ಮಕ್ಕಳಿಗೆ ಉಪವಾಸದ ಮೇಲೆ ಪ್ರೀತಿ ಹುಟ್ಟಿಸುವುದು ಹೇಗೆ?

@ ಮರ್ಯಮ್ ಶಹೀರಾ

ಒಮ್ಮೆ ತಾಯಿಯೊಂದಿಗೆ ಮಗ ಕೇಳಿದ, ನಾವು ಯಾಕೆ ಉಪವಾಸ ಆಚರಿಸುತ್ತೇವೆ? ಅದಕ್ಕೆ ತಾಯಿ ಉತ್ತರಿಸುತ್ತಾ, “ಬಡವರ ಮೇಲೆ ಕರುಣೆ ತೋರಲು ಮತ್ತು ಅವರ ಸಂಕಷ್ಟಗಳನ್ನು ತಿಳಿಯಲು” ಎಂದು ಹೇಳಿದರು. ಆಗ ಮಗ: “ಆದರೆ… ಕೇವಲ ಹದಿನೈದು ಗಂಟೆಗಳ ಕಾಲ ಮಾತ್ರ ನಾವು ಹಸಿವು ದಾಹವನ್ನು ಸಹಿಸಿಕೊಳ್ಳುತ್ತೇವೆ. ಕಠಿಣ ಸೆಖೆಗಾಲದಲ್ಲಂತೂ ನಾಲ್ಕೈದು ಗಂಟೆಗಳಲ್ಲಿ ಇದರ ಅನುಭವವಾಗುತ್ತದಲ್ಲವೇ?

ದಾನ ಧರ್ಮ, ಇನ್ನಿತರ ಕಾರ್ಯಗಳ ಮೂಲಕ ಅವರಿಗೆ ನಾವು ಸಹಾಯ ಮಾಡುತ್ತೇವೆ. ಅವರ ಸಂಕಷ್ಟವನ್ನು ತಿಳಿಯಲು ಉಪವಾಸ ಯಾಕೆ? ತಾಯಿ: “ವ್ರತವು ದೈಹಿಕ ಶಕ್ತಿಯನ್ನೊದಗಿಸುತ್ತದೆ.” ಮಗ: “ಈಜುವುದರಿಂದ ಮತ್ತು ದಿನಾ ಆಟೋಟಗಳಲ್ಲಿ ನಿರತನಾಗಿರುವ ನನಗೆ ಅದು ಧಾರಾಳ ಸಾಕು.

ಇನ್ನು ನಾನೇಕೆ ಉಪವಾಸ ಆಚರಿಸಬೇಕು?” ತಾಯಿ: “ಉಪವಾಸವು ಒಂದು ಚಿಕಿತ್ಸೆಯಾಗಿದೆ. ವರ್ಷದಲ್ಲಿ ಒಂದು ಬಾರಿಯಾದರೂ ನಮ್ಮ ಜಠರವನ್ನು ಶುದ್ಧೀಕರಿಸಬೇಕಾಗಿದೆ.” ಮಗ: “ಡಯಟಿಂಗ್ ಮತ್ತು ಆರೋಗ್ಯಪೂರ್ಣ ಆಹಾರ ಸೇವನೆಯಿಂದ ಆ ಉದ್ದೇಶವನ್ನು ಈಡೇರಿಸಬಹುದು.

” ತಾಯಿ: “ಉಪವಾಸದ ಮೂಲಕ ನೀನು ತಾಳ್ಮೆಯಿರುವವನಾಗುತ್ತಿ” ಎಂದು ತಾಯಿ ಹೇಳಿ ನಿಲ್ಲಿಸುವುದಕ್ಕಿಂತ ಮುಂಚಿತವಾಗಿ ಮಗ: “ವ್ಯಾಯಾಮದ ಮೂಲಕ ನಾನು ಅಗತ್ಯವಾದ ಸಹನೆಯನ್ನು ಗಳಿಸುತ್ತೇನೆ.” ತಾಯಿಗೆ ನಂತರ ಉತ್ತರ ಇರಲಿಲ್ಲ. ಕಾರಣ ಆ ತಾಯಿಗೆ ಚಿಕ್ಕಂದಿನಲ್ಲಿ ಉಪವಾಸ ವ್ರತ ಎಂದರೆ ಇದೇ ಎಂಬುದಾಗಿ ಕಲಿಸಲಾಗಿತ್ತು.

ಹಾಗೆಯೇ ಆ ತಾಯಿ ಒಮ್ಮೆ ಒಬ್ಬ ಕೌನ್ಸಿಲರ್ ಬಳಿಗೆ ಹೋದಾಗ ಮಗನ ಇಂತಹ ಪ್ರಶ್ನೆಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಆಗ ಕೌನ್ಸಿಲರ್: “ನೀವು ಇದುವರೆಗೆ ಉಪವಾಸದ ಮೂಲಭೂತ ಉದ್ದೇಶವನ್ನು ಹೇಳಲಿಲ್ಲ” ಎಂದು ಹೇಳಿದರು. ಆ ತಾಯಿ: “ಅದು ಯಾವುದು?” ಎಂದು ಕೇಳಿದರು. ಕೌನ್ಸಿಲರ್: “ಲಅಲ್ಲಕುಮ್‍ತತ್ತಕೂನ್” ಎಂದು ಉತ್ತರಿಸಿದರು.

ಎಲ್ಲ ಆರಾಧನಾ ಕರ್ಮಗಳ ಗುರಿ ತಕ್ವಾ ಆಗಿದೆ. ತಕ್ವಾ ಗಳಿಸುವುದರ ಮೂಲಕ ಸತ್ಯವಿಶ್ವಾಸಿಯು ಇಚ್ಛಾ ಶಕ್ತಿಯನ್ನು ಗಳಿಸುತ್ತಾನೆ. ವ್ರತವು ಮಾನವನಿಗೆ ಇಚ್ಛಾಶಕ್ತಿಯನ್ನು ಕಲಿಸಿ ಕೊಡುತ್ತದೆ. ಆಗ ಅವನು ಸ್ವತಂತ್ರನಾಗುತ್ತಾನೆ. ಸ್ವತಂತ್ರನನ್ನು ಅಧೀನಗೊಳಿಸಲು ಯಾರಿಗೂ ಅಸಾಧ್ಯವಾಗುವಂತೆ, ಭಾವನೆಗಳಿಗಾಗಲಿ, ದೇಹೇಚ್ಛೆಗಳಿಗಾಗಲಿ ಅವನನ್ನು ಗುಲಾಮನನ್ನಾಗಿಸಲು ಸಾಧ್ಯವಿಲ್ಲ. ಆ ಮೂಲಕ ಅವನು ತನ್ನ ಆತ್ಮದ ಒಡೆಯನಾಗುತ್ತಾನೆ.

ಆಗ ತಾಯಿ, “ಇಚ್ಛಾಶಕ್ತಿ ಎಂದರೇನು?” ಎಂದು ಕೇಳುತ್ತಾರೆ. ಕೌನ್ಸಿಲರ್: “ಇಚ್ಛಾ ಶಕ್ತಿ ಇರುವವನು ಒಂದು ತೀರ್ಮಾನ ತೆಗೆದರೆ ಅದರಲ್ಲಿ ವಿಜಯ ಪ್ರಾಪ್ತಿಯಾಗುವವರೆಗೆ ಅದರಿಂದ ಹಿಂಜರಿಯಲಾರ. ಅಂತಹವರಿಗೆ ಮಾತ್ರ ಪರಿಶ್ರಮ ಶಾಲಿ ಮತ್ತು ಸಹನಶೀಲರಾಗಲು ಸಾಧ್ಯ. ಆದಮ್(ಅ)ರಿಗೆ ಮರದ ಹತ್ತಿರ ಹೋಗಬಾರದೆಂದು ಅಲ್ಲಾಹನು ಅಪ್ಪಣೆ ಕೊಟ್ಟಿದ್ದನು. ಆದರೆ ಆದಮ್(ಅ) ಶೈತಾನನ ಬಲೆಗೆ ಬಲಿಯಾದರು. ಅದರ ಬಗ್ಗೆ ಕುರ್‍ಆನ್ ಹೇಳುತ್ತದೆ: “ನಾವು ಇದಕ್ಕೆ ಮುಂಚೆ ಆದಮರಿಗೊಂದು ಅಪ್ಪಣೆ ಕೊಟ್ಟಿದ್ದೆವು. ಆದರೆ ಅವರು ಮರೆತು ಬಿಟ್ಟರು ಮತ್ತು ನಾವು ಅವರಲ್ಲಿ ಸ್ಥಿರಚಿತ್ತವನ್ನು ಕಾಣಲಿಲ್ಲ.” (ತಾಹಾ: 115)

ರಮಝಾನಿನಲ್ಲಿ ವಿಶ್ವಾಸಿಯು ಆಹಾರ, ಪಾನೀಯ, ನಿದ್ರೆ ಇತ್ಯಾದಿ ಎಲ್ಲ ದೈನಂದಿನ ಕಾರ್ಯಗಳ ಸಂಪೂರ್ಣ ಬದಲಾವಣೆಗೆ ತನ್ನನ್ನು ವಿಧೇಯಗೊಳಿಸುತ್ತಾನೆ. ಹಾಗೆ ಉಪವಾಸಿಗ ತನ್ನ ನಿತ್ಯ ರೂಢಿಗಳಿಂದ ದೂರ ಸರಿದು ಆತ್ಮದೊಂದಿಗೆ ನಿರಂತರ ಹೋರಾಟಕ್ಕಿಳಿಯುತ್ತಾನೆ. ಹೀಗೆಯೇ ದಿನ ರಾತ್ರೆಗಳನ್ನು ಕಳೆಯುತ್ತಾನೆ. ಈ ಹೋರಾಟದಲ್ಲಿ ವಿಜಯ ಪ್ರಾಪ್ತಿಯಾದಾಗ ಉಪವಾಸಿಗ ಯಾವುದೇ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡುವ ಮೂಲಕ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಗಳಿಸುತ್ತಾನೆ. ಕಾರಣ ಮೂವತ್ತು ದಿನಗಳ ಆ ದಿನಚರಿಯನ್ನು ಬದಲಾಯಿಸುವಲ್ಲಿ ಅವನು ವಿಜಯ ಸಾಧಿಸಿರುತ್ತಾನೆ. ಹೀಗೆ ದೇಹೇಚ್ಛೆಗಳನ್ನು ಅಧೀನಗೊಳಿಸಲು ಅವನಿಗೆ ಸಾಧ್ಯವಾಗುತ್ತದೆ.

ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿ ಗಳೇ! ಗತ ಪ್ರವಾದಿಗಳ ಮೇಲೆ ಉಪವಾಸ ವ್ರತ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯ ಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ. (ಕುರ್‍ಆನ್)

ಕೌನ್ಸಿಲರ್: ನೀವು ಮಗನೊಂದಿಗೆ ಹೇಳಿದ ವಿಚಾರಗಳೆಲ್ಲವೂ ಸರಿ. ಆದರೆ ಅದರ ಮುಖ್ಯ ಗುರಿ ತಕ್ವಾ ಆಗಿದೆ. ತಕ್ವಾ ಅವನನ್ನು ಕೆಡುಕಿನಿಂದ ರಕ್ಷಿಸಿ ಒಳಿತಿನಲ್ಲಿ ಸ್ಥಿರವಾಗಿರಲು ಪ್ರೇರೇಪಿಸುತ್ತದೆ. ಹೀಗೆ ಅವನು ಪಿಶಾಚಿಯಿಂದ ದೂರವಾಗಿ ಅಲ್ಲಾಹನಿಗೆ ನಿಕಟನಾಗಿರುತ್ತಾನೆ ಎಂದು ಹೇಳಿದರು.

ಕೌನ್ಸಿಲರ್‍ಗಳು ಹೇಳುವಂತೆ, ಆತ್ಮ ವಿಶ್ವಾಸ ಹೆಚ್ಚಿಸಲು ಮೂರು ಮೆಟ್ಟಿಲುಗಳಿವೆ. ಒಂದನೆಯದು, ಅದನ್ನು ಗಳಿಸುವ ಗುರಿಯ ಬಗ್ಗೆ ಸ್ಪಷ್ಟವಾಗಿರಬೇಕು. ಎರಡನೆಯದಾಗಿ, ಯಾವುದೇ ಒತ್ತಡಗಳೂ ಅದರಿಂದ ಹಿಂಜರಿಯಲು ಕಾರಣವಾಗಬಾರದು. ಮೂರನೆಯದಾಗಿ, ಇಚ್ಛಾಶಕ್ತಿಯನ್ನು ನಿರಂತರ ಹರಿತಗೊಳಿಸುತ್ತಿರಬೇಕು. ಈ ಮೂರು ಅಂಶಗಳು ರಮಝಾನಿನಲ್ಲಿ ಕಾಣಲು ಸಾಧ್ಯವಿದೆ. ಹೀಗೆ ರಮಝಾನಿನಲ್ಲಿ ಪ್ರತಿದಿನ ವಿಶ್ವಾಸಿಗೆ ಆತ್ಮ ವಿಶ್ವಾಸ, ನಿಶ್ಚಯದಾಢ್ರ್ಯ ಶಕ್ತಿ-ಸಾಮರ್ಥ್ಯ ಹೆಚ್ಚುತ್ತಿರುವುದಾಗಿ ಅನುಭವವಾಗುತ್ತದೆ.

ಆದರೆ, ರಮಝಾನಿನಲ್ಲಿ ಮಾತ್ರ ಹಿಜಾಬ್ ಧರಿಸುವ, ಶಾಲಾ ಮಕ್ಕಳು, ಸ್ತ್ರೀಯರು ಮತ್ತು ಟೋಪಿ ಧರಿಸುವ ಪುರುಷರು, ರಮಝಾನಿನಲ್ಲಿ ಮಾತ್ರ ಐದು ಹೊತ್ತು ನಮಾಝ್ ಮಾಡುವ, ಕುರ್‍ಆನ್ ಪಾರಾಯಣ ಮಾಡುವ, ದಾನ-ಧರ್ಮಗಳನ್ನು ಮಾಡುವ ಸ್ತ್ರೀ-ಪುರುಷರನ್ನು ನಾವು ಕಾಣುತ್ತೇವೆ. ಒಂದು ದೊಡ್ಡ ಸಂಖ್ಯೆಯ ಮುಸ್ಲಿಮರು ಸಹಜ ಸ್ಥಿತಿಯಿಂದ ವ್ಯತಿರಿಕ್ತವಾಗಿ ರಮಝಾನಿನಲ್ಲಿ ಸತ್ಕರ್ಮಗಳನ್ನು ಮಾಡುತ್ತಾ, ರಮಝಾನ್ ಮುಗಿಯುವುದರೊಂದಿಗೆ ಎಲ್ಲವನ್ನೂ ಮುಗಿಸುತ್ತಾರೆ.

ಸೀಝನಲ್ ಆರಾಧನೆ ಎಲ್ಲ ವರ್ಷವೂ ರಮಝಾನ್ ಹತ್ತಿರವಾಗುವಾಗ ಮುಸ್ಲಿಮರ ಪರಸ್ಪರ ಚರ್ಚಾ ವಿಷಯವಾಗಿರುತ್ತದೆ. ರಮಝಾನಿನಲ್ಲಿ ನಿನ್ನ ದಿನಚರಿ ಏನು? ಆರಾಧನಾ ಕರ್ಮಗಳನ್ನು ಹೆಚ್ಚಿಸುವುದು ಹೇಗೆ? ಉತ್ತಮರಾಗಲು, ಹೆಚ್ಚೆಚ್ಚು ಪ್ರಾರ್ಥನಾ ನಿರತರಾಗಲು, ಕುರ್‍ಆನ್ ಪಾರಾಯಣ ಮಾಡಲು, ಪರದೂಷಣೆ, ಸುಳ್ಳು, ವಂಚನೆ ಇತ್ಯಾದಿಗಳಿಂದ ದೂರ ನಿಲ್ಲಲು ಎಲ್ಲ ರಮಝಾನ್ ಅವನನ್ನು ನಿರ್ಬಂಧಿಸುತ್ತದೆ. ರಮಝಾನಿನ ನಂತರ ಇದ್ಯಾವುದನ್ನು ನೆಲೆ ನಿಲ್ಲಿಸಲು ತಮ್ಮಿಂದ ಸಾಧ್ಯವಿಲ್ಲ ಎಂದು ತಿಳಿದು ಅತಿ ಹೆಚ್ಚು ಸತ್ಕರ್ಮ ಗಳನ್ನು ಮಾಡಿ ಶೇಖರಿಸಿಡಲು ಪರಿಶ್ರಮಿಸುವವರೇ ಧಾರಾಳ ಮಂದಿ. ಇದಕ್ಕೆ ಕಾರಣ ರಮಝಾನಿನ ನಂತರ ಕರ್ಮಗಳಿಗೆ ಪ್ರತಿಫಲ ಕಡಿಮೆಯೆಂಬುದು ಅವರ ಭಾವನೆ.

ರಮಝಾನಿನಲ್ಲಿ ಪುಣ್ಯಗಳಿಗೆ ಇತರೆಲ್ಲ ತಿಂಗಳುಗಳಿಗಿಂತ ಹೆಚ್ಚು ಪ್ರತಿಫಲವಿದೆಯೆಂಬುದು ನಿಜವೇ. ಆದರೆ ತಕ್ವಾ ಎಂಬುದು ಜೀವನದ ಅಂತ್ಯದ ವರೆಗೂ ಇರಬೇಕಾದ ಒಂದು ಅತ್ಯ ಮೂಲ್ಯ ಸೊತ್ತಾಗಿದೆ. ಅಲ್ಲಾಹನು ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಬೇಕಾದ ರೀತಿಯಲ್ಲೇ ಭಯಪಡಿರಿ. ನೀವು ಮುಸ್ಲಿಮರಾಗಿರುವ ಸ್ಥಿತಿಯಲ್ಲಿಯೇ ವಿನಾ ನಿಮಗೆ ಮರಣ ಬಾರದಿರಲಿ.” (ಅಲಿ ಇಮ್ರಾನ್: 102)

ಆದ್ದರಿಂದ ಅಲ್ಲಾಹನೊಂದಿಗೆ ಸಂಬಂಧವನ್ನು ಸ್ಥಾಪಿಸಲು ಈ ದಿನಗಳನ್ನು ಬಳಸಬೇಕಾಗಿದೆ. ಒಂದು ವೇಳೆ ರಮಝಾನಿನ ನಂತರವೂ ಅದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂಬುದರ ಅರ್ಥ ಅಲ್ಲಾಹನೊಂದಿಗೆ ಅವರ ಸಂಬಂಧಕ್ಕೆ ಅಷ್ಟೇನೂ ಬೆಲೆ ಇಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಅಲ್ಲಾಹನಿಗೆ ಬೇಕಾಗಿರುವುದು ಸತ್ಕರ್ಮಗಳ ಹೆಚ್ಚಳವಲ್ಲ. ಬದ ಲಾಗಿ, “ಸ್ಥಿರಚಿತ್ತತೆಯೊಂದಿಗೆ ನಿರಂತರವಾಗಿ ಮಾಡಲ್ಪಡುವ ಕರ್ಮವೇ ಅಲ್ಲಾಹನ ಬಳಿ ಅತ್ಯುತ್ತಮ ಕರ್ಮವಾಗಿದೆ. ಅದು ಕಡಿಮೆಯಾದರೂ ಸರಿಯೇ” ಎಂದು ಪ್ರವಾದಿಯವರು(ಸ) ಹೇಳಿರುವುದರ ಅರ್ಥ ಕೂಡಾ ಇದುವೇ ಆಗಿದೆ.

ಒಬ್ಬ ಕವಿ ಹಾಡಿದಂತೆ, “ನಿಷ್ಠೆಯ ಹುಚ್ಚು ಶಾಶ್ವತವಾಗಿರಬೇಕು. ಸ್ವಲ್ಪ ಸಮಯದ ತಲೆ ನೋವು ಏನೇನೂ ಅಲ್ಲ!”
ಖ್ಯಾತ ವಿದ್ವಾಂಸ ಇಂತಹ ತಾತ್ಕಾಲಿಕ ತಕ್ವಾವನ್ನು ಬಹಳ ಸುಂದರವಾಗಿ ಚಿತ್ರೀಕರಿಸಿದ್ದಾರೆ. “ಇವರು ಮನೆಯ ದೀಪವನ್ನು ಮಧ್ಯಭಾಗದಿಂದ ಸರಿಸಿ ಒಂದು ಮೂಲೆಯಲ್ಲಿ ಕೊಂಡು ಹೋಗಿ ಇಟ್ಟವರಂತೆ. ಅದರಿಂದ ದೀಪ ಇಟ್ಟ ಮೂಲೆಯಲ್ಲಿ ಒಳ್ಳೆಯ ಪ್ರಕಾಶ ಪಸರಿಸಬಹುದು. ಆದರೆ ಮನೆಯ ಇತರ ಭಾಗಗಳು ಆ ಮೂಲಕ ಅಂಧಕಾರಮಯವಾಗುತ್ತದೆ.

ಇನ್ನೊಬ್ಬ ದೀಪವನ್ನು ಮನೆಯ ಮಧ್ಯಭಾಗದಲ್ಲಿ ಇಡುತ್ತಾನೆ. ಮನೆಯ ಯಾವುದಾದರೂ ಮೂಲೆ ಹೆಚ್ಚು ಪ್ರಕಾಶಿತವಾಗಿರದಿದ್ದರೂ, ಮನೆಯ ಎಲ್ಲ ಭಾಗದಲ್ಲೂ ಬೆಳಕು ಆ ಮೂಲಕ ಸಂತುಲಿತವಾಗಿ ವ್ಯಾಪಿಸುತ್ತದೆ. ಆದ್ದರಿಂದ ತಕ್ವಾವನ್ನು ಶರೀರದ ಯಾವುದಾದರೊಂದು ಅವಯವಗಳಿಗೆ ಅಥವಾ ಸೀಝನಲ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ, ಜೀವನದ ಎಲ್ಲ ಕ್ಷೇತ್ರಗಳಿಗೂ ಸಂತುಲಿತವಾಗಿ ಪ್ರಕಾಶ ಪಸರಿಸುವಂತೆ ಅದನ್ನು ಹೃದಯದಲ್ಲಿ ಸ್ಥಾಪಿಸಬೇಕು. ಹೃದಯವನ್ನು ತಕ್ವಾದ ಕೇಂದ್ರವನ್ನಾಗಿ ಮಾಡಬೇಕು. ಆದ್ದರಿಂದಲೇ ಪ್ರವಾದಿ(ಸ) ಹೃದಯ ಮೇಲೆ ತನ್ನ ಕೈಗಳನ್ನಿಟ್ಟು `ತಕ್ವಾ ಇಲ್ಲಿದೆ’ ಎಂದು ಮೂರು ಬಾರಿ ಪುನರಾವರ್ತಿಸಿದ್ದರು.

ಹೃದಯ ಕೇಂದ್ರ ಬಿಂದುವಾಗಿರುವ ಈ ತಕ್ವಾ ಮಾನವನ ಜೀವನದ ಎಲ್ಲ ಕ್ಷೇತ್ರಗಳನ್ನು ಒಂದೇ ರೀತಿಯಲ್ಲಿ ಬೆಳಗಿಸುತ್ತದೆ. ಜೀವನದ ಎಲ್ಲ ವ್ಯವಹಾರಗಳನ್ನು ಅಲ್ಲಾಹನ ಪರಿಧಿಯಲ್ಲಿ ಸಂತುಲಿತವಾಗಿ ನೆಲೆಗೊಳಿಸುವುದು ಇಂತಹ ತಕ್ವಾ ಆಗಿದೆ. ಅಲ್ಲಾಹನ ಮೇರೆಯಿಂದ ಒಂದು ಹೆಜ್ಜೆ ಹಿಂದೆ-ಮುಂದೆ ಹೋಗಲು ಅದು ಕಾಲುಗಳನ್ನು ಅನುಮತಿಸಲಾರದು. ಚಿಂತಿಸಬೇಕಾದುದನ್ನು ಮಾತ್ರ ಚಿಂತಿಸಲು ಬುದ್ಧಿಯನ್ನು ನಿರ್ಬಂಧಿಸುತ್ತದೆ. ಅದು ಕಣ್ಣು ಕಿವಿಗಳಿಗೆ ನೋಡಬೇಕಾದುದನ್ನು ಮಾತ್ರ ನೋಡಲು, ಕೇಳಬೇಕಾದುದನ್ನು ಮಾತ್ರ ಕೇಳಲು ಅನುಮತಿಸುತ್ತದೆ. ಮಾತನಾಡುವುದಾದರೆ ಸತ್ಯವನ್ನು ಮಾತ್ರ ಹೇಳಲು ಅದು ನಾಲಗೆಯನ್ನು ಹತೋಟಿಯಲ್ಲಿಡುತ್ತದೆ. ಅಲ್ಲಾಹನು ಮಾನವನಿಗೆ ತೆರೆದುಕೊಟ್ಟ ಮಾರ್ಗದಲ್ಲಿ ಮಾತ್ರ ಸಂಚರಿಸಲು ಕೈ ಕಾಲುಗಳಿಗೆ ಅದು ಶಕ್ತಿಯನ್ನೊದಗಿಸುತ್ತದೆ. ನಿಷಿದ್ಧವಾದುದು ಶರೀರದಲ್ಲಿ ಹೋಗುವುದರಿಂದ ಹೊಟ್ಟೆಯನ್ನೂ ಅಪಾಯದಲ್ಲಿ ಬಿದ್ದು ಹೋಗುವುದರಿಂದ ಜನನೇಂದ್ರಿಯಗಳನ್ನೂ ಅದು ಸಂರಕ್ಷಿಸುತ್ತದೆ.

ಪ್ರವಾದಿ ಯವರು(ಸ) ಕಲಿಸಿದ ತಕ್ವಾ ಇದುವೇ ಆಗಿದೆ. ಇದು ಮಾನವ ಜೀವನಕ್ಕೆ ಮೆರುಗನ್ನು ನೀಡುತ್ತದೆ. ಇಂತಹ ತಕ್ವಾವನ್ನು ನಿರಂತರ ಪರಿಶೀಲನೆಯ ಮೂಲಕ ಜೀವನದುದ್ದಕ್ಕೂ ಪಾಲಿಸಲು, ಪ್ರಾಯೋಗಿಕ ತರಬೇತಿಯನ್ನು ನೀಡಿ ಒಂದು ತಿಂಗಳ ಉಪವಾಸ ವ್ರತವನ್ನು ಕಡ್ಡಾಯಗೊಳಿಸುವುದರ ಮೂಲಕ ಅಲ್ಲಾಹನು ಸತ್ಯವಿಶ್ವಾಸಿಗಳ ಮೇಲೆ ಅತಿ ದೊಡ್ಡ ಉಪಕಾರ ಮಾಡಿದ್ದಾನೆ.

ಅಲ್ಲಾಹನು ಹೇಳುತ್ತಾನೆ, “ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ ಇನ್ನೂ ಹೆಚ್ಚು ಪ್ರಧಾನ ಮಾಡುವೆನೆಂದೂ, ನೀವು ಕೃತಘ್ನತೆ ತೋರಿದರೆ ನನ್ನ ಶಿಕ್ಷೆಯು ಅತ್ಯಂತ ಕಠಿಣವಾಗಿದೆಯೆಂದೂ, ನಿಮ್ಮ ಪ್ರಭು ಎಚ್ಚರಿಕೆ ಕೊಟ್ಟುದನ್ನು ಸ್ಮರಿಸಿರಿ.” (ಕುರ್‍ಆನ್)

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *