ಉಮರ್(ರ)ರ ನಿಷ್ಠುರತೆ

ಮೂಲ: ಎಸ್ಸೆಮ್ಕೆ, ಅನು: ಎ.ಎಂ.

ರಾಜ್ಯಪಾಲರು ಮತ್ತು ಅಧಿಕಾರಿಗಳನ್ನು ನೇಮಿಸುವಾಗ ಅವರವರ ಹಕ್ಕು ಕರ್ತವ್ಯ, ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ನಿರ್ಣಯಿಸಿ ಆದೇಶ ನೀಡುತ್ತಿದ್ದರು. ಅನೇಕ ಜನರ ಮುಂದೆ ನೇಮಕಾತಿ ಪತ್ರವನ್ನು ವಿತರಿಸುತ್ತಿದ್ದರು. ರಾಜ್ಯಪಾಲರಿಗೆ ನಿರ್ಣಯಿಸಿದ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಜನರ ಮುಂದೆ ರಾಜ್ಯಪಾಲರ ನೇಮಕಾತಿ ಪತ್ರವನ್ನು ಓದುವಂತೆ ತಿಳಿಸುತ್ತಿದ್ದರು. ರಾಜ್ಯಪಾಲರ ಕರ್ತವ್ಯಗಳು ಆಗ ಜನರಿಗೆ ಗೊತ್ತಾಗುತ್ತಿತ್ತು. ಆದ್ದರಿಂದ ರಾಜ್ಯಪಾಲರು ಮತ್ತು ಅಧಿಕಾರಿಗಳ ಜವಾಬ್ದಾರಿಕೆಗಳು ಜನರಿಗೂ ಗೊತ್ತಾದುವು. ಇದರಿಂದ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಸಂಭವಿಸಿದಾಗಲೆಲ್ಲ ಜನರೇ ರಾಜ್ಯಪಾಲರನ್ನು ಪ್ರಶ್ನಿಸುತ್ತಿದ್ದರು.

ರಾಜ್ಯಪಾಲರು ತಮ್ಮ ಕಾರ್ಯಕ್ರಮಗಳ ಕುರಿತು ನಿಖರ ಲೆಕ್ಕವನ್ನು ಇರಿಸಿಕೊಳ್ಳಬೇಕು ಎಂದು ಉಮರ್ ಆದೇಶಿಸಿದ್ದರು. ಜೊತೆಗೆ ರಾಜ್ಯಪಾಲರು ಜನರೊಂದಿಗೆ ಹೇಗೆ ವರ್ತಿಸಬೇಕೆನ್ನುವ ನಿಯಮಾವಳಿಗಳನ್ನು ಜಾರಿಗೊಳಿಸಿದರು. ರಾಜ್ಯಪಾಲರಿಗೆ ಅವರು ಯಾವಾಗಲೂ ಹೇಳುತ್ತಿದ್ದುದು ಹೀಗೆ, “ನಿಮ್ಮನ್ನು ನಾನು ಅಕ್ರಮಿ ಅಧಿಕಾರಿಗಳೆನ್ನಿಸಿಕೊಳ್ಳಲು ನಿಯೋಜಿಸಿದ್ದಲ್ಲ. ಇತರರು ಅನುಸರಿಸಲು ಸಾಧ್ಯವಿರುವ ನಾಯಕರನ್ನಾಗಿ ನಿಮ್ಮನ್ನು ನಾವು ನಿಯೋಜಿಸಿದ್ದೇವೆ. ಜನರ ಎಲ್ಲ ಹಕ್ಕುಗಳನ್ನು ನಾವು ನಿರ್ವಹಿಸಿರಬೇಕು. ಜನರಿಗೆ ಕಷ್ಟವಾಗುವಂತೆ ದಬ್ಬಾಳಿಕೆ ನಡೆಸುವಂತಿಲ್ಲ. ಸೂಕ್ತವಲ್ಲದ ರೀತಿಯಲ್ಲಿ ಅವರನ್ನು ಪ್ರಶಂಸಿಸಬೇಡಿರಿ. ಹಾಗೆ ಆಡಿದರೆ, ಅವರು ದಾರಿ ತಪ್ಪಬಹುದು. ಅವರಲ್ಲಿ ಬಲಶಾಲಿಗಳಾದವರು ದುರ್ಬಲರನ್ನು ಅಣಗಿಸುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ದುರ್ಬಲರಿಗೆ ಬಾಗಿಲುಗಳನ್ನು ಮುಚ್ಚಬೇಡಿರಿ. ಯಾವ ವಿಷಯದಲ್ಲಿಯೂ ನಿಮಗೆ ಇತರರಿಗಿಂತ ಮೇಲ್ಮೆ ಇದೆ ಎಂದು ಭಾವಿಸಬೇಡಿರಿ. ಹಾಗೆ ಸಂಭವಿಸಿದರೆ ಅದು ಅಕ್ರಮವಾಗಿ ಬಿಡುವುದು.”

ಉಮರ್(ರ)ರ ನಿಷ್ಠುರತೆ
ಪ್ರಜೆಗಳಲ್ಲಿ ತಮ್ಮ ಹಕ್ಕಿನ ಕುರಿತು ಅರಿವು ಬೆಳೆಯಲು ಖಲೀಫ ನಿರಂತರ ಪ್ರಯತ್ನಿಸುತ್ತಿದ್ದರು. ಹಜ್ಜ್ ಸಂದರ್ಭವನ್ನು ಇದಕ್ಕಾಗಿ ಅವರು ಬಳಸಿದರು.
“ಜನರೇ, ನಿಮಗೆ ಹೊಡೆಯಲು, ನಿಮ್ಮ ಹಣವನ್ನು ಕಬಳಿಸುವುದಕ್ಕೆ ರಾಜ್ಯಪಾಲರನ್ನು ನೇಮಿಸಲಿಲ್ಲ. ನಿಮಗೆ ಪ್ರವಾದಿವರ್ಯರು(ಸ) ಚರ್ಯೆ ಮತ್ತು ಮಾದರಿಗಳನ್ನು ಕಲಿಸಲಿಕ್ಕಾಗಿ ಅವರನ್ನು ನೇಮಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ಯಾರಾದರೂ ವರ್ತಿಸಿದರೆ ನಮಗೆ ತಿಳಿಸಿರಿ..” ಎಂದು ಉಮರ್ ಹೇಳಿದರು.

ಅಲ್ಲದೆ, ನೇಮಕಾತಿ ಹಂತದಲ್ಲಿ ರಾಜ್ಯಪಾಲರು ಮತ್ತು ಅಧಿಕಾರಿಗಳ ಆಸ್ತಿಯ ಸಂಪೂರ್ಣ ವಿವರವನ್ನು ಕಲೆ ಹಾಕಿದರು. ಅವರು ಉದ್ಯೋಗದಲ್ಲಿದ್ದಾಗ ಅವರ ಆಸ್ತಿಯಲ್ಲಿ ಹೆಚ್ಚಳವಾಗಿದೆಯೇ ಎಂದು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದರು. ಏನಾದರೂ ಲೆಕ್ಕಕ್ಕಿಂತ ಹೆಚ್ಚಿನದು ಅವರ ಆಸ್ತಿಗಳಲ್ಲಿದೆ ಎಂದು ಕಂಡು ಬಂದರೆ ಕೂಡಲೇ ಅದನ್ನು ರಾಷ್ಟ್ರದ ಖಜಾನೆಗೆ ಸೇರಿಸುತ್ತಿದ್ದರು.

ರಾಜ್ಯಪಾಲರು ಎಲ್ಲ ರೀತಿಯಲ್ಲಿಯೂ ಸಂಪೂರ್ಣವಾಗಿ ಜನ ಸಾಮಾನ್ಯರ ರೀತಿಯಲ್ಲಿ ಬದುಕುವಂತೆ ಅವರು ನೋಡಿ ಕೊಂಡರು. ರಾಜ್ಯಪಾಲರು ಈ ಮಿತಿಯನ್ನು ದಾಟಲು ಉಮರ್ ಅನುಮತಿಸಲಿಲ್ಲ. ಮಾತ್ರವಲ್ಲ ಅವಕಾಶವನ್ನೂ ನೀಡಲಿಲ್ಲ. ಆಡಳಿತಾಧಿಕಾರಿ ಜನ ಸಾಮಾನ್ಯನಿಗಿಂತ ಹೆಚ್ಚಿನವನೆಂಬ ಭಾವನೆ ಬೆಳೆಯದಂತೆ ಅವರು ನೋಡಿ ಕೊಂಡರು.

ಒಮ್ಮೆ ಕವಿ ಯಝೀದ್ ಬಿನ್ ಸಅಕ್‍ರು ರಾಜ್ಯಪಾಲರ ಆರ್ಥಿಕ ಅಪರಾಧಗಳ ಕುರಿತು ಹೀಗೆ ಹಾಡಿದರು-
“ಹುತಾತ್ಮರಾಗುವ
ಕರೆ ಬರಬಾರದೆಂದು ತಾನು ದೂರ ನಿಲ್ಲುವೆನು
ಕಾಲ ವಿಚಿತ್ರವನ್ನು ನೋಡಿದೆ.
ಅವರೊಂದಿಗೆ ಮಾತ್ರ ರಣಾಂಗಣ ತೊರೆಯುವವರು- ನಾವು
ಅವರೊಂದಿಗೆ ಸೇರಿ ಹೋರಾಡುವವರು
ಆದರೆ, ಅವರಿಗೆ ಆರ್ಥಿಕ ಸಾಮಥ್ರ್ಯವಿದೆ.
ನಾವಾದರೋ ಅದ್ಯಾವುದೂ ಇಲ್ಲದವರು…!
ಇಬ್ನು ಸಅಕ್ ರಾಜ್ಯಪಾಲರನ್ನು ಟೀಕಿಸಿ ಹಾಡಿದ್ದಕ್ಕೆ ಕೋಪ ತಪ್ತರಾದ ಕೆಲವರು ಖಲೀಫರಲ್ಲಿ ದೂರಿ ಕೊಂಡರು. ಕವಿತೆಯನ್ನು ಕೂಲಂಕಷವಾಗಿ ಉಮರ್ ಆಲಿಸಿದರು. ರಾಜ್ಯ ಪಾಲರುಗಳ ದೂರನ್ನು ಅವರು ಪುರಸ್ಕರಿಸಲಿಲ್ಲ. ಅವರು ನಾಡಿನ ಜನ ಸಾಮಾನ್ಯರಿಗೆ ತಮ್ಮ ಆಡಳಿತವನ್ನು ವಿಮರ್ಶಿಸುವ, ಕುಂದು-ಕೊರತೆಗಳನ್ನು ಎತ್ತಿ ತೋರಿಸುವ ಹಕ್ಕಿದೆ ಎಂದರು. ಅದರೊಂದಿಗೆ ಯಝೀದ್ ಇಬ್ನು ಸಅಕ್‍ರ ಮೇಲಿನ ಆರೋಪಗಳಲ್ಲಿ ಸತ್ಯಾಂಶವಿದೆಯೇ ಎಂದು ಪರಿಶೀಲಿಸಲು ಮುಹಮ್ಮದ್ ಇಬ್ನು ಮಸ್ಲಮ್‍ರನ್ನು ನಿಯೋಜಿಸಿದರು.

ರಾಜ್ಯಪಾಲರ ಆಸ್ತಿ, ಅವರ ಅಧೀನ ಅಧಿಕಾರಿಗಳ ಆಸ್ತಿಗಳ ಕುರಿತು ತನಿಖೆ ನಡೆಸಿದರು. ಅಕ್ರಮ ಗಳಿಕೆ ಎಂದು ಕಂಡು ಬಂದ ಆಸ್ತಿಯನ್ನು ವಶಪಡಿಸಿಕೊಂಡು ಸಾರ್ವಜನಿಕ ಬೊಕ್ಕಸಕ್ಕೆ ಸೇರ್ಪಡೆಗೊಳಿಸಿದರು. ರಾಷ್ಟ್ರದ ಬೊಕ್ಕಸಾಧಿಕಾರಿ ಅಥವಾ ಸಾರ್ವಜನಿಕ ಖಜಾನಾಧಿಕಾರಿ ಆಗಿದ್ದವರ ಆಸ್ತಿಪಾಸ್ತಿಗಳ ತನಿಖೆ ನಡೆಯಿತು.

ರಾಜ್ಯಪಾಲರು ವ್ಯಾಪಾರದಲ್ಲಿ ಸಂಪಾದಿಸಿರುವುದು, ಕೃಷಿಯಿಂದ ಸಂಪಾದಿಸಿರುವುದು ಇವೆಲ್ಲವೂ ಖಜಾನೆಗೆ ಸೇರಿಸಲ್ಪಟ್ಟಿತು. ಉಮರ್ ಹೇಳಿದರು, “ನಿಮ್ಮನ್ನು ನಾನು ವ್ಯಾಪಾರ, ಕೃಷಿ ಮಾಡಲು ನಿಯೋಜಿಸಿಲ್ಲ. ಬದಲಾಗಿ ಜನರ ಸೇವೆ ಮಾಡಲು, ಅವರನ್ನು ಸನ್ಮಾರ್ಗದೆಡೆಗೆ ಕರೆ ತರಲು ಮತ್ತು ಅವರಿಗೆ ಶಿಕ್ಷಣ ನೀಡಲಿಕ್ಕಾಗಿ ನೇಮಿಸಿದ್ದೇನೆ.”

ಆದ್ದರಿಂದ ಈ ಸಂದರ್ಭದಲ್ಲಿ ರಾಜ್ಯಪಾಲರ ವ್ಯಾಪಾರದ ಗಳಿಕೆ, ಕೃಷಿಯ ಸಂಪಾದನೆ ಎಲ್ಲವೂ ಖಜಾನೆ ಪಾಲಾಯಿತು. ಅಷ್ಟರಲ್ಲಿ ಅಮ್ರ್ ಬಿನ್ ಆಸ್ ಕೇಳಿದರು, “ನಿಮ್ಮ ರಾಜ್ಯ ಪಾಲರು ಉತ್ತಮ ಸ್ಥಿತಿಯಲ್ಲಿರುವುದನ್ನು ನೀವು ಬಯಸುವುದಿಲ್ಲವೇ. ಅದು ನಿಮಗೆ ಸಂತೋಷ ಉಂಟು ಮಾಡುವುದಿಲ್ಲವೇ?”
“ನಿಮ್ಮನ್ನು ಕೊಬ್ಬಿಸಲಿಕ್ಕಾಗಿ ರಾಜ್ಯಪಾಲರನ್ನಾಗಿ ನೇಮಕಗೊಳಿಸಲಾಗಿಲ್ಲ. ಬದಲಾಗಿ ಜನರ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದಕ್ಕಾಗಿ ನೇಮಕ ಗೊಳಿಸಿದ್ದೇನೆ.”

ನಿಗದಿಯಾದ ಸಂಬಳಕ್ಕಿಂತ ಹೆಚ್ಚು ಇರುವ ಸಂಪತ್ತು ಆಸ್ತಿ ಅಧಿಕಾರಿಯದ್ದಿರಲಿ, ರಾಜ್ಯಪಾಲರದ್ದಿರಲಿ ಎಲ್ಲವು ದೇಶದ ಖಜಾನೆ ಸೇರಿತು.
ಮಹಮ್ಮದ್ ಬಿನ್ ಮಸ್ಲಮತ್ತುಲ್ ಅನ್ಸಾರಿ ತನಿಖಾಧಿಕಾರಿಯಾಗಿದ್ದರು. ರಾಜ್ಯಪಾಲರು ಮತ್ತು ಅಧಿಕಾರಿಗಳ ವಿರುದ್ಧ ಆರೋಪ ಬಂದರೆ ಅವರು ತನಿಖೆ ನಡೆಸುತ್ತಿದ್ದರು. ಕೆಲವೊಮ್ಮೆ ತನಿಖಾ ತಂಡವನ್ನು ಖಲೀಫ ರಚಿಸುತ್ತಿದ್ದರು. ಕೇಳಿ ಬಂದ ಆರೋಪ ಮತ್ತು ದೂರುಗಳು ವಿವರವನ್ನು ಸಂಗ್ರಹಿಸಿ ಅಧ್ಯಯನ ನಡೆಸುವುದು ಇದರ ಕೆಲಸವಾಗಿತ್ತು. ಮಾತ್ರವಲ್ಲ ಆರೋಪಕ್ಕೊಳಗಾದವರನ್ನು ಮದೀನಾಕ್ಕೆ ಕರೆಯಿಸಿಕೊಂಡು ತೀರ್ಪು ನೀಡುತ್ತಿದ್ದರು.

ರಾಜ್ಯಪಾಲರು ಅಸಮರ್ಥರು, ದುರ್ಬಲರು ಎಂದು ಕಂಡು ಬಂದರೆ ಅವರನ್ನು ಆ ಸ್ಥಾನದಿಂದ ಬಿಡುಗಡೆಗೊಳಿಸಲಾಗುತ್ತಿತ್ತು. ಅಮ್ಮಾರ್ ಬಿನ್ ಯಾಸಿರ್ ಸಹಾಬಿವರ್ಯರಾಗಿದ್ದರು. ಬಹಳ ತ್ಯಾಗ ಸಹಿಸಿದ ವ್ಯಕ್ತಿ, ಸತ್ಯ ಧರ್ಮಕ್ಕಾಗಿ ಅವರು ಹೆಚ್ಚು ತ್ಯಾಗ ಮಾಡಿದ್ದರು. ಪರಿಶುದ್ಧವಾದ ಜೀವನ ಶೈಲಿ ಅವರದಾಗಿತ್ತು. ಆದ್ದರಿಂದ ಅವರನ್ನು ಹಝ್ರತ್ ಉಮರ್ ಕೂಫಾದ ರಾಜ್ಯ ಪಾಲರನ್ನಾಗಿ ನೇಮಕಗೊಳಿಸಿದರು. ಆದರೆ ಈ ಹೊಣೆಗಾರಿಕೆ ನಿಭಾಯಿಸುವ ಶಕ್ತಿ ಅವರಿಗಿರಲಿಲ್ಲ. ಇದನ್ನು ಮನಗಂಡ ಖಲೀಫ ಅವರನ್ನು ಸ್ಥಾನದಿಂದ ಬಿಡುಗಡೆಗೊಳಿಸಿದರು.

ಅಬೂ ಹುರೈರಾರು ಪ್ರವಾದಿ(ಸ)ರ ನಿರಂತರ ಸಹಚರಿ, ಒಡನಾಡಿ. ಮಾತ್ರವಲ್ಲ ಪ್ರಮುಖ ಸಹಾಬಿಗಳಲ್ಲಿ ಒಬ್ಬರು. ಅವರ ವಿರುದ್ಧ ಆರೋಪ ಕೇಳಿ ಬಂದಾಗ ಬಹ್ರೈನ್‍ನ ರಾಜ್ಯಪಾಲ ಸ್ಥಾನದಿಂದ ಅವರನ್ನು ಬದಲಾಯಿಸಲು ಖಲೀಫ ಹಿಂಜರಿದಿಲ್ಲ.

ನಹಾವಂದ್ ಯುದ್ಧದ ವೇಳೆ ಸಅದ್ ಬಿನ್ ಅಬೂ ವಕ್ಕಾಸ್‍ರನ್ನು ರಾಜ್ಯಪಾಲ ಸ್ಥಾನದಿಂದ ಖಲೀಫ ತೆಗೆದು ಹಾಕಿದ್ದರು. ಜನರ ಅಭಿಪ್ರಾಯದಲ್ಲಿ ನಿಜಾಂಶವಿದೆ ಎಂದು ಮನಗಂಡೊಡನೆ ಅವರು ಇಂತಹ ತೀರ್ಮಾನಕ್ಕೆ ಬಂದಿದ್ದರು. ಆದರೆ ನಂತರ ಅಬೂ ವಕ್ಕಾಸ್‍ರು ನಿರಪರಾಧಿಯೆಂದು ತನಿಖೆಯಲ್ಲಿ ಸಾಬೀತಾಯಿತು. ಆದರೆ ಖಲೀಫಾ ಮತ್ತೆ ಅವರನ್ನು ರಾಜ್ಯಪಾಲ ಸ್ಥಾನಕ್ಕೆ ನೇಮಿಸಲಿಲ್ಲ. ಜನರು ಬಯಸದ ವ್ಯಕ್ತಿಯನ್ನು ಅವರ ನಾಯಕನಾಗಿ ಕಳುಹಿಸುವುದು ಅರ್ಥಹೀನ ಎನ್ನುವುದು ಖಲೀಫ ಉಮರ್‍ರ ನಿಲುವಾಗಿತ್ತು.

ಇದೇ ರೀತಿ, ಬಸ್ರಾದ ರಾಜ್ಯಪಾಲ ಅಬೂ ಮೂಸಲ್ ಅಶ್ಹರಿಯವರ ವಿರುದ್ಧ ಆರೋಪ ಬಂದಾಗ ಖಲೀಫ ವಿವರವಾದ ತನಿಖೆಯಿಂದ ವಸ್ತು ಸ್ಥಿತಿಯನ್ನು ಮನಗಂಡರು. ಅಬೂ ಮೂಸಾ ಯುದ್ಧದಲ್ಲಿ ಕೈದಿಯಾಗಿ ಸಿಕ್ಕ ಆರು ಮಂದಿಯನ್ನು ತನ್ನ ಪರಿಚಾರಕರಾಗಿ ಮಾಡಿರುವುದು ಮತ್ತು ದಿನದಲ್ಲಿ ಎರಡು ಸಲ ಜನ ಸಾಮಾನ್ಯರಿಗೆ ಕಾಣ ಸಿಗದಿರುವುದು ಅವರ ವಿರುದ್ಧವಿದ್ದ ದೂರು. ಆರೋಪದಲ್ಲಿ ವಾಸ್ತವಿಕತೆ ಇಲ್ಲ ಎಂದು ಖಲೀಫಾಗೆ ಮನವರಿಕೆಯಾಗಿದ್ದರೂ ರಾಜ್ಯಪಾಲರಾಗಿ ಮುಂದುವರಿಯಲು ಅಬೂ ಮೂಸಲ್ ಅಶ್ಹರಿಗೆ ಅನುಮತಿ ನೀಡಲಿಲ್ಲ.

ಬಹ್ರೈನ್‍ನ ರಾಜ್ಯಪಾಲರಾಗಿದ್ದ ಮುಗೀರತ್ ಬಿನ್ ಶುಅಬರ ವಿರುದ್ಧ ಆರೋಪಗಳು ಕೇಳಿ ಬಂದಾಗ ಬಹ್ರೈನ್‍ನಿಂದ ಬಸ್ರಾಕ್ಕೆ ಮುಗೀರ ವರ್ಗಾವಣೆಗೊಂಡರು. ರಾಜ್ಯಪಾಲರ ಜೀವನದಲ್ಲಿ ಸ್ವಲ್ಪವೂ ಕಲೆ ಕಳಂಕ ಇರಬಾರದೆನ್ನುವುದು ಖಲೀಫರ ಪ್ರಾಮಾಣಿಕ ಬಯಕೆ ಮತ್ತು ಕಳಕಳಿಯಾಗಿತ್ತು. ತನ್ನಂತೆ ರಾಜ್ಯಪಾಲರು ಪರಿಶುದ್ಧ ಜೀವನ ನಡೆಸಬೇಕು. ಇಂತಹ ಬಯಕೆ ಮಾತ್ರವಲ್ಲ ಈ ರೀತಿ ಇರುವಂತೆ ನೋಡಿಕೊಳ್ಳಲು ಅವರು ಯಶಸ್ವಿಯಾದರು.

ತನ್ನ ಕೈಕೆಳಗಿನ ಉದ್ಯೋಗಿಗಳಲ್ಲಿ, ಅವರ ಬೆಳವಣಿಗೆಯಲ್ಲಿ ಇಷ್ಟು ಆಸಕ್ತಿ ವಹಿಸಿದ ಆಡಳಿತಗಾರ ಬಹಳ ಕಡಿಮೆ. ಉಮರ್‍ರ ನಿರೀಕ್ಷೆಗೆ ತಕ್ಕಂತೆ ಉನ್ನತ ಮಟ್ಟಕ್ಕೇರಲು ರಾಜ್ಯಪಾಲರಿಗೂ ಸಾಧ್ಯವಾಗಿತ್ತು ಎನ್ನುವುದು ಇನ್ನೊಂದು ವಿಶೇಷ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *