ಅತ್ಯಧಿಕ ಪ್ರೀತಿ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಮನುಷ್ಯನು ತಾನು ಪ್ರೀತಿಸುವವರಿಗಾಗಿ ಎಲ್ಲವನ್ನೂ ಅರ್ಪಿಸಲು ಸಿದ್ಧನಾಗುತ್ತಾನೆ. ಅಂತರಂಗದಲ್ಲಿ ಆಧಿಪತ್ಯವನ್ನು ಸ್ಥಾಪಿಸಿದವರಿಗಾಗಿ ಮಾಡುವ ಯಾವುದೇ ಪರಿಶ್ರಮ ಮತ್ತು ಪಡುವ ಪಾಡು ಯಾರನ್ನೂ ಕಳವಳಕ್ಕೀಡು ಮಾಡುವುದಿಲ್ಲ. ಮಾತ್ರವಲ್ಲ, ಅವು ಅನನ್ಯ ಆನಂದವನ್ನೂ ವಿವರಿಸಲಸಾಧ್ಯವಾದ ಅನುಭೂತಿಯನ್ನೂ ಕೊಡುತ್ತದೆ.

ತನ್ನ ಪ್ರೇಯಸಿಯ ಬಳಿಗೆ ಹೋಗಲು ಕತ್ತಲೆ ತುಂಬಿದ ಅರ್ಧ ರಾತ್ರಿಯಲ್ಲಿ ದೂರದ ಊರಿಗೆ ನಡೆದುಕೊಂಡು ಹೋಗುವ ಪ್ರಿಯತಮನಿಗೆ ಆ ಶ್ರಮವು ಸ್ವಲ್ಪವೂ ಬೇಸರ ತರಿಸುವುದಿಲ್ಲ.

ತನ್ನ ಅತ್ಯಧಿಕ ಪ್ರೀತಿಗೆ ಪಾತ್ರವಾದ ಹಸುಗೂಸು ಕಾಯಿಲೆ ಬಿದ್ದಾಗ, ಅನೇಕ ಹಗಲು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆಯಬೇಕಾದ ತಾಯಿ, ಅದರ ಕುರಿತು ಯಾರಲ್ಲೂ ದೂರಿಕೊಳ್ಳುವುದಿಲ್ಲ.

ಸಂಪತ್ತನ್ನೇ ಸರ್ವಸ್ವವೆಂದು ಭಾವಿಸುವ ಧನ ಪೂಜಕರು ಊಟ ನಿದ್ರೆ ಬಿಟ್ಟು, ಕಷ್ಟ ಕೋಟಲೆಗಳನ್ನು ಸಹಿಸಿ ಹಣ ಗಳಿಸಲು ನಿರಂತರ ಪ್ರಯತ್ನಿಸುತ್ತಿರುತ್ತಾರೆ.

ತನ್ನ ನೆಚ್ಚಿನ ಸಿನಿಮಾ ನಾಯಕ-ನಾಯಕಿ, ರಾಜಕೀಯ ನೇತಾರ ಅಥವಾ ಕ್ರಿಕೆಟ್ ಆಟಗಾರನನ್ನು ಒಮ್ಮೆ ನೋಡಲಿಕ್ಕಾಗಿ ಹಲವರು ಎಂತಹ ಪಾಡು ಪಡಲಿಕ್ಕೂ ಸಿದ್ಧರಾಗುತ್ತಾರೆ.

ಒಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತಾನು ಪ್ರೀತಿಸುವ ವ್ಯಕ್ತಿ ಅಥವಾ ವಸ್ತುವಿಗಾಗಿ ಎಂತಹ ತ್ಯಾಗಕ್ಕೂ ಮುಂದಾಗುತ್ತಾರೆ. ಹಲವು ವೇಳೆ ಮನುಷ್ಯನ ಅತ್ಯಧಿಕ ಪ್ರೀತಿಗೆ ಪಾತ್ರವಾಗುವ ವಸ್ತು ಕ್ಷುಲ್ಲಕ ಮತ್ತು ನಿರರ್ಥಕವಾಗಿರುತ್ತದೆ. ಹೆಣ್ಣು, ಹೊನ್ನು, ಮಣ್ಣು, ಭಾಷೆ, ವರ್ಗ, ವರ್ಣ, ಎಲ್ಲವೂ ಅದರಲ್ಲಿ ಸೇರಿದೆ. ಅವುಗಳಿಗೆ ಮಾರು ಹೋಗಿ ಮನುಷ್ಯನು ಜೀವ ಬಲಿ ನೀಡಲಿಕ್ಕೂ ಮುಂದಾಗುತ್ತಾನೆ.

ತಂದೆ, ತಾಯಿ, ಮಕ್ಕಳು, ಸೋದರ, ಸೋದರಿಯರು, ಬಂಧು ಬಳಗ, ಊರು, ಕೇರಿ, ಸಂಪತ್ತು ಇತ್ಯಾದಿಗಳ ಬಗ್ಗೆ ಪ್ರೀತಿ ವಾತ್ಸಲ್ಯ, ಸಹಜ ಮತ್ತು ಸ್ವಾಭಾವಿಕ. ಮಾನವ ಕುಲದ ಅಸ್ತಿತ್ವ ಮತ್ತು ಬೆಳವಣಿಗೆಗೆ ಅದು ಅನಿವಾರ್ಯ ಕೂಡಾ.

ಆದರೆ ಮನುಷ್ಯನು ಯಾವುದನ್ನು ಅತ್ಯಧಿಕ ಪ್ರೀತಿಸಬೇಕು? ಅದು, ಈ ಪೈಕಿ ಯಾವುದಾದರೂ ಆದರೆ ಅದಕ್ಕೆ ಯಾವುದೇ ಅರ್ಥವಿಲ್ಲ. ಆದ್ದರಿಂದ, ಮನುಷ್ಯನ ಅತ್ಯಧಿಕ ಪ್ರೀತಿಗೆ ಅರ್ಹನಾದವನು- ಅವನಿಗೆ ಜೀವವನ್ನೂ ಜೀವನ ಸಾಧನಗಳನ್ನೂ ದಯಪಾಲಿಸಿದ ಸೃಷ್ಟಿಕರ್ತನಾಗಿದ್ದಾನೆ ಎಂದು ಎಲ್ಲ ಧರ್ಮಗಳೂ ಕಲಿಸುತ್ತವೆ.

ದೇವನನ್ನು ಪ್ರೀತಿಸುವುದೆಂದರೆ, ಅವನಿಗೆ ಮೆಚ್ಚುಗೆಯಾಗುವ ನೈತಿಕ ನಿಯಮಗಳನ್ನೂ ಧಾರ್ಮಿಕ ಮೌಲ್ಯಗಳನ್ನೂ ಮತ್ತು ಮಾನವೀಯ ಗುಣಗಳನ್ನೂ ಮೈಗೂಡಿಸಿಕೊಳ್ಳುವುದು. ಅವುಗಳ ಸಂಸ್ಥಾಪನೆಗಾಗಿ ತನ್ನನ್ನು ಅರ್ಪಿಸಿಕೊಳ್ಳುವುದು.

ಸತ್ಯ, ಸಮಾನತೆ, ಸ್ವಾತಂತ್ರ್ಯ, ನೀತಿ, ಒಳಿತು, ನ್ಯಾಯ ಇತ್ಯಾದಿ ಮೌಲ್ಯಗಳನ್ನು ಸಂರಕ್ಷಿಸುವ ಸಲುವಾಗಿ ಯಾವ ತ್ಯಾಗಕ್ಕೂ ಸಿದ್ಧವಿರುವುದು. ಹೆಡೆ ಬಿಚ್ಚಿ ನಿಂತ ವಿಷ ಸರ್ಪದ ಮುಂದೆ ಇರುವ ತನ್ನ ಮಗುವನ್ನು ಎತ್ತಿಕೊಳ್ಳಲು ಮುಂದಾಗುವ ತಾಯಿಯಂತೆ ಅಸತ್ಯ, ಅನ್ಯಾಯ, ಅನೀತಿಗಳು ತಾಂಡವ ವಾಡುತ್ತಿರುವಾಗ ಒಳಿತು ಮತ್ತು ನ್ಯಾಯವನ್ನು ಸ್ಥಾಪಿಸಲು ಅವರು ಮುಂದಾಗುತ್ತಾರೆ. ಆ ದಾರಿಯಲ್ಲಿ ಎದುರಾಗುವ ಸಮಸ್ಯೆ, ಸಂಕಷ್ಟ, ನೋವು ಮತ್ತು ಯಾತನೆಗಳು ಅವರಿಗೆ ಅಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತವೆ.

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *