Breaking News
Home / ಲೇಖನಗಳು / ಅಭಿಪ್ರಾಯ ಸ್ವಾತಂತ್ರ್ಯದಲ್ಲಿ ಪ್ರವಾದಿಯನ್ನು ಅನುಸರಿಸೋಣ – ಪ್ರೊ| ಏ.ಕೆ. ರಾಮಕೃಷ್ಣನ್

ಅಭಿಪ್ರಾಯ ಸ್ವಾತಂತ್ರ್ಯದಲ್ಲಿ ಪ್ರವಾದಿಯನ್ನು ಅನುಸರಿಸೋಣ – ಪ್ರೊ| ಏ.ಕೆ. ರಾಮಕೃಷ್ಣನ್

ಪ್ರವಾದಿಯವರ ಜೀವನವನ್ನು ನಾವು ಹಲವೊಮ್ಮೆ ಅದರ ಪೂರ್ಣ ಅರ್ಥದಲ್ಲಿ ವಿಶ್ಲೇಷಿಸುವುದಿಲ್ಲ. ಅವರನ್ನು ನಾವು ಬಹುವಂಶ ಪಕ್ಷಪಾತೀಯ ದೃಷ್ಟಿಯಿಂದ ನೋಡುತ್ತೇವೆ. ಪಾಶ್ಚಾತ್ಯ ಓರಿಯಂಟಲಿಸ್ಟರು ಹಾಗೂ ಇನ್ನಿತರರು, ಪ್ರವಾದಿಯವರ ಯುದ್ಧ ಘೋಷಣೆ ಮತ್ತು ಸೈನಿಕ ಕಾರ್ಯಾಚರಣೆಗಳ ಕುರಿತು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹಾಗೆಯೇ ನಾವು ಕೂಡ ತಿಳಿದೋ ತಿಳಿಯದೆಯೋ ಯಾವುದಾದರೊಂದು ಪಕ್ಷ ಹಿಡಿದು ಪ್ರವಾದಿಯವರ ಜೀವನವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇವೆ. ‘ಸಲಾಮ್’ ಅಥವಾ ಶಾಂತಿಯೆಂದು ಅರ್ಥೈಸಲಾಗುವ ಇಸ್ಲಾಮಿನ ನೈಜ ನೀತಿಗೆ ಈ ವ್ಯಾಖ್ಯಾನಗಳು ತಲುಪುವುದಿಲ್ಲ. ಹೀಗೆ ಮೌಲಿಕ ವಿಶ್ಲೇಷಣೆ ನಡೆಯದಿರುವುದೇ ಇದರ ನೈಜ ಸಮಸ್ಯೆಯಾಗಿದೆ.

ಪ್ರವಾದಿಯವರ ವಿಶ್ಲೇಷಣೆಯಲ್ಲಿರುವ ಕೊರತೆಗಳಿಗೆ ಇಸ್ಲಾಮಿನ ಪೌರೋಹಿತ್ಯ ವಿಭಾಗವು ಅಪರಾಧಿಯಾಗಿದೆ. ತಮ್ಮ ಸ್ಥಾಪಿತ ಹಿತಾಸಕ್ತಿಗಳಂತೆ ಘಟನೆಗಳನ್ನು ವ್ಯಾಖ್ಯಾನಿಸಲು ಅವರು ವಿಶೇಷ ಅಸ್ಥೆ ವಹಿಸುತ್ತಾರೆ. ಪ್ರವಾದಿಯವರು ಕೇವಲ ರಾಜಕೀಯ ಮತ್ತು ಸೈನಿಕ ಕಾರ್ಯಾಚರಣೆ ನಡೆಸಿರುವುದಲ್ಲ. ಶಾಂತಿ ಸಂರಕ್ಷಣೆಯ ಅನೇಕ ಘಟನೆಗಳು ಪ್ರವಾದಿಯವರ ಜೀವನದಲ್ಲಿ ಸಂಭವಿಸಿದೆ. ಹುದೈಬಿಯಾ ಒಪ್ಪಂದವೇ ಅದಕ್ಕೆ ಉದಾಹರಣೆ. ಆ ಒಪ್ಪಂದವು ಎಲ್ಲ ಅರ್ಥಗಳಲ್ಲಿಯೂ ಅಶಾಂತ ಪರಿಸ್ಥಿತಿಯ ನಿವಾರಣೆಗಾಗಿ ಕೈಗೊಂಡ ಉದಾರ ರಾಜತಾಂತ್ರಿಕ ಕ್ರಮವಾಗಿತ್ತು. ಯಹೂದಿಯರ ವಿಷಯದಲ್ಲಿಯೂ ಪ್ರವಾದಿಯವರು ಒಪ್ಪಂದ ಮತ್ತು ಸದ್ಭಾವನೆಯಿಂದ ವರ್ತಿಸಿದ ಉದಾಹರಣೆಗಳಿವೆ. ಸಮಸ್ಯೆಗಳ ಪರಿಹಾರಕ್ಕಾಗಿಯೇ ಪ್ರವಾದಿಯವರು ಪ್ರಧಾನವಾಗಿ ಪ್ರಯತ್ನಿಸಿದ್ದರು. ಶಾಂತಿಯನ್ನು ಸಾರಿದ ಪ್ರವಾದಿಯವರಿಂದಲೇ ನಾವಿಂದು ಮಾದರಿಯನ್ನು ಸ್ವೀಕರಿಸಬೇಕಾಗಿದೆ.

ಇಸ್ರೇಲ್-ಫೆಲೆಸ್ತೀನ್ ಸಮಸ್ಯೆಯನ್ನೇ ನೋಡಿರಿ. ಇಲ್ಲಿ ಶಾಂತಿಯ ಮಾರ್ಗ ಅಂಗೀಕರಿಸುವುದನ್ನು ನಿಷಿದ್ಧವೆಂದು ಭಾವಿಸಬೇಕಾಗಿಲ್ಲ. ಫೆಲೆಸ್ತೀನ್ ಜನತೆಯು ಎದುರಿಸುತ್ತಿರುವ ದುರಂತಗಳನ್ನು ಎತ್ತಿ ತೋರಿಸಿ, ಪ್ರತಿಭಟನೆ ನಡೆಸುವ ಸಣ್ಣ ಸಣ್ಣ ತಂಡಗಳು ಇಸ್ರೇಲ್‍ನಲ್ಲಿಯೂ ಇದೆ. ಆದರೆ ಅದು ಬಹು ಜನರ ಧ್ವನಿಯಾಗಿ ಮಾರ್ಪಾಟ್ಟಾಗಿಲ್ಲವೆಂಬುದು ನಿಜ. ಆದರೆ ಸಮಸ್ಯೆಯ ಪರಿಹಾರವು ನ್ಯಾಯೋಚಿತವಾಗಿರಬೇಕು. ಪ್ರವಾದಿಯವರು ನ್ಯಾಯದ ಈ ಅಂಶಕ್ಕೆ ಯಾವಾಗಲೂ ಒತ್ತು ನೀಡುತ್ತಿದ್ದರು.

ಘರ್ಷಣೆಯ ಹಿನ್ನೆಲೆಯಲ್ಲಿ ನಾವು ಕೇವಲ ಸೈನಿಕ ಪರಿಹಾರವನ್ನು ಹುಡುಕಬಾರದು. ಅಂಥ ಹಂತಗಳಲ್ಲಿ ನಾವು ಪ್ರವಾದಿಯವರ ಜೀವನದ ಮಹಾನ್ ಮಾದರಿಗಳನ್ನು ಮೈಗೂಡಿಸಬೇಕು. ರಾಜಕೀಯ- ನೈತಿಕ ಧೋರಣೆಗಳನ್ನು ಸ್ವೀಕರಿಸುವಾಗ ನಾವು ಯಾವಾಗಲೂ ಈ ಅಂಶವನ್ನು ಗಮನದಲ್ಲಿರಿಸಬೇಕು. ಇಂದಿನ ಮಾನವ ಜೀವನದ ಹಿನ್ನೆಲೆಯಲ್ಲಿ, ಪ್ರವಾದಿಯವರನ್ನು ಪೂರ್ಣಾರ್ಥದಲ್ಲಿ ವಿಶ್ಲೇಷಿಸಲು ನಮಗೆ ಸಾಧ್ಯವಾಗಬೇಕು.

ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯನ್ನು ವ್ಯಾಖ್ಯಾನಿಸುವಾಗಲೂ ಹೊಸ ಕಾಲಕ್ಕೆ ಅವುಗಳನ್ನು ಜೋಡಿಸಲು ನಮಗೆ ಸಾಧ್ಯವಾಗಬೇಕು. ಇಜ್ತಿಹಾದ್ ಎಂಬುದು ಕೇವಲ ಸಾಂಕೇತಿಕವಲ್ಲ. ಹಲವು ರೀತಿಯಲ್ಲಿ ಇಜ್ತಿಹಾದನ್ನು ಬಳಸಬಹುದು. ಇಲ್ಲಿ ಧರ್ಮದ ಬಗ್ಗೆ ವ್ಯಾಖ್ಯಾನಿಸಲು ಮುಂದಾಗುವಾಗ ಮೌಲಿಕವಾಗಿ ನಮ್ಮಲ್ಲಿ ಎರಡು ಬಗೆಯ ಗಾಢ ತಿಳುವಳಿಕೆಯಿರಬೇಕಾಗಿದೆ. ಇಸ್ಲಾಮನ್ನು ವ್ಯಾಖ್ಯಾನಿಸುವಾಗ, ಕುರ್‍ಆನ್ ಸೇರಿದಂತೆ ಮೂಲ ಸಿದ್ಧಾಂತಗಳ ಗಾಢ ಜ್ಞಾನವಿರಬೇಕು. ಅದರೊಂದಿಗೆ ಆಧುನಿಕ ವಿಜ್ಞಾನಗಳ ಬಗ್ಗೆ ಗಾಢ ತಿಳುವಳಿಕೆಯೂ ಪ್ರಧಾನವಾಗಿದೆ. ಇಸ್ಲಾಮ್ ಮತ್ತು ಇಸ್ಲಾಮೇತರ ಜ್ಞಾನವು ಅತ್ಯವಶ್ಯಕವಾಗಿದೆ. ರಾಜಕೀಯ ಹಾಗೂ ಇತರ ಸಮಕಾಲೀನ ಜ್ಞಾನವಿಲ್ಲದೆ ಯಾವ ವ್ಯಾಖ್ಯಾನವೂ ಪರಿಪೂರ್ಣವಾಗಲಾರದು. ಸಂಕ್ಷಿಪ್ತದಲ್ಲಿ ನಾವು ಬಾಳುತ್ತಿರುವ ಕಾಲದ ಪರಿಜ್ಞಾನ ಅನಿವಾರ್ಯವಾಗಿದೆ.

ಪ್ರವಾದಿಯವರು 14 ಶತಮಾನಗಳ ಹಿಂದೆ ತಮ್ಮ ಅನುಯಾಯಿಗಳಿಗೆ ಚೀನಾಕ್ಕೆ ಹೋಗಿಯಾದರೂ ಜ್ಞಾನಗಳಿಸಬೇಕೆಂದು ಬೋಧಿಸಿದ್ದರು. ಅದರಲ್ಲಿ ಆಧುನಿಕ, ಲೌಕಿಕ ಜ್ಞಾನ ಗಳಿಸಬೇಕೆಂಬ ಪ್ರಬಲ ಸಂದೇಶವಿದೆ. ಆದರೆ ದೌರ್ಭಾಗ್ಯವಶಾತ್, ಇಂದು ಧಾರ್ಮಿಕ ಹಾಗೂ ಲೌಕಿಕ ಜ್ಞಾನಗಳು, ಪರಸ್ಪರ ನೀರು ಒಳಹೋಗದ ಕೋಶಗಳಂತೆ  ವಿರುದ್ಧ ದಿಕ್ಕಿನಲ್ಲಿ ನಿಂತಿವೆ. ಕುರ್‍ಆನಿನ ವ್ಯಾಖ್ಯಾನಕ್ಕೆ ಸನ್ನದ್ಧರಾದ ಆಮಿನಾ ವದೂದ್‍ರಂಥವರು ಇಜ್ತಿಹಾದ್ ರಂಗಗಳಲ್ಲಿ ನಡೆಸಿರುವ ವಿಶಿಷ್ಠ ಪ್ರಯತ್ನಗಳು ಗಮನಾರ್ಹವಾಗಿವೆ.

ಎಲ್ಲ ರೀತಿಯ ಜ್ಞಾನಗಳನ್ನು ಗಳಿಸುವ ಅವಕಾಶ ಒದಗಿಸಬೇಕು. ಆಯ್ಕೆಯನ್ನು ನಿರ್ಣಯಿಸುವ ಹಕ್ಕು ಎಲ್ಲರಿಗೂ ಇರಬೇಕು. ದೃಷ್ಠಿಕೋನಗಳ ವೈವಿಧ್ಯತೆಯನ್ನು ಅಂಗೀಕರಿಸುವ ವಿಶಾಲ ಮನೋಭಾವವಿರಬೇಕು. ಅದನ್ನು ಬೆಳೆಸಿಕೊಂಡರೆ ಅನಂತರ ಯಾರಿಗೂ ಮತಾಂಧರಾಗಲು ಸಾಧ್ಯವಿಲ್ಲ. ಕೇವಲ ನನ್ನ ಜ್ಞಾನವೇ ನೈಜ ಸತ್ಯವೆಂಬ ನಟನೆಯು  ದೇವತ್ವದ ಅಭಿನಯವೇ ಆಗಿದೆ.

ಪ್ರವಾದಿಯವರ ನಿಕಟ ಅನುಯಾಯಿಗಳ ಜೀವನ ದೃಷ್ಟಿಕೋನ ಮತ್ತು ಗುಣನಡತೆಗಳನ್ನು ನಾವು ಗಮನಿಸಿ ವಿಶ್ಲೇಷಿಸಬೇಕು. ಅವರ ವಿಭಿನ್ನ ಅಭಿಪ್ರಾಯಗಳನ್ನು ಪ್ರವಾದಿಯವರು ವಿರೋಧಿಸಲಿಲ್ಲ. ಅಭಿಪ್ರಾಯ ಸ್ವಾತಂತ್ರ್ಯವನ್ನು ಅಲ್ಲಿ ನೈಜ ಅರ್ಥದಲ್ಲಿಯೇ ಜ್ಯಾರಿಗೊಳಿಸಿದರು. ಸ್ತ್ರೀಯರಿಗೂ ಆ ಸ್ವಾತಂತ್ರ್ಯವಿತ್ತು. ಅಲಿಯವರಿಗೆ ಅಧಿಕಾರ ನಿರಾಕರಿಸಿರುವುದು ಸರಿಯಲ್ಲವೆಂದು ಉಮರ್‍ ರ  ಡೇರೆಗೆ ಹೋಗಿ ಒತ್ತಾಯಿಸಲು ಫಾತಿಮಾರಿಗೆ ಅಡ್ಡಿಯಾಗಲಿಲ್ಲ. ನಿಜವಾಗಿ ಅಧಿಕಾರವು ಅಲಿಯವರಿಗೇ ದೊರೆಯಬೇಕಿತ್ತೆಂದು ಅವರು ನೇರವಾಗಿ ಹೇಳಿದರು. ಫಾತಿಮಾ ವ್ಯಕ್ತಪಡಿಸಿದ ಅಭಿಪ್ರಾಯದ ತರ್ಕಗಳು ಏನೇ ಆಗಿದ್ದರೂ ಅವರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಮತ್ತು ಧೈರ್ಯವಿತ್ತು. ಪ್ರವಾದಿಯವರಿಂದ ದೊರೆತ ಮಾದರಿಯೇ ಫಾತಿಮಾರಿಗೆ ಇದಕ್ಕೆ ಪ್ರೇರಣೆಯಾಗಿತ್ತು.

ಪ್ರವಾದಿಯವರಿಗೆ ಮುಕ್ತ ಮನಸ್ಸಿತ್ತು. ಆ ಮುಕ್ತ ವಿಮರ್ಶಾ ಪರಂಪರೆಯನ್ನು ಮರಳಿ ರಚಿಸಲು ನಮಗೆ ಸಾಧ್ಯವಾಗಬೇಕು. ಝಿಯೋನಿಝಮನ್ನು ವಿರೋಧಿಸುವುದರ ಮಧ್ಯೆ ಯಹೂದಿಯರನ್ನು ಒಂದು ರೀತಿಯ ದ್ವೇಷದಿಂದ ನೋಡುವ  ಮನೋಭಾವವೂ ಹೆಚ್ಚುತ್ತಿದೆ. ಇದೊಂದು ರೀತಿಯ ಸಿನೋ ಫೋಬಿಯಾ ಆಗಿದೆ. ನಮ್ಮ ಸಂಸ್ಕ್ರತಿ ಮತ್ತು ವರ್ಣಕ್ಕಿಂತ ಭಿನ್ನರಾದವರ ಬಗ್ಗೆ  ತಾತ್ಸಾರ ಮತ್ತು ವಿರೋಧ ನಮ್ಮ ಸಂಸ್ಕ್ರತಿಯಲ್ಲಿದೆ. ಈ ಎಲ್ಲ ಮನೋಭಾವಗಳಲ್ಲಿ ಫ್ಯಾಸಿಝಮ್‍ನ ಸಣ್ಣ ಅಂಶ ಅಡಕವಾಗಿದೆ. ಜಗತ್ತು ಬದಲಾಗಿದೆ. ಅದು ಕ್ಷಿಪ್ರಗತಿಯಿಂದ ಮುಂದೆ ಸಾಗುತ್ತಿದೆ. ಅರಬ್ ಜಗತ್ತು ವ್ಯಾಪಾರ ವಹಿವಾಟಿನ ಮೂಲಕ ಸಾಂಸ್ಕ್ರತಿಕ ಸಮನ್ವಯ ಸಾಧಿಸಿದ ಪರಂಪರೆಯನ್ನು ನಾವು ಹೊಂದಿದ್ದೇವೆ. ಅನೇಕ ಸಂಸ್ಕ್ರತಿಗಳ  ಈ ಸಮ್ಮಿಲನವನ್ನು ನಾವು ಈ ಕರ್ನಾಟಕದಲ್ಲಿಯೂ ಕಾಣಬಹುದು. ಅದು ಪ್ರಾದೇಶಿಕ ಬಂಧನಗಳಿಂದ ಮುಕ್ತವಾದ ಮತ್ತು ಜಾಗತಿಕ ಮೌಲ್ಯವಿರುವ ಸಾಂಸ್ಕ್ರತಿಕ ವೈಶಿಷ್ಠ್ಯವಾಗಿದೆ. ಕಾಸ್ಮೋಪೋಲಿಟಿಕಲ್ ಸಂಸ್ಕ್ರತಿಯೆಂದು ಕರೆಯಬಹುದಾದ ಈ ಸಮ್ಮಿಶ್ರ ಮತ್ತು ಸಾರ್ವಲೌಕಿಕ ಸಂಸ್ಕ್ರತಿಯೊಂದಿಗೆ ಆರಂಭ ಕಾಲದ ಮುಸ್ಲಿಮರು ಸಾಮರಸ್ಯ ಹೊಂದಿದ್ದರು. ಅದನ್ನು ಪುನಃ ನಿರ್ಮಿಸಲು ನಮಗೆ ಸಾಧ್ಯವಾಗಬೇಕು.

ವಿಶಾಲವಾದ ಒಂದು ನೈತಿಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕು. ಅದರಲ್ಲಿ ಎಲ್ಲ ಸಂಸ್ಕ್ರತಿಗಳಿಗೂ ಅವಕಾಶ ದೊರೆಯಬೇಕು. ಸಶಸ್ತ್ರ ಹೋರಾಟ ಮತ್ತು ಸಂಘರ್ಷಕ್ಕೆ ಇಂದು ಪ್ರಾಮುಖ್ಯತೆ ದೊರೆಯುತ್ತಿದೆ. ಅದು ಒಂದು ರೀತಿಯ ಹತಾಶ ಪ್ರಜ್ಞೆಯನ್ನು ಬೆಳೆಸುತ್ತದೆ. ನಾವು ಇನ್ನಷ್ಟು ಮುಕ್ತ ಸ್ವಭಾವಕ್ಕೆ ಮರಳದ ಹೊರತು ಇದಕ್ಕೆ ಪರಿಹಾರವಿಲ್ಲ.

About editor

Check Also

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಮಾನವ ಜೀವ, ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. “ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ …

Leave a Reply

Your email address will not be published. Required fields are marked *