ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದು?

ಪ್ರಶ್ನೆ: ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದಕ್ಕೆ ಏನಾದರೂ ವಿರೋಧವಿದೆಯೇ? ಕೆಲವು ದೇಶಗಳ ಉದಯ-ಅಸ್ತಮಾನ ಸಮಯದ ಪ್ರಕಾರ ಬೇಗನೇ ಪ್ರಭಾತವಾಗುವಾಗ ಶರೀರಕ್ಕೆ ಬೇಕಾದ ವಿಶ್ರಾಂತಿ ದೊರೆಯಲಿಕ್ಕಾಗಿ ಪುನಃ ನಿದ್ರಿಸಬೇಕಾಗುತ್ತದೆ. ಅದೇ ರೀತಿ ಅಸರ್ ನಮಾಝ್‍ನ ಬಳಿಕ ನಿದ್ರಿಸುವುದಕ್ಕೆ ಯಾವುದಾದರೂ ವಿರೋಧವಿದೆಯೇ? ಈ ನಿದ್ದೆ ಕೂಡಾ ಶಾರೀರಿಕ ಅಗತ್ಯವೆಂದು ಪರಿಗಣಿಸಬಹುದೇ?

ಉತ್ತರ: ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುವುದನ್ನು ವಿರೋಧಿಸುತ್ತಾ ಯಾವುದೇ ಆದೇಶಗಳು ಕುರ್‍ಆನ್ ಅಥವಾ ಸಹೀಹಾದ ಹದೀಸ್‍ಗಳಲ್ಲಿ ಬಂದ ಬಗ್ಗೆ ತಿಳಿದಿಲ್ಲ. ಕೆಲವು ಹದೀಸ್‍ಗಳು ಅದನ್ನು ವಿರೋಧಿಸಿ ಬಂದಿವೆಯೆಂದು ಉದ್ಧರಿಸಲ್ಪಟ್ಟಿದ್ದರೂ ಅವು ಆಧಾರ ಯೋಗ್ಯವಾದವುಗಳಲ್ಲ. ಅವು ನಕಲಿಯಾಗಿ ಸೃಷ್ಟಿಸಿದ್ದೂ ದುರ್ಬಲವೂ ಆಗಿವೆ.

ಆದರೆ ಪ್ರಭಾತವು ಅತ್ಯಂತ ಅನುಗ್ರಹೀತ ಸಮಯಗಳ ಸಾಲಿಗೆ ಸೇರಿದ್ದಾಗಿದೆ ಎಂಬ ವಿಷಯದಲ್ಲಿ ತರ್ಕವಿಲ್ಲ. ಪ್ರಭಾತವನ್ನು ಸಮೃದ್ಧಿಯುಳ್ಳವನ್ನಾಗಿಸು ಎಂದು ಪ್ರವಾದಿ(ಸ) ಪ್ರಾರ್ಥಿಸಿದ್ದಾಗಿ ಸಹೀಹ್ ಆದ ಹದೀಸ್‍ಗಳಲ್ಲಿ ಬಂದಿದೆ.

ಸಖ್‍ರ್ ಅಲ್ ಗಾಮಿದಿಯವರಿಂದ ವರದಿಯಾಗಿದೆ. ಅಲ್ಲಾಹನ ಸಂದೇಶವಾಹಕರು ಹೇಳಿದರು. “ಓ ಅಲ್ಲಾಹ್, ನನ್ನ ಸಮುದಾಯಕ್ಕೆ ಅವರ ಮುಂಜಾನೆಗಳಲ್ಲಿ ಅನುಗ್ರಹ ವರ್ಷಿಸು.” ಪ್ರವಾದಿ(ಸ) ಸೇನೆಯನ್ನು ಕಳುಹಿಸುತ್ತಿದ್ದರೆ ಮುಂಜಾನೆ ಬೇಗನೇ ಕಳುಹಿಸುತ್ತಿದ್ದರು. ಇದನ್ನು ವರದಿ ಮಾಡಿದ ಸಖ್‍ರ್ ಓರ್ವ ವ್ಯಾಪಾರಿಯಾಗಿದ್ದರು. ಅವರು ಪ್ರಭಾತದಲ್ಲೇ ತಮ್ಮ ವ್ಯಾಪಾರವನ್ನು ಆರಂಭಿಸುತ್ತಿದ್ದರು. ಹಾಗೆ ಅವರಿಗೆ ಅಭಿವೃದ್ಧಿ ಉಂಟಾಗಿ ಅವರು ಶ್ರೀಮಂತರಾದರು. (ಅಹ್ಮದ್ 15443, ಅಬೂದಾವೂದ್: 2606, ತಿರ್ಮಿದಿ: 1212)

ಸಹಾಬಿಯಾಗಿರುವ ಝುಬೈರ್(ರ) ಸುಬ್‍ಹಿ ನಮಾಝ್‍ನ ನಂತರ ನಿದ್ರಿಸುವುದರಿಂದ ತನ್ನ ಮಕ್ಕಳನ್ನು ತಡೆಯುತ್ತಿದ್ದರು. ಅದನ್ನು ಹವ್ಯಾಸವಾಗಿಸಿದ ನಮಗೆ ಯಾರಾದರೂ ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುತ್ತಾರೆ ಎಂದು ತಿಳಿದು ಬಂದರೆ ಅದು ನಮಗೆ ಅರೋಚಕವೆನಿಸುತ್ತಿತ್ತು ಎಂದು ಅವರ ಪುತ್ರ ಉರ್ವತ್ ಬಿನ್ ಝುಬೈರ್ ಹೇಳುತ್ತಾರೆ. (ಮುಸನ್ನಫ್ ಅಬೀ ಶೈಬ: 2/222)

ಆದರೆ ಸುಬ್‍ಹಿಯ ನಂತರ ನಿದ್ರಿಸುವ ಸಹಾಬಿಗಳೂ ಇದ್ದರು. ಅಲಿಯಿಝೀದಿಲ್ ಮದೀನಿ ಹೇಳುತ್ತಾರೆ. ಒಂದು ದಿನ ಪ್ರಭಾತದಲ್ಲಿ ಉಮರ್(ರ) ಸುಹೈಬ್‍ರ ಬಳಿಗೆ ಬಂದರು. ಅವರು ಸುಬ್‍ಹಿ ನಮಾಝ್‍ನ ಬಳಿಕ ನಿದ್ರಿಸುತ್ತಿದ್ದರು. ಅವರು ಎಚ್ಚರಗೊಳ್ಳುವವರೆಗೆ ಉಮರ್(ರ) ಅಲ್ಲಿ ಕಾದು ಕುಳಿತರು. ಎಚ್ಚರವಾದಾಗ ಸುಹೈಬ್ ಆಶ್ಚರ್ಯಚಕಿತರಾಗಿ ಹೇಳಿದರು, “ಅಮೀರುಲ್ ಮುಅïಮಿನೀನ್ ಕಾದು ಕುಳಿತುಕೊಳ್ಳುವುದು, ಸುಹೈಬ್ ನಿದ್ರಿಸುವುದು!” ಆಗ ಉಮರ್(ರ) ಹೇಳಿದರು, “ತಾವು ಹಾಯಾಗಿ ನಿದ್ರಿಸುತ್ತಿರುವಾಗ ನಿಮ್ಮ ನಿದ್ದೆಗೆಡಿಸಲು ನನಗೆ ಮನಸ್ಸಿರಲಿಲ್ಲ. (ಮುಸನ್ನಫ್ ಅಬೀ ಶೈಬ: 5/223)

ಸಮ್ಮಾಕ್‍ರಿಂದ ವರದಿಯಾಗಿದೆ. ಅವರು ಜಾಬಿರ್ ಬಿನ್ ಸಮುರಾರೊಂದಿಗೆ ಕೇಳಿದರು, “ಸುಬ್‍ಹಿ ನಮಾಝ್ ನಿರ್ವಹಿಸಿದ ಬಳಿಕ ಪ್ರವಾದಿ(ಸ) ಏನು ಮಾಡುತ್ತಿದ್ದರು?” ಅವರು ಹೇಳಿದರು, “ಸೂರ್ಯೋದಯವಾಗುವ ವರೆಗೂ ನಮಾಝ್‍ನ ಸ್ಥಳದಲ್ಲೇ ಕುಳಿತುಕೊಳ್ಳುತ್ತಿದ್ದರು.
(ಮುಸ್ಲಿಮ್: 1557, ಇಬ್ನು ಕುಸೈಮ: 757)

ಪ್ರವಾದಿಯವರ(ಸ) ಚರ್ಯೆಯು ಇದಾಗಿತ್ತು. ಆದರೆ ಇದು, ಎಲ್ಲರೂ ಹಾಗೆ ಮಾಡಬೇಕು ಎಂದು ಆದೇಶಿಸುತ್ತಿಲ್ಲ. ಅನುಸರಿಸಲು ಅತ್ಯುತ್ತಮ ಮಾದರಿ ಪ್ರವಾದಿಚರ್ಯೆ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

ನಿದ್ದೆ, ವಿಶ್ರಮಗಳೆಲ್ಲವೂ ಕಳೆದು ನಮಾಝ್ ಪ್ರಾರ್ಥನೆಗಳೆಲ್ಲವನ್ನೂ ನಿರ್ವಹಿಸಿ ಹುರುಪಿನಿಂದ ಒಂದು ದಿವಸವನ್ನು ಆರಂಭಿಸುವುದು, ಆ ಹುರುಪಿನಿಂದ ಅಧ್ಯಯನಕ್ಕಾದರೂ ಕೆಲಸಕ್ಕಾದರೂ ಹೊರಡುವುದು ಉತ್ತಮ ಕಾರ್ಯವಾಗಿದೆ ಎಂಬ ವಿಷಯದಲ್ಲಿ ಯಾರಿಗೂ ಸಂಶಯವಿರಲಿಕ್ಕಿಲ್ಲ.

ಇಲ್ಲಿ ನಾವು ಗಮನಹರಿಸಬೇಕಾದ ಇನ್ನೊಂದು ವಿಷಯವೂ ಇದೆ. ತಡವಾಗಿ ಮಲಗಿ ಬೇಗನೇ ಎದ್ದೇಳುವವರಿಗೆ ಶರೀರಕ್ಕೆ ಬೇಕಾದ ವಿಶ್ರಾಂತಿ ದೊರೆಯದಿದ್ದರೆ ಹುರುಪಿಗೆ ಬದಲಾಗಿ ಆಯಾಸದ ಅನುಭವವಾಗಬಹುದು. ಅಂತಹವರು ಅಲ್ಪ ನಿದ್ರಿಸುವುದು ಒಳ್ಳೆಯದು.

ಮೂರು ಗಂಟೆಗೆ ಸುಬ್‍ಹಿ ಅದಾನ್ ಮೊಳಗುವ ಗಲ್ಫ್ ನಾಡುಗಳಲ್ಲಿ ಮೂರು ತಾಸು ಕಳೆದ ಬಳಿಕ ಕೆಲಸದ ಸ್ಥಳಗಳಲ್ಲೂ ಶಿಕ್ಷಣ ಸಂಸ್ಥೆಗಳಲ್ಲೂ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತವೆ. ರಾತ್ರಿ ಬೇಗನೇ ಮಲಗಿ ಅಗತ್ಯಕ್ಕೆ ಬೇಕಾದಷ್ಟು ನಿದ್ದೆ ದೊರೆತವರು ಸುಬ್‍ಹಿ ನಮಾಝ್‍ನ ಬಳಿಕ ಪುನಃ ನಿದ್ರಿಸುವುದು ಆಲಸ್ಯಕ್ಕೆ ಕೊಂಡೊಯ್ಯುತ್ತದೆ. ರಾತ್ರಿ ಬೇಗನೇ ಆಹಾರ ಸೇವಿಸಿ ಇಶಾ ನಮಾಝ್‍ನ ಬಳಿಕ ಕೂಡಲೇ ನಿದ್ರಿಸುವುದು ಪ್ರವಾದಿಯವರ(ಸ) ಚರ್ಯೆಯಾಗಿತ್ತು. ಆದರೆ ಅದನ್ನು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಹೇಳುವಂತಿಲ್ಲ.

ಅಸರ್‍ನ ಬಳಿಕ ನಿದ್ರಿಸುವುದನ್ನು ವಿರೋಧಿಸುವ ಪ್ರಾಮಾಣಿಕ ಪುರಾವೆಗಳೇನೂ ಇಲ್ಲ. “ಓರ್ವನು ಅಸರ್ ನಮಾಝ್‍ನ ಬಳಿಕ ನಿದ್ದೆ ಮಾಡಿ ಅದರ ಪರಿಣಾಮವಾಗಿ ಅವನ ಬುದ್ಧಿ ಶಕ್ತಿಗೆ ತೊಂದರೆ ಉಂಟಾದರೆ ಅವರು ಅವನನ್ನಲ್ಲದೆ ಬೇರೆ ಯಾರನ್ನೂ ದೂಷಿಸುವಂತಿಲ್ಲ” ಎಂಬ ಹದೀಸ್ ನಕಲಿಯಾಗಿದೆ. ಇದು ಸುಳ್ಳು ಹದೀಸ್ ಗಳ ಸಾಲಿಗೆ ಸೇರಿದೆ. (ಅಲ್ ಮೌಝಾಅತ್: ಇಬ್ನುಲ್ ಜೌಝಿ: 3/69) ಸಿಲ್ ಸಿಲತುಲ್ ಅಹಾದೀಸುಝ್ಝ ಯೀಫ್ ಎಂಬ ಅಲ್‍ಬಾನಿಯವರ ಗ್ರಂಥದಲ್ಲೂ ಇದನ್ನು ದುರ್ಬಲವಾದ ಹದೀಸ್‍ಗಳ ಸಾಲಿಗೆ ಸೇರಿಸಲಾಗಿದೆ. (1/112, ಸಂಖ್ಯೆ, 39)

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *