ಜಮಾಅತ್ ನಮಾಝ್‍ನಲ್ಲಿ ಒಂಟಿಯಾಗಿ ನಿಲ್ಲುವುದು

@ ಸಾಜಿದ್, ಪಣಂಬೂರು

ಪ್ರಶ್ನೆ: ಜಮಾಅತ್ ನಮಾಝ್ ನಡೆಯುವಾಗ ಹಿಂದಿನ ಸಾಲಿನಲ್ಲಿ ಒಬ್ಬನೇ ನಿಂತು ನಮಾಝ್ ಮಾಡಿದರೆ ಅವನ ನಮಾಝ್ ಸಿಂಧುವಾಗುವುದಿಲ್ಲವೆಂದು ಕೇಳಿದ್ದೇನೆ. ಇದಕ್ಕೇನಾದರೂ ಆಧಾರವಿದೆಯೇ?

ಉತ್ತರ: ಒಬ್ಬ ವ್ಯಕ್ತಿ ಎಲ್ಲರಿಗಿಂತಲೂ ಹಿಂದೆ ಒಬ್ಬನೇ ನಮಾಝ್ ಮಾಡುವುದನ್ನು ಪ್ರವಾದಿ(ಸ) ನೋಡಿದರು. ನಮಾಝ್ ಮುಗಿಸಿ ಅವನು ಎದ್ದು ಹೋಗುವಾಗ ಅವನನ್ನು ಕರೆದು ನಮಾಝನ್ನು ಆವರ್ತಿಸು ಎಂದು ಹೇಳಿದರೆಂದು ಇಮಾಮ್ ಅಹ್ಮದ್ ಮತ್ತು ಇಬ್ನು ಮಾಜಃ ವರದಿ ಮಾಡಿದ್ದಾರೆ.

ಇಮಾಮ್ ಅಹ್ಮದ್‍ರ ಇನ್ನೊಂದು ವರದಿಯಲ್ಲಿ ಹೀಗಿದೆ- ಜಮಾಅತ್ ನಮಾಝ್ ನಡೆಯುವಾಗ ಅದರ ಕೊನೆಯಲ್ಲಿ ಒಂಟಿಯಾಗಿ ನಮಾಝ್ ಮಾಡುವವನ ಬಗ್ಗೆ ಯಾರೋ ಕೇಳಿದಾಗ ಪ್ರವಾದಿ(ಸ) ಹೇಳಿದರು- ಅವನು ತನ್ನ ನಮಾಝನ್ನು ಆವರ್ತಿಸಲಿ.

ಈ ಎರಡೂ ಹದೀಸ್‍ಗಳು ಸಹೀಹ್ ಆಗಿವೆ. ಇನ್ನು ಕೆಲವು ವರದಿಗಳಿಂದ ತಿಳಿದು ಬರುವಂತೆ, ಜಮಾಅತ್‍ನ ಹಿಂದೆ ಒಬ್ಬನೇ ನಮಾಝ್ ಮಾಡುವವನ ನಮಾಝ್ ಸಿಂಧುವಾಗುವುದಿಲ್ಲ. ಪ್ರಾಚೀನ ವಿದ್ವಾಂಸರ ಮತ್ತು ಇಮಾಮ್ ಅಹ್ಮದ್ ಬಿನ್ ಹಂಬಲ್‍ರ ನಿಲುವು ಇದುವೇ ಆಗಿದೆ. ಆದರೆ ಇಮಾಮ್ ಅಬೂ ಹನೀಫಾ, ಇಮಾಮ್ ಮಾಲಿಕ್ ಮತ್ತು ಇಮಾಮ್ ಶಾಫಿಈಯವರ ಅಭಿಪ್ರಾಯದಲ್ಲಿ ನಮಾಝ್ ಸಿಂಧುವಾಗುತ್ತದೆ. ಆದರೆ ಅದು ಅನಪೇಕ್ಷಣೀಯವಾಗಿದೆ.

ಪ್ರಸ್ತುತ ಹದೀಸ್‍ಗಳ ಬೆಳಕಿನಲ್ಲಿ ಇಮಾಮ್ ಅಹ್ಮದ್ ಬಿನ್ ಹಂಬಲ್‍ನ ಅಭಿಪ್ರಾಯ ಸರಿಯೆನಿಸುತ್ತದೆ. ಏಕೆಂದರೆ ಇಸ್ಲಾಮ್ ಐಕ್ಯತೆಯನ್ನು ಬೋಧಿಸುವ ಧರ್ಮವಾಗಿದೆ. ಸಾಮೂಹಿಕತೆಯನ್ನು ಪ್ರೊತ್ಸಾಹಿಸುತ್ತದೆ. ಜಮಾಅತ್‍ನಿಂದ ಬೇರ್ಪಟ್ಟು ನಿಲ್ಲುವುದು ಇಸ್ಲಾಮೀ ಶಿಕ್ಷಣಗಳಿಗೆ ವಿರುದ್ಧವಾಗಿದೆ. ಆದರಿಂದ ಅವನ ನಮಾಝ್ ಸಿಂಧುವಾಗದಿರುವುದು ತರ್ಕಬದ್ಧ ವಿಷಯವಾಗಿದೆ.

ಒಬ್ಬನು ಯಾವುದೇ ಕಾರಣವಿಲ್ಲದೆ ಜಮಾಅತ್‍ನಲ್ಲಿ ಒಬ್ಬನೇ ಹಿಂದೆ ನಿಂತು ನಮಾಝ್ ಮಾಡುವವನಿಗೆ ಮಾತ್ರ ಈ ಆಜ್ಞೆ ಅನ್ವಯವಾಗುತ್ತದೆ. ಆದರೆ ಒಬ್ಬನು ಸೂಕ್ತ ಕಾರಣದಿಂದಾಗಿ ಒಬ್ಬನೇ ಹಿಂದೆ ನಿಂತು ನಮಾಝ್ ಮಾಡಿದರೆ ಅವನ ನಮಾಝ್ ಸಿಂಧುವಾಗುವುದು. ಉದಾ: ನಮಾಝ್‍ನ ಸಾಲುಗಳೆಲ್ಲ ಭರ್ತಿಗೊಂಡಿರುವುದು, ನಿಲ್ಲಲು ಸ್ಥಳಾವಕಾಶ ಇಲ್ಲದಿರುವುದು. ಕೆಲವು ವಿದ್ವಾಂಸರು ಹೇಳಿರುವಂತೆ, ಹಿಂದೆ ಒಂಟಿಯಾಗಿ ನಿಂತಿರುವವನು ಮುಂದಿನ ಸಾಲಿನ ಒಬ್ಬನನ್ನು ಹಿಂದಕ್ಕೆಳೆದು ತನ್ನೊಂದಿಗೆ ಸೇರಿಸಿಕೊಳ್ಳಬೇಕು. ತನ್ಮೂಲಕ ಕೊನೆಯ ಸಾಲು ಒಬ್ಬನ ಬದಲು ಇಬ್ಬರದ್ದಾಗಿರುವುದು, ಆದರೆ ಇನ್ನು ಕೆಲವು ವಿದ್ವಾಂಸರು ಹೀಗೆ ಹೇಳುತ್ತಾರೆ- ಈ ರೀತಿ ಮುಂದಿನ ಸಾಲಿನವವನನ್ನು ಹಿಂದಕ್ಕೆಳೆಯುವುದು ಅವನ ಮೇಲೆ ಅನ್ಯಾಯವಾಗಿದೆ. ಆದ್ದರಿಂದ ಹಾಗೆ ಮಾಡಬಾರದು. ಆಧುನಿಕ ವಿದ್ವಾಂಸರಾದ ಅಲ್ಲಾಮಾ ಯೂಸುಫುಲ್ ಕರ್ಝಾವಿಯವರು ಇದೇ ಕೊನೆಯ ಅಭಿಪ್ರಾಯ ಹೊಂದಿದವರಾಗಿದ್ದಾರೆ. ವಾಸ್ತವದಲ್ಲಿ ನಮಾಝ್ ನಡೆಯುತ್ತಿರುವಾಗ ಜಮಾಅತ್ ಬಿಟ್ಟು ಪ್ರತ್ಯೇಕವಾಗಿ ನಮಾಝ್ ಮಾಡುವವನ ಕುರಿತು ಅದು ಸಿಂಧುವಾಗುವುದಿಲ್ಲವೆಂದು ಹೇಳಲಾಗಿದೆ.

Check Also

ನಮಗೆಂತಹ ಬದಲಾವಣೆ ಬೇಕು?

@ ಅಬ್ದುಲ್ ಹಮೀದ್, ಪಕ್ಕಲಡ್ಕ ಪರಿವರ್ತನೆ ಜಗದ ನಿಯಮ. ನಮಗೆ ಇಷ್ಟವಿದೆಯೋ ಇಲ್ಲವೋ ಪರಿವರ್ತನೆ ಯಾ ಬದಲಾವಣೆಯೊಂದಿಗೆ ರಾಜಿ ಮಾಡಿಕೊಂಡು …

Leave a Reply

Your email address will not be published. Required fields are marked *