ಎಲ್ಲ ಮಂತ್ರಿಗಳಿಗೂ ಮಾದರಿಯಾಗಬೇಕಾದ ನಜೀರ್ ಸಾಬ್

ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳುವ ಉದ್ದೇಶದಿಂದ ಅಕ್ಟೋಬರ್ 1988ರ ಒಂದು ಸಂಜೆ ಅಂದಿನ ಮುಖ್ಯಮಂತ್ರಿ SR ಬೊಮ್ಮಾಯಿಯವರು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಆಗಮಿಸಿದ್ದರು.

ಕ್ಯಾನ್ಸರ್ ಕಾಯಿಲೆಯಿಂದಾಗಿ ಮಾರಣಾಂತಿಕ ಸ್ಥಿತಿಯಲ್ಲಿ ಆಕ್ಸಿಜನ್ ಮಾಸ್ಕ್ ಧರಿಸಿ ಉಸಿರಾಡುವುದಕ್ಕೂ ಅಪಾರ ಯಾತನೆ ಅನುಭವಿಸುತ್ತ ಮಲಗಿದ್ದ ಆ ಗಣ್ಯ ರೋಗಿ ಇನ್ನಾರೂ ಅಲ್ಲ , ಇಡೀ ದೇಶಕ್ಕೇ ಮಾದರಿಯಾದ ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆಯ ರೂವಾರಿಯೆನಿಸಿದ್ದ ಹಾಗೂ ನೀರ್ ಸಾಬ್ ಎಂದೇ ರಾಜ್ಯದಾದ್ಯಂತ ಮನೆಮತಾಗಿದ್ದ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್’ಸಾಬ್.

ಮುಖ್ಯಮಂತ್ರಿ ಬೊಮ್ಮಾಯಿಯವರು ನಜೀರ್ ಸಾಬ್’ರ ಭುಜದ ಮೇಲೆ ಕೈಯಿರಿಸಿ, ಸಾಹೇಬ್ರೇ ನೀವೇನೂ ಕಾಳಜಿ ಮಾಡಬ್ಯಾಡ್ರಿ…. ಒಳ್ಳೆಯ ಟ್ರೀಟ್‌ಮೆಂಟ್ ತಗೊಂಡು ಲಗೂನ ಗುಣ ಆಗ್ರೀ…. ಆದ್ರ ನಿಮ್ಮ ಮನೆ ಸಮಸ್ಯೆ ಏನರ ಇದ್ರ ದಯವಿಟ್ಟು ಹೇಳ್ರಿ…. ನಾನದನ್ನ ನೋಡ್ಕೋಳ್ತೇನಂತ…. ಎಂದು ಅವರ ಕಿವಿಯ ಹತ್ತಿರ ಬಂದು ಮೆಲುನುಡಿಯಲ್ಲಿ ವಿಚಾರಿಸಿಕೊಂಡರು. ಅವರಿಂದ ಆ ಕ್ಷಣದಲ್ಲಿ ನಿಚ್ಛಳವಾಗಿ ಏನೂ ಉತ್ತರ ಬಾರದಿದ್ದಾಗ, ನಜೀರ್ ಸಾಹೇಬ್ರ ತಮ್ಮ ಫ್ಯಾಮಿಲಿ ಪ್ರಾಬ್ಲಮ್ ಏನಾರ ಇದ್ರ ಹೇಳ್ರಿ ? ಅಂತ ಕೇಳ್ತಾ ಇದೀನಿ.. ಎಂದು ಮತ್ತೊಮ್ಮೆ ಕೊಂಚ ಗಟ್ಟಿ ದನಿಯಲ್ಲಿ ಹೇಳಿದರು ಬೊಮ್ಮಾಯಿ.

ಹೀಗೆ ಪದೇ ಪದೆ ನಿಮ್ಮ ಮನೆಯ ಸಮಸ್ಯೆ , ಫ್ಯಾಮಿಲಿ ಪ್ರಾಬ್ಲೆಮ್? ಎಂಬ ಮಾತುಗಳನ್ನು ಕೇಳಿಸಿಕೊಂಡು ವಿಚಲಿತರಾದ ಆ ಅತೀವ ಸಂಕೋಚದ ವ್ಯಕ್ತಿ ಮರಣಾಸನ್ನ ಸನ್ನಿವೇಶದಲ್ಲೂ ಪ್ರತಿಕ್ರಿಯಿಸಿದ ರೀತಿ ವಿಶಿಷ್ಟವಾಗಿತ್ತು. ಬಾಯಿಯ ಮೇಲಿನ ಮಾಸ್ಕ್ ತೆಗೆದು, ಕಣ್ಣಗಲಿಸಿ ನೋಡುತ್ತ ತಮ್ಮ ಯೋಗಕ್ಷೇಮ ವಿಚಾರಿಸಿದ ಮುಖ್ಯಮಂತ್ರಿಯೊಂದಿಗೆ ನಜೀರ್ ಸಾಬ್ ಆಡಿದ ಮಾತುಗಳು ಬೊಮ್ಮಾಯಿ ಅವರನ್ನಷ್ಟೇ ಅಲ್ಲ, ಅಲ್ಲಿ ಸುತ್ತುವರಿದು ನಿಂತಿದ್ದ ಅವರ ನಾಲ್ಕಾರು ಆಪ್ತ ಮಿತ್ರರ ಅಂತಃಕರಣವನ್ನೇ ಅಲ್ಲಾಡಿಸುವಂತಿದ್ದವು.

ಸರ್.. ನನ್ನ ಮನೆ ಸಮಸ್ಯೆ ಯಾವುದೂ ಇಲ್ಲ. ಆದರೆ ನಾನೀಗಲೇ ಸಾವಿರ ಮನೆಗಳ ಕಾರ್ಯಕ್ರಮ ರೂಪಿಸಿದ್ದೇನೆ. ಅದರಂತೆ ಪ್ರತಿ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸ್ತಾ ಹೋದರೆ ಇನ್ನು ಐದು ವರ್ಷಗಳಲ್ಲಿ ವಸತಿ ರಹಿತರ ಸಮಸ್ಯೆಯೇ ಇರದಂತಾಗುತ್ತೆ. ನಿಮಗೆ ಒಳ್ಳೆಯ ಹೆಸರು ಬರುತ್ತೆ. ಇದಕ್ಕೋಸ್ಕರ ನಾನು IRDP ಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿದ 13 ಕೋಟಿ ರೂಪಾಯಿ ಹಣವನ್ನು ತೊಡಗಿಸಿಕೊಳ್ಳಬೇಕಂತಿದ್ದೆ. ನಮ್ಮ ಪ್ರೈವೇಟ್ ಸೆಕ್ರೆಟರಿಗೆ ಈ ಬಗ್ಗೆ ನೋಟ್ಸ್ ಬರೆಸಿದ್ದೇನೆ. ದಯವಿಟ್ಟು ಶುರುಮಾಡಿ ಸಾರ್. ನಿಮ್ಮ ಸರಕಾರಕ್ಕೆ ಪುಣ್ಯ ಬರುತ್ತೆ….

ಸಾವಿನಂಚಿನಲ್ಲಿದ್ದ ಸಹೋದ್ಯೋಗಿಯ ಅಂತಿಮ ಕ್ಷಣಗಳ ಈ ಆಶಯಗಳನ್ನು ಕೇಳಿಸಿಕೊಂಡ CM ಬೊಮ್ಮಾಯಿಯವರಿಗೆ ಕಣ್ಣಿನಿಂದ ಕಣ್ಣೀರು ಬಂದುಬಿಟ್ಟಿತು. ಭಾವೋದ್ವೇಗಕ್ಕೊಳಗಾದ ಬೊಮ್ಮಾಯಿ ಕೊಠಡಿಯಿಂದ ಹೊರಬಂದು ಮಕ್ಕಳಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು.

ಹೀಗೆ ಸ್ವಂತ ಮನೆಯ ಸಮಸ್ಯೆಗಳ ಬದಲು ನಾಡಿನ ಲಕ್ಷಾಂತರ ಮಂದಿ ವಸತಿ ರಹಿತ ಬಡವರಿಗೋಸ್ಕರ ಮನೆ ಕಟ್ಟಿಸಿಕೊಡಬೇಕೆಂಬ ನಜೀರರ ಕನವರಿಕೆಯನ್ನು ಕೇಳಿಸಿಕೊಂಡು ಕರಳು ಕಿವಿಚಿದಂತಾಗಿತ್ತು. ಮುಂದೆ ಒಂದೆರಡು ಗಂಟೆಗಳಲ್ಲಿಯೆ ನಜೀರ್’ಸಾಬ್ ಎಂಬ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇದನೆಯುಳ್ಳ ರಾಜಕಾರಣಿಯ ಇಹಲೋಕ ಯಾತ್ರೆ ಮುಗಿದಿತ್ತು.

ಅಧಿಕಾರ ಬಂದ್ರೆ ನಮಗಿರಲಿ. ನಮ್ಮ ಮಕ್ಕಳು, ಕುಟುಂಬ, ಆಪ್ತರು , ಸ್ವಜಾತಿಗಿರಲಿ ಅನ್ನುವ ಜನರ ನಡುವೆ ಇಂತಹ ಅಪರೂಪದ ನಜೀರ್ ಸಾಬ್ ತರಹದ ನಿಸ್ವಾರ್ಥ ರಾಜಕೀಯದ ದೃವತಾರೆಗಳೇ ಎಲ್ಲರಿಗೂ ಆದರ್ಶ 

#ನಜೀರ್ ಸಾಬ್

whatsapp As Received

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *