ಇಸ್ಲಾಮ್ ಧರ್ಮದಲ್ಲಿ ಹಬ್ಬಗಳ ಪರಿಕಲ್ಪನೆ

@ ಶೇಖ್ ಮಕ್ಬೂಲ್ ಅಹ್ಮದ್, ಹುಬ್ಬಳ್ಳಿ

ಸಂತೋಷ ಹಾಗೂ ದುಃಖಗಳು ಮಾನವರ ಜೀವನದಲ್ಲಿ ಬಂದೇ ಬರುತ್ತವೆ. ಇವು ಕೆಲವೊಂದು ಸಲ ವೈಯಕ್ತಿಕವಾಗಿಯೂ ಹಾಗೂ ಸಾಮೂಹಿಕವಾಗಿಯೂ ಮೇಲಿಂದ ಮೇಲೆ ಬರುತ್ತವೆ. ಈ ಸಂತೋಷದ ಕ್ಷಣಗಳಿಗೆ ಈದ್, ಹಬ್ಬ, ಫೆಸ್ಟಿವಲ್ ಇವು ಕಾರಣಗಳಾಗುತ್ತವೆ. ವಿಭಿನ್ನ ಧರ್ಮಾವಲಂಬಿಗಳು ತಮ್ಮ ತಮ್ಮ ಹಬ್ಬಗಳನ್ನು ತಮ್ಮ ಧರ್ಮದ ಮಹಾ ಪುರುಷರ ಹೆಸರಿನಲ್ಲಿ ಅಥವಾ ಧರ್ಮದ ಮಹತ್ವವನ್ನು ಸಾರುವ ಸಂದರ್ಭಗಳಲ್ಲಿ ಅಥವಾ ಐತಿಹಾಸಿಕ ಮಹತ್ವದ ಪ್ರಚಾರಕ್ಕಾಗಿ ಸಂತೋಷದ ಪ್ರಸಂಗಗಳನ್ನು ಬಳಸಿಕೊಳ್ಳುತ್ತಾರೆ.

ಫಿರ್‍ಔನ್ ಎಂಬ ಅರಸನ ದಬ್ಬಾಳಿಕೆ ಹಾಗೂ ಅನ್ಯಾಯಗಳಿಂದ ಮುಕ್ತಿ ಸಿಕ್ಕ ದಿನದಂದು ಯಹೂದಿಗಳು ಪ್ರತಿ ವರ್ಷ ಹಬ್ಬವನ್ನು ಆಚರಿಸುತ್ತಾರೆ. ಯಹೂದಿಗಳ ಪ್ರವಾದಿಗಳಾದ ಮೊಸೆಸ್ (ಇಸ್ಲಾಂ ಧರ್ಮದಲ್ಲಿ ಮೂಸಾ) ಹಾಗೂ ಅವರ ಅನುಯಾಯಿಗಳನ್ನು ಸಮುದ್ರವನ್ನು ಸೀಳಿ ಅದರ ಮಧ್ಯದಲ್ಲಿ ಮಾರ್ಗವನ್ನು ನಿರ್ಮಿಸಿ, ಫಿರ್‍ಔನ್ ಅರಸನು ತನ್ನ ಸೈನ್ಯದೊಂದಿಗೆ ಅವರನ್ನು ಬೆನ್ನಟ್ಟಿದ್ದು ಪ್ರವಾದಿ ಮೊಸೆಸ್ ಸಮುದ್ರ ದಾಟಿದಾಗ, ಫಿರ್‍ಔನ್ ಇನ್ನೂ ಸಮುದ್ರದ ಮಧ್ಯದಲ್ಲಿದ್ದು ಆಗ ಅಲ್ಲಾಹನು ಇಬ್ಭಾಗ ಮಾಡಿದ ಸಮುದ್ರವನ್ನು ಮತ್ತೆ ಕೂಡಿ ಫಿರ್‍ಔನ್ ಹಾಗೂ ಆತನ ಸೈನ್ಯವನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.

ಕ್ರೈಸ್ತರು ಸಕಲ ಜನಾಂಗದ ಪಾಪಗಳನ್ನು ತೊಳೆಯಲು ಬಂದ ಜೀಸಸ್ ಕ್ರೈಸ್ತನಿಗೆ ಕ್ರೈಸ್ತರ ಅಭಿಪ್ರಾಯದಂತೆ ಶಿಲುಬೆಗೇರಿಸಿದ ಪ್ರಸಂಗವನ್ನು ಸಾರ್ವಜನಿಕವಾಗಿ ನೆನಪಿಸಿಕೊಳ್ಳುತ್ತಾರೆ.

ಹಿಂದೂಗಳು ಕೂಡ ವರ್ಷದಲ್ಲಿ ಅನೇಕ ಹಬ್ಬಗಳನ್ನು ಆಚರಿಸಿ ಸಂತೋಷ ಪಡುತ್ತಾರೆ. ದೀಪಾವಳಿ, ದಸರಾ, ಗಣೇಶ ಹಬ್ಬ ಇವು ಸಂತೋಷದಿಂದ ಸಂಭ್ರಮಿಸುವ ಕೆಲ ಪ್ರಸಂಗಗಳು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿಯೂ ಕೆಲವೊಂದು ರಾಷ್ಟ್ರಗಳು ರಾಷ್ಟ್ರೀಯ ಹಬ್ಬವನ್ನಾಚರಿಸುತ್ತವೆ. ಸಮೃದ್ಧ ಮಳೆಯಾಗಿ, ಸಮೃದ್ಧ ಬೆಳೆ ಬಂದಾಗಲೂ ಕೂಡ ರೈತರು ತಮ್ಮ ಬೆಳೆಯನ್ನು ಕಟಾವು ಮಾಡುವ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿ ಸಂತೋಷ ಕೂಟಗಳನ್ನು ಏರ್ಪಡಿಸುತ್ತಾರೆ.

ಇಸ್ಲಾಂ ಧರ್ಮದಲ್ಲಿ ಹಬ್ಬವನ್ನು ಆಚರಿಸುವ ಕಾರಣಗಳೇ ಬೇರೆ ಇದ್ದು ಅವರು ವರ್ಷದಲ್ಲಿ ಕೇವಲ ಎರಡು ಸಲ ಮಾತ್ರ ಹಬ್ಬಗಳನ್ನು ಆಚರಿಸುತ್ತಾರೆ. ಈ ಎರಡೂ ಹಬ್ಬಗಳ ಸಂಬಂಧ ಕುರ್‍ಆನ್‍ನೊಂದಿಗೆ ಬೆಸೆದುಕೊಂಡಿದೆ.

ರಮಝಾನ್ ತಿಂಗಳಿನಲ್ಲಿ ಮಾನವ ಕಲ್ಯಾಣಕ್ಕಾಗಿ ಕುರ್‍ಆನ್ ಅವತೀರ್ಣಗೊಳ್ಳ ತೊಡಗಿತು. ಆ ದಿನ ರಮಝಾನ್ ತಿಂಗಳ ಸಕಲ ಮಾನವ ಜನಾಂಗದ ಕಲ್ಯಾಣಕ್ಕಾಗಿ ಅವತೀರ್ಣಗೊಳಿಸಿದ ಕುರ್‍ಆನ್ ಮಾನವ ಜನಾಂಗಕ್ಕೆ ಕೊಟ್ಟ ದೊಡ್ಡ ಕಾಣಿಕೆ. ಕುರ್‍ಆನ್ ಮಾನವನ ಭೌತಿಕ ಜೀವನದಲ್ಲಿ ಹಾಗೂ ಮರಣದ ತರುವಾಯದ ಜೀವನದಲ್ಲಿಯೂ ಶಾಂತಿ ಹಾಗೂ ಏಳಿಗೆಯನ್ನು ದಯಪಾಲಿಸುತ್ತದೆ. ಈ ಕಾರಣಕ್ಕಾಗಿ ಎಲ್ಲ ಮುಸಲ್ಮಾನರು ಒಂದು ತಿಂಗಳು ಸಂಪೂರ್ಣ ಉಪವಾಸ ಆಚರಿಸಿ ಅಲ್ಲಾಹನನ್ನು ಪ್ರಾರ್ಥಿಸುತ್ತಾರೆ. ಆತನಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಕುರ್‍ಆನ್ ಕೇವಲ ಮುಸ್ಲಿಮರಿಗೆ ಅಷ್ಟೇ ಅಲ್ಲ. ಸಕಲ ಜಗತ್ತಿನ ಮಾನವ ಕಲ್ಯಾಣಕ್ಕಾಗಿ ಅವರ ಅಭ್ಯುದಯಕ್ಕಾಗಿ ಇಳಿಸಲ್ಪಟ್ಟಿದೆ. ಕುರ್‍ಆನ್ ಪ್ರಕಾರ ಜೀವನಯಾಪನ ಮಾಡಿದವನಿಗೆ ಈ ಜೀವನದಲ್ಲಿ ಎಲ್ಲ ಪ್ರಕಾರದ ಸುಖ-ಶಾಂತಿಗಳು ಹಾಗೂ ಯಶಸ್ಸು ಸಿಗುತ್ತದೆ. ಮರಣದ ತರುವಾಯ ಸ್ವರ್ಗವೂ ಪ್ರಾಪ್ತಿಯಾಗುವುದು ಗ್ಯಾರಂಟಿ.

ಇದರ ಮೇಲೆ ವಿಶ್ವಾಸವಿರಿಸಿ ಆಚರಿಸುವವನಿಗೆ ಮಾರ್ಗದರ್ಶನ ಹಾಗೂ ಯಶಸ್ಸು ಲಭಿಸುತ್ತದೆ. ಇದಕ್ಕಾಗಿ ಸಂತೋಷ ಪಡಿಸಿರಿ, ನೀವು ಬಯಸುವ ವಸ್ತುಗಳಿಗಿಂತಲೂ ಕುರ್‍ಆನ್ ಸರ್ವಶ್ರೇಷ್ಠವಾದದ್ದು. ಕುರ್‍ಆನ್‍ನಲ್ಲಿ ಅಲ್ಲಾಹನು ಹೇಳುತ್ತಾನೆ. “ಜನರೇ! ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ಉಪದೇಶ ಬಂದಿದೆ. ಇದು ಮನಸ್ಸುಗಳೊಳಗಿನ ಕಾಯಿಲೆಗಳ ಗುಣೌಷಧವಾಗಿದೆ ಮತ್ತು ಅದನ್ನು ಸ್ವೀಕರಿಸಿಕೊಂಡವರಿಗೆ ಸನ್ಮಾರ್ಗ ದರ್ಶನವೂ ಕೃಪೆಯೂ ಆಗಿರುತ್ತದೆ. ಓ ಪೈಗಂಬರರೇ, (ಹೀಗೆ) ಹೇಳಿರಿ: “ಇದನ್ನು ಅವತೀರ್ಣ ಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು ಸಂತೋಷ ಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ.” (ಕುರ್‍ಆನ್: 10:57-58).

ನೀವು ಬಯಸುವುದಕ್ಕಿಂತಲೂ ಹೆಚ್ಚಿನದು ಇದರಿಂದ ನಿಮಗೆ ಪ್ರಾಪ್ತವಾಗುತ್ತದೆ. ಆದ್ದರಿಂದ ಕುರ್‍ಆನ್ ಲಭಿಸಿದ ಸಂತೋಷದಲ್ಲಿ ರಮಝಾನ್ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಧರ್ಮದವರು ಹಬ್ಬಗಳ ಸಂತೋಷವನ್ನು ಅನುಭವಿಸಲು ಕುಣಿತ, ಮದ್ಯಪಾನ, ಇಸ್ಪೀಟ್ ಆಡುವುದು ಮಾಡುತ್ತಾರೆ. ಪವಿತ್ರ ಹಬ್ಬದ ಸಂತೋಷದ ಸಮಯದಲ್ಲಿ ಇವೆಲ್ಲವನ್ನು ಮಾಡುವುದು ಸರಿಯಲ್ಲ. ಯುರೋಪ್ ಅಮೆರಿಕಾದಲ್ಲಿ ಫೆಸ್ಟಿವಲ್ ಹಾಗೂ ಕಾರ್ನಿವಲ್‍ಗಳಲ್ಲಿಯಂತೂ ಸ್ತ್ರೀಯರು ಬೆತ್ತಲಾಗಿ ಕುಣಿಯುತ್ತಾ ಹೋಗುತ್ತಾರೆ. ಯಾವುದೇ ಪುರುಷ ಯಾವುದೇ ಸ್ತ್ರೀಯೊಡನೆ ಲೈಂಗಿಕ ಸಂಬಂಧವನ್ನು ಹೊಂದಬಹುದು. ರಮಝಾನ ಹಾಗೂ ಬಕ್ರೀದ್ ಹಬ್ಬದಂದು ಮುಸ್ಲಿಮರು ಯಾವುದೇ ಕೆಟ್ಟ ಹಾಗೂ ಅಶ್ಲೀಲ ಕೆಲಸದ ಕಡೆಗೆ ಹೋಗುವುದಿಲ್ಲ. ಕೆಟ್ಟದ್ದನ್ನು ಮಾಡಿದರೆ ಅಲ್ಲಾಹನ ಭಯ. ಅದಕ್ಕಾಗಿ ಅಂಜಿ ಆತನ ಗುಣಗಾನ ಮಾಡುತ್ತಾ ಸಾಧ್ಯವಾದಷ್ಟು ಬಡವರಿಗೆ ಸಹಾಯ ಮಾಡುತ್ತಾ ಉಪವಾಸ ಆಚರಿಸುತ್ತಾರೆ.

ಈ ತಿಂಗಳಿನಲ್ಲಿ ತಮ್ಮ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ತೆಗೆದು ಬಡವರಿಗೆ ಕೊಡುತ್ತಾರೆ. ಆದಿನ ಎಲ್ಲರೂ ಸಂತೋಷದ ಹಬ್ಬವನ್ನಾಚರಿಸುತ್ತಾರೆ. ಅತ್ಯಂತ ಬಡವರಿಗೆ ಬಟ್ಟೆ, ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಇನ್ನು ಕೆಲವರಿಗೆ ಹಬ್ಬದ ಮೊದಲೇ ಹಬ್ಬಕ್ಕೆ ಬೇಕಾಗುವ ಆವಶ್ಯಕ ಸಾಮಗ್ರಿ(ಅಕ್ಕಿ-ಸಕ್ಕರೆ)ಗಳನ್ನು ತಲುಪಿಸುತ್ತಾರೆ. ಹಬ್ಬವನ್ನು ಆಚರಿಸುವುದರೊಂದಿಗೆ ಅವರೂ ಹಬ್ಬವನ್ನು ಆಚರಿಸಿ ಸಂತೋಷಡಲಿ ಎನ್ನುವ ಸದುದ್ದೇಶ ಇದರ ಹಿಂದೆ ಇದೆ. ಆದ್ದರಿಂದಲೇ ಇದಕ್ಕೆ ಈದ್-ಉಲ್-ಫಿತರ್ ಎನ್ನುತ್ತಾರೆ.

ಕುರ್‍ಆನ್‍ನಲ್ಲಿ ಅಲ್ಲಾಹನು ಹೇಳುತ್ತಾನೆ, ಓ ಮಾನವರೇ ನಿಮ್ಮ ಸಂಪತಿನಲ್ಲಿ ಬಡವರ ಅಸಹಾಯಕರ ವಿಧವೆಯರ ಹಾಗೂ ಸಾಲದ ಸುಳಿಯಲ್ಲಿ ಸಿಕ್ಕವರ ಪಾಲೂ ಇದೆ ಅದನ್ನು ಅವರಿಗೆ ಮುಟ್ಟಿಸಿರಿ. ಆದ್ದರಿಂದಲೇ ಮುಸ್ಲಿಮರು ತಮ್ಮ ಸಂಪತ್ತಿನ ಕೆಲ ಭಾಗ (ಝಕಾತ್) ಬಡವರಿಗೆ ಊಟದ ವ್ಯವಸ್ಥೆಗಾಗಿ (ಫಿತ್ರ್) ವ್ಯವಸ್ಥೆ ಮಾಡುತ್ತಾರೆ. ಹಾಗೂ ಅವರಿಗೂ ತಮ್ಮ ಸಂತೋಷದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುತ್ತಾರೆ.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *