ಆಶ್ರಯ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಒಮ್ಮೆ ಗುರುನಾನಕ್ ತಮ್ಮ ಶಿಷ್ಯ ಮರ್ದಾನ್‍ನ ಜೊತೆ ಒಂದು ನಿರ್ಜನ ಪ್ರದೇಶದ ಕಡೆ ಹೊರಟರು. ಸ್ವಲ್ಪ ಮುಂದೆ ಸಾಗಿದಾಗ ಭಯಂಕರ ಬಿರುಗಾಳಿಯೊಂದು ಬೀಸತೊಡಗಿತು. ದೊಡ್ಡ ದೊಡ್ಡ ಮರಗಳು ಉರುಳಿ ಬೀಳಲಾರಂಭಿಸಿದುವು. ಎಲ್ಲೆಡೆ ಕತ್ತಲೆ ಆವರಿಸಿತು. ಮರ್ದಾನ್ ಭಯ ಭೀತನಾದ. ‘ಗುರುಗಳೇ, ನಿಮ್ಮ ನಡವಳಿಕೆ ಅತ್ಯಂತ ವಿಚಿತ್ರವಾಗಿದೆ. ಗಾಳಿ ಮಳೆಗೆ ಸಿಲುಕಿ ನಾವು ಸತ್ತು ಹೋದರೆ ನಮ್ಮ ಹೆಣ ಎತ್ತಲಿಕ್ಕೂ ಯಾರೂ ಸಿಗದಂತಹ ಸ್ಥಳಕ್ಕೆ ನೀವು ನನ್ನನ್ನು ಕರೆ ತಂದಿರುವಿರಿ. ಕಾಡು ಪ್ರಾಣಿಗಳು ನಮ್ಮನ್ನು ತಿಂದು ಬಿಡಲೂ ಬಹುದು” ಎಂದನು.

ಶಿಷ್ಯನ ಈ ಮಾತು ಕೇಳಿ ಗುರುನಾನಕರಿಗೆ ನಗು ಬಂತು. ಅವರು ಹೀಗೆ0ದರು- “ಮರ್ದಾನ್! ಎಲ್ಲರ ಜೀವನ, ಮರಣ ಭೂಮಿ-ಆಕಾಶಗಳ ಒಡೆಯನಾದ ದೇವನ ಕೈಯಲ್ಲಿದೆ. ಆದ್ದರಿಂದ ಯಾವುದೇ ಭಯ ಮತ್ತು ದುಃಖ ಇಲ್ಲದಿರಬೇಕಾದರೆ ಅನಶ್ವರನಾದ ಆ ದೇವನ ಜೊತೆ ಸಂಬಂಧವಿರಬೇಕು.”

ನಾವೆಲ್ಲರೂ ದೇವನ ಸೃಷ್ಟಿಗಳು. ಈ ಜೀವನದಲ್ಲಿ ನಮ್ಮ ಪಾತ್ರವನ್ನು ಅವನೇ ನಿರ್ಧರಿಸುತ್ತಾನೆ. ನಮ್ಮ ಜನನ, ಮರಣ, ಆಯುಷ್ಯ, ಆರೋಗ್ಯ ಎಲ್ಲವನ್ನೂ ಅವನೇ ನಿರ್ಣಯಿಸುತ್ತಾನೆ. ನಾವು ಹುಟ್ಟಿದ ಮನೆ, ಊರು, ದೇಶ, ಆಡುವ ಭಾಷೆ, ನಮ್ಮ ವರ್ಣ, ರೂಪಗಳೆಲ್ಲವನ್ನೂ ಅವನೇ ನಿಶ್ಚಯಿಸುತ್ತಾನೆ. ಅದನ್ನು ನಾವು ಉಲ್ಲಂಘಿಸುವಂತಿಲ್ಲ. ಎಲ್ಲವೂ ದೇವೇಚ್ಛೆ. ಆತನ ವಿಧಿಯ ಮುಂದೆ ನಾವು ಶಿರಬಾಗಲೇಬೇಕು. ವಿಧಿಯನ್ನು ಹಳಿದು ಪ್ರಲಾಪಿಸುವವರು ವ್ಯರ್ಥ ಕಾಯಕದಲ್ಲಿ ತಮ್ಮನ್ನು ತೊಡಗಿಸುತ್ತಾರೆ. ದೇವನನ್ನು ನಂಬದವರು ವಿಪತ್ತೆರಗಿದಾಗ ಚಿಂತೆ ಮತ್ತು ಕಳವಳಕ್ಕೀಡಾಗುತ್ತಾರೆ. ಸದಾ ಅರಕ್ಷಿತ ಭಾವನೆಯಲ್ಲಿರುತ್ತಾರೆ. ದೇವ ವಿಶ್ವಾಸಿಗಳು ಎಲ್ಲ ಭಾರಗಳನ್ನೂ ದೇವನಲ್ಲಿ ಹಾಕಿ ಹಾಯಾಗಿರುತ್ತಾರೆ. ಆದ್ದರಿಂದ ಅವರು ಭಯ-ಭೀತಿಗೊಳಗಾಗುವುದಿಲ್ಲ. ಯಾವುದನ್ನು ತಪ್ಪಿಸಲು ಸಾಧ್ಯವಿಲ್ಲವೋ ಅದಕ್ಕಾಗಿ ಅವರು ವ್ಯಥೆ, ಬೇಗುದಿ ಮತ್ತು ಸಂಕಟದಲ್ಲಿ ಸಿಲುಕುವುದಿಲ್ಲ.

ಮನುಷ್ಯನು ಪರಾವಲಂಬಿ. ಇತರರನ್ನು ಅವಲಂಬಿಸದೆ ಯಾರೂ ಬದುಕಲಾರರು. ಆದ್ದರಿಂದ ಎಲ್ಲರೂ ಬಲವಾದ ಆಶ್ರಯವನ್ನು ಹುಡುಕುತ್ತಾರೆ. ಆಧಾರವನ್ನು ಅರಸುತ್ತಾರೆ. ಆದರೆ ಹೆಚ್ಚಿನವರು ನಶ್ವರ ಸಂಕೇತಗಳನ್ನು ಆಶ್ರಯಿಸುತ್ತಾರೆ. ಲೌಕಿಕ ಸಂಬಂಧಗಳು ಮತ್ತು ಮಿತ್ರತ್ವಗಳು ಅನಿರೀಕ್ಷಿತವಾಗಿ ಕಣ್ಮರೆಯಾಗುತ್ತವೆ. ಅರ್ಧ ದಾರಿಯಲ್ಲಿ ಒಂದೋ ಅದು ನಮ್ಮನ್ನು ತೊರೆಯುತ್ತದೆ ಅಥವಾ ನಾವು ಅದನ್ನು ತೊರೆಯುತ್ತೇವೆ. ನೆಮ್ಮದಿಗಾಗಿ ಅವಲಂಬಿಸುವ ಅಭಯ ಸಂಕೇತಗಳು ಮರೆಯಾದಾಗ ನಿರಾಶೆಯಾಗುವುದು ಸಹಜ. ಅನಶ್ವರವಾದ ಅಭಯ ಕೇಂದ್ರವನ್ನು ಅವಲಂಬಿಸುವವರಿಗೆ ನಿರಾಶೆಯಿಲ್ಲ. ಅದು ಕೇವಲ ಸೃಷ್ಟಿಕರ್ತನಾದ ದೇವರ ಆಶ್ರಯ ಮಾತ್ರ.

Check Also

ಖಲೀಫಾ ಉಮರ್(ರ) ಆಡಳಿತದಲ್ಲಿ ಜಲಮಾರ್ಗ ನಿರ್ಮಾಣ

ಮೂಲ: ಎಸ್ಸೆಮ್ಕೆ, ಅನು: ಎ.ಎಂ. ಸೇವಾ ಹಿರಿತನ, ಕಿರಿತನಕ್ಕೆ ಇಂದಿನಂತೆ ಅಂದು ಕೂಡಾ ವೇತನದಲ್ಲಿ ಅಂತರವಿತ್ತು. ಉಮರ್ ಅದನ್ನು ಕೂಡಾ …

Leave a Reply

Your email address will not be published. Required fields are marked *