Breaking News
Home / ಲೇಖನಗಳು / ಪ್ರವಾದಿಯನ್ನು ವಿಕೃತಗೊಳಿಸಿದ ‘ಅವರು’ರಾಮ್ ಪುನಿಯಾನಿ

ಪ್ರವಾದಿಯನ್ನು ವಿಕೃತಗೊಳಿಸಿದ ‘ಅವರು’ರಾಮ್ ಪುನಿಯಾನಿ

ಇದು ಭೂಮಿಯಲ್ಲಿ ಶಾಂತಿ ಸಂದೇಶವನ್ನು ಸಾರಿದ ಓರ್ವ ವಿಮೋಚಕನನ್ನು ಭಯೋತ್ಪಾದಕ ಧರ್ಮದ ಸ್ಥಾಪಕರೆಂದು ಪ್ರಚಾರ ಮಾಡುತ್ತಿರುವ ವಿರೋಧಾಭಾಸದ ಕಾಲವಾಗಿದೆ. ಈಗ ತೈಲ ಬಾವಿಗಳ ನಿಯಂತ್ರಣಕ್ಕಾಗಿ ಜಾಗತಿಕ ರಾಜಕೀಯದ ದುರಂತ ನಾಟಕಗಳು ನಡೆಯುತ್ತಿವೆ. ಅದಕ್ಕೆ ಸ್ವತಃ ಒಂದು ಭಾಷಾ ಪ್ರಯೋಗವಿದೆ. ಅದು ಇಸ್ಲಾಮನ್ನು ‘ಶೈತಾನ್’ ಎಂದು ಬಿಂಬಿಸುತ್ತಿದೆ. ಅದೇ ವೇಳೆ ಭಾರತದ “ಸಾಮಾನ್ಯ ಸಾರ್ವಜನಿಕ ಮನಸ್ಸು” ಏನು ಮಾಡುತ್ತಿದೆ? ಇಸ್ಲಾಮ್ ಶೈತಾನನ ಗ್ರಂಥ ಮತ್ತು ಮುಸ್ಲಿಮರು ಶೈತಾನರೆಂದು ಕೋಮು ರಾಜಕೀಯದ ಮೂಲಕ ಪ್ರಚಾರ ಮಾಡಲಾಯಿತು. ಹೀಗೆ ಇಸ್ಲಾಮ್ ಮತ್ತು ಮುಸ್ಲಿಮರ ಹೆಸರಲ್ಲಿ ಅನೇಕ ವೇಷಗಳನ್ನು ನಿರಂತರ ಪ್ರದರ್ಶಿಸಲಾಗುತ್ತಿದೆ.

ಮುಹಮ್ಮದ್‍ರು ಸೌದಿ ಅರೇಬಿಯದ ಮಕ್ಕಾದಲ್ಲಿ ಕ್ರಿ.ಶ. 570ರಲ್ಲಿ ಜನಿಸಿದರು. 40ನೇ ವಯಸ್ಸಿನಲ್ಲಿ ಅವರು ಬೋಧಿಸಲಾರಂಭಿಸಿದ ತತ್ವಗಳಲ್ಲಿ ಇಸ್ಲಾಮ್ ಧರ್ಮವು ಬೇರೂರಿತು. ಅವರ ಘೋಷಣೆಗಳು ಮತ್ತ್ತು ಶಿಕ್ಷಣಗಳು ಗೋತ್ರ ಸಮೂಹಗಳ ಹಿನ್ನೆಲೆಯನ್ನು ಹೊಂದಿತ್ತು. ಅದರಲ್ಲಿ ಪ್ರಾಚೀನ ಕಾನೂನು ಪ್ರಕಾರವಿರುವ ಮೌಲ್ಯಗಳ ಪ್ರಾಬಲ್ಯವಿತ್ತು. ಅವರ ಜೀವನದ ಧೋರಣೆಯು ಕಣ್ಣಿಗೆ ಕಣ್ಣು, ಕಡು ವೈರ ಹಾಗೂ ಸ್ತ್ರೀಯರ ಹಕ್ಕುಗಳನ್ನು ದಮನಿಸುವುದಾಗಿತ್ತು. ಪ್ರವಾದಿಯವರ ಬೋಧನೆಗಳು ಎಲ್ಲ ರಂಗಗಳಲ್ಲಿಯೂ ಸುಧಾರಣೆಯನ್ನು ತಂದಿತು. ಇದರಿಂದ ಕುಟುಂಬ, ಸಮಾಜ ಮತ್ತು ರಾಜಕೀಯದ ಸ್ವರೂಪವೇ ಭಿನ್ನವಾಯಿತು. ಪ್ರವಾದಿಯವರು ಉನ್ನತ ಮಾನವೀಯ ಮೌಲ್ಯಗಳನ್ನು ಘೋಷಿಸಿ ವೈಯಕ್ತಿಕ ಗುಣನಡತೆಗಳಲ್ಲಿ ಅದನ್ನು ಪ್ರತಿಬಿಂಬಿಸಿದರು.  ಹೀಗೆ ಅವರಿಗೆ ಸಮಾಜವನ್ನು ಆ ಶಿಕ್ಷಣಗಳ ಆಧಾರದಲ್ಲಿ ಸಕ್ರಿಯವಾಗಿ ಒಂದುಗೂಡಿಸಲು ಸಾಧ್ಯವಾಯಿತು.

ಅವರು ಬೋಧಿಸಿದ ಮೂಲ ಕಲ್ಪನೆಗಳಲ್ಲಿ ಅದ್ಲ್ (ನ್ಯಾಯ), ಇಹ್ಸಾನ್ (ಹಿತಾಕಾಂಕ್ಷೆ), ರಹ್ಮತ್ (ಕರುಣೆ), ಇತ್ಯಾದಿ ಹೆಚ್ಚು ಪ್ರಧಾನವಾಗಿವೆ. ಜಗಳದಿಂದ ಛಿನ್ನಭಿನ್ನವಾಗಿದ್ದ ಸಮೂಹದಲ್ಲಿ ಶಾಂತಿ ಸ್ಥಾಪಿಸುವುದೇ ಅದರ ಗುರಿಯಾಗಿತ್ತು. ಲೌಕಿಕ ಸಮಸ್ಯೆಗಳಿಗಾಗಿ ನಿರಂತರ ಕಾದಾಡುತ್ತಿದ್ದ ಗೋತ್ರಗಳು ಅನೇಕ ದೇವಂದಿರನ್ನು ಇರಿಸಿಕೊಂಡಿದ್ದುವು. ಈ ಸಂದರ್ಭದಲ್ಲಿ ಪ್ರವಾದಿಯವರು ಅವರೊಡನೆ ಕೇವಲ ಒಬ್ಬನೇ ದೇವನಿದ್ದಾನೆಂದು ಒತ್ತಿ ಹೇಳಿದರು. ಸಹೋದರತೆಯನ್ನು ಸಮಾಜದ ಲಾಂಛನಗೊಳಿಸಬೇಕೆಂದು ಬೋಧಿಸಿದರು. ಅಲ್ಲಾಹನಿಗೆ ಸಂಪೂರ್ಣ ಶರಣಾಗಿ ಶಾಂತಿ ಸ್ಥಾಪಿಸುವುದು ಹೇಗೆಂದು ಕಲಿಸಿದರು. ಎಲ್ಲರಿಗೂ ನ್ಯಾಯ; ಎಲ್ಲರಿಗೂ ಶಾಂತಿ; ಎಲ್ಲ ಕಲ್ಪನೆಗಳಲ್ಲಿಯೂ ಇವುಗಳೇ ಪ್ರಧಾನವಾಗಿದ್ದುವು. ಇದರಲ್ಲಿ ಸ್ತ್ರೀಯರನ್ನು ಹೊರತು ಪಡಿಸಿರಲಿಲ್ಲ. ಆದ್ದರಿಂದಲೇ ಅವರು ದೇವ ಸಂದೇಶವಾಹಕರಾದರು. ಅವರ ಕೃತ್ಯಗಳೆಲ್ಲವೂ ಓರ್ವ ಸಂದೇಶವಾಹಕನಿಂದ ಮಾತ್ರ ಸಾಧ್ಯವಿತ್ತು.

ಅಕ್ರಮ ಅನ್ಯಾಯಗಳ ವಿರುದ್ಧ ಹೋರಾಟಕ್ಕೆ ಅವರು ಕರೆ ನೀಡಿದರು. ಸಮಾಜದಲ್ಲಿ ಸಂಘರ್ಷಗಳಿಗೆ ಅಜ್ಞಾನವೇ ಕಾರಣವೆಂದು ಮನಗಂಡು ಎಲ್ಲರೂ ವಿದ್ಯೆ ಗಳಿಸಬೇಕೆಂದು ಆದೇಶಿಸಿದರು. ಆದ್ದರಿಂದ ಜ್ಞಾನಾರ್ಜನೆಯ ಮೂಲಕ ಸಾಮಾಜಿಕ ಉನ್ನತಿಗಾಗಿ ಹೋರಾಡಬೇಕು. ಅದು ಸ್ವಂತ ತಪ್ಪುಗಳ ವಿರುದ್ಧದ ಹೋರಾಟವಾಗಿದೆ; ಸಾಮಾಜಿಕ ಕೆಡುಕುಗಳ  ವಿರುದ್ಧದ ಹೋರಾಟವೂ ಆಗಿದೆ. ಹೀಗೆ ಕಾಫಿರ್ ಎಂಬ ಪದ ಹುಟ್ಟಿಕೊಂಡಿತು. ಅದು ಕುಫ್ರ್ ಎಂಬ ಧಾತುವಿನಿಂದ ಉತ್ಪತ್ತಿಯಾಗಿದೆ. ಅದರ ಅರ್ಥ, ಸತ್ಯವನ್ನು ಮರೆ ಮಾಚುವವರು ಎಂದಾಗಿದೆ. ಇಸ್ಲಾಮ್ ಸ್ವೀಕರಿಸುವವರನ್ನು ವಿರೋಧಿಸುವವರು ಸತ್ಯವನ್ನು ಮರೆ ಮಾಚುವರಾಗಿರುವುದರಿಂದ ಅವರನ್ನು ‘ಕಾಫಿರ್’ ಎಂದು ಕರೆಯಲಾಯಿತು.

ಪ್ರವಾದಿಗಳ ಬೋಧನೆಯನ್ನು ಮೈಗೂಡಿಸಿದ ನಿಮಿತ್ತ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು. ಆ ತತ್ವಾಧಾರಿತ ರಾಜಕೀಯ ವ್ಯವಸ್ಥೆಯು ಪ್ರಬಲವಾಗಿ ಹೆಚ್ಚು ಕಾಲ ಉಳಿಯಿತು. ಕಾಲ ಕ್ರಮೇಣ ಪ್ರವಾದಿಯವರ ಶಿಕ್ಷಣಗಳಿಗೆ ವಿವಿಧ ವ್ಯಾಖ್ಯಾನಗಳು ಬಂದುವು. ಇಸ್ಲಾಮಿನಲ್ಲಿ ಹಲವು ವಿಭಾಗಗಳಾದುವು. ಪ್ರತಿಯೊಂದು ವಿಭಾಗವೂ ನಾವು ಸರಿಯಾದ ರೀತಿಯಲ್ಲಿ ಪ್ರವಾದಿಯವರನ್ನು ಅನುಸರಿಸುತ್ತಿರುವುದಾಗಿ ವಾದಿಸಿದುವು. ಹೀಗೆ ಇಂದು ಇಸ್ಲಾಮಿಗೆ ಅನೇಕ ವ್ಯಾಖ್ಯೆಗಳಿವೆ. ಅವುಗಳಲ್ಲಿ ಕೆಲವು ಕಟ್ಟಾ ಸಂಪ್ರದಾಯವಾದಿ ಮತ್ತು ತೀವ್ರವಾದಿಗಳಾಗಿವೆ. ಕೆಲವು ಇದರಲ್ಲಿ ಸಡಿಲಿಕೆ ತೋರಿಸಿ ಕಾಲಕ್ಕೆ ತಕ್ಕಂತೆ ಸಾಗುತ್ತಿವೆ. ಪೂರ್ವಾಚಾರ ನಿರತ ವಿಭಾಗಗಳು, ವಿಶೇಷತಃ ಆಡಳಿತಗಾರರಿಗೆ ನಿಕಟವಾಗಿರುವ ವಿಭಾಗಗಳು ಇಸ್ಲಾಮಿಗೆ ಅತ್ಯಂತ ಸಾಂಪ್ರದಾಯಿಕ ಮತ್ತು ಕಟು ಭಾಷ್ಯವನ್ನು ನೀಡುತ್ತಿವೆ. ಹೀಗೆ ಅವರು ಅರಕ್ಷಿತಾಭಾವ ಅಧಿಕವಿರುವ ಸಮುದಾಯಗಳ ಮೇಲೆ ಅವುಗಳ ಅಧಿಕಾರವನ್ನು ಬಲಾತ್ಕಾರವಾಗಿ ಹೇರುತ್ತಿವೆ. ಹೀಗೆ ಇಂದು ಇಸ್ಲಾಮಿನ ಸಾಂಪ್ರದಾಯಿಕ ವ್ಯಾಖ್ಯೆಗಳನ್ನು, ಜಾಗತಿಕ ಇಸ್ಲಾಮಿನ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹಲವು ರೀತಿಯ ರಾಜಕೀಯ ಹಿತಾಸಕ್ತಿಗಳಿಂದ ಮುಸ್ಲಿಮರನ್ನು ಶೈತಾನರೆಂದು ವರ್ಣಿಸಲಾಗುತ್ತಿವೆ. ಪ್ರವಾದಿ ಮುಹಮ್ಮದ್‍ರ ಸಂದೇಶವು ಮಾನವ ಇತಿಹಾಸದಲ್ಲಿ ಒಂದು ಮಹತ್ವ ಪೂರ್ಣಗಡಿಯನ್ನು ಹಾಕಿವೆ. ಸ್ತ್ರೀಯರ ಬಗ್ಗೆ ಅನೇಕ ಸಮಸ್ಯೆ ಮತ್ತು ಆಶಂಕೆಗಳಿಗೆ ಒತ್ತು ನೀಡುವ ವಿಶಿಷ್ಠ ಮೌಲ್ಯ ಪ್ರಜ್ಞೆ. ನಿರಾಶ್ರಿತ ಬಡ ದುರ್ಬಲರನ್ನು ಕೈಹಿಡಿದು ಎತ್ತುವ ಇಸ್ಲಾಮಿನ ಕಳಕಳಿಯು ಅದನ್ನು ಧರ್ಮವಾಗಿ ಬಹಳ ಉನ್ನತಗೊಳಿಸುತ್ತದೆ.

ಇಂದು ರಾಜಕೀಯ ನಾಯಕರ ಸ್ವಾರ್ಥ ಹಿತಾಸಕ್ತಿಗಳ ಅತಿಕ್ರಮಣಗಳಿಂದ ಇಸ್ಲಾಮಿನ ಬಗ್ಗೆ ನಾನಾ ರೀತಿಯ  ದುರ್ಭಾವನೆಗಳನ್ನು ಉದ್ದೇಶಪೂರ್ವಕ ಪ್ರಚಾರ ಮಾಡಲಾಗುತ್ತಿವೆ. ಉದಾ: ಇಸ್ಲಾಮ್ ಖಡ್ಗದಿಂದ ಪ್ರಚಾರವಾದ ಧರ್ಮವೆಂಬ ತಪ್ಪುಕಲ್ಪನೆ. ವಸ್ತುತಃ ಭಾರತದಲ್ಲಿ ಹೆಚ್ಚಿನ ಜನರು ಜಾತಿ ಪದ್ಧತಿಯಿಂದ ಪಾರಾಗಲಿಕ್ಕಾಗಿಯೇ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದರು. ಧರ್ಮದ ವಿಷಯದಲ್ಲಿ ಯಾರನ್ನೂ ಬಲಾತ್ಕರಿಸಬಾರದೆಂದು ಇಸ್ಲಾಮ್ ಸ್ಪಷ್ಟವಾಗಿ ಆದೇಶಿಸಿದೆ. ‘ನಿಮಗೆ ನಿಮ್ಮ ಧರ್ಮ, ನಮಗೆ ನಮ್ಮ ಧರ್ಮ’ ಇದು ಇಸ್ಲಾಮಿನ ಧೋರಣೆಯಾಗಿದೆ.

ಮಹಿಳೆಯರೊಂದಿಗೆ ಇಸ್ಲಾಮಿನ ಧೋರಣೆಗಳ ಬಗ್ಗೆಯೂ  ತಪ್ಪು ತಿಳುವಳಿಕೆ ಮೂಡಿಸಲಾಗುತ್ತಿದೆ. ಮುಸ್ಲಿಮರು ಸ್ತ್ರೀಯರನ್ನು ಗುಲಾಮಗೊಳಿಸಿ ದಮನಿಸುತ್ತಿರುವರೆಂಬ ಆರೋಪ. ಕೋಮು ಗಲಭೆಗಳನ್ನು ಉದ್ರೇಕಿಸಿ ಅಲ್ಪಸಂಖ್ಯಾತರನ್ನು ಆಕ್ರಮಿಸುವವರಲ್ಲಿ ಈ ವಿಕಲ ಧೋರಣೆಯು ವ್ಯಾಪಕವಾಗಿ ಪ್ರಚಾರದಲ್ಲಿದೆ. ಹೀಗೆ ಮುಸ್ಲಿಮ್ ಮಹಿಳೆಯರ ಕುರಿತು ಹಲವು ರೀತಿಯ ಕುಪ್ರಚಾರಗಳನ್ನು ನಡೆಸುವವರಿದ್ದಾರೆ. ಅದೇ ವೇಳೆ ಮಹಿಳೆಯರು ಮನೆ ಬಿಟ್ಟು ಹೊರಗಿಳಿಯಬಾರದೆಂಬ ತಾಲಿಬಾನ್ ಗಳಂಥವರ ಧೋರಣೆಯೂ ಅದನ್ನು ದೃಢೀಕರಿಸುತ್ತಿದೆ. ವಸ್ತುತಃ ಪ್ರವಾದಿ ಮುಹಮ್ಮದ್‍ರು ಮಹಿಳೆಯರೊಂದಿಗೆ ಪ್ರೀತಿಯಿಂದ ಸೌಮ್ಯವಾಗಿ ವರ್ತಿಸಬೇಕೆಂದು ಬೋಧಿಸಿದ ಪ್ರಥಮ ಸಂದೇಶವಾಹಕರಾಗಿದ್ದರು. ಆ ಕಾಲದಲ್ಲಿ ರೂಢಿಯಲ್ಲಿದ್ದ ಸ್ಥಾನಮಾನಗಳಲ್ಲಿ  ಸ್ತ್ರೀಯರಿಗೆ ಉತ್ತಮವಾದುದನ್ನೇ ನೀಡಬೇಕೆಂದು ನಿಶ್ಚಯಿಸಿದ್ದರು.

ಬಹುಪತ್ನಿತ್ವ- (ಮುಸ್ಲಿಮರಿಗೆ ನಾಲ್ಕು ವಿವಾಹವಾಗಬಹುದು) ಕಲ್ಪನೆಯು ಹೆಚ್ಚು ತಪ್ಪು ತಿಳುವಳಿಕೆ ಮೂಡಿಸುವ ಇನ್ನೊಂದು ವಿಷಯವಾಗಿದೆ. ಗೋತ್ರಗಳು ಪರಸ್ಪರ ನಡೆಸುತ್ತಿದ್ದ ಯುದ್ಧಗಳಿಂದಾಗಿ ಸಮೂಹದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳು ಹೆಚ್ಚಿದ್ದ ಕಾಲದಲ್ಲಿ ಬಹುಪತ್ನಿತ್ವವನ್ನು ಪ್ರೋತ್ಸಾಹಿಸಲಾಯಿತು. ಅದಲ್ಲದೆ ಅಂದಿನ ಜಾಗೀರುದಾರಿ ಸಮಾಜದಲ್ಲಿ ಓರ್ವರಿಗೆ ಮಿತಿಯಿಲ್ಲದೆ ವಿವಾಹವಾಗಬಹುದಾಗಿತ್ತು. ಆದ್ದರಿಂದ ಸ್ತ್ರೀಯರ ಅಭಿಮಾನ ಸಂರಕ್ಷಣೆ ಮತ್ತು ಗೌರವಾರ್ಹ ಕುಟುಂಬ ಜೀವನದ ಖಾತ್ರಿಗಾಗಿ ಪತ್ನಿಯರ ಸಂಖ್ಯೆಯಲ್ಲಿ  ಹೆಚ್ಚಬಾರದೆಂದು ನಿಗದಿಪಡಿಸಲಾಯಿತು. ಅದರೊಂದಿಗೆ ಪ್ರತಿಯೋರ್ವ ಪತ್ನಿಯನ್ನು ಸಮಾನವಾಗಿ ನೋಡಿಕೊಳ್ಳಬೇಕೆಂದು ಆದೇಶಿಸಲಾಗಿದೆ. ಈ ವ್ಯವಸ್ಥೆಯು ಯಾವಾಗಲೂ ಮುಂದುವರಿಯಬೇಕೆಂದು ಬಯಸಿರಲಿಲ್ಲ. ಮುಸ್ಲಿಮ್ ಮಹಿಳೆಯರಿಗೆ ನಿರ್ಭೀತಿಯಿಂದ ಬಾಳಬಹುದಾದ ದೇಶಗಳಲ್ಲಿ ಬಹುಪತ್ನಿತ್ವವನ್ನು ತೀವ್ರವಾಗಿ ವಿಮರ್ಶಿಸಲಾಗುತ್ತಿದೆ.

ಅಮೆರಿಕದಲ್ಲಿ ಆಕ್ರಮಣ ನಡೆದ ಸೆಪ್ಟೆಂಬರ್ 11ರ ಬಳಿಕ ಪ್ರವಾದಿಯವರ ಶಿಕ್ಷಣಗಳನ್ನು ವಿದ್ವೇಷಕಾರಿಯಾಗಿ ವಿಕೃತಗೊಳಿಸಲಾಯಿತು. ಅನಂತರ ಇಸ್ಲಾಮೀ ಭಯೋತ್ಪಾದಕತೆಯ ಪಲ್ಲವಿಯನ್ನು ಎಲ್ಲರೂ ಹಾಡಲಾರಂಭಿಸಿದರು. ಭಯೋತ್ಪಾದಕ ಆಕ್ರಮಣವು ಅಪಾರ ಪ್ರಾಣಹಾನಿಯ ಕೃತ್ಯವಾಗಿದೆ. ವಸ್ತುತಃ ಕುರ್‍ಆನ್ ನಿರಪರಾಧಿಯ ಹತ್ಯೆಯು ಇಡೀ ಮಾನವ ಕುಲದ  ಹತ್ಯೆಗೆ ಸಮಾನವೆಂದು ಹೇಳಿದೆ.

ಮದರಸಗಳ ಮೂಲಕ ಅಲ್ಕಾಯಿದಾದ ಬೆಳವಣಿಗೆಗೆ ಅಮೇರಿಕ ಮತ್ತು ಅವರ ಬೆಂಬಲಿಗ ದೇಶಗಳು ಸಂಪೂರ್ಣ ಬೆಂಬಲ ನೀಡಿದ್ದುವು. ಹೀಗೆ ಅವರು ಆ ಆಟದ ಮೂಲಕ ಕಾಫಿರ್ ಮತ್ತು ಜಿಹಾದ್ ಪದ ಪ್ರಯೋಗವನ್ನೂ ವಿಕೃತಗೊಳಿಸಿದರು. ವಸ್ತುತಃ ಕುರ್‍ಆನ್ ಮತ್ತು ಪ್ರವಾದಿ ವಚನಗಳಲ್ಲಿ ಸತ್ಯವನ್ನು ಮರೆಮಾಚುವವರೇ ಕಾಫಿರರು. ಸಿಐಏಯ ಕುಮ್ಮಕ್ಕಿನಿಂದ ಬೆಳೆದ ಮದರಸಗಳು ಆ ಪದಕ್ಕೆ ಅಲ್ಲಾಹನಲ್ಲಿ  ವಿಶ್ವಾಸವಿರಿಸದವರೆಂಬ ಅರ್ಥದಲ್ಲಿ ಪ್ರಚಾರ ಮಾಡಿತು.

ಹಾಗೆಯೇ ಕೆಡುಕುಗಳ ವಿರುದ್ಧ ಹೋರಾಟವೆಂಬ ಅರ್ಥದಲ್ಲಿ ಉಪಯೋಗಿಸುವ ಜಿಹಾದ್ ಎಂಬ ಪದವನ್ನೂ ದುವ್ರ್ಯಾಖ್ಯಾನಿಸಲಾಯಿತು. ಜಿಹಾದ್ ಎಂದರೆ ಯುದ್ಧ ಮತ್ತು ಜನರ ಹತ್ಯೆಯೆಂದಾಯಿತು. ವಸ್ತುತಃ ಜಿಹಾದ್ ಎಂದರೆ ಹೋರಾಟವೇ ವಿನಾ ಯುದ್ಧವಲ್ಲ. ಸರ್ವ ವ್ಯಾಪೀ ಕೆಡುಕುಗಳ ವಿರುದ್ಧ ವೈಯ್ಯಕ್ತಿಕ ಅಥವಾ ಸಾಮೂಹಿಕ ಹೋರಾಟವಾಗಿದೆ. ಇಂದು ಅದನ್ನೇ ಮುಸ್ಲಿಮೇತರರನ್ನು ಕೊಲೆ ಮಾಡುವುದು ಎಂಬ ಅರ್ಥದಲ್ಲಿ ಪ್ರಚಾರ ಪಡಿಸಲಾಯಿತು. ಇದು ಸತ್ಯಕ್ಕೆ ಸುಳ್ಳಿನ ವೇಷ ತೊಡಿಸಿ ವಿಕೃತಗೊಳಿಸುವ ಉತ್ತಮ ಉದಾಹರಣೆಯಾಗಿದೆ.

ಶಾಂತಿಗಾಗಿ ಬಂದಿರುವ ಇಸ್ಲಾಮನ್ನು ಆಕ್ರಮಣಕಾರೀ ಪೈಶಾಚಿಕತೆಯೆಂದು ಬಿಂಬಿಸುವ ಕುಪ್ರಚಾರವು ಇತಿಹಾಸದ ಬಹುದೊಡ್ಡ ವಿರೋಧಾಭಾಸವಾಗಿದೆ. ಮುಹಮ್ಮದ್‍ರು ಒಂದು ಉನ್ನತ ಮಾನವೀಯತೆಗಾಗಿ ಶ್ರಮಿಸಿದ ಮಹಾ ಪುರುಷರಾಗಿದ್ದಾರೆ. ಅವರಂಥ ಪ್ರವಾದಿಗಳು ಮತ್ತು ಭಗವಾನ್ ಮಹಾವೀರ, ಗೌತಮ ಬುದ್ಧ, ಏಸುಕ್ರಿಸ್ತ, ಗುರು ನಾನಕರಂಥ ಇತರ ಮಹಾ ಪುರುಷರ ಶಿಕ್ಷಣಗಳು ಮಾನವೀಯ ಮೌಲ್ಯಗಳನ್ನು ಉನ್ನತಗೊಳಿಸಿದುವು. ಇಂದು ಜಾಗತಿಕ ಪರಿಸ್ಥಿತಿಯು ಸಂಪನ್ನವಾಗಬೇಕಾದರೆ ಪ್ರವಾದಿ ಮುಹಮ್ಮದ್‍ರ ಕುರಿತು ಸರಿಯಾದ  ತಿಳುವಳಿಕೆ ದೊರೆಯಬೇಕಾದುದು ಅನಿವಾರ್ಯವಾಗಿದೆ.

About editor

Check Also

ಸತ್ಯ ಸಂಧತೆ ಉತ್ತಮ ರೀತಿ, ನೀತಿ

ಅಬ್ದುಲ್ಲಾ ಇಬ್ನು ಮಸ್‍ಊದ್(ರ)ರಿಂದ ವರದಿಯಾಗಿದೆ ಪ್ರವಾದಿವರ್ಯರು(ಸ) ಹೇಳಿದರು. ನೀವು ಸತ್ಯವನ್ನು ಬಿಗಿ ಹಿಡಿಯಿರಿ. ಸತ್ಯ ನಿಮ್ಮನ್ನು ಪುಣ್ಯ ಮತ್ತು ಸ್ವರ್ಗಕ್ಕೆ …

Leave a Reply

Your email address will not be published. Required fields are marked *