ಪ್ರೀತಿಯ ಶಕ್ತಿ

– ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)

ಒಮ್ಮೆ ಪ್ರವಾದಿ ಮುಹಮ್ಮದ್(ಸ) ಹಣ್ಣುಗಳಿರುವ ಒಂದು ತಟ್ಟೆಯನ್ನು ತಮ್ಮ ಪ್ರೀತಿಯ ಪತ್ನಿ ಆಯಿಶಾರಿಗೆ(ರ) ನೀಡಿದರು. ಯಾವುದೋ ಕಾರಣಕ್ಕೆ ಕುಪಿತರಾಗಿದ್ದ ಅವರು ತಟ್ಟೆಯನ್ನು ಕೆಳಗೆ ಹಾಕಿದರು. ಹಣ್ಣುಗಳೆಲ್ಲ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದುವು. ಪ್ರವಾದಿಯವರು(ಸ) ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಆ ಹಣ್ಣುಗಳನ್ನು ಒಂದೊಂದಾಗಿ ಹೆಕ್ಕ ತೊಡಗಿದರು. ಇದನ್ನು ಕಂಡು ಆಯಿಶಾರ(ರ) ಮನ ಕರಗಿತು. ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟ ಅವರು ಪ್ರವಾದಿಯವರಿಂದ(ಸ) ತಟ್ಟೆಯನ್ನು ಪಡೆದು ಹಣ್ಣುಗಳನ್ನು ತಾವೇ ಹೆಕ್ಕ ತೊಡಗಿದರು. ಪ್ರವಾದಿಯವರು(ಸ) ಅವರನ್ನು ಪ್ರೀತಿಯಿಂದ ಸಾಂತ್ವನ ಪಡಿಸಿದರು.

ಪ್ರೀತಿಯೇ ನರವಂಶದ ಅಸ್ತಿತ್ವಕ್ಕೆ ಆಧಾರ. ಪ್ರೀತಿಯನ್ನು ಬಯಸದವರು ಯಾರಿದ್ದಾರೆ? ಇತರರಿಗೆ ಪ್ರೀತಿ ನೀಡದವರು ಕೂಡ ಇತರರಿಂದ ಅದನ್ನು ನಿರೀಕ್ಷಿಸುತ್ತಾರೆ. ಜೀವ ಉಳಿಯಲು ನೀರು ಅನಿವಾರ್ಯವಾದಂತೆ ಸಾಮಾಜಿಕ ಸಂಬಂಧಗಳು ಉಳಿಯಲು ಪ್ರೀತಿಯೂ ಅನಿವಾರ್ಯ. ಅದು ಬತ್ತಿ ಹೋದಾಗ ಮಾನವ ಮನಸ್ಸುಗಳು ನೀರಡಿಸುತ್ತವೆ.

ಪ್ರೀತಿಯು ಹೃದಯದ ಬಾಗಿಲನ್ನು ತೆರೆಯುವ ಕಿಟಕಿ. ಹರಿತವಾದ ಆಯುಧಗಳಿಗೆ ಅಧೀನಗೊಳ್ಳದವರನ್ನು ಕೂಡ ಪ್ರೀತಿಯಿಂದ ಒಲಿಸಿಕೊಳ್ಳಬಹುದು. ಪ್ರೀತಿಯ ಪ್ರಭಾವಕ್ಕೆ ಎಲ್ಲೆ ಇಲ್ಲ. ಅದರ ಸಾಮರ್ಥ್ಯವು ಅಳತೆಗೆ ನಿಲುಕದಷ್ಟು ಅಗಾಧ. ಹೆಚ್ಚಿನ ವಸ್ತುಗಳು ವ್ಯಯಿಸಿದಷ್ಟು ಕಡಿಮೆಯಾಗುತ್ತವೆ. ಆದರೆ ಪ್ರೀತಿಯು ಅವುಗಳಿಗಿಂತ ಭಿನ್ನವಾಗಿದೆ. ಇತರರಿಗೆ ನೀಡಿದಾಗ ಅದು ಕ್ಷಯಿಸುವ ಬದಲು ವೃದ್ದಿಸುತ್ತದೆ. ನೀಡಿದುದಕ್ಕಿಂತ ಹೆಚ್ಚು ಮರಳಿ ದೊರೆಯುತ್ತದೆ.

ದ್ವೇಷ, ಅಸೂಯೆಯನ್ನು ಮನಸ್ಸಿನಲ್ಲಿ ಕಟ್ಟಿಕೊಂಡಿರುವವರ ಅಂತರಂಗವು ಸದಾ ಅಶಾಂತವಾಗಿರುತ್ತದೆ. ಮನಸ್ಸನ್ನು ಕಾಡುತ್ತಿರುವ ಒತ್ತಡ, ಸಂಘರ್ಷಗಳಿಂದ ಮುಕ್ತಿ ಪಡೆಯಲು ಅದರಿಂದ ಸಾಧ್ಯವಾಗುವುದಿಲ್ಲ. ಆಧುನಿಕ ಜಗತ್ತಿನ ಅತ್ಯಂತ ಮಾರಕ ರೋಗಗಳಿಗೆ ಮೂಲ ಕಾರಣ ಪರಸ್ಪರ ಸ್ಪರ್ಧಾ ಮನೋಭಾವ ಸೃಷ್ಟಿಸುವ ಮಾನಸಿಕ ತುಮುಲವಾಗಿದೆ.

ಅಸೂಯೆಗೆ ಮದ್ದು ಕಂಡು ಹಿಡಿಯಲು ಆಧುನಿಕ ವೈದ್ಯಶಾಸ್ತ್ರಕ್ಕೆ ಸಾಧ್ಯವಾಗುತ್ತಿದ್ದರೆ ಇಂದು ಹೃದಯಾಘಾತದಿಂದಾಗುವ ಹೆಚ್ಚಿನ ಸಾವುಗಳನ್ನು ತಡೆಯಬಹುದಾಗಿತ್ತೇನೋ.

ಆದರೆ ಪ್ರೀತಿಯು ಸಮಾಜ, ದೇಶ ಮತ್ತು ಲೋಕದಲ್ಲಿ ಮಾತ್ರವಲ್ಲ, ವ್ಯಕ್ತಿಯ ಮನಸ್ಸಿನಲ್ಲೂ ಶಾಂತಿ ಸಮಾಧಾನವನ್ನು ಸ್ಥಾಪಿಸಬಲ್ಲುದು. ಮನಸ್ಸು ತುಂಬಾ ಪ್ರೀತಿ ತುಂಬಿಕೊಂಡು ಬದುಕ ಬಲ್ಲವರು ಅದೃಷ್ಟವಂತರು. ಸ್ವಲ್ಪವೂ ಲೋಭವಿಲ್ಲದೆ ಅದನ್ನು ಎಲ್ಲರಿಗೂ ಹಂಚುತ್ತಾರೆ. ಅಂಥವರನ್ನು ದೂರ ಮಾಡಲು ಯಾರಿಗೂ ಸಾಧ್ಯವಾಗದು. ಅವರನ್ನು ದ್ವೇಷಿಸಲು ಸಾಧ್ಯವಿಲ್ಲ. ಕುಟುಂಬ ಜೀವನದಲ್ಲಿ ಪ್ರೀತಿಗೆ ವಿಶೇಷ ಸ್ಥಾನಮಾನವಿದೆ. ಅದು ಗಾಢವಾದಷ್ಟು ಸಂಬಂಧ ಭದ್ರವಾಗುತ್ತದೆ. ಪರಸ್ಪರ ಪ್ರೀತಿಸುವವರು ಸ್ವಾರ್ಥ ತೊರೆದು ಸಂಗಾತಿಯ ಸುಖ ಸಂತೋಷಕ್ಕೆ ಗಮನ ಕೊಡುತ್ತಾರೆ. ಪ್ರೀತಿಯಿಂದ ಜೀವನ ಸಂಗಾತಿಯನ್ನು ಒಲಿಸಿಕೊಳ್ಳ ಬಲ್ಲವನು ಸಂತೃಪ್ತ ಕುಟುಂಬವನ್ನು ನಡೆಸಬಲ್ಲನು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *