ರಮಝಾನಿನಲ್ಲಿ ಪತಿ-ಪತ್ನಿಯರ ಸಂಬಂಧ

ಪ್ರಶ್ನೆ: ಕೆಲವು ಮಹಿಳೆಯರು ರಮಝಾನ್ ತಿಂಗಳಲ್ಲಿ ತಮ್ಮ ಪತಿಯಂದಿರ ಹತ್ತಿರ ಸುಳಿಯುವುದು ನಿಷಿದ್ಧವೆಂಬಷ್ಟರ ಮಟ್ಟಿಗೆ ಅವರಿಂದ ದೂರವಿರುತ್ತಾರೆಂದು ಕೇಳಿದ್ದೇನೆ. ಆದರೆ ಪ್ರವಾದಿ(ಸ) ತಮ್ಮ ಪತ್ನಿಯರೊಂದಿಗೆ ಉಪವಾಸದಲ್ಲಿರುವಾಗ ಮಲಗುತ್ತಿದ್ದರು. ಮುತ್ತಿಡುತ್ತಿದ್ದರು. ಸ್ಪರ್ಶಿಸುತ್ತಿದ್ದರು ಎಂದು ಹದೀಸ್‍ನಲ್ಲಿದೆ. ಹಾಗಿರುವಾಗ ಮೇಲೆ ವಿವರಿಸಿರುವಂತಹ ಸ್ತ್ರೀಯರ ಬಗ್ಗೆ ಅಭಿಪ್ರಾಯವೇನು?

ಉತ್ತರ: ರಮಝಾನಿನಲ್ಲಿ ಆದಷ್ಟು ಹೆಚ್ಚು ಪುಣ್ಯ ಗಳಿಕೆಯ ಆಸಕ್ತಿಯಲ್ಲಿರುವಾಗ ಪತಿಯಂದಿರನ್ನು ಹಚ್ಚಿಕೊಳ್ಳಬಾರದೆಂಬ ಭಾವನೆ ಮಹಿಳೆಯರಲ್ಲಿರಬಹುದು. ಪತ್ನಿಯ ಜೊತೆ ಮಾತಾಡುವುದು, ಸ್ಪರ್ಶಿಸುವುದು, ಚುಂಬಿಸುವುದು ಇತ್ಯಾದಿಗಳಿಂದ ಭಾವನೆಗಳು, ಲೈಂಗಿಕ ವಾಂಛೆಗಳು ಕೆರಳುತ್ತದೆಯೆಂಬುದರಲ್ಲಿ ಸಂಶಯವಿಲ್ಲ. ಆದರೆ ಸಂಸರ್ಗದ ಹೊರತು ಇತರೆಲ್ಲ ಕ್ರಿಯೆಗಳಿಗೆ ಶರೀಅತ್‍ನಲ್ಲಿ ಅನುಮತಿಯಿದೆ. ಪ್ರವಾದಿ(ಸ) ಸ್ವತಃ ಅದನ್ನು ಮಾಡಿ ತೋರಿಸಿದ್ದಾರೆ. ಆಯಿಶಾ(ರ) ಹೇಳುತ್ತಾರೆ: ಪ್ರವಾದಿ(ಸ) ಉಪವಾಸದ ಸ್ಥಿತಿಯಲ್ಲಿ ಪತ್ನಿಯರೊಂದಿಗೆ ಒಡನಾಡುತ್ತಿದ್ದರು. ಪ್ರವಾದಿ(ಸ) ಎಲ್ಲರಿಗಿಂತಲೂ ಹೆಚ್ಚು ತಮ್ಮ ವಿಷಯಾಸಕ್ತಿಗಳ ಮೇಲೆ ನಿಯಂತ್ರಣವಿರುವರಾಗಿದ್ದರು. (ಮುತ್ತಫಕ್ ಅಲೈಹಿ)

ಉಪವಾಸದ ಸ್ಥಿತಿಯಲ್ಲಿ ಸಂಸರ್ಗದ ಹೊರತಾದ ಎಲ್ಲ ರತಿ ಕ್ರೀಡೆಗಳಲ್ಲೂ ಏರ್ಪಡಬಹುದೆಂದು ಮೇಲಿನ ಹದೀಸ್‍ನಿಂದ ತಿಳಿದು ಬರುತ್ತದೆ. ಇದು ಅದರ ಮೂಲ ನಿಯಮವಾಗಿದೆ. ಆದರೆ ಮುಂದೆ ಆಯಿಶಾರವರೇ ಸ್ಪಷ್ಟಪಡಿಸಿರುವಂತೆ, ಈ ಅನುಮತಿಯು ತನ್ನನ್ನು ತಾನೇ ನಿಯಂತ್ರಿಸಿಕೊಂಡಿರುವವನಿಗೆ ಅನ್ವಯವಾಗುತ್ತದೆ. ಆದರೆ ಯಾರು ಈ ವಿಷಯದಲ್ಲಿ ದೌರ್ಬಲ್ಯ ಹೊಂದಿರುತ್ತಾರೋ ಅವರು ಇದರಿಂದ ಪ್ರಯೋಜನ ಪಡೆಯುವುದರಿಂದ ದೂರವಿರಬೇಕು.

ಅನುಮತಿ ಎಲ್ಲರಿಗೂ ಇದೆಯಾದರೂ ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದವನು ಲೈಂಗಿಕ ಭಾವನೆಯು ಅತಿರೇಕಕ್ಕೆ ಸಾಗಿ ಸಂಸರ್ಗದಲ್ಲೇರ್ಪಡಲೂಬಹುದು. ಆಗ ಅದರ ಕಠಿಣ ಪರಿಣಾಮವನ್ನೆದುರಿಸಬೇಕಾಗುತ್ತದೆ. ಅದಕ್ಕೆ ಪ್ರಾಯಶ್ಚಿತ್ತವಾಗಿ ಎರಡು ತಿಂಗಳ ಕಾಲ ನಿರಂತರ ಎಡೆಬಿಡದೆ ಉಪವಾಸ ಆಚರಿಸಬೇಕಾಗುವುದು ಅಥವಾ 60 ಮಂದಿ ದರಿದ್ರರಿಗೆ ಎರಡು ಹೊತ್ತಿನ ಊಟ ಕೊಡಬೇಕಾಗುವುದು.

ಇದರ ಇನ್ನಷ್ಟು ಸ್ಪಷ್ಟೀಕರಣ ಈ ಕೆಳಗಿನ ಹದೀಸ್‍ನಲ್ಲಿದೆ. ಅಬೂಹುರೈರಾ ವರದಿ ಮಾಡುತ್ತಾರೆ- ಒಬ್ಬ ವ್ಯಕ್ತಿ ಪ್ರವಾದಿಯವರ(ಸ) ಬಳಿ ಬಂದು ತನ್ನ ಪತಿಯೊಂದಿಗೆ ಒಡನಾಟಕ್ಕೆ ಅನುಮತಿ ಕೇಳಿದರು. ಪ್ರವಾದಿ(ಸ), ಅವರಿಗೆ ಅನುಮತಿ ನೀಡಿದರು. ಇನ್ನೊಬ್ಬ ವ್ಯಕ್ತಿ ಇದೇ ಪ್ರಶ್ನೆಯೊಂದಿಗೆ ಅನುಮತಿ ಕೇಳಿದಾಗ ಪ್ರವಾದಿಯವರು(ಸ) ಅವರಿಗೆ ಅನುಮತಿ ನೀಡಲಿಲ್ಲ. ಪ್ರವಾದಿ(ಸ) ಅನುಮತಿ ನೀಡಿದ ವ್ಯಕ್ತಿ ಮುದಿ ಪ್ರಾಯದವರಾಗಿದ್ದರು. ಅನುಮತಿ ನಿರಾಕರಿಸಿದ ವ್ಯಕ್ತಿ ಯುವ ಪ್ರಾಯದವರಾಗಿದ್ದರು. (ಅಬೂದಾವೂದ್)

ಆದ್ದರಿಂದ ಅಂತಹ ಕ್ರಿಯೆಯಲ್ಲೇರ್ಪಟ್ಟು, ಆತ್ಮ ನಿಯಂತ್ರಣ ತಪ್ಪಿ ಲೈಂಗಿಕ ಭಾವನೆಗಳಿಗೆ ಸಿಲುಕಿ ಪತ್ನಿಯೊಂದಿಗೆ ಸೇರುವ ಅಪಾಯವಿರುವುದರಿಂದ ಅಂತಹ ಭಾವನೆಗಳಿಗೇ ಕಡಿವಾಣ ಹಾಕುವುದು ಒಳ್ಳೆಯದು. ವಿಶೇಷವಾಗಿ ಯುವಕ-ಯುವತಿಯರು ಇದನ್ನು ಗಮನಿಸಬೇಕು. ರಮಝಾನಿನ ಉಪವಾಸದ ಉದ್ದೇಶವೇ ಆತ್ಮ ನಿಯಂತ್ರಣವಲ್ಲವೇ? ಅದಕ್ಕೆ ಕೊಡಲಿಯೇಟು ಬೀಳುವುದಾದರೆ ಅಂತಹ ಕೆಲಸಗಳನ್ನು ತೊರೆಯುವುದೇ ಲೇಸಲ್ಲವೆ?

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *