ಸಂಕಷ್ಟದಲ್ಲಿ ದೇವಸ್ಮರಣೆ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ ಕಾಂಟಾಸ್ಟಿನ್ ಲೆನಿನ್ ಕಟ್ಟಾ ನಾಸ್ತಿಕನಾಗಿದ್ದನು. ದೇವ ವಿಶ್ವಾಸವು ವ್ಯರ್ಥವೆಂದು ಆತ ವಾದಿಸುತ್ತಿದ್ದನು. ಆದರೆ ಆತನ ಪತ್ನಿ ಕಿಟ್ಟಿ ಹೆರಿಗೆ ನೋವಿನಿಂದ ನರಳುತ್ತಿರುವಾಗ ಆತ ಅದನ್ನೆಲ್ಲಾ ಮರೆತು ಬಹಳ ಪ್ರಾಮಾಣಿಕವಾಗಿ ದೇವರನ್ನು ಕರೆದು ಪ್ರಾರ್ಥಿಸಿದನು. “ದೇವಾ! ನಮ್ಮನ್ನು ರಕ್ಷಿಸು. ನಮಗೆ ನೆರವಾಗು” ಈ ಪ್ರಾರ್ಥನೆಯನ್ನು ಲೆನಿನ್ ಹಲವು ಸಲ ಮಾಡುತ್ತಿದ್ದನು.

ಹೆಚ್ಚಿನ ಜನರ ಸ್ಥಿತಿ ಇದುವೇ ಆಗಿದೆ. ಕಷ್ಟ ಕೋಟಲೆಗಳಿಲ್ಲದ ಸುಖಮಯ ಜೀವನ ಸಾಗಿಸುವಾಗ ಅವರು ಸೃಷ್ಟಿಕರ್ತನನ್ನು ಮರೆತು ಬಿಡುತ್ತಾರೆ. ಸಂಪತ್ತು ಮತ್ತು ಆರೋಗ್ಯವು ಅವರನ್ನು ಅಹಂಕಾರಿಗಳಾಗಿ ಮಾಡುತ್ತವೆ.

ಮನುಷ್ಯನು ಭೂಮಿಯಲ್ಲಿ ಪರಾಶ್ರಿತನೂ ಪರವಶನೂ ಆಗಿ ಜನಿಸುತ್ತಾನೆ. ಅವನ ಹುಟ್ಟಿನಲ್ಲಿ ಅವನ ಶ್ರಮ ಮತ್ತು ಬಯಕೆಗೆ ಯಾವ ಪಾತ್ರವೂ ಇಲ್ಲ. ತಾನು ಎಲ್ಲಿ, ಯಾವಾಗ, ಹೇಗೆ ಜನಿಸಬೇಕೆಂದು ತೀರ್ಮಾನಿಸಲು ಯಾರಿಗೂ ಸಾಧ್ಯವಿಲ್ಲ. ತನ್ನ ವರ್ಗ, ವರ್ಣ, ದೇಶ, ಭಾಷೆ, ಕಾಲ, ರೂಪ ಮುಂತಾದುವುಗಳನ್ನು ಆರಿಸುವ ಅವಕಾಶ ಅವನಿಗೆ ನೀಡಲಾಗಿಲ್ಲ. ಅವೆಲ್ಲವೂ ದೇವವಿಧಿಯ ಪ್ರಕಾರವೇ ನಡೆಯುತ್ತವೆ. ಮರಣದಂತಹ ಅತ್ಯಂತ ಪ್ರಮುಖ ವಿಷಯದಲ್ಲಿಯೂ ಮನುಷ್ಯನಿಗೆ ಹೇಳತಕ್ಕಂತಹ ಪಾತ್ರವಿಲ್ಲ. ಉರ್ದು ಕವಿಯೊಬ್ಬರು ಹೇಳಿದಂತೆ.
“ಆಯೀ ಹಯಾತ್ ಆಯೆ ಕಝಾ ಲೇಚಲೀ ಚಲೇ
ಅಪ್ನೀ ಖುಷೀಸೆ ಆಯೆ ನ ಅಪ್ನೀ ಖುಷೀ ಚಲೇ.”
“ಜೀವನ ತಂದಾಗ ಬಂದೆವು. ವಿಧಿ ಒಯ್ದಾಗ ಹೊರಟು ಹೋದೆವು.
ನಮ್ಮಿಷ್ಟದಿಂದ ನಾವು ಬಂದದ್ದೂ ಅಲ್ಲ. ನಮ್ಮಿಷ್ಟದಿಂದ ನಾವು ಹೋಗುವುದೂ ಇಲ್ಲ.”

ಆದರೆ ಹೆಚ್ಚಿನ ಜನರು ಈ ವಾಸ್ತವಿಕತೆಯನ್ನು ಮರೆತು ಬಿಡುತ್ತಾರೆ. ಮನುಷ್ಯ ತನ್ನ ಜೀವನದಲ್ಲಿ ನಿತ್ಯ ಬಳಸುವ ಭೌತಿಕ ವಸ್ತುಗಳ ಮೇಲೂ ಅವನಿಗೆ ಪೂರ್ಣ ಒಡೆತನವಿಲ್ಲ. ಗಾಳಿ, ನೀರು, ಬೆಳಕು ಮಾತ್ರವಲ್ಲ ಕೈ, ಕಾಲು, ಕಣ್ಣು, ಕಿವಿ, ಮೂಗು, ನಾಲಗೆ, ಜೀವನ, ಆಯುಷ್ಯ, ಆರೋಗ್ಯಗಳೆಲ್ಲವೂ ನಿಜವಾಗಿ ಅವನ ನಿಯಂತ್ರಣಕ್ಕೆ ವಿೂರಿದವುಗಳಾಗಿವೆ.

ಮನುಷ್ಯನು ಈ ಲೋಕದಲ್ಲಿ ಹೊಸತಾಗಿ ಯಾವುದನ್ನೂ ಸೃಷ್ಟಿಸುವುದಿಲ್ಲ. ದೇವದತ್ತ ವಸ್ತುಗಳನ್ನು ಉಪಯೋಗಿಸುತ್ತಾನೆ ಮತ್ತು ಅವುಗಳ ಸ್ವರೂಪವನ್ನು ಬದಲಾಯಿಸುತ್ತಾನೆ. ಇಲ್ಲಿ ಯಾವುದನ್ನೂ ಸೃಷ್ಟಿಸದವನಿಗೆ ಅವುಗಳ ಮೇಲೆ ಒಡೆತನವನ್ನು ವಾದಿಸುವ ಅಧಿಕಾರವಿದೆಯೇ? ಆದರೆ ಹೆಚ್ಚಿನವರು ಈ ಮೂಲಭೂತ ವಾಸ್ತವಿಕತೆಯನ್ನು ಮರೆತು ಬಿಡುತ್ತಾರೆ. ತಮ್ಮ ಅಧೀನದಲ್ಲಿರುವವುಗಳ ಮೇಲೆ ಯಜಮಾನಿಕೆಯನ್ನು ಮೆರೆಯುತ್ತಾರೆ. ಅವುಗಳ ಸೃಷ್ಟಿಕರ್ತನ ವಿಧಿ ನಿಷೇಧಗಳನ್ನು ಮರೆತು ಜೀವಿಸುತ್ತಾರೆ.

ವಿಪತ್ತುಗಳು ಎರಗಿದಾಗ ಮಾತ್ರ ಹೆಚ್ಚಿನವರು ಜಗದೊಡೆಯನನ್ನು ಸ್ಮರಿಸುತ್ತಾರೆ. ಆಗ ಅವರು ಪರಮ ಭಕ್ತರಂತೆ ಅವನಲ್ಲಿ ಪ್ರಾರ್ಥಿಸುತ್ತಾರೆ. ವಿಪತ್ತು ಸರಿದು ಹೋದ ಬಳಿಕ ಮತ್ತೆ ಅವನನ್ನು ಮರೆತು ಸ್ವೇಚ್ಛಾ ವಿಹಾರಿಗಳಾಗುತ್ತಾರೆ.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *