ಅತ್ಯಾಚಾರಕ್ಕೆ ಇಸ್ಲಾಮ್ ವಿಧಿಸುವ ಶಿಕ್ಷೆಯಿಂದ ಅಪರಾಧ ಕಡಿಮೆಯಾಗುವುದೇ?

@ ಅಬ್ದುಲ್ಲಾ ಹಸನ್

ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ವ್ಯಾಪಕವಾಗುತ್ತಿವೆ. ಸಮಾಜದಲ್ಲಿ ಈಗ ಮತ್ತೆ ಶರೀಅತ್ ಕಾನೂನುಗಳು ಕೂಡಾ ಚರ್ಚೆಗೆ ಬಂದಿವೆ. ಮುಸ್ಲಿಮೇತರರು ಕೂಡಾ ಈ ಪಾಪ ಕೃತ್ಯಕ್ಕೆ ಇಸ್ಲಾಮೀ ಶರೀಅತ್ ವಿಧಿಸಿದ ಕಾನೂನುಗಳೇ ಸೂಕ್ತವೆಂದೂ ಹೇಳುತ್ತಿದ್ದಾರೆ. ವಾಸ್ತವದಲ್ಲಿ ಅತ್ಯಾಚಾರಕ್ಕೆ ಇರುವ ಇಸ್ಲಾಮೀ ವಿಧಿ ಏನು? ಇಂತಹ ನೀಚ ಕೃತ್ಯ ಮರುಕಳಿಸದಂತೆ ನಾವು ಯಾವ ಮುಂಜಾಗರೂಕತಾ ಕ್ರಮ ಕೈಗೊಳ್ಳಬಹುದು? ಶರೀಅತ್ ಕಾನೂನಿಂದ ಈ ದುಷ್ಕತ್ಯ ತಡೆಯಲು ಸಾದ್ಯವೇ?

ಇಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರಲ್ಲೇನೂ ಆಶ್ಚರ್ಯವಿಲ್ಲ. ಮಾಧ್ಯಮಗಳ ಮುಂದೆ ಬಂದಾಗ ಅದು ಸುದ್ದಿಯಾಗುತ್ತದೆ ಅಷ್ಟೇ. ಅವರು ಎಂದಿನಂತೆ ಅದಕ್ಕೆ ಮಸಾಲೆ ಅರೆದು ರಸವತ್ತಾಗಿ ವಿವರಿಸುತ್ತಾರೆ.

ಓರ್ವ ಬಡ ಹುಡುಗಿಯನ್ನು ಕೆಲ ದುಷ್ಟರು ಸೇರಿ ಅತ್ಯಾಚಾರಗೈದು ಅವಳ ಸಾವಿಗೆ ಕಾರಣವಾಗುವುದನ್ನು ಸಾಮಾನ್ಯ ಘಟನೆ ಎಂದು ಯಾರೂ ಹೇಳಲಾರರು. ರೈಲಿನಲ್ಲಿ, ಬಸ್ಸು, ವಾಹನಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುತ್ತವೆ. ಕೇರಳದಲ್ಲಿ ಓರ್ವಳನ್ನು ಚಲಿಸುತ್ತಿರುವ ರೈಲಿನಿಂದ ಹೊರಕ್ಕೆ ತಳ್ಳಿದಾಗ ಗಾಯಗೊಂಡು ಏದುಸಿರು ಬಿಡುತ್ತಿದ್ದ ಆಕೆಯನ್ನು ಹಿಡಿದು ಅತ್ಯಾಚಾರಗೈದು ಕೊಂದ ಘಟನೆಯೂ ನಡೆದಿದೆ. ಜಮ್ಮು ಕಾಶ್ಮೀರದ ಕಟುವಾ ಕಣಿವೆಯಲ್ಲಿ 8 ವರ್ಷದ ಬಾಲಕಿ ಆಸಿಫಾಳ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಲಾಗಿದೆ. ಅತ್ಯಂತ ಪೈಶಾಚಿಕವಾದ ಇಂತಹ ಘಟನೆಗಳು ಅಲ್ಲಲ್ಲಿ ಈಗ ಕೇಳಿ ಬರುತ್ತಿವೆ. ಇಂತಹ ದುಷ್ಕ್ರತ್ಯಗಳನ್ನು ಕಡಿಮೆಗೊಳಿಸಲು ನಾವು ಯಾವ ಕ್ರಮ ಕೈಗೊಂಡಿದ್ದೇವೆ ಎಂಬ ಬಗ್ಗೆ ಚಿಂತಿಸಬೇಕಾಗಿದೆ.

ನಾವು ಅಭಿವೃದ್ಧಿಯ ಪಥದಲ್ಲಿದ್ದೇವೆಂಬ ಭ್ರಮೆಯಲ್ಲಿ ಇಂಚಿಂಚೂ ಅನುಸರಿಸುತ್ತಿರುವ ಪಾಶ್ಚಾತ್ಯ ಸಂಸ್ಕ್ರತಿಯ ಪಾಲು ಇದರಲ್ಲಿಲ್ಲವೇ? ವಿಶ್ವದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ಸ್ವೀಡನ್ ನಲ್ಲಿ ನಡೆಯುತ್ತವೆ. ಬಳಿಕ ಬೆಲ್ಜಿಯಮ್, ಅಮೆರಿಕಾ, ನ್ಯೂಝಿಲ್ಯಾಂಡ್, ನಾರ್ವೆ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳು ನಡೆಯುತ್ತವೆ.

ಈ ಹಿಂದಿನ ಒಂದು ಲೆಕ್ಕಾಚಾರದ ಪ್ರಕಾರ ಅಮೇರಿಕಾದಲ್ಲಿ 90 ಸೆಕುಂಡಿಗೆ ಓರ್ವಳು ಅತ್ಯಾಚಾರಕ್ಕೊಳಗಾಗುತ್ತಿದ್ದಳು. ಈಗ ಅದರಲ್ಲಿ ಗಣನೀಯ ಹೆಚ್ಚಳವಾಗಿದೆ. ಈ ಕುರಿತು ಇಸ್ಲಾಮೀ ರಾಷ್ಟ್ರಗಳಲ್ಲಿ ಲೆಕ್ಕಾಚಾರ ನಡೆಸಿದಾಗ ಅತ್ಯಾಚಾರ ಪ್ರಕರಣ ತೀರಾ ವಿರಳವಾಗಿ ಕಂಡು ಬರುತ್ತದೆ. ಇದಕ್ಕೆ ಕಾರಣ ಏನೆಂಬುದನ್ನು ಅಧ್ಯಯನ ನಡೆಸಬೇಕಲ್ಲವೇ?

ವಿವಾಹ ಪೂರ್ವವಾದ ಲೈಂಗಿಕ ಸಂಬಂಧಗಳು ಪರಸ್ಪರ ಸಹಮತದಿಂದ ನಡೆದರೆ ಪಾಶ್ಚಾತ್ಯ ಸಂಸ್ಕ್ರತಿಯಲ್ಲಿ ಅಪರಾಧವೆನಿಸದು. ಅದಕ್ಕಾಗಿ ಅಂತಹ ಸಂಬಂಧಕ್ಕೆ ಪೂರಕವಾದ ವಾತಾವರಣ ಅಲ್ಲಿ ನಿರ್ಮಿಸಲಾಗಿದೆ. ಅಶ್ಲೀಲತೆಯಿಂದ ಕೂಡಿದ ಅವರ ವಸ್ತ್ರಧಾರಣೆ, ಯಾವುದೇ ಅಡೆತಡೆಯಿಲ್ಲದ ಬೆರೆತ ಸಾಮೂಹಿಕ ಜೀವನ, ಸಹ ಶಿಕ್ಷಣ, ಕಲೆಯ ಹೆಸರಲ್ಲಿ ನಡೆಯುವ ಅಶ್ಲೀಲತೆಗಳು, ಅನಿಯಂತ್ರಿತವಾಗಿ ಸಾಗುವ ದೃಶ್ಯ ಮತ್ತು ಶ್ರವಣ ಮಾಧ್ಯಮಗಳು, ಅಶ್ಲೀಲತೆಯ ಜಾಹೀರಾತುಗಳು ಮುಂತಾದ ಪಾಶ್ಚಾತ್ಯ ಸಂಸ್ಕ್ರತಿಯ ಉತ್ಪಾದನೆಗಳು ಲೈಂಗಿಕ ದುಷ್ಕ್ರತ್ಯಗಳಿಗೆ ಕಾರಣವಾಗಿದೆಯೆಂಬುದನ್ನು ಅಲ್ಲಗಳೆಯಲಾಗದು.

ನಮ್ಮ ದೇಶವೂ ಅದರತ್ತ ವಾಲಿದೆ. ಅದನ್ನು ಯಥಾವತ್ತಾಗಿ ಅನುಸರಿಸಲು ಹಾತೊರೆಯುವಾಗ ಅದರಿಂದ ಬರುವ ಪ್ರತಿಕೂಲ ಪರಿಣಾಮಗಳನ್ನೂ ಸಹಜವಾಗಿಯೇ ಎದುರಿಸಬೇಕಾಗುತ್ತದೆ. ಆದರೆ ಇಸ್ಲಾಮೀ ರಾಷ್ಟ್ರಗಳಲ್ಲಿ ಇಂತಹ ಅಶ್ಲೀಲ ಪ್ರದರ್ಶನಗಳು ಅನುವದನೀಯವಾಗಿಲ್ಲ. ಮುಖ ಮತ್ತು ಮುಂಗೈ ಹೊರತು ಪಡಿಸಿ ಮಿಕ್ಕೆಲ್ಲಾ ದೇಹದ ಭಾಗಗಳನ್ನು ಅಡಗಿಸದೆ ಯಾವುದೇ ಮುಸ್ಲಿಮ್ ಮಹಿಳೆ ಹೊರಗೆ ಇಳಿಯುವಂತಿಲ್ಲ. ಒಟ್ಟಿನಲ್ಲಿ ಪಾಶ್ಚಾತ್ಯ ಸಂಸ್ಕ್ರತಿಯೇ ಅಶ್ಲೀಲತೆಗೆ ಅಧೀನವಾಗಿದೆ.

ಇಂತಹ ಅತ್ಯಾಚಾರ ಪೃಕರಣಗಳಿಗೆ ನಾವು ನೀಡುವ ಶಿಕ್ಷೆಯ ಪ್ರಮಾಣವೂ ಮತ್ತೊಂದು ವಿಚಾರವಾಗಿದೆ. ಒಂದು ಹೆಣ್ಮಗುವನ್ನು ಅಮಾನುಷವಾಗಿ ಅತ್ಯಾಚಾರಗೈದು ಅದು ಕೊಲೆಯಲ್ಲಿ ಅಂತ್ಯವಾದರೆ ಕೂಡಾ ಕೆಲ ವರ್ಷಗಳ ಜೈಲು ವಾಸಕ್ಕೆ ಸೀಮಿತವಾಗಿ ಪಾರಾಗಬಹುದು. ಆದರೆ ಸಂಸ್ಕ್ರತಿ ಹೀನವಾದ, ಅಮಾನುಷವಾದ ದುಷ್ಕ್ರತ್ಯಕ್ಕೆ ಇಸ್ಲಾಮ್ ಕಠಿಣ ಶಿಕ್ಷೆಯನ್ನು ನಿಶ್ಚಯಿಸಿದೆ.

ಲೈಂಗಿಕ ಅಪರಾಧಗಳಾದ, ಬಲಾತ್ಕಾರ, ಅತ್ಯಾಚಾರ ಮುಂತಾದವುಗಳನ್ನು ಕೆಲ ವಿದ್ವಾಂಸರು ವ್ಯಭಿಚಾರವಾಗಿ ಪರಿಗಣಿಸಿದ್ದಾರೆ. ಇಮಾಮ್ ಅಬೂ ಹನೀಫ, ಸೌರಿ, ಮುಂತಾದವರು ಈ ಗುಂಪಿನಲ್ಲಿ ಸೇರಿದ್ದಾರೆ. ಅಪರಾಧಿ ವಿವಾಹಿತನಾಗಿದ್ದರೆ ಇಸ್ಲಾಮೀ ರಾಷ್ಟ್ರಗಳು ಅವನನ್ನು ಕಲ್ಲೆಸೆದು ಕೊಲ್ಲುವ ಕಾನೂನು ಜಾರಿಗೊಳಿಸುತ್ತವೆ. ಆತ ಅವಿವಾಹಿತನೆಂದಾದರೆ ಅವನಿಗೆ ನೂರು ಚಡಿಯೇಟು ನೀಡಿ ಅವನನ್ನು ಗಡಿಪಾರು ಮಾಡಲಾಗುವುದು ಎಂದು ಹೇಳುತ್ತಾರೆ.

ಪಾಶ್ಚಾತ್ಯರು ಪ್ರಚಾರ ಪಡಿಸಿದಂಥ ರೀತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆಯನ್ನು ಇಸ್ಲಾಮ್ ವಿಧಿಸಿಲ್ಲ. ಮಾತ್ರವಲ್ಲ ಇಮಾಮ್ ಮಾಲಿಕ್ ಹಾಗೂ ಮತ್ತಿತರ ವಿದ್ವಾಂಸರ ಪ್ರಕಾರ ದೌರ್ಜನ್ಯಕ್ಕೊಳಗಾದ ಯುವತಿಯ ವಿವಾಹದ ಸಂದರ್ಭದಲ್ಲಿ ಸಾಮಾನ್ಯವಾಗಿ ಆಯಾ ಊರಲ್ಲಿ ಪ್ರಚಲಿತವಿರುವ ಮಹರ್ (ವಧುದಕ್ಷಿಣೆ) ಅಪರಾಧಿಯಿಂದ ಪಡೆದು ಅವಳಿಗೆ ನೀಡಲು ನ್ಯಾಯಾಲಯಕ್ಕೆ ಹಕ್ಕಿದೆ.

ಆದರೆ ಒಂದು ಇಸ್ಲಾಮೀ ರಾಷ್ಟ್ರದಲ್ಲಿ ವ್ಯಭಿಚಾರದ ಆರೋಪವು ತ್ವರಿತವಾಗಿ ಸಾಬೀತಾಗದು. ಆರೋಪಿಯು ಸ್ವತಃ ತಪ್ಪೊಪ್ಪಿಕೊಳ್ಳದಿದ್ದರೆ ಘಟನೆಯನ್ನು ಕಣ್ಣಾರೆ ಕಂಡ ನಾಲ್ಕು ದೃಕ್ಸಾಕ್ಷಿಗಳು ಪುರಾವೆ ಒದಗಿಸಬೇಕು. ಇದು ತೀರಾ ಅಪರೂಪವಾಗಿ ನಡೆಯುವ ಸಂಭವ. ಇಲ್ಲದಿದ್ದರೆ ಆರೋಪಿಯು ಅಷ್ಟೇ ಅಧಮನಾಗಿರಬೇಕು. ಅಷ್ಟೇ ಅಲ್ಲ ಉಭಯ ಸಮ್ಮತಿಯೊಂದಿಗೆ ನಡೆಯುವ ವ್ಯಭಿಚಾರದಂತಲ್ಲ ಅತ್ಯಾಚಾರವೆಂಬ ದೌರ್ಜನ್ಯಗಳು. ಅದಕ್ಕಾಗಿ ಹೆದರಿಸಿ ಬೆದರಿಸಿ ಅಪಹರಣಗೈಯ್ಯುವುದನ್ನು ದರೋಡೆ, ಕೊಳ್ಳೆ ಹೊಡೆಯುವಂತಹ ಪಾಪದ ಸಾಲಿನಲ್ಲಿ ಸೇರಿಸಬೇಕೆಂದು ಮಕ್ಕಾದ ಉನ್ನತ ವಿದ್ವಾಂಸರ ಸಮಿತಿಯು ಅಭಿಪ್ರಾಯ ಪಟ್ಟಿದೆ. ಇಲ್ಲಿ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಆರೋಪ ಸಾಬೀತು ಮಾಡಲು ಎರಡು ಸಾಕ್ಷಿದಾರರು ಸಾಕಾಗುವುದು. ಸಂದರ್ಭಾನುಸಾರವಾದ ಪುರಾವೆಗಳಿದ್ದರೆ ಸಾಕು. ಇಂತಹ ಸಂದರ್ಭದಲ್ಲಿ ಅಪರಾಧಿಯನ್ನು ವಧಿಸುವುದು, ಶಿಲುಬೆಯೇರಿಸುವುದು ಅಥವಾ ಅವರ ಕೈಯನ್ನೂ ಕಾಲನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವುದು ಅಥವಾ ಅವರನ್ನು ಗಡಿಪಾರು ಮಾಡುವುದು ಆಗಿರುತ್ತದೆ. (ಅಲ್ ಮಾಇದ: 33) ಇದರಲ್ಲಿ ಯಾವುದು ಬೇಕೆಂಬುದನ್ನು ಅಪರಾಧದ ಪ್ರಮಾಣವಾಧರಿಸಿ ನ್ಯಾಯಾಲಯವು ತೀರ್ಮಾನಿಸುವುದು.

ಇಂತಹ ಕಠಿಣ ಶಿಕ್ಷೆಗಳು ಅಪರಾಧ ಚಟುವಟಿಕೆಗಳು ಕಡಿಮೆಯಾಗಲು ಮುಖ್ಯ ಕಾರಣವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಆದ್ದರಿಂದ ಸಾಮಾನ್ಯವಾಗಿ ಇಸ್ಲಾಮೀ ಶಿಕ್ಷಾ ವಿಧಿಗಳು ಕ್ರೂರವಾಗಿದೆ ಎಂದು ಆಕ್ಷೇಪಿಸುವವರು ಕೂಡಾ ಇಂತಹ ಪರಿಸ್ಥಿತಿ ಉದ್ಭವವಾದಾಗ ಆರೋಪಿಗಳಿಗೆ ಇಂತಹ ಶಿಕ್ಷೆ ನೀಡಬೇಕೆಂದು ಹೇಳುತ್ತಾರೆ. ವಾಸ್ತವದಲ್ಲಿ ಕಠಿಣವಾದ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಎಲ್ಲರ ಮನಸ್ಸೂ ಬಯಸುತ್ತದೆ.

ಅಧಾರ್ಮಿಕತೆ ಮತ್ತು ಹಕ್ಕು ಚ್ಯುತಿಯ ಕುರಿತು ಪಾಶ್ಚಾತ್ಯರಿಗೆ ಹೋಲಿಸಿದರೆ ನಮ್ಮಲ್ಲೇನೂ ಹೆಚ್ಚಿಲ್ಲ. ಆದರೆ ಅಭಿವೃದ್ದಿಯ ಹೆಸರಲ್ಲಿ ಅವರನ್ನು ಇಂಚಿಂಚೂ ಅನುಸರಿಸುತ್ತಿರುವ ನಾವು ಅದರಿಂದ ಪ್ರಯೋಜನ ಪಡೆಯುವಂತೆ ಅದರ ದುಷ್ಪರಿಣಾಮಗಳನ್ನೂ ಅನುಭವಿಸಲೇಬೇಕು. ಸಾಮಾಜಿಕ ಸಂಸ್ಕರಣೆಗಾಗಿ ಇಸ್ಲಾಮ್ ಕೆಲ ಶಿಕ್ಷಾ ವಿಧಿಗಳನ್ನು ನಿಶ್ಚಯಿಸಿ ಸುಮ್ಮನಿರುವುದಲ್ಲ. ಶಿಕ್ಷಾ ವಿಧಿ ನಿರ್ಣಯಗಳು ಕೊನೆಯದ್ದಾಗಿದೆ.

ಕೇವಲ ಕಾನೂನುಗಳಿಂದ ಮಾತ್ರ ಒಂದು ಸಮುದಾಯವನ್ನು ಒಂದು ಸಮಾಜವನ್ನು ಅಭಿವೃದ್ಧಿ ಪಡಿಸಬಹುದೆಂದು ಇಸ್ಲಾಮ್ ಭಾವಿಸುವುದಿಲ್ಲ. ಧಾರ್ಮಿಕವಾದ ಚೌಕಟ್ಟಿನೊಂದಿಗೆ ಸಮಾಜವನ್ನು ಸುಭದ್ರವಾದ ಸ್ಥಿತಿಗೆ ತರಲು ಅಗತ್ಯವಾದ ಇನ್ನೂ ಅನೇಕ ನಿರ್ದೇಶನಗಳನ್ನು ಅದಕ್ಕೆ ಸಮರ್ಪಿಸಲಿಕ್ಕಿದೆ. ಇತಿಹಾಸದಲ್ಲಿ ಒಮ್ಮೆ ಅದು ಪ್ರಾಯೋಗಿಕವಾಗಿದ್ದರೆ ಇನ್ನೂ ಅದು ಪ್ರಾಯೋಗಿಕವಾಗದು ಎಂದು ಹೇಳುವುದರಲ್ಲಿ ನ್ಯಾಯವಿಲ್ಲ. ಆದ್ದರಿಂದ ಜಗತ್ತು ಈಗಲೇ ಅದಕ್ಕೆ ಕಿವಿ ನಿಮಿರಿಸಿ ನಿಂತಿದೆ ಎಂಬುದನ್ನು ಇತ್ತೀಚಿನ ಜಗತ್ತಿನ ಆಗು-ಹೋಗುಗಳನ್ನು ಗಮನಿಸಿದಾಗ ತಿಳಿಯಬಹುದು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *