ಸುಳ್ಳುಗಾರರ ತೌಬಾ

ಚಿಂತನ-ಮಂಥನ
@ ಸೈಯದ್ ಮೌದೂದಿ(ರ)

ಅಲೀ ಬಿನ್ ಅಬೂ ತಾಲಿಬ್(ರ) ಒಮ್ಮೆ ಒಬ್ಬ ಗ್ರಾಮೀಣ ಅರಬನನ್ನು ತೌಬಾದ ಪದಗಳನ್ನು ಬೇಗ ಬೇಗ ಉಚ್ಚರಿಸುವುದನ್ನು ಕಂಡಾಗ ಇದು ಸುಳ್ಳುಗಾರರ ತೌಬಾ ಎಂದು ಹೇಳಿದರು.

ಹಾಗಾದರೆ ಸರಿಯಾದ ತೌಬಾ ಯಾವುದು ಎಂದಾತ ಪ್ರಶ್ನಿಸಿದ. ಅಲಿ(ರ) ಹೇಳಿದರು- ಅದರೊಂದಿಗೆ 6 ವಿಷಯಗಳು ಇರಬೇಕಾಗಿದೆ-

(1) ಮಾಡಿದ ಪಾಪಗಳಿಗೆ ಪಶ್ಚಾತ್ತಾಪವಿರಬೇಕು.
(2) ನಿರ್ಲಕ್ಷಿಸಲ್ಪಟ್ಟ ಫರ್ಝ್‍ಗಳನ್ನು ನೆರವೇರಿಸಬೇಕು.
(3) ಯಾರನ್ನಾದರೂ ನೋಯಿಸಿದ್ದರೆ ಅವರಿಂದ ಕ್ಷಮೆ ಯಾಚಿಸಬೇಕು.
(4) ಯಾರದಾದರೂ ಹಕ್ಕುಗಳನ್ನು ಕಸಿದಿದ್ದರೆ ಅದನ್ನು ಮರಳಿಸಬೇಕು.
(5) ಇನ್ನು ಮುಂದೆಂದೂ ಇಂತಹ ತಪ್ಪುಗಳನ್ನು ಮಾಡಲಾರೆನೆಂದು ದೃಢ ಸಂಕಲ್ಪ ಮಾಡಬೇಕು.
(6) ನಿನ್ನನ್ನು ನೀನು ಅಲ್ಲಾಹನ ಅನುಸರಣೆಯಲ್ಲಿ ಕರಗಿಸು. ಈ ವರೆಗೆ ನೀನು ಪಾಪ ಕಾರ್ಯದಲ್ಲಿ ರುಚಿ ಅನುಭವಿಸಿದಂತೆ, ಅವನ ಅನುಸರಣೆಯ ಕಹಿಯನ್ನು ಅನುಭವಿಸುವಂತೆ ಮಾಡು.

ತೌಬಾದ ವಿಷಯದಲ್ಲಿ ಇನ್ನೂ ಕೆಲವು ಸಂಗತಿಗಳನ್ನು ಅರಿತಿರಬೇಕಾಗಿದೆ.

ಒಂದು, ತೌಬಾ ವಾಸ್ತವದಲ್ಲಿ ಯಾವುದೇ ಪಾಪ ಕಾರ್ಯವನ್ನು ಮಾಡಿದಾಗ ಇದು ಅಲ್ಲಾಹನ ಆಜ್ಞೋಲ್ಲಂಘನೆಯಾಗಿದೆ ಎಂದು ಪಶ್ಚಾತ್ತಾಪ ಪಡುವುದಾಗಿದೆ. ಅನ್ಯಥಾ, ಅದು ಆರೋಗ್ಯಕ್ಕೆ ಹಾನಿಕರ, ಅವಮಾನಕಾರಕ ಅಥವಾ ಆರ್ಥಿಕ ನಷ್ಟದಾಯಕ ಎಂಬುದು ತೌಬಾದ ವ್ಯಾಖ್ಯೆಯಲ್ಲಿ ಬರುವುದಿಲ್ಲ.

ಎರಡು, ನಿನ್ನಿಂದ ಅಲ್ಲಾಹನ ಆಜ್ಞೋಲ್ಲಂಘನೆಯಾಗಿದೆಯೆಂಬ ಪ್ರಜ್ಞೆ ಬಂದ ಕೂಡಲೇ ತೌಬಾ ಮಾಡಬೇಕಾಗಿದೆ. ಯಾವ ರೂಪದಲ್ಲಾದರೂ ಸಾಧ್ಯವಾದರೆ ತಡಮಾಡದೆ ಪ್ರಾಯಶ್ಚಿತ್ತ ಮಾಡಬೇಕು. ಅದನ್ನು ಮುಂದೂಡುವುದು, ತೌಬಾವನ್ನು ಒಂದು ತಮಾಷೆಯಾಗಿ ಮಾಡುವುದು, ಯಾವ ಪಾಪಕ್ಕಾಗಿ ತೌಬಾ ಮಾಡಲಾಗಿದೆಯೋ ಅದನ್ನೇ ಪುನಃ ಪುನಃ ಮಾಡುತ್ತಿರುವುದು- ಅದು ಕಪಟ ತೌಬಾ ಎಂಬುದರ ಪುರಾವೆಯಾಗಿದೆ. ಏಕೆಂದರೆ ತೌಬಾದ ನೈಜ ಸ್ಫೂರ್ತಿ ಲಜ್ಜೆ ಪಡುವುದಾಗಿದೆ. ಪದೇ ಪದೇ ಅದನ್ನು ಉಲ್ಲಂಘಿಸುವುದು ಲಜ್ಜಿತವಾಗಿಲ್ಲವೆಂಬುದರ ಲಕ್ಷಣವಾಗಿದೆ.

ಮೂರು, ಶುದ್ಧ ಮನಸ್ಸಿನೊಂದಿಗೆ ಇನ್ನು ಪಾಪ ಮಾಡಲಾರೆನೆಂದು ದೃಢ ನಿಶ್ಚಯ ಮಾಡಿಕೊಂಡ ಬಳಿಕವೂ ಮಾನವೀಯ ದೌರ್ಬಲ್ಯದಿಂದಾಗಿ ಪುನಃ ಅದೇ ಪಾಪವೆಸಗಿ ಬಿಟ್ಟರೆ, ಹಿಂದಿನ ಪಾಪ ಹಸಿರಾಗುವುದಿಲ್ಲ. ಆದರೆ ಈಗಿನ ಪಾಪಕ್ಕೆ ಪುನಃ ತೌಬಾ ಮಾಡಬೇಕು. ಮುಂದೆ ತೌಬಾ ಮುರಿಯಲಾರೆ ಎಂದು ದೃಢ ನಿರ್ಧಾರ ಕೈಗೊಳ್ಳಬೇಕು.

ನಾಲ್ಕು, ಪ್ರತಿ ಬಾರಿ ಪಾಪದ ನೆನಪುಂಟಾದಾಗಲೆಲ್ಲ ತೌಬಾವನ್ನು ನವೀಕರಿಸುವುದು ಕಡ್ಡಾಯವಲ್ಲ. ಆದರೆ ಅವನ ಮನಸ್ಸು ಹಿಂದಿನ ಅಪರಾಧಿ ಜೀವನದ ಬಗ್ಗೆ ಮುದಗೊಳ್ಳುತ್ತಿದ್ದರೆ ಪದೇ ಪದೇ ತೌಬಾ ಮಾಡುತ್ತಿರಬೇಕು. ಎಲ್ಲಿಯವರೆಗೆಂದರೆ ಪಾಪಗಳ ನೆನಪಿನಿಂದ ಮುದಗೊಳ್ಳುವ ಬದಲು ನಾಚಿಕೆ ಪಡಬೇಕು. ಏಕೆಂದರೆ ನಿಜವಾಗಿಯೂ ಅಲ್ಲಾಹನ ಭಯದಿಂದಾಗಿ ಪಾಪಗಳಿಂದ ತೌಬಾ ಮಾಡಿದ್ದರೆ, ತಾನು ಅಲ್ಲಾಹನ ಆಜ್ಞೋಲ್ಲಂಘನೆ ಮಾಡುತ್ತಿದ್ದೇನೆಂಬ ಭಾವನೆಯಿಂದ ಸಂತೋಷಗೊಳ್ಳಲಾರ. ಅದರಿಂದ ಮುದಗೊಳ್ಳುವುದು ಅವನ ಮನಸ್ಸಿನಲ್ಲಿ ಅಲ್ಲಾಹನ ಭಯವು ಇನ್ನೂ ಬೇರೂರಿಲ್ಲವೆಂಬುದರ ಸಂಕೇತವಾಗಿದೆ.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *