Breaking News
Home / ಲೇಖನಗಳು / ಪ್ರವಾದಿ ಮುಹಮ್ಮದ್(ಸ): ಬದುಕು-ಬೋಧನೆ 

ಪ್ರವಾದಿ ಮುಹಮ್ಮದ್(ಸ): ಬದುಕು-ಬೋಧನೆ 

ಜಗತ್ತಿನ ಮತಾಚಾರ್ಯರಲ್ಲಿ ಮುಹಮ್ಮದ್ ಪೈಗಂಬರರ ವ್ಯಕ್ತಿತ್ವವು, ಅವರು ಪ್ರಚುರ ಪಡಿಸಿದ ಇಸ್ಲಾಮ್ ಧರ್ಮವು ವಿಶಿಷ್ಟ ಮಾತ್ರವಲ್ಲ, ಮಹತ್ವಪೂರ್ಣವಾದುದೆಂದು ಮಹಾಪುರುಷರು ಮೆಚ್ಚಿಕೊಂಡಿದ್ದಾರೆ. ಈ ಮೆಚ್ಚುಗೆಗೆ ಮುಖ್ಯ ಕಾರಣ, ಆಚಾರ್ಯರ ಸರಳ ಜೀವನ, ಸರ್ವ ಸಮಾನತಾ ಮನೋಧರ್ಮ ಮತ್ತು ಆ ಮತದ ಸಲ್ಲಕ್ಷಣಗಳಾದ ಏಕದೇವತೋಪಾಸನೆ, ನಿರ್ಜಾತೀಯ ನಿರ್ವರ್ಗೀಯ ಭ್ರಾತೃತ್ವ ಮತ್ತು ಸಕಲ ಜೀವನ ವ್ಯವಹಾರ ನೀತಿ ಸಂಹಿತೆ.

ಬಹುಭಾಗ ಮರುಭೂಮಿಯಾದ ಅರೇಬಿಯಾದ ಸಾಮಾನ್ಯ ಬಡತನದ ಕುಟುಂಬದಲ್ಲಿ ಮುಹಮ್ಮದ್‍ರ ಹುಟ್ಟು. ಹುಟ್ಟುವುದಕ್ಕೆ ಮುಂಚೆಯೇ ತಂದೆಯ ಸಾವು. ಮೊದಲು ತಾತನ ರಕ್ಷೆಯಲ್ಲಿ, ಅನಂತರ ಚಿಕ್ಕಪ್ಪನ ರಕ್ಷೆಯಲ್ಲಿ ಅವರ ಪಾಲನೆ, ಪೋಷಣೆ. ಚಿಕ್ಕಂದಿನಲ್ಲಿಯೇ ಚಿಕ್ಕಪ್ಪನೊಡನೆ ಸಿರಿಯಾ ಕಡೆಗೆ ಹೋಗುತ್ತಾ ವ್ಯಾಪಾರಾನುಭವ, ಕೆಲವು ದಿನಗಳ ನಂತರ ಖದೀಜ ಎಂಬ ಶ್ರೀಮಂತ ವಿಧವೆಯೊಬ್ಬರ ವ್ಯಾಪಾರದ ಹೊಣೆಗಾರಿಕೆ ಮುಹಮ್ಮದರ ಪಾಲಿಗೆ. ಆ ವಹಿವಾಟಿನ ಬಗ್ಗೆ ಒಡತಿಗೆ ಬಲ್ಲವರಿಂದ, ಮುಖ್ಯವಾಗಿ ಹಳೆಯ ಗುಲಾಮನೊಬ್ಬನಿಂದ ಹೊಗಳಿಕೆ ಮಾತು. ಮುಹಮ್ಮದ್ ಬುದ್ಧಿವಂತರು, ವಿನಯಶೀಲರು, ಸಾತ್ವಿಕರು, ಪ್ರಾಮಾಣಿಕರು, ನಿಷ್ಕಪಟಿಗಳು ಎಂಬ ಪ್ರಸಿದ್ಧಿ ಎಲ್ಲೆಲ್ಲೂ. ಜತೆಗೆ ಗೌರವ ಅವರಿಗೆ.

ಮನುಷ್ಯನೊಬ್ಬ ಯಕಃಶ್ಚಿತ್ ವ್ಯಕ್ತಿಗಳ ಹೊಟ್ಟೆಯಲ್ಲಿ ಹುಟ್ಟಿರಲಿ, ಕಡು ಬಡವನಾಗಿರಲಿ, ಅನಾಥನಾಗಿರಲಿ, ಅವನ ಪಾಲಿಗೆ ಭಗವತ್ ಕೃಪೆಯೊಂದಿದ್ದರೆ ಅದು ಅವನ ಮುಂದೆ ಧನರಾಶಿಯನ್ನು ತಂದೊಡ್ಡುವುದಲ್ಲದೆ ಋತದರ್ಶಿಯನ್ನೂ ಮಾರ್ಗದರ್ಶಿಯನ್ನೂ ತೋರುತ್ತದೆ. ಮುಹಮ್ಮದರು ಖದೀಜರ ವಹಿವಾಟನ್ನು ವಹಿಸಿಕೊಂಡ ಕೂಡಲೇ ಅವರ ಆಸ್ತಿ ಬಹುಗುಣವಾಗಿ ಬೆಳೆಯುತ್ತದೆ. ಮಕ್ಕಾದ ಸಮಾಜದಲ್ಲಿ ಮುಹಮ್ಮದರ ಘನತೆ ಗೌರವಗಳು ಉನ್ನತ ಶ್ರೇಣಿಗೇರುತ್ತವೆ. ತಮಗಿಂತ ಹದಿನೈದು ವರ್ಷ ಚಿಕ್ಕವರಾಗಿದ್ದ ಮುಹಮ್ಮದರನ್ನವರು ಮದುವೆ ಮಾಡಿಕೊಳ್ಳುವುದೆಂದರೆ ಭಗವತ್ಪ್ರೇರಣೆಯಿರಬೇಕಲ್ಲವೆ? ದೇವರ ಕರುಣೆಯೇ ಮೂರ್ತಿವೆತ್ತಂತ್ತಿದ್ದ ಖದೀಜರು ತಾವು ಬದುಕಿರುವ ತನಕ ಮುಹಮ್ಮದ್‍ರಿಗೆ ಮಿತ್ರ, ಮಾರ್ಗದರ್ಶಿ, ಸಲಹೆಗಾರ್ತಿ, ಸಹಾಯಕಿ, ಆಪದ್ಬಾಂಧವ ಎಲ್ಲವೂ ಆಗಿರುತ್ತಾರೆ.

“ಜಗತ್ತು ಕಾಣದ ಕನಸುಗಳು ಪ್ರಾರ್ಥನೆಯಿಂದ ಲಭ್ಯವಾಗುತ್ತವೆ” ಎಂದು ಟೆನಿಸನ್ ಕವಿ ಹೇಳುತ್ತಾನೆ. ಧ್ಯಾನ ತಪಸ್ಸುಗಳಿಗೆ ದೊರಕದ ಫಲಗಳಿಲ್ಲ. ವರ್ಷಕ್ಕೊಮ್ಮೆ ಮುಹಮ್ಮದರು ಮಕ್ಕಾಕ್ಕೆ ಸಮೀಪದಲ್ಲಿದ್ದ ‘ಹಿರಾ’ ಎಂಬ ಗವಿಗೆ ಹೋಗಿ ಪ್ರಾರ್ಥನೆಗಳಲ್ಲಿ ಮಗ್ನರಾಗಿರುತ್ತಿದ್ದುದೆ ರೂಢಿ. ಅವರೊಮ್ಮೆ ಗಾಢ ನಿದ್ರೆಯಲ್ಲಿಯೋ ಯೋಗ ನಿದ್ರೆಯಲ್ಲಿಯೋ ಇದ್ದಂಥ ಪರಿಸ್ಥಿತಿಯಲ್ಲಿ ತಮ್ಮೆದುರಿಗಿದ್ದ ವಾಕ್ಯಗಳನ್ನೋದುವಂತೆ ಶಬ್ದ ಅವರ ಕಿವಿಗಳ ಮೇಲೆ ಬೀಳುತ್ತದೆ. ಅವರಿಗೊಂದು ಬರಹ ಗೊತ್ತಿಲ್ಲದಿದ್ದರೂ ಓದಬೇಕೆಂಬ ಆಜ್ಞೆಯ ಆಲಿಕೆಯಿಂದ ಅವರಿಗೆ ಗಾಬರಿಯಾಗುತ್ತದೆ, ಆಶ್ಚರ್ಯವಾಗುತ್ತದೆ, ಎಲ್ಲಿ ಹೋದರೂ ಮಾಯಾವಿಗಳ, ಮಾಟಗಾರರ ತಂತ್ರವೋ ಮೋಸವೋ ಇರಬಹುದೇ ಎಂದವರಿಗೆ ಭಯವಾಗುತ್ತದೆ. ಆದರೂ ಮತ್ತೆ ಮತ್ತೆ ಅದೇ ಶಬ್ದ.ತಮಗೆ ಸಮಸ್ಯೆ ತಲೆದೋರಿದಾಗೆಲ್ಲ ಮುಹಮ್ಮದರು ತಮ್ಮ ಬಾಳ ಸಂಗಾತಿಯರೊಡನೆ ಸಮಾಲೋಚಿಸಿ ಅವರಿಂದ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು. ಖದೀಜರು ಮಕ್ಕಾದಲ್ಲೆಲ್ಲ ಸರ್ವ ಗೌರವ ಭಾಜನೆಯರಾದ ಸೂಕ್ಷ್ಮಮತಿಯೂ ಸುವಿಚಾರ ಸಂಪನ್ನೆಯೂ ಆದ ಮಹಾ ಮಹಿಳೆಯಾಗಿದ್ದರು. ಸರ್ವಜ್ಞನೂ ಸರ್ವಲೋಕದ ರಕ್ಷಕನೂ ಆದ ಭಗವಂತನೇ ಅವರ ವಿವಾಹ ಸಂಬಂಧವನ್ನು ವಿಯೋಜಿಸಿದ್ದನೆಂಬುದರಲ್ಲಿ ಅನುಮಾನವಿಲ್ಲ. ಆ ಮದುವೆಗೆ ಭಗವತ್ಸಂಕಲ್ಪವೇ ಕಾರಣ. ತಮ್ಮ ಪತಿ ಕೇಳಿಕೊಂಡ ಧ್ವನಿ ಭಗವಗ್ದನಿಯೇ ಹೊರತು ಭೂತ ಪ್ರೇತಗಳ ಗುಹಾ ಪ್ರತಿಧ್ವನಿಗಳಲ್ಲವೆಂದು ಖದೀಜ ಸ್ಪಷ್ಟಪಡಿಸುತ್ತಾರೆ. ಓದು ಬರಹ ಬಾರದವರ ಮುಂದೆ ಹೇಳಬಹುದಾದ ಉದ್ದೇಶವೇನಿರಬಹುದು? ಕಾಕಾಘೋಕ ಕಥೆಗಳನ್ನಾಗಲಿ, ಶಾಸ್ತ್ರ ಪುರಾಣಗಳನ್ನಾಗಲಿ ಓದಿ ಕಲುಷಿತಗೊಳ್ಳದ, ಸರಳ- ಮುಗ್ಧ- ನಿರ್ಮಲ- ಪವಿತ್ರ ಮನಸ್ಸಾದ್ದರಿಂದ, ಭಗವತ್ಸಂದೇಶವನ್ನು ಪಡೆಯಬಲ್ಲದೆಂಬ ರಹಸ್ಯ ಖದೀಜರಿಗೆ ಹೊಳೆದಿರಬೇಕೆಂಬುದು ತೋರುತ್ತದೆ. ಜತೆಯಲ್ಲಿ ಹತ್ತಾರು ವರ್ಷ ಸಂಸಾರ ನಡೆಸಿರುವ ಸತಿಗಳಲ್ಲದೇ ಪತಿಯ ಮಹಿಮೆ ಬೇರೆ ಯಾರಿಗೆ ತಾನೆ ಬೋಧೆಯಾದೀತು? ಈ ಸಂದರ್ಭದಲ್ಲಿ ಖದೀಜರ ಮನಸ್ಸಿನಲ್ಲಿ ಅಂತರ್ಬೋಧೆ, ಭಗವತ್ಪ್ರೇರಣೆ ಕೆಲಸ ಮಾಡಿರಬೇಕೆಂದು ತೋರುತ್ತದೆ. ಅವರೆಂಥ ಸತಿ-ಪತಿಯರು!

ಮುಹಮ್ಮದರು ಹಿರಾ ಗುಡ್ಡ ಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ ಮತ್ತೇ ಅದೇ ಧ್ವನಿ ಮತ್ತೂ ಜೋರಾಗಿ ಕೇಳಿಸುತ್ತದೆ, “ಓ ಮುಹಮ್ಮದ್! ನೀನು ಅಲ್ಲಾಹನ ದೂತ! ನಾನು ಗೇಬ್ರಿಯಲ್. ದೇವದೂತ”. ದಿಗಂತದಲ್ಲಿ ಕಾಣುತ್ತಿದ್ದ ದೇವದೂತ ಮತ್ತಷ್ಟು ಗಟ್ಟಿಯಾಗಿ “ಓ ಮುಹಮ್ಮದ್! ನೀನು ಅಲ್ಲಾಹನ ಹರಿಕಾರ, ಪ್ರವಾದಿ! ಮತ್ತು ನಾನು ದೇವದೂತ ಗೇಬ್ರಿಯಲ್, ನಿನಗಿನ್ನೂ ಸಂದೇಹವೇ? ಏಳು ಎದ್ದೇಳು, ಜಾಗ್ರತನಾಗು!” ಎಂದು ಸಾರುತ್ತಾರೆ.  ಎಷ್ಟೋ ಹೊತ್ತಿನ ನಂತರ ದೇವದೂತ ಕಣ್ಮರೆಯಾಗುತ್ತಾರೆ. ಮುಹಮ್ಮದ್ ಖದೀಜರೊಡನೆ ಆ ರುದ್ರ ರಮ್ಯ ದೃಶ್ಯವನ್ನು ವಿವರಿಸಿದಾಗ ತಮ್ಮ ಅಚಲ ನಿಶ್ಚಯವನ್ನು ಸ್ಪಷ್ಟಪಡಿಸುತ್ತಾರೆ. ಅವರು ಕಾರ್ಯೋನ್ಮುಖವಾಗುವಂತೆ ಪ್ರೇರೆಪಿಸುತ್ತಾರೆ.

ಮಕ್ಕಾದಲ್ಲಿ ‘ಕಅಬಾ’ ಎಂಬ ದೇವಾಲಯವಿದೆ. ಅಬ್ರಾಹಮ್ ಅದನ್ನು ಅಲ್ಲಾಹನ ಹೆಸರಿನಲ್ಲಿ ನಿರ್ಮಿಸಿದರೆಂಬ ಪ್ರತೀತಿ ಇದೆ. ಅದು ನಿರ್ಮಾಣವಾದಂದಿನಿಂದ  ಇಂದಿನವರೆಗೆ ಜಗತ್ತಿನ ಮುಸ್ಲಿಮರೆಲ್ಲರೂ ಆ ಕಡೆಗೆ ತಿರುಗಿಕೊಂಡು ಪ್ರಾರ್ಥನೆ ಸಲ್ಲಿಸುತ್ತಾರೆ; ಉಳ್ಳವರು ತೀರ್ಥಯಾತ್ರೆಗಾಗಿ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ನೂರಾರು ಕ್ಷುದ್ರ ದೇವತೆಗಳಿಗೆ ಆಗ ಸ್ಥಾನವಿತ್ತು. ಅರೇಬಿಯದ ನಾನಾ ಭಾಗಗಳಿಂದ ಬಂದ ಜನ ಆ ದೇವತೆಗಳನ್ನು ಪೂಜಿಸುತ್ತಿದ್ದರು. ಒಂದೊಂದು ದೇವತೆಗೂ ಒಂದೊಂದು ಪಂಗಡ ಅಂಟಿಕೊಂಡು ಧ್ಯಾನಿಸುತ್ತಿತ್ತು, ಅವರೊಳಗೆ ಐಕ್ಯತೆಯಿರಲಿಲ್ಲ. ಯಾವಾಗಲೂ ಅವರ ನಡುವೆ ಸಂಘರ್ಷಗಳಿರುತ್ತಿದ್ದವು. ಅಂಥ ಸಂದರ್ಭದಲ್ಲಿ “ಕರುಣಾಮಯಿಯೂ, ಶುಭದಾಯಿಯೂ ಆದ ಅಲ್ಲಾಹನ ಹೆಸರಿನಲ್ಲಿ….” ಎಂಬ ಮೊದಲ ಮಾತುಗಳು ಅವರಿಗೆ ಕೇಳಿಸುತ್ತವೆ. “ಅಲ್ಲಾಹನಿಗೆ ಮಾತ್ರ ಸರ್ವಸ್ತುತಿ ಸಲ್ಲಬೇಕು, ಅವನೇ ಸಕಲ ವಿಶ್ವದ ಪ್ರಭು, ನಿರ್ಣಾಯಕ ದಿನದ ಅಧಿಪತಿ ಅವನೇ. ನಾವು ನಿನ್ನನ್ನು ಮಾತ್ರವೇ ಪೂಜಿಸುತ್ತೇವೆ. ಎಲ್ಲ ಸಹಾಯಕ್ಕೂ ನಿನ್ನ ಕಡೆಗೆ ನೋಡುತ್ತೇವೆ. ಅಲ್ಲಾಹನೊಬ್ಬನೆ ದೇವನು, ಅವನು ಸೃಷ್ಟಿಕರ್ತ, ಸರ್ವರಕ್ಷಕ, ತೇನವಿನಾತೃಣಮಪಿ ನಚಲತಿ, ಉಳಿದ ದೇವತೆಗಳೆಲ್ಲ ಮಿಥ್ಯೆಯಾದ್ದರಿಂದ ಸಂಪೂರ್ಣವಾಗಿ ತ್ಯಜಿಸಬೇಕು” ಎಂಬ ತಾತ್ಪರ್ಯ ಈ ಮೊದಲನೆಯ ವಾಕ್ಯಗಳಲ್ಲಿಯೇ ವ್ಯಕ್ತವಾಗುತ್ತದೆ.

ಅಲ್ಲಾಹ್ ಬೋಧಿಸಿ, ಅವನ ದೂತ ಪ್ರವಾದಿ ಕಿವಿಯಲ್ಲಿಟ್ಟುಕೊಂಡು, ಕಿವಿಯಿಂದ ಕಿವಿಗೆ (ಶ್ರುತಿಯ ಮೂಲಕ) ಹರಿದ ಗ್ರಂಥವೇ ಕುರ್‍ಆನ್. ಅದು ಬೋಧಿಸಿದ ಧರ್ಮವೇ ಇಸ್ಲಾಮ್. ಇಸ್ಲಾಮ್ ಅನುಸರಿಸಿದವರೆಲ್ಲರೂ ಮುಸ್ಲಿಮರು. ಅಂದರೆ ಅಲ್ಲಾಹನಿಗೆ ಶರಣಾದವರು. ‘ಲಾ ಇಲಾಹ ಇಲ್ಲಲ್ಲಾಹು’ (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ) ‘ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್’ (ಓ ಅಲ್ಲಾಹ್! ಮುಹಮ್ಮದ್‍ರ ಮೇಲೆ ಕರುಣೆ ತೋರು) ‘ಸಲ್ಲಲ್ಲಾಹು ಅಲೈಹಿವ ಸಲ್ಲಮ್’ (ಅವರ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಶಾಂತಿಯಿರಲಿ!) ಇಂಥ ಮಾತುಗಳು ಧ್ವನಿಯುಕ್ತ, ಅರ್ಥದೀಪ್ತ, ದಿವ್ಯಸುಂದರ. ಇದನ್ನು ಕೇಳಿದವರ ಮೈಯಲ್ಲಿ ರೋಮಾಂಚನವಾಗದಿರದು. ಅಲ್ಲಾಹನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ, ವಿಗ್ರಹಾರಾಧನೆ ಘೋರ ಪಾಪವೆಂದು ಮುಹಮ್ಮದ್(ಸ), ಖದೀಜ(ರ), ಚಿಕ್ಕಪ್ಪನ ಮಗ ಅಲಿ(ರ) ಸೇವಕ ಝೈದ್(ರ) ಮತ್ತು ಗೆಳೆಯ ಅಬೂಬಕರ್(ರ) ತಿಳಿದು ಅಲ್ಲಾಹನಿಗೆ ಶರಣಾಗಿ, ಮುಸ್ಲಿಮರಾಗುತ್ತಾರೆ. ಸತ್ಯದರ್ಶನವಾದ ಮೂರು ವರ್ಷದ ನಂತರ, ಅಲ್ಲಾಹನ ಆಜ್ಞೆಯ ಮೇರೆಗೆ ಪ್ರವಾದಿಗಳು ಸಾರ್ವಜನಿಕವಾಗಿ ಇಸ್ಲಾಮ್‍ನ ತತ್ವಗಳನ್ನು ಬೋಧಿಸಲನುವಾಗುತ್ತಾರೆ. “ನೀವು ಅರ್ಚಿಸುವ ವಿಗ್ರಹಗಳೆಲ್ಲ ಭ್ರಮೆ ಮಾತ್ರ. ಸೃಷ್ಟಿಯಲ್ಲಿರುವ ಚರಾಚರ ವಸ್ತುಗಳೆಲ್ಲವನ್ನೂ ಸೃಷ್ಟಿಸಿದವನು ಅಲ್ಲಾಹ್. ಅವನೇ ರಕ್ಷಕ. ಆದ್ದರಿಂದ ಈ ಮೂರ್ತಿಗಳನ್ನೆಲ್ಲ ನಾಶ ಮಾಡಿ, ಏಕದೇವನನ್ನು ಮಾತ್ರ ಪೂಜಿಸು” ಎಂದವರು ಕರೆ ಕೊಡುತ್ತಾರೆ. ಅರೇಬಿಯಾದ ಅನೇಕ ಬಣಗಳಿಗೆ, ಅದರಲ್ಲಿಯೂ ‘ಕುರೈಷ್’ ಬಣಕ್ಕೆ ಅವರ ಬೋಧೆ ಹಿಡಿಸದು. ಕೊಲೆ ಸುಲಿಗೆಯಲ್ಲಿ ತಲ್ಲೀನವಾಗಿದ್ದ ಪುರೋಹಿತಶಾಹಿಯು ಪ್ರವಾದಿಯ ಮೇಲೆ ಬಣಗಳನ್ನೆತ್ತಿ ಕಟ್ಟುತ್ತಾರೆ.

ದಿವ್ಯ ದರ್ಶನವಾದ ಹದಿಮೂರು ವರ್ಷಗಳ ಅವಧಿಯಲ್ಲಿ ಪ್ರವಾದಿಗಳು ಅನುಭವಿಸಿದ ಯಾತನೆ ಅಸಾಮಾನ್ಯವಾದದ್ದು. ಜಗತ್ತಿನ ಸಂತರು, ಪ್ರವಾದಿ ಪುರುಷರು, ಅವತಾರಿಗಳು ಅನುಭವಿಸಿದ ಘೋರ ಸಂಕಷ್ಟಗಳನ್ನು ಇವರೊಬ್ಬರೇ ಅನುಭವಿಸಿದಂತೆ ತೋರುತ್ತದೆ. ಈ ಸಮಯದಲ್ಲಿ ತಮಗೆ ದಿಕ್ಕಾಗಿದ್ದ, ಬಲಗೈಯಾಗಿದ್ದ ಖದೀಜರವರು ತೀರಿಕೊಳ್ಳುತ್ತಾರೆ. ಅವರ ನಂತರ ಬೇರೆ ವಿವಾಹಗಳನ್ನು ಮಾಡಿಕೊಂಡರೂ, ಮುಹಮ್ಮದ್ ರವರು ಖದೀಜರನ್ನು ಸಾಯುವ ತನಕ ಮರೆಯುವುದಿಲ್ಲ. ತಮಗೊದಗಿದ ಸಂಕಷ್ಟ ಪರಂಪರೆಗಳ ನಿವಾರಣೆಗೆ ಅವರ ನೆನಪೇ ಅಗಾಧ ಶಕ್ತಿಯಾಗುತ್ತದೆ. ವಿವಿಧ ಬಣಗಳವರು ಪ್ರವಾದಿಗಳಿಗೆ ಅನೇಕ ಆಮಿಷಗಳನ್ನು ತೋರಿಸುತ್ತಾರೆ. ವಿಗ್ರಹಾರಾಧನೆಯೊಂದನ್ನು ಉಳಿಸಿಕೊಡುವುದಾದರೆ ಧನಕನಕ, ಕನ್ಯೆಯರನ್ನೊದಗಿಸುವುದಾಗಿಯೂ ಸಾಮ್ರಾಟನೆಂದು ಘೋಷಿಸುವುದಾಗಿಯೂ ಅವರು ವಾಗ್ದಾನ ನೀಡುತ್ತಾರೆ. ಎಂಥ ವ್ಯಾಮೋಹ, ಕಷ್ಟಗಳಿಗೂ ಅವರು ಜಗ್ಗುವುದಿಲ್ಲ. ಅವರ ಉಪದೇಶವನ್ನು ಕೇಳಿದ ಬಣಗಳ ಜನ ಸಣ್ಣ ಸಣ್ಣ ಗುಂಪುಗಳಾಗಿ, ಹನಿ ಹನಿಯಾಗಿ ಮುಸ್ಲಿಮರಾಗುತ್ತಾರೆ. ಅಂಥವರನ್ನು ಸಂಪ್ರದಾಯಸ್ಥರು ಬಹಿಷ್ಕರಿಸುತ್ತಾರೆ. ಕೆಲವೊಮ್ಮೆ ಅವರೊಳಗೆ ಘರ್ಷಣೆಗಳಾಗಿ ಸಾವು ನೋವು ಸಂಭವಿಸುತ್ತವೆ. ಇನ್ನೂರು ಮೈಲಿ ದೂರದ ಯಸ್ರಿಬ್ ನಗರದಿಂದ ಬಂದ ಯಾತ್ರಿಕರು ಮಹಾತ್ಮ ಪ್ರವಾದಿಯನ್ನು ಗುರುತಿಸುತ್ತಾರೆ. ಮಾರನೆಯ ವರ್ಷ ಬಂದ ಅದೇ ಯಾತ್ರಿಕರು ಮುಹಮ್ಮದ್(ಸ)ರಲ್ಲಿ, ಮುಸ್ಲಿಮರಾಗಿ ತಮ್ಮ ಪ್ರಾಣವನ್ನರ್ಪಿಸಲು ಶಪಥ ತೊಡುತ್ತಾರೆ. ಅಲ್ಲಾಹನ ಅಪ್ಪಣೆಯ ಮೇರೆಗೆ ಯಸ್ರಿಬ್ ನಗರಕ್ಕೆ ರಾತ್ರೋ ರಾತ್ರಿ ಪಯಣಿಸಲವರು ನಿರ್ಧರಿಸುತ್ತಾರೆ.

‘ಮದೀನ’ ಎಂದು ಪುನರ್ನಾಮಕರಣಗೊಂಡ ಯಸ್ರಿಬ್ ನಗರಕ್ಕೆ ಅವರು ಪಲಾಯನ ಮಾಡಿ ಬದುಕಿಕೊಂಡದ್ದಾದರೆ ತಮ್ಮ ಬಣಕ್ಕೆ ಮಾತ್ರವಲ್ಲ, ಇಡೀ ಅರೇಬಿಯಾಕ್ಕೆ ಅವರಿಂದ ತೊಂದರೆಯಾಗುತ್ತದೆ ಎಂದು ಭಾವಿಸುತ್ತಾರೆ. ಅವರನ್ನು ಕೊಲ್ಲಲು ಕುಯುಕ್ತಿಗಳನ್ನೆಲ್ಲ  ಕುರೈಷಿಗಳು ಬಳಸುತ್ತಾರೆ. ಕೊಲೆಗಾರರ ತಲೆಯನ್ನು ಧೂಳು ತುಂಬಿಕೊಂಡು, ಕಣ್ಣು ಕುರುಡಾಗುತ್ತವೆ. 20-06-622 ರಂದು ಪ್ರವಾದಿಗಳು ನಿಷ್ಕಂಟವಾಗಿ ಮದೀನ ಸೇರುತ್ತಾರೆ. ಹದಿಮೂರು ವರ್ಷಗಳ ಪರ್ಯಂತ ಹಲವು ಬಗೆಯ ಬೇನೆ ಬವಣೆ ಅವಮಾನಗಳನ್ನನುಭವಿಸಿದ ನಂತರ ಅವರು ಸಣ್ಣ ರಾಜ್ಯದ ದೊರೆಯೇ ಆಗುತ್ತಾರೆ. ಮುಂದಿನ ಹತ್ತು ವರ್ಷವಾದರೂ ಅವರ ಬದುಕಿನಲ್ಲಿ ಸುಖ ಸಂತೃಪ್ತಿಗಳು ದೊರೆತವೆ….? ಅನೇಕ ದಂಡ ಯಾತ್ರೆಗಳಲ್ಲಿ , ಬದ್ರ್ ಅಂಥ ಯುದ್ಧಗಳಲ್ಲಿ, ಮತ ಪ್ರಚಾರದಲ್ಲಿ ಹಾಗೂ ವಿಸ್ತೀರ್ಣದಲ್ಲಿ, ಕುರ್‍ಆನ್ ಬೋಧೆಯಲ್ಲಿ ಅವರ ಇಡೀ ಜೀವನ  ಕಿಕ್ಕಿರಿಯುತ್ತದೆ. ಅವರು ಖುದ್ದಾಗಿ ಎಪ್ಪತ್ತೇಳು ದಂಡ ಯಾತ್ರೆಗಳಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ. ತಾವೇ ಸಿದ್ಧಪಡಿಸಿದ ಯೋಜನೆಯ ಪ್ರಕಾರ ತಮ್ಮ ನೆಚ್ಚಿನ ತುಳಿಳಾಳುಗಳ ನಾಯಕತ್ವದಲ್ಲಿ ಮೂವತ್ತೆಂಟು ದಂಡಯಾತ್ರೆಗಳನ್ನು ನಡೆಸುತ್ತಾರೆ. ಶಿಕ್ಷಣದ ವಾಸನೆಯೇ ಇಲ್ಲದ ಸಾತ್ವಿಕ ವ್ಯಕ್ತಿ ಅಷ್ಟೊಂದು ದಂಡಯಾತ್ರೆಗಳನ್ನು ನಡೆಸಿದ್ದೇ ಜಗತ್ತು ಆಶ್ಚರ್ಯ ಪಡುವಂತಹ ಸಂಗತಿ. ಅಲ್ಲಾಹನೇ ಪ್ರೇರಕ. ಅವರೊಂದು ನಿಮಿತ್ತ ಮಾತ್ರವೆಂದು ಊಹಿಸಬಹುದಾಗಿದೆ.

ಯಹೂದ್ಯ ಹೆಂಗಸೊಬ್ಬಳು ವಿಷ ಹಾಕಿದ ಮಾಂಸವನ್ನವರಿಗೆ ಉಣಬಡಿಸುತ್ತಾಳೆ. ಒಂದು ತುತ್ತು ಬಾಯಿಗೆ ಹಾಕಿಕೊಳ್ಳುವಾಗಲೇ ಅವರಿಗೆ ವಾಕರಿಕೆ ಬರುತ್ತದೆ. ಒಂದು ತುತ್ತನ್ನು ನುಂಗಿದ ಮುಸ್ಲಿಮನೊಬ್ಬ ತೀರಿಕೊಳ್ಳುತ್ತಾನೆ. ನಿಜಾಂಶ ಗೊತ್ತಾದಾಗ ಪ್ರವಾದಿಗಳು ವಿಷ ಕೊಟ್ಟವಳನ್ನು ಕ್ಷಮಿಸಿ ಬಿಡುತ್ತಾರೆ. ಹೀಗೆ ಹಿಜರಾ ನಂತರದ ಹತ್ತು ವರ್ಷಗಳಲ್ಲವರು ಅನೇಕ ಉಪಟಳಗಳ ದಿವ್ಯ ಸರಣಿಯಲ್ಲಿ ವಿಜಯ ಗಳಿಸುತ್ತಾರೆ.ಇಂಥ ದಿವ್ಯಗಳ ನಡುವೆಯೂ ಅವರ ಬದುಕು ದಟ್ಟಾರಣ್ಯದ ನಡುವಣ ಪ್ರಶಾಂತವಾಹಿನಿಯಂತೆ ಪ್ರವಹಿಸುತ್ತದೆ. ಹೊರಗಣ ತುಮುಲ ಗರ್ಜನೆಗಳಿಂದ ವಾಹಿನಿಯ ಶಾಂತಿಗೆ ಭಂಗ ಬಾರದಂತೆ, ಸಮರ ದಂಡ ಯಾತ್ರೆಗಳಿಂದ ಅವರ ಅಂತಃತಪಸ್ಸಿಗೆ ಸ್ವಲ್ಪವೂ ಕ್ಷೋಭೆಯುಂಟಾಗುವುದಿಲ್ಲ.

ಮುಹಮ್ಮದರವರು ಪ್ರವಾದಿ ಪೂರ್ವ ಕಾಲದಿಂದ ಸಚ್ಚಾರಿತ್ರ್ಯವಂತರೆಂದು, ದಯಾಪರರೆಂದು, ವೈರಿ ಪ್ರಿಯರೆಂದು ಹೆಸರುವಾಸಿಯಾಗಿದ್ದರು, ಮಕ್ಕಾ ವಿಜಯದ ನಂತರ ಎಲ್ಲ ವೈರಿಗಳಿಗೆ ಕ್ಷಮಾದಾನ ಮಾಡುತ್ತಾರೆ. ಒಮ್ಮೆ ಸುಮಾಮ ಎಂಬ ಖೈದಿಯೊಬ್ಬ ಪ್ರವಾದಿಗಳನ್ನು ಸಂಬೋಧಿಸಿ “ಮುಹಮ್ಮದರೇ, ನೀವು ನನ್ನನ್ನು ಕೊಲ್ಲುವುದಾದರೆ ಕೊಲೆಗರ್ಹನಾದ ವ್ಯಕ್ತಿಯನ್ನು ಕೊಂದಂತಾಗುತ್ತದೆ. ಬಿಡುಗಡೆ ಮಾಡಿದರೆ ಕೃತಜ್ಞನೊಬ್ಬನನ್ನು ಸಾಕಿದ ಔದಾರ್ಯಕ್ಕೆ ಪಾತ್ರರಾಗುತ್ತೀರಿ” ಎಂದು ನುಡಿಯುತ್ತಾನೆ. ಪ್ರವಾದಿಗಳು ಔದಾರ್ಯವನ್ನು ಮೆರೆಯುತ್ತಾರೆ.

ಸಮಾಜ ಅನುಸರಿಸಬೇಕಾದ ನಡೆನುಡಿಗಳು ಪ್ರವಾದಿಗಳೇ ಹೇಳಿ ಬರೆಯಿಸಿದ ಹದೀಸ್‍ನಲ್ಲಿವೆ. ಅವರ ಬದುಕೇ ಅಲ್ಲಿ ಸಾಕಾರಗೊಂಡಿದೆಯೆಂದರೂ ತಪ್ಪಲ್ಲ. ನಡೆನುಡಿ ಒಂದಾದ ಬದುಕು ಅವರದು. ಜಗತ್ತಿನಲ್ಲಿ ಅಂಥ ವ್ಯಕ್ತಿಗಳು ವಿರಳಾತಿವಿರಳ. ಅವರು ಸತ್ಯಪರರು, ದಾನಶೀಲರು, ಪ್ರತೀಕಾರದೂರರೆಂದು ಸೋತ ಶತ್ರುಗಳಿಗವರು ತೋರಿದ ಅನುಕಂಪದಲ್ಲಿ ವ್ಯಕ್ತವಾಗುತ್ತದೆ. ಜಗತ್ತಿನಲ್ಲಿ ಕಂಡರಿಯದ, ಕೇಳರಿಯದ ಉಪಮಾತೀತ ಸರಳ ಜೀವನ ಅವರದು. ಜೋಳದ ರೊಟ್ಟಿಯನ್ನಾಗಲೀ ಮಾಂಸವನ್ನಾಗಲೀ ಅವರೆಂದೂ ಹೊಟ್ಟೆ ಬಿರಿಯುವಷ್ಟು ತಿನ್ನುತ್ತಿರಲಿಲ್ಲ. ಹಲವು ರಾತ್ರಿ ಉಪವಾಸವಿರುತ್ತಿದ್ದರು. ಮನೆಯವರಿಗೂ ಅಷ್ಟೆ. ನಾಲ್ಕೈದು ಖರ್ಜೂರ ತಿಂದು ನೀರು ಕುಡಿದ ದಿನಗಳೂ ಇದ್ದುವು. ಉಟ್ಟುಕೊಳ್ಳಲು ದೊರಗು ಲುಂಗಿ, ಹೊದೆಯಲೊಂದು ಹಚ್ಚಡ, ಇಷ್ಟೇ ಅವರ ಉಡುಗೆ. ದೊಡ್ಡ ಮಹಲಿನಲ್ಲಿ ಹಂಸ ತೂಲಿಕಾತಲ್ಪದ ಮೇಲೆ ಮಲಗಬಹುದಾಗಿದ್ದ ಈ ಚಕ್ರವರ್ತಿ, ಚಾಪೆಯ ಮೇಲೆ ಮಲಗುತ್ತಿದ್ದುದುಂಟು. ಅವರು ಹಲವು ಸಲ ಹೆಚ್ಚು ಹೊತ್ತು ನಮಾಝ್ ಮಾಡುತ್ತಿದ್ದರು. ನಿಂತು ನಿಂತು ಅವರ ಕಾಲು ಬಾತು ಹೋಗುತ್ತಿದ್ದನ್ನು ಹತ್ತಿರದವರು ನೆನಪಿಗೆ ತರುತ್ತಿದ್ದರೂ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.

ದುಡಿಯದೇ ತಿನ್ನಬಾರದೆಂದು ತಮ್ಮ ಅನುಯಾಯಿಗಳಿಗೆ ಹೇಳುತ್ತಿದ್ದರಲ್ಲದೇ, ಸ್ವತಃ ಅವರದನ್ನು ಆಚರಿಸುತ್ತಿದ್ದರು. ಲಂಚ ಕೊಡುವವರನ್ನು ಮಾತ್ರವಲ್ಲ ಲಂಚ ಪಡೆಯುವವರನ್ನು ಸಹ ಶಪಿಸುತ್ತಿದ್ದರು. ಅನಾಥರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವೆಂದು ಬೋಧಿಸುತ್ತಿದ್ದರು. ಅವರ ಮಾತು ಮೃದು. ಅಶ್ಲೀಲ ಅಥವಾ ನಿಂದೆಯ ಮಾತು ಅಕ್ಷಮ್ಯವೆಂಬುದು ಅವರ ಸವಿನುಡಿ. ಕುರ್‍ಆನ್ ಓದಿಸಿ ಕೇಳುವುದೆಂದರೆ ಅವರಿಗೆ ತುಂಬಾ ಇಷ್ಟ. ಅಲ್ಲಾಹನ ಸಂದೇಶ ಪ್ರವಾದಿಗಳ ಮೂಲಕ ಅವತೀರ್ಣಗೊಂಡಿರುವಾಗ ಅದನ್ನು ಇತರರಿಂದ ಅವರು ಓದಿಸಿ ಕೇಳಬೇಕಾದ ಅಗತ್ಯವುಂಟೇ ಎಂದು ಹತ್ತಿರದವರು ಕೇಳುತ್ತಿದ್ದುದುಂಟು. ಪ್ರವಾದಿಗಳಿಗೆ ಓದು ಬರುತ್ತಿರಲಿಲ್ಲವಷ್ಟೆ. ಭಾಷಾ ಸಾಹಿತ್ಯ ಸೌಂದರ್ಯದಿಂದಾಗಿ ತಾತ್ವಿಕ – ಆಧ್ಯಾತ್ಮಿಕ ಮಹೋನ್ನತಿಯಿಂದಾಗಿ, ಆ ಸಂದೇಶವನ್ನು ಎಷ್ಟು ಸಲ ಕೇಳಿಸಿಕೊಂಡರೂ ಆನಂದವಾಗುತ್ತದೆಂದು ಕೇಳುಗರಿಗೆ ಉತ್ತರ ಹೇಳುತ್ತಿದ್ದರು. ಈ ಜಗತ್ತಿನಲ್ಲಿ ಅಲ್ಲಾಹನಿಗೆ ಇತರರು ಸರಿಸಮಾನರೆಂದು ಹೇಳುವುದೇ ದೊಡ್ಡ ಪಾಪವೆಂದು ಸ್ಪಷ್ಟಪಡಿಸುತ್ತಿದ್ದರು.

ಮುಹಮ್ಮದ್ ನಿಜವಾದ ಜಗದ್ಗುರು, ಅಲ್ಲಾಹನ ಕೃಪೆಗೆ ಪಾತ್ರರಾದ ಪುಣ್ಯ ಪುರುಷರು. ಅಷ್ಟಾದರೂ ಅವರು ವಿನಯವಂತರು. ಎಲ್ಲ ಕಾಲಕ್ಕೂ, ಎಲ್ಲ ಜನಾಂಗಗಳಿಗೂ ಒಪ್ಪಬಹುದಾದ ಧರ್ಮಕ್ಕೆ ಮೂಲವಾದ ಕುರ್‍ಆನ್ ಅವತೀರ್ಣವಾಗಲು ನಿಮಿತ್ತರಾದ ಮಹಾ ಪುರುಷರು, ಜಗದ್ವಂದ್ಯರು. ಆ ಧರ್ಮ ಗ್ರಂಥ ಒಮ್ಮೆಲೆ ಪೂರ್ಣವಾಗಿ ಅವತೀರ್ಣಗೊಂಡಿಲ್ಲ. ಸೂತ್ರ ಸೂತ್ರವಾಗಿ, ಖಂಡ ಖಂಡವಾಗಿ ಇಪ್ಪತ್ತಮೂರು ವರ್ಷಗಳ ದೀರ್ಘ ಅವಧಿಯಲ್ಲಿ ಪ್ರವಾದಿಗಳ ಮಾನಸಾಕಾಶದ ಮೂಲಕ ಧರೆಗಿಳಿದ ಗ್ರಂಥ. ಅದು ಪ್ರಧಾನವಾಗಿ ಧಾರ್ಮಿಕ ಗ್ರಂಥವಾದರೂ ಪಾರಮಾರ್ಥಿಕ ವಿಷಯಗಳ ಜತೆಗೆ ಮಾನವನ ಜೀವನಕ್ಕಗತ್ಯವಾದ ಜಗತ್ವ್ಯವಹಾರಗಳನ್ನೆಲ್ಲ ಒಳಗೊಂಡಿದೆ. ವೈಜ್ಞಾನಿಕ ವಿಚಾರಗಳ ಜತೆಗೆ ಸಾಮಾಜಿಕ ಕ್ರಾಂತಿಯ ವಿಷಯಗಳೂ ಇವೆ. ಇಷ್ಟೇ ಅಲ್ಲ ನಾಗರಿಕತೆಯ ವಿಕಾಸವಾದಕ್ಕೆ ವಿರುದ್ಧವಾಗದ ಸಂಗತಿಗಳು ಇವೆ, ಅದು ಇಹ ಜೀವನದ ಸುಖ ಸೌಕರ್ಯಗಳನ್ನು ನಿರ್ಲಕ್ಷಿಸದೆ, ಮನುಷ್ಯ ಜೀವನದ ರಾಜಕೀಯಾರ್ಥಿಕಾದಿ ಸಕಲ ಕ್ಷೇತ್ರಗಳಿಗೆ ಅನ್ವಯಿಸುವ ಸಮಗ್ರ ಜೀವನ ಕ್ರಮಕ್ಕೆ ಅದು ಕನ್ನಡಿ ಹಿಡಿಯುವುದಲ್ಲದೆ, ವಿನೂತನ ಕ್ರಮಗಳಿಗೆ ಹಾಗೂ ಜ್ಞಾನ ಸಂಪಾದನೆಗೆ ಪ್ರೇರಣೆ ನೀಡುತ್ತದೆ. ಶೋಷಣೆ ಅಸಮಾನತೆ ಅನ್ಯಾಯ ಮೊದಲಾದ ದೌಷ್ಟ್ರ್ಯ ದೌರ್ಜನ್ಯಗಳನ್ನು ತಡೆಯುತ್ತದೆ. ನೀತಿ ಶೀಲ ಸುಸಂಸ್ಕಾರವನ್ನು ಪೋಷಿಸುತ್ತದೆ. ಅದರ ಸ್ಪೂರ್ತಿ ಪ್ರೇರಣೆಗಳಿಂದಾಗಿಯೇ ಗಣಿತ, ಖಗೋಲ, ಭೌತ, ರಸಾಯನ, ಜೈವಿಕ, ವೈದ್ಯಶಿಲ್ಪ, ವಿಜ್ಞಾನಿಗಳಲ್ಲಿ, ತತ್ವಶಾಸ್ತ್ರ, ಸಾಹಿತ್ಯ, ರಾಜಕೀಯ, ಇತಿಹಾಸ ಮೊದಲಾದ ಜ್ಞಾನ ಕ್ಷೇತ್ರಗಳಲ್ಲಿ ಮುಸ್ಲಿಮ್ ವಿದ್ವಾಂಸರು ಗಳಿಸಿರುವ ಜ್ಞಾನ ಸೇವೆಯನ್ನದು ಒಪ್ಪಿಕೊಳ್ಳುತ್ತದೆ. ಆಧುನಿಕ ವಿಜ್ಞಾನಾವಿಷ್ಕಾರವನ್ನದು ಎಂದಿಗೂ ತಿರಸ್ಕರಿಸುವುದಿಲ್ಲ.

ಕುರ್‍ಆನ್ ಉದ್ಭವಿಸಿ ಒಂದು ಸಾವಿರದ ನಾನೂರು ವರ್ಷಗಳಾದರೂ ಪ್ರಪಂಚ ವ್ಯಾಪಿಯಾಗಿದ್ದರೂ ಅದರ ಶುದ್ಧಿಯನ್ನು ರಕ್ಷಿಸಿಕೊಂಡು ಬರಲಾಗಿದೆ. ಅದನ್ನು ಮತ್ತೆ ಮತ್ತೆ ಓದಿಸಿ ಕೇಳಿದ ಪ್ರವಾದಿಗಳೇ ಪಾರಾಂತರ ಪರಿಶುದ್ಧಿಗೆ ಸಾಕ್ಷಿಯಾಗಿದ್ದಾರೆ. ಜಗತ್ತಿನ ಯಾವ ಮೂಲೆಯ ವಿದ್ವಾಂಸರು ವ್ಯಾಖ್ಯಾನ ಮಾಡಿದರೂ ಆ ವ್ಯಾಖ್ಯಾನವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅದರಲ್ಲಿ ದ್ವ್ಯೆಥೀಭಾವಕ್ಕಾಗಲಿ, ಅನ್ಯಾರ್ಥಕ್ಕಾಗಲಿ ಎಡೆಯಿಲ್ಲ. ಈ ನಿಶ್ಚಿತಾರ್ಥ ಸ್ವಾಯಿತ್ವ, ಪರಿಶುದ್ಧಿಗಳಿಂದಾಗಿ ಅದು ಸುರಕ್ಷಿತವೆಂದು ಘೋಷಿಸುವುದರಲ್ಲಿ ತಪ್ಪಿಲ್ಲ. ಮೂರ್ತಿ ಪೂಜೆ, ಬಹುದೇವಾರಾಧನೆ, ವ್ಯಕ್ತಿ ಪೂಜೆಗಳನ್ನು ಇಸ್ಲಾಮ್ ವಿರೋಧಿಸುತ್ತದೆ ಮತ್ತು ವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳನ್ನು ಒಪ್ಪುತ್ತದೆ. ಏಕದೇವತಾರಾಧನೆ (ತೌಹೀದ್), ದಾನ (ಝಕಾತ್), ಪ್ರಾರ್ಥನೆ (ನಮಾಝ್), ತೀರ್ಥ ಯಾತ್ರೆ (ಹಜ್ಜ್) ಮತ್ತು ಉಪವಾಸ ಇಸ್ಲಾಮಿನ ತಳಹದಿಗಳೆಂದು ನಂಬಲಾಗಿದೆ.

ಜಗತ್ತಿನ ಯಾವ ಜನಾಂಗವಾದರೂ ಒಪ್ಪುವಂಥವು ಇವು. ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ (ಕುರ್‍ಆನ್: 2: 256). ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ. (109:6) ಈ ಸೂತ್ರಗಳನ್ನು ಗಮನಿಸುವಾಗ ‘ಜಿಹಾದ್’ ಬಗ್ಗೆಯೂ ಆಕ್ಷೇಪವೆತ್ತುವಂತಿಲ್ಲ. ಕುರ್‍ಆನ್ ಜತೆಗೆ ಹದೀಸ್, ಸೇರಿದರೆ ಇಸ್ಲಾಮ್ ಧರ್ಮ ಪೂರ್ಣವಾಗುತ್ತದೆ. ಹದೀಸ್ ಪ್ರವಾದಿಗಳ ಅಂತರ್ವಾಣಿ, ಜನಜೀವನಕ್ಕನ್ವಯವಾಗುವ, ಅವರ ನಡಾವಳಿಯನ್ನೊಳಗೊಂಡ ವಚನಗಳು. ಅವು ಮುಸ್ಲಿಮರಿಗೆ ಮಾತ್ರ ಅನ್ವಯವಾಗುವ ಬೋಧೆಯಲ್ಲ. ಇಡೀ ವಿಶ್ವವೇ ಅನುಸರಿಸಬಹುದಾದ ಬೋಧಾಮೃತ. ಯಾವ ದೃಷ್ಟಿಯಿಂದ ನೋಡಿದರೂ ಮುಹಮ್ಮದ್ ಜಗತ್ತು ಗೌರವಿಸಬೇಕಾದ ಪವಿತ್ರ ವ್ಯಕ್ತಿ. ಅವರ ಉಪದೇಶ ಸಕಲರೂ ಅನುಸರಿಸಬೇಕಾದ ಶಾಶ್ವತ ಮೌಲ್ಯ, ಇಸ್ಲಾಮ್ ಜಗತ್ತಿನ ಶ್ರೇಷ್ಠ ಧರ್ಮವೆಂದು ಸ್ಪಷ್ಟಪಡಿಸಬಹುದಾಗಿದೆ.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *