ಕರ್ನಾಟಕದ ಸರ್ ಸೈಯ್ಯದ್ ಅಹ್ಮದ್ ಖಾನ್ : ಬಿ.ಎ.ಮೊಹಿದ್ದೀನ್

ಲೇಖಕರು: ಇಸ್ಮತ್ ಪಜೀರ್

ಮಂಗಳವಾರ ಮುಂಜಾನೆ ನನಗೆಚ್ಚರವಾಗಿದ್ದೇ ಬಿ.ಎ.ಮೊಯಿದಿನಾಕ ಇನ್ನಿಲ್ಲ ಎಂಬ ನೋವಿನ ವರ್ತಮಾನದೊಂದಿಗೆ. ಇನ್ನೂ ಹಾಸಿಗೆ ಬಿಟ್ಟೇಳುವ ಮುನ್ನವೇ ಸ್ನೇಹಿತ ಹಂಝ ಮಲಾರ್ ಅವರ ದೂರವಾಣಿ ಕರೆಯೇ ನನ್ನನ್ನು ಹಾಸಿಗೆಯಿಂದ ಎಬ್ಬಿಸಿದ್ದು.

ಹಾಗೆ ನೋಡಹೋದರೆ ಇದೇನು ತೀರಾ ಅನಿರೀಕ್ಷಿತ ಸುದ್ಧಿಯೆನ್ನಲಾಗದು. ಮೊಯಿದಿನಾಕರ ಆರೋಗ್ಯವು ಇತ್ತೀಚೆಗೆ ಹದಗೆಡುತ್ತಲೇ ಇತ್ತು. ವಯಸ್ಸು ಎಂಬತ್ತೊಂದು ದಾಟಿತ್ತು. ಅದಾಗ್ಯೂ ಅವರು ಇನ್ನೂ ಕೆಲ ಕಾಲ ನಮ್ಮೊಂದಿಗಿರಬೇಕಿತ್ತು ಎಂದು ಮನಸ್ಸು ಹೇಳುತ್ತಿತ್ತು. ಕನಿಷ್ಠ ಪಕ್ಷ ಅವರ ಆತ್ಮ ಕಥನ ” ನನ್ನೊಳಗಿನ ನಾನು” ಅವರೇ ಬಿಡುಗಡೆಗೊಳಿಸಬೇಕಿತ್ತು.

ಬಿಡುಗಡೆಗೆ ಮುನ್ನವೇ ಸಂಚಲನ ಮೂಡಿಸಿರುವ ಅವರ ಆತ್ಮ ಕಥನ ಬಿಡುಗಡೆಯಾದಾಗ ಜಿಲ್ಲೆಯ ರಾಜಕೀಯ ಸಾಮಾಜಿಕ ವಲಯದಲ್ಲೊಂದು ತಲ್ಲಣ ಖಂಡಿತಾ ಉಂಟು ಮಾಡುತ್ತಿತ್ತು. ಖಂಡಿತವಾಗಿಯೂ ಅದೊಂದು ಪ್ರಾಮಾಣಿಕ ಆತ್ಮ ಕಥನ ಎಂಬ ಬಗ್ಗೆ ನನಗೆ ಸಂಶಯವಿಲ್ಲ. ಅದನ್ನು ಓದದೆಯೇ ಇಷ್ಟೊಂದು ದೈರ್ಯವಾಗಿ ಅದರ ಬಗ್ಗೆ ಮೆಚ್ಚುಗೆ ಪ್ರಕಟಪಡಿಸಲು ಕಾರಣ ಆ ಆತ್ಮ ಕಥನವನ್ನು ನಾನೇ ನಿರೂಪಿಸಬೇಕಿತ್ತು. ಆ ನಿಟ್ಟಿನಲ್ಲಿ ಸುಮಾರು ಏಳು ಗಂಟೆಗಳ ಕಾಲ ಮೂರು ಸಿಟ್ಟಿಂಗಿನಲ್ಲಿ ಮೊಯಿದಿನಾಕರ ಸಂದರ್ಶನವನ್ನೂ ನಡೆಸಿದ್ದೆ. ಆದರೆ ನನ್ನ ಕೆಲಸದ ಒತ್ತಡ ಮತ್ತು ಕಾರಣಾಂತರಗಳಿಂದ ನಾನದನ್ನು ವಿಳಂಬಿಸಿದೆ. ಈ ವಿಚಾರದಲ್ಲಿ ಮೊಯಿದಿನಾಕರಿಗೆ ನನ್ನ ಮೇಲೆ ತುಸು ಬೇಸರವೂ ಇತ್ತು. ಇನ್ನೇನು ಮತ್ತೆ ಆ ಕೆಲಸ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ ಹಿರಿಯ ಸಾಹಿತಿಗಳಾದ ಬಿ.ಎ.ಮುಹಮ್ಮದ್ ಅಲಿ ಮತ್ತು ಮುಹಮ್ಮದ್ ಕುಳಾಯಿಯವರು ಆಗಲೇ ಬರವಣಿಗೆಯ ಕೆಲಸ ಪ್ರಾರಂಭಿಸಿಯಾಗಿತ್ತು.

ಮೊಯ್ದಿನಾಕ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಚಾಪು ಮೂಡಿಸಿದವರು ಮಾತ್ರವಲ್ಲ. ಬ್ಯಾರಿ ಮುಸ್ಲಿಂ ಸಮುದಾಯಕ್ಕೆ ರಾಜ್ಯ ರಾಜಕಾರಣದಲ್ಲಿ ಒಂದು ವಿಶೇಷವಾದಂತಹ ಸ್ಪೇಸ್ ಒದಗಿಸಿ ಕೊಟ್ಟವರು.ಮೊಯ್ದಿನಾಕರು ಬ್ಯಾರಿ ಮುಸ್ಲಿಂ ಸಮುದಾಯದ ಪ್ರಪ್ರಥಮ ಸಚಿವರೂ ಹೌದು.ಅವರು ರಾಜ್ಯ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು. ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಸದನದಲ್ಲಿ ಮಂಡಿಸಿದ್ದ ವಿಚಾರಗಳು ಅವರ ಪಾಂಡಿತ್ಯದ ಆಳವನ್ನು‌‌‌ ಸೂಚಿಸುತ್ತಿದ್ದವು.

ಅವರು ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದಲೇ ದುಡಿದು ಹಂತ ಹಂತವಾಗಿ ಮೇಲೇರಿ ಬಂಟ್ವಾಳದ ಶಾಸಕರಾದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ಅತ್ಯಂತ ಆಪ್ತ ಬಳಗದವರಾಗಿದ್ದ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅವರ ಅರ್ಹತೆಗೆ ತಕ್ಕಂತೆ ಸ್ಥಾನಮಾನ ಸಿಗಲಿಲ್ಲ. ಅವರ ಅರ್ಹತೆಯನ್ನು ಗುರುತಿಸಿ ಅವರನ್ನು ಮಂತ್ರಿಯಾಗಿಸಿದ್ದು ಮಾತ್ರ ಜನತಾದಳ ಪಕ್ಷ.

ಅದೂ ಅವರನ್ನು ಎರಡೆರಡು ಬಾರಿ ಎಂ.ಎಲ್ಸಿ ಮಾಡಿ ಸಚಿವ ಸ್ಥಾನವನ್ನು ಅಂದಿನ ದೇವೇಗೌಡರ ನೇತ್ರತ್ವದ ಜನತಾದಳ ಸರಕಾರ ನೀಡಿತ್ತು. ಜೆ.ಎಚ್.ಪಟೇಲರು ತನ್ನ ಸಚಿವ ಸಂಪುಟದಲ್ಲಿ ಅವರನ್ನು ಮುಂದುವರಿಸಿದರು. ಅವರ ಬಗ್ಗೆ ರಾಜ್ಯದ ಮತ್ತು ಕೇಂದ್ರದ ಎಲ್ಲಾ ರಾಜಕಾರಣಿಗಳಿಗೆ ವಿಶೇಷ ವಾದ ಗೌರವವಿತ್ತು. ಮೌಲ್ಯಾಧಾರಿತ ರಾಜಕಾರಣದ ಪ್ರಬಲ ಪ್ರತಿಪಾದಕರಾಗಿದ್ದ ಅವರು ಇಂದಿನ ಕಾಲಮಾನದಲ್ಲಿ ಗಾಂಧಿಯ ಪಳೆಯುಳಿಕೆಯಂತೆ ಕಾಣುತ್ತಾರೆ.

ಕೈ ಬಾಯಿ ಶುದ್ಧ ಇಟ್ಟುಕೊಂಡು ರಾಜಕೀಯ ಮಾಡಿದ ಮೊಯ್ದಿನಾಕ ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಆ ಸ್ಥಾನಕ್ಕೆ ಸಮರ್ಪಕವಾಗಿ ನ್ಯಾಯ ಕಲ್ಪಿಸಿದ್ದರು.ಇಂದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮರ ಒಡೆತನದ ಶಿಕ್ಷಣ ಸಂಸ್ಥೆಗಳು ತುಂಬಿದ್ದರೆ ನಿಸ್ಸಂಶಯವಾಗಿಯೂ ಅದರ ಕೀರ್ತಿ ಮೊಯ್ದಿನಾಕರಿಗೆ ಸಲ್ಲಬೇಕು. ಒಂದು ಕಾಲದಲ್ಲಿ ಶಾಲೆಯ ಮೆಟ್ಟಿಲೇ ತುಳಿಯದಿದ್ದ ಬ್ಯಾರಿ ಸಮುದಾಯದ ಮಂದಿ ಇಂದು ಹತ್ತಾರು ಸಂಸ್ಥೆಗಳ ಮಾಲಕರಾಗಿದ್ದಾರೆ.

ಮೊಯ್ದಿನಾಕರೊಂದಿಗೆ ಮಾತನಾಡುತ್ತಾ ಅವರಿಗೆ ಒಂದು ಪ್ರಶ್ನೆ ಎಸೆದೆ.. “ಸರ್ ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲ ಬ್ಯಾರಿಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ತುಂಬಾ ಸಹಕರಿಸಿದ್ದೀರೇನೋ ಸರಿ. ಇದರಿಂದ ಒಂದು ಧನಾತ್ಮಕ ಬದಲಾವಣೆಯೂ ಆಯಿತು. ಆದರೆ ಇದೀಗ ಕ್ಯಾಪಿಟೇಶನ್ ಕುಳಗಳಾಗಿ ಬೆಳೆದಿರುವ ಅವರಿಗೆ ಆ ನಿಟ್ಟಿನಲ್ಲಿ ತಾವು ಶಿಕ್ಷಣ ವ್ಯಾಪಾರ ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿರಿ ಎಂದೆಣಿಸುವುದಿಲ್ಲವೇ….‌? ನೀವು ಯಾವ ಕಾರಣಕ್ಕೆ ಶಿಕ್ಷಣ ಸಂಸ್ಥೆ ಪ್ರಾರಂಭಿಸಲು ಮುಸ್ಲಿಂ ಉಧ್ಯಮಿಗಳಿಗೆ ಅವಕಾಶ ಕಲ್ಪಿಸಿದಿರೋ ಆ ಉದ್ದೇಶ ಎಷ್ಟರ ಮಟ್ಟಿಗೆ ಉದ್ದೇಶಿತ ಗುರಿ ತಲುಪಿದೆ…? ಎಷ್ಟು ಮಂದಿ ಬ್ಯಾರಿ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಣೋಧ್ಯಮಿಗಳು ಉಚಿತ ಸೀಟು ಕೊಟ್ಟಿದ್ದಾರೆ ..? “ಶಿಕ್ಷಣ ಎಂಬುವುದು ಪ್ರಸ್ತುತ ಒಂದು ದೊಡ್ಡ ವ್ಯಾಪಾರವಾಗಿಯಷ್ಟೆ ಉಳಿದಿದೆ. ಆದರೂ ಒಂದಿನಿತಾದರೂ ಆರ್ಥಿಕವಾಗಿ ಹಿಂದುಳಿದವರಿಗೆ ಅವಕಾಶ ವಂಚಿತರಿಗೆ ಅವಕಾಶ ಸಿಕ್ಕಿದೆಯಲ್ವಾ…ಎಂದು ನಿಟ್ಟುಸಿರು ಬಿಟ್ಟರು.. ಸ್ವಲ್ಪ ಹೊತ್ತು ಸುಮ್ಮನಾಗಿ ” ನೀನೆಲ್ಲಿ ನಿನ್ನ ಕಮ್ಯೂನಿಸಂ ಬಿಡುತ್ತೀಯಾ…. ಎಂದು ಗಹ ಗಹಿಸಿ ನಕ್ಕಿದ್ದರು.

1998ರ‌ ಕುಖ್ಯಾತ ಕೋಮು ಗಲಭೆಯ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಮೊಯ್ದಿನಾಕ. ಅಂದು ಆ ಗಲಭೆಯಲ್ಲಿ ಅನೇಕ ಅಮಾಯಕ ಜೀವಗಳು ಬಲಿಯಾಗಿತ್ತು. ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ತರಲಾಗದಿದ್ದಕ್ಕೆ ಪ್ರಸಿದ್ಧ ಪತ್ರಕರ್ತ ಪಿ.ಲಂಕೇಶ್ ಮೊಯ್ದಿನಾಕರನ್ನು ಸರಿಯಾಗಿಯೇ ತನ್ನ ಪತ್ರಿಕೆಯಲ್ಲಿ ಜಾಡಿಸಿ ಬರೆದಿದ್ದರು. ಈ ಕುರಿತು ಮಾತನಾಡಿದಾಗ ಮೊಯ್ದಿನಾಕ ತುಸು ಹೊತ್ತು ಮೌನಕ್ಕೆ ಶರಣಾದರು. ನನ್ನ ರಾಜಕೀಯ ಬದುಕಿನಲ್ಲಿ ನನಗೆ ಅತೀವ ನೋವು ನೀಡಿದ ಘಟನೆಗಳವು ಎಂದರು.

ಕೋಮು ಸೌಹಾರ್ದತೆಯ ಪ್ರಬಲ ಪ್ರತಿಪಾದಕರಾಗಿದ್ದ ಮೊಯ್ದಿನಾಕ ಆ ಮಾತುಗಳನ್ನು‌ ನುಡಿಯುವಾಗ ಗದ್ಗದಿತರಾದರು, ಅವರ ಕಣ್ಣಂಚಿನಲ್ಲಿ ನೀರಾಡಿದ್ದನ್ನು ನಾನು ಗಮನಿಸಿದ್ದೆ. ಇಂದಿನ ರಾಜಕಾರಣಿಗಳ ಸಂವೇದನಾ ರಾಹಿತ್ಯದ ಬಗ್ಗೆ ಯೋಚಿಸುವಾಗೆಲ್ಲಾ ನಾನು ಯಾಕಾದರೋ ಅಂತಹ ಪ್ರಶ್ನೆ ಕೇಳಿ ಅವರನ್ನು ನೋಯಿಸಿದೆನೋ ಎಂದು ನನಗೆ ಈಗಲೂ ಅನಿಸುತ್ತಿದೆ.

ಬ್ಯಾರಿ ಮುಸ್ಲಿಮರ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು ಅನೇಕೆಡೆ ಸಮುದಾಯದ ಸೋಮಾರಿತನವನ್ನು ಜಾಡಿಸುವಂತೆ ಭಾಷಣ ಮಾಡುತ್ತಿದ್ದರು. ಈ ಇಳಿ ವಯಸ್ಸಿನಲ್ಲೂ ಮಂಡಿಸಬೇಕಾದ ವಿಚಾರಗಳನ್ನು ಸಮರ್ಥವಾಗಿಯೇ ಮಂಡಿಸುತ್ತಿದ್ದರು. ಅವರ ಮಾತುಗಾರಿಕೆಯಲ್ಲಿ ಒಂದು ಚುಂಬಕ ಶಕ್ತಿಯಿತ್ತು. ಇತ್ತೀಚೆಗೆ ವಯೋ ಸಹಜವಾಗಿ ಅವರ ಮಾತು ಗೊರಗೊರ ಸದ್ದು ಮಾಡುತ್ತಿತ್ತು.

1997 ರಲ್ಲಿ ಬೆಂಗಳೂರಿನಲ್ಲಿ ನಡೆದ ಬ್ಯಾರಿ ಸಮ್ಮೇಳನದ ಸಾರಥ್ಯ ವಹಿಸಿದ್ದ ಅವರು ಭಾಷೆ , ಕಲೆ ಮತ್ತು ಸಂಸ್ಕೃತಿಯ ಕುರಿತಂತೆ ಅಪಾರವಾದ ಜ್ಞಾನವಿತ್ತು. ಅವರು ಕಣ್ಣು ತೀರಾ ಮಂಜಾಗುವವರೆಗೂ ಅವರೋರ್ವ ಉತ್ತಮ ಓದುಗರಾಗಿದ್ದರು. ಇತ್ತೀಚಿನ ಒಂದೆರಡು ವರ್ಷಗಳಿಂದೀಚೆಗೆ ಅವರು ಓದು ನಿಲ್ಲಿಸಿದ್ದರು ಅವರಿಗೆ ಓದಿನ ತೀರದ ದಾಹವಿದ್ದರೂ ಅವರ ದೃಷ್ಟಿ ಅದಕ್ಕೆ ಬೆಂಬಲ ನೀಡುತ್ತಿರಲಿಲ್ಲ. ಬ್ಯಾರಿ ಅಂದೋಲನಕ್ಕೆ ಅವರ ಕೊಡುಗೆ ಅಪಾರ. ಬ್ಯಾರಿಗಳು ಬ್ಯಾರಿ ಪದಕ್ಕೆ ನಾಚಿಕೊಳ್ಳುತ್ತಿದ್ದ ಕಾಲದಲ್ಲಿ ಬ್ಯಾರಿ ಎಂದರೆ ಘನತೆಯ ಪದ ಎನ್ನುತ್ತಿದ್ದರು. ಇಂದು ಬ್ಯಾರಿ ಅಕಾಡೆಮಿ ಸ್ಥಾಪನೆಯಾಗಿದ್ದರೆ ಆ ಕುರಿತ ಆಂದೋಲನಕ್ಕೆ ಗಟ್ಟಿ ಅಡಿಪಾಯ ಹಾಕಿದವರು ಮೊಯ್ದಿನಾಕ…

ಅವರು ಅಪೂರ್ವ ಶಿಕ್ಷಣ ಪ್ರೇಮಿಯಾಗಿದ್ದರಿಂದ ಬಡ ಬ್ಯಾರಿ ಮಕ್ಕಳು ಆರ್ಥಿಕ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಬಾರದೆಂದು ಬ್ಯಾರಿ ಸಂಘ ಸಂಸ್ಥೆಗಳು ವಿದ್ಯಾರ್ಥಿ ವೇತನ ನೀಡುವಂತಹ ಕೆಲಸಕ್ಕೆ ಕೈ ಹಾಕಿದ್ದರ ಹಿಂದೆ ಮೊಯ್ದಿನಾಕರ ಶ್ರಮವಿದೆ. ಬ್ಯಾರಿ ಸಂಘ ಸಂಸ್ಥೆಗಳ ಸ್ಕಾಲರ್ಶಿಪ್ ಪಡೆದು ಅದೆಷ್ಟೋ ಬಡ ಬ್ಯಾರಿ ಮಕ್ಕಳು ಉನ್ನತ ಶಿಕ್ಷಣ ಪಡೆದು ಇಂದು ಉನ್ನತ ಹುದ್ದೆಗಳಲ್ಲಿದ್ದರೆ ಅದರ ಹಿಂದೆ ಮೊಯ್ದಿನಾಕರ ಶ್ರಮವಿದೆ.

ಇಸ್ಲಾಂ ಕಟುವಾಗಿ ವಿರೋಧಿಸಿರುವ ಮೌಡ್ಯವನ್ನು ಇನ್ನೂ ಕೆಲವು ಮುಸ್ಲಿಮರು ಪಾಲಿಸುತ್ತಿರುವುದರ ಬಗ್ಗೆ ಮೊಯ್ದಿನಾಕ ತುಂಬಾ ನೋವಿನಿಂದ ಮಾತನಾಡುತ್ತಿದ್ದರು. ಸುಧಾರಣಾವಾದಿಯಾಗಿದ್ದ ಅವರು ಆಧುನಿಕ ಶಿಕ್ಷಣದಿಂದಲೇ ನಮ್ಮ ಸಮುದಾಯದೊಳಗೆ ಹಾಸು ಹೊಕ್ಕಾಗಿರುವ ನಮ್ಮದಲ್ಲದ ಮೌಡ್ಯಗಳಿಂದ ಹೊರ ಬರಲು‌ ಸಾಧ್ಯ ಎಂದವರು‌ ಪ್ರತಿಪಾದಿಸುತ್ತಿದ್ದರು…

ಅವರ ವ್ಯಕ್ತಿತ್ವ ಮತ್ತು ಕನಸುಗಳು ಅವರನ್ನು “ಕರ್ನಾಟಕದ ಸರ್ ಸೈಯ್ಯದ್ ಅಹ್ಮದ್ ಖಾನ್” ಎನ್ನಲು ಪೂರಕವಾಗಿದ್ದವು. ಮೊಯ್ದಿನಾಕರಿಗೆ ನಮ್ಮದೊಂದು ಪ್ರೀತಿಯ ಅಭಿಮಾನದ ಸಲಾಮ್..

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *