Breaking News
Home / ಲೇಖನಗಳು / ಪ್ರವಾದಿ ಮುಹಮ್ಮದ್ ಪೈಗಂಬರ್: ನಾನು ಕಂಡಂತೆ – ಪ್ರೊ| ಆರ್.ಎಸ್. ನಾಯಕ, ಭಟ್ಕಳ

ಪ್ರವಾದಿ ಮುಹಮ್ಮದ್ ಪೈಗಂಬರ್: ನಾನು ಕಂಡಂತೆ – ಪ್ರೊ| ಆರ್.ಎಸ್. ನಾಯಕ, ಭಟ್ಕಳ

ಪ್ರೊ| ಆರ್.ಎಸ್. ನಾಯಕ, ಭಟ್ಕಳ

ಅರಸರಾದಾಗಲೂ ಅವರು ಬಡತನದ ಜೀವನವನ್ನೇ ನಡೆಸಿದರು. ಚಿಕ್ಕದಾದ ಗುಡಿಸಲಿನಲ್ಲಿ ವಾಸಿಸಿದರು. ತಮ್ಮ ಪಾದರಕ್ಷೆಗಳನ್ನು ತಾವೇ ಸರಿಪಡಿಸಿಕೊಳ್ಳುತ್ತಿದ್ದರು. ಬಟ್ಟೆ ಹೊಲಿಯುತ್ತಿದ್ದರು, ಹಾಲು  ಕರೆಯುತ್ತಿದ್ದರು. ಅರೇಬಿಯಾ ನಾಡಿನಲ್ಲಿ ಸಂಪತ್ತಿನ ಹೊಳೆ ಹರಿಯುವ ಕಾಲದಲ್ಲಿಯೂ ರಾಜನ ಮನೆಯ ಒಲೆಯಲ್ಲಿ ಬೆಂಕಿ ಉರಿಯುತ್ತಿರಲಿಲ್ಲ. ಖರ್ಜೂರ ಮತ್ತು ನೀರಿನಿಂದಷ್ಟೇ ಊಟ ಮುಗಿಸುತ್ತಿದ್ದ  ಅವರಿಗೆ ಅಂಗ ರಕ್ಷಕರೂ ಇರಲಿಲ್ಲ. ಯಾರಾದರೂ ಎದ್ದು ನಿಂತು ತನಗೆ ಗೌರವ ಸೂಚಿಸುವುದನ್ನೂ ಅವರು ಇಷ್ಟಪಡುತ್ತಿರಲಿಲ್ಲ. ತಮ್ಮನ್ನು ಯಾರಾದರೂ ಅತಿಯಾಗಿ ಹೊಗಳಿದರೆ ತುಂಬಾ ಕಸಿವಿಸಿಗೊಳ್ಳುತ್ತಿದ್ದರು. ದೇವರ ದಾಸ ಎಂದು ಮಾತ್ರ ತನ್ನನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದ ಅವರು ಸಾವನ್ನಪ್ಪಿದಾಗ ಕೆಲವೇ ಕೆಲವು ನಾಣ್ಯಗಳು ಮಾತ್ರ ಅವರ ಸಂಪತ್ತಾಗಿದ್ದವು. ಮದೀನಾದ ಅಧಿಪತಿಯಾದ ಅವರು ವಿನಮ್ರತೆ ಮತ್ತು ಸರಳತೆಯ ಮೂಲಕ ಆಳುವವರು ತಮ್ಮ ಬದುಕನ್ನು ಹೇಗೆ ಒಪ್ಪಗೊಳಿಸಿಕೊಳ್ಳಬಹುದು ಎಂಬುದಕ್ಕೆ ಒಂದು ಉದಾಹರಣೆಯಂತಿದ್ದರು. ಇಷ್ಟು ಬಡತನವನ್ನು, ಸರಳತೆಯನ್ನು ಮತ್ತು ವಿನಮ್ರತೆಯನ್ನು ಬದುಕಿದ ಅರಸ ಯಾವುದೇ ಕಾಲದ, ಯಾವುದೇ ನಾಡಿನ ಚರಿತ್ರೆಯಲ್ಲಿ ಮತ್ತೊಬ್ಬರು ಸಿಗಲು ಸಾಧ್ಯವೇ ಇಲ್ಲ.

ಈ ಲೋಕದಲ್ಲಿ ಇಂತಹವರೂ ಇರಲು ಸಾಧ್ಯವೇ? ಯಾರು, ಯಾರವರು?!

ಉತ್ತರ ಸ್ಪಷ್ಟವಿದೆ: ಅವರೇ ಪ್ರವಾದಿ ಮಹಮ್ಮದ್ ಪೈಗಂಬರ್!!

ಪ್ರವಾದಿ ಮಹಮ್ಮದ್ ಪೈಗಂಬರರನ್ನು ಪ್ರವಾದಿ ಎಂದು, ಮಕ್ಕಾ ಸಮೀಪದ ಹಿರಾ ಗುಹೆಯಲ್ಲಿ ಧ್ಯಾನಸ್ಥರಾಗಿದ್ದ ಕಾಲದಲ್ಲಿ ಅವರಿಗೆ ದೇವದೂತರ ಮೂಲಕ ದೇವ ಸಂದೇಶ ದೊರೆ ಯಿತೆಂದು, ಆ ದೇವ ಸಂದೇಶವನ್ನು ಇಳೆಯ ಜನರಿಗೆ ಪರಿಚಯಿಸಿದ ವಾಹಕ ವ್ಯಕ್ತಿ ಅವರೆಂದು ನಂಬಲಾಗಿದೆ. ಕೆಲವರಂತೂ ಇಸ್ಲಾಂ ಧರ್ಮ ಸ್ಥಾಪನೆಯಾದದ್ದೇ ಮುಹಮ್ಮದರಿಂದ ಎಂದು ನಂಬಿದ್ದಾರೆ. ಇಂತಹ ನಂಬಿಕೆಗಳಿಂದ ಮಾತ್ರವೇ ಅವರು ಶ್ರೇಷ್ಠರೆನಿಸಿಕೊಂಡವರಲ್ಲ. ಬದಲಾಗಿ ಅತ್ಯುತ್ತಮ ಗುಣಗಳಾದ ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಮಾನವೀಯತೆ, ಸರಳತೆ, ವಿಧೇಯತೆ, ಕರುಣೆ ಮತ್ತು ಉತ್ತಮ ನಡವಳಿಕೆಗಳಿಂದ ಅವರು ಶ್ರೇಷ್ಠತೆಯ ಉತ್ತುಂಗಕ್ಕೇರಿದರು ಎನಿಸುತ್ತದೆ. ಆದ್ದರಿಂದ ಅಂತಹ ನಂಬಿಕೆಯ ಸತ್ಯಾಸತ್ಯತೆಯನ್ನು ಚರ್ಚಿಸುವುದು ಇಲ್ಲಿ ಅಪ್ರಸ್ತುತ. ಹೆಚ್ಚು ಪ್ರಸ್ತುತವೆನಿಸುವುದು ಆ ವ್ಯಕ್ತಿಯ ಬದುಕು ಮತ್ತು ಚಿಂತನೆಯ ರೀತಿ ಮನುಕುಲವನ್ನು ಸನ್ಮಾರ್ಗದಲ್ಲೊಯ್ಯಲು ಯಾವ ರೀತಿ ಪ್ರೇರಣೆಯಾಗಿದೆ ಎಂಬುದು. ಈ ದಿಶೆಯಲ್ಲಿ ಚಿಂತಿಸಲು ಇದು ಸಕಾಲ.

ತೀರ ಚಿಕ್ಕ ವಯಸ್ಸಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡ ಮತ್ತು ಅವಿದ್ಯಾವಂತನಾದ ಮನುಷ್ಯನನ್ನು ಕೈ ಹಿಡಿದು ಮುನ್ನಡೆಸಿ ಅತ್ಯುನ್ನತ ಸ್ಥಾನಕ್ಕೇರಿಸಿದ್ದು ಉನ್ನತ ಗುಣಗಳು ಮತ್ತು ಆದರ್ಶ ಬದುಕೇ ಹೊರತು ಮತ್ಯಾವುದೂ ಅಲ್ಲ. ಇವು ಮುಹಮ್ಮದರನ್ನು ಧಾರ್ಮಿಕವಾಗಿ ಮಾತ್ರವೇ ಉನ್ನತ ಸ್ಥಾನಕ್ಕೇರಿಸಲಿಲ್ಲ; ಅವರು ಸಾಮಾಜಿಕವಾಗಿ, ರಾಜಕೀಯವಾಗಿ ಉನ್ನತರಾಗಲೂ ಇವು ಕಾರಣವಾದವು.

ದೇವನ ದೃಷ್ಟಿಯಲ್ಲಿ ಜೀವಿಗಳಲ್ಲಿ ಯಾವುದೇ ತಾರತಮ್ಯವಿಲ್ಲವೆಂದು ಪ್ರವಾದಿ ಬಲವಾಗಿ ನಂಬಿದ್ದರು ಮತ್ತು ಅದೇ ದೃಷ್ಟಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಜಾತಿ, ಕುಲ, ಗೋತ್ರಗಳ ಆಧಾರದ ಮೇಲಾಗಲಿ; ಮೈ ಬಣ್ಣ ಮತ್ತು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲಾಗಲಿ ಮನುಷ್ಯರಲ್ಲಿ ಭೇದ ಸೃಷ್ಟಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಇದಕ್ಕಾಗಿ ಅವರು ಅನೇಕ ಜನರ ತಿರಸ್ಕಾರ ಬಹಿಷ್ಕಾರಗಳನ್ನು, ಅವಮಾನಗಳನ್ನು, ದೈಹಿಕ ಹಲ್ಲೆಯನ್ನು ಅನುಭವಿಸಬೇಕಾಯಿತು. ಹಾಗಿದ್ದರೂ ದೈವ ಭಯವೊಂದನ್ನು ಬಿಟ್ಟು ಅವರು ಮತ್ತೆ ಯಾವುದಕ್ಕೂ ಹೆದರುತ್ತಿರಲಿಲ್ಲ. ಇಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅಲ್ಲಿ ಸೃಷ್ಟಿಕರ್ತನೆದುರು ಉತ್ತರಿಸಬೇಕಾಗುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಅವರ ದೃಷ್ಟಿಯಲ್ಲಿ ಪರಸ್ಪರ ಪ್ರೀತಿಯಿಂದ, ಪ್ರಾಮಾಣಿಕತೆಯಿಂದ ಬದುಕುವುದನ್ನು ದೇವರು ಮೆಚ್ಚುಕೊಳ್ಳುತ್ತಾನೆ. ಹಾಗೆ ಬದುಕುವುದೇ ಅವರಿಗೆ ದೈವಾರಾಧನೆಯಾಗಿತ್ತು.

ಶಾಂತಿಯ ಸಂದೇಶವಾಹಕರಾದ ಪ್ರವಾದಿಗಳು ‘ಗಡಿ ಮತ್ತು ಪ್ರಜೆಗಳ ರಕ್ಷಣೆಗಾಗಿ ಮಾತ್ರವೇ ಯುದ್ಧ ಮಾಡಬೇಕು’ ಎಂಬ ಧೋರಣೆಯನ್ನು ಹೊಂದಿದ್ದರು. ಅಲ್ಲಾಹನ ಸಂದೇಶವನ್ನು ಜಗತ್ತಿಗೆ ಸಾರುವ ಸಂದರ್ಭದಲ್ಲಿ ಅನೇಕ ಕಂದಾಚಾರಿಗಳು ಪ್ರವಾದಿವರ್ಯರಿಗೆ ಮತ್ತು ಅವರ ಅನುಯಾಯಿಗಳಿಗೆ ಹಿಂಸೆ ಕೊಟ್ಟು ತಡೆಯೊಡ್ಡಲು ಪ್ರಯತ್ನಿಸುತ್ತಿದ್ದರು. ಆವಾಗ ಅನಿವಾರ್ಯವಾಗಿ ಅವರೊಡನೆ  ಹೋರಾಡಬೇಕಾಗುತ್ತಿತ್ತು. ಆ ಸಂದರ್ಭದಲ್ಲಿ ಪ್ರವಾದಿವರ್ಯರು ತಮ್ಮ ಅನುಯಾಯಿಗಳಿಗೆ ಹೇಳುತ್ತಿದ್ದರು- “ನೀವು ಯಾರನ್ನೂ ಮೋಸ ಮಾಡತಕ್ಕದ್ದಲ್ಲ. ಹೆಂಗಸರನ್ನು, ಮುಪ್ಪಿನವರನ್ನು ನೋಯಿಸ ಕೂಡದು. ಕೂಸುಗಳನ್ನು ಕೊಲ್ಲ ಕೂಡದು. ಯುದ್ಧವನ್ನು ಮಾಡದೆ ಮನೆಯಲ್ಲಿ ಇರುವ ನಾಗರಿಕರಿಗೆ ತೊಂದರೆ ಮಾಡಬಾರದು. ಜನರ ಅನ್ನ, ವಸ್ತ್ರಗಳನ್ನು ನಾಶ ಮಾಡಬಾರದು. ಸತ್ಯವನ್ನು  ಸ್ಥಾಪಿಸುವುದಕ್ಕಾಗಿ ನಮ್ಮ ಹೋರಾಟ”. ಇದಕ್ಕಿಂತ ಮಹಾ ಮಾನವೀಯತೆಯನ್ನು ನಾವು ಮತ್ತೆಲ್ಲಿ ಹುಡುಕಲು ಸಾಧ್ಯ? ಇಂತಹ ಮಾನವೀಯ ಮತ್ತು ದೈವೀಶಕ್ತಿಯ ಎದುರು ಮುಂದೆ ರೋಮ್  ಸಾಮ್ರಾಜ್ಯ ಸೋತು ಮಂಡಿಯೂರಬೇಕಾದ ಪರಿಸ್ಥಿತಿ ಬಂತು. ‘ಹರಳು ನುಣುಪಾಗುವುದು ಕೊಡಲಿಯ ಆಘಾತದಿಂದಲ್ಲ; ಅಲೆಗಳ ನರ್ತನದಿಂದ’ ಎಂಬುದು ಮುಹಮ್ಮದ್‌ರಿಗೆ ಚೆನ್ನಾಗಿ ಗೊತ್ತಿತ್ತು.

ಮಾನವ ಕುಲ ತಾನೊಂದೆವಲಂ ಅಥವಾ ವಸುದೈವ ಕುಟುಂಬಕಂ ಎಂಬ ತತ್ತ್ವ ಪೈಗಂಬರರ ಮಾತು ಮತ್ತು ಕೃತಿಯಲ್ಲಿ ಧಾರಾಳವಾಗಿ ಬೆರೆತಿದೆ. ಅರಬ್ಬಿ-ಅರಬಿಯೇತರ, ಬಿಳಿಯ-ಕರಿಯ ಇವರಲ್ಲಿ  ಯಾರು ಶ್ರೇಷ್ಠರೂ ಅಲ್ಲ, ಯಾರು ಕನಿಷ್ಠರೂ ಅಲ್ಲ. ಭೂಮಿಯಲ್ಲಿರುವ ಎಲ್ಲ ಮಾನವರು ಒಂದೇ ತಾಯ್ತಂದೆಯರ ಮಕ್ಕಳೆಂದು ಅವರು ಹೇಳುತ್ತಿದ್ದರು. ಅವರ ನುಡಿ ಮತ್ತು ನಡೆ ಎರಡೂ ಒಂದೇ ಆಗಿದ್ದವು. ಪವಿತ್ರ ನಮಾಜಿಗಾಗಿ ದಿನಕ್ಕೆ ಐದು ಬಾರಿ ಕೂಗಿ ಕರೆಯಲು ಅವರು ಕರಿಯನೂ ಗುಲಾಮನೂ ಆಗಿದ್ದ ಬಿಲಾಲ್ ಎಂಬ ವ್ಯಕ್ತಿಯನ್ನು ನೆಮಿಸಿದ್ದರು. ಯಹೂದಿಯೊಬ್ಬನ ಶವವನ್ನು ಸಂಸ್ಕಾರಕ್ಕೆ ತೆಗೆದು ಕೊಂಡು ಹೋಗುವುದನ್ನು ಕಂಡಾಗ ಪ್ರವಾದಿ ಎದ್ದು ನಿಂತು ಗೌರವ ಸೂಚಿಸಿದ್ದರು. ಅವರು ಆ ವ್ಯಕ್ತಿಯಲ್ಲಿ ಮನುಷ್ಯನನ್ನು ಕಾಣುತ್ತಿದ್ದರೇ ಹೊರತು ಜಾತಿ ಮತ ಪಂಥವನ್ನಲ್ಲ. ಅವರು  ಬೇಸಾಯಕ್ಕಾಗಿ ಜಮೀನನ್ನು ಯಹೂದಿಯರಿಗೆ ನೀಡುತ್ತಿದ್ದರು.

ಶ್ರೇಷ್ಠ ಸಮಾಜ ಸುಧಾರಕರೂ ಆದ ಮುಹಮ್ಮದರ ವಿಚಾರಗಳು ಮತ್ತು ಅವರು ಅನುಷ್ಠಾನಗೊಳಿಸಿದ ಅನೇಕ ಕಾರ್ಯಗಳು ಇಂದಿಗೂ ಪ್ರಸ್ತುತ. ಇವರು ಮಾದಕ ವಸ್ತುಗಳು, ಮದ್ಯಪಾನ, ವೇಶ್ಯಾವಾಟಿಕೆಗಳನ್ನು ನಿಷೇಧಿಸುವುದರೊಂದಿಗೆ ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸಿದರು. ಎಲ್ಲರಿಗೂ ಜ್ಞಾನವನ್ನು, ಅದರಲ್ಲೂ ಪ್ರಯೋಜನಕಾರಿಯಾದ ಜ್ಞಾನವನ್ನು ಪಡೆಯುವಂತೆ ತಿಳಿಸುತ್ತಿದ್ದರು. ಕಾರ್ಮಿಕರ ಶೋಷಣೆಯನ್ನು ಖಂಡಿಸಿದರು. ಮಹಿಳೆಯರಿಗೆ ತಮ್ಮ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸಿದರು. ಮುಕ್ತ ವ್ಯಾಪಾರ ಮತ್ತು ನೈತಿಕ ಬಂಡವಾಳ ಹೂಡಿಕೆಯನ್ನು ಬೆಂಬಲಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಪರಿಸರ ಪ್ರೇಮಿಯಾಗಿದ್ದರು.

ಮುಹಮ್ಮದರು ಒಬ್ಬ ಸ್ತ್ರೀ ವಿಮೋಚಕರಾಗಿ ಕಂಡು ಬರುತ್ತಾರೆ. ಮಹಿಳೆಯರ ಸ್ಥಾನಮಾನವನ್ನು, ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವುದನ್ನು ಅವರು ಬಯಸುತ್ತಿದ್ದರು. ಹೆಣ್ಣು ಮಕ್ಕಳ ಕೊಲೆಯನ್ನು ಸಂಭ್ರಮಿಸುತ್ತಿದ್ದ ಸಮುದಾಯವನ್ನು ಸರಿದಾರಿಗೆ ತಂದವರೇ ಪ್ರವಾದಿಯವರು. ಮಹಿಳೆಯರಿಗೆ ಶಿಕ್ಷಣ ಪಡೆಯುವ, ಆಸ್ತಿಯನ್ನು ಸಂಪಾದಿಸುವ, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ವಿಚ್ಛೇದನ ಪಡೆಯುವ, ಮರು ವಿವಾಹವಾಗುವ ಹಕ್ಕುಗಳನ್ನು ಅವರು ಘೋಷಿಸಿದ್ದರು. ‘ಯಾರು ತಮ್ಮ ಮಡದಿಯರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವರೋ ಅವರೇ ಅತ್ಯುತ್ತಮರು’ ಎಂದು ಇವರು ಹೇಳುತ್ತಿದ್ದರು. ‘ಸ್ವರ್ಗವು ನಿಮ್ಮ ತಾಯಿಯ ಪಾದಗಳಲ್ಲಿ ಅಡಗಿದೆ’ ಎಂಬ ಮಾತು ‘ಮಾತೃದೇವೋಭವ’ ಎಂಬ ಸನಾತನ ನುಡಿಗೆ ಸರಿದೊರೆಯಾಗಿದೆ.

ಮುಹಮ್ಮದರನ್ನು ಇಸ್ಲಾಂನ ಒಬ್ಬ ಪ್ರವಾದಿಯೆಂದೋ ಅರಬ್‌ನ ಒಬ್ಬ ಮುಖಂಡರೆಂದೋ ಭಾವಿಸಿದರೆ ಅವರ ಘನ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿದಂತಾಗುತ್ತದೆ. ಅವರನ್ನು ಒಬ್ಬ ಮಹಾ ಮಾನವತಾವಾದಿಯೆಂದೂ ಮನುಕುಲಕ್ಕೆ ದೊರೆತ ಒಬ್ಬ ಆದರ್ಶ ವ್ಯಕ್ತಿಯೆಂದೂ ತಿಳಿಯುವುದು ಹೆಚ್ಚು ಸಮಂಜಸ. ಅವರಾಡುವ ಮಾತುಗಳು ದೇಶಾತೀತ ಮತ್ತು ಕಾಲಾತೀತವಾದ ಸತ್ಯ ನುಡಿಗಳಾಗಿದ್ದವು.  ‘ಮಾನವ ಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ಕನ್ನಾಡಿನ ದಾಸವರೇಣ್ಯರು ಹದಿನಾರನೆಯ ಶತಮಾನದಲ್ಲಿ ನುಡಿದಿದ್ದಾರೆ. ಆದರೆ ಅವರಿಗಿಂತ ಪೂರ್ವದಲ್ಲಿಯೇ  ಪ್ರವಾದಿಗಳು ಹೇಳಿದ್ದಾರೆ. ಅವರು ‘ತಾರುಣ್ಯವನ್ನು ವೃದ್ಧಾಪ್ಯಕ್ಕಿಂತ ಮೊದಲು, ಆರೋಗ್ಯವನ್ನು ಅನಾರೋಗ್ಯಕ್ಕಿಂತ ಮೊದಲು, ಶ್ರೀಮಂತಿಕೆಯನ್ನು ದಾರಿದ್ರ್ಯಕ್ಕಿಂತ ಮೊದಲು, ಬಿಡುವನ್ನು ನಿಬಿಡತೆಗಿಂತ  ಮೊದಲು ಮತ್ತು ಜೀವನವನ್ನು ಮರಣಕ್ಕಿಂತ ಮೊದಲು ಸದುಪಯೋಗಪಡಿಸಿಕೊಳ್ಳಿರಿ’ ಎನ್ನುತ್ತಿದ್ದರು.

ಮನುಷ್ಯ ಆತ್ಮಾವಲೋಕನ ಮಾಡಿಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕೆಂಬುದು ಪ್ರವಾದಿಗಳ ಇಚ್ಚೆಯಾಗಿತ್ತು. ಜೀವನವನ್ನು ಎಂತಹ ಕಾರ್ಯಗಳಲ್ಲಿ ವ್ಯಯಿಸಿದೆ? ಯೌವನವನ್ನು  ಎಂತಹ ಕಾರ್ಯದಲ್ಲಿ ತೊಡಗಿಸಿದೆ? ಸಂಪತ್ತನ್ನು ಯಾವ ಮೂಲದಿಂದ ಸಂಪಾದಿಸಿದೆ? ಸಂಪಾದಿಸಿದ ಸಂಪತ್ತನ್ನು ಯಾವ ರೀತಿ ಖರ್ಚು ಮಾಡಿದೆ? ಗಳಿಸಿದ ಜ್ಞಾನವನ್ನು ಎಷ್ಟರ ಮಟ್ಟಿಗೆ ಅ ನುಸರಿಸಿದೆ? ಈ ಇಂತಹ ಪ್ರಶ್ನೆಗಳನ್ನು ಮನುಷ್ಯ ತನಗೆ ತಾನೇ ಕೇಳಿಕೊಂಡು, ತನಗೆ ತಾನೇ ಉತ್ತರ ಕಂಡು ಕೊಂಡು, ತನ್ನನ್ನು ತಾನೇ ತಿದ್ದಿಕೊಂಡು ಬೆಳೆಯಬೇಕು. ಆದರೆ ಏನು ಮಾಡೋಣ. ಜಗತ್ತಿಗೆಲ್ಲ ಪ್ರಶ್ನೆ ಕೇಳುವ ನಾವು ನಮ್ಮನ್ನು ಮಾತ್ರ ಪ್ರಶ್ನಿಸಿಕೊಳ್ಳುತ್ತಿಲ್ಲ. ಅದಕ್ಕಾಗಿಯೇ ಜಗತ್ತಿನಲ್ಲಿ ಮೂರ್ಖರ ಮತ್ತು ಅಪರಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲಿದೆ.

ಜನರ ಮೇಲೆ ಯಾರು ಕರುಣೆ ತೋರುವುದಿಲ್ಲವೋ ಅವರ ಮೇಲೆ ದೇವರು ಕರುಣೆ ತೋರುವುದಿಲ್ಲವೆಂದು ಅವರು ಬಲವಾಗಿ ನಂಬಿದ್ದರು. ‘ನಿಮ್ಮ ಜೊತೆ ಉತ್ತಮವಾಗಿ ವರ್ತಿಸುವವರ ಜೊತೆ ಉತ್ತಮವಾಗಿ ವರ್ತಿಸುವುದಷ್ಟೇ ಅಲ್ಲ, ನಿಮ್ಮ ಜೊತೆ ಕೆಟ್ಟದಾಗಿ ವರ್ತಿಸುವವರ ಜೊತೆಯೂ ನೀವು ಉತ್ತಮವಾಗಿ ವರ್ತಿಸಿ’ ಎಂಬ ಅವರ ಮಾತು ಮಾರ್ಮಿಕ. ಈ ಸೃಷ್ಟಿಯಲ್ಲಿರುವ ಯಾವ ವಸ್ತುಗಳನ್ನು ಯಾರೂ ಮನಬಂದಂತೆ ಬಳಸಿಕೊಳ್ಳಬಾರದು, ತನಗೆ ಧರ್ಮಬದ್ಧವಾದ ವಸ್ತುವನ್ನು, ಧರ್ಮಬದ್ಧವಾದ ಉದ್ದೇಶಕ್ಕಾಗಿ, ಧರ್ಮಬದ್ಧ ವಿಧಾನದಿಂದ ಬಳಸಿಕೊಳ್ಳಬೇಕು ಎಂಬ ನುಡಿ, ಇಂದು ಅಕ್ರಮ ಗಳಿಕೆಯ ಮೂಲಕ ಜೈಲು ಸೇರುವವರಿಗೇ ಹೇಳಿದಂತಿದೆಯಲ್ಲವೆ? ಒಂದು ಪ್ರಾಣಿಯಿರಲಿ, ಪಕ್ಷಿಯಿರಲಿ, ಅಷ್ಟೇ ಏಕೆ ಗಿಡ ಮರಗಳಿಗೆ ಅನಗತ್ಯವಾಗಿ ಹಾನಿಯುಂಟು ಮಾಡಿದರೆ ಅದು ಪರಲೋಕದಲ್ಲಿ ವಿಚಾರಣಾರ್ಹವಾದ ಮತ್ತು ಶಿಕ್ಷಾರ್ಹವಾದ ಅಪರಾಧವಾಗಿದೆ ಎಂದರು.

ಮುಹಮ್ಮದರ ಒಂದೊಂದು ನುಡಿ ಮುತ್ತುಗಳು ಬದುಕಿನ ದಾರಿ ದೀಪಗಳಂತಿವೆ. ‘ಶ್ರೀಮಂತಿಕೆಯೇಂಬುದು ಸಂಪತ್ತಿನ ಆಧಿಕ್ಯದ ಹೆಸರಲ್ಲ, ಮನಸ್ಸಿನ ಶ್ರೀಮಂತಿಕೆಯೇ ನಿಜವಾದ ಶ್ರೀಮಂತಿಕೆ’, ‘ಕಾರ್ಮಿಕನ ಬೆವರು ಆರುವುದಕ್ಕೆ ಮುಂಚೆ ಅವನಿಗೆ ಅವನ ವೇತನವನ್ನು ಕೊಟ್ಟು ಬಿಡಿರಿ’, ‘ಹಿರಿಯರನ್ನು ಗೌರವಿಸದವನು, ಕಿರಿಯರ ಮೇಲೆ ವಾತ್ಸಲ್ಯ ತೋರದವನು, ಒಳಿತಿನ ಪ್ರಚಾರ ಮಾಡದವನು ಮತ್ತು ಕೆಡುಕಿನಿಂದ ಜನರನ್ನು ತಡೆಯದವನು ನಮ್ಮವನಲ್ಲ’….. ಇವು ಕೆಲವು ಉದಾಹರಣಗಳಷ್ಟೆ.

ಪ್ರವಾದಿವರ್ಯರ(ಸ) ವಿಚಾರಧಾರೆಗಳು ಮತ್ತು ಅವರು ಕೈಗೊಂಡ ಕಾರ್ಯಗಳು ಮಾದರಿ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ. ಯಾವ ಸಮಾಜದಲ್ಲಿ ಸರಕಾರ ಮಾತ್ರವಲ್ಲದೆ ಜನತೆ ಕೂಡ ಪರಸ್ಪರರನ್ನು ಸತ್ಕಾರ್ಯ ಮಾಡುವಂತೆ ಪ್ರೇರೇಪಿಸುವರೋ ಮತ್ತು ಕೆಡುಕುಗಳಿಂದ ತಡೆಯುವರೋ ಅಂತಹ ಸಮಾಜವು ಆದರ್ಶ ಸಮಾಜವಾಗುವುದೆಂದು ಅವರು ನಂಬಿದ್ದರು. ಶರಾಬು ಸೇವನೆಯನ್ನು ವಿರೋಧಿಸಿದ ಅವರು ಆ ವಸ್ತು ಸಮಾಜದೊಳಗೆ ಪ್ರವೇಶಿಸಲು ಇರುವ ದ್ವಾರಗಳನ್ನು ಮುಚ್ಚಿಬಿಟ್ಟರು. ಶರಾಬು ಕುಡಿಯುವುದನ್ನು ಮಾತ್ರವಲ್ಲದೆ ಶರಾಬು ತಯಾರಿಸುವುದನ್ನು, ಮಾರುವುದನ್ನು, ಅದರ ಪ್ರಚಾರ  ಮಾಡುವುದನ್ನು ನಿಷೇಧಿಸಿದರು. (ಇಂದಿನ ಪ್ಲಾಸ್ಟಿಕ್ ನಿಷೇಧಕ್ಕೂ ಈ ತಂತ್ರ ಬಳಿಸಿದರೆ ಎಷ್ಟು ಚೆನ್ನಾಗಿತ್ತು!) ಅನ್ಯಾಯದ ವಿಷಯದಲ್ಲಿ ತನ್ನ ಜಾತಿಯವರ ಬೆಂಬಲಕ್ಕೆ ಬರುವವರನ್ನು ಪ್ರವಾದಿಗಳು  ಕಠಿಣವಾಗಿ ಖಂಡಿಸುತ್ತಿದ್ದರು. ಬೀಳುತ್ತಿರುವ ಒಂಟೆಯ ಬಾಲವನ್ನು ಹಿಡಿದುಕೊಂಡು ತಾನೂ ಬಾವಿಗೆ ಬೀಳುವ ವ್ಯಕ್ತಿಗೆ ಅಂಥವರನ್ನು ಹೋಲಿಸುತ್ತಿದ್ದರು. ವರ್ತಮಾನದಲ್ಲಿ ಇಂತಹ ವರ್ತನೆಗಳು ಹೆಚ್ಚಾಗಿವೆ. ಅಪರಾಧಿಯು ತಮ್ಮ ಕುಲ, ಜಾತಿ, ಧರ್ಮ, ಪಕ್ಷಕ್ಕೆ ಸೇರಿದವನು ಎಂಬ ಕಾರಣದಿಂದ ಬೆಂಬಲಿಸುವ ಪ್ರವೃತ್ತಿ ಬೆಳೆಯುತ್ತಲಿದೆ. ಧಾರ್ಮಿಕ ಮುಖಂಡರುಗಳು, ಮಠಾಧಿಪತಿಗಳು ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲವೆಂಬುದು ವಿಷಾದನೀಯ ಸಂಗತಿ.

ಪ್ರವಾದಿಗಳ ನಡೆ-ನುಡಿ, ರೀತಿ-ನೀತಿ, ಆಚಾರ-ವಿಚಾರಗಳನ್ನು ಹೀಗೆ ಸೂಕ್ಷ್ಮವಾಗಿ ಪರಿಶೀಲಿಸುತ್ತ ಹೋದಾಗ ಮಾನವ ಕಲ್ಯಾಣವನ್ನು ಬಯಸುವ ಯಾರಿಗೇ ಆದರೂ ಮಹಮ್ಮದರು ಅಂದಿಗಷ್ಟೇ ಅಲ್ಲ, ಇಂದಿಗೂ ಎಂದೆಂದಿಗೂ ಹೆಚ್ಚು ಪ್ರಸ್ತುತರೆನಿಸದೆ ಇರಲಾರದು. ಅವರ ಬದುಕೇ ಮನುಕುಲಕ್ಕೊಂದು ದಾರಿ ದೀಪವೆಂದರೆ ತಪ್ಪಾಗಲಾರದು.

About editor

Check Also

ಸತ್ಯ ಸಂಧತೆ ಉತ್ತಮ ರೀತಿ, ನೀತಿ

ಅಬ್ದುಲ್ಲಾ ಇಬ್ನು ಮಸ್‍ಊದ್(ರ)ರಿಂದ ವರದಿಯಾಗಿದೆ ಪ್ರವಾದಿವರ್ಯರು(ಸ) ಹೇಳಿದರು. ನೀವು ಸತ್ಯವನ್ನು ಬಿಗಿ ಹಿಡಿಯಿರಿ. ಸತ್ಯ ನಿಮ್ಮನ್ನು ಪುಣ್ಯ ಮತ್ತು ಸ್ವರ್ಗಕ್ಕೆ …

Leave a Reply

Your email address will not be published. Required fields are marked *