ಪಶ್ಚಾತ್ತಾಪಕ್ಕೆ ಪ್ರಾಯ ಅಡ್ಡಿಯಾಗದು

ಒಬ್ಬ ಮುದುಕ ಸಂತನೋರ್ವನ ಬಳಿ ಬಂದನು. ಸಂತರು ಬಂದ ಕಾರಣವನ್ನು ವಿಚಾರಿಸಿದರು.
ಮುದುಕನೆಂದ: ನಾನು ತಮ್ಮ ಬಳಿ ಬಂದದ್ದು ಬಹಳ ತಡವಾಯಿತು. ನಾನು ಬಹಳ ಮುದುಕನಾಗಿ ಬಿಟ್ಟಿದ್ದೇನೆ.
‘ಪರವಾಗಿಲ್ಲ ಬಂದ ಉದ್ದೇಶವನ್ನು ತಿಳಿಸಿ’- ಸಂತರು ಆದೇಶಿಸಿದರು.
‘ನಾನು ನನ್ನೆಲ್ಲ ಪಾಪಗಳ ಬಗ್ಗೆ ಪಶ್ಚಾತ್ತಾಪ ಪಡಲು ನಿಮ್ಮ ಬಳಿಗೆ ಬಂದಿರುವೆನು.’

ಯಾವ ವಯಸ್ಸಿನಲ್ಲೂ ಪಾಪ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡಬಹುದು. ಆದರೆ ಅದನ್ನು ಆದಷ್ಟು ಬೇಗ ಮಾಡುವುದು ಒಳ್ಳೆಯದು. ಯೌವನದಲ್ಲಿ ಮಾಡುವ ಪಶ್ಚಾತ್ತಾಪ ಹೆಚ್ಚು ಉತ್ತಮ.

ಪಶ್ಚಾತ್ತಾಪವೆಂದರೆ ಪಾಪಗಳಿಂದ ಮುಕ್ತನಾಗುವ ಬಯಕೆ. ಅದನ್ನೇ ಆತ್ಮಶುದ್ದಿ ಅಥವಾ ಚಿತ್ತ ಶುದ್ಧಿ ಎನ್ನುತ್ತೇವೆ. ಈ ಶುದ್ದಿಯಲ್ಲಿ ಮೂರು ವಿಧಗಳಿವೆ. ಒಂದು ಪಾಪ ಕಾರ್ಯಗಳ ಕೊಳಕಿನಿಂದ ಶರೀರದ ಅಂಗಾಂಗಗಳ ಶುದ್ದಿ. ಇನ್ನೊಂದು, ಕೆಟ್ಟ ನೀತಿಯಿಂದ ವಿಚಾರದ ಶುದ್ದಿ. ಮತ್ತೊಂದು ಸೃಷ್ಟಿಕರ್ತನ ಹೊರತು ಇತರರ ಧ್ಯಾನದಿಂದ ಮನಸ್ಸಿನ ಶುದ್ದಿ.

ಪ್ರವಾದಿಯ ವಚನವೊಂದು ಹೀಗಿದೆ: ‘ಮಾನವ ಶರೀರದಲ್ಲಿ ಒಂದು ಮಾಂಸ ಖಂಡವಿದೆ. ಅದು ಶುದ್ಧವಾದರೆ ಇಡೀ ಶರೀರದ ಸುಧಾರಣೆಯಾಗುತ್ತದೆ. ಅದು ಕೆಟ್ಟರೆ ಇಡೀ ಶರೀರ ಕೆಟ್ಟು ಬಿಡುತ್ತದೆ. ಅದುವೇ ಹೃದಯ.

‘ ಪವಿತ್ರ ಕುರ್‍ಆನಿನ ಪ್ರಕಾರ “ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವನು ಯಶಸ್ಸು ಹೊಂದಿದನು; ತನ್ನ ಆತ್ಮಸಾಕ್ಷಿಯನ್ನು ದಮನಿಸಿದವನು ಸೋಲುಂಡನು.” (91:9-10)

“ಪರೋಪಕಾರಃ ಪುಣ್ಯಾಯ, ಪಾಪಾಯ ಪರಪೀಡನಂ” ಎಂಬ ಶ್ಲೋಕದಲ್ಲಿ ಪಾಪ ಪುಣ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ.

ಪ್ರತಿಯೊಂದು ಅಪರಾಧ, ಅನೈತಿಕ ಸಂಪಾದನೆ, ಪರನಿಂದೆ, ಸುಳ್ಳು, ಇತರರ ಮನನೋಯಿಸುವಿಕೆ, ವ್ಯಭಿಚಾರ, ಸುಲಿಗೆ, ಕಲಬೆರಕೆ, ಕಾಳಸಂತೆಗಳೆಲ್ಲವೂ ನಮ್ಮ ಆತ್ಮ ಸಾಕ್ಷಿಯನ್ನು ಮಡುಗಟ್ಟಿಸುತ್ತವೆ. ಪಾಪ ಕೃತ್ಯಗಳು ಮನುಷ್ಯನನ್ನು ಆತನ ಸೃಷ್ಟಿಕರ್ತನಿಂದ ದೂರ ಸರಿಸುತ್ತವೆ. ಈ ಕೃತ್ಯಗಳಿಗೆ ಪಶ್ಚಾತ್ತಾಪ ಪಟ್ಟಾಗಲೇ ಮಾನವನಿಗೆ ಪುಣ್ಯಗಳನ್ನೆಸಗುವ ಸೌಭಾಗ್ಯ ಲಭಿಸುತ್ತದೆ. ಇದರಿಂದ ಮನುಷ್ಯನಿಗೆ ಮನಶ್ಶಾಂತಿ ದೊರೆಯುತ್ತದೆ. ಮನಶ್ಶಾಂತಿಗಿಂತ ದೊಡ್ಡ ಸಂಪತ್ತಿಲ್ಲ. ದೇವನಿಗೆ ಮನುಷ್ಯನ ಮನಸ್ಸಿನ ರಹಸ್ಯದ ಅರಿವಿದೆ.

ಯಾರನ್ನು ವಂಚಿಸಿದರೂ ದೇವನನ್ನು ವಂಚಿಸಲು ಸಾಧ್ಯವಿಲ್ಲ. ಅವನಲ್ಲಿ ನಿಷ್ಕಲ್ಮಶ ಮನಸ್ಸಿನೊಂದಿಗೆ ಪಶ್ಚಾತ್ತಾಪ ಪಟ್ಟಾಗ ಮಾತ್ರ ಮಾನವ ನೈಜ ಆನಂದವನ್ನು ಅನುಭವಿಸಬಲ್ಲನು. ಆ ಪಶ್ಚಾತ್ತಾಪಕ್ಕೆ ಪ್ರಾಯ ಅಡ್ಡಿಯಾಗಕೂಡದು.

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *