ದೇವಚರರ ಪ್ರಾರ್ಥನೆ ?

ಪ್ರಶ್ನೆ: ಪ್ರತಿದಿನ ಸೂರ್ಯೋದಯವಾಗುವಾಗ ಇಬ್ಬರು ದೇವಚರರು ಅಲ್ಲಾಹನೊಂದಿಗೆ ಪ್ರಾರ್ಥಿಸುತ್ತಾರೆ- ಒಬ್ಬರು ಹೇಳುತ್ತಾರೆ: ಅಲ್ಲಾಹನೇ! ನಿನ್ನ ಮಾರ್ಗದಲ್ಲಿ ಹಣ ಖರ್ಚು ಮಾಡುವವರಿಗೆ ನೀನು ಸಮೃದ್ಧಿಯನ್ನು ನೀಡು. ಇನ್ನೊಬ್ಬರು ಹೇಳುತ್ತಾರೆ- ಜಿಪುಣತೆ ತೋರುವವರನ್ನು ನಾಶಪಡಿಸು. ಆದರೆ ಅನೇಕ ಮಂದಿ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುತ್ತಾರೆ. ಆದರೂ ಅವರ ದಾರಿದ್ರ್ಯ ಕಡಿಮೆಯಾಗದಿರುವುದನ್ನು ನಾವು ನೋಡುತ್ತೇವೆ. ಅದೇ ರೀತಿ ಇನ್ನು ಕೆಲವರು ಖರ್ಚು ಮಾಡುವುದರಲ್ಲಿ ಜಿಪುಣತೆ ತೋರುತ್ತಾರೆ. ಅವರು ಸಮೃದ್ಧವಾಗಿ ಪ್ರಗತಿಯ ಪಥದಲ್ಲಿರುತ್ತಾರೆ. ಹೀಗೇಕೆ? ತಿಳಿಸಿ.

ಉತ್ತರ: ನೀವು ವಿವರಿಸಿರುವ ಹದೀಸ್‍ನ ವಿಷಯದಲ್ಲಿ ನಿಮಗೆ ತಪ್ಪುಕಲ್ಪನೆಯುಂಟಾಗಿದೆ. ಮೂಲ ಹದೀಸ್ ಬುಖಾರಿ ಮತ್ತು ಮುಸ್ಲಿಮ್ ನಲ್ಲಿ ಉಲ್ಲೇಖಗೊಂಡಿರುವುದು ಹೀಗಿದೆ. “ಅಬೂ ಹುರೈರಾ(ರ) ವರದಿ ಮಾಡುತ್ತಾರೆ- ಪ್ರವಾದಿ(ಸ) ಹೇಳಿದರು: ಪ್ರತಿದಿನ ಆರಂಭವಾಗುವಾಗ ಇಬ್ಬರು ದೇವಚರರು ಇಳಿಯುತ್ತಾರೆ. ಒಬ್ಬನು ಪ್ರಾರ್ಥಿಸುತ್ತಾನೆ- “ಅಲ್ಲಾಹನೇ! ಖರ್ಚು ಮಾಡುವವನಿಗೆ ನೀನು ಬರ್ಕತ್ (ಸಮೃದ್ಧಿ) ನೀಡು.” ಇನ್ನೊಬ್ಬನು ಹೀಗೆ ಶಾಪ ಹಾಕುತ್ತಾನೆ- “ಅಲ್ಲಾಹನೇ! ಜಿಪುಣನ ಪಾಲಿಗೆ ವಿನಾಶವಿರಲಿ.” ಇದೇ ಅರ್ಥದ ಇನ್ನೂ ಕೆಲವು ಹದೀಸ್ ಗಳಿವೆ, ಕುರ್‍ಆನ್ ಸೂಕ್ತಗಳೂ ಇವೆ. ಉದಾ: “ನೀವು ಖರ್ಚು ಮಾಡುವುದರ ಸ್ಥಾನದಲ್ಲಿ ಅವನು ನಿಮಗೆ ಇನ್ನಷ್ಟು ನೀಡುತ್ತಾನೆ.” (ಸಬಾ: 39)

ನೀವು ಸಮೃದ್ಧಿ ಮತ್ತು ವಿನಾಶದ ತಾತ್ಪರ್ಯವನ್ನು ಗ್ರಹಿಸುವುದರಲ್ಲಿ ತಪ್ಪಿ ಬಿದ್ದಿರುವಿರಿ. ಸಮೃದ್ಧಿಯೆಂದರೆ ಕೇವಲ ಸಂಪತ್ತಿನ ಹೆಚ್ಚಳವೆಂದೂ ವಿನಾಶವೆಂದರೆ ಕೇವಲ ಸಂಪತ್ತಿನ ನಷ್ಟವೆಂದೂ ಬಗೆದಿದ್ದೀರಿ. ಅದು ಸರಿಯಲ್ಲ. ಅದರ ಅರ್ಥ ವ್ಯಾಪ್ತಿಯು ಬಹಳ ವಿಶಾಲವಾಗಿದೆ.

ಬರ್ಕತ್‍ನ ಅನೇಕ ರೂಪಗಳಿರಬಹುದು. ಅದು ಕೆಲವೊಮ್ಮೆ ಆರೋಗ್ಯದ ರೂಪದಲ್ಲಿರಬಹುದು. ಇನ್ನು ಕೆಲವೊಮ್ಮೆ ಉತ್ತಮ ಸಂತಾನದ ರೂಪದಲ್ಲಿ ಬರಬಹುದು. ಅದೇ ರೀತಿ ಸಂಪತ್ತಿನ ಹೆಚ್ಚಳದ ರೂಪದಲ್ಲೂ ಬರಬಹುದು. ಇವು ಭೌತಿಕ ರೂಪವಾದರೆ, ಅಜ್ಞಾತ ರೂಪದಲ್ಲೂ ಇರಬಹುದು. ಉದಾ: ಸನ್ಮಾರ್ಗ ಪ್ರಾಪ್ತಿ, ಶಾಂತಿ-ನೆಮ್ಮದಿ, ಜನಪ್ರಿಯತೆ ಮತ್ತು ಗೌರವಾದರಗಳು ಇತ್ಯಾದಿ. ಇವೆಲ್ಲಕ್ಕಿಂತಲೂ ಮಿಗಿಲಾಗಿರುವುದು ಪರಲೋಕದಲ್ಲಿ ಅಲ್ಲಾಹನು ಅವರ ಪಾಲಿಗೆ ಇಟ್ಟಿರುವ ಪುಣ್ಯಗಳಾಗಿವೆ. ಸಮೃದ್ಧಿಯನ್ನು ಕೇವಲ ಸಿರಿ-ಸಂಪತ್ತಿಗೆ ಸೀಮಿತಗೊಳಿಸುವುದು ದೊಡ್ಡ ತಪ್ಪುಕಲ್ಪನೆಯಾಗಿದೆ.

ಮನಶ್ಶಾಂತಿಗಿಂತ ದೊಡ್ಡ ಸಂಪತ್ತು ಬೇರೇನೂ ಇಲ್ಲವೆಂದು ಎಲ್ಲರೂ ಬಲ್ಲರು. ಅಲ್ಲಾಹನು ಹೇಳುತ್ತಾನೆ- (ಓ ಪೈಗಂಬ ರರೇ) ಹೇಳಿರಿ- ಇದನ್ನು ಅವತೀರ್ಣಗೊಳಿಸಿದುದು ಅಲ್ಲಾಹನ ಅನುಗ್ರಹ ಮತ್ತು ಕೃಪೆಯಾಗಿರುತ್ತದೆ. ಇದಕ್ಕಾಗಿ ಜನರು ಸಂತೋಷ ಪಡಬೇಕು. ಜನರು ಶೇಖರಿಸುತ್ತಿರುವ ಎಲ್ಲ ವಸ್ತುಗಳಿಗಿಂತಲೂ ಇದು ಉತ್ತಮವಾಗಿದೆ. (ಯೂನುಸ್: 58)

ಅದೇ ರೀತಿ ನಷ್ಟ, ವಿನಾಶದ ಅರ್ಥ ಕೇವಲ ಸಿರಿ-ಸಂಪತ್ತಿನ ನಷ್ಟವಲ್ಲ. ವಿನಾಶವು ಕೆಲವೊಮ್ಮೆ ರೋಗದ ರೂಪದಲ್ಲಿ ಬರಬಹುದು. ಇನ್ನು ಕೆಲವೊಮ್ಮೆ ಕೆಟ್ಟ ಸಂತಾನದ ರೂಪದಲ್ಲಿ ಬರಬಹುದು. ಮತ್ತೆ ಕೆಲವೊಮ್ಮೆ ಜನರ ವಿದ್ವೇಷ-ಆಕ್ರೋಶದ ರೂಪದಲ್ಲಿ ಬರಬಹುದು. ಇನ್ನು ಕೆಲವೊಮ್ಮೆ ಮಾನಸಿಕ ಅಸಂತೃಪ್ತಿಯ ರೂಪದಲ್ಲೂ ಬರಬಹುದು. ಬಹಳಷ್ಟು ಐಶ್ವರ್ಯ ಹೊಂದಿಯೂ ಕೆಲವೊಮ್ಮೆ ಮನಸ್ಸಿನ ನೆಮ್ಮದಿಯನ್ನು ಕಳಕೊಂಡು ಒಳಗಿಂದೊಳಗೇ ಕರಗುವುದೂ ಮನುಷ್ಯನ ಪಾಲಿಗೆ ನಷ್ಟವೇ ಸರಿ. ಅದಲ್ಲದೆ ಅಲ್ಲಾಹನು ಪರಲೋಕದಲ್ಲಿ ಅವನ ಪಾಲಿಗೆ ಇಟ್ಟಿರುವ ಶಿಕ್ಷೆಯು ಇವೆಲ್ಲವುಗಳಿಗಿಂತಲೂ ಮಿಗಿಲಾಗಿದೆ.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *