ಪ್ರತೀಕಾರ ಮತ್ತು ಪ್ರವಾದಿ(ಸ)

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಪ್ರವಾದಿವರ್ಯರು(ಸ) ನಡೆದು ಹೋಗುತ್ತಿದ್ದ ದಾರಿಯ ಪಕ್ಕದಲ್ಲಿರುವ ಓರ್ವ ಯಹೂದಿ ಬಾಲಕಿ ತನ್ನ ಮನೆಯನ್ನು ಗುಡಿಸಿ ಕೂಡಿಟ್ಟ ಕಸವನ್ನು ಪ್ರವಾದಿಯ(ಸ) ಮೈಮೇಲೆ ಚೆಲ್ಲುತ್ತಿದ್ದಳು. ಅವರಿಗೆ ಈ ರೀತಿ ತೊಂದರೆ ಕೊಟ್ಟು, ಅವಮಾನಿಸಿ ಆಕೆ ಸಂತೋಷ ಪಡುತ್ತಿದ್ದಳು. ಪ್ರವಾದಿಯವರು(ಸ) ಅದರಿಂದ ಸ್ವಲ್ಪವೂ ಕುಪಿತರಾಗುತ್ತಿರಲಿಲ್ಲ. ಮೈಮೇಲೆ ಬಿದ್ದ ಕಸವನ್ನು ಕೊಡವಿ ನಿರ್ವಿಕಾರ ಚಿತ್ತರಾಗಿ ತಮ್ಮ ದಾರಿ ಹಿಡಿಯುತ್ತಿದ್ದರು.

ಯಹೂದಿ ಬಾಲಕಿಯ ಈ ದುಷ್ಕ್ರತ್ಯದಿಂದ ಕುಪಿತರಾದ ಪ್ರವಾದಿಯ ಅನುಯಾಯಿಗಳು ಪ್ರತೀಕಾರಕ್ಕೆ ಮುಂದಾದರು. ಆದರೆ ಪ್ರವಾದಿವರ್ಯರು(ಸ) ಅದಕ್ಕೆ ಅನುಮತಿ ನೀಡಲಿಲ್ಲ. ನನ್ನ ಮೇಲೆ ಕಸ ಎಸೆಯುವುದರಿಂದ ನನಗೇನೂ ತೊಂದರೆಯಿಲ್ಲ. ಆ ಬಾಲಕಿಗೆ ಅದರಿಂದ ಸಂತೋಷ ಕೂಡಾ ಆಗುತ್ತದೆ. ನಾನೇಕೆ ಆಕೆಯ ಸಂತೋಷಕ್ಕೆ ಭಂಗ ತರಬೇಕು?

ನಾನು ದೇವಮಾರ್ಗದಲ್ಲಿ ನಡೆಯುವುದರಿಂದ ಮತ್ತು ಸೃಷ್ಟಿಕರ್ತನ ಮಹಾನತೆಯನ್ನು ಕೊಂಡಾಡುವುದರಿಂದ ಇದನ್ನೆಲ್ಲಾ ಅನುಭವಿಸಬೇಕಾಗುತ್ತದೆ. ಇದು ಅಲ್ಲಾಹನಿಂದ ಬಂದ ಸತ್ವ ಪರೀಕ್ಷೆಯಾಗಿದೆ. ಆದ್ದರಿಂದ ಇದನ್ನು ನಾನು ಸಂತೋಷದಿಂದ ಎದುರಿಸುವೆನು ಎಂದು ಹೇಳಿದರು.

ಒಂದು ದಿನ ಪ್ರವಾದಿ(ಸ) ಅದೇ ದಾರಿಯಿಂದ ಸಾಗುವಾಗ ಆ ಬಾಲಕಿಯನ್ನು ಕಾಣಲಿಲ್ಲ. ಮರು ದಿನವೂ ಆಕೆ ಇರಲಿಲ್ಲ. ವಿಚಾರಿಸಿದಾಗ ಆಕೆ ಕಾಯಿಲೆ ಬಿದ್ದಿದ್ದಾಳೆಂದು ತಿಳಿಯಿತು. ಪ್ರವಾದಿವರ್ಯರು(ಸ) ಆಕೆಯ ಬಳಿಗೆ ಹೋಗಿ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

ತರುವಾಯ ಹೀಗೆ ಹೇಳಿದರು, “ಮಗಳೇ! ಮೈಮೇಲೆ ಕಸ ಎಸೆದು ಸಂತೋಷಪಡಲು ನಿನಗೆ ಸಾಧ್ಯವಾಗದೆ ಹೋದುದಕ್ಕೆ ನಾನಿಲ್ಲಿಗೆ ಬಂದಿರುವೆನು. ನಿನಗಿಷ್ಟವಿದ್ದಂತೆ ಮಾಡಿ ಆನಂದಿಸು.”

ಪ್ರವಾದಿಯವರ(ಸ) ಮಾತು ಆ ಬಾಲಕಿಯನ್ನು ಚಿಂತನೆಗೆ ಹಚ್ಚಿತು. ಆಕೆ ಪಶ್ಚಾತ್ತಾಪಪಟ್ಟು ಕಣ್ಣೀರು ಸುರಿಸ ತೊಡಗಿದಳು. ಪ್ರವಾದಿವರ್ಯರ(ಸ) ಪ್ರೀತಿಪೂರ್ವಕ ವರ್ತನೆ ಆಕೆಯನ್ನೂ ಆಕೆಯ ಕುಟುಂಬವನ್ನೂ ಬಹಳವಾಗಿ ಆಕರ್ಷಿಸಿತು. ಅವರು ಶತ್ರುತ್ವ ತೊರೆದು ಪ್ರವಾದಿವರ್ಯರ(ಸ) ಅನುಯಾಯಿಗಳಾದರು.

‘ಲವೋ’ ಎಂದರೆ ‘ಹೋಗಲೇ’ ಎನ್ನಬೇಕೆಂದು ಅನಿಸುವುದು ಸಹಜ. ಒಂದು ಏಟು ಕೊಟ್ಟವನಿಗೆ ತಿರುಗಿ ಎರಡೇಟು ಬಾರಿಸದವನನ್ನು ಕೈಲಾಗದವನೆಂದು ಪರಿಗಣಿಸುತ್ತಾರೆ. ಪ್ರತೀಕಾರ ಭಾವದಿಂದ ಎಸಗುವ ಕೃತ್ಯಗಳನ್ನು ಶೌರ್ಯವೆಂದು ಹೊಗಳಲಾಗುತ್ತಿದೆ. ಈ ಮೃಗೀಯ ಗುಣಗಳಿಂದ ಮೇಲೆದ್ದು ಕ್ಪ ಮಿಸುವವರು ವಿರಳ.

ಪ್ರತಿಸ್ಪರ್ಧಿಯನ್ನು ಸೋಲಿಸುವ ಹಲವು ವಿಧಾನಗಳಿವೆ. ದಮನ ಕಾರ್ಯ ಅವುಗಳಲ್ಲೊಂದು. ಅದರ ಮೂಲಕ ಶತ್ರುವನ್ನು ದೈಹಿಕವಾಗಿ ಸೋಲಿಸಲು ಮಾತ್ರ ಸಾಧ್ಯ.

ಕ್ಪಮೆಯು ವಿಜಯದ ಸೋಪಾನ. ಅದು ಪ್ರತಿಸ್ಪರ್ಧಿಯನ್ನು ಮಾನಸಿಕವಾಗಿ ಸೋಲಿಸುತ್ತದೆ. ಅದು ಅಗಲಿದವರನ್ನು ಹತ್ತಿರ ತರುತ್ತದೆ.

ಅನ್ಯಾಯವೆಸಗಿದವರಿಗೆ ದಯೆ ತೋರಲು ಸಂವೇದನಾಶೀಲರಿಗೆ ಮಾತ್ರ ಸಾಧ್ಯ. ಉಪದ್ರವ ಕೊಟ್ಟವರಿಗೆ ಉಪಕಾರ ಮಾಡಲು ದೊಡ್ಡ ಮನಸ್ಸು ಬೇಕು. ಪ್ರತೀಕಾರಕ್ಕೆ ಬದಲು ಕ್ಪಮೆಯನ್ನು ಮೈಗೂಡಿಸಿಕೊಳ್ಳುವವರು ಮಾತ್ರ ಶತ್ರುಗಳನ್ನು ಮಿತ್ರರಾಗಿ ಮಾಡಬಲ್ಲರು.

ಈ ಕುರ್‍ಆನ್ ವಚನವನ್ನು ಗಮನಿಸಿ, “ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ದೂರೀಕರಿಸಿ. ನಿಮ್ಮೊಂದಿಗೆ ಹಗೆತನ ಕಟ್ಟಿಕೊಂಡವನು ನಿಮ್ಮ ಆಪ್ತಮಿತ್ರನಾಗಿ ಮಾರ್ಪಡುವುದನ್ನು ನೀವು ಕಾಣುವಿರಿ.” (ಪವಿತ್ರ ಕುರ್‍ಆನ್, 41:34)

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *