Breaking News
Home / ಲೇಖನಗಳು / ನಾನು ಕಂಡ ಮುಹಮ್ಮದ್ – ವಿ.ಜಿ. ಕುಮಾರ್

ನಾನು ಕಂಡ ಮುಹಮ್ಮದ್ – ವಿ.ಜಿ. ಕುಮಾರ್

  • ವಿ.ಜಿ. ಕುಮಾರ್

ಕೇವಲ ಪ್ರವಾದಿಯನ್ನು ತಿಳಿಯುವಾಗಲಷ್ಟೇ ಅಲ್ಲ. ಇಸ್ಲಾಮಿನ ಬಗ್ಗೆ ತಿಳಿಯುವಾಗಲೇ ಬಹಳ ತಡವಾಯಿತು. ಆರಂಭ ಕಾಲದಲ್ಲಿ ಇಸ್ಲಾಮ್ ಮತ್ತು ಅದರ ಪ್ರವಾದಿಯ ಬಗ್ಗೆ ನನ್ನಲ್ಲಿ ಹಲವು ತಪ್ಪು ತಿಳುವಳಿಕೆಗಳಿದ್ದುವೆಂದು ಹೇಳಲು ಸಂಕೋಚ ಪಡುವುದಿಲ್ಲ. ಯಾಕೆಂದರೆ, ನನ್ನ ಬಾಲ್ಯ ಮತ್ತು ಯೌವನದಲ್ಲಿ ಮುಸ್ಲಿಮ್ ಸಮುದಾಯದೊಂದಿಗೆ ಯಾವುದೇ ಸಹವಾಸವಿರಲಿಲ್ಲ. ಹೈಸ್ಕೂಲ್‍ಗೆ ತಲುಪುವ ತನಕ ನನಗೆ ಆ ಸಮುದಾಯದವರ ಸಂಪರ್ಕವಿರಲಿಲ್ಲ. ಅನಂತರ ಕೆಲವು ಮುಸ್ಲಿಮ್ ಮಿತ್ರರು ದೊರೆತರೂ ಆ ಸಮುದಾಯವನ್ನು ಹತ್ತಿರದಿಂದ ತಿಳಿಯಲಾಗಲಿಲ್ಲ. ಪತ್ರಿಕಾ ರಂಗಕ್ಕೆ ಬಂದ ಬಳಿಕ ಆ ಅವಕಾಶ ದೊರೆಯಿತು.

ನಾನು ಶಿಕ್ಷಣ ಆರಂಭಿಸಿದ ಸರಕಾರಿ ಪ್ರೈಮರಿ ಹೈಸ್ಕೂಲಿನಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವಿದ್ಯಾರ್ಥಿಯಿರಲಿಲ್ಲ. ಶುಕ್ರವಾರ ಮಧ್ಯಾಹ್ನ ಊಟದ ಬಿಡುವಿನ ವೇಳೆಯನ್ನು ಒಂದರಿಂದ ಎರಡು ಗಂಟೆಯ ತನಕ ಮುಸ್ಲಿಮ್ ಸಮುದಾಯಕ್ಕಾಗಿ ಹೆಚ್ಚಿಸಲಾಗಿದೆಯೆಂದು ಅಧ್ಯಾಪಕರು ಹೇಳಿದ ನೆನಪಿದೆ. ಆದರೆ ಅದು ಜುಮಾ ನಮಾಝ್‍ಗಾಗಿ ನೀಡಲಾಗುತ್ತಿದೆ ಹಾಗೂ ಅದೇನೆಂದು ತಿಳಿದಿರಲಿಲ್ಲ. ಹೀಗೆ ದೊರೆತ ಹೆಚ್ಚಿನ ಬಿಡುವು ನನಗೆ ಹಾಗೂ ಸಹಪಾಠಿಗಳಿಗೆ ಆಟದ ವೇಳೆಯಾಗಿತ್ತು. ಅದಲ್ಲದೆ ನಮ್ಮ ಶಾಲೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವಿದ್ಯಾರ್ಥಿಯಿಲ್ಲವೆಂದು ಓರ್ವ ಅಧ್ಯಾಪಿಕೆಯು ಸಂತೃಪ್ತಿಯಿಂದ ಹೇಳಿದ್ದು ಇಂದಿಗೂ ನನ್ನ ಸ್ಮಾತಿಪಟಲದಲ್ಲಿ ಹಸಿರಾಗಿದೆ. ಈ ರೀತಿಯ ಕಮೆಂಟ್‍ಗಳನ್ನು ಬಾಲ್ಯ ಕಾಲದಲ್ಲಿ ನಾನು ಅನೇಕ ಬಾರಿ ಕೇಳಿದ್ದೇನೆ. ಆದ್ದರಿಂದ ಇಸ್ಲಾಮಿನ ಕುರಿತು ನನ್ನ ಕಲ್ಪನೆಯು ತೀರಾ ಭಿನ್ನವಾಗಿತ್ತು. ಆ ಅಧ್ಯಾಪಿಕೆಯನ್ನು ಅಥವಾ ಅಂದು ಆ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ವಿಚಾರಧಾರೆಗಳನ್ನು ಟೀಕಿಸಿ ಪ್ರಯೋಜನವಿಲ್ಲ. ಯಾಕೆಂದರೆ ಪ್ರಚಲಿತ ವಿಚಾರಧಾರೆಗಳನ್ನು ತಿದ್ದುವ ಯಾವ ವ್ಯವಸ್ಥೆಯೂ ಇರಲಿಲ್ಲ.

ದೂರದಲ್ಲಿ ಅಥವಾ ಪ್ರತ್ಯೇಕವಾಗಿ ಕೆಲವಾರು ಮುಸ್ಲಿಮ್ ಕುಟುಂಬಗಳಿದ್ದರೂ ಅವರಲ್ಲಿ ಹೆಚ್ಚಿನವರು ಬಡವರಾಗಿದ್ದರು. ಅವರಲ್ಲಿ ಪ್ರಧಾನ ವಾಹಿನಿಗೆ ಬಂದು ಇತರರೊಡನೆ ಬೆರೆಯಬಲ್ಲವರು ತೀರಾ ವಿರಳವಾಗಿದ್ದರು. ಅಲ್ಲಿದ್ದ ಮಸೀದಿಯೂ ಸುಮಾರು ನಾಲ್ಕು ಕಿಲೋ ವಿೂಟರ್ ದೂರದಲ್ಲಿತ್ತು. ಆದರೆ ನನ್ನ ಗ್ರಾಮದ ಪೂರ್ವ ತುದಿಯಲ್ಲಿ ಅನೇಕ ಮುಸ್ಲಿಮ್ ಕುಟುಂಬಗಳಿದ್ದುವು. ಅವರಲ್ಲಿ ಕೆಲವು ಸ್ಥಿತಿವಂತರೂ ಇದ್ದರು. ಸ್ವಲ್ಪ ದೊಡ್ಡವನಾದ ಬಳಿಕವಷ್ಟೇ ಅವರಲ್ಲಿರುವ ಸಮ ವಯಸ್ಕರ ಪರಿಚಯವಾಯಿತು.

ಹೀಗಿದ್ದರೂ ಜಾತಿ, ಮತ, ಬೇಧ, ಭಾವನೆಯಿಲ್ಲದ ಬಾಲ್ಯವೇ ನನಗೆ ದೊರೆತಿತ್ತು. ಅದಕ್ಕೆ ನನ್ನ ಊರಿನ (ಕೇರಳ) ಸಾಮಾಜಿಕ ಹಿನ್ನೆಲೆಯೇ ಕಾರಣ. ಅಂದು ಅಲ್ಲಿ ಕಮ್ಯೂನಿಸ್ಟರ ಪ್ರಭಾವವಿತ್ತು. ಅವರಲ್ಲಿ ದೇವ ವಿಶ್ವಾಸಿಗಳಿದ್ದರೂ ಜಾತಿಮತ ಚಿಂತನೆಯಿರಲಿಲ್ಲ. ನನ್ನ ಓರ್ವ ಮಾವ (ಈಗ ಅವರು ಮಹಾ ಧರ್ಮ ಭಕ್ತ) ಸೇರಿದಂತೆ ಅನೇಕ ಯುವಕರು ನಾಸ್ತಿಕರು ಮತ್ತು ವಿಚಾರವಾದಿಗಳಾಗಿದ್ದರು. ಅವರ ಧೋರಣೆಗಳು ನಮ್ಮ ಬಾಲ್ಯದ ಮೇಲೆಯೂ ಪ್ರಭಾವ ಬೀರಿದ್ದುವು. ಆ ಊರಿನವರಿಗೆ ಕಾರ್ಲ್‍ಮಾಕ್ರ್ಸ್, ಏಂಗಲ್ಸ್ ಮತ್ತು ಲೆನಿನ್ ದೇವ ಸಮಾನರಾಗಿದ್ದರು. ಅಂದು ಹುಟ್ಟಿದ ಮಕ್ಕಳಿಗೆ ಈ ಜಾಗತಿಕ ನಾಯಕರ ಹೆಸರುಗಳನ್ನೇ ಇರಿಸಲಾಗುತ್ತಿತ್ತು. ಆದ್ದರಿಂದಲೇ ಈಗ ಪಕ್ಷ ಬದಲಾಯಿಸಿದ್ದರೂ, ಮಾಕ್ರ್ಸ್, ಲೆನಿನ್, ಸ್ಟಾಲಿನ್, ಕ್ರುಶ್ಚೇವ್ ಮುಂತಾದ ಹೆಸರುಗಳನ್ನು ಹೊತ್ತು ಬಾಳುವವರು ಇಂದಿಗೂ ಆ ಪ್ರದೇಶಗಳಲ್ಲಿದ್ದಾರೆ. ಈ ಎಲ್ಲ ವಿಷಯಗಳನ್ನು ನನ್ನ ಜೀವನದ ಭಾಗವಾಗಿ ಸ್ಮರಿಸುತ್ತಿದ್ದೇನೆ.

ಅನಂತರ ದೊಡ್ಡವನಾದಾಗ ನನಗೆ ಮುಸ್ಲಿಮ್ ಸಮುದಾಯದಲ್ಲಿ ಅನೇಕ ಗೆಳೆಯರು ದೊರೆತರು. ಆದರೆ ಅವರು ತಮ್ಮ ಸಾಮಾಜಿಕತೆ ಅಥವಾ ಧಾರ್ಮಿಕ ವಿಶ್ವಾಸಗಳ ಕುರಿತು ಹೇಳಲು ಅಶಕ್ತರಾಗಿದ್ದರು. ನನಗೆ ಆ ಕಾಲದಲ್ಲಿ ಮರೆಯಾದ ಓರ್ವ ಚಿತ್ರ ಕಲಾವಿದ ಮುಸ್ಲಿಮ್ ಮಿತ್ರನಿದ್ದನು. ಆತ ತನ್ನ ಸ್ಥಿತಿಗತಿಗಳ ಬಗ್ಗೆ ಹೇಳುತ್ತಿದ್ದರೂ ಆತನ ಧರ್ಮ ಅಥವಾ ಆಚಾರ ವಿಚಾರಗಳ ಬಗ್ಗೆ ಏನೂ ಹೇಳುತ್ತಿರಲಿಲ್ಲ. ತಿರುವನಂತಪುರದಲ್ಲಿ ಅಧಿಕೃತ ಜೀವನ ಆರಂಭಿಸುವುದಕ್ಕಿಂತ ಮುಂಚೆ ನನ್ನ ಧಾರ್ಮಿಕ ಜ್ಞಾನ ತೀರಾ ಸೀಮಿತವಾಗಿತ್ತು. ನಾನು ಗುರು ಸಮಾನರಾಗಿ ಭಾವಿಸುವ ದಿ| ಪ್ರೊ. ಜಗನ್ನಾಥ್ ಪಣಿಕ್ಕರ್‍ರಿಂದ ಪ್ರಥಮವಾಗಿ ಇಸ್ಲಾಮ್ ಧರ್ಮದ ಕುರಿತು ಸ್ಪಷ್ಟ ತಿಳುವಳಿಕೆ ದೊರೆಯಿತು. ಅವರು ತಮ್ಮ ಗ್ರಂಥ ಭಂಡಾರದಿಂದ ಕೆಲವು ಪುಸ್ತಕಗಳನ್ನು ನೀಡಿ (ಅದನ್ನು ಕ್ಲಪ್ತವಾಗಿ ಮರಳಿ ಪಡೆದರು)ದ್ದರು. ಶ್ರೀ ನಾರಾಯಣರ ವಿಚಾರಗಳಿಂದ ಸ್ಫೂರ್ತಿ ಪಡೆದ ಅವರು ಇಸ್ಲಾಮ್ ಒಂದು ಸುಸಂಸ್ಕ್ರತ ಧರ್ಮವೆಂದು ನನಗೆ ಉದಾಹರಣೆಗಳ ಸಹಿತ ತಿಳಿಸಿದರು. ಪಣಿಕ್ಕರ್ ಉಪಾಧ್ಯಾಯರು ಏಕದೇವ ವಿಶ್ವಾಸಿಯಾಗಿದ್ದರೆಂಬುದು ನನ್ನ ಅನಿಸಿಕೆ.

ಹಾಗಿದ್ದರೂ ಮಾಧ್ಯಮ ದೈನಿಕದಲ್ಲಿ ಕೆಲಸ ಆರಂಭಿಸಿದ ಬಳಿಕ ಇಸ್ಲಾಮ್ ಸಮಗ್ರ ಜೀವನ ಪದ್ಧತಿಯೆಂದು ನಾನು ಸಹೋದ್ಯೋಗಿಗಳಿಂದ ಮನಗಂಡೆ. ಅನಂತರದ ವಾಚನ ಮತ್ತು ಸಹಬಾಳ್ವೆಯಿಂದಲೇ ನನಗೆ ಪ್ರವಾದಿಯವರ ಸುದೀರ್ಘ ಜೀವನ ದೃಷ್ಟಿಕೋನವನ್ನು ಅರಿಯಲು ಸಾಧ್ಯವಾಯಿತು. ಇಸ್ಲಾಮನ್ನು ನೈಜ ರೂಪದಲ್ಲಿ ಪಾಲಿಸುವ ಒಂದು ಸಮೂಹವನ್ನು ನಾನು ಅಲ್ಲಿ ನೋಡಿದೆ. ಆ ತನಕ ಇಸ್ಲಾಮಿನ ಭಾವನೆಯು ಸರಿಯಾಗಿರಲಿಲ್ಲವೆಂದು ಅಲ್ಲಿಯೇ ನನಗೆ ಮನವರಿಕೆಯಾಯಿತು. ಪ್ರವಾದಿಯವರು ಮಾನವೇತಿಹಾಸದಲ್ಲಿ ಆಗಿ ಹೋದ ಅತ್ಯಂತ ಸಫಲ ವ್ಯಕ್ತಿತ್ವ ಮತ್ತು ಮಾದರಿಯೆಂದೂ ಆಗ ತಿಳಿಯಿತು.

ನನ್ನ ಜೀವನವೇ ನನ್ನ ಸಂದೇಶವೆಂದು ಮಹಾತ್ಮಾ ಗಾಂಧೀಜಿಯವರು ಹೇಳಿ ಆಚರಿಸಿ ತೋರಿಸಿದ್ದರು. ಜೀವನವನ್ನು ಸಂದೇಶಗೊಳಿಸಿದ ಗಾಂಧೀಜಿಯವರನ್ನು ಏಸು ಕ್ರಿಸ್ತರಿಗೆ ಹೋಲಿಸಿರುವುದನ್ನು ನಾನು ಓದಿ ಕೇಳಿ ತಿಳಿದಿದ್ದೇನೆ. ಆದರೆ ಗಾಂಧೀಜಿಯವರು ಯೇಸು ಕ್ರಿಸ್ತರ ಬದಲಾಗಿ ಮುಹಮ್ಮದ್‍ರಿಂದ ಪ್ರಭಾವಿತರಾಗಿರುವರೆಂದು ನಾನು ಭಾವಿಸುತ್ತೇನೆ. ಸಾಮಾಜಿಕ ಕಾರಣಗಳಿಂದಾಗಿ ಗಾಂಧೀಜಿಯವರನ್ನು ಮುಹಮ್ಮದ್‍ರಿಂದ ದೂರವಿರಿಸುವ ಅಗತ್ಯ ಅಂದಿನ ಕಾಲದ ಅನೇಕ ಗಣ್ಯರಿಗಿದ್ದಿರಬಹುದು. ಸ್ವಜೀವನದಿಂದ ಸಮಗ್ರ ಜೀವನ ರೀತಿಯನ್ನು ಕಲಿಸಿದ ಪ್ರವಾದಿಗಳಲ್ಲಿ ಮುಹಮ್ಮದ್‍ರು ಅಗ್ರಸ್ಥಾನಿಯಾಗಿರುವರಷ್ಟೆ.

ಪ್ರವಾದಿಯವರು ಇಡೀ ಮಾನವ ಕುಲಕ್ಕೆ ಮಾದರಿಯಾಗಿದ್ದರು. ತಮ್ಮ ನಡೆನುಡಿಯು ಎಷ್ಟೊಂದು ಸಂಪನ್ನವಾಗಿದೆಯೆಂದು ಸ್ವಜೀವನದಲ್ಲಿ ಮಾಡಿ ತೋರಿಸಿದರು. ಧಾರ್ಮಿಕ ಮೌಲ್ಯಗಳ ಮೂಲಕ ಅತ್ಯುತ್ತಮ ಕೊಡುಗೆಗಳನ್ನು ಅವರು ಮಾನವ ಕುಲಕ್ಕೆ ವಿೂಸಲಿಟ್ಟರು. ಜಟಿಲ ಸಮಸ್ಯೆಗಳಲ್ಲಿ ಸರಳ ಮಾರ್ಗಗಳನ್ನು ತೋರಿಸಿ ಕೊಟ್ಟರು. ಅವರಲ್ಲಿ ನಕಾರಾತ್ಮಕ ವಿಚಾರಗಳಿರಲಿಲ್ಲ. ಆದ್ದರಿಂದ ವಿಚಾರ ಮತ್ತು ಆಚಾರವು ಪರಸ್ಪರ ಪೂರಕ ಮತ್ತು ಸಮೃದ್ಧವಾಯಿತು. ಎಲ್ಲ ಮಾರ್ಗಗಳು ಮುಚ್ಚಿ ಹೋಗಿವೆಯೆಂದು ಭಾಸವಾಗುವ ಸಂದರ್ಭಗಳಲ್ಲಿಯೂ ಕೆಲವು ದಾರಿಗಳು ನಮಗಾಗಿ ತೆರೆದಿರುತ್ತವೆ ಮತ್ತು ಅವುಗಳನ್ನು ಕಂಡು ಹಿಡಿಯುವುದೇ ಜೀವನದ ವಿಜಯವೆಂದು ಕಲಿಸಿದರು. ಅಡ್ಡಿ ಆತಂಕಗಳನ್ನು ಕಡೆಗಣಿಸಿ ಅವಕಾಶಗಳನ್ನು ಹುಡುಕುವ ತರಬೇತಿಯನ್ನು ಸ್ವತಃ ನೀಡಿದರು.

ಪ್ರವಾದಿಯವರು ವೈರಿಯ ಬದಲಾಗಿ ವೈರತ್ವವನ್ನು ನಿರ್ಮೂಲನಗೊಳಿಸಿರುವರೆಂಬುದು ಇಂದಿನ ಕಾಲದಲ್ಲಿ ಬಹಳ ವಿಚಾರಾರ್ಹವಾಗಿದೆ. ವೈರಿಗಳನ್ನು ಮಿತ್ರರಾಗಿ ಮಾಡುವ ಮಾಂತ್ರಿಕತೆಯನ್ನು ಅವರು ತೋರಿಸಿದರು. ಬದ್ರ್ ಯುದ್ಧದ ಬಳಿಕ ದೊರೆತ 70 ವಿದ್ಯಾವಂತ ಕೈದಿಗಳಿಗೆ ಅವರು ಮರಣದಂಡನೆ ವಿಧಿಸಲಿಲ್ಲ. ಬದಲಾಗಿ ಮುಸ್ಲಿಮ್ ವಿದ್ಯಾರ್ಥಿಗಳಿಗಾಗಿ ಓದು ಬರಹ ಕಲಿಸುವ ಪ್ರಥಮ ಪಾಠ ಶಾಲೆಯನ್ನು ಸ್ಥಾಪಿಸಿದರು. ವೈರಿ ಪಕ್ಷದ ಕೈದಿಗಳು ಅಧ್ಯಾಪಕರಾದರು. ಆ ಮೂಲಕ ಸಹಿಷ್ಣುತೆಯ ಹೊಸ ಇತಿಹಾಸವನ್ನು ತೆರೆಯಲಾಯಿತು.

ಮಕ್ಕಾ ಸ್ವಾಧೀನವಾದ ಬಳಿಕ ಬಂಧಿತರನ್ನು ಬಿಡುಗಡೆಗೊಳಿಸಿ ಅವರ ಮನಸ್ಸನ್ನೂ ಗೆದ್ದರು. ಮಕ್ಕಾ ವಿಜಯದ ಬಳಿಕ ಸುಶಕ್ತರಾದ ಪ್ರವಾದಿಯವರು, ಹಿಂದೆ ತನ್ನನ್ನೂ ಅನುಯಾಯಿಗಳನ್ನೂ ತೀವ್ರವಾಗಿ ಹಿಂಸಿಸಿದ್ದ ವೈರಿಗಳನ್ನು ಸಂಪೂರ್ಣ ವಧಿಸಿ ಬಿಡುವಂತೆ ಆಜ್ಞಾಪಿಸಬಹುದಾಗಿತ್ತು. ಅದು ಅವರ ಹಿಂಸೆಗಳಿಗೆ ಪ್ರತಿಕಾರವೆಸಗಬಹುದಾದ ಸುಸಂದರ್ಭವಾಗಿತ್ತು. ಅವರ ಶ್ರೇಷ್ಠತೆಯ ಶೋಭೆಯು ಅದರಲ್ಲಿಯೇ ಅಡಕವಾಗಿದೆ. ಅವರನ್ನು ಸ್ವತಂತ್ರಗೊಳಿಸಿ ತನ್ನ ವೈರತ್ವವು ಕೇವಲ ಮಾನವರ ಪರಸ್ಪರ ಅಂತರ ಮತ್ತು ವೈಷಮ್ಯಗಳ ವಿರುದ್ಧವೆಂದು ಸಾಬೀತು ಪಡಿಸಿದರು.

ಮಾನವೀಯ ಸಮಾನತೆಗಾಗಿ ಪ್ರಥಮವಾಗಿ ಹೋರಾಡಿ, ಹೋರಾಟದಲ್ಲಿ ಯಶಸ್ವಿಯಾದ ಓರ್ವ ನೈಜ ಕ್ರಾಂತಿಕಾರಿಯನ್ನೂ ಪ್ರವಾದಿಯವರಲ್ಲಿ ನಾವು ಕಾಣಬಹುದಾಗಿದೆ. ಸುಶಕ್ತ ಸಮಾಜ ನಿರ್ಮಾಣಕ್ಕಾಗಿ ಅವರು ಉಚ್ಛ ನೀಚತೆಯ ವಿರುದ್ಧ ಹೋರಾಡಿದರು. ಕೇವಲ ಶಸ್ತ್ರಾಸ್ತ್ರವಿರುವವರು ಸಂಪತ್ತನ್ನು ಸ್ವಾಧೀನವಿರಿಸುವಂಥ ಸಮಾಜದಲ್ಲಿ ಬದಲಾವಣೆಯನ್ನು ತಂದರು. ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಸಮಾಜವನ್ನು ಸಿದ್ಧಗೊಳಿಸಿದರು. ಅವರು ಅದೆಂಥ ಅನಾಗರಿಕ ಸಮಾಜವನ್ನು ಸುಸಂಸ್ಕ್ರತಗೊಳಿಸಿದರೆಂದು ಆಲೋಚಿಸಿ ನೋಡಿರಿ.

ಸ್ವಯಂ ದೇವತ್ವದ ಬಗ್ಗೆ ವಾದಿಸದೆ ನಾನೋರ್ವ ಮಾನವನೆಂದು ಸಾರಿದ ಅವರ ಮನೋಭಾವವು ಎಷ್ಟೊಂದು ಉನ್ನತವಾಗಿದೆಯೆಂಬುದು, ಮಾನವ ದೇವಂದಿರ ಈ ಕಾಲದಲ್ಲಿ ಗಮನಾರ್ಹವಾಗಿದೆ. ದೇವನಿಗೆ ಅತ್ಯಂತ ನಿಕಟರಾಗಿದ್ದರೂ ಅವರು ವಿನಮ್ರರಾದರು. ಸ್ವತಃ ದೇವನ ಪ್ರವಾದಿಯಾಗಿದ್ದರೂ ಅವರು ತನ್ನ ಸ್ಥಾನವನ್ನು ಜನರ ಮೇಲೆ ಬಲಾತ್ಕಾರವಾಗಿ ಹೇರಲು ಪ್ರಯತ್ನಿಸಲಿಲ್ಲ. ಕುರೈಶರೊಡನೆ ಮಾಡಿದ ಹುದೈಬಿಯಾ ಒಪ್ಪಂದದ ಸಹಿಯಲ್ಲಿ ‘ದೇವನ ಪ್ರವಾದಿ ಮುಹಮ್ಮದ್’ ಎಂದು ಬರೆದುದನ್ನು ಕುರೈಶರು ಪ್ರಶ್ನಿಸಿದಾಗ, ತನ್ನ ಸ್ಥಾನಮಾನದ ದೃಢೀಕರಣಕ್ಕಾಗಿ ಅವರು ಪಟ್ಟು ಹಿಡಿಯಲಿಲ್ಲ. ‘ಅಬ್ದುಲ್ಲಾರ ಪುತ್ರ ಮುಹಮ್ಮದ್’ ಎಂದು ತಿದ್ದಿ ಬರೆದು ಶಾಂತಿ ಒಪ್ಪಂದವನ್ನು ಸಾರ್ಥಕಗೊಳಿಸಲು ಅವರು ಹಿಂಜರಿಯಲಿಲ್ಲ. ಇಲ್ಲಿ ಸಹಿಷ್ಣುತೆಯ ಸಾಕ್ಷಾತ್ಕಾರ ಸುಸ್ಪಷ್ಟವಾಗುತ್ತದೆ. ಪದವಿಯನ್ನು ಹೇರುವುದಕ್ಕಿಂತ ಸಮಸ್ಯೆಯ ಪರಿಹಾರವೇ ಮುಖ್ಯವೆಂದು ಅವರು ನಂಬಿದರು.

ಧರ್ಮ ಯುದ್ಧಗಳ ಬಗ್ಗೆ ಧಾರಾಳವಾಗಿ ಕೇಳಿದ್ದೇನೆ. ಪ್ರವಾದಿಯವರು ಮುನ್ನಡೆಸಿದ ಯುದ್ಧವೇ ನೈಜ ಧರ್ಮ ಯುದ್ಧವೆಂದು ಇತಿಹಾಸದಿಂದ ಗ್ರಹಿಸಬಹುದು. ಒಪ್ಪಂದ ಉಲ್ಲಂಘಿಸಬಾರದು, ಅಂಗವಿಕಲಗೊಳಿಸಬಾರದು, ವೃದ್ಧರು-ಮಹಿಳೆಯರು- ಮಕ್ಕಳನ್ನು ಕೊಲ್ಲಬಾರದು, ಫಲ ವೃಕ್ಷಗಳನ್ನು ನಾಶ ಪಡಿಸಬಾರದು, ಆರಾಧಿಸುವವರನ್ನು ಪೀಡಿಸಬಾರದು ಇತ್ಯಾದಿ ನಿಬಂಧನೆಗಳನ್ನು ಯುದ್ಧ ರಂಗದಲ್ಲಿ ಪಾಲಿಸುವಂತೆ ಆದೇಶಿಸಿ ಅವರು ಧರ್ಮ ಯುದ್ಧವನ್ನು ಸಕಾರಾತ್ಮಕ ಗೊಳಿಸಿದರು. ಈ ಆಧುನಿಕ ಯುಗದಲ್ಲಿ ಸಹಸ್ರಾರು ಮಕ್ಕಳು ಕಲಿಯುವ ವಿದ್ಯಾಲಯಗಳಿಗೂ ಬಾಂಬು ಹಾಕುವ ರಾಕ್ಷಸರು ಯುದ್ಧದ ರೂವಾರಿಗಳಾಗಿರುವುದನ್ನು ಇಲ್ಲಿ ಜ್ಞಾಪಿಸಬೇಕಾಗಿದೆ.

ಸದಾ ವೈರಿಗಳಾಗಿದ್ದ ಯಹೂದಿಯರ ವಿವಾದಗಳಲ್ಲಿಯೂ ಮಧ್ಯಸ್ಥಿಕೆ ವಹಿಸಿದ ಪ್ರವಾದಿಯವರು, ವೈರಿಗಳ ಪ್ರೀತ್ಯಾದರಗಳಿಗೆ ಪಾತ್ರರಾದರು. ಕಾಲಸಂದಂತೆ ಆ ಗೌರವ ವೃದ್ಧಿಸಿತು. ಪ್ರವಾದಿಯವರು ಇಸ್ಲಾಮಿನ ದೇವ ವಿಶ್ವಾಸವನ್ನು ಕಾರ್ಯ ಸೂಚಿಯಾಗಿ ಪ್ರಸ್ತುತ ಪಡಿಸಿದ್ದಾರೆ. ಕರ್ಮ ಮತ್ತು ವಿಶ್ವಾಸವು ಇಸ್ಲಾಮಿನಲ್ಲಿ ಪರಸ್ಪರ ಪೂರಕವಾಗಿದೆ. ಕರ್ಮ ಮತ್ತು ವಿಶ್ವಾಸಗಳಲ್ಲಿ ವೈರುಧ್ಯವಿರಬಾರದು. ಅದು ದೃಢ ವಿಶ್ವಾಸ ಮತ್ತು ಸತ್ಕರ್ಮದಲ್ಲಿ ಅಧಿಷ್ಠಿತವಾಗಿದೆ. ಅದು ಧ್ಯೇಯ ಮತ್ತು ಮಾರ್ಗಕ್ಕೆ ಸಮಾನ ಪ್ರಾಧಾನ್ಯ ನೀಡುತ್ತದೆ. ವಿಶ್ವಾಸದೊಂದಿಗೆ ಕರ್ಮವೆಸಗುವವನಿಗೆ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕರ್ಮ ರಹಿತನಿಗೆ ವಿಶ್ವಾಸಿಯಾಗಿದ್ದರೂ ಅಲ್ಲಿ ಸ್ಥಾನವಿರಲಾರದು. ದೇವನು ಪ್ರಪಂಚದಲ್ಲಿರುವುದೆಲ್ಲವನ್ನೂ ಮಾನವನ ಉಪಯೋಗಕ್ಕಾಗಿ ನಿರ್ಮಿಸಿದ್ದಾನೆ. ಅವುಗಳ ದುರುಪಯೋಗಕ್ಕೆ ಅನುಮತಿಸಿಲ್ಲ. ಸರಿಯಾದ ಬಳಕೆಗೆ ಮಾತ್ರ ಅನುಮತಿ. ಕೇವಲ ಸತ್ಕರ್ಮಗಳಿಗೆ ಮಾನ್ಯತೆ. ಎಲ್ಲ ಸ್ವಾತಂತ್ರ್ಯವನ್ನು ಮಾನವನು ಅನುಭವಿಸುತ್ತಿರುವಾಗಲೇ ಎಲ್ಲ ರೀತಿಯಲ್ಲಿಯೂ ಪರೀಕ್ಷೆಗೆ ಗುರಿಯಾಗುತ್ತಾನೆ. ಸರಿಯಾದ ಮಾರ್ಗವನ್ನು ಹುಡುಕುವವರು ಪರೀಕ್ಷೆಗಳಲ್ಲಿ ವಿಜಯಿಯಾಗುತ್ತಾರೆ. ಶಾಶ್ವತ ಜೀವನವು ಮರಣದ ಬಳಿಕವೆಂದು ಇಸ್ಲಾಮ್ ವಾಗ್ದಾನ ಮಾಡುತ್ತದೆ.

ಮುಹಮ್ಮದ್‍ರು ಕೇವಲ ಓರ್ವ ಪ್ರವಾದಿಯೆಂಬ ವಿಶೇಷಣಕ್ಕೆ ಸೀಮಿತರಾಗುವುದಿಲ್ಲ. ನಿರಕ್ಷರಿಯಾಗಿದ್ದರೂ ಅವರು ಅಯಸ್ಕಾಂತೀಯ ಶಕ್ತಿಯಿದ್ದ ಪ್ರವಚನಕಾರರಾಗಿದ್ದರು. ಲೌಕಿಕ ವಿದ್ಯಾಭ್ಯಾಸವಿಲ್ಲದಿದ್ದರೂ ಜಗತ್ತು ನೋಡಿದ ಮಹಾ ತತ್ವ ಚಿಂತಕರಾಗಿದ್ದರು. ಅನಾಥರಾಗಿ ಹುಟ್ಟಿ ಬೆಳೆದರೂ ಚಕ್ರವರ್ತಿ ಪದವಿಗೆ ತಲುಪಿದರು. ಔನ್ನತ್ಯದಲ್ಲಿಯೂ ಸರಳ ಜೀವನದ ಮಾದರಿಯಾದರು. ಏಕ ಕಾಲದಲ್ಲಿ ಯೋಧ, ದಂಡ ನಾಯಕ, ವ್ಯಾಪಾರಿ, ಪ್ರವಚನಗಾರ, ರಾಜತಾಂತ್ರಿಕ, ತತ್ವಜ್ಞಾನಿ, ಧಾರ್ಮಿಕ ಗುರು, ಪುಣ್ಯ ಪುರುಷ, ವಿಮೋಚಕ, ಕಾನೂನು ತಜ್ಞ, ಆಡಳಿತಗಾರ ಹೀಗೆ ಎಲ್ಲ ರಂಗಗಳಲ್ಲಿಯೂ ವ್ಯವಹರಿಸಲು ಪ್ರವಾದಿಯವರಿಗೆ ಸಾಧ್ಯವಾಯಿತು. ಮುಹಮ್ಮದ್‍ರಿಗೆ ಕೇವಲ ಮುಹಮ್ಮದರೇ ಸರಿಸಾಟಿ. ಪ್ರಪಂಚದೊಡೆಯನ ಪ್ರವಾದಿಯಾಗಿ ಜನಮನಗಳನ್ನು ಸೆಳೆದು ಆ ಜೈತ್ರ ಯಾತ್ರೆ ಇಂದಿಗೂ ಸಾಗುತ್ತಿದೆ.

  • ವಿ.ಜಿ. ಕುಮಾರ್

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *