ಇಸ್ಲಾಮಿನ ಹಾದಿಯಲ್ಲಿ

@ ಅಸ್ಮಾ (ಸ್ವೀಡನ್)

ಅಸ್ಮಾ; ಇವರು ಸ್ವೀಡನ್‍ನ ಇಸ್ಲಾಮೀ ಸಂದೇಶ ಪ್ರಚಾರ ಮತ್ತು ಸುಧಾರಣಾ ರಂಗದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಓರ್ವ ಪ್ರಸಿದ್ಧ ನವ ಮುಸ್ಲಿಮ್ ಮಹಿಳೆ. ತನ್ನ ಇಸ್ಲಾಮ್ ಸ್ವೀಕಾರದ ಕುರಿತು ಅವರ ಮಾತುಗಳು ಹೀಗಿವೆ:

“ನನ್ನನ್ನು ಇಸ್ಲಾಮಿನ ಪರ್ದಾ ನಿಯಮವು ಅದರತ್ತ ಆಕರ್ಷಿಸಿತು. ಪರ್ದಾದ ಕುರಿತು ಇಸ್ಲಾಮೀ ಆದೇಶವನ್ನು ಆಕರ್ಷಕ ಮತ್ತು ತರ್ಕಬದ್ಧ ಶೈಲಿಯಲ್ಲಿ ವಿವರಿಸಿದ ಖ್ಯಾತ ವಿದ್ವಾಂಸ ಮೌಲಾನಾ ಮೌದೂದಿಯವರನ್ನು ಅಲ್ಲಾಹ್ ಅನುಗ್ರಹಿಸಲಿ. ಆದರೆ, ಇಂಥ ಉತ್ಕ್ರಷ್ಟ ಜೀವನ ಕ್ರಮವಿದ್ದರೂ ಅದರ ಅನುಗ್ರಹದಿಂದ ಮುಸ್ಲಿಮ್ ಮಹಿಳೆಯರು ಸ್ವತಃ ದೂರ ಸರಿದಿರುವುದು ದೊಡ್ಡ ಸಮಸ್ಯೆಯಾಗಿದೆ.

ಇಸ್ಲಾಮ್ ಮತ್ತು ಮುಸ್ಲಿಮರ ಬೇಡಿಕೆಯ ಸಮಾಜ ಎಲ್ಲಿಯೂ ಅಸ್ತಿತ್ವದಲ್ಲಿಲ್ಲವೆಂದು ಬಹಳ ವಿಷಾದದಿಂದ ಹೇಳಬೇಕಾಗಿದೆ. ಮಾದರೀ ಸಮಾಜದ ನಿರ್ಮಾಣದಲ್ಲಿ ಮುಸ್ಲಿಮ್ ರಾಷ್ಟ್ರಗಳೂ ವಿಫಲವಾಗಿವೆ. ಇದರಿಂದಾಗಿ ಇಸ್ಲಾಮ್ ಮತ್ತು ಮುಸ್ಲಿಮ್ ಸಮುದಾಯ ನಿರಂತರ ಸೋಲುತ್ತಿದೆ. ಅನೇಕ ಮಂದಿಗೆ ಇಸ್ಲಾಮಿನ ಕಾರುಣ್ಯದ ದಡ ಸೇರಲು ಇದೇ ಅಡ್ಡಿಯಾಗಿದೆ.

ನಾನು ಕೇವಲ ಮುಸ್ಲಿಮರ ಜೀವನ ವಿಧಾನವನ್ನು ನೋಡಿದ್ದರೆ ಪ್ರಾಯಶಃ ಇಸ್ಲಾಮಿನ ಹಾದಿಯು ನನ್ನ ಮುಂದೆ ಎಂದಿಗೂ ತೆರೆಯುತ್ತಿರಲಿಲ್ಲ. ಧರ್ಮದ ತುಲನಾತ್ಮಕ ಅಧ್ಯಯನವು ನನಗೆ ಅನುಗ್ರಹವಾಯಿತು. ಈ ಅಧ್ಯಯನದ ವೇಳೆ ನಾನು ಇಸ್ಲಾಮಿನ ಪರ್ದಾ ನಿಯಮದ ಗಾಢ ಅಧ್ಯಯನ ನಡೆಸಿದೆ. ಇದರಿಂದ ನನ್ನಲ್ಲಿ ಇಸ್ಲಾಮ್ ಸ್ವೀಕರಿಸುವ ಆಗ್ರಹವನ್ನು ಚಿಗುರಿಸಿತು.

ಮುಸ್ಲಿಮರು ತಮ್ಮ ಜೀವನ ವಿಧಾನ ಮತ್ತು ವ್ಯವಹಾರಗಳನ್ನು ಉತ್ತಮ ಪಡಿಸುವುದು ಜಗತ್ತಿನ ತುರ್ತು ಅಗತ್ಯವಾಗಿದೆ. ಮುಸ್ಲಿಮರಲ್ಲಿ ವ್ಯಾಪಕವಾಗಿ ಕಾಣಿಸುತ್ತಿರುವ ಅಪ್ರಾಮಾಣಿಕತೆಯು ನಿರಾಶಾಜನಕವಾಗಿದೆ. ಅಪ್ರಾಮಾಣಿಕತೆಯೆಂದರೆ ಮಾತು-ಕೃತಿಗಳ ಅಂತರ. ಈ ಸ್ಥಿತಿ ಸಂಪೂರ್ಣ ಬದಲಾಗಬೇಕು. ಇಸ್ಲಾಮ್ ಶ್ರೇಷ್ಠವೆಂಬ ವಾದದೊಂದಿಗೆ ಈ ಅಪ್ರಾಮಾಣಿಕತೆ ಸರ್ವಥಾ ಭೂಷಣವಲ್ಲ. ಅದು ನಮ್ಮ ಧೋರಣೆಗಳನ್ನು ದುರ್ಬಲಗೊಳಿಸುತ್ತದೆ. ಈ ದೌರ್ಬಲ್ಯವು ಕೊನೆಗೆ ಭೀಕರ ನಾಶಕ್ಕೆ ಕಾರಣವಾಗುವುದು. “ವಿಶ್ವಾಸಿಗಳೇ, ನೀವು ಸ್ವತಃ ಮಾಡದಿರುವುದನ್ನು ಆಡುತ್ತಿರುವುದೇಕೆ ?”ಎಂಬ ಕುರ್‍ಆನ್‍ನ ಪ್ರಶ್ನೆ ಸದಾ ನಮ್ಮ ಗಮನದಲ್ಲಿರಬೇಕು.

ನಮ್ಮ ಹೊಸ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಲು ವಿದ್ವಾಂಸರು ಮತ್ತು ಶಿಕ್ಷಣ ತಜ್ಞರಂತೆ ಮಹಿಳೆಯರಿಗೂ ಜವಾಬ್ದಾರಿಕೆಯಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದೆ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣಲು ನಮ್ಮಿಂದ ಹೇಗೆ ತಾನೇ ಸಾಧ್ಯ? ಹ. ಆಯಿಶ, ಫಾತಿಮ, ಆಧುನಿಕ ಕಾಲದ ಮಹಾ ಮಹಿಳೆ ಝೈನಬುಲ್ ಗಝ್ಝಾಲಿಯಂಥವರ ಗುಣ ನಡತೆಗಳು ಮಹಿಳೆಯರಿಗೆ ಮಾದರಿಯಾಗಬೇಕು.

ಮುಸ್ಲಿಮ್ ಮಹಿಳೆಯರು ಎಲ್ಲ ರಂಗಗಳಲ್ಲಿ ವಿಶೇಷತಃ ಆರ್ಥಿಕ ರಂಗದಲ್ಲಿ ಸ್ವಾವಲಂಬಿಯಾಗಬೇಕು. ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ಅಧೀನತೆ ಕೊನೆಗೊಳಿಸಬೇಕು. ಯಾಕೆಂದರೆ, ನಮ್ಮ ಆರ್ಥಿಕ ಹಿನ್ನಡೆಗೆ ಬಂಡವಾಳ ಶಾಹೀ ಆರ್ಥಿಕ ವ್ಯವಸ್ಥೆಯೊಂದಿಗಿನ ಆಶ್ರಿತ ಮನೋಭಾವವೇ ಪ್ರಧಾನ ಕಾರಣ. ಮುಸ್ಲಿಮ್ ರಾಷ್ಟ್ರಗಳಲ್ಲಿ ಬೆಳೆಯುತ್ತಿರುವ ರಾಷ್ಟ್ರೀಯತೆಯು ಇಸ್ಲಾಮೀ ಜಗತ್ತಿನ ಒಟ್ಟು ಹಿತಾಸಕ್ತಿಗಳಿಗೆ ಅನುಕೂಲವಾಗಿಲ್ಲ. ಯುರೋಪಿನಲ್ಲಿ ರಾಷ್ಟ್ರೀಯತೆಯ ಕಲ್ಪನೆಯು ಸಾಯುತ್ತಿರುವಾಗ ಮುಸ್ಲಿಮರಲ್ಲಿ ಅದಕ್ಕೆ ಮನ್ನಣೆ ದೊರಯುತ್ತಿರುವುದು ಅಚ್ಚರಿದಾಯಕ. ಅಂಥ ಮನೋಭಾವ ಮತ್ತು ಸಂಕುಚಿತ ವಿಚಾರಧಾರೆಗಳಿಂದ ನಾವು ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲಾರೆವು.

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *