ಸಮಾಜ ನಿರ್ಮಾಣ: ಕುರ್‍ಆನ್‍ನ ಪ್ರಣಾಳಿಕೆ

ಬಿ.ಎಸ್. ಶರ್ಫುದ್ದೀನ್, ಕುವೈತ್

ರಮಝಾನ್ ತಿಂಗಳು ಕುರ್‍ಆನ್ ಅವತೀರ್ಣವಾದ ತಿಂಗಳಾಗಿದೆ. ಕುರ್‍ಆನ್‍ನ ಧ್ಯೇಯ ಮಾನವ ಸಮಾಜದಲ್ಲಿ ಶಾಂತಿ ಮತ್ತು ನ್ಯಾಯವನ್ನು ನೆಲೆಗೊಳಿಸುವುದಾಗಿದೆ. (ಕುರ್‍ಆನ್ 57:25) ಈ ನಿಟ್ಟಿನಲ್ಲಿ ಕುರ್‍ಆನ್‍ನಲ್ಲಿ ಅನೇಕ ಬೋಧನೆಗಳಿವೆ. ವಿಶೇಷವಾಗಿ ಪ್ರವಾದಿ ಮುಹಮ್ಮದ್‍ರು(ಸ) ಮದೀನದಲ್ಲಿ ಮೊದಲ ಇಸ್ಲಾವಿೂ ಸಮಾಜದ ನಿರ್ಮಾಣ ಮಾಡಲು ಸಿದ್ಧರಾದಾಗ, ಮಕ್ಕಾ ಜೀವನದ ಕೊನೆಯ ಕಾಲದಲ್ಲಿ ಅವರ ಮೇಲೆ ಅವತೀರ್ಣವಾದ ಬನೀ ಇಸ್ರಾಈಲ್ ಎಂಬ ಕುರ್‍ಆನಿನ 17ನೇ ಅಧ್ಯಾಯದಲ್ಲಿ ಮಾದರಿ ಸಮಾಜ ಹೇಗಿರಬೇಕು ಎಂಬುದಕ್ಕೆ `ಪ್ರಣಾಳಿಕೆ’ಯೊಂದನ್ನು ಪ್ರಸ್ತುತ ಪಡಿಸಲಾಗಿದೆ. ಅದರಲ್ಲಿ ಪ್ರಸ್ತಾವಿಸಲಾಗಿರುವ ಅಂಶಗಳು ಇಂದಿಗೂ ಮಾದರಿ ಸಮಾಜವೊಂದಕ್ಕೆ ಅತ್ಯಂತ ಅಪೇಕ್ಷಣೀಯವಾದ ಬೋಧನೆಗಳಾಗಿವೆ.

ಏಕದೇವಾರಾಧನೆ:

ಏಕದೇವಾರಾಧನೆ ಸಮಾಜದ ಮೂಲ ಆದರ್ಶವಾಗಿರಬೇಕು. ಇದು ಸಮಾಜವನ್ನು ಹಲವು ಮೂಢನಂಬಿಕೆ ಮತ್ತು ಸಂಪ್ರದಾಯಗಳಿಂದ ಮುಕ್ತಗೊಳಿಸುತ್ತದೆ. ಈ ಪ್ರಣಾಳಿಕೆಯ ಆರಂಭ ಮತ್ತು ಅಂತ್ಯ (ಬನೀ ಇಸ್ರಾಈಲ್: ಅಧ್ಯಾಯ 17: 23 ಮತ್ತು 39ನೇ ಸೂಕ್ತ) ಏಕ ದೇವತ್ವದ ಬಗ್ಗೆ ಪ್ರಸ್ತಾಪ ಮಾಡುತ್ತದೆ. ಆದರೆ ಅದರ ಮಧ್ಯದ ಸೂಕ್ತಗಳಲ್ಲಿ ಸಾಮಾಜಿಕ ಬದ್ಧತೆಯ ಅತ್ಯಂತ ಪ್ರಧಾನ ಅಂಶಗಳನ್ನು ಪ್ರಸ್ತಾವಿಸಲಾಗಿದೆ. ಇದರಿಂದ ವ್ಯಕ್ತವಾಗುವುದೇನೆಂದರೆ ಇಸ್ಲಾಮ್ ಸಾದರ ಪಡಿಸುವ ಏಕದೇವತ್ವ(ತೌಹೀದ್) ಕೇವಲ ಆರಾಧನೆ, ಸಂಪ್ರದಾಯ, ವೇಶ ಭೂಷಣಗಳಿಗೆ ಸೀಮಿತವಾದ ಒಂದು ತತ್ವವಲ್ಲ. ಬದಲಾಗಿ ಸಮಾಜದ ಎಲ್ಲಾ ಆಗು-ಹೋಗುಗಳಲ್ಲಿ ಈ ವಿಶ್ವಾಸ ಪರಿಣಾಮ ಬೀರಬೇಕು ಹಾಗೂ ವ್ಯಕ್ತವಾಗಬೇಕು ಎಂಬುದು ಇಸ್ಲಾಮಿನ ಇಂಗಿತ.

ಹಿರಿಯ ತಂದೆ-ತಾಯಿ ಹಾಗೂ ಹಿರಿಯ ನಾಗರಿಕರ ರಕ್ಷಣೆ:

ವೃದ್ದಾಪ್ಯಕ್ಕೆ ತಲುಪಿದ ತಂದೆ-ತಾಯಿಗಳ ಸಂರಕ್ಷಣೆ ಮತ್ತು ಪೋಷಣೆ ಮಕ್ಕಳ ಕರ್ತವ್ಯವಾಗಿರಬೇಕು. ಅಂತೆಯೇ ಎಲ್ಲಾ ಹಿರಿಯ ಪ್ರಜೆಗಳು ಅಂತಹ ಸಮಾಜದಲ್ಲಿ ಸುರಕ್ಷಿತವಾಗಿ ಜೀವನ ಕಳೆಯುವಂತಾಗಬೇಕು. ಇಳಿ ವಯಸ್ಸಿನಲ್ಲೂ ದುಡಿತಕ್ಕೆ ಶರಣಾಗಬೇಕಾದಂತಹ, ವೃದ್ಧಾಶ್ರಮವನ್ನೇ ನಂಬಿ ಬದುಕಬೇಕಾದಂತಹ ಪರಿಸ್ಥಿತಿ ಸಮಾಜದಲ್ಲಿರುವ ಯಾವ ಹಿರಿಯರಿಗೂ ಬರಬಾರದು.

ಬಡ ಸಂಬಂಧಿಕರ, ಬಡವರ ಹಾಗೂ ಯಾತ್ರಿಗಳ ಸಂರಕ್ಷಣೆ:
ಸಂಬಂಧಿಕರಲ್ಲಿ ಬಡವರಿದ್ದರೆ ಅವರನ್ನು ಮೇಲೆತ್ತುವ ಪ್ರಯತ್ನ ಕುಟುಂಬದ ಸದಸ್ಯರಿಂದ ನಡೆಯುವಂತಹ ಆರೋಗ್ಯಕರ ಕುಟುಂಬ ಸಂಬಂಧವನ್ನು ಸಮಾಜದಲ್ಲಿ ಬೆಳೆಸಬೇಕು. ಬಡವರ ಬವಣೆಗಳಿಗೆ ಸ್ಪಂದಿಸುವಂತಹ ಸಿರಿವಂತರಿರುವ ಸಮಾಜವನ್ನು ಕಟ್ಟಿ ಬೆಳೆಸಬೇಕು. ಯಾತ್ರಿಗಳು ಮತ್ತು ಪರ ಊರಿನಿಂದ ಬರುವ ಪ್ರವಾಸಿಗರಿಗೆ ಯಾವುದೇ ರೀತಿಯ ಬೆದರಿಕೆ ಇಲ್ಲದಂತಹ ಶಾಂತಿ ಮತ್ತು ಸುರಕ್ಷೆಯ ಬಗ್ಗೆ ಯಾವುದೇ ಭೀತಿ ಇಲ್ಲದಂತಹ ಸುಂದರ ಸಮಾಜ ನಿರ್ಮಾಣವಾಗಬೇಕು. ತನ್ನವರ ಬೇಗೆ ಬವಣೆಗಳಿಗೆ ಮಿಡಿಯುವ ಹೃದಯವಂತರಿರುವ ಹಾಗೂ ಪರರಿಗೆ ಶಾಂತಿಯುತ ಸ್ವಾಗತ ಕೋರುವಂತಹ ಸಮಾಜ ಖಂಡಿತವಾಗಿಯೂ ಅಭಿವೃದ್ಧಿಯತ್ತ ಮುಂದಡಿಯಿಡುತ್ತದೆ.

ದುಂದುವ್ಯಯದಿಂದ ಮುಕ್ತವಾದ ಸಮಾಜ:

ಸಿರಿವಂತರು ಐಶಾರಾಮ ಮತ್ತು ತೋರಿಕೆಗಾಗಿ ಹಣವನ್ನು ಪೋಲು ಮಾಡಲು ಸಮಾಜದಲ್ಲಿ ಅವಕಾಶವಿರಬಾರದು. ಮದುವೆ, ಕೌಟುಂಬಿಕ ಆಚರಣೆಗಳು, ಧಾರ್ಮಿಕ ಸಮಾರಂಭಗಳೆಲ್ಲವೂ ರಚನಾತ್ಮಕ ವ್ಯಯವನ್ನು ಬಿಟ್ಟು, ತೋರಿಕೆಗಾಗಿ ಮತ್ತು ಪ್ರತಿಷ್ಠೆಗಾಗಿ ದುಂದುವ್ಯಯ ಮಾಡುವುದರಲ್ಲಿ ಪ್ರತಿ ಸ್ಪರ್ಧಿಸುವಂತಹ ಸಮಾಜ ಆಗಿರಬಾರದು. ಸಮಾಜದಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡಿಸುವ ಮತ್ತು ವಂಚಿತರಲ್ಲಿ ಅಸಮಾಧಾನದ ದಳ್ಳುರಿಯನ್ನು ಹುಟ್ಟಿಸುವಂತಹ ದುಂದುವ್ಯಯವನ್ನು ಸಮಾಜ ನಿಯಂತ್ರಣದಲ್ಲಿಡಬೇಕು.

ಸಂತುಲಿತ ಖರ್ಚು ಮತ್ತು ಹಣದ ಚಲಾವಣೆ:
ಸಮಾಜ ದುಂದುವ್ಯಯದಿಂದ ಮುಕ್ತವಾಗಿರುವುದರ ಜತೆಗೆ ಜಿಪುಣತೆ ಮತ್ತು ಅನಿಯಂತ್ರಿತ ಖರ್ಚುಗಳೆರಡರಿಂದಲೂ ಮುಕ್ತವಾದ ಸಂತುಲನೆಯೊಂದಿಗೆ ಧಾರಾಳತನದಿಂದ ಖರ್ಚು ಮಾಡುವಂತಹ ಸಮಾಜವಾಗಿರಬೇಕು. ಈ ರೀತಿ ಹಣದ ರಚನಾತ್ಮಕ ಚಲಾವಣೆಯ ಮೂಲಕ ಸಮಾಜದಲ್ಲಿ ಆರ್ಥಿಕ ಚಟುವಟಿಕೆಗಳು ಹಾಗೂ ವ್ಯಾಪಾರ ವೃದ್ಧಿಸಬೇಕು. ಪ್ರಾಯಶಃ ಇದೇ ಕಾರಣಕ್ಕೆ ಜಪಾನ್‍ನಂತಹ ದೇಶದಲ್ಲಿ ಈಗಲೂ ಸ್ಥಿರ ಠೇವಣಿಗಳಿಗೆ ತೆರಿಗೆ ಇದೆ. ಹಣವಂತರು ತಮ್ಮ ಆದಾಯವನ್ನು ಬ್ಯಾಂಕಿನಲ್ಲಿಟ್ಟು ಬಡ್ಡಿ ತಿನ್ನುವಂತಹ ಆರ್ಥಿಕತೆ ನಿಜವಾಗಿ ಹಣದ ಚಲಾವಣೆ, ಉದ್ಯೋಗ ಸೃಷ್ಟಿಯಂತಹ ಅವಕಾಶಗಳನ್ನು ಮೊಟಕುಗೊಳಿಸುತ್ತದೆ. ಕುರ್‍ಆನ್ ಹಣ ಚಲಾವಣೆಯಲ್ಲಿರುವ ಆರ್ಥಿಕ ಚಟುವಟಿಕೆಗಳು ಮತ್ತು ಮಾನವನಿಗೆ ಪ್ರಯೋಜನಕಾರಿಯಾದ ವ್ಯಯಕ್ಕೆ ಅವಕಾಶಗಳಿರುವ ಸಮಾಜವನ್ನು ಕಟ್ಟ ಬಯಸುತ್ತದೆ.

ಆರ್ಥಿಕ ಸಮತಾವಾದದಿಂದ ಮುಕ್ತವಾದ ಸಮಾಜ:

ಯಾರಿಗೂ ಸೊತ್ತಿನ ಒಡೆತನ ಇರಬಾರದು ಅಥವಾ ಎಲ್ಲರೂ ಆರ್ಥಿಕವಾಗಿ ಸಮಾನರಾಗಿರಬೇಕು ಎಂಬ ಅನೈಸರ್ಗಿಕ ಮತ್ತು ಅಪ್ರಾಯೋಗಿಕ ತತ್ವವನ್ನು ಕುರ್‍ಆನ್ ಅಂಗೀಕರಿಸುವುದಿಲ್ಲ. ಕೆಲವರು ಸಿರಿವಂತರಾಗಿರುವುದು ಮತ್ತು ಕೆಲವರು ಬಡವರಾಗಿರುವುದು ಸ್ವಾಭಾವಿಕ ಸಾಮಾಜಿಕ ಪ್ರಕ್ರಿಯೆಯಾಗಿದೆ. ಇಂತಹ ಮುಕ್ತತೆ ಸಮಾಜದಲ್ಲಿದ್ದಾಗ ಕೆಲವರು ಸೃಜನಾತ್ಮಕ ಚಿಂತನೆಗಳ ಮೂಲಕ ಆದಾಯದ ಹೊಸ ಹೊಸ ಮೂಲಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಇಂತಹ ರಚನಾತ್ಮಕ ಸ್ಪರ್ಧೆಯಿಂದ ಸಮಾಜದ ಆರ್ಥಿಕತೆ ವೃದ್ಧಿಯಾಗುತ್ತದೆ. ಅದೇ ವೇಳೆ ಸಿರಿವಂತರು ಮತ್ತು ಬಡವರ ನಡುವೆ ದೊಡ್ಡ ಅಂತರವಿರುವ ಆ ಮೂಲಕ ಬಂಡಾಯದ ಅಲೆಯನ್ನು ಸೃಷ್ಟಿಸುವಂತಹ ಸಮಾಜವನ್ನು ಇಸ್ಲಾಮ್ ಮನ್ನಿಸುವುದಿಲ್ಲ.

ಸಂತಾನ ನಿಯಂತ್ರಣದಿಂದ ಮುಕ್ತವಾದ ಸಮಾಜ:

ಸಮಾಜದ ಸಂಪನ್ಮೂಲಗಳನ್ನು ಉಳಿಸಲು ಸಂತಾನವನ್ನು ನಿಯಂತ್ರಿಸಬೇಕು ಮತ್ತು ಒಂದು ಕುಟುಂಬಕ್ಕೆ ತಡವಾಗಿ ಒಂದು ಅಥವಾ ಎರಡು ಮಗು ಮಾತ್ರ ಆಗಬೇಕು ಎನ್ನುವ ಭೌತಿಕವಾದಿ ಅನೈಸರ್ಗಿಕ ತತ್ವವನ್ನು ಇಸ್ಲಾಮ್ ವಿರೋಧಿಸುತ್ತದೆ. ಸಂಪನ್ಮೂಲ ಮತ್ತು ಜೀವನಾಧಾರಗಳನ್ನು ಒದಗಿಸುವವನು ಅಲ್ಲಾಹನಲ್ಲದೆ ಮತ್ತಾರೂ ಅಲ್ಲ. ಆದ್ದರಿಂದ ಜೀವಾನಾಧಾರಗಳನ್ನು ಹುಡುಕಲು ಮತ್ತು ಸಂಪನ್ಮೂಲಗಳನ್ನು ವೃದ್ಧಿಸಲು ಪ್ರಯತ್ನಿಸಬೇಕೇ ಹೊರತು ಬಡತನದ ಭಯದಿಂದ ಸಂತಾನ ಹರಣ ಮಾಡಲು ಪ್ರಯತ್ನಿಸಬಾರದೆಂದು ಇಸ್ಲಾಮ್ ಹೇಳುತ್ತದೆ. ಇದು ಎಷ್ಟು ಪ್ರಾಯೋಗಿಕವಾದ ಬೋಧನೆಯೆಂದು ಚೀನಾ ದೇಶದ ವಿದ್ಯಮಾನಗಳನ್ನು ನೋಡಿದರೆ ಅರ್ಥವಾಗುತ್ತದೆ. ಇಂದು ಚೀನಾ ದೇಶ ಜಗತ್ತಿನಲ್ಲೇ ಎಲ್ಲಾ ರಂಗದಲ್ಲಿ ಮುಂದುವರಿದಿರುವ ದೇಶಗಳಲ್ಲೊಂದು. ಆದರೆ ಅವರ ಅತಿ ದೊಡ್ಡ ಸಮಸ್ಯೆ ವೃದ್ಧರ ಸಂಖ್ಯೆ ಹೆಚ್ಚಾಗಿ, ಪ್ರಗತಿಯ ಓಟದಲ್ಲಿ ಭಾಗವಹಿಸಲು ಬೇಕಾದ ಎಳೆಯ ಪೀಳಿಗೆಯ ಅತೀವ ಕೊರತೆ ಇರುವುದಾಗಿದೆ. ಅಲ್ಲದೆ ಜನಸಂಖ್ಯೆ ಹೆಚ್ಚಾಗಿರುವ ಭಾರತ ಮತ್ತು ಚೀನಾ ದೇಶಗಳು ಇಂದು ಜಗತ್ತಿನಲ್ಲಿ ಯಾರಿಗೂ ಕಡೆಗಣಿಸಲಾಗದ ಬೃಹತ್ ಮಾರುಕಟ್ಟೆಯಾಗಿ, ಬೃಹತ್ ಶಕ್ತಿಯಾಗಿ ಬೆಳೆದು ನಿಲ್ಲಲು ಒಂದು ಮುಖ್ಯ ಕಾರಣ ಜನ ಸಂಖ್ಯೆಯೂ ಹೌದು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಅನೈಕ್ಯತೆ ಮತ್ತು ವ್ಯಭಿಚಾರಕ್ಕೆ ಆಸ್ಪದವಿಲ್ಲದ ಸಮಾಜ:
ಇಸ್ಲಾಮ್ ವ್ಯಭಿಚಾರದೆಡೆಗೆ ಕೊಂಡೊಯ್ಯುವ ಎಲ್ಲ ಮಾರ್ಗಗಳೂ ಮುಚ್ಚಲ್ಪಟ್ಟ, ಅಶ್ಲೀಲತೆ ಮತ್ತು ಅನೈತಿಕತೆಗೆ ಆಸ್ಪದವಿಲ್ಲದ ಗೌರವಪೂರ್ಣ ಸಮಾಜವನ್ನು ಕಟ್ಟಿ ಬೆಳೆಸ ಬಯಸುತ್ತದೆ. ಇದರಿಂದ ಸಮಾಜದಲ್ಲಿ ರಚನಾತ್ಮಕ ಮತ್ತು ಸೃಜನಾತ್ಮಕ ಚಿಂತನೆಗಳು ಬೆಳೆಯುತ್ತವೆ. ಸ್ವೇಚ್ಛಾ ವೃತ್ತಿ, ಪೈಶಾಚಿಕತೆ ಮತ್ತು ಅಪರಾಧಗಳು ಕಡಿಮೆಯಾಗುತ್ತವೆ. ಸ್ತ್ರೀಯರಿಗೆ ವಿಶೇಷವಾಗಿ ಗೌರವದ ಸ್ಥಾನ ದೊರೆಯುತ್ತದೆ. ನವ ಪೀಳಿಗೆ ಹೆಚ್ಚು ಸಮರ್ಥವಾಗಿ ಬೆಳೆಯುತ್ತದೆ. ಪ್ರವಾಸೋದ್ಯಮದ ಹೆಸರಲ್ಲಿ ಲೈಂಗಿಕ ವೃತ್ತಿಯನ್ನು ಮುಕ್ತವಾಗಿ ಬೆಳೆಸುತ್ತಿರುವ ಥಾೈಲೆಂಡ್‍ನಂತಹ ರಾಷ್ಟ್ರಗಳಲ್ಲಿ ಹಲವು ಸಾಮಾಜಿಕ ಸಮಸ್ಯೆಗಳು ಆ ದೇಶದ ಯುವ ಪೀಳಿಗೆಯನ್ನೇ ದಿಕ್ಕು ತಪ್ಪಿಸಿರುವಂತಹ ವಿದ್ಯಮಾನಗಳು ನಮ್ಮ ಮುಂದಿವೆ.

ಕೊಲೆ ಮತ್ತು ಅಪರಾಧಗಳಿಂದ ಮುಕ್ತವಾದ ಸಮಾಜ:

ಇಸ್ಲಾಮ್ ಒಬ್ಬ ಮಾನವನನ್ನು ಕೊಲ್ಲುವುದು ಇಡೀ ಮಾನವ ಕುಲವನ್ನು ಕೊಲ್ಲುವುದಕ್ಕೆ ಸಮಾನವೆಂದು ಹೇಳುತ್ತದೆ. ಅಂತೆಯೇ ಓರ್ವ ಮಾನವನನ್ನು ರಕ್ಷಿಸುವುದು ಇಡೀ ಮಾನವ ಕುಲವನ್ನು ರಕ್ಷಿಸುವುದಕ್ಕೆ ಸಮಾನವಾಗಿದೆ ಎಂದು ಸಾರುತ್ತದೆ. ಆದ್ದರಿಂದ ಕೊಲೆ ಹಾಗೂ ಅಪರಾಧಗಳಿಂದ ಮುಕ್ತವಾದ ಶಾಂತಿ ಹಾಗೂ ಭದ್ರತೆ ಎಲ್ಲೆಡೆಯೂ ನೆಲೆಸಿರುವ ಸಮಾಜವನ್ನು ಇಸ್ಲಾಮ್ ಕಟ್ಟಿ ಬೆಳೆಸ ಬಯಸುತ್ತದೆ. ನ್ಯಾಯಾಲಯದ ಮೂಲಕ ನ್ಯಾಯೋಚಿತ ಕಾರಣಗಳಿಗಾಗಿ ವಿಧಿಸಲ್ಪಡುವ ಮರಣದಂಡನೆಯನ್ನು ಹೊರತು ಪಡಿಸಿ, ನಾಗರಿಕ ಸಮಾಜದಲ್ಲಿ ಯಾರೂ ಯಾವ ಕಾರಣಕ್ಕೂ ಕೊಲ್ಲಲ್ಪಡಬಾರದು. ಅಂತಹ ಭಯ ಮುಕ್ತ ಶಾಂತಿಯುತ ಸಮಾಜವನ್ನು ಇಸ್ಲಾಮ್ ಬಯಸುತ್ತದೆ.

ಅನಾಥರ ಸಂರಕ್ಷಣೆ:
ಅನಾಥರ ಸಂರಕ್ಷಣೆಯ ಕುರಿತು ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿ ಹಲವಾರು ಬೋಧನೆಗಳಿರುವುದನ್ನು ನಾವು ಕಾಣುತ್ತೇವೆ. ಇದು ಇಸ್ಲಾಮಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವಂತಹ ಒಂದು ವಿಚಾರ. ಆದ್ದರಿಂದ ಅನಾಥರ ಸೊತ್ತುಗಳ ಸಂರಕ್ಷಣೆ, ಅನಾಥರ ಪರಿಪಾಲನೆ ಮತ್ತು ಅವರ ಭಾವನಾತ್ಮಕ ಹಾಗೂ ಮಾನಸಿಕ ಅಗತ್ಯಗಳು ಅತ್ಯಂತ ಸುಂದರವಾಗಿ ಈಡೇರಿಸಲ್ಪಡುವ ಸಮಾಜವನ್ನು ಇಸ್ಲಾಮ್ ಬಯಸುತ್ತದೆ.

ಭ್ರಷ್ಟಾಚಾರ ಮುಕ್ತ ಮತ್ತು ವಚನ ಬದ್ಧತೆ ಇರುವ ಸಮಾಜ:
ಇಸ್ಲಾಮ್ ವಚನ ಬದ್ಧತೆಗೆ ಬಹಳ ಪ್ರಾಮುಖ್ಯತೆ ಕಲ್ಪಿಸುತ್ತದೆ. ಕೊಟ್ಟ ಮಾತಿಗೆ ಬದ್ಧವಾಗಿ ನಡೆಯುವುದು, ಮಾಡಿದ ಕರಾರನ್ನು ಯಾವ ಬೆಲೆ ತೆತ್ತಾದರೂ ಪಾಲಿಸುವುದು ಸಮಾಜದ ಪ್ರಬಲ ಶಿಷ್ಟಾಚಾರವಾಗಿರಬೇಕು. ಅದೇ ರೀತಿ ಸಮಾಜ ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತವಾಗಿರಬೇಕು. ಅಳತೆ ತೂಕದಲ್ಲಿ ಮೋಸ ಮಾಡುವುದು, ಕಲಬೆರಕೆ ಇತ್ಯಾದಿಗಳಿಂದ ಸಮಾಜ ಸಂಪೂರ್ಣ ಮುಕ್ತವಾಗಿರಬೇಕು.

ಮೂಢನಂಬಿಕೆಗಳಿಂದ ಮತ್ತು ಕಂದಾಚಾರಗಳಿಂದ ಮುಕ್ತವಾದ ಸಮಾಜ:

ಇಸ್ಲಾಮ್ ಪ್ರಗತಿಪರವಾದ, ಬುದ್ಧಿಮತ್ತೆಗೆ ಬಗ್ಗುವುದನ್ನು ಮತ್ತು ದೇವಾದೇಶಕ್ಕೆ ಬದ್ಧವಾದುದನ್ನು ಮಾತ್ರ ಸ್ವೀಕರಿಸುವ ಸಮಾಜವನ್ನು ನಿರ್ಮಿಸ ಬಯಸುತ್ತದೆ. ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ, ಅನಿಷ್ಟ ಸಂಪ್ರದಾಯ ಹಾಗೂ ಅಂಧಾನುಕರಣೆಗಳನ್ನು ಇಸ್ಲಾಮ್ ಅಳಿಸಿ ಹಾಕಬಯಸುತ್ತದೆ. ನಿಮಗೆ ನೀಡಲಾಗಿರುವ ಕಣ್ಣು, ಕಿವಿ ಹಾಗೂ ವಿವೇಚನಾ ಸಾಮರ್ಥ್ಯದ ಕುರಿತು ನಿಮ್ಮನ್ನು ವಿಚಾರಿಸಲಾಗುವುದು ಎಂದು ಕುರ್‍ಆನ್ ಹೇಳುತ್ತದೆ. (ಕುರ್‍ಆನ್ 17:36)

ದುರಹಂಕಾರದಿಂದ ಮುಕ್ತವಾದ ಸಮಾಜ:
ಇಸ್ಲಾಮ್ ಮನುಷ್ಯ ಸಮಾಜದಲ್ಲಿ ವಿನಮ್ರತೆ, ಕೃತಜ್ಞತಾ ಮನೋಭಾವ ಹಾಗೂ ಸರಳತೆಯನ್ನು ಬೆಳೆಸ ಬಯಸುತ್ತದೆ. ಹಣ, ಅಧಿಕಾರ, ವಂಶ ಮೇಲ್ಮೆ ಅಥವಾ ಜ್ಞಾನದ ಆಧಾರದಲ್ಲಿ ವ್ಯಕ್ತಿಗಳಲ್ಲಿ ಬೆಳೆಯಬಹುದಾದ ದರ್ಪ ಮತ್ತು ದುರಹಂಕಾರವನ್ನು ಇಸ್ಲಾಮ್ ಕೊನೆಗೊಳಿಸ ಬಯಸುತ್ತದೆ. “ಭೂಮಿಯಲ್ಲಿ ದರ್ಪದಿಂದ ನಡೆಯದಿರಿ. ನೀವು ಭೂಮಿಯನ್ನು ಸೀಳಲಾರಿರಿ ಹಾಗೂ ಪರ್ವತದ ಎತ್ತರಕ್ಕೆ ಏರಲಾರಿರಿ” (17: 37) ಎಂದು ಸಾರುವ ಮೂಲಕ ಕುರ್‍ಆನ್ ಮಾನವನಿಗೆ ಅವರ ಸ್ಥಾನವೇನು ಎಂದು ನೆನಪಿಸಿ ಕೊಡುತ್ತದೆ.

ಮೇಲೆ ಪ್ರಸ್ತಾವಿಸಲಾದ ಸಮಾಜ ನಿರ್ಮಾಣದ ಪ್ರಣಾಳಿಕೆ ಕೇವಲ ಬೋಧನೆಯಲ್ಲ ಬದಲಾಗಿ ಪ್ರವಾದಿ ಮುಹಮ್ಮದ್(ಸ) ಮತ್ತು ತದನಂತರ ಬಂದ ಬೇರೆ ಬೇರೆ ಖಲೀಫರ ಮೂಲಕ ಸ್ಥಾಪಿಸಲ್ಪಟ್ಟ ಪ್ರಾಯೋಗಿಕ ಮಾದರಿಯಾಗಿದೆ. ನಮ್ಮ ಭಾರತ ದೇಶದ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಪ್ರಣಾಳಿಕೆ ಒಂದು ವೇಳೆ ನಮ್ಮಲ್ಲಿ ಮಾನವ ಜಾಗೃತಿ ಹಾಗೂ ಸಾಮಾಜಿಕ ಕಾನೂನುಗಳ ಮೂಲಕ ಜಾರಿಯಾದರೆ ದೇಶದ ಅನೇಕ ಜ್ವಲಂತ ಸಮಸ್ಯೆಗಳು ನಿವಾರಣೆಯಾಗಿ ದೇಶ ಪ್ರಗತಿಯತ್ತ ದಾಪುಗಾಲು ಹಾಕಲು ಸಾಧ್ಯವಾಗಬಹುದು.

(ಲೇಖಕರು ಕುವೈತ್‍ನ ಇಗ್ನೋ ವಿದ್ಯಾ ಕೇಂದ್ರದಲ್ಲಿ ಉಪನ್ಯಾಸಕರು ಮತ್ತು ಪ್ರಾಜೆಕ್ಟ್ ಗೈಡ್ ಆಗಿದ್ದಾರೆ.)

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *