರ್ಮ ಅಂದರೆ ಕೇವಲ ಕೆಲವು ವಿಶ್ವಾಸಾಚಾರಗಳೆಂಬ ಅಭಿಪ್ರಾಯಗಳು ಸಾರ್ವಜನಿಕವಾಗಿದೆ. ಇದು ಶತಮಾನಗಳಿಂದ ಜನರ ನಡುವ ದರ್ಮಗಳ ಕುರಿತಾದ ದೃಷ್ಟಿ. ಅದಕ್ಕೆ ಸಾರ್ವಜನಿಕ ಸ್ಥಳದಲ್ಲೋ, ರಾಜಕೀಯ ವಿಷಯಗಳಲ್ಲೋ ಸ್ಥಾನವಿಲ್ಲ. ಆದರೆ, ಇಸ್ಲಾಮ್ ವ್ಯಕ್ತಿ, ಕುಟುಂಬ ಸಮಾಜ ರಾಷ್ಟ್ರಕ್ಕಾಗಿ ಸಮಗ್ರ ಯೋಜನೆಯಾಗಿದೆ. ಸಾಮಾಜಿಕ ಬದಲಾವಣೆ ಅದರ ಗುರಿಯೂ ಆಗಿದೆ. ಸಾಮಾಜಿಕ ನ್ಯಾಯ, ಮಾನವ ಹಕ್ಕು ರಕ್ಷಣೆಗೆ ಮತ್ತು ಕಲ್ಯಾಣ  ರಾಷ್ಟ್ರಕ್ಕಾಗಿ ಇರುವ ಸಿದ್ಧಾಂತವೂ ಆಗಿದೆ.

3. ಜಿಹಾದ್ -ಹೆಚ್ಚು ತಪ್ಪು ಕಲ್ಪನೆಗೊಳಗಾದ ಪದ. ಜಿಹಾದ್ ಅನ್ನು ಇಸ್ಲಾಮಿನ ಯುದ್ಧ ನಿಲುಮೆಯನ್ನು ಆಧಾರವಾಗಿ ಸಾರ್ವಜನಿಕ ಸಮುದಾಯ ಭಾವಿಸಿದೆ. ಅದೊಂದು ಧರ್ಮ ಯುದ್ಧದ ಹೆಸರೆಂದೂ ಮತಾಂತರ ಮಾಡುವುದರ ಹೆಸರೆಂದೂ ಟೀಕಾಕಾರರು ಹೇಳುತ್ತಾರೆ. ವಾಸ್ತವದಲ್ಲಿ ಸಾಮಾಜಿಕವಾದ ಒಂದು ಬದಲಾವಣೆಯ ಸಮಗ್ರತೆಯ ಗರಿಷ್ಠ ಪರಿಶ್ರಮ ಅದು. ಅದು ಸಮಾಜದ ಉನ್ನತಿಗೆ , ಹಕ್ಕು ಸಂರಕ್ಷಣೆ, ನ್ಯಾಯ, ಕ್ಷೇಮಗಳಿಗಾಗಿ ಇರುವ ಪರಿಪೂರ್ಣ ಪರಿಶ್ರಮದ ಹೆಸರು . ಇವುಗಳ ಸಂರಕ್ಷಣೆಗಾಗಿ ಅನಿವಾರ್ಯವಾದರೆ ಮಾತ್ರ ಆಯುಧವನ್ನು ಕೈಗೆತ್ತಿಕೊಳ್ಳಲು ಇಸ್ಲಾಮ್ ಅನುಮತಿಸುತ್ತದೆ. ಆಯುಧ ಎತ್ತುವುದು ಇಸ್ಲಾಮ್ ಎಂಬ ಪದದ ಅರ್ಥವಾದ ಶಾಂತಿಗೆ ವಿಭಿನ್ನವಾಗಿ ನಿಲ್ಲುತ್ತದೆ. ಆದ್ದರಿಂದ ಯುದ್ಧಕ್ಕೆ ಇಲ್ಲಿ ಕಠಿಣ ಸೂಚನೆ ನಿರ್ದೇಶಗಳನ್ನು ಇಸ್ಲಾಮ್ ಆದೇಶಿಸುತ್ತದೆ.

ಯುದ್ಧ ಅನಿವಾರ್ಯವಾಗುವುದು ಯಾವಾಗ. ಅದು ಎರಡು ಹಂತದಲ್ಲಿ ಕಡ್ಡಾಯವೂ ಆಗುತ್ತದೆ. ಸಮಾಜದಲ್ಲಿ ಹಕ್ಕು ನಿರಾಕರಿಸಲ್ಪಟ್ಟಾಗ, ಆಕ್ರಮಿಸಲ್ಪಡುವಾಗ ಅವರ ಹಕ್ಕು ಸಂರಕ್ಷಣೆಗಾಗಿ ನಡೆಸುವ ಪರಿಶ್ರಮವನ್ನು ಹೋರಾಟ ಎನ್ನುವುದು. ಅಸ್ತಿತ್ವದಲ್ಲಿರುವ ಒಂದು ಸ್ಥಿರ ವ್ಯವಸ್ಥೆಯ ವಿನಾಶಕ್ಕೆ ಯತ್ನಿಸುವವರ ವಿರುದ್ಧ ಕಾರ್ಯಾಚರಣೆಯನ್ನು ಹೋರಾಟ ಎಂದು ಹೇಳಲಾಗುವುದು. ವ್ಯಕ್ತಿಯ ಚಿಂತನಾ ಸ್ವಾತಂತ್ರ್ಯ , ಜೀವಿಸುವ ಹಕ್ಕು ಸಂರಕ್ಷಿಸುವುದಕ್ಕಾಗಿ ಅವನು ಹೋರಾಡಲೇ ಬೇಕಾಗಿದೆ. ಆದ್ದರಿಂದಲೇ ಸ್ವಾತಂತ್ರ್ಯ ಸಮರ ಹೋರಾಟವಾಗಿದ್ದು.

ಎರಡನೆಯದು ಸಾಮಾಜಿಕ ಬದಲಾಣೆಯ ಪರಿಶ್ರಮ ಕ್ರಾಂತಿ ಎನ್ನುತ್ತೇವೆ. ಅಸ್ತಿತ್ವ ಪಡೆದುಕೊಂಡ ಅರಾಜಕ, ಕ್ರೂರ, ವ್ಯವಸ್ಥೆಯನ್ನು ಬದಲಿಸಲು ಸಾಮಾಜಿಕ ಪರಿವರ್ತನೆ ನಡೆಸಲು ಗರಿಷ್ಠ ಪರಿಶ್ರಮ ಕ್ರಾಂತಿಯಾಗಿದೆ. ಇವೆರಡೂ ಅನಿವಾರ್ಯ ಯುದ್ಧ ಘಟಕಗಳು. ಇತಿಹಾಸವೂ ಇದನ್ನು ನಿರಕಾರಿಸಿಲ್ಲ. ಫ್ರೆಂಚ್ ಕ್ರಾಂತಿ, ರಷ್ಯನ್ ಕ್ರಾಂತಿ, ಅರಬ್ ಕ್ರಾಂತಿಗಳನ್ನು ಇದಕ್ಕೆ ಉದಾಹರಿಸಬಹುದು.

ಪ್ರತಿರೋಧವನ್ನು ದೂರವಿಟ್ಟ ಯಾವ ಜೀವ ಪ್ರಕೃತಿಯೂ ಇಲ್ಲ. ಅಗತ್ಯ ಘಟ್ಟದಲ್ಲಿ ಸ್ವರಕ್ಷಣೆಗಾಗಿ ಪ್ರತಿರೋಧಿಸುವುದು ಪ್ರಕೃತಿ ಅಂಗೀಕರಿಸುತ್ತದೆ. ಜಗತ್ತಿನ ಸಕಲ ಜೀವಿಗಳು ಜೈವಿಕವಾದ ಒಂದು ಘಟಕವನ್ನು ಹೊಂದಿದ್ದು ದನ ಹಾಲು ಕೊಡುವ ಪ್ರಾಣಿ ಆದರೂ ಅದಕ್ಕೆ ಕೊಂಬು ಇದೆ ಯಾಕೆ. ನಾವು ಅದಕ್ಕೆ ಅನ್ಯಾಯ ಮಾಡಿದರೆ ಹಾಯಲಿಕ್ಕೇ ತಾನೆ. ಅಂದರೆ ಪ್ರತಿರೋಧಿಸುವ ಸಮಯ ಬಂದಾಗ ಅದನ್ನು ಅದು ಕೂಡ ಉಪಯೋಗಿಸುತ್ತದೆ. ಅದೊಂದು ಅಲಂಕಾರಕ್ಕಾಗಿರುವುದಲ್ಲ.

ಇಸ್ಲಾಮ್ ಇದನ್ನು ಅಂಗೀಕರಿಸುತ್ತದೆ. ಪವಿತ್ರಕುರ್‍ಆನ್ ಮನುಷ್ಯರನ್ನು ಪರಸ್ಪರ ಒಂದು ವಿಭಾಗದ ಮೂಲಕ ಇನ್ನೊಂದು ವಿಭಾಗವನ್ನು ತಡೆಯದಿರುತ್ತಿದ್ದರೆ ಭೂಮಿಯಲ್ಲಿ ದೊಡ್ಡ ಕ್ಷೋಭೆ ಆಗುತ್ತಿತ್ತೆನ್ನುತ್ತದೆ. ಉಳಿಯಲು ಅರ್ಹವಿರುವುದನ್ನು ಉಳಿಸಿಕೊಳ್ಳಲಿಕ್ಕಾಗಿ ಹೋರಾಟ. ಇದನ್ನು ಇಸ್ಲಾಮ್ ಕೂಡ ಒಪ್ಪುತ್ತದೆ. ಜೈವಿಕವಾಗಿ ಮನುಷ್ಯನ ಮೂಲ ಹಕ್ಕು ಇದು. ಬೇರೆ ಯಾವ ವ್ಯವಸ್ಥೆಗೂ ಇದನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ. ಯಾರಾದರೂ ದಾಳಿಗೆ ಬಂದಾಗ ಅದನ್ನು ತಡೆದು ಪ್ರತಿರೋಧಿಸುವುದು ಮನುಷ್ಯನ ಶರೀರ ಧರ್ಮವೂ ಆಗಿದೆ. ಇಸ್ಲಾಮ್ ಇದನ್ನು ಅಂಗೀಕರಿಸುತ್ತದೆ. ಇಂತಹ ಸಂದರ್ಭದಲ್ಲಿ ಮಾತ್ರ ಆಯುಧ ಎತ್ತಿಕೊಳ್ಳದೆ ಜಗತ್ತು ಮುನ್ನಡೆಯದು. ಪವಿತ್ರ ಗ್ರಂಥಗಳು ಇದನ್ನು ಅಂಗೀಕರಿಸುತ್ತದೆ. ಬೈಬಲ್ , ಭಗವದ್‍ ಗೀತೆಗಳಲ್ಲಿ ಇಂತಹ ಹೇಳಿಕೆಗಳನ್ನು ನಾವು ಧಾರಾಳ ಕಾಣಬಹುದು. ಬೈಬಲ್ ಹೇಳುತ್ತದೆ ಗೋಲಿಯತನನ್ನು ನಿಯಂತ್ರಿಸಲು ಒಬ್ಬ ದಾವೂದ್ ಉಂಟಾಗುವನು.

ಆದರೆ ಈ ಪರಿಶ್ರಮಗಳೆಲ್ಲ ಅಂತಿಮ ಘಟ್ಟದ್ದು. ಅನಿವಾರ್ಯವಾದಾಗ. ಇಸ್ಲಾಮ್ ಯುದ್ಧವನ್ನು ಒಂದಷ್ಟು ಕಠಿಣ ನಿಯಮಗಳ ಮೂಲಕವೇ ಅನುಮತಿಸಿತು. ಯಾಕೆಂದರೆ ರಕ್ತ ಬೀಳುವುದನ್ನು ಇಸ್ಲಾಮ್ ಬಯಸುವುದಿಲ್ಲ. ಜೊತೆಗೆ ಯುದ್ಧ ಮೂಲಕ ಗಲಭೆ, ಅಕ್ರಮ ಕೊನೆಗೊಳಿಸಿ ಶಾಂತಿ ಸ್ಥಾಪಿಸಬೇಕು. ಆ ಮೂಲಕ ಮಾನವೀಯ ಸಾಧನೆಯನ್ನು ಸ್ಥಾಪಿಸಲು ಸಾಧ್ಯವಾಗಬೇಕು. ಒಂದು ಯುದ್ಧ ಕೈಬಿಡಲು, ಮಾನವರನ್ನು ಸಂರಕ್ಷಿಸಲು ಅವಕಾಶವನ್ನು ಕೈಬಿಡಬಾರದೆಂದು ಇಸ್ಲಾಮ್ ಕಲಿಸುತ್ತದೆ.

ಪ್ರವಾದಿ ಇತಿಹಾಸ ಕಲಿತರೆ ನಮಗೆ ಇದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಪ್ರವಾದಿತ್ವದ ಮೊದಲ 13 ವರ್ಷ ಆತ್ಮ ಪ್ರತಿರೋಧ ಮಾಡದೆ ಎಲ್ಲವನ್ನೂ ಸಹಿಸಿಕೊಂಡು ಮಕ್ಕದಲ್ಲಿ ಬದುಕಿದರು. ವಿರೋಧಿಗಳನ್ನು ವಿರೋಧಿಸಲು ಸಾಧ್ಯವಿಲ್ಲದೆ ಅಲ್ಲ. ಪ್ರತಿ ಹೊಡೆತ ನೀಡುವ ತಾಕತ್ತಿಲ್ಲದೆಯೂ ಅಲ್ಲ. ಅದರ ದುಷ್ಪರಿಣಾಮ ಮೊದಲೇ ಕಂಡು, ಪ್ರತಿರೋಧಿಸುವ ಅವಕಾಶವನ್ನೇ ನಿಷೇಧಿಸಿತು ಇಸ್ಲಾಮ್. ಒಂಟಿ ಒಂಟಿಯಾಗಿ ಪ್ರತಿರೋಧಿಸುವುದಕ್ಕೆ ಹೊರಟ್ಟಿದ್ದರೆ ಅವರ ಮೇಲೆ ದೊಡ್ಡ ಸಮೂಹ ದಾಳಿ ಮಾಡಿದರೆ ಮುಸ್ಲಿಮರು ಹೆಚ್ಚು ದುರ್ಬಲರಾಗುತ್ತಿದ್ದರು. ಮಾತ್ರವಲ್ಲ ಒಟ್ಟುಗೂಡಿ ಚಿಕ್ಕ ಸಮುದಾಯ ಶತ್ರುಗಳನ್ನು ಎದುರಿಸುವುದೂ ಸಾಧ್ಯವಿರಲಿಲ್ಲ. ಇದು ಅಂದಿನ ಯುಕ್ತಿಯಾಗಿತ್ತು. ನೀವು ನಿಮ್ಮ ಕೈಗಳನ್ನು ತಡೆದಿರಿಸಿಕೊಳ್ಳಿರಿ. ಪ್ರತಿ ಹೊಡೆತ ನೀಡಬೇಡಿರಿ. ಅಲ್ಲಾಹನ ಮಾರ್ಗದಲ್ಲಿ ಸಹನೆ ಅವಲಂಬಿಸಿರಿ. ತ್ಯಾಗ ವಹಿಸಿರಿ ಎಂದು ಅಂದು ಪ್ರವಾದಿ(ಸ) ಮುಸ್ಲಿಮರಿಗೆ ಬೋಧಿಸಿದರು. ಆದ್ದರಿಂದ ಅಂದು ಮುಸ್ಲಿಮ್ ಸಮುದಾಯ ಅತ್ಯಂತ ಸಹನೆಯಿಂದ ವರ್ತಿಸಿತು.

ಮದೀನದ ಅನುಯಾಯಿಗಳೊಂದಿಗೆ ಮಕ್ಕದಲ್ಲಿ ನಡೆದಿದ್ದ ಅಕಬ ಒಪ್ಪಂದದ ವೇಳೆ ಮಕ್ಕದ ಕುರೈಶರ ಒಬ್ಬ ಬೇಹುಗಾರ ಅಲ್ಲಿದ್ದ, ಪ್ರವಾದಿ ಒಪ್ಪಂದ ಮಾಡಿಕೊಂಡಿದ್ದನ್ನು ಬಹಿರಂಗವಾಗಿ ಕೂಗಿ ಹೇಳತೊಡಗಿದ. ಪ್ರವಾದಿವರ್ಯರ ಜೊತೆಯಿದ್ದ ಸಂಗಡಿಗರು ಕೇಳಿದರು. ನಾವು ಅವನನ್ನು ಕೊಲ್ಲಲೇ? ಆದರೆ ಪ್ರವಾದಿ ಹೇಳಿದರು ಬೇಡ, ಬೇಡವೇ ಬೇಡ. ತದನಂತರ ಪ್ರವಾದಿ(ಸ) ಮಕ್ಕದಿಂದ ಮದೀನಕ್ಕೆ ಹಿಜರಾ(ವಲಸೆ ಹೊರಟು ) ಹೋದರು. ಈ ಸಂದರ್ಭದಲ್ಲಿ ಪ್ರವಾದಿ(ಸ)ಯನ್ನು ಕೊಲ್ಲುವ ಯತ್ನವೂ ನಡೆಯಿತು. ಆದರೂ ಪ್ರವಾದಿ(ಸ) ಪ್ರತಿರೋಧಕ್ಕೆ ಮುಂದಾಗಿರಲಿಲ್ಲ.

ತದನಂತರ ಮಕ್ಕದಿಂದ ಪ್ರವಾದಿವರ್ಯರು(ಸ) ಮದೀನಕ್ಕೆ ಬಂದರು. ಅಲ್ಲಿನವರ ಜೊತೆ ಮಕ್ಕದಿಂದ ಬಂಧವರನ್ನು ಸೇರಿಸಿ ಪರಸ್ಪರ ಸಹೋದರ್ಯ ಸಂಬಂಧ ಸ್ಥಾಪಿಸಿದರು. ಅಲ್ಲಿ ಆಗಾಗ ಪರಸ್ಪರ ಯುದ್ಧ ಮಾಡುತ್ತಿದ್ದಂತಹ ಔಸ್, ಖಝ್ರಜ್ ಗೋತ್ರಗಳ ನಡುವೆ ಒಪ್ಪಂದ ಮಾಡಿಸಿದರು. ಯಹೂದಿಯರು, ಕ್ರೈಸ್ತರೊಂದಿಗೂ ಪ್ರವಾದಿ(ಸ) ಕರಾರು ಮಾಡಿಕೊಂಡರು. ಎರಡು ಕೂಟಕ್ಕೂ ಪ್ರವಾದಿ(ಸ) ತಮ್ಮ ವಿಶ್ವಾಸದಂತೆ ಬದುಕಿ ಆರಾಧನೆ ನಡೆಸುವ ಸ್ವಾತಂತ್ರ್ಯವನ್ನು ಒಪ್ಪಂದದಲ್ಲಿ ಸೇರಿಸಿದರು. ಹೀಗೆ ಮದೀನದಲ್ಲಿ ಜಗತ್ತಿನ ಮೊದಲ ಸಂವಿಧಾನ ರೂಪುಗೊಂಡಿತು. ಪ್ರವಾದಿ ಜಗತ್ತಿನ ಮೊದಲ ಜಾತ್ಯತೀತ ದೇಶವನ್ನು ಮದೀನದಲ್ಲಿ ಸ್ಥಾಪಿಸಿದರು.

ಮಕ್ಕದಿಂದ ವಲಸೆ ಬಂದಿದ್ದ ಪ್ರವಾದಿ(ಸ) ಅನುಯಾಯಿಗಳ ಆಸ್ತಿಯನ್ನು ಮಕ್ಕ ನಿವಾಸಿಗಳು ಕಬಳಿಸಿದ್ದರು. ಹೀಗೆ ಇಂತಹವರ ನಾಯಕನಾಗಿದ್ದ ಅಬೂ ಸುಫಿಯಾನ್ ವ್ಯಾಪಾರಕ್ಕೆ ಸಿರಿಯಕ್ಕೆ ಹೊರಟು ಬಂದ ವೇಳೆ ಕಪಟ ವಿಶ್ವಾಸಿ ಉಬೈಇಬ್ನು ಸುಲೂಲ್ ಒತ್ತಾಶೆ ನೀಡಿದರೂ ಪ್ರವಾದಿವರ್ಯರು(ಸ) ಆ ವ್ಯಾಪಾರಿ ತಂಡದ ವಿರುದ್ಧ ಕ್ರಮ ಜರಗಿಸಲು ಮುಂದಾಗಲಿಲ್ಲ. ಆದರೆ ಯದ್ಧ ನಿರೀಕ್ಷೆಯಲ್ಲಿಯೇ ಇದ್ದ ಮಕ್ಕದ ವಿರೋಧಿಗಳು ಪ್ರವಾದಿವರ್ಯರು(ಸ) ಮತ್ತು ಸಂಗಡಿಗರ ವಿರುದ್ಧ ಸೈನಿಕ ಕಾರ್ಯಾಚರಣೆಗೆ ಮುಂದಾದರು. ಆದರೆ! ಪ್ರತಿರೋಧಿಸುವ ಅವಕಾಶ ಇದ್ದಾಗ ಕೂಡ ಪ್ರವಾದಿ(ಸ) ಅಂತಹದೊಂದು ಯುದ್ಧಕ್ಕೆ ಅನುಮತಿ ಕೊಡಲಿಲ್ಲ. ಅಬೂ ಸುಫಿಯಾನ್‍ರ ವ್ಯಾಪಾರಿ ತಂಡವನ್ನು ನಿರ್ವಿಘ್ನವಾಗಿ ಮಕ್ಕ ತಲುಪಲು ಅವಕಾಶ ಮಾಡಿಕೊಟ್ಟರು. ಆದರೆ, ಮಕ್ಕದ ಸೇನೆ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಬಂತು. ಹಿಂದೆ ಸರಿಯಲಿಲ್ಲ. ಅವರಲ್ಲಿಯೇ ಹಲವರು ಯುದ್ಧ ಬೇಡ, ಮದೀನದಲ್ಲಿ ತಮ್ಮ ಸಂಬಂಧಿಕರು ಮತ್ತು ಊರವರು ಇದ್ದಾರೆ. ಆದ್ದರಿಂದ ಅವರ ಮೇಲೆ ದಾಳಿ ಮಾಡುವುದು ಬೇಡ ಎಂದು ಹಲವರು ಹೇಳಿದರು.ಅದರೂ ಅವರು ಬಂದರು. ಬಂದು ಸೋತು ಹೋದರು.

ಇದಾಗಿ ಮರು ವರ್ಷ ಕ್ರಿಶಕ 624ರಲ್ಲಿ ದೊಡ್ಡ ಸೈನ್ಯದೊಂದಿಗೆ ಮಕ್ಕದವರು ಪುನಃ ಯುದ್ಧಕ್ಕೆ ಬಂದರು. ಈ ಸಲ ಮಕ್ಕದವರಿಗೆ ಮದೀನದ ಯಹೂದಿಯರು ಒತ್ತಾಶೆ ನೀಡಿದ್ದರು. ಈ ರೀತಿ ಪ್ರವಾದಿ(ಸ)ಯೊಂದಿಗೆ ಮಾಡಿದ ಕರಾರು ಯಹೂದಿಯರು ಉಲ್ಲಂಘಿಸಿದ್ದರು. ಈಗ ದೇಶ ರಕ್ಷಿಸುವುದಕ್ಕಾಗಿ ಯುದ್ಧ ಮಾಡುವುದು ಅನಿವಾರ್ಯವಾಗಿತ್ತು. ಅವರು ಮದೀನಾದ ಹೊರಗೆ ಉಹುದ್ ಎಂಬಲ್ಲಿ ಮಕ್ಕದವರೊಡನೆ ಯುದ್ಧ ಮಾಡಬೇಕಾಯಿತು. ಆಗಲೂ ಪ್ರವಾದಿ(ಸ) ಮದೀನವನ್ನು ಆಕ್ರಮಿಸಲು ಬಂದವರನ್ನು ಎದುರಿಸಲು ಸಿದ್ಧವಾಗಿದ್ದು. ಯುದ್ಧ ಮೊದಲ ಹಂತದಲ್ಲಿ ಗೆಲುವು ನಂತರ ಮುಸ್ಲಿಮರ ಪಾಳಯದಲ್ಲಿ ಸೋಲಿನ ಭೀತಿ ಕವಿದಿತ್ತು.

ಆದರೆ, ಇಂತಹ ಸನ್ನಿವೇಶದಲ್ಲಿಯೂ ಪ್ರವಾದಿ(ಸ) ರಣಾಂಗಣದಲ್ಲಿ ನಿಂತು ಯುದ್ಧವನ್ನು ಮುನ್ನಡೆಸುತ್ತಿದ್ದರು. ಪ್ರವಾದಿ ಆಧ್ಯಾತ್ಮಿಕ ವ್ಯಕ್ತಿಯಾಗಿ ದೂರ ಇದ್ದು ಸೈನಿಕರಿಗೆ ಆದೇಶ ನೀಡುತ್ತಿರಲಿಲ್ಲ. ಅಥವಾ ರಾಜರಂತೆ ಅರಮನೆಯಲ್ಲಿ ಕುಳಿತು ಯುದ್ಧಕ್ಕೆ ನಿರ್ದೇಶ ನೀಡಿರಲಿಲ್ಲ. ಸ್ವತಃ ತಾನೇ ನಾಯಕನಂತೆ ಮುಂದೆ ನಿಂತು ಯುದ್ಧದಲ್ಲಿ ಫಾಲ್ಗೊಂಡು ಅನುಯಾಯಿಗಳಿಗೆ ಸೂಕ್ತ ನಿರ್ದೇಶ ನೀಡುತ್ತಿದ್ದರು. ಸೋಲು ಖಚಿತವಾದರೂ ಅವರು ರಣರಂಗದಲ್ಲಿ ಸ್ಥಿರವಾಗಿದ್ದರು. ಪ್ರವಾದಿ(ಸ) ಅತ್ಯಂತ ಪ್ರೀತಿ ಪಾತ್ರರಲ್ಲಿ ಹೆಚ್ಚಿನವರನ್ನು ಈ ಯುದ್ಧದಲ್ಲಿ ಕಳಕೊಳ್ಳಬೇಕಾಗಿ ಬಂದರೂ ಅವರು ಧೃತಿಗೆಡಲಿಲ್ಲ. ನಂತರ ಇಂತಹದೊಂದು ಯುದ್ಧ ವಂಚನೆಗೆ ದೂಡಿದ್ದ ಯಹೂದಿಗಳ ವಿರುದ್ಧ ಪ್ರವಾದಿ(ಸ) ಆಯುಧವನ್ನೇ ಎತ್ತಲಿಲ್ಲ. ಅಪಾರ ಸಹನೆ ವಹಿಸಿದರು. ಈ ಹಿಂದೆ ಅವರೊಡನೆ ಮಾಡಿಕೊಂಡ ಒಪ್ಪಂದವನ್ನು ಮುಂದುವರಿಸಿಕೊಂಡು ಬಂದರು.

ಮದೀನದ ಯಹೂದಿಗಳು ಮಕ್ಕದವರಿಗೆ ಪುನಃ ಯುದ್ಧಕ್ಕೆ ಪ್ರೇರಪಿಸಿದರು. ಹೀಗೆ ದೊಡ್ಡ ಸೈನ್ಯದೊಂದಿಗೆ ಮಕ್ಕದವರು ಮದೀನಕ್ಕೆ ಪುನಃ ದಂಡೆತ್ತಿ ಬಂದರು. ಇತಿಹಾಸದಲ್ಲಿ ಈ ಯುದ್ಧವನ್ನು ಕಂದಕ್ ಯುದ್ಧ ಅಥವಾ ಅಹ್ಝಾಬ್ ಯುದ್ಧ ಎನ್ನಲಾಗುತ್ತದೆ. ಪ್ರವಾದಿ ಮತ್ತು ಸಂಗಡಿಗರು ಮದೀನದ ಸುತ್ತ ಹೊಂಡ ತೋಡಿ ಶತ್ರುಗಳನ್ನು ಎದುರಿಸಿದರು. ಆದರೆ ಮಕ್ಕದ ಶತ್ರುಗಳಲ್ಲಿ ಕೆಲವು ಮಂದಿ ಯಹೂದಿಗಳ ಸಹಾಯದೊಂದಿಗೆ ಹೊಂಡ ದಾಟಿ ಇತ್ತ ಬಂದು ಪ್ರವಾದಿ ಮತ್ತು ಸಂಗಡಿಗರಿಗೆ ಬಹಳಷ್ಟು ಸಂಕಷ್ಟು ಸೃಷ್ಟಿಸಿ ಹಾಕಿದರು. ಕೊನೆಗೆ ಈ ಯುದ್ಧದಲ್ಲಿ ಪ್ರತಿಕೂಲ ಹವಮಾನ ಮತ್ತು ಧೈರ್ಯಗುಂದಿ ಶತ್ರುಗಳು ಹಿಂದೆ ಸರಿಯಬೇಕಾಯಿತು. ಈ ರೀತಿ ಯುದ್ಧವಾಗದೆಯೇ ಯುದ್ಧ ಪರಿಸ್ಥಿತಿ ಸಮಾಪ್ತವಾಯಿತು . ಈಗಲೂ ಯಹೂದಿಯರ ವಂಚನೆಯ ಬಲೆ ಹೆಣೆದುದು ತಿಳಿದೂ ಪ್ರವಾದಿ(ಸ) ಅವರ ವಿರುದ್ಧ ಕ್ರಮವನ್ನೇ ಜರಗಿಸಲಿಲ್ಲ.

ಅದರ ನಂತರ ಹುದೈಬಿಯ ಸಂಧಿ ಸಂದರ್ಭ ಬಂತು. ಅಥವಾ ಈ ಸಂಧಿಯಲ್ಲಿ ಮಕ್ಕದವರು ಪ್ರವಾದಿವರ್ಯರು(ಸ) ಮತ್ತು ಮದೀನದೊಂದಿಗೆ ಯುದ್ಧ ವಿರಾಮ ಒಪ್ಪಂದ ಮಾಡಿಕೊಂಡರು. ಆದರೆ ಕೊನೆಗೆ ಈ ಸಂಧಿಯನ್ನು ಮಕ್ಕದವರೇ ಉಲ್ಲಂಘಿಸಿದರು. ಆ ನಂತರ ಮಕ್ಕವನ್ನು ಅರ್ಥಾತ್ ತನ್ನ ಹುಟ್ಟೂರು ವಶಪಡಿಸಲು ಮುಸ್ಲಿಮರು ಪ್ರವಾದಿಯ(ಸ) ನೇತೃತ್ವದಲ್ಲಿ ಹೋದರು. ತನ್ನನ್ನು ಹೊರಗಟ್ಟಿದ ತನ್ನ ನೆಲವನ್ನು ಅಂದಿನ ಅರಾಜಕತೆಯಿಂದ ಬಿಡುಗಡೆ ಮಾಡುವುದು. ಜೊತೆಗೆ ಕಾಯಂ ಆಗಿ ತನ್ನ ದೇಶದ ವಿರುದ್ಧ ಯುದ್ಧ ಬೆದರಿಕೆ ಇರುವುದನ್ನು ಕೊನೆಗೊಳಿಸುವುದಕ್ಕಾಗಿ ಪ್ರವಾದಿ ಈ ಕಾರ್ಯಾಚರಣೆಗೆ ಮುಂದಾಗಿದ್ದರು. ಹೀಗಾಗಿ ಅಂದು ಈ ರೀತಿ ಹೋರಾಟ, ಕ್ರಾಂತಿಗಳೆಲ್ಲವೂ ಒಮ್ಮೆಯೇ ಸಂಭವಿಸಿ ಬಿಟ್ಟಿತ್ತು.

ಅದರೆ! ಅಲ್ಲಿ ಮಕ್ಕದಲ್ಲಿ ಪ್ರವಾದಿಗೆ(ಸ) ಒಂದು ಯುದ್ಧ ಅಗತ್ಯ ಎದುರಾಗಲಿಲ್ಲ. ಒಂದು ಬೊಟ್ಟು ರಕ್ತ ಭೂಮಿಗೆ ಬೀಳದೆ ಸ್ವ ನೆಲದ ವಿಮೋಚನೆ ಅವರಿಂದ ಸಾಧ್ಯವಾದದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಈ ಯುದ್ಧದಲ್ಲಿ ಅವರು ಯಾರನ್ನೂ ಪಣಕ್ಕಿಟ್ಟಿಲ್ಲ. ತನ್ನ ಮೇಲೆ ಪದೇ ಪದೇ ದಾಳಿ ಮಾಡಿದ ಆ ಜನರೊಂದಿಗೆ ಪ್ರತೀಕಾರದ ರಾಜಕೀಯವನ್ನೂ ಮಾಡಲಿಲ್ಲ. ಬದಲಾಗಿ ಕೇವಲ ಹದಿನೇಳು ಮಂದಿಯನ್ನು ಬಂಧಿಸಲಾಯಿತು.ಇವರಲ್ಲಿ ನಾಲ್ವರನ್ನು ಬಿಟ್ಟು ಉಳಿದವರೆಲ್ಲರಿಗೂ ಕ್ಷಮಾದಾನ ನೀಡಿ ಬಿಟ್ಟು ಕಳುಹಿಸಿ ಕೊಡಲಾಯಿತು. ಮಕ್ಕದ ಶತ್ರುಗಳ ಸರ್ವ ಸೇನಾಧಿಪತಿ ಅಬೂಸೂಫಿಯಾನ್ ಸಹಿತ ಎಲ್ಲರೂ ಬಿಡುಗಡೆಗೊಂಡರು.

ಪ್ರವಾದಿ(ಸ) ಯುದ್ಧ ಇಂತಹ ಮಾನದಂಡಗಳನ್ನು ಒಳಗೊಂಡಿದ್ದು. ಇಸ್ಲಾಮೀ ಇತಿಹಾಸದ ಯುದ್ಧದಲ್ಲಿ ಈ ಮಾನದಂಡಗಳಿವೆ. ಇದನ್ನು ಕೈಬಿಟ್ಟ ಯುದ್ಧವನ್ನು ಇಸ್ಲಾಮೀ ಸಮುದಾಯದಲ್ಲಿರುವಂತಿಲ್ಲ .

ಪವಿತ್ರ ಕುರ್‍ಆನ್ ಅಕ್ರಮಿಸಿದವರಿಗೆ ತಿರುಗೇಟು ನೀಡಲು ಮತ್ತು ಅವರ ವಿರುದ್ಧ ಯುದ್ಧ ಮಾಡಲು ಅಲ್ಲಾಹನು ಅನುಮತಿ ನೀಡಿರುವನು ಎಂದು ವಿವರಿಸಿದೆ. ಅಂದರೆ ಆಕ್ರಮಣಕ್ಕೊಳಗಾಗಿದ್ದರಿಂದ ನೀವು ಯುದ್ಧವನ್ನು ಮಾಡಿರಿ ಎಂದರ್ಥ. ಸುಖಾಸುಮ್ಮನೆ ಬೇಕಾಬಿಟ್ಟಿ ಯುದ್ಧವನ್ನು ಮಾಡುವಂತಿಲ್ಲ. ನಿಮ್ಮ ಮೇಲೆ ಯುದ್ಧ ಮಾಡಿದವರೊಂದಿಗೆ ಯುದ್ಧ ಮಾಡಬೇಕು , ಆದರೆ ಅತಿಕ್ರಮಿಸಬಾರದು. ಯಾಕೆಂದರೆ ಅಕ್ರಮಿಗಳನ್ನು ಅಲ್ಲಾಹನು ಮೆಚ್ಚುವುದಿಲ್ಲ ಎನ್ನುತ್ತದೆ ಇಸ್ಲಾಮ್ ಯಾಕೆಂದರೆ ಇಸ್ಲಾಮ್ ಯುದ್ಧದ ಮೂಲಕ ವಿಮೋಚನೆಯನ್ನು ಬಯಸುತ್ತದೆ. ದಮನಕೊಳಗಾಗುತ್ತಿರುವ ದುರ್ಬಲರು, ಮಹಿಳೆಯರು, ಮಕ್ಕಳು ಪುರುಷರು ಇವರ ವಿಮೋಚನೆಗಾಗಿ ಹೋರಾಡಬಾರದೇಕೆ ಎಂದು ಪವಿತ್ರ ಕುರ್‍ಆನ್ ಪ್ರೇರೆಪಿಸುತ್ತಿದೆ. ಅನ್ಯಾಯವನ್ನು ಸಹಿಸಿಕೊಂಡಿರಿ ಎನ್ನುವುದಿಲ್ಲ.

ಇನ್ನು, ವಿಶ್ವಾಸಕ್ಕಾಗಿ, ಧರ್ಮಕ್ಕಾಗಿ ಯುದ್ಧ ಮಾಡಲು ಇಸ್ಲಾಮ್ ಅನುಮತಿಸುವುದಿಲ್ಲ. ಅವುಗಳೆಲ್ಲ ಸಂರಕ್ಷಿಸಲು ಇಸ್ಲಾಮ್ ಕರೆ ನೀಡಿದೆ. ಮದೀನಾದಲ್ಲಿ ಯಹೂದಿಯರನ್ನು ಕೊನೆಗೂ ಶಿಕ್ಷಿಸಿದ್ದು ಅವರ ಧರ್ಮದ ವಿಷಯದಲ್ಲಾಗಿರಲಿಲ್ಲ. ಅವರು ಸ್ವದೇಶವನ್ನು, ಸ್ವದೇಶದ ಆಡಳಿತದ ವಿರುದ್ಧ ಪಿತೂರಿ ನಡೆಸಿದರು ಮತ್ತು ಪ್ರವಾದಿ(ಸ) ಹಾಗೂ ಮುಸ್ಲಿಮರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ವೈರಿಗಳಿಗೆ ಒತ್ತಾಶೆ ನೀಡಿದರು. ಅದಕ್ಕಾಗಿ ಅವರ ವಿರುದ್ಧ ಶಸ್ತ್ರ ಎತ್ತಿಕೊಳ್ಳಬೇಕಾಗಿ ಬಂದಿತ್ತು. ಯಹೂದಿಯರು ಪ್ರವಾದಿ ಮತ್ತು ಸ್ವದೇಶ ವಿರುದ್ಧ ಎಲ್ಲ ಮಗ್ಗುಲಿನಿಂದಲೂ ದಾಳಿ ನಡೆದಿತ್ತು. ಕೊನೆಗೂ ಪ್ರವಾದಿ(ಸ)ಯವರನ್ನು ಚರ್ಚೆಗೆ ಬನ್ನಿ ಎಂದು ಉಪಾಯದಿಂದ ಕರೆದು ಅವರನ್ನೇ(ಸ) ಕೊಲ್ಲಲು ಸಂಚು ಹೆಣೆದರು. ಆಗ ಅವರನ್ನು ಶಿಕ್ಷಿಸಲಾಯಿತು.

ಇಸ್ಲಾಮಿನ ಯುದ್ಧ ಒಂದು ಸಮುದಾಯವನ್ನು ಅಧೀನದಲ್ಲಿರಿಸಲಿಕ್ಕಾಗಿ ನಡೆದಿಲ್ಲ. ದೇಶವನ್ನು ನಾಶ ಪಡಿಸುವುದಕ್ಕಾಗಿಯೂ ನಡೆದಿಲ್ಲ. ಧರ್ಮ ಪ್ರಚಾರಕ್ಕೂ ನಡೆದಿಲ್ಲ. ಸಂಪತ್ತಿಗಾಗಿ ಇಸ್ಲಾಮ್ ಎಂದೂ ಯುದ್ಧ ಮಾಡಿಲ್ಲ. ಅದಕ್ಕೆ ಇಸ್ಲಾಮಿನಲ್ಲಿ ಅನುಮತಿಯೇ ಇಲ್ಲ. ಯಾಕೆಂದರೆ ಅವೆಲ್ಲವೂ ಅಗುವುದು ದೇವನಿಂದ ಎಂಬ ವಿಶ್ವಾಸ ಮುಸ್ಲಿಮರದ್ದಾಗಿದೆ. ಹಾಗಾಗಿ ಮುಸ್ಲಿಮರು ಅಥವಾ ಇಸ್ಲಾಮಿನ ಯುದ್ಧ ಪ್ರಕ್ರಿಯೆಯು ನ್ಯಾಯ, ಶಾಂತಿ, ಸೌಹಾರ್ದ ಸ್ಥಾಪನೆಗಾಗಿದೆ. ದಮಕ್ಕೊಳಗಾದ ಜನರ ಬಿಡುಗಡೆಗಾಗಿದೆ. ಇತಿಹಾಸದ ಅಧ್ಯಯನದ ಮೂಲಕ ಯಾರಿಗೂ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೂ ಇದೆ. ಹೌದು, ಸಾಧ್ಯವಿದೆ.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *