Breaking News
Home / ಲೇಖನಗಳು / ಪ್ರವಾದಿ ಮುಹಮ್ಮದ್: ದಾರಿ ಮತ್ತು ದೀಪ – ಯು.ಕೆ. ಕುಮಾರ್

ಪ್ರವಾದಿ ಮುಹಮ್ಮದ್: ದಾರಿ ಮತ್ತು ದೀಪ – ಯು.ಕೆ. ಕುಮಾರ್

ಯು.ಕೆ. ಕುಮಾರ್

ಪ್ರವಾದಿ ಮುಹಮ್ಮದ್‍ರು ಜಗತ್ತಿನ ಅದ್ಭುತಗಳಲ್ಲೊಂದಾಗಿದ್ದಾರೆ. ಪವಿತ್ರ ಕುರ್‍ಆನ್‍ನಲ್ಲಿ ಹೇಳಿರುವಂತೆ ಮಾನವ ಕುಲಕ್ಕೆ ಸ್ಪಷ್ಟ ಬೆಳಕನ್ನು ಒದಗಿಸಿದ ಮಹಾನ್ ವ್ಯಕ್ತಿ. ಪ್ರಪಂಚದ ಸಂಚಾರ ಪಥಗಳಲ್ಲಿ ಅನೇಕ ಪ್ರವಾದಿಗಳನ್ನು ಕಾಣಬಹುದಾದರೂ ಪ್ರವಾದಿ ಮುಹಮ್ಮದ್‍ರಂತೆ ಲೌಕಿಕ ಮತ್ತು ಆಧ್ಯಾತ್ಮಿಕ ಸಮೂಹವನ್ನು ಸುಧಾರಣೆಗೊಳಿಸಿದವರಿಲ್ಲ. ಸಮಕಾಲೀನ ಸುಧಾರಣೆಯ ನಾಯಕತ್ವ ವಹಿಸಿ, ಅದರ ಸಾಕಾರಕ್ಕೆ ಸಾಕ್ಷಿಯಾಗಲು ಪ್ರವಾದಿ ಪರಂಪರೆಯಲ್ಲಿ ಮುಹಮ್ಮದರಿಗೆ ಮಾತ್ರ ಸಾಧ್ಯವಾಗಿದೆ. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು ಇತಿಹಾಸದಲ್ಲಿ ವಿಶಿಷ್ಠ ಪ್ರಕಾಶ ಗೋಪುರವಾಗಿದ್ದಾರೆ.

ಬಹಳ ಸಾಮಾನ್ಯ ಹಾಗೂ ಬಹಳ ಅಸಾಮಾನ್ಯ ಜೀವನ ಪರಿಸ್ಥಿತಿಯಲ್ಲಿ ಬೆರೆತು ಒಂದು ವಿಶಿಷ್ಟ ಕರ್ಮಧಾರೆಯನ್ನು ಪ್ರವಾದಿ ಮುಹಮ್ಮದ್‍ರು ಮಾನವ ಸಮೂಹಕ್ಕೆ ಪರಿಚಯಗೊಳಿಸಿದರು. ಪ್ರವಾದಿ ಮುಹಮ್ಮದ್‍ರು ಅಂದಿನ ಕಾಲದಲ್ಲಿ ಗ್ರಹಿಸಲಾಗದ ತೀರಾ ನೂತನವಾದ ವಿಷಯಗಳನ್ನು ಸಮಾಜದ ಮುಂದೆ ಸಮರ್ಪಿಸಿದ ಓರ್ವ ಸಾಮಾನ್ಯ ಮಾನವರಾಗಿದ್ದರು.

ಹಾಗಿದ್ದರೂ ನಂಬಲಸಾಧ್ಯವಾದ ವೇಗದಲ್ಲಿ ಸ್ವಯಂ ಬದಲಾಗುತ್ತಿರುವ ಸಮಾಜವನ್ನು ತನ್ನ ಜತೆ ಸೇರಿಸಲು ಮುಹಮ್ಮದ್‍ರಿಗೆ ಸಾಧ್ಯವಾಯಿತು. ಆ ಸಂದರ್ಭದಲ್ಲಿ ಪ್ರವಾದಿಯವರು ಬಲಪ್ರಯೋಗದ ಭಾಷೆ ಬಳಸಲಿಲ್ಲ ಅಥವಾ ಭಿನ್ನರಾಗಲು ಪ್ರಯತ್ನಿಸಲಿಲ್ಲ. ತನ್ನ ಜತೆಯಲ್ಲಿರುವವರೊಂದಿಗೆ ವಿಲೀನಗೊಂಡು ಗುರುತಿಸಲ್ಪಡಬಾರದೆಂಬ ಛಲದಿಂದ ದೇಹದ ಭಾಷೆಯೊಂದಿಗೆ ಬಾಳಬೇಕೆಂದು ಅವರು ಬಯಸಿದರು. ಹಾಗಿದ್ದರೂ ಎಲ್ಲ ಸಮುದಾಯಗಳು ಪ್ರವಾದಿಯವರನ್ನು ಗುರುತಿಸಿ ಅವರ ಪಾವನ ಮಾತುಗಳಿಗಾಗಿ ಕಿವಿನಿಮಿರಿಸಿದುವು. ಆತ್ಮ ಶುದ್ಧೀಕರಣದ ಹಾದಿಯಲ್ಲಿ ಬಲಪ್ರಯೋಗ ಸಲ್ಲದೆಂದು ಪ್ರವಾದಿ ಮುಹಮ್ಮದ್‍ರು ನಿರ್ಣಯಿಸಿದರು. ಅನು ನಯದ ಭಾಷೆಯಿಂದ ಅನುಯಾಯಿ ವೃಂದವು ಸ್ವಯಂ ಬೆಳೆಯುವ ಅದ್ಭುತ ದೃಶ್ಯಕ್ಕೆ ಉತ್ತರ ಕಾಲವು ಸಾಕ್ಷಿಯಾಯಿತು.

ಆಧ್ಯಾತ್ಮಿಕತೆ ಮತ್ತು ರಾಜಕೀಯವು ಪರಸ್ಪರ ಪೂರಕವಲ್ಲ, ಆದರೂ ಹೊಂದಾಣಿಕೆಯಿಲ್ಲದ ಈ ಎರಡು ದ್ವಂದ್ವ ರಂಗಗಳನ್ನು  ಸಮನ್ವಯಗೊಳಿಸುವ ಅದ್ಭುತ ಸಾಧನೆಯನ್ನು ಪ್ರವಾದಿ ಮುಹಮ್ಮದ್‍ರು ಮಾಡಿದರು. ಕತ್ತಲೆ ಕವಿದಿದ್ದ ಭೂಖಂಡವನ್ನು ತನ್ನ ಸಾರೋಪದೇಶಗಳಿಂದ ಬೆಳಕಿನ ಲೋಕಕ್ಕೆ ಸಾಗಿಸಲು ಪ್ರವಾದಿ ಮುಹಮ್ಮದ್‍ರಿಗೆ ಸಾಧ್ಯವಾಯಿತು. ಅವರ ಮರಣಕ್ಕಿಂತ ಮುಂಚೆಯೇ ಇಡೀ ಅರೇಬಿಯವು ಪ್ರವಾದಿಗಳ ತತ್ವಾದರ್ಶಗಳಿಗೆ ಅಧೀನವಾಗಿತ್ತು. ಓರ್ವ ಆಡಳಿತಗಾರ ಅಥವಾ ವಿಶ್ವಾಸ ದೃಷ್ಟಿಕೋನವನ್ನು ಅಂಗೀಕರಿಸಲು ಸಿದ್ಧವಿಲ್ಲದ ಅರೇಬಿಯದ ಗೋತ್ರ ಜನಾಂಗಗಳು ಪ್ರವಾದಿಯವರ ಸಾನಿಧ್ಯದಲ್ಲಿ, ಗಡಿಮೇರೆಗಳಿಲ್ಲದ ಸಮಾಜವಾಗಿ ಮಾರ್ಪಟ್ಟಿರುವುದು ಶತಮಾನದ ಅತ್ಯದ್ಭುತ ಬದಲಾವಣೆಯಾಗಿತ್ತು. ರಾಜಕೀಯ ಮತ್ತು ಆಧ್ಯಾತ್ಮಿಕ ಸಮನ್ವಯದಿಂದ ಅರೇಬಿಯದಲ್ಲಿ ಈ ಬದಲಾವಣೆ ಸಾಧ್ಯವಾಯಿತು.

ವೈಯ್ಯಕ್ತಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಪ್ರವಾದಿ ಮುಹಮ್ಮದ್‍ರು ಮಾಡಿದ ಕ್ರಾಂತಿಕಾರಿ ಬದಲಾವಣೆಯು ಅದ್ವಿತೀಯವಾಗಿದೆ. ಅನಾಗರಿಕ ಆಚಾರಗಳಲ್ಲಿ ಮುಳುಗಿದ್ದ ಸಮೂಹವನ್ನು ಅವರು ಅಲ್ಪಾವಧಿಯಲ್ಲಿಯೇ ರೂಪಾಂತರಗೊಳಿಸಿದರು. ಅವರ ಮುಂದೆ ಸುಸ್ಪಷ್ಟ ಹಾಗೂ ಸರಳ ಜೀವನ ವಿಧಾನವನ್ನು ಪ್ರವಾದಿಯವರು ಪ್ರತಿಷ್ಠಾಪಿಸಿ ತೋರಿಸಿದರು. ಹಾಗೆಯೇ ವೈಯ್ಯಕ್ತಿಕ ಜೀವನದಲ್ಲಿ ಪ್ರವಾದಿಯವರು ಮಾಡಿದ ಸುಧಾರಣೆಯೂ ಮಹತ್ವ ಪೂರ್ಣವಾಗಿದೆ. ಖಾಸಗಿ ಸಂತೋಷಗಳನ್ನು ತಿರಸ್ಕರಿಸದೆ, ದೇವನಿಗೆ ನಿಕಟವಾಗುವ ಆದೇಶಗಳನ್ನು ಪ್ರವಾದಿಯವರು ಅನುಯಾಯಿಗಳಿಗೆ ನೀಡಿದರು. ಅವರ ಹಿಂದಿನ ಜೀವನವನ್ನು ಸಂಪೂರ್ಣ ಶಿಸ್ತುಬದ್ಧಗೊಳಿಸಿ ನವೀಕರಿಸಿದರು. ಅದು ಆ ಕಾಲದ ಎಲ್ಲ ವಿಚಾರ ಧಾರೆಗಳಿಗಿಂತ ಭಿನ್ನವಾದ ನೀತಿ ಸಂಹಿತೆಯಾಗಿತ್ತು. ತೀವ್ರ ವಿರೋಧದ ಹೊರತಾಗಿಯೂ ಅನೇಕ ಮಂದಿ ಪ್ರವಾದಿಯವರ ಸಂದೇಶವನ್ನು ಅಂಗೀಕರಿಸಿದರು. ಕ್ರಮೇಣ ವಿರೋಧಿಸಿದ್ದವರೂ ಪ್ರವಾದಿ ಬೋಧನೆಗಳಿಂದ ಆಕರ್ಷಿತರಾಗಿ ಹೊಸ ಜೀವನ ಶೈಲಿಯನ್ನು ಅಳವಡಿಸಿಕೊಂಡರು.

ಸಾಮಾಜಿಕ ರಂಗದಲ್ಲಿ ಸ್ತ್ರೀಯರ ವಿಷಯದಲ್ಲಿ ಪ್ರವಾದಿಯವರು ಭಾರಿ ಸುಧಾರಣೆಗಳನ್ನು ಮಾಡಿದರು. ಸ್ತ್ರೀಯರಿಗೆ ಯಾವುದೇ ಸ್ಥಾನಮಾನವಿಲ್ಲದ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀಯರನ್ನು ಪ್ರವಾದಿಯವರು ಪ್ರಧಾನ ವಾಹಿನಿಗೆ ತಂದರು. ಬಹುಪತ್ನಿತ್ವ ರೂಢಿಯಲ್ಲಿದ್ದಂಥ ಕಾಲದಲ್ಲಿ ಅದರ ನಿಯಂತ್ರಣ ಬಹಳ ದುಸ್ತರವಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರವಾದಿಯವರು ಪತ್ನಿಯರ ಸಂಖ್ಯೆಯನ್ನು ಪರಿಮಿತಗೊಳಿಸಲು ಪ್ರಯತ್ನಿಸಿದರು. ಎಲ್ಲ ಪತ್ನಿಯರನ್ನು ಸಮಾನವಾಗಿ ನೋಡಿಕೊಳ್ಳಲು ಸಾಧ್ಯವಿದ್ದರೆ ಮಾತ್ರ ಬಹುಪತ್ನಿತ್ವ ಸಾರ್ಥಕವಾಗುವುದೆಂದು ಅವರು ನಿಗದಿಪಡಿಸಿದರು. ಅದರೊಂದಿಗೆ ಪ್ರವಾದಿಯವರು ಇನ್ನೊಂದು ಸತ್ಯವನ್ನೂ ಸಮಾಜಕ್ಕೆ ಮುನ್ನೆಚ್ಚರಿಕೆಯಾಗಿ ನೀಡಿದರು. ‘ಪತ್ನಿಯರ ಮಧ್ಯೆ ಸಮಾನ ನ್ಯಾಯ ಪಾಲಿಸಲು ಅಸಾಧ್ಯ.’ ಈ ವಾಸ್ತವಿಕತೆಯನ್ನು ಸ್ಪಷ್ಟಪಡಿಸಿ ಪ್ರವಾದಿಯವರು ಬಹುಪತ್ನಿತ್ವವನ್ನು ನಿರುತ್ತೇಜಿಸಿದರು. ವಿವಾಹ ವಿಚ್ಛೇದನವು ಕೇವಲ ಪುರುಷರಿಗೆ ಸೀಮಿತವಲ್ಲ. ಸ್ತ್ರೀಯರಿಗೂ ಆ ಹಕ್ಕಿದೆಯೆಂದು ಬಹಿರಂಗ ಪಡಿಸುವ ಮೂಲಕ ಸ್ತ್ರೀಯರನ್ನು ಸ್ವಾತಂತ್ರ್ಯದ ಅತ್ಯುನ್ನತ ಮಟ್ಟಕ್ಕೇರಿಸಿದರು.

ಆದರೆ ಸ್ತ್ರೀಯರಿಗೆ ಈ ಎಲ್ಲ ಸ್ವಾತಂತ್ರ್ಯಗಳನ್ನು ನೀಡಿರುವ ಪ್ರವಾದಿಯವರು ಅವರನ್ನು ಪ್ರಧಾನ ವಾಹಿನಿಯಿಂದ ದೂರವಿರಿಸುವಂಥ ಪರ್ದಾ ಸಂಪ್ರದಾಯವನ್ನು ಜಾರಿಗೊಳಿಸಿದ್ದೇಕೆ? ಇಂದು ಪರ್ದಾ ಎಂಬುದು ಶಿರವಸ್ತ್ರವೆಂಬ ರೀತಿಯ ಬದಲಾಗಿ ಸ್ತ್ರೀಯು ದೇಹವನ್ನು ಆಪಾದ ಮಸ್ತಕ ಮುಚ್ಚುವ (ಮುಖವನ್ನೂ ತೋರಿಸದೆ) ವಸ್ತ್ರಧಾರಣಾ ರೀತಿಯಾಗಿ ಮಾರ್ಪಟ್ಟಿದೆ. ಪರ ಪುರುಷರ ಮುಂದೆ ಸೌಂದರ್ಯ ಪ್ರದರ್ಶಿಸಬಾರದೆಂದು ಕುರ್‍ಆನ್ ಹೇಳುತ್ತದೆ. ಆದರೆ ಅದಕ್ಕಾಗಿ ಪ್ರವಾದಿಯವರು ಸ್ತ್ರೀಯರ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ವಿನ್ಯಾಸದ ಉಡುಪನ್ನು ಬಯಸಿದ್ದರೇ? ಕೆಲವು ಕುರ್‍ಆನ್ ವಿದ್ವಾಂಸರು ಹಾಗಲ್ಲವೆಂದು ಹೇಳುತ್ತಾರೆ. ‘ಯುದ್ಧದಲ್ಲಿಯೂ ಸ್ರ್ತೀ ಸಾನಿಧ್ಯವನ್ನು ಅನುಭವಿಸಿ,  ಸ್ತ್ರೀಯರ ಪಾದದಡಿಯಲ್ಲಿ ಸ್ವರ್ಗವಿದೆಯೆಂದು ವರ್ಣಿಸಿ, ಸ್ತ್ರೀಯ ಸ್ಥಾನವನ್ನು ಸಮಾಜದಲ್ಲಿ ಉನ್ನತಗೊಳಿಸಿದ ಪ್ರವಾದಿಯವರು, ಸ್ತ್ರೀಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಇಂಥ ವಸ್ತ್ರಧಾರಣೆಯನ್ನು ನಿರ್ದೇಶಿಸಲಾರರೆಂದು ಅವರ ಅಭಿಮತ. ಏನಿದ್ದರೂ ಶಿರವಸ್ತ್ರಕ್ಕಿಂತ ಹೆಚ್ಚಾಗಿ ಸ್ತ್ರೀ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಇಂದಿನ ಪರ್ದಾ ವಿಧಾನವು ಕುರ್‍ಆನ್‍ನ ವಚನಕ್ಕೆ ಸರಿ ಹೊಂದುವುದೇ ಎಂದು ಪರಿಶೀಲಿಸಬೇಕಾಗಿದೆ.

ಜ್ಞಾನವೇ ಸಾಮಾಜಿಕ ಬದಲಾವಣೆಯ ಚಾಲಕ ಶಕ್ತಿಯೆಂದು ಮನಗಂಡು ತನ್ನ ಕಾರ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಲು ನಡೆಸಿದ ಪ್ರಯತ್ನಗಳು ಅವರನ್ನು ಇತರ ಪ್ರವಾದಿಗಳಿಂದ ಬೇರ್ಪಡಿಸುತ್ತದೆ. ‘ದೇವ ನಾಮದಿಂದ ನೀನು ಓದು’ ಎಂಬ ಆದೇಶದಿಂದಲೇ ಪವಿತ್ರ ಕುರ್‍ಆನ್ ಆರಂಭವಾಗುತ್ತದೆ. ನಿರಕ್ಷರಿಯಾದ ಓರ್ವ ವ್ಯಕ್ತಿಯ ಮನೋ ಮಂಡಲದಲ್ಲಿ ಓದು ಬರಹದ ಬಗೆಗಿನ ಸ್ಪಷ್ಟ ತಿಳುವಳಿಕೆ ಹೇಗೆ ಮೂಡಿತೆಂಬ ಪ್ರಶ್ನೆಯು ಇತಿಹಾಸದಲ್ಲಿ ಅಚ್ಚರಿದಾಯಕವಾಗಿದೆ. ಜ್ಞಾನ ಸಂಪಾದನೆಗಾಗಿ ಜಗತ್ತಿನ ಯಾವ ಮೂಲೆಗೆ ಬೇಕಾದರೂ ಹೋಗಬಹುದೆಂದು ಅವರು ಉಪದೇಶಿಸುತ್ತಾರೆ. ಜ್ಞಾನದ ಬಗ್ಗೆ ಪ್ರವಾದಿಯವರ ಈ ನೀತಿಯೇ ಮುಂದೆ ಅರಬ್ ಸಮಾಜದಲ್ಲಿ ಬೆಳೆದು ಬಂದ ಎಲ್ಲ ವೈಜ್ಞಾನಿಕ ರಂಗಗಳ ಬುನಾದಿಯಾಗಿ ಮಾರ್ಪಾಟುಗೊಂಡಿತ್ತು. ಪ್ರಪಂಚದ ಅನೇಕ ವಾಸ್ತವಿಕತೆಗಳನ್ನು ಕುರ್‍ಆನ್ ನಮಗೆ ತಿಳಿಸುತ್ತದೆ. ಕಾಲಾಂತರಗಳಲ್ಲಿ ಅವೆಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿವೆ. ಈ ಎಲ್ಲ ಅಂಶಗಳನ್ನು ಗಮನಿಸುವಾಗ ಅದ್ಭುತ ಗೌರವಾದರಗಳಿಂದ ಆ ನಿರಕ್ಷರಿಯ ಮುಂದೆ ನಾವು ವಿನಮ್ರರಾಗುತ್ತೇವೆ.

ಅಂದಿನ ಅನಾಗರಿಕವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಸ್ಕರಣೆಯ ಬೀಜ ಬಿತ್ತಿ ತರುವಾಯ ವಿಭಿನ್ನ ಸಾಂಸ್ಕ್ರತಿಕ ವೈಶಿಷ್ಠ್ಯದ ಮಹಾ ಹಸಿರು ಲೋಕವನ್ನೇ ಪ್ರವಾದಿಯವರು ಬೆಳೆಸಿದರು. ಇದು ಆ ಕಾಲದಲ್ಲಿ ಬಹಳ ಕಠಿಣ ಕಾರ್ಯಭಾರವಾಗಿತ್ತು. ಹಿಂಸೆಯನ್ನು ಜೀವನ ವಿಧಾನವೆಂದು ತಿಳಿದು ಅದನ್ನು ಎಲ್ಲ ಮಟ್ಟದಲ್ಲಿಯೂ ಸಮರ್ಥಿಸುತ್ತಿದ್ದಂಥ ಕಾಲದಲ್ಲಿ ಹಿಂಸೆಯ ವಿರುದ್ಧ ಪ್ರವಾದಿಯವರು ದಿಟ್ಟ ಧೋರಣೆಯನ್ನು ಕೈಗೊಂಡರು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಯುದ್ಧ ಮಾಡಿ, ತರುವಾಯ ಅಂದಿನ ಯುದ್ಧ ನೀತಿಗೆ ವಿರುದ್ಧವಾಗಿ ಕರುಣೆಯಿಂದ ವರ್ತಿಸಿ ಹೊಸ ಶಿಷ್ಟಾಚಾರ ರೀತಿಯನ್ನು ಪ್ರವಾದಿಯವರು ರಚಿಸಿದರು. ಅಹಿಂಸೆಯೊಂದಿಗಿನ ತೀವ್ರ ನಿಷ್ಠೆಯು ಪ್ರವಾದಿಯವರಿಗೆ ನೂತನ ಯುದ್ದ ತಂತ್ರವನ್ನು ರೂಪಿಸಲು ಪ್ರೇರಕವಾಯಿತು. ಇದರಿಂದ ಅರೇಬಿಯದಾದ್ಯಂತ ಶಾಂತಿ ಸ್ಥಾಪನೆಯಾಯಿತು.

ವ್ಯಕ್ತಿ ಹಿರಿಮೆಯು ಏಕಾಧಿಪತ್ಯವಾಗಿ ಸಮಾಜದಲ್ಲಿ ಪ್ರಭುತ್ವ ಸಾಧಿಸಿದ್ದ  ಕಾಲದಲ್ಲಿ ವ್ಯಕ್ತಿಯ ಅಸ್ತಿತ್ವದ ಬಗ್ಗೆ ನೂತನ ಸಿದ್ಧಾಂತಗಳನ್ನು ಪ್ರವಾದಿಯವರು ಆವಿಷ್ಕರಿಸಿದರು. ಅವರಲ್ಲಿ ಸ್ವತಃ ಓರ್ವರಾಗಿ ಬೆರೆತು ವೈಯ್ಯಕ್ತಿಕ ಸಾನಿಧ್ಯದ ಹಿರಿಮೆಯನ್ನು ಪ್ರವಾದಿಯವರು ನಿರಾಕರಿಸಿದರು. ಮರಣದ ಬಳಿಕ ತನ್ನ ಹಾಗೂ ಇತರ ಯಾರೊಬ್ಬರ ಗೋರಿಗಳನ್ನೂ ಪೂಜಿಸಬಾರದೆಂದು ಆಜ್ಞಾಪಿಸಿದರು. ಯಾವುದರಲ್ಲಿಯೂ  ಭಿನ್ನತೆ ತೋರಿಸುವ ಸಂಜ್ಞೆಗಳಿರಬಾರದು. ಈ ಎಲ್ಲ ಆಜ್ಞೆಗಳು ಕಾಲಕ್ಕೆ ವಿರುದ್ಧವಾಗಿದ್ದುವು, ಆದ್ದರಿಂದಲೇ ಅತ್ಯಂತ ಕ್ರಾಂತಿಕಾರಿಯಾಗಿದ್ದುವು.

ಅವರು ವೇಷಭೂಷಣ ಅಥವಾ ನಡವಳಿಕೆಗಳಲ್ಲಿ ಜನರ ಮಧ್ಯೆ ವಿಭಿನ್ನರಾಗಿರಲು ಬಯಸಲಿಲ್ಲ. ಅವರಲ್ಲಿ ಓರ್ವರಾಗಿ ಬೆರೆತರು. ಇದು ಸ್ವತಂತ್ರ ಪ್ರಜಾಪ್ರಭುತ್ವ ರಂಗದ ಅನನ್ಯ ಪ್ರದರ್ಶನವಾಗಿದೆ. ಅಧಿಕಾರದ ಉನ್ನತ ಪೀಠಕ್ಕೆ ತಲುಪಿದರೂ ಪ್ರವಾದಿಯವರು ಓರ್ವ ಪ್ರಜಾಪ್ರಭುತ್ವವಾದಿಯಂತೆ ವ್ಯವಹರಿಸಿದರು. ಜನರು ತಮ್ಮ ಭಾವನೆಗಳನ್ನು ತಿಳಿಸುವ ಎಲ್ಲ ಸಂದರ್ಭಗಳನ್ನು ಪ್ರವಾದಿ ಮುಹಮ್ಮದ್‍ರು ಸದಾ ಮುಕ್ತವಾಗಿರಿಸಿದರು.

ಇತರ ಧರ್ಮಗಳನ್ನು ಗೌರವಿಸಲು ಹಂಬಲಿಸುವ ವಿಶಾಲ ಮನೋಭಾವವನ್ನು ಪ್ರವಾದಿಯವರು ಹಲವು ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದರು. “ನನಗೆ ನನ್ನ ಧರ್ಮ, ನಿಮಗೆ ನಿಮ್ಮ ಧರ್ಮ” ಎಂಬ ಧೋರಣೆಯನ್ನು ವಿೂರಿ ಎಲ್ಲ ಧರ್ಮಗಳ ಅಸ್ತಿತ್ವ ಮತ್ತು ಅನಿವಾರ್ಯತೆಯನ್ನು ಅವರು ಮಾನ್ಯ ಮಾಡಿದ್ದರು. ಇಂದಿನ ಕಾಲದ ವ್ಯಾಖ್ಯೆಯಂತೆ ಅದು ಸಂಪೂರ್ಣ ಜಾತ್ಯತೀತ ಧೋರಣೆಯಾಗಿತ್ತು. “ನಾವು ಎಲ್ಲರಿಗೂ ಪ್ರತಿಯೊಂದು ಕಾನೂನು ಮತ್ತು ಮಾರ್ಗವನ್ನು ಆದೇಶಿಸಿದ್ದೇವೆ. ದೇವನು ಆ ರೀತಿ ನಿರ್ಣಯಿಸಿಲ್ಲದಿರುತ್ತಿದ್ದರೆ ಇಡೀ ಮಾನವ ಸಮುದಾಯವು ಒಂದೇ ಧರ್ಮದವರಾಗುತ್ತಿದ್ದರು. ಆದರೆ ದೇವನು ಬೇರೆಯೇ ನಿರ್ಣಯಿಸಿದ್ದಾನೆ.

ವಿವಿಧ ಮಾರ್ಗಗಳಿಂದ ನಿಮ್ಮನ್ನು ಪರೀಕ್ಷಿಸಲಿಕಾಗಿ.” ಪ್ರವಾದಿ ಮುಹಮ್ಮದ್‍ರ ಜಾತ್ಯತೀತ ದೃಷ್ಠಿಕೋನ ಇದರಿಂದ ವ್ಯಕ್ತವಾಗುತ್ತದೆ. ಮೌಲ್ಯಾಧಾರಿತ ಜೀವನದ ಬಗ್ಗೆ ಸ್ಪಷ್ಟ ಸಂದೇಶಗಳನ್ನು ಮಾನವ ಕುಲಕ್ಕೆ ನೀಡಿರುವ ಪ್ರವಾದಿಯವರು ಇತರ ಪ್ರವಾದಿಗಳಿಗಿಂತ ಬಹಳ ಭಿನ್ನರಾಗಿದ್ದಾರೆ. ಅವರು ತತ್ವಸಿದ್ಧಾಂತವನ್ನು ಕೇವಲ ಬೋಧಿಸಿ ಸುಮ್ಮನಿರದೆ ಅದನ್ನು ವ್ಯಾವಹಾರಿಕ ಗೊಳಿಸಿರುವುದು ಅವರ ವೈಶಿಷ್ಠ್ಯವಾಗಿದೆ.

ಆದರೆ ಆ ಬಳಿಕದ ಜಗತ್ತಿನ ಅವಸ್ಥೆ ಹೇಗಿದೆ? ಮಾನವ ಸಮೂಹವನ್ನು ಒಳಿತಿನೆಡೆಗೆ ಸಾಗಿಸುವಂತೆ ಪ್ರವಾದಿಯವರು ಉಪದೇಶಿಸಿದ್ದರು. ಆದರೆ, ಈ ಉಪದೇಶಗಳನ್ನು ಮಾನವ ಸಮೂಹವು ಸಂಪೂರ್ಣವಾಗಿ ಮೈಗೂಡಿಸಿಲ್ಲದಿರುವುದಕ್ಕೆ ಕಾಲ ಸಾಕ್ಷಿಯಾಗಿದೆ. ಅಂಥ ಅವಸ್ಥೆ ಪ್ರವಾದಿ ಮುಹಮ್ಮದ್‍ರ ಸಂದೇಶ ಮತ್ತು ಅದರ ಸಾಕಾರದಲ್ಲಿ ಸಂಭವಿಸಿದೆಯೇ ಎಂದು ವಿಶ್ಲೇಷಿಸಬೇಕಾಗಿದೆ. ಈ ರೀತಿಯ ವಿಶ್ಲೇಷಣೆಯು ಈ ಕಾಲದಲ್ಲಿ ಅತ್ಯವಶ್ಯಕವಾಗಿದೆ. ಇಸ್ಲಾಮಿನಲ್ಲಿ ಧಾರ್ಮಿಕ ಪೌರೋಹಿತ್ಯವಿಲ್ಲ. ಕಾಲ ಕ್ರಮೇಣ ಅದರ  ಪ್ರಚ್ಛನ್ನ ರೂಪಗಳು ಧರ್ಮದಲ್ಲಿ ಸೇರಿ ಕೊಂಡಿರುವುದು ನಿಜ. ಇಸ್ಲಾಮ್ ಜ್ಞಾನ ಮಂಡಲದ ಉಜ್ವಲ ಅಧ್ಯಾಯವಾಗಿದ್ದರೂ, ಅದು ಜ್ಞಾನದ ಬೆಳಕನ್ನು ತಿರಸ್ಕರಿಸುವ ಸಮುದಾಯವಾಗಿ ಮಾರ್ಪಟ್ಟಿರುವುದು ವಿಪರ್ಯಾಸವಾಗಿದೆ. ಧರ್ಮದ ಪ್ರಚ್ಛನ್ನ ರೂಪಿಗಳಾದ ಪುರೋಹಿತರು ಅದಕ್ಕೆ ಎಡೆ ಮಾಡಿದ್ದಾರೆ. ಪ್ರವಾದಿ ಮುಹಮ್ಮದರ ಸಂದೇಶ ಸಾರವನ್ನು  ಕಾಲದ ಬೆಳಕಿನಲ್ಲಿ ಓದುವ ಬದಲಾಗಿ ಅವರು ಅದನ್ನು ಕೇವಲ ಶಬ್ದಾರ್ಥಗಳ ವ್ಯಾಖ್ಯಾನಗಳಿಗೆ ಸೀಮಿತಗೊಳಿಸಲು ಪ್ರಯತ್ನಿಸಿದರು. ಆದ್ದರಿಂದ ಆಧುನಿಕ ಶಿಕ್ಷಣವೂ ಸೇರಿ ಅನೇಕ ವಿಷಯಗಳು ಈ ಧರ್ಮಿಯರಿಗೆ ನಿಷೇಧಿಸಲ್ಪಟ್ಟಿತು. ಇತ್ತೀಚೆಗೆ ಇದರಲ್ಲಿ ಬದಲಾವಣೆಯಾಗಿದೆ. ಆದರೂ ಪೌರೋಹಿತ್ಯದ ಪ್ರಚ್ಛನ್ನ ಸಂಕೇತಗಳಿಗೆ ಮುಸ್ಲಿಮ್ ಸಮುದಾಯದಲ್ಲಿ ಇಂದಿಗೂ  ಪ್ರಬಲ ಸ್ಥಾನವಿದೆ.

ಪ್ರವಾದಿ ಮುಹಮ್ಮದ್‍ರು ಕೇವಲ ಪ್ರಜೆಯಾಗಿ ಪ್ರಜಾಪ್ರಭುತ್ವದ ಎಲ್ಲ ಸ್ವಾತಂತ್ರ್ಯವನ್ನು ತನ್ನ ಅನುಯಾಯಿಗಳಿಗೆ ನೀಡಿದ ಮಹಾ ಪುರುಷರಾಗಿದ್ದರು. ಆದರೆ ಅವರ ತತ್ವಸಿದ್ಧಾಂತಗಳ  ಬುನಾದಿಯಲ್ಲಿ ರೂಪುಗೊಂಡ ಅನೇಕ ಸರಕಾರಗಳಲ್ಲಿ ಇಂದು ಪ್ರಜಾಪ್ರಭುತ್ವವಿಲ್ಲ. ಪ್ರವಾದಿಯ ಬೋಧನೆಗಳನ್ನು ಹಿಂಬಾಲಿಸಲು ಇಸ್ಲಾವಿೂ ಸರಕಾರಗಳು ಶ್ರಮಿಸುತ್ತಲಿವೆಯಾದರೂ ಅವರು ಸಮರ್ಪಿಸಿದ ಪ್ರಜಾಪ್ರಭುತ್ವ ನೀತಿ ಅಥವಾ ನಿರಾಡಂಬರ ಜೀವನವನ್ನು ಸಾಕಾರಗೊಳಿಸಲು ಇವರು ಪ್ರಯತ್ನಿಸುತ್ತಿಲ್ಲ. ಪ್ರವಾದಿಯವರ ಧಾರ್ಮಿಕ ಕಾಠಿಣ್ಯಗಳಿಲ್ಲದ  ದೃಷ್ಠಿಕೋನಗಳನ್ನು ಅಳವಡಿಸುವುದಕ್ಕೂ ಈ ಸರಕಾರಗಳಿಂದಾಗಿಲ್ಲ. ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ಮತ್ತು ಹಕ್ಕು ಎಂಬುದು ಪ್ರವಾದಿಯವರ ಧೋರಣೆಯಾಗಿತ್ತು. ಸಂಭಾಷಣೆಗಾಗಿ ತಮ್ಮ ಮಸೀದಿಗೆ ಆಗಮಿಸಿದ್ದ ಪರಧರ್ಮೀಯರೊಡನೆ ಅಲ್ಲಿಯೇ ಅವರ ರೀತಿಯಲ್ಲಿ ಆರಾಧನೆ ನಡೆಸಲು ಪ್ರವಾದಿಯವರು ಸೌಲಭ್ಯ ಒದಗಿಸಿದರು. ಇದು ಪ್ರವಾದಿ ಮುಹಮ್ಮದ್‍ರ ಜಾತ್ಯತೀತ ಧೋರಣೆಯ ಸ್ಪಷ್ಟ ಪುರಾವೆಯಾಗಿದೆ.ಆದರೆ ಇಂದು ಜಗತ್ತಿನ ಬಹುತೇಕ  ಇಸ್ಲಾವಿೂ ರಾಷ್ಟ್ರಗಳಲ್ಲಿ ಈ ಧೋರಣೆಯಿಲ್ಲ. ಅಲ್ಲಿ ಇತರ ಧರ್ಮಗಳಿಗೆ ಸಮಾನ ಅವಕಾಶ ಮತ್ತು ಸ್ವಾತಂತ್ರ್ಯಗಳನ್ನು ನಿಷೇಧಿಸಲಾಗಿದೆ. ಇಸ್ಲಾಮ್ ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ. ಅದಕ್ಕೆ ಇತರ ಧರ್ಮಗಳ ಲೋಪದೋಷಗಳನ್ನು ನಿವಾರಿಸಿ ರೂಪುಗೊಂಡ ಧರ್ಮವೆಂಬ ವಿಶೇಷಣವೂ ಇದೆ. ಮುಂದೆ ಹೊಸ ಧರ್ಮ ಅಥವಾ ಹೊಸ ಪ್ರವಾದಿ ಬರಲಿಕ್ಕಿಲ್ಲ. ಆದ್ದರಿಂದಲೇ ಮಾನವೇತಿಹಾಸವನ್ನು ಮೌಲ್ಯ ಪ್ರಜ್ಞೆಗೆ ಸಾಗಿಸಬೇಕಾದ ಘನ ಜವಾಬ್ದಾರಿಕೆಯು ಪ್ರವಾದಿಯ ಅನುಯಾಯಿಗಳಿಗಿದೆ. ಸ್ವಜೀವನದಲ್ಲಿ ಪ್ರವಾದಿಯವರು ಅದನ್ನು ತೋರಿಸಿ ಕೊಟ್ಟಿದ್ದಾರೆ. ಅವರು ದಾರಿ ಮತ್ತು ದೀಪವಾಗುತ್ತಿದ್ದಾರೆ. ಸಹನೆ ಮತ್ತು ಸಹೋದರತೆಯ ಮಹಾ ಮಾದರಿಯಾಗಿ ಪ್ರವಾದಿಯವರು ಮುಂದೆ ನಿಂತಿದ್ದಾರೆ.

About editor

Check Also

ಸತ್ಯ ಸಂಧತೆ ಉತ್ತಮ ರೀತಿ, ನೀತಿ

ಅಬ್ದುಲ್ಲಾ ಇಬ್ನು ಮಸ್‍ಊದ್(ರ)ರಿಂದ ವರದಿಯಾಗಿದೆ ಪ್ರವಾದಿವರ್ಯರು(ಸ) ಹೇಳಿದರು. ನೀವು ಸತ್ಯವನ್ನು ಬಿಗಿ ಹಿಡಿಯಿರಿ. ಸತ್ಯ ನಿಮ್ಮನ್ನು ಪುಣ್ಯ ಮತ್ತು ಸ್ವರ್ಗಕ್ಕೆ …

Leave a Reply

Your email address will not be published. Required fields are marked *