ಎಲೆಮರೆಯ ಹಣ್ಣು- ಮರ್ಹೂಮ್ ಅಹ್ಮದ್ ನೂರೀ

ಕರ್ನಾಟಕದ ಮುಸ್ಲಿಮರ ಒಂದು ಸೌಭಾಗ್ಯವೆಂದರೆ ಹಲವಾರು ಮಾತೃ ಭಾಷೆಗಳನ್ನು ಹೊಂದಿರುವುದು. ಪಕ್ಕದ ಕೇರಳ ಮತ್ತು ತಮಿಳುನಾಡಿನ ಮುಸ್ಲಿಮರಿಗೆ ಆ ಭಾಗ್ಯವಿಲ್ಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬ್ಯಾರಿ ಭಾಷೆ, ಕೊಡಗಿನಲ್ಲಿ ಮಲಯಾಳಂ ಮಿಶ್ರಿತ ಮಾಪಿಳ್ಳೆ ಭಾಷೆ, ಭಟ್ಕಳದಲ್ಲಿ ಕೊಂಕಣಿ ಪ್ರಭಾವದ ನವಾಯಿತಿ ಭಾಷೆ, ರಾಯಚೂರು-ಕೊಪ್ಪಳ ಮುಂತಾದ ಜಿಲ್ಲೆಗಳಲ್ಲಿ ಕನ್ನಡವೇ ಮಾತೃ ಭಾಷೆ, ಉಳಿದ ಜಿಲ್ಲೆಗಳಲ್ಲಿ ಉರ್ದು ಮಾತೃ ಭಾಷೆಯನ್ನಾಡುವ ಮುಸ್ಲಿಮರು- ಹೀಗೆ ಕರ್ನಾಟಕದ ಮುಸ್ಲಿಮರದ್ದು ವೈವಿಧ್ಯಮಯ ಭಾಷಾ ಸಂಸ್ಕೃತಿ. ಹೀಗಾಗಿಯೇ ಕನ್ನಡದ ಜತೆಗಿನ ಮುಸ್ಲಿಮರ ಅನುಸಂಧಾನವೂ ವಿಭಿನ್ನವಾಗಿದೆ.

ಅದರಲ್ಲೂ ಬ್ಯಾರಿ ಮುಸ್ಲಿಮರು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಇವತ್ತು ಕನ್ನಡದಲ್ಲಿ ಬರೆಯುವ ಮುಸ್ಲಿಮ್ ಬರಹಗಾರರ ಮತ್ತು ಸಾಹಿತಿಗಳ ಪಟ್ಟಿ ಮಾಡಿದರೆ ಅದರಲ್ಲಿ ಸಿಂಹಪಾಲು ಬ್ಯಾರಿಗಳದ್ದೇ. ಕನ್ನಡದ ಕುರಿತು ಬ್ಯಾರಿಗಳ ಈ ವಿಶೇಷ ಪ್ರೀತಿ ಇತ್ತೀಚೆಗೆ ಹುಟ್ಟಿದ್ದಲ್ಲ; ಅದಕ್ಕೂ ದೊಡ್ಡದೊಂದು ಪರಂಪರೆ ಇದೆ. ಆ ಪರಂಪರೆಯ ಬೇರುಗಳನ್ನು ತಡಕಾಡಿದಾಗ ನಮಗೆ ಮಂಗಳೂರಿನ ಅಹ್ಮದ್ ನೂರೀಯವರ ಮಹತ್ವ ಅರಿವಾಗುತ್ತದೆ.

92ರ ತುಂಬು ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಮರಣವನ್ನಪ್ಪಿದ ಅಹ್ಮದ್ ನೂರೀ, ಪಂಡಿತರ ಪರಂಪರೆಗೆ ಸೇರಿದವರಲ್ಲ. ಅವರದ್ದೇನಿದ್ದರೂ ಜನಮುಖೀ ವ್ಯಕ್ತಿತ್ವ. ಕವಿ, ಸಾಹಿತಿ, ಲೇಖಕ, ಪತ್ರಕರ್ತ, ಭಾಷಾ ವಿದ್ವಾಂಸ, ಶಿಕ್ಷಕ, ಸರಕಾರಿ ನೌಕರ, ಅನುವಾದಕ, ಸಾಮಾಜಿಕ ಕಾರ್ಯಕರ್ತ- ಹೀಗೆ ವೈವಿಧ್ಯಮಯ ವ್ಯಕ್ತಿತ್ವ.

ಆದರೆ ಆಯುಷ್ಯ ಪೂರ್ತಿ ಎಲೆಮರೆಯ ಹಣ್ಣಿನಂತೆಯೇ ಬದುಕಿದವರು. ಜೀವನದ ಇಳಿಗಾಲದಲ್ಲಿ (ಮೂರು ವರ್ಷಗಳ ಕೆಳಗೆ) ಅವರ ಮನೆಗೇ ಬಂದು `ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯವರು ಗೌರವ ಪ್ರಶಸ್ತಿಯೊಂದನ್ನು ನೀಡಿದ್ದು ಬಿಟ್ಟರೆ, ಪ್ರಶಸ್ತಿ ನೀಡಿದವರೂ ಇಲ್ಲ. ಪ್ರಶಸ್ತಿಗಾಗಿ ಅವರು ಬರೆದವರೂ ಅಲ್ಲ.

1998ರಲ್ಲಿ ಮಂಗಳೂರಿನಲ್ಲಿ ನಡೆದ ಮೊದಲ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅವರ ಸನ್ಮಾನ ನಡೆದದ್ದೊಂದು ಮರೆಯಲಾಗದ ಘಟನೆ.

ಮೆಟ್ರಿಕ್ಯುಲೇಶನ್ ಮುಗಿಸಿ ಮದ್ರಾಸ್ ಸರಕಾರದ ಕಂದಾಯ ಇಲಾಖೆಯಲ್ಲಿ ಕೆಲಸ ಸಿಕ್ಕಿ ನೂರೀಯವರು ಮದ್ರಾಸ್‌ಗೆ ಹೋದರು. ಅಲ್ಲಿ ದುಡಿಯುತ್ತಿರುವಾಗಲೇ ಎರಡನೇ ವಿಶ್ವಯುದ್ಧ ಭುಗಿಲೆದ್ದಿತು. `ಮದ್ರಾಸ್ ಮೇಲೆ ಬಾಂಬ್ ಹಾಕಲಿದ್ದಾರೆ~ ಎಂಬ ಗಾಳಿ ಸುದ್ದಿ ಹಬ್ಬಿದಾಗ ಕಂಗಾಲಾದ ನೂರೀಯವರ ಅಮ್ಮ, ಹಟ ಹಿಡಿದು ಮಗನನ್ನು ಮಂಗಳೂರಿಗೆ ಕರೆಸಿಕೊಂಡರು.

ಹಾಗೆ ಕರೆಸಿಕೊಂಡದ್ದು ಬ್ಯಾರಿ ಮತ್ತು ಕನ್ನಡ ಭಾಷೆಗಂತೂ ಲಾಭವೇ ಆಯಿತು. ಮಂಗಳೂರಿನ ಕಂದಾಯ ಇಲಾಖೆಯಲ್ಲಿ ನೂರೀಯವರ ಕೆಲಸ ಮುಂದುವರಿಯಿತು. ಆದರೆ ನೂರೀ ಅವರೊಳಗಿದ್ದ ಲೇಖಕನಿಗೆ, ಸುಮ್ಮನೇ ಸರ್ಕಾರಿ ಕಚೇರಿಯಲ್ಲಿ ಕೊಳೆಯುವುದರಲ್ಲಿ ಆಸಕ್ತಿ ಇರಲಿಲ್ಲ.

ಕೆಲಸಕ್ಕೆ ರಾಜೀನಾಮೆ ಕೊಟ್ಟ ಅಹ್ಮದ್ ನೂರೀ ಬರೆದು ಬದುಕುವ ನಿರ್ಧಾರ ಕೈಗೊಂಡರು. ಜತೆಗೆ ಆಗ ಸಾಕಷ್ಟು ಸಾಮಾಜಿಕ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದ ಮುಸ್ಲಿಂ ಸಮಾಜದ ಸುಧಾರಣೆಯ ತುಡಿತವೂ ಅವರಲ್ಲಿತ್ತು.

ಭಾಷೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ಸ್ವಂತ ಪ್ರಯತ್ನದಿಂದಲೇ ಇಂಗ್ಲಿಷ್, ಉರ್ದು, ಕನ್ನಡ, ತಮಿಳು, ಫಾರ್ಸಿ, ಅರೆಬಿಕ್ ಭಾಷೆಗಳನ್ನು ಕಲಿತರು. ಆಯಾ ಭಾಷೆಗಳಲ್ಲಿದ್ದ ಸಾಹಿತ್ಯವನ್ನು ಕನ್ನಡಕ್ಕೆ ತಂದರು.  ಫಾದರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಹೋಮಿಯೋಪತಿ ಔಷಧಿಗಳ ವಿವರಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಮಾಡಿದರು.

1978ರಲ್ಲಿ ಇತರ ಐವರು ವಿದ್ವಾಂಸರ ಜತೆ ಸೇರಿ ಏಳು ವರ್ಷಗಳ ಸತತ ಪರಿಶ್ರಮದ ಮೂಲಕ ಕನ್ನಡದಲ್ಲಿ ಹೊರತಂದ `ದಿವ್ಯ ಕುರಾನ್~ ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ ನಡೆದ ಮೊದಲ ಪ್ರಯತ್ನವಾಗಿತ್ತು. ಆಗಿನ ಕಾಲದಲ್ಲಿ ಅರೆಬಿಕ್ ಅನ್ನು ದೇವ ಭಾಷೆಯೆಂದೇ ಭಾವಿಸಿದ್ದ ಮುಸ್ಲಿಮರಿಂದ, ಈ ಕನ್ನಡದ ಅನುವಾದಕ್ಕಾಗಿ ತೀವ್ರ ಟೀಕಾಸ್ತ್ರಗಳನ್ನೂ ನೂರೀ  ಎದುರಿಸಿದರು.

ಅನಕ್ಷರತೆ, ಮೂಢ ನಂಬಿಕೆಗಳಲ್ಲಿ ತೊಳಲಾಡುತ್ತಿದ್ದ ಮುಸ್ಲಿಂ ಸಮಾಜವನ್ನು ಸುಧಾರಣೆಯತ್ತ ಕೊಂಡೊಯ್ಯುವಲ್ಲಿ ಉತ್ಸುಕರಾಗಿದ್ದ ಅಹ್ಮದ್ ನೂರೀ, ಮದ್ರಸಾಗಳಲ್ಲೂ ಕನ್ನಡದಲ್ಲಿ ಕಲಿಸಬೇಕೆಂದು ಲೇಖನಗಳನ್ನು ಬರೆದು, ಆಗ ಕೇರಳದಿಂದ ವಲಸೆ ಬಂದು ಮಲಯಾಳಂನಲ್ಲಿ ಪಾಠ ಮಾಡುತ್ತಿದ್ದ ಅರೆಬಿಕ್ ವಿದ್ವಾಂಸರ ಕೋಪವನ್ನೂ ಕಟ್ಟಿಕೊಂಡಿದ್ದರು.  ಇಸ್ಲಾಮೀ ಸಂಘಟನೆಯ ಜತೆಗೆ ಆರಂಭದಲ್ಲಿ ಗುರುತಿಸಿಕೊಂಡರೂ ಅದರ ಜತೆಗೂ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು.

ಪತ್ರಿಕೆಗಳಿಗೆ ಬರೆದು ಬದುಕುವ ಅವರ ನಿರ್ಧಾರಕ್ಕೆ ಈ ಸ್ವತಂತ್ರ ಮನೋಭಾವವೂ ಕಾರಣವಾಗಿತ್ತು. ಹಮ್‌ದರ್ದ್, ಪ್ರಭಾ, ಕಂಠೀರವ, ಸ್ವದೇಶಾಭಿಮಾನಿ, ಜೀವನ, ಬಡವರ ಬಂಧು, ಉದಯ ಚಂದ್ರ, ಶಾಂತಿ ಸಂದೇಶ, ನವಶಕ್ತಿ, ಅಮಾನತ್ ಮುಂತಾಗಿ ಆ ಕಾಲದ ಜನಪ್ರಿಯ ಪತ್ರಿಕೆಗಳಲ್ಲಿ ನೂರೀಯವರ ಅನೇಕ ಲೇಖನಗಳು ಪ್ರಕಟವಾಗಿವೆ.

ಜಸ್ಟಿಸ್ ರಹೀಮ್ ಅವರ `ಸದಾಖತ್~ ಎಂಬ ಇಂಗ್ಲಿಷ್ ಪತ್ರಿಕೆಗೂ ದುಡಿದರು. ಇನ್ನೊಂದೆಡೆ ಫಾರ್ಸಿ, ಉರ್ದು, ಇಂಗ್ಲಿಷ್, ತಮಿಳುಗಳಿಂದ ಹಲವಾರು ಲೇಖನಗಳನ್ನೂ ಅನುವಾದಿಸಿದರು. 20ಕ್ಕೂ ಹೆಚ್ಚು ಅನುವಾದದ ಕೃತಿಗಳು ಇವರ ಭಾಷಾ ಪ್ರೇಮಕ್ಕೆ ಸಾಕ್ಷಿಯಾಗಿವೆ.

50 ವರ್ಷಗಳ ಹಿಂದೆಯೇ ಬ್ಯಾರಿ ಭಾಷೆಯ ಶ್ರೀಮಂತಿಕೆಯ ಬಗ್ಗೆ ನೂರೀಯವರು ಪ್ರಚಾರ ನಡೆಸಿದ್ದರು. ಅವರು ಬರೆದ ಬ್ಯಾರಿ ಹಾಡುಗಳು ಬ್ಯಾರಿಗಳಿಗೆ ಕಂಠಪಾಠವಾಗಿದ್ದವು. `ಕೇಲಂಡ ಮಕ್ಕಲೇ ಕೇಲಂಡ~ (ಅಳಬೇಡಿ ಮಕ್ಕಳೇ ಅಳಬೇಡಿ) ಮತ್ತು `ಆಲಂ ಪಡಚ್ಚದುಂ ನೀನೇ, ಅದ್‌ರೆ ಚಮಚ್ಚದುಂ ನೀನೇ~ ಎಂಬಿತ್ಯಾದಿ ಹಾಡುಗಳು ಬ್ಯಾರಿಗಳಲ್ಲಿ ಜಾನಪದ ಹಾಡುಗಳಂತೆಯೇ ಜನಪ್ರಿಯವಾಗಿದ್ದವು.

(2011ರಲ್ಲಿ ಆ ಹಾಡುಗಳನ್ನು ಸೇರಿಸಿ ಒಂದು ಸೀಡಿ ಕೂಡಾ ಬಿಡುಗಡೆಯಾಯಿತು.)
1960ರಲ್ಲಿ ಇವರು ಬರೆದ ಮಂಗಳೂರಿನ ಮುಸ್ಲಿಮರ ಇತಿಹಾಸದ ಮೇಲೆ ಬೆಳಕು ಚೆಲ್ಲುವ `ಮೈಕಾಲ~ ಅತ್ಯಂತ ಜನಪ್ರಿಯ ಕೃತಿ. ಈ ಪುಸ್ತಕ ಜಗತ್ತಿನ ಅತಿದೊಡ್ಡ ಗ್ರಂಥಾಲಯವಾದ ವಾಷಿಂಗ್ಟನ್‌ನ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಪಟ್ಟಿಗೊಂಡಿತ್ತು.

ಸಂದೇಶ, ಕಿತಾಬ್, ದಿ ಮೆಸೇಜ್ ಮುಂತಾದ ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲೂ ಕೆಲಸ ಮಾಡಿದ ನೂರೀಯವರು, ಬ್ಯಾರಿ ಭಾಷೆ, ಸಂಸ್ಕೃತಿಯ ಉಳಿವಿಗಾಗಿ 1988ರಲ್ಲಿ ಬೆಂಗಳೂರಿನ `ದಿ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಶನ್ನಿನ ಸ್ಥಾಪಕರಲ್ಲಿ ಒಬ್ಬರು.

ಆಲಿಘರ್ ವಿಶ್ವವಿದ್ಯಾಲಯದಿಂದ ಉರ್ದು ಇಂಟರ್‌ಮಿಡಿಯೆಟ್ ಪಾಸಾಗಿದ್ದ ಅಹ್ಮದ್ ನೂರೀ, ಉರ್ದು-ಕನ್ನಡ-ಫಾರ್ಸಿ-ಇಂಗ್ಲಿಷ್ ಭಾಷೆಗಳ ನಡುವಣ ರಾಯಭಾರಿಯಂತೆಯೇ ಕೆಲಸ ಮಾಡಿದವರು. ಆದರೆ ಸರಕಾರ ಮಾತ್ರ ಅವರ ಸೇವೆಯನ್ನು ಯಾವತ್ತೂ ಗುರುತಿಸಲಿಲ್ಲ.

– ಬಿ.ಎಂ.ಹನೀಫ್

ಚಿತ್ರಗಳು: ಅಹ್ಮದ್ ಅನ್ವರ್
courtesy: Prajavani

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *