ಯಶಸ್ಸಿನ ಗುಟ್ಟು

ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)

ಸಮುದ್ರದ ಕಿನಾರೆಯಲ್ಲಿ ಇಬ್ಬರು ಯುವಕರು ಸ್ನಾನ ಮಾಡುತ್ತಿದ್ದರು. ಇಬ್ಬರೂ ಮಿತ್ರರಾಗಿದ್ದರು. ಚೆನ್ನಾಗಿ ಈಜು ಬಲ್ಲವರಾಗಿದ್ದರು. ಅವರು ನೀರಿನ ಮೇಲೆಯೂ ಈಜುತ್ತಿದ್ದರು ಮತ್ತು ಮುಳುಗಿ ನೀರಿನೊಳಗೂ ದೂರದ ತನಕ ಹೋಗುತ್ತಿದ್ದರು. ಇಬ್ಬರೂ ಈಜುತ್ತಾ ದೂರ ಹೊರಟು ಹೋದರು. ಆಗ ಅಲೆಗಳ ಒಂದು ಸಾಲು ಬಂತು. ಇಬ್ಬರಿಗೂ ಅದು ಎದುರಾಯಿತು. ಒಬ್ಬ ಯುವಕ ಈಜುಗಾರಿಕೆಯಲ್ಲಿ ಹೆಚ್ಚು ನಿಪುಣನಾಗಿದ್ದನು. “ನಾನು ತೆರೆಗಳೊಂದಿಗೆ ಸೆಣಸಿ ದಡ ಸೇರಬಲ್ಲೆ” ಎಂದುಕೊಂಡನು. ಆದರೆ ತೆರೆಗಳ ಅಬ್ಬರ ಹೆಚ್ಚಾಯಿತು. ಅವನಿಗೆ ತನ್ನ ಶಕ್ತಿಶಾಲಿ ತೋಳುಗಳ ಹೊರತಾಗಿಯೂ ಅದರಿಂದ ಪಾರಾಗಲು ಸಾಧ್ಯವಾಗಲಿಲ್ಲ. ಅವನು ಮುಳುಗಿ ಸತ್ತು ಹೋದ.

ಇನ್ನೊಬ್ಬ ಯುವಕನೂ ತೆರೆಗಳ ಅಬ್ಬರಕ್ಕೆ ಸಿಲುಕಿದ್ದ. ಕೆಲವು ಸಮಯ ಅವನು ತನ್ನ ಮಿತ್ರನನ್ನು ಹಿಂಬಾಲಿಸಿದನು. ಆದರೆ ಅಲೆಗಳ ರಭಸವು ತನ್ನ ತೋಳ್ಬಲಕ್ಕಿಂತ ಹೆಚ್ಚಿದೆ ಎಂದು ಅವನಿಗೆ ಮನವರಿಕೆಯಾಯಿತು. ಆಗ ಅವನಿಗೊಂದು ವಿಷಯ ನೆನಪಿಗೆ ಬಂತು. ಅಲೆಗಳು ಎಷ್ಟು ರುದ್ರರೂಪ ತಾಳಿದರೂ ಅವುಗಳ ಅಬ್ಬರ ಕೇವಲ ಮೇಲ್ಮೈಯಲ್ಲೇ ಇರುತ್ತದೆ. ನೀರಿನ ಕೆಳಮಟ್ಟವು ಆಗಲೂ ಶಾಂತವಾಗಿರುತ್ತದೆ. ಆ ಮೇಲೆ ಅವನು ತನ್ನ ಕಾರ್ಯ ವಿಧಾನವನ್ನು ಬದಲಿಸಿದ. ಮೇಲಿನ ಅಲೆಗಳೊಂದಿಗೆ ಸೆಣಸುವ ಬದಲು ಅವನು ಮುಳುಗಿ ನೀರಿನ ಕೆಳಮಟ್ಟಕ್ಕೆ ತಲುಪಿದ. ಅಲ್ಲಿ ನೀರು ಸ್ವಲ್ಪ ಶಾಂತವಾಗಿತ್ತು. ಅಲ್ಲಿ ಅವನು ಈಜುಗಾರಿಕೆಯನ್ನು ಚೆನ್ನಾಗಿ ಬಳಸಿಕೊಂಡು ಕಿನಾರೆಯತ್ತ ಸಾಗ ತೊಡಗಿದನು. ಅವನು ಸಾಕಷ್ಟು ದಣಿದಿದ್ದರೂ ಕೈ ಕಾಲು ಬಡಿದು ಹೇಗೋ ದಡ ಸೇರಿದನು. ಆಗ ಅವನು ಪ್ರಜ್ಞೆ ಕಳಕೊಂಡಿದ್ದನು.

ಸಮುದ್ರ ತೀರದಲ್ಲಿ ಕೆಲವು ಮಂದಿ ಬೆಸ್ತರು ತಮ್ಮ ದೋಣಿಗಳ ಜತೆ ಇದ್ದರು. ಅವರು ಅವನನ್ನು ಎತ್ತಿಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಕೆಲವು ದಿನಗಳಿದ್ದು ಅವನು ಗುಣಮುಖನಾದನು. ಅಲೆಗಳೊಂದಿಗೆ ಸೆಣಸುವುದನ್ನೇ ಈಜುಗಾರಿಕೆ ಎಂದು ತಿಳಿದವನು ಸತ್ತು ಹೋದನು. ಅಲೆಗಳಿಂದ ತನ್ನನ್ನು ರಕ್ಷಿಸಿಕೊಂಡು ಪಾರಾಗುವ ವಿಧಾನ ಕೈಗೊಂಡವನು ಯಶಸ್ವಿಯಾದನು.

ಇಡೀ ಜೀವನದ ಸ್ಥಿತಿಯೂ ಇದುವೇ ಆಗಿದೆ. ಜೀವನದಲ್ಲಿ ತರತರದ ಬಿರುಗಾಳಿಗಳೇಳುತ್ತವೆ. ತನ್ನೆದುರಿಗೆ ಬಂದ ಅಲೆಗಳೊಂದಿಗೆಲ್ಲಾ ಸೆಣಸಾಟಕ್ಕಿಳಿಯುವುದು ಬುದ್ದಿವಂತಿಕೆ ಯಲ್ಲ. ಯಶಸ್ವಿಯಾಗಿ ದಡ ಸೇರುವ ಹೆಚ್ಚು ವ್ಯಾವಹಾರಿಕವಾದ ದಾರಿ ಯಾವುದೆಂದು ಅವನು ಕಂಡುಕೊಳ್ಳಬೇಕು. ಯಾವುದು ಹೆಚ್ಚು ವ್ಯಾವಹಾರಿಕವೋ ಆ ದಾರಿಯನ್ನು ಹಿಡಿಯಬೇಕು. ಅದಕ್ಕಾಗಿ ತೆರೆಗಳ ಮಟ್ಟದಿಂದ ಕೆಳಗಿಳಿದು ತನ್ನ ದಾರಿ ಕಂಡು ಕೊಳ್ಳುವ ಸಂದರ್ಭ ಬಂದರೂ ಸರಿಯೆ. ನದಿ ಮತ್ತು ಸಮುದ್ರಗಳಲ್ಲಿ ಏಳುವ ತೀವ್ರ ತೆರನಾದ ಅಲೆಗಳು ಕೂಡ ನೀರಿನ ಮೇಲ್ಪದರಿನಲ್ಲಿ ಮಾತ್ರವಿರುತ್ತವೆ. ಇದು ಪ್ರಕೃತಿ ನಿಯಮ. ನೀರಿನ ಕೆಳಪದರವು ಶಾಂತವಾಗಿರುತ್ತದೆ. ಆದ್ದರಿಂದ ಸುಳಿಗಳೆದ್ದಾಗ ವಿೂನುಗಳು ಕೆಳಸ್ತರಕ್ಕೆ ಹೋಗಿ ಬಿಡುತ್ತವೆ. ಇದು ಪ್ರಕೃತಿಯ ಪಾಠವಾಗಿದೆ. ಬಿರುಗಾಳಿಯ ಅಬ್ಬರದ ವೇಳೆ ನಾವು ಏನು ಮಾಡಬೇಕೆಂದು ಪ್ರಕೃತಿ ನಮಗೆ ಕಲಿಸಿಕೊಡುತ್ತದೆ.

ಜೀವನದಲ್ಲಿ ಕೆಲವೊಮ್ಮೆ ಬಿರುಗಾಳಿಯನ್ನು ಎದುರಿಸಬೇಕಾಗುತ್ತದೆ. ಆದರೆ ಹೆಚ್ಚಿನ ವೇಳೆ ಆ ಬಿರುಗಾಳಿಯ ಪ್ರವಾಹದಿಂದ ನುಣುಚಿಕೊಂಡು ಹೋಗುವುದರಲ್ಲೇ ಯಶಸ್ಸು ಅಡಗಿದೆ. “ಜನರೇ! ಶತ್ರುಗಳೊಂದಿಗೆ ಹೋರಾಡುವ ಆಸೆ ಪಡದಿರಿ. ಅಲ್ಲಾಹನಿಂದ ಕ್ಷೇಮವನ್ನೇ ಬೇಡಿರಿ. ಶತ್ರುಗಳು ಎದುರಾದಾಗ ಮಾತ್ರ ಸ್ಥಿರವಾಗಿರಿ” ಎಂಬ ಪ್ರವಾದಿ ವಚನದ ತಾತ್ಪರ್ಯವೂ ಇದುವೇ ಆಗಿದೆ.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *