ಅಧ್ಯಾತ್ಮಿಕ ಉನ್ನತಿ

– ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)

“ಆದರೆ ಅವನು ಅಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವ ಸಾಹಸವನ್ನೇ ಮಾಡಲಿಲ್ಲ. ಆ ಅಧ್ಯಾತ್ಮಿಕ ಉನ್ನತಿ ಏನೆಂದು ನಿಮಗೇನು ಗೊತ್ತು? ಒಂದು ಕೊರಳನ್ನು ಜೀತ ಮುಕ್ತಗೊಳಿಸುವುದು ಅಥವಾ ಹಸಿವಿನ ದಿನ ಹಸಿದ ಆಪ್ತನಿಗೆ, ಅನಾಥಗೆ ಅಥವಾ ದಿಕ್ಕೆಟ್ಟ ದರಿದ್ರನಿಗೆ ಉಣ ಬಡಿಸುವುದು. ತರುವಾಯ ವಿಶ್ವಾಸವಿರಿಸಿದ ಹಾಗೂ ಪರಸ್ಪರರಿಗೆ ಸಹನೆ ಮತ್ತು ಸಮಸ್ತ ಸೃಷ್ಟಿಗಳ ಮೇಲೆ ಕರುಣೆಯನ್ನು ಬೋಧಿಸಿದ ಜನರ ಸಾಲಿಗೆ ಸೇರುವುದು.”

ಇದು ಪವಿತ್ರ ಕುರ್‍ಆನಿನ ‘ಅಲ್ ಬಲದ್’ ಅಧ್ಯಾಯದ 11ರಿಂದ 17ರ ವರೆಗಿನ ವಚನಗಳ ಭಾವಾನುವಾದ. ಇಲ್ಲಿ ಅಧ್ಯಾತ್ಮಿಕ ಉನ್ನತಿಯ ಸಾಧನೆಗೆ ತೋರಿಸಿದ ದಾರಿಯು ಜಪ-ತಪಗಳ ದಾರಿಯಲ್ಲ. ಮಂತ್ರ-ತಂತ್ರಗಳ ದಾರಿಯಲ್ಲ. ಪೂಜೆ-ಪುರಸ್ಕಾರಗಳ ದಾರಿಯಲ್ಲ. ಆತ್ಮ ನಿಗ್ರಹ ಮತ್ತು ಸನ್ಯಾಸದ ದಾರಿಯಲ್ಲ. ಲೋಕ ತ್ಯಾಗ ಮತ್ತು ವೈರಾಗ್ಯದ ದಾರಿಯಲ್ಲ. ಅದು ದೀನ-ದಲಿತರ, ಹೊಟ್ಟೆಗಿಲ್ಲದವರ, ಬಟ್ಟೆಗಿಲ್ಲದವರ, ಜೀತದಾಳುಗಳ, ಸಾಲದ ಶೂಲದಲ್ಲಿ ಸಿಲುಕಿ ನರಳಾಡುತ್ತಿರುವವರ ಸೇವೆಯ ದಾರಿಯಾಗಿದೆ. ಸಹನೆ, ಸಂಯಮ ಮತ್ತು ಸಾರ್ವತ್ರಿಕ ಕರುಣೆಯ ದಾರಿಯಾಗಿದೆ.

ಪುಣ್ಯದ ಕಲ್ಪನೆ ಕೂಡಾ ಧಾರ್ಮಿಕ ಆಚಾರ ಸಂಪ್ರದಾಯಗಳ ಸೀಮಿತ ವಲಯದಿಂದ ಹೊರಗೆ ಬಹಳ ವಿಶಾಲವಾದ ಕ್ಷೇತ್ರವನ್ನು ಹೊಂದಿದೆ.

“ನೀವು ನಿಮ್ಮ ಮುಖಗಳನ್ನು ಪೂರ್ವ ದಿಕ್ಕಿಗೆ ಅಥವಾ ಪಶ್ಚಿಮ ದಿಕ್ಕಿಗೆ ಮಾಡಿ ಕೊಳ್ಳುವುದು ಪುಣ್ಯವಲ್ಲ… ದೇವ ಸಂಪ್ರೀತಿಗಾಗಿ ತನ್ನ ಮನ ಮೆಚ್ಚುವ ಸಂಪತ್ತನ್ನು ಬಂಧುಗಳಿಗೆ, ಅನಾಥರಿಗೆ, ನಿರ್ಗತಿಕರಿಗೆ, ಸಹಾಯಾರ್ಥಿಗಳಿಗೆ ಮತ್ತು ಜೀತ ಮುಕ್ತಿಗಾಗಿ ವ್ಯಯಿಸುವುದು ಪುಣ್ಯವಾಗಿದೆ” ಎಂಬ ಕುರ್‍ಆನಿನ ವಚನವು ಇದನ್ನೇ ಸೂಚಿಸುತ್ತದೆ.

“ಪರೋಪಕಾರಃ ಪುಣ್ಯಾಯ, ಪಾಪಾಯ ಪರ ಪೀಡನಂ” ಪರೋಪಕಾರವೇ ಪುಣ್ಯ. ಪರರಿಗೆ ಹಾನಿ ಮಾಡುವುದೇ ಪಾಪ ಎಂಬ ಮಹಾ ಭಾರತ ಹಾಗೂ “ಪರೋಪಕಾರಾರ್ ಇದಂ ಶರೀರಂ”- ಎಂಬ ವಿಕ್ರಮ ಚರಿತ ಉಕ್ತಿಯೂ ಅದನ್ನೇ ಸೂಚಿಸುತ್ತದೆ. ನಿಜವಾಗಿ ಇತರರಿಗೆ ನೆರವಾದಾಗ ಸಿಗುವ ಆತ್ಮಸಂತೃಪ್ತಿ ಮತ್ತು ಅದರಲ್ಲೇ ತನ್ನನ್ನು ತೊಡಗಿಸಿ ಕೊಂಡಾಗ ಸಾಧಿತವಾಗುವ ಆತ್ಮೋನ್ನತಿಯೇ ಧರ್ಮದ ತಿರುಳಾಗಿದೆ.

“ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವನು, ತನ್ನ ಪ್ರಭುವಿನ ನಾಮ ಸ್ಮರಣೆಯಲ್ಲಿ ನಿರತನಾದವನು ಮತ್ತು ನಮಾಝ್(ಪ್ರಾರ್ಥನೆ) ಮಾಡಿದವನು ಯಶಸ್ವಿಯಾದನು.” (ಪವಿತ್ರ ಕುರ್‍ಆನ್, 87:14-15)

ದೇವ ನಾಮ ಸ್ಮರಣೆ ಮತ್ತು ಪ್ರಾರ್ಥನೆಯ ಜತೆಗೆ ಜನ ಸೇವೆಯು ಸೇರಿಕೊಂಡಾಗ ಮಾತ್ರ ನೈಜ ಅಧ್ಯಾತ್ಮಿಕ ಪ್ರಾಪ್ತವಾಗುತ್ತದೆ.

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *