ಮುಟ್ಟನ್ನು ಮುಂದೂಡಬಹುದೆ?

ಪ್ರಶ್ನೆ: ಮುಟ್ಟು ಅಥವಾ ಆರ್ತವ ರಕ್ತಸ್ರಾವವು ಸ್ತ್ರೀಯರಲ್ಲಿ ಸಹಜ ತಾನೆ. ಅದು ಸ್ವಾಭಾವಿಕವೂ ಆಗಿದೆ. ಸ್ತ್ರೀಯರನ್ನು ಆರಾಧನಾ ಕರ್ಮಗಳಿಂದ ದೂರವಿರಿಸುತ್ತದೆ. ಪವಿತ್ರ ರಮಝಾನ್ ತಿಂಗಳಲ್ಲಿ ನಮಾಝ್, ಉಪವಾಸ ವ್ರತಗಳೆಲ್ಲ ಬಿಟ್ಟು ಹೋಗಬಾರದೆಂದು ಸ್ವಾಭಾವಿಕವಾಗಿಯೂ ಮಹಿಳೆಯರಾದ ನಾವು ಬಯಸುತ್ತೇವೆ. ಕೆಲವೊಂದು ಮಹಿಳೆಯರಿಗೆ ಮುಟ್ಟಾಗುವುದು ತಡವಾಗುವುದರಿಂದ ಕೆಲವೊಮ್ಮೆ ಅಂತಹವರಿಗೆ ಸಂಪೂರ್ಣ ತಿಂಗಳ ಉಪವಾಸ ಸಿಕ್ಕಿ ಬಿಡುತ್ತದೆ. ಅದು ಅವರ ಸೌಭಾಗ್ಯವಾಗಿದೆ. ಆದರೆ ಹೆಚ್ಚಿನ ಮಹಿಳೆಯರಿಗೆ ನಿಗದಿತ ಅವಧಿಯಲ್ಲಿ ಆಗುತ್ತದೆ. ಹಾಗಿರುವಾಗ ಪೂರ್ಣ ತಿಂಗಳ ಉಪವಾಸ ಸಿಗುವಂತಾಗಲು ನಾವು ಮುಟ್ಟು ತಡವಾಗಬಲ್ಲಂತಹ ಔಷಧಿಗಳನ್ನು ಸೇವಿಸಬಹುದೆ?

ಉತ್ತರ: ಮುಟ್ಟಿನ ದಿನಗಳಲ್ಲಿ ನಮಾಝ್ ಮತ್ತು ಉಪವಾಸ ವ್ರತಕ್ಕೆ ವಿನಾಯಿತಿ ಇದೆ ಎಂಬ ವಿಷಯದಲ್ಲಿ ಎಲ್ಲ ವಿದ್ವಾಂಸರೂ ಒಮ್ಮತ ಹೊಂದಿದ್ದಾರೆ. ನಮಾಝನ್ನು ಪುನಃ ನಿರ್ವಹಿಸಬೇಕೆಂದಿಲ್ಲ. ಆದರೆ ಉಪವಾಸ ವ್ರತವನ್ನು ಸೌಕರ್ಯಾನುಸಾರ ಇಡೀ ವರ್ಷದಲ್ಲಿ ಯಾವಾಗಲಾದರೂ ಆಚರಿಸಬಹುದು. ರಮಝಾನಿನಲ್ಲಿ ಈ ವಿನಾಯಿತಿ ಏಕೆ ನೀಡಲಾಗಿದೆಯೆಂದರೆ ಆ ದಿನಗಳಲ್ಲಿ ಸ್ತ್ರೀಯರು ದೈಹಿಕವಾಗಿಯೂ ಮಾನಸಿಕವಾಗಿಯೂ ದುರ್ಬಲರಾಗಿರುತ್ತಾರೆ. ಆದ್ದರಿಂದ ಅಲ್ಲಾಹನು ಅವರಿಗೆ ಈ ಸೌಲಭ್ಯ ಒದಗಿಸಿರುವುದು ಆತನ ಅತೀ ದೊಡ್ಡ ಕೃಪೆಯಾಗಿದೆ.

ಮುಟ್ಟು ಒಂದು ಸಹಜ ಕ್ರಿಯೆಯಾಗಿದೆ. ಪ್ರತಿಯೊಬ್ಬ ಸ್ತ್ರೀಯೂ ಅದನ್ನು ಅನುಭವಿಸಲೇಬೇಕಾಗಿದೆ. ಅದನ್ನು ಮುಂದೂಡಲು ಏನಾದರೂ ಔಷಧಿ ಸೇವಿಸುವುದೆಂದರೆ ಪ್ರಕೃತಿಗೆ ವಿರುದ್ಧ ಹೋರಾಡುವುದಾಗಿದೆ. ಏಕೆಂದರೆ ಇದು 21ನೇ ಶತಮಾನದ ಸೃಷ್ಟಿಯಲ್ಲ. ಆದಿ ಮಾನವರ ಕಾಲದಿಂದಲೇ ಇದು ಜಾರಿಯಲ್ಲಿದೆ. ಅಲ್ಲಾಹನಿಗೆ ಆಗಲೂ ತಿಳಿದಿತ್ತು. ಈಗಲೂ ಅದರ ಜ್ಞಾನವಿದೆ. ಪ್ರವಾದಿಯವರ(ಸ) ಕಾಲದಲ್ಲಾಗಲಿ, ಅನಂತರದವರ ಕಾಲಗಳಲ್ಲಾಗಲಿ ಮುಟ್ಟನ್ನು ಮುಂದೂಡುವಂತಹ ಮದ್ದುಗಳು ಇದ್ದಿರಬಹುದು. ಅದರ ಜ್ಞಾನವಿರುವ ವೈದ್ಯರೂ ಇದ್ದಿರಬಹುದು. ಆದರೆ ಆ ಕಾಲಗಳಲ್ಲಿ ಯಾರೂ ಮುಟ್ಟನ್ನು ಮುಂದೂಡುವುದನ್ನು ಮಾಡಿದ ಬಗ್ಗೆ ಯಾವುದೇ ಉಲ್ಲೇಖ ಚರಿತ್ರೆಯಲ್ಲಿಲ್ಲ.

ಮುಟ್ಟು ಒಂದು ಪ್ರಕೃತಿ ಸಹಜ ಕ್ರಿಯೆಯಾಗಿದೆ. ಅದೇ ಪ್ರಕೃತಿಯಲ್ಲಿ ಅಲ್ಲಾಹನು ಸ್ತ್ರೀಯರನ್ನು ಸೃಷ್ಟಿಸಿರುತ್ತಾನೆ. ಆತನೇ ಆ ದಿನಗಳಲ್ಲಿ ಸ್ತ್ರೀಯರನ್ನು ನಮಾಝ್ ಮಾಡುವುದರಿಂದಲೂ ಉಪವಾಸ ಆಚರಿಸುವುದರಿಂದಲೂ ಹೊರತು ಪಡಿಸಿದ್ದಾನೆ. ಆದ್ದರಿಂದ ಪ್ರಕೃತಿಗೆ ಒಗ್ಗಿಕೊಂಡು ಬದುಕುವುದು ದಾಸ್ಯದ ಬೇಡಿಕೆಯಾಗಿದೆ. ಸಮಯಕ್ಕೆ ಸರಿಯಾಗಿ ಆಗುವ ಮುಟ್ಟನ್ನು ತಡೆಯುವುದರಿಂದ ಆರೋಗ್ಯ ಸಮಸ್ಯೆಗಳೂ ಉಂಟಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಅಲ್ಲಾಹನ ಇಂಗಿತಕ್ಕೆ ಬದ್ಧವಾಗಿರುವುದಲ್ಲೇ ದಾಸರ ಶ್ರೇಷ್ಠತೆಯಿದೆ.

ಇನ್ನು ಕೆಲವು ಆಧುನಿಕ ವಿದ್ವಾಂಸರು ಅಂತಹ ಔಷಧಿಗಳನ್ನು ಉಪಯೋಗಿಸುವುದರಲ್ಲಿ ಅಭ್ಯಂತರವಿಲ್ಲವೆಂದು ಹೇಳುತ್ತಾರೆ. ಆದರೆ ಅದರಿಂದ ಆರೋಗ್ಯಕ್ಕೆ ಹಾನಿಯಿದೆಯೆಂಬ ಆಶಂಕೆಯಿದ್ದರೆ ಅವರ ದೃಷ್ಟಿಯಲ್ಲೂ ಮುಟ್ಟನ್ನು ಮುಂದೂಡುವುದು ಸರಿಯಲ್ಲ. ಅಂತಹ ಔಷಧಿಗಳನ್ನು ಸೇವಿಸುವುದು ಉಪವಾಸಕ್ಕೆ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಮಾತ್ರ ಆಗಿರಬೇಕು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *