ನಿಸ್ವಾರ್ಥ ಜನಸೇವೆ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಒಮ್ಮೆ ಓರ್ವ ವೃದ್ಧೆ ಬಹಳ ಭಾರವಾದ ಮೂಟೆಯನ್ನು ತನ್ನ ಮನೆಗೆ ಮುಟ್ಟಿಸಲು ಕೂಲಿಯವ ಸಿಗದೆ ಪರದಾಡುತ್ತಿದ್ದಳು. ಮಕ್ಕಾ ನಗರದ ಆ ದಾರಿಯಲ್ಲಿ ಬಂದ ಪ್ರವಾದಿ ಮುಹಮ್ಮದ್(ಸ) ಮುದುಕಿಯ ಮೂಟೆ ಹೊತ್ತು ಆಕೆಯನ್ನು ಹಿಂಬಾಲಿಸಿದರು.

ಮನೆಗೆ ತಲುಪಿದಾಗ ಆ ಮುದುಕಿ ಮಜೂರಿ ನೀಡಲು ಮುಂದಾದರು. ಆದರೆ ಅವರು ಅದನ್ನು ಸ್ವೀಕರಿಸಲಿಲ್ಲ. ಮುದುಕಿಗೆ ಆಶ್ಚರ್ಯವೂ ಆನಂದವೂ ಆಯಿತು. ಅವರ ಬಗ್ಗೆ ಪ್ರೀತ್ಯಾದರ ಮೂಡಿತು.

ಅವರನ್ನು ಬೀಳ್ಕೊಡುವಾಗ ಆ ವೃದ್ಧೆ ಹೀಗೆ ಉಪದೇಶಿಸಿದಳು, “ಮಗಾ, ನಿನ್ನ ಸೇವಾ ಮನೋಭಾವ ನನ್ನ ಮನಸೂರೆಗೊಂಡಿದೆ. ನೀನು ಸದ್ಗುಣ ಸಂಪನ್ನನು. ನಿನಗೆ ಯಾವುದೇ ಆಪತ್ತು ಎದುರಾಗದಿರಲೆಂಬುದು ನನ್ನ ಹಾರೈಕೆ. ಆದ್ದರಿಂದ ನೀನು ಮುಹಮ್ಮದನ ಬಳಿ ಹೋಗಬಾರದು. ಆತ ಜನರನ್ನು ದಾರಿಗೆಡಿಸುತ್ತಿದ್ದಾನೆ. ನಮ್ಮ ಪೂರ್ವಜರನ್ನು ಹೀಗಳೆಯುತ್ತಾನೆ. ಆತನ ಮಾತಿನಲ್ಲಿ ಮಾಂತ್ರಿಕ ಶಕ್ತಿಯಿದೆಯಂತೆ. ನೀನು ಆತನ ಮೋಸದ ಬಲೆಯಲ್ಲಿ ಬೀಳಬಾರದು.”

ಮುದುಕಿಯ ಮಾತು ಕೇಳಿ ಪೈಗಂಬರರಿಗೆ(ಸ) ನಗು ಬಂತು. ಮುದುಕಿಗೆ ಸಂಶಯವಾಯಿತು. ಆಕೆ ಅವರ ಹೆಸರು ಕೇಳಿದಳು. ತಾನೇ ಆ ‘ಮುಹಮ್ಮದ್’ ಎಂದು ಅವರು ಹೇಳಿದಾಗ ಮುದುಕಿಗೆ ದುಃಖವಾಯಿತು. ತಾನಾಡಿದ ಮಾತುಗಳ ಬಗ್ಗೆ ಆಕೆಗೆ ವಿಷಾದ ಉಂಟಾಯಿತು. ತಕ್ಷಣ ಕ್ಪಮೆ ಕೇಳಿ ಅವರ ಅನುಯಾಯಿಯಾದರು.

ಬಾಯಾರಿದವನಿಗೆ ನೀರು ಬೇಕು. ಹಸಿದವನಿಗೆ ಅನ್ನ ಬೇಕು. ಶೋಷಿತನಿಗೆ ಶೋಷಣೆಯಿಂದ ಮುಕ್ತಿ ಬೇಕು. ಸಂಕಷ್ಟದಲ್ಲಿರುವವನಿಗೆ ಸಹಾನುಭೂತಿ ಬೇಕು. ಜನರ ಅಗತ್ಯಗಳನ್ನು ಮನಗಂಡು ಅವುಗಳನ್ನು ಈಡೇರಿಸುವವರೇ ನೈಜ ಸಮಾಜ ಸೇವಕರು.

ದಯೆಯೇ ಧರ್ಮದ ಮೂಲ, ದಯೆಯ ಮೂಲಕ ಕಠಿಣ ಹೃದಯಗಳನ್ನು ಜಯಿಸಬಹುದು. ದೇವನು ಪರಮ ದಯಾಮಯನಾಗಿದ್ದಾನೆ. ಅವನ ಅಪಾರ ದಯೆಯು ಸಮಸ್ತ ವಿಶ್ವದಲ್ಲಿ ತುಂಬಿ ತುಳುಕುತ್ತಿದೆ. ತನ್ನ ದಾಸರು ಕರುಣೆಯುಳ್ಳವರಾಗಬೇಕೆಂಬುದೇ ಅವನಿಚ್ಛೆ.

ದಯೆಯುಳ್ಳ ಮನಸ್ಸುಗಳಿಂದಲೇ ನಿಷ್ಕಾಮ ಕರ್ಮಗಳು ಹುಟ್ಟುತ್ತವೆ. ಅಂತಹ ನಿರ್ಮಲ ಹೃದಯಿಗಳಿಂದಲೇ ನಿಸ್ವಾರ್ಥ ಜನ ಸೇವೆಯನ್ನು ನಿರೀಕ್ಷಿಸಬಹುದು. ಮಾನವನ ಮನಸ್ಸಿನಲ್ಲಿ ದಯೆ ತುಂಬಲು ಧರ್ಮಗಳು ಆತನಿಗೆ ಬೋಧಿಸುವುದು ಕೂಡ ನಿಸ್ವಾರ್ಥ ಜನಸೇವೆಯನ್ನೇ, ಜನಸೇವೆಯೇ ನೈಜ ಜನಾರ್ಧನ ಸೇವೆ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *