ವ್ಯಾಲಂಟೈನ್ ಪ್ರೀತಿ ಆದರೆ, ಅಪ್ಪ ಅಮ್ಮನದೂ ಮಕ್ಕಳ ಮೇಲೆ ಪ್ರೀತಿ ಅಲ್ವೇ?

ಫೆಬ್ರವರಿ 14 ಬಂದಾಕ್ಷಣ ಸ್ಮೃತಿ ಪಟಲದಲ್ಲಿ ಸುಳಿಯುವುದು ವ್ಯಾಲೆಂಟೈನ್ ಡೇ. ಅದಕ್ಕೆ ಬೇಕಾದ ವಾತಾವರಣವನ್ನು ನಮ್ಮ ಇಂದಿನ ಮಾಧ್ಯಮಗಳು ರೂಪಿಸುತ್ತಿವೆ.

ಅದರಲ್ಲೂ ದೃಶ್ಯ ಮಾಧ್ಯಮಗಳು ಒಂದು ಹೆಜ್ಜೆ ಮುಂದೆಯೇ. ಅದಕ್ಕೆ ಪೂರಕವಾದ ಸಿನೆಮಾಗಳೂ, ಧಾರವಾಹಿಗಳೂ ರಚಿಸಲ್ಪಡುತ್ತವೆ.

ಆದರೆ ವಾಸ್ತವದಲ್ಲಿ ದೇವನನ್ನು ಪರಿಚಯ ಪಡಿಸಲು ಬಂದ ಪ್ರವಾದಿಯೋರ್ವರನ್ನು ಜನರು ದೇವರನ್ನಾಗಿ ಮಾಡಿ ಆರಾಧಿಸಲು ತೊಡಗಿ ಅಜ್ಞಾನದಲ್ಲಿ ಮುಳುಗಿದಂತೆಯೇ `ವ್ಯಾಲೆಂಟೈನ್‍ ಡೇಯ ಅವಸ್ಥೆ ಆಗಿದೆಯಿಂದು.

ಮೂರನೇ ಶತಮಾನದಲ್ಲಿ ರೋಮ್‍ನಲ್ಲಿದ್ದ ಓರ್ವ ಸಂತ ಈ ವ್ಯಾಲೆಂಟೈನ್. ಅಂದು ರೋಮನ್ನರನ್ನು ಆಳುತ್ತಿದ್ದ ಕ್ಲಾಡಿಯಸ್ ಅಧಿಕಾರ ಮತ್ತು ಯುದ್ಧದ ಲಾಲಸೆಯಿಂದಾಗಿ ಯುವಕರನ್ನು ತನ್ನ ವ್ಯವಸ್ಥೆ ತೊಡಗಿಸಿಕೊಳ್ಳಲಿಕ್ಕಾಗಿ ಹೊಸ ಕಾನೂನೊಂದನ್ನು ಜಾರಿಗೆ ತಂದ.

ಅಂದರೆ ಈ ಕಾನೂನಿನ ಪ್ರಕಾರ ಇನ್ನು ಮುಂದೆ ಯಾರೂ ಮದುವೆಯಾಗಬಾರದು. ಯುವಕರಿಗೆ ಮದುವೆಯನ್ನು ನಿರಾಕರಿಸಲಾಗಿತ್ತು.

ಯಾವ ಮದುವೆಯಿಂದ ಕುಟುಂಬ ಬೆಳೆದು ಭದ್ರ ಸಮಾಜ ರೂಪು ತಾಳುತ್ತದೋ ಅದೇ ಮದುವೆಯೆಂಬ ಪ್ರಾಕೃತಿಕ ಮತ್ತು ನೈಸರ್ಗಿಕ ವ್ಯವಸ್ಥೆಗೆ ಕ್ಲಾಡಿಯಸ್ ಸಮಾಧಿ ಕಟ್ಟಲು ತೀರ್ಮಾನಿಸಿದ್ದನು.

ಆದರೆ ಸಂತ ವ್ಯಾಲೆಂಟೈನ್ ಇದನ್ನು ವಿರೋಧಿಸಿದ. ಮದುವೆಯಾಗ ಬಯಸುವವರನ್ನು ಗುಪ್ತವಾಗಿ ಮದುವೆ ಮಾಡಿಸಲು ಪ್ರಾರಂಭಿಸಿದ.

ರಾಜನಿಗೆ ಈ ವಿಷಯ ತಿಳಿದು ವ್ಯಾಲೆಂಟೈನ್‍ನನ್ನು ಸೆರೆಮನೆಗೆ ತಳ್ಳಿ ಶಿರಚ್ಛೇದನ ಮಾಡಿಸಿದ.

ವಿವಾಹವೆಂಬ ಪವಿತ್ರ ಸಂಬಂಧದಿಂದಲೇ ನೈತಿಕತೆಯು ಜನ್ಮ ಪಡೆಯುತ್ತದೆ ಮತ್ತು ಅದುವೇ ಅದರ ಅಡಿಪಾಯ ಎಂಬ ಧ್ಯೇಯದ ಪ್ರಚಾರಕ್ಕಾಗಿ ವ್ಯಾಲೆಂಟೈನ್ ಬೆಲೆ ತೆರಬೇಕಾಯಿತು.

ಆದರೆ ದುರದೃಷ್ಟವಶಾತ್ ಇಂದು ಅದರ ಪರಿಕಲ್ಪನೆಯನ್ನು ಮರೆಮಾಚಿ ವ್ಯಾಲೆಂಟೈನ್ ಡೇಯನ್ನು ಒಂದು ಫ್ಯಾಶನ್ ಆಗಿ ಬದಲಾಯಿಸಲಾಗಿದೆ. ಕಮರ್ಶಿಯಲ್ ಈಡೇರಿಕೆಗಾಗಿ ಪ್ರೀತಿ ಪ್ರೇಮವನ್ನು ಬಲಿ ಪಶು ಮಾಡಲಾಗಿದೆ.

ಪ್ರೀತಿಗಳು ಬತ್ತಿ ಸ್ವಾರ್ಥ ಹೃದಯಗಳು ಬೆಳೆದು ಬಂದಾಗ ಅದಕ್ಕಾಗಿ ಒಂದು ದಿನವನ್ನು ವಿೂಸಲಿಡುವುದು ಮೂರ್ಖತನವಾಗಿದೆ.

ಪ್ರೀತಿಯು ನೈತಿಕ ಬುನಾದಿಯ ಮೇಲೆ ಮತ್ತು ನಿಸ್ವಾರ್ಥವಾಗಿದ್ದರೆ ಮಾತ್ರ ಅದು ದಡ ಸೇರುತ್ತದೆ. ಅನೈತಿಕ ಪ್ರೀತಿ ಸಂಬಂಧಗಳು ಭಾವನಾತ್ಮಕವಾಗಿ ಮೇಲ್ನೋಟಕ್ಕೆ ಮುದ ನೀಡುತ್ತದಾದರೂ ಪ್ರಾಯೋಗಿಕ ಜೀವನಕ್ಕೆ ಬರುವಾಗ ಅದು ಹೆಚ್ಚು ದುರಂತವನ್ನೇ ತಂದು ಕೊಡುತ್ತದೆ. ಅಂಕಿ ಅಂಶಗಳು ಇದನ್ನೇ ಸೂಚಿಸುತ್ತವೆ.

ಹುಟ್ಟಿಸಿ, ಸಾಕಿ ಸಲಹಿದ ತಂದೆ, ತಾಯಿ, ಒಡ ಹುಟ್ಟಿದವರು, ಕುಟುಂಬಿಕರು ಕೆಲವೊಮ್ಮೆ ಕೆಲವು ದಿನಗಳ ಹುಚ್ಚು ಪ್ರೀತಿಯು ಮುಂದೆ ನಗಣ್ಯವಾಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ.

ಇಂಥ ಪ್ರೀತಿಯ ಎಲ್ಲ ಸಂಬಂಧಗಳನ್ನು ಮುರಿದ ಓರ್ವ ಕಲ್ಲು ಹೃದಯಿ ಹುಡುಗಿ/ಹುಡುಗ ಕೆಲ ಸಮಯದ ನಂತರ ಈಕೆ/ಈತನನ್ನು ತ್ಯಾಗ ಮಾಡದಿರಲಾರರು ಎಂಬುದಕ್ಕೆ ಯಾವ ಗ್ಯಾರಂಟಿ?

ಆದರೆ ಸಮಾಜದಲ್ಲಿ ಆಗುತ್ತಿರುವುದು ಇದುವೇ. ತಂದೆ ತಾಯಿಗೆ ಸುಳ್ಳು ಹೇಳಿ ಅನೈತಿಕ ಸಂಬಂಧವನ್ನು ಕಲ್ಪಿಸಿದ ಜೋಡಿಯ ಸಂಬಂಧವೂ ಸುಳ್ಳಿನ ಮತ್ತು ಕಲ್ಪನೆಯ ಬುನಾದಿಯ ಮೇಲೆ ಕಟ್ಟಲ್ಪಟ್ಟಿರುತ್ತದೆ.

ಈ ಸುಳ್ಳಿನ ಬುನಾದಿಯು ಸಂಶಯವೆಂಬ ಪೆಡಂಭೂತವಾಗಿ ಪರಿಣಮಿಸಿ ನಂತರ ಜೋಡಿಯನ್ನೇ ಛಿದ್ರಿಸುವಲ್ಲಿ ಯಶಸ್ವಿಯಾಗುತ್ತದೆ.

ಮಾತ್ರವಲ್ಲ, ಪ್ರೇಮಿಗಳ ದಿನದ ಹಿಂದೆ ಬೃಹತ್ ಕಾರ್ಡ್ ಕಂಪೆನಿಗಳ ವ್ಯಾಪಾರದ ಷಢ್ಯಂತ್ರವಿರುವುದನ್ನು ವಿದ್ಯಾರ್ಥಿ ಯುವಕರು ಮನಗಾಣಬೇಕು.

ಪ್ರೀತಿಯು ಹೃದಯಕ್ಕೆ ಮತ್ತು ನೈತಿಕತೆಗೆ ಸಂಬಂಧಿಸಿದ್ದೇ ಹೊರತು ಧೂಳು ಹಿಡಿಯುವ, ಹರಿದು ಹೋಗು ಕಾರ್ಡ್‍ಗೆ ತಾಳೆಯಾಗುವಂತಹದ್ದಲ್ಲ.

ತಾಜ್ ಮಹಲ್ ಅರ್ಪಿಸಲ್ಪಟ್ಟದ್ದು ಪತ್ನಿಗಾಗಿದೆಯೆಂಬುದನ್ನು ಅರ್ಥೈಸಬೇಕು. ಆದರೆ ಇಂದು ಪ್ರೀತಿಯು ದೇಹಾಕರ್ಷಣೆಯ ಮಟ್ಟಿಗೆ ಸೀಮಿತವಾಗಿದೆ.

ಪ್ರತಿ ಶಾಹಜಹಾನ್ ತಾಜ್‍ಮಹಲ್ ಕಟ್ಟದಿದ್ದರೂ ಪ್ರತಿ ಹೃದಯದಲ್ಲಿ ಒಬ್ಬಳು ಮುಮ್ತಾಝ್ ಇರುತ್ತಾಳೆ.

ಆದ್ದರಿಂದ ವ್ಯಾಲೆಂಟೈನ್‍ನನ್ನು ಪ್ರೀತಿಸುತ್ತೀರಿ ಎಂದಾದರೆ ಇಂದಿನ ಅನೈತಿಕ ಸಂಸ್ಕೃತಿಯನ್ನು ವಿರೋಧಿಸಲೇ ಬೇಕು.

ಮಾತ್ರವಲ್ಲ, ವಿವಾಹವೆಂಬ ಪ್ರಾಕೃತಿಕ ಸಂಸ್ಕೃತಿಯ ವಾಹಕರಾಗಬೇಕು. ಆಗ ಮಾತ್ರ ಎಲ್ಲ ಸಂಬಂಧಗಳಲ್ಲಿ ದೇವನು ಪ್ರೀತಿ ವಿಶ್ವಾಸ, ಸಹಾನುಭೂತಿ ಮತ್ತು ಮನ ಸಂತೃಪ್ತಿಯನ್ನು ತುಂಬಿ ತುಳುಕಿಸುತ್ತಾನೆ.

ಅಂದ ಮಾತ್ರಕ್ಕೆ ನಾವು ಪ್ರೀತಿ ಪ್ರೇಮದ ವಿರೋಧಿಗಳು, ಮೂಲಭೂತವಾದಿಗಳು ಎಂದು ಲೇಬಲ್ ಅಂಟಿಸಲಾಗುತ್ತದೆ.

ಇಲ್ಲಿ ವಿಷಯ ಪ್ರಾಯ ಪೂರ್ತಿ ಆದವರಿಗೆ ಪ್ರೀತಿಯ ಸಂಪೂರ್ಣ ಹಕ್ಕನ್ನು ನೀಡಲಾಗಿದೆ. ಅದು ಅವರ ಹಕ್ಕೂ ಆಗಿದೆ. ಅವರ ವಿರುದ್ಧ ನೈತಿಕ ಪೋಲಿಸ್ ಗಿರಿ ಅದಕ್ಕಿಂತಲೂ ಘೋರವಾದುದಾಗಿದೆ.

ಒಂದು ವಿಚಾರಧಾರೆಯನ್ನು ವಿಚಾರಧಾರೆಯಲ್ಲೇ ಎದುರಿಸಬೇಕೇ ಹೊರತು ಬಲವಂತ ಪಡಿಸುವುದು ಸರಿಯಲ್ಲ. ಯಾವುದೇ ವಿಷಯದಲ್ಲಿ ಜನರನ್ನು ಶಿಕ್ಷಿತ ಗೊಳಿಸುವುದು ಸರಿಯಲ್ಲ.

ನಿಜವಾಗಿ ಅರ್ಧ ಮಾನವ ಕಲ್ಪನೆಯಲ್ಲಿ ನಂಬಿಕೆ ಇರುವವರು ಮಾತ್ರ ಇಂತಹ ವಿವಾಹ ಪೂರ್ವ ಸಂಬಂಧಗಳಲ್ಲಿ ತಮ್ಮ ಜೀವನ ಹಾಳು ಮಾಡುತ್ತಾರೆ. ಯೌವನದ ಬಿಸಿ ರಕ್ತದ ಕಾಲ ಘಟ್ಟವೇ ಜೀವನದ ಅಂತಿಮ ಘಟ್ಟ ಎಂಬ ಭ್ರಮೆಯಲ್ಲಿ ತೇಲುತ್ತಾರೆ. ಒಂದು ಕಾಲದಲ್ಲಿ ಆತ ಅಶಕ್ತನಾಗಿದ್ದ ಬಾಲ್ಯ ಕಾಲವನ್ನು ಮರೆತು ಅಹಂಕಾರ ಮೆರೆಯುತ್ತಾನೆ. ವೃದ್ಧಾಪ್ಯದಲ್ಲಿ ಕಣ್ಣು ತೆರೆಯುವಾಗ ವೃದ್ಧಾಶ್ರಮವೋ ಅಥವಾ ಇತರ ಅಸಹಾಯಕ ಪರಿಸ್ಥಿತಿಯಲ್ಲಿ ಇರುತ್ತಾನೆ.

ಆದ್ದರಿಂದ ಕುಟುಂಬ ಮತ್ತು ಮದುವೆಯ ವಿಷಯದಲ್ಲಿ ಇಸ್ಲಾಮ್ ಯಾವುದೇ ರಾಜಿ ಮಾಡುವುದಿಲ್ಲ. ಭದ್ರ ಕುಟುಂಬದ ಬುನಾದಿಯೇ ಸಮಾಜದ ಅಸ್ತಿತ್ವದ ಜೀವಾಳವಾಗಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಇದುವರೆಗೆ ಬಂದಿಲ್ಲ. ಬಾಲ್ಯದಿಂದ ವೃದ್ಯಾಪ್ಯದ ವರೆಗೆ ಮನುಷ್ಯನಿಗೆ ಭದ್ರ ಕುಟುಂಬದ ಅಗತ್ಯ ಇರುತ್ತದೆ. ಆದ್ದರಿಂದ ಪ್ರೀತಿ ಪ್ರೇಮದ ವಿಷಯದಲ್ಲಿ ಆಟೋಟ, ಟೈಮ್ ಪಾಸ್, ಲಿವಿನ್ ರಿಲೇಶನ್ ಇತ್ಯಾದಿಗಳನ್ನು ಇಸ್ಲಾಮ್ ಸೈದ್ದಾಂತಿಕವಾಗಿ ವಿರೋಧಿಸುತ್ತದೆ.

ಇಸ್ಲಾಮ್ ಅದರ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರೀತಿ ಪ್ರೇಮವನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ಅದನ್ನು ಸುದೃಢಗೊಳಿಸಬೇಕು.

ನಿಮಗೆ ಪ್ರೀತಿಸುವ ಸಂಪೂರ್ಣ ಸ್ವಾತಂತ್ರ್ಯ ಇದೆ. ಅದನ್ನು ನೇರವಾಗಿ ಅಪ್ಪ ಅಮ್ಮನಲ್ಲಿ ಹೇಳಿ, ಅವರ ವಿಶ್ವಾಸ ಗಳಿಸಬೇಕು. ಅವರದ್ದೂ ಪ್ರೀತಿಯೇ ಆಗಿದೆ.

ಕುರಾನ್ ಹೇಳುತ್ತದೆ…

ಅಧ್ಯಾಯ 30: ಅರ್ರೂಮ್ , ಸೂಕ್ತ 21

وَمِنْ آيَاتِهِ أَنْ خَلَقَ لَكُمْ مِنْ أَنْفُسِكُمْ أَزْوَاجًا لِتَسْكُنُوا إِلَيْهَا وَجَعَلَ بَيْنَكُمْ مَوَدَّةً وَرَحْمَةً ۚ إِنَّ فِي ذَٰلِكَ لَآيَاتٍ لِقَوْمٍ يَتَفَكَّرُونَ

ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.

– ಅಬೂ ಕುತುಬ್

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *