Breaking News
Home / ಲೇಖನಗಳು / ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ ಆತನನ್ನು ದಾರಿ ತಪ್ಪಿಸಲು ಕಾರಣವಾಯಿತು. ಹೀಗೆ ಆತನು ಸತ್ಯದ ಹಾದಿಯಿಂದ ಅಸತ್ಯಕ್ಕೆ ಮತ್ತು ಬೆಳಕಿನಿಂದ ಕತ್ತಲೆಗೆ ಹೆಜ್ಜೆ ಬದಲಾಯಿಸಲಾರಂಭಿಸಿದ. ಜನನ ಮರಣವಿಲ್ಲದ ಸರ್ವಶಕ್ತನಾದ ದೇವನನ್ನು ತೊರೆದು ಆತ ಮುನ್ನಡೆಯಲಾರಂಭಿಸಿದ. ಧರ್ಮದ ವ್ಯಾಪಾರಿಗಳು, ಮಂತ್ರವಾದಿಗಳು, ವಿಗ್ರಹಾರಾಧಕರೊಡನೆ ಆತ ಪಯಣಿಸಿದ.
ಜಗತ್ತಿನಾದ್ಯಂತ ಅಸತ್ಯ ಮೆರೆಯಿತು. ಪ್ರತಿಯೊಂದು ಸಮಾಜ ಮತ್ತು ಗೋತ್ರವು ತಮ್ಮ ದೇವಂದಿರನ್ನು ಸೃಷ್ಟಿಸುತ್ತಿತ್ತು. ಕೆಲವರು ಸ್ವತಃ ದೇವ ಅಥವಾ ಅವತಾರವೆಂದು ಹೇಳಲಾರಂಭಿಸಿದರು. (ಕೆಲವರು ದೇವ ವೇಷದಿಂದಲೇ ರಂಗಕ್ಕಿಳಿದರು) ಇತರ ಕೆಲವರು ದೇವ ಪುತ್ರನೆಂದು ಹೇಳಲಾರಂಭಿಸಿದರು.
ಈ ಅಜ್ಞಾನ ಮತ್ತು ಅವಿವೇಕವು  ಪಥಭ್ರಷ್ಟತೆಗೆ ಹೇತುವಾಯಿತು. ಈ ಹಿನ್ನೆಲೆಯಲ್ಲಿ ಜನರನ್ನು ಅಸತ್ಯದ ಹಾದಿಯಿಂದ ಸತ್ಯದ ಹಾದಿಗೆ, ಕತ್ತಲೆಯಿಂದ ಬೆಳಕಿಗೆ ತಲುಪಿಸಲು ಸರ್ವೇಶ್ವರನು ಅಥವಾ ಅಲ್ಲಾಹನು ಮುಹಮ್ಮದ್‍ರನ್ನು ತನ್ನ ಸಂದೇಶವಾಹಕ ಅಥವಾ ದೂತನಾಗಿ ನೇಮಿಸಿದನು.

ಮುಹಮ್ಮದ್‍ರನ್ನು ಕೇವಲ ಅರಬರಿಗೆ ಅಥವಾ ಮುಸ್ಲಿಮರಿಗೆ ಪ್ರವಾದಿಯಾಗಿ ನೇಮಿಸಿರಲಿಲ್ಲ. ಅವರನ್ನು ಇಡೀ ವಿಶ್ವಕ್ಕೆ ಅಥವಾ ಮಾನವ ಕುಲಕ್ಕೆ ಪ್ರವಾದಿಯಾಗಿ ಕಳುಹಿಸಲಾಗಿತ್ತು. ಕುರ್‍ಆನ್‍ನ 7ನೇ ಅಧ್ಯಾಯದ 158ನೇ ವಚನದಲ್ಲಿ ಹೀಗೆ ಪ್ರತಿಪಾದಿಸಿದೆ: “ಮಾನವರೇ, ನಾನು ಸಕಲ ಮಾನವರಿಗಾಗಿ ನೇಮಿಸಲಾದ ದೇವ ಸಂದೇಶವಾಹಕನಾಗಿರುತ್ತೇನೆ. ಅಲ್ಲಾಹನು ಭೂಮ್ಯಾಕಾಶಗಳ ಒಡೆಯನಾಗಿದ್ದಾನೆ. ಅಲ್ಲಾಹನ ವಿನಾ ಅನ್ಯ ಆರಾಧ್ಯರಿಲ್ಲ. ಅವನೇ ಜೀವಂತಗೊಳಿಸುತ್ತಾನೆ. ಅವನೇ ಮರಣಗೊಳಿಸುತ್ತಾನೆ. ಅಲ್ಲಾಹ್ ಮತ್ತು ಪ್ರವಾದಿಯ ಆಜ್ಞಾದೇಶಗಳನ್ನು ಪಾಲಿಸಬೇಕು. ವಿಶ್ವಾಸ ಮತ್ತು ಅನುಸರಣೆಯಿಂದ ಸನ್ಮಾರ್ಗ ಲಭಿಸುತ್ತದೆ.”

ಆ ಕಾಲದಲ್ಲಿ ಮಕ್ಕಾದಲ್ಲಿ ಅಸತ್ಯ, ಅಕ್ರಮ, ಅನ್ಯಾಯ ತಾಂಡವವಾಡುತ್ತಿತ್ತು. ಕರಿಯರು, ಬಿಳಿಯರು, ಶ್ರೀಮಂತರು ,ಬಡವರು ಎಂಬೀ ವರ್ಗಗಳಲ್ಲಿ ಭಾರೀ ಅಂತರವಿತ್ತು. ಕರಿಯ ಗುಲಾಮರು ಅತ್ಯಾಚಾರಗಳನ್ನು ಸಹಿಸಬೇಕಾಯಿತು. ಬಡವರಿಗೆ ಹಣ ಸಾಲ ನೀಡಿದ ಶ್ರೀಮಂತರು ಸುಲಿಗೆ ಲಾಭ ಪಡೆದರು. ಜನರು ಜೂಜು ಮತ್ತು ಮದ್ಯದಲ್ಲಿ ಮುಳುಗಿದ್ದರು. ವೈಯ್ಯಕ್ತಿಕ ಹಾಗೂ ಗೋತ್ರ ಹೋರಾಟಗಳಿಂದ ಪರಸ್ಪರ ಅಧೀನಗೊಳಿಸಿದ್ದರು. ಅಂಥ ಜಟಿಲ ಪರಿಸ್ಥಿತಿಯಲ್ಲಿ ಸರ್ವೇಶ್ವರ ಅರ್ಥಾತ್ ಅಲ್ಲಾಹನು ಸತ್ಯ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಮುಹಮ್ಮದ್‍ರನ್ನು ತನ್ನ ಪ್ರವಾದಿಯಾಗಿ ನೇಮಿಸಿದನು.

ಆದರೆ ಆ ಕಾಲದ ಮಕ್ಕಾದ ಕುರೈಶರಲ್ಲಿ ಸ್ವಾರ್ಥ ಮತ್ತು ಅಹಂಕಾರ ತುಂಬಿತ್ತು. ಸ್ವಾರ್ಥ ಮತ್ತು ಅಹಂಕಾರ ಹೆಚ್ಚಿದರೆ ಬುದ್ಧಿ ಮತ್ತು ವಿವೇಕವೂ ಕೆಡುತ್ತದೆ. ಅಂಥ ಸ್ಥಿತಿಯಲ್ಲಿ ವ್ಯಕ್ತಿಗೆ ಒಳಿತು, ಕೆಡುಕು ಮತ್ತು ಸತ್ಯ, ಅಸತ್ಯಗಳ ವ್ಯತ್ಯಾಸಗಳನ್ನು ತಿಳಿಯಲಾಗುವುದಿಲ್ಲ. ಈ ಸ್ಥಿತಿಗೆ ತಲುಪಿದ್ದ ಮಕ್ಕಾದ ಕುರೈಶರಿಗೆ ಮುಹಮ್ಮದ್‍ರ ಸಂದೇಶದ ಸತ್ಯ ಮತ್ತು ಮಾನವೀಯತೆಯನ್ನು ಗ್ರಹಿಸಲಾಗಲಿಲ್ಲ. ಅವರ ಮನದಲ್ಲಿ ವೈರತ್ವವಿತ್ತು. ಅಲ್ಲಾಹನು ಕುರ್‍ಆನ್‍ನಲ್ಲಿ ಅಹಂಕಾರವನ್ನು ದೂರಗೊಳಿಸುವ ಮಾರ್ಗವನ್ನು ಸೂಚಿಸಿದ್ದಾನೆ. ಅಧ್ಯಾಯ 17, 37ನೇ ವಚನದಲ್ಲಿ ಹೀಗೆ ಹೇಳಲಾಗಿದೆ: “ಭೂಮಿಯಲ್ಲಿ ದರ್ಪದಿಂದ ನಡೆಯಬಾರದು. ನೀನು ಭೂಮಿಯನ್ನು ಸೀಳಲಾರೆ, ಎತ್ತರದಲ್ಲಿ ನೀನು ಪರ್ವತದ ಶಿಖರವನ್ನೂ ವಿೂರಿಸಲಾರೆ.”

ಇನ್ನೊಂದು ವಿಷಾದನೀಯ ಸತ್ಯವನ್ನು ಸೂಚಿಸುತ್ತೇನೆ. ಮಾನವೀಯತೆಯ ಧರ್ಮವಾಗಿರುವ ಇಸ್ಲಾಮನ್ನು ಇಂದು ಕೆಲವರು ಭಯೋತ್ಪಾದಕತೆಯೊಂದಿಗೆ ಜೋಡಿಸಲು ಪ್ರಯತ್ನಿಸುತ್ತಿದ್ದಾರೆ. ಇಸ್ಲಾಮಿನ ಮಾರ್ಗದರ್ಶಕರಾದ ಮುಹಮ್ಮದ್‍ರು ತಮ್ಮ ಜೀವನಾದ್ಯಂತ ಭಯೋತ್ಪಾದಕ ಕೃತ್ಯಗಳ ವಿರುದ್ಧ ಹೋರಾಡಿದ್ದರು. ಭಯೋತ್ಪಾದಕತೆಯ ಶೈತಾನ ಶಕ್ತಿಗಳು ಪ್ರವಾದಿಯವರತ್ತ ಕಲ್ಲು, ಹೊಲಸು, ಕೊಳೆ ಕಷ್ಮಲಗಳನ್ನು ಎಸೆದು ಅವರನ್ನು ಅಪಮಾನಿಸುತ್ತಿದ್ದರು. ಪ್ರವಾದಿಯವರ ಅನುಯಾಯಿಗಳನ್ನೂ ಅವರು ಕ್ರೂರವಾಗಿ ಹಿಂಸಿಸಿದರು. ಅರೇಬಿಯದ ಸುಡುವ ಮರಳಿನಲ್ಲಿ ಹಸಿವೆ, ದಾಹ ಶಮನಕ್ಕೆ ಅವಕಾಶ ನೀಡದೆ ಅವರನ್ನು ನಗ್ನರಾಗಿ ಮಲಗಿಸುತ್ತಿದ್ದರು. ಈ ಹಿಂಸೆಯು 13  ವರ್ಷ ಮುಂದುವರಿಯಿತು. ಆ ಪರಿಸ್ಥಿತಿಯಲ್ಲಿಯೂ ಅವರು ಧೈರ್ಯ ಮತ್ತು ಮಾನವೀಯತೆಯನ್ನು ತೊರೆಯಲಿಲ್ಲ. ಅರ್ಥಾತ್ ಭಯೋತ್ಪಾದಕ ಕೃತ್ಯಗಳಿಗೆ ಅದೇ ಭಾಷೆಯಲ್ಲಿ ಉತ್ತರಿಸಲಿಲ್ಲ. ಪ್ರವಾದಿ ಮತ್ತು ಅನುಯಾಯಿಗಳು ತಮ್ಮ ತಾಯಿ ನಾಡಾಗಿದ್ದ ಮಕ್ಕಾವನ್ನು ತೊರೆದು ಮದೀನಕ್ಕೆ ಹೋಗಬೇಕಾಯಿತು. ಆದರೆ ಮಾನವೀಯತೆಯ ವೈರಿಗಳು ಅವರನ್ನು ಅಲ್ಲಿಯೂ ಸುಮ್ಮನೆ ಬಿಡಲಿಲ್ಲ.

ಹಿಂಸಾ ಕೃತ್ಯಗಳು ಮಿತಿ ವಿೂರಿದಾಗ ಯುದ್ಧ ಅನಿವಾರ್ಯವಾಗುತ್ತದೆ. ಅಂಥ ಭಯೋತ್ಪಾದಕ ಚಟುವಟಿಕೆಗಳನ್ನು ವಿರೋಧಿಸದಿರುವುದು ಪಾಪವಾಗಿದೆ. ಭಗವದ್ಗೀತೆಯ ಅದ್ಯಾಯ 2, ಶ್ಲೋಕ 33ರಲ್ಲಿ ಭಗವಾನ್, ಅರ್ಜುನನಿಗೆ ನೀಡುವ ಉಪದೇಶ ಗಮನಾರ್ಹ. ಅಥ ಚೇತ ತ್ವಮಿಕ್ಕುಂ ಧಮ್ರ್ಯನ ಕರಿಷ್ಯಸಿ ತತ್ವಃ ಸ್ವಧರ್ಮಂ ಕೀರ್ತಿ ಚಹಿತ್ವ ಪಾಪ ಮವಾವ್ಯಸ್ಯಸಿ (ಓ ಅರ್ಜುನಾ, ನೀನು ಈ ಧರ್ಮ ಯುದ್ಧವನ್ನು ಮಾಡದಿದ್ದರೆ ಧರ್ಮ ಮತ್ತು ಯಶಸ್ಸು ಕೈ ಜಾರಿ ನಿನಗೆ ಪಾಪವೇ ದೊರೆಯಬಹುದು) ಇದೇ ಅಧ್ಯಾಯದ 37ನೇ ಶ್ಲೋಕದಲ್ಲಿ ಹೀಗಿದೆ:“ಹತೋ ವಾ ಪ್ರಾಪ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯ ಸೇ ಮಹೀಂತಸ್ಮಾ ದುತ್ತಿಷ್ಠ ಕೌಂತೇಯ ಯುದ್ಧಾ ಯಕೃತ ನಿಶ್ಚಯಃ”(ಒಂದೋ ಯುದ್ಧದಲ್ಲಿ ಮಡಿದು ಸ್ವರ್ಗ ಗಳಿಸುವೆ, ಅಥವಾ ಯುದ್ಧದಲ್ಲಿ ಗೆದ್ದು ಭೂಮಿಯಲ್ಲಿ ಸುಖ ಪಡೆಯುವೆ. ಆದ್ದರಿಂದ ನೀನು ದೃಢ ನಿರ್ಧಾರದಿಂದ ಯುದ್ದ ಮಾಡು)

ಮುಸ್ಲಿಮರ ವಿರುದ್ದ ಭಯೋತ್ಪಾದಕ  ಶೈತಾನರ ಕೃತ್ಯಗಳು ಅಸಹನೀಯ ಮಟ್ಟಕ್ಕೆ ತಲುಪಿತು. ಪವಿತ್ರ ಕುರ್‍ಆನ್‍ನ ಅಧ್ಯಾಯ 22, 39ನೇ ವಚನದಲ್ಲಿ ಜಿಹಾದ್ ಅಥವಾ ಧರ್ಮ ಯುದ್ದದ ಕುರಿತು ಅಲ್ಲಾಹನು ಹೀಗೆ ಹೇಳಿದ್ದಾನೆ: “ಮಾನವರ ವಿರುದ್ಧ ನಿರಂತರ ಯುದ್ಧ ನಡೆಯುವಾಗ ಅರ್ಥಾತ್ ಅವರು ಅತ್ಯಾಚಾರಕ್ಕೆ ಗುರಿಯಾಗುವಾಗ, ಅವರಿಗೆ ಯುದ್ಧ ಮಾಡುವ ಅನುಮತಿಯಿದೆ.”

ನೈಜ ಧರ್ಮವು ಎಂದಿಗೂ  ಮೇರೆ ವಿೂರಲಾರದು. ಆದ್ದರಿಂದ ಸತ್ಯ, ಧರ್ಮ ಮತ್ತು ಆತ್ಮರಕ್ಷಣೆಗಾಗಿ ಮಾಡುವ ಯುದ್ದದಲ್ಲಿಯೂ ಇಸ್ಲಾಮ್ ನ್ಯಾಯ ಪಾಲಿಸುವಂತೆ ಹೇಳಿದೆ. ಅಧ್ಯಾಯ 2, 90ನೇ ವಚನದಲ್ಲಿ ಹೀಗಿದೆ: “ನಿನ್ನೊಡನೆ ಯುದ್ಧ ಮಾಡುವವರೊಡನೆ ದೇವ ಮಾರ್ಗದಲ್ಲಿ ದಿಟ್ಟತನದಿಂದ ಯುದ್ಧ ಮಾಡಬೇಕು. ಆದರೆ ಯಾವುದರಲ್ಲಿಯೂ ಮಿತಿ ವಿೂರಬಾರದು. ಮೇರೆ ವಿೂರುವವರನ್ನು ದೇವನು ಮೆಚ್ಚುವುದಿಲ್ಲ.”

ಈ ದೃಷ್ಟಿಯಿಂದ ನೋಡಿದಾಗ ಇಸ್ಲಾಮಿನ ಜಿಹಾದ್‍ನ ಉದ್ದೇಶ ಸ್ಪಷ್ಟವಾಗುತ್ತದೆ. ಅದು ಧರ್ಮ ರಕ್ಷಣೆ ಮತ್ತು ಶಾಂತಿ ಸ್ಥಾಪನೆಯಾಗಿದೆ. ಇಂದಿನ ಮಾಧ್ಯಮ ಹಾಗೂ ಕೆಲವು ವಿಕಲ ಶಕ್ತಿಗಳು ದುವ್ರ್ಯಾಖ್ಯಾನಿಸುತ್ತಿರುವಂತೆ ಅಶಾಂತಿಯನ್ನು ಹಬ್ಬಿಸುವುದು ಜಿಹಾದ್‍ನ  ಉದ್ದೇಶವಲ್ಲ.

ವಸ್ತುತಃ ಅಸತ್ಯ, ಅನ್ಯಾಯ, ಅತ್ಯಾಚಾರ, ಭಯೋತ್ಪಾದಕ ಕೃತ್ಯಗಳನ್ನು ವಿರೋಧಿಸಿ ಆತ್ಮ ರಕ್ಷಣೆಗಾಗಿ ಮಾಡುವ ಎಲ್ಲ ರೀತಿಯ ಪರಿಶ್ರಮಗಳು ಜಿಹಾದ್‍ನಲ್ಲಿ ಸೇರಿವೆ. ಅಧ್ಯಾಯ 3- 140ನೇ ವಚನದಲ್ಲಿ ಹೀಗಿದೆ: “ಅಕ್ರಮಿಗಳನ್ನು ಅಲ್ಲಾಹನು ಮೆಚ್ಚುವುದಿಲ್ಲ.”

ಅಧ್ಯಾಯ 5- 32ನೇ ವಚನದಲ್ಲಿ ವಿವರಿಸಲಾಗಿದೆ: “ಕೊಲೆಗಾರ ಮತ್ತು ಗಲಭೆಕೋರರಿಗೆ ಕಠೋರ ಶಿಕ್ಷೆ ದೊರೆಯುವುದು. ಇತರರ ವಿಷಯ ಹಾಗಲ್ಲ. ಓರ್ವ ನಿರಪರಾಧಿಯನ್ನು ಕೊಂದರೆ ಎಲ್ಲ ಮಾನವರನ್ನು ಕೊಂದಂತೆ. ಓರ್ವ ನಿರಪರಾಧಿಯನ್ನು ರಕ್ಷಿಸಿದರೆ ಸಕಲ ಮಾನವರಿಗೂ ಜೀವದಾನ ಮಾಡಿದಂತೆ.”
ಇದರಿಂದ ಒಂದು ವಾಸ್ತವಿಕತೆಯನ್ನು ಗ್ರಹಿಸಬೇಕಾಗಿದೆ. ಸಂಪೂರ್ಣ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪ್ರವಾದಿಯವರು ಮಾನವೀಯತೆಗೆ ಮಹಾನ್ ಆದರ್ಶವನ್ನು ನೀಡಿದರು. ಅದರ ಅನೇಕ ಉದಾಹರಣೆಗಳನ್ನು ನೀಡಬಹುದು.

ಬದ್ರ್ ಎಂಬ ಸ್ಥಳದಲ್ಲಿ ಮಾನವೀಯತೆಯ ವೈರಿಗಳಾದ ಕೆಲವು ಅಸತ್ಯವಾದಿಗಳು ಮತ್ತು ಪ್ರವಾದಿಯವರು ಪರಸ್ಪರ ಸಂಘರ್ಷಿಸಿದರು. ಅಸತ್ಯವಾದಿಗಳು ಸುಮಾರು 1000 ಮಂದಿಯಿದ್ದರು. ಪ್ರವಾದಿಯವರ ಅನುಯಾಯಿಗಳು ಅರ್ಥಾತ್ ಮಾನವೀಯತೆಯನ್ನು ಬೆಂಬಲಿಸುವ ಸತ್ಯವಾದಿಗಳು 333 ಮಂದಿಯಿದ್ದರು. ಆದರೆ ಸತ್ಯ ಗೆದ್ದಿತು, ಅಸತ್ಯ ಸೋತಿತು. ಯುದ್ಧದ 37 ಕೈದಿಗಳನ್ನು ಮದೀನಕ್ಕೆ ಕರೆ ತರಲಾಯಿತು. ಅವರನ್ನು ಅಲ್ಲಿರುವ ಮಸ್ಜಿದ್ದುನ್ನಬವಿಯ ಕಂಬಗಳಿಗೆ ಬಿಗಿದರು. ಪ್ರವಾದಿಯವರು ನಡು ರಾತ್ರೆಯಲ್ಲಿ ಎದ್ದು ಬಹಳ ಮನೋವ್ಯಥೆಯಿಂದ ಮಸೀದಿಯಲ್ಲಿ ಶತಪಥ ಹಾಕಲಾರಂಭಿಸಿದರು. ಅವರ ಓರ್ವ ಅನುಯಾಯಿ ವಿಚಾರಿಸಿದರು: “ನೀವು ಸ್ವಲ್ಪವೂ ವಿಶ್ರಾಂತಿ ಪಡೆಯಲಿಲ್ಲವಲ್ಲಾ?” ಆಗ ಪ್ರವಾದಿ ಹೇಳಿದರು: “ಈ ಕೈದಿಗಳು ಅನುಭವಿಸುತ್ತಿರುವ ಯಾತನೆಯನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ. ಅದು ನನ್ನ ನಿದ್ದೆಗೆಡಿಸುತ್ತಿದೆ. ನಾನೇನು ಮಾಡಲಿ?” ಅವರ ಆಜ್ಞೆಯಂತೆ ಕೈದಿಗಳನ್ನು ಬಂಧಿಸಿದ್ದ ಹಗ್ಗವನ್ನು ಬಿಚ್ಚಿದರು. ಕೈದಿಗಳು ನಿದ್ರಿಸಿದ ಬಳಿಕ ಪ್ರವಾದಿಯವರು ನಿದ್ರಿಸಿದರು.

ಅಬೂ ಸುಫ್ಯಾನ್, ಪ್ರವಾದಿಯವರ ಪ್ರಮುಖ ವೈರಿಯಾಗಿದ್ದರು. ಅವರೇ ಉಹುದ್ ಯುದ್ಧದ ನಾಯಕತ್ವ ವಹಿಸಿದ್ದರು. ಆ ಯುದ್ಧದಲ್ಲಿ ಪ್ರವಾದಿಯವರ ಅನೇಕ ಅನುಯಾಯಿಗಳು ಹುತಾತ್ಮರಾದರು. ಪ್ರವಾದಿಯವರಿಗೆ ಗಾಯವಾಯಿತು. ಈ ಘಟನೆಯ ಕೆಲವು ವರ್ಷಗಳ ಬಳಿಕ ಪ್ರವಾದಿಯವರು ಮದೀನಕ್ಕೆ ವಿಜಯಿಯಾಗಿ ಬಂದರು. ಆಗ ಅಬೂ ಸುಫ್ಯಾನ್‍ರಿಗೆ ಕ್ಷಮೆ ನೀಡುತ್ತಾ ಪ್ರವಾದಿಯವರು ಹೇಳಿದರು: “ಅಬೂ ಸುಫ್ಯಾನ್‍ರನ್ನು ಕ್ಷಮಿಸಿರುತ್ತೇನೆ. ಅವರ ಮನೆಯಲ್ಲಿ ಅಭಯ ಪಡೆಯುವವರನ್ನೂ ಕ್ಷಮಿಸಿರುತ್ತೇನೆ.”

“ಓರ್ವ ಅಕ್ರಮಿಯು ಪ್ರವಾದಿಯವರ ಪುತ್ರಿಯನ್ನು ಒಂಟೆಯ ಮೇಲಿಂದ ಕೆಳಗೆ ದೂಡಿ ಹಾಕಲು ಪ್ರಯತ್ನಿಸಿದನು. ಮಕ್ಕಾ ವಿಜಯದ ದಿನ ಪ್ರವಾದಿಯವರು ಆತನನ್ನು ಕ್ಷಮಿಸಿದರು.” ಪ್ರವಾದಿ ಮುಹಮ್ಮದ್‍ರು ಅಷ್ಟೊಂದು ದಯಾಳುವಾಗಿದ್ದರು.

ಒಮ್ಮೆ ಓರ್ವ ಹಳ್ಳಿಗನು ಪ್ರವಾದಿಯವರು ಮಲಗಿದ್ದ ಹಾಸನ್ನು ಬಲವಾಗಿ ಎಳೆದನು. ಆ ಎಳೆತದಿಂದ ಪ್ರವಾದಿಯವರ ಕೊರಳು ಕೆಂಪೇರಿತು. ಆತ ಹೇಳಿದ: “ಮುಹಮ್ಮದ್, ಇದೋ ನನ್ನ ಎರಡು ಒಂಟೆಗಳಿವೆ. ಅವುಗಳ ಮೇಲೆ ಹೊರಿಸಲು ನನಗೆ ಸಾಮಾನುಗಳು ಬೇಕು. ನಿಮ್ಮ ಬಳಿಯಿರುವ ವಸ್ತುಗಳು ನಿಮ್ಮ ಅಥವಾ ನಿಮ್ಮ ತಂದೆಯದ್ದಲ್ಲ.” ಇದನ್ನು ಕೇಳಿ ಪ್ರವಾದಿಯವರು ಹೇಳಿದರು: “ಸಕಲ ವಸ್ತುಗಳೂ ಅಲ್ಲಾಹನಿಗೆ ಸೇರಿವೆ, ನಾನು  ಕೇವಲ ಆತನ ಓರ್ವ ದಾಸ.” ಆ ಬಳಿಕ ಪ್ರವಾದಿಯವರು ಆತನೊಡನೆ ಕೇಳಿದರು: “ನನ್ನೊಡನೆ ವರ್ತಿಸಿದ ರೀತಿಯಿಂದ ನಿನಗೆ ವಿಷಾದವೆನಿಸುವುದಿಲ್ಲವೇ?” ಆತ ಉತ್ತರಿಸಿದ: “ಇಲ್ಲ, ಸ್ವಲ್ಪವೂ ಇಲ್ಲ. ನೀವು ಕೆಡುಕಿಗೆ ಕೆಡುಕಿನಿಂದ ಉತ್ತರಿಸುವ ವ್ಯಕ್ತಿಯಲ್ಲವೆಂದು ನನಗೆ ಖಾತ್ರಿಯಿದೆ.” ಇದನ್ನು ಕೇಳಿದ ಪ್ರವಾದಿಯವರು ನಕ್ಕರು. ಮೊದಲ ಒಂಟೆಯಲ್ಲಿ ಖರ್ಜೂರ ಮತ್ತು ಎರಡನೆ ಒಂಟೆಯಲ್ಲಿ ಧಾನ್ಯದ ಮೂಟೆಗಳನ್ನು ಹೊರಿಸಿ ಕಳುಹಿಸಿದರು.

ಅತ್ಯಂತ ಪ್ರತಿಕೂಲವಾದ ಪರಿಸ್ಥಿತಿಯಲ್ಲಿ ಪ್ರವಾದಿಯವರು ಧೈರ್ಯ ಮತ್ತು ವಿವೇಕದಿಂದ ಮುಂದೆ ಸಾಗಿದರು. ಮಕ್ಕಾದ ಪರಿಸ್ಥಿತಿಯು ಬಹಳ ಶೋಚನೀಯವೆಂದು ತಿಳಿದಾಗ ಅವರು ತಾಯಿಫ್‍ಗೆ ಹೋದರು. ಅಲ್ಲಿಯೂ ಸಂಕಷ್ಟಗಳು ಆವರಿಸಿದಾಗ ಅಲ್ಲಿಂದ ಮರಳಬೇಕಾಯಿತು. ಅಲ್ಲಾಹನ ಪ್ರವಾದಿಯವರಿಗೆ ಒಂದು ವಿಷಯ ಮನವರಿಕೆಯಾಯಿತು. ಮುಸ್ಲಿಮರು ಈಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ವಂತ ಬಲದಿಂದ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಇತರ ಧರ್ಮಿಯರಲ್ಲಿ ಸಹೃದಯಿಗಳನ್ನು ಹುಡುಕಲಾರಂಭಿಸಿದರು.

ಮುಸ್ಲಿಮರಿಗೆ ಪರಿಸ್ಥಿತಿ ಅನುಕೂಲಗೊಳಿಸಬೇಕಾದರೆ ಆರ್ಥಿಕ ಮತ್ತು ಅಧಿಕಾರ ರಂಗಗಳಲ್ಲಿ ಶಕ್ತಿಗಳಿಸಬೇಕೆಂದು ಅವರು ಮನಗಂಡರು. ಅವು ಸಾಧಿಸದೆ ವಿಕಾಸ ಸಾಧ್ಯವಿಲ್ಲ. ಇವೆರಡರ ಆರಾಧನೆಯಿಂದ ಮಕ್ಕಾದಲ್ಲಿ  ವಿಜಯಗಳಿಸಲಾಯಿತು. ಇದರಿಂದ ಮುಸ್ಲಿಮರು ಪ್ರತಿಯೊಂದು ರಂಗದಲ್ಲಿಯೂ ಕ್ಷಿಪ್ರವಾಗಿ ಮುಂದೆ ಸಾಗಿದರು.

ಒಮ್ಮೆ ಪ್ರವಾದಿಯವರು ಹೇಳಿದರು: ”ನೀವು ನಿಮ್ಮ ಸಹೋದರನಿಗೆ  ನೆರವಾಗಬೇಕು. ಮರ್ದಕನಾಗಿದ್ದರೂ ಆತನಿಗೆ ನೆರವಾಗಬೇಕು.” ಆಗ ಓರ್ವರು ಪ್ರಶ್ನಿಸಿದರು: “ಓ ಪ್ರವಾದಿಯವರೇ, ಒಂದು ಸಂಶಯ ನಿವಾರಣೆಯಾಗಬೇಕಾಗಿದೆ. ಮರ್ದನಕ್ಕೆ ಗುರಿಯಾದ ವ್ಯಕ್ತಿಗೆ ನೆರವಾಗಬಹುದು. ಆದರೆ ಮರ್ದಕನಿಗೆ ನೆರವಾಗುವುದೇಕೆ?” ಪ್ರವಾದಿಯವರು ಅದಕ್ಕೆ ಹೀಗೆ ಉತ್ತರಿಸಿದರು: “ಆತನ ಕೈ ಹಿಡಿಯಬೇಕು. ಆತ ಅಕ್ರಮವೆಸಗದಿರಲಿಕ್ಕಾಗಿ ಆ ರೀತಿ ಮಾಡಬೇಕು.” ಅಕ್ರಮಿಯ ಅರ್ಥಾತ್ ಭಯೋತ್ಪಾದಕ ಕೃತ್ಯವೆಸಗುವಾತನ ಕೈ ಹಿಡಿಯುವುದು ಅಷ್ಟೊಂದು ಸುಲಭ ಕಾರ್ಯವಲ್ಲ. ಆದರೆ ಇಸ್ಲಾಮಿನಲ್ಲಿ ಅದನ್ನೂ ಹೇಳಲಾಗಿದೆ.

ಒಮ್ಮೆ ಓರ್ವರು ಪ್ರವಾದಿಯವರ ಬಳಿ ಬಂದು ಬಹಳ ಕಳಕಳಿಯಿಂದ ಹೀಗೆ ವಿನಂತಿಸಿದರು: “ಸತ್ಯ ನಿಷೇಧಿಗಳ ವಿರುದ್ಧ ಅಲ್ಲಾಹನೊಡನೆ ಪ್ರಾರ್ಥಿಸಬೇಕು. ಅವರನ್ನು ಶಪಿಸಬೇಕು.” ಪ್ರವಾದಿಯವರು ವಿವೇಕಪೂರ್ಣವಾಗಿ ಅದಕ್ಕೆ ಹೀಗೆ ಉತ್ತರಿಸಿದರು: “ನನ್ನನ್ನು ಈ ಜಗತ್ತಿಗೆ ಅನುಗ್ರಹವಾಗಿ ಕಳುಹಿಸಲಾಗಿದೆ, ಯಾರನ್ನಾದರೂ ಶಪಿಸಲಿಕ್ಕಾಗಿಯಲ್ಲ.

” ಒಮ್ಮೆ ಪ್ರವಾದಿಯವರು ಹೀಗೆ ಹೇಳಿದ್ದರೆಂದು ಆಯಿಶಾ(ರ) ಹೇಳಿದ್ದಾರೆ. “ಅಲ್ಲಾಹನ ದೃಷ್ಟಿಯಲ್ಲಿ, ಸದಾ ಜಗಳ, ಗಲಾಟೆ ಮಾಡುವ ವ್ಯಕ್ತಿಯು  ಅತ್ಯಂತ ನೀಚನು.”

ಒಮ್ಮೆ ಪ್ರವಾದಿಯವರು ಹೀಗೆ ಹೇಳಿದರು: “ಅಲ್ಲಾಹನಾಣೆ, ಓರ್ವರ ಕೆಡುಕಿನಿಂದ ನೆರೆಯಾತನ ನೆಮ್ಮದಿ ಗೆಡಿಸಿದರೆ ಆ ದುರ್ವರ್ತನೆ ತೋರಿದವನು ಅವಿಶ್ವಾಸಿಯಾಗುತ್ತಾನೆ.

” ಒಮ್ಮೆ ಓರ್ವರು ಪ್ರವಾದಿಯವರೊಡನೆ ವಿಚಾರಿಸಿದರು: “ವಿಶ್ವಾಸವಿರಿಸಿದಾತನಿಗೆ ಆಹಾರ ನೀಡಬೇಕು, ಪರಿಚಿತನನ್ನೂ ಅಪರಿಚಿತನನ್ನೂ ಗೌರವಿಸಬೇಕು, ಇಸ್ಲಾಮಿನಲ್ಲಿ ಈ ಪೈಕಿ ಯಾವುದು ಸರಿ?”

ಇದಕ್ಕೆ ಉತ್ತರಿಸಲು ಪ್ರವಾದಿಯವರು ನಿಗೂಢ ತತ್ವ ಶಾಸ್ತ್ರದ ಮೊರೆ ಹೋಗಲಿಲ್ಲ. ಮಾನವ ಹಿತಕ್ಕೆ ಒತ್ತು ನೀಡುವ ಸರಳ ಹಾಗೂ ವ್ಯಾವಹಾರಿಕ ಉತ್ತರ ನೀಡಿದರು. ಈ ರೀತಿಯ ಉತ್ತರ ನೀಡಲು ಅಲ್ಲಾಹನ ಸಂದೇಶವಾಹಕರಿಂದ ಮಾತ್ರ ಸಾಧ್ಯ.

“ಹಸಿದವನಿಗೆ ಆಹಾರ ನೀಡುವುದೇ ಮಾನವೀಯತೆಯ ಅತ್ತ್ಯುನ್ನತ ರೂಪ. ಪರಿಚಿತರು ಮತ್ತು ಅಪರಿಚಿತರನ್ನು ಗೌರವಿಸುವಾಗ ಸಮಾಜದಲ್ಲಿ ಪ್ರೀತಿ ಸೌಹಾರ್ದ ಮೂಡುತ್ತದೆ. ”ಮಹಾ ಪುರುಷರ ಮಾತು, ಕೃತಿಗಳು ಜನಸಾಮಾನ್ಯರಿಗೆ ದಾರಿ ದೀಪವಾಗಬೇಕು. ಮಾನವೀಯತೆಗೆ ಅದರಿಂದ ಉತ್ತಮ ಸಂದೇಶ ದೊರೆಯುತ್ತದೆ.

ಭಗದ್ಗೀತೆಯ 3ನೇ ಅಧ್ಯಾಯದ  21ನೇ ಶ್ಲೋಕದಲ್ಲಿ ಹೀಗಿದೆ:ಯದ್ಯತ ಚರತಿ ಶ್ರೇಷ್ಠಸ್ತ ದೇವೇತರೋ ಜನಃಸ ಯದ್ಪ್ರಮಾಣಂ ಕೂರುತೇ ಲೋಕಸ್ತ ದನುವರ್ತತೇ (ಶ್ರೇಷ್ಠ ಪುರುಷರ ಆಚಾರವನ್ನು ಇತರರು ಅನುಕರಿಸುತ್ತಾರೆ. ಅವರು ತೋರಿಸುವ ದಾರಿಯ ಮೂಲಕ ಅಖಿಲ ಮಾನವೀಯ ಸಮೂಹವು ಚಲಿಸಲಾರಂಭಿಸುತ್ತದೆ.)

ಅಲ್ಲಾಹನ ಪ್ರವಾದಿಯವರು ಅಂಥ ಓರ್ವ ಶ್ರೇಷ್ಠ ಪುರುಷರಾಗಿದ್ದರು. ಅವರು ತೋರಿದ ಹಾದಿಯನ್ನು ನಾವೂ ಸ್ವೀಕರಿಸಬೇಕು. ಪ್ರವಾದಿ ಮುಹಮ್ಮದ್‍ರು ತೋರಿದ ಹಾದಿಯಲ್ಲಿ ಮುಸ್ಲಿಮರು ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಸಂಚರಿಸಲು ಸಾಧ್ಯವಾಗಬೇಕು. ಮಾನವ ಕುಲದ ಎಲ್ಲ ಸಮಸ್ಯೆಗಳನ್ನೂ ಅದರಿಂದ ಪರಿಹರಿಸಬಹುದು.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *