Breaking News
Home / ಲೇಖನಗಳು / ನಮ್ಮ ಕಾಲದ ವಿಮೋಚಕ ;  ಖುಶ್ವಂತ್ ಸಿಂಗ್ ಬರೆಯುತ್ತಾರೆ…

ನಮ್ಮ ಕಾಲದ ವಿಮೋಚಕ ;  ಖುಶ್ವಂತ್ ಸಿಂಗ್ ಬರೆಯುತ್ತಾರೆ…

  • ಖುಶ್ವಂತ್ ಸಿಂಗ್

ಪೂರ್ವಗ್ರಹವು ವಿಷದಂತೆ. ಆರಂಭದಲ್ಲಿಯೇ ಮನಸ್ಸನ್ನು ಅದರಿಂದ ಮುಕ್ತಗೊಳಿಸದಿದ್ದರೆ ಅದು ಅರ್ಬುದದಂತೆ ವ್ಯಾಪಿಸಿ, ಸರಿ ತಪ್ಪುಗಳನ್ನು ತಿಳಿಯುವ ಮನಸ್ಸಿನ ಶಕ್ತಿಯನ್ನು ನಾಶ ಪಡಿಸುತ್ತದೆ. ‘ನನ್ನ ಧರ್ಮವು ಇತರೆಲ್ಲ ಧರ್ಮಗಳಿಗಿಂತ ಶ್ರೇಷ್ಠ’ ಎಂಬ ಭಾವನೆಯು ಈ ಪೂರ್ವ ಗ್ರಹಗಳಲ್ಲಿ ಅತ್ಯಂತ ವಿನಾಶಕಾರಿ. ಈ ಮಂದಿ ಇತರರ ಧರ್ಮವನ್ನು ಸಹಿಸಿಕೊಳ್ಳಬಹುದು. ಆದರೆ ಅವುಗಳನ್ನು ಗೌರವಿಸಿ, ಅವು ತನ್ನ ಧರ್ಮದಂತೆಯೇ ಸಮಾನ ಪ್ರಮಾಣದಲ್ಲಿ ಪ್ರಸ್ತುತವೆಂದು ಒಪ್ಪಲಾರರು. ಕ್ರೈಸ್ತ ಧರ್ಮದ ಬಳಿಕ ಜಗತ್ತಿನಲ್ಲಿ ಅತ್ಯಧಿಕ ಆಚರಿಸಲಾಗುವ ಇಸ್ಲಾಮ್ ಧರ್ಮ ಇಂದು ಅತ್ಯಧಿಕ ತಪ್ಪು ತಿಳುವಳಿಕೆಗೆ ಗುರಿಯಾಗಿದೆ. ಆದರೂ ಇತರೆಲ್ಲ ಧರ್ಮಗಳಿಗಿಂತ ಅಧಿಕ ನವ ವಿಶ್ವಾಸಿಗಳು ಅದಕ್ಕೆ ದೊರೆಯುತ್ತಿದ್ದಾರೆ.

ಮಧ್ಯಪ್ರಾಚ್ಯ, ದಕ್ಷಿಣ ಆಫ್ರಿಕಾ ಮತ್ತು ಸ್ಪೈನ್ ಗಳಲ್ಲಿ ಮುಸ್ಲಿಮರು ಪ್ರಭುತ್ವ ಸಾಧಿಸಿದಂದಿನಿಂದ ಕ್ರೈಸ್ತ ಜಗತ್ತಿನಲ್ಲಿ ಇಸ್ಲಾಮ್ ವಿರೋಧವು ಪರಾಕಾಷ್ಠೆಗೆ ತಲುಪಿತು. ಇಸ್ಲಾಮನ್ನು ಅದರ ತವರೂರಿನಲ್ಲಿ ಧ್ವಂಸಗೊಳಿಸುವ ಶಿಲುಬೆ ಯುದ್ಧದವರ ತಂತ್ರ ವಿಫಲವಾದರೂ, ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್‍ರ ತೇಜೋವಧೆಗೆಯ್ಯುವ ಅವರ ಪ್ರಯತ್ನ ಮುಂದುವರಿಯಿತು. ಅದಕ್ಕೆ ಅಲ್ ಖಾಯಿದ, ತಾಲಿಬಾನ್‍ಗಳಂಥ ಸಶಸ್ತ್ರ ಸಂಘಟನೆಗಳ ಹುಟ್ಟಿನಿಂದ ಅವರಿಗೆ ಸಮರ್ಥನೆ ದೊರೆಯಿತು. 2001 ಸೆಪ್ಟೆಂಬರ್ 11ರಂದು ನ್ಯೂಯಾರ್ಕ್‍ನ ಜಾಗತಿಕ ವಾಣಿಜ್ಯ ಕೇಂದ್ರ ಮತ್ತು ವಾಷಿಂಗ್ಟನ್‍ನ ಪೆಂಟಗನ್ ಮೇಲೆ ನಡೆದ ದಾಳಿಯು ಇಸ್ಲಾಮನ್ನು ತೆಗಳುವವರಿಗೆ ಹೊಸ ಮದ್ದು ಗುಂಡುಗಳನ್ನು ಒದಗಿಸಿತು. ಅಂದಿನಿಂದ ಇಸ್ಲಾಮ್ ಭೀತಿ(ಇಸ್ಲಾಮ್ ಫೋಬಿಯ)ಯನ್ನು ಮುಸ್ಲಿಮೇತರ ಜಗತ್ತು ಮನಪೂರ್ವಕ ಹಬ್ಬಿಸುತ್ತಿದೆ.

ಇಸ್ಲಾಮ್ ವಿರೋಧಿಗಳ ಎರಡು ಪ್ರಮುಖ ವಾದಗಳು ಹೀಗಿವೆ: 1. ಇಸ್ಲಾಮ್ ಖಡ್ಗದಿಂದ ಪ್ರಚಾರಗೊಂಡಿದೆ. 2. ಮುಸ್ಲಿಮರು ಪ್ರಚಾರ ಮಾಡುತ್ತಿರುವಂತೆ ಮುಹಮ್ಮದ್‍ರು ಒಳಿತು ತುಂಬಿದ ಕೊಡವಲ್ಲ.

ಇಸ್ಲಾಮನ್ನು ಜನತೆಯ ಮೇಲೆ ಬಲಾತ್ಕಾರದಿಂದ ಹೇರಲಾಗಿಲ್ಲವೆಂಬುದಕ್ಕೆ ಐತಿಹಾಸಿಕ ಸಾಕ್ಷ್ಯಗಳಿವೆ. ಹೊಸ ಮೌಲ್ಯಗಳನ್ನು ಒದಗಿಸಿರುವುದರಿಂದಲೇ ಮಿಲಿಯಾಂತರ ಜನರು ಆ ಸಿದ್ಧಾಂತವನ್ನು ಸ್ವೀಕರಿಸಿದ್ದಾರೆ. ಆ ಕಾಲದಲ್ಲಿ ಕಂಡು ಕೇಳರಿಯದ ಮಾನವೀಯ ಸಮಾನತೆ, ಸ್ತ್ರೀಯರ ಹಕ್ಕುಗಳು ಇತ್ಯಾದಿಗಳು ಆ ಮೌಲ್ಯಗಳಲ್ಲಿ ಪ್ರಧಾನವಾಗಿದೆ. ಇಂಡೋನೇಶ್ಯ, ಮಲೇಶ್ಯಾ ಮುಂತಾದ ರಾಷ್ಟ್ರ್ರಗಳಲ್ಲಿ ಇಸ್ಲಾಮ್ ಧರ್ಮವು ಆಕ್ರಮಣಕಾರರಿಂದ ಹೇರಲ್ಪಟ್ಟಿಲ್ಲವಷ್ಟೆ. ಅಲ್ಲಿ ಮುಸ್ಲಿಮ್ ಮಿಶನರಿಗಳು ಇಸ್ಲಾಮಿನ ಸಂದೇಶ ಪ್ರಚಾರ ನಡೆಸಿದ್ದುವು.

ಪ್ರವಾದಿಯವರನ್ನು ವಿಮರ್ಶಿಸಿದರೆ ಮುಸ್ಲಿಮರ ಪ್ರತಿಕ್ರಿಯೆಯು ಭಾವೋದ್ರಿಕ್ತವಾಗಿರುತ್ತದೆ. ಪರ್ಶಿಯನ್ ಭಾಷೆಯಲ್ಲಿ ಹೇಳುವುದಾದರೆ, ‘ಬಾ ಖುದಾ ದೀವಾನಾ ಬಾಷೋಬಾ ಮುಹಮ್ಮದ್ ಹೋಶಿಯಾರ್ (ದೇವನ ಬಗ್ಗೆ ಏನೇ ಹೇಳಿ, ಆದರೆ ಮುಹಮ್ಮದರ ಬಗ್ಗೆ ಹೇಳುವಾಗ ಎಚ್ಚರ ವಹಿಸಿರಿ.) ಪ್ರವಾದಿ ಮುಹಮ್ಮದ್‍ರು ಜಗತ್ತಿಗೆ ಬಂದ ಅತ್ಯಂತ ಪರಿಪೂರ್ಣ ಮಾನವರೆಂದು ಮುಸ್ಲಿಮರು ಭಾವಿಸುತ್ತಾರೆ. ಆದಮ್, ಮೋಶೆ, ನೋಹಾ, ಅಬ್ರಹಾಮ್ ಮತ್ತು ಈಸಾರ ಉತ್ತರಾಧಿಕಾರಿ. ಪ್ರವಾದಿ ಪರಂಪರೆಯ ಕೊನೆಯ ಕೊಂಡಿ. ಮುಸ್ಲಿಮರಲ್ಲಿ ಅವರ ಬಗ್ಗೆ ಯಾವ ಭಾವನೆಯಿದೆಯೆಂದು ತಿಳಿಯಲು, ದೇವನಿಂದ ದೊರೆತಿದೆಯೆಂದು ಅವರು ಹೇಳುವ ಅವರ ಬೋಧನೆ ಮತ್ತು ಅವರ ಜೀವನದ ಅಧ್ಯಯನ ನಡೆಸಿದರೆ ಸಾಕು.

ಇಸ್ಲಾಮನ್ನು ಅಲ್ ಖಾಯಿದಾ ಮತ್ತು ತಾಲಿಬಾನಿಗಳ ಕೃತ್ಯ ಅಥವಾ ಆಯತುಲ್ಲಾ ಮತ್ತು ಅಪಕ್ವ ಮುಲ್ಲಾಗಳ ಫತ್ವಗಳಾಧಾರದಲ್ಲಿ ವಿಶ್ಲೇಷಿಸಿದರೆ ತಪ್ಪಾದೀತು. ಮಸೀದಿಗಳನ್ನು ಧ್ವಂಸಗೊಳಿಸಿ ಮಿಶನರಿ ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ವಧಿಸಿ, ಲೈಬ್ರೆರಿ ಮತ್ತು ಕಲಾ ಕೇಂದ್ರಗಳನ್ನು ಅತಿಕ್ರಮಿಸಿ ನಾಶಗೊಳಿಸುವ ಹಿಂದುತ್ವವಾದಿಗಳನ್ನು ನೋಡಿ; ವೇದ ಮತ್ತು ಉಪನಿಷತ್ತುಗಳು ಪ್ರತಿಪಾದಿಸುವ ಹಿಂದೂ ಧರ್ಮವನ್ನು ನೀವು ವಿಶ್ಲೇಷಿಸುವದಿಲ್ಲವಷ್ಟೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲನ ಮಾತುಗಳನ್ನು ಅಥವಾ ಅವನ ಗೂಂಡಾಗಳು ನಿರಪರಾಧಿಗಳ ಸಾಮೂಹಿಕ ಹತ್ಯೆ ನಡೆಸಿರುವುದನ್ನು ನೋಡಿ ನೀವು ಸಿಕ್ಖ್ ಗುರುಗಳ ಬೋಧನೆಗಳನ್ನು ವಿಶ್ಲೇಷಿಸುವುದಿಲ್ಲ. ಪ್ರವಾದಿ ಮುಹಮ್ಮದ್‍ರು ಏನು ಕಲಿಸಿದರು ಮತ್ತು ಯಾವುದಕ್ಕಾಗಿ ಶ್ರಮಿಸಿದರೆಂಬುದನ್ನು ನೋಡಿ ನೀವು ಮುಹಮ್ಮದ್‍ರನ್ನು ವಿಶ್ಲೇಷಿಸಬೇಕು ಅದರ ಹೊರತು ಅವರ ಅನುಯಾಯಿಗಳೆಂದು ವಾದಿಸುವವರು ಅವರ ಹೆಸರಲ್ಲಿ ಮಾಡುವ ಕೃತ್ಯಗಳನ್ನು ನೋಡಿ ಆ ವ್ಯಕ್ತಿತ್ವವನ್ನು ಅಳೆಯಬಾರದು.

40ನೇ ವಯಸ್ಸಿನಲ್ಲಿ ಪ್ರವಾದಿಯವರಿಗೆ ದಿವ್ಯವಾಣಿ ಲಭಿಸಿತು. ಆ ದಿವ್ಯವಾಣಿಯು ಪ್ರವಾದಿಯವರನ್ನು ಹೊಸ ರಕ್ಷಕನಾಗಿ ಸಮರ್ಪಿಸಿತು. ದಿವ್ಯವಾಣಿಯು ಬರುತ್ತಲಿತ್ತು. ಕೆಲವೊಮ್ಮೆ ಪ್ರಚಲಿತವಿರುವ ಸಮಸ್ಯೆಯ ಪರಿಹಾರವಾಗಿ, ಇತರ ಕೆಲವೊಮ್ಮೆ ಆಧ್ಯಾತ್ಮಿಕ ವಿಷಯಗಳ ವಿವರಣೆಯಾಗಿ. ಅವುಗಳನ್ನು ಅನುಯಾಯಿಗಳು ಕಂಠಪಾಠ ಮಾಡಿ ಬರೆದಿಡುತ್ತಿದ್ದರು. ಅದೇ ಕುರ್‍ಆನ್. ಓದಲ್ಪಡುವುದೆಂದರ್ಥ. ಪ್ರವಾದಿಯವರು ತಮ್ಮ ಸ್ವಂತ ವಿಚಾರಗಳನ್ನು ಬೋಧಿಸಿಲ್ಲವೆಂದು ತಿಳಿದಿರಬೇಕು. ಅವರು ಹೇಳಿದ ಅನೇಕ ವಿಷಯಗಳು ಯಹೂದಿ ಧರ್ಮದಲ್ಲಿ ಹಿಂದೆಯೇ ಇತ್ತು. ‘ಅಲ್ಲಾಹ್’ ಎಂಬುದು ಪ್ರವಾದಿಯವರ ಆಗಮನಕ್ಕಿಂತ ಮುಂಚೆ ಅರಬಿಯಲ್ಲಿ ದೇವ ನಾಮವಾಗಿತ್ತು. ‘ಇಸ್ಲಾಮ್’ ಪದಕ್ಕೆ ಶರಣಾಗು, ಶಾಂತಿ ಎಂಬ ಅರ್ಥಗಳಿವೆ. ಇದು ಯಹೂದಿ ಪರಂಪರೆಯಲ್ಲಿರುವ ಸಮ್ಮತಾರ್ಹ (ಹಲಾಲ್), ನಿಷಿದ್ಧವೆಂಬ (ಹರಾಮ್-ಹಂದಿ ಮಾಂಸ ಇತ್ಯಾದಿ) ಆಹಾರ ವಿಂಗಡನೆಯನ್ನು ಅಂಗೀಕರಿಸಿತು. ಐದು ಹೊತ್ತಿನ ಪ್ರಾರ್ಥನೆ ಮತ್ತು ಮುಂಜಿ ಕರ್ಮವನ್ನು ಉಳಿಸಿ ಕೊಂಡಿತು.  ಪ್ರವಾದಿ ಮುಹಮ್ಮದ್‍ರು ದೇವನ ಏಕತೆಗೆ ಒತ್ತು ನೀಡಿದರು. ವಿವಿಧ ಗೋತ್ರಗಳು ಆರಾಧಿಸುತ್ತಿದ್ದ ಶಿಲಾದೇವತೆಗಳು ನೈಜ ದೇವನಿಗೆ ಸಮಾನರಾಗುವುದಿಲ್ಲವೆಂದು ಸಮರ್ಥಿಸಿದರು. ಮುಹಮ್ಮದ್‍ರು ಈ ವಿಶ್ವಾಸ ಕ್ರಮವನ್ನು ಸ್ವೀಕರಿಸುವಂತೆ ಜನರನ್ನು ಬಲಾತ್ಕರಿಸಲಿಲ್ಲ. ಧರ್ಮದಲ್ಲಿ ಬಲಪ್ರಯೋಗವಿಲ್ಲ. (ಲಾ ಇಕ್ರಾಹ ಫಿದ್ದೀನ್) ದೇವನು ಬಯಸಿದ್ದರೆ ಎಲ್ಲರನ್ನೂ ಒಂದೇ ಸಮುದಾಯವಾಗಿ ಮಾಡುತ್ತಿದ್ದನೆಂದು ಕುರ್‍ಆನ್ ಹೇಳುತ್ತದೆ.

ಪ್ರಥಮ ಪತ್ನಿ ಖದೀಜರ ನಿಧನದ ಬಳಿಕ ಕೆಲವು ಮಹಿಳೆಯರನ್ನು ವಿವಾಹವಾಗಿರುವುದು ಅನೇಕ ನಿರಾಧಾರ ಆರೋಪಗಳಿಗೆ ಹೇತುವಾಗಿದೆ. ಆ ಕಾಲದ ಅರಬ್ ಸಮುದಾಯವನ್ನು ಗಮನದಲ್ಲಿರಿಸಿ ಈ ವಿಷಯವನ್ನು ಗಮನಿಸಬೇಕಾಗಿದೆ. ಅಂದು ಗೋತ್ರ ಜನಾಂಗಗಳು ಪರಸ್ಪರ ಕಾದಾಡಿ, ವ್ಯಾಪಾರಿ ತಂಡಗಳನ್ನು ದೋಚಿ ಜೀವನ ಸಾಗಿಸುತ್ತಿದ್ದುವು. ಪುರುಷರು ಭಾರೀ ಸಂಖ್ಯೆಯಲ್ಲಿ ಹತರಾಗುತ್ತಿದ್ದರು. ಇದು ಲಿಂಗಾನುಪಾತವನ್ನು ಏರುಪೇರುಗೊಳಿಸಿತು. ಕೊಲೆಯಾದವರ ವಿಧವೆಯರು ಮತ್ತು ಅನಾಥರಾದ ಮಕ್ಕಳಿಗೆ ಮನೆ ಹಾಗೂ ಇತರ ಜೀವನಾನುಕೂಲತೆಗಳನ್ನು ಒದಗಿಸಬೇಕಾಗಿತ್ತು. ಅನ್ಯಥಾ ಅವರು ವೇಶ್ಯೆಯರು ಅಥವಾ ಭಿಕ್ಷುಕರಾಗುತ್ತಿದ್ದರು. ಈ ಮಹಿಳೆಯರನ್ನು ವಿವಾಹದಿಂದ ಸ್ವೀಕರಿಸಿ ಅವರಿಗೆ ಸಂರಕ್ಷಣೆ ಒದಗಿಸಲಾಯಿತು. ಅದಲ್ಲದೆ ವೈವಾಹಿಕ ಸಂಬಂಧವು ಆ ಕಾಲದಲ್ಲಿ ವಿವಿಧ ಗೋತ್ರಗಳನ್ನು ಪರಸ್ಪರ ಬೆಸೆಯುವ ಕೊಂಡಿಯಾಗಿತ್ತು. ಹಾಗೆಯೇ ಪ್ರವಾದಿ ಮುಹಮ್ಮದರೇ ಏಕಪತ್ನಿತ್ವವನ್ನು ಅತ್ಯುತ್ಕ್ರಷ್ಟವೆಂದು ಸಾರಿದ ಗುರುವೂ ಆಗಿದ್ದಾರೆ. ಅವರು ನಾಲ್ವರಿಗಿಂತ ಅಧಿಕ ಪತ್ನಿಯರಿರಬಾರದೆಂದೂ ನಿಗದಿಪಡಿಸಿದರು. ಎಲ್ಲ ಪತ್ನಿಯರನ್ನು ಸಮಾನವಾಗಿ ನೋಡಿಕೊಳ್ಳಬೇಕೆಂಬ ಶರ್ತವನ್ನೂ ಇರಿಸಿದರು. ಅದು ಬಹುವಂಶ ಅಸಾಧ್ಯವಾಗಿತ್ತು. ಆ ಕುರಿತು ಕುರ್‍ಆನ್ ವಚನ ಹೀಗಿದೆ: “ಅನಾಥರೊಡನೆ ನ್ಯಾಯ ಪಾಲಿಸಲು ಸಾಧ್ಯವಿಲ್ಲವೆಂಬ ಆಶಂಕೆಯಿದ್ದರೆ ನಿಮಗೆ ಇಷ್ಟವಿರುವ ಸ್ತ್ರೀಯರಲ್ಲಿ ಎರಡು, ಮೂರು ಅಥವಾ ನಾಲ್ಕು ಮಂದಿಯನ್ನು ವಿವಾಹವಾಗಿರಿ. ಆದರೆ ಅವರ ಮಧ್ಯೆ ನ್ಯಾಯ ಪಾಲಿಸಲಾರಿರೆಂಬ ಆಶಂಕೆಯಿದ್ದರೆ ಕೇವಲ ಓರ್ವ ಸ್ತ್ರೀಯನ್ನು ವಿವಾಹವಾಗಿರಿ.” ಆ ಕಾಲದಲ್ಲಿ ಜಗತ್ತಿನಲ್ಲಿದ್ದ ಎಲ್ಲ ಪಿತೃ ಪ್ರಧಾನ (Patriarchal) ಸಮುದಾಯಗಳಲ್ಲಿ ಬಹುಪತ್ನಿತ್ವ ಸಂಪ್ರದಾಯವಿತ್ತೆಂಬುದು ಇಲ್ಲಿ ಗಮನಾರ್ಹ. ನಿಮ್ಮ ಮುಸ್ಲಿಮ್ ವಿರೋಧಿ ಪೂರ್ವಗ್ರಹಗಳನ್ನು ನಿವಾರಿಸುವ ಪ್ರಥಮ ಹಂತವಾಗಿ ನಾನು ನಿಮಗೆ ಕರಣ್ ಆರ್ಮ್‍ಸ್ಟ್ರಾಂಗ್‍ರ ‘Muhammed; A Prophet of our time’ ಎಂಬ ಪುಸ್ತಕವನ್ನು ಸೂಚಿಸುತ್ತೇನೆ. ಧರ್ಮಗಳ ತುಲನಾತ್ಮಕ ಅಧ್ಯಯನದಲ್ಲಿ ಮುಂಚೂಣಿಯಲ್ಲಿರುವ ಇವರು ಮುಸ್ಲಿಮರಲ್ಲ.

– ಖುಶ್ವಂತ್ ಸಿಂಗ್

About editor

Check Also

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಮಾನವ ಜೀವ, ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. “ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ …

Leave a Reply

Your email address will not be published. Required fields are marked *