ಸೈನಿಕರ ಯೋಗ ಕ್ಷೇಮಕ್ಕೆ ಒತ್ತು ನೀಡುತ್ತಿದ್ದ ಖಲೀಫಾ ಉಮರ್(ರ)

ಮೂಲ: ಎಸ್ಸೆಮ್ಕೆ, ಅನು: ಎ.ಎಂ.

ಖಲೀಫ ಉಮರ್ ಎಲ್ಲ ಕಾರ್ಯಗಳನ್ನು ಅರ್ಥೈಸಿಕೊಂಡು ನಿಯಂತ್ರಿಸುತ್ತಿದ್ದರಷ್ಟೇ. ಆದರೆ ಕೆಲವೊಮ್ಮೆ ಸೇನಾ ನಾಯಕರಿಗೆ ಪರಿಸ್ಥಿತಿಯ ಬೇಡಿಕೆಗಳನ್ನು ಅರ್ಥಮಾಡಿಕೊಂಡು ಕಾರ್ಯ ವೆಸಗುವಂತೆ ಅನುಮತಿ ನೀಡಿದರು.

ಒಮ್ಮೆ ಅಬೂ ಉಬೈದಾರು ಶತ್ರುಗಳನ್ನು ಹಿಂಬಾಲಿಸಿ ನಗರದ ದ್ವಾರದವರೆಗೂ ತಲುಪಿದರು. ನಗರದೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಖಲೀಫರಿಗೆ ಪತ್ರ ಬರೆದು ಕೋರಿಕೆಯಿಟ್ಟರು. ಆಗ ಖಲೀಫ ಈ ರೀತಿ ಉತ್ತರ ಬರೆದು ಅಬೂ ಉಬೈದರಿದ್ದಲ್ಲಿಗೆ ಕಳುಹಿಸಿಕೊಟ್ಟರು, “ಅಲ್ಲಿನ ಘಟನೆಗಳಿಗೆ ನೀವು ಸಾಕ್ಷಿಯಾಗಿರುವಿರಿ. ನಾನಂತೂ ಯಾವುದನ್ನೂ ನೋಡಿಲ್ಲವಷ್ಟೇ. ಅರಿತಿಲ್ಲವಷ್ಟೇ. ಆದ್ದರಿಂದ ನೋಡದೆ ಮತ್ತು ಅದರ ಬಗ್ಗೆ ಗೊತ್ತಿಲ್ಲದವರಿಗೆ ಅಲ್ಲಿನ ವಿಷಯವನ್ನು ನೋಡಿದವರಿಗೆ ಹೆಚ್ಚು ಗೊತ್ತಿರುವುದು. ನೀವೀಗ ಶತ್ರುವಿನ ಹತ್ತಿರವಿದ್ದೀರಿ. ನಿಮ್ಮ ಕಣ್ಣುಗಳು ವಿಷಯವನ್ನು ಅರಿಯುತ್ತಿವೆ. ಆದ್ದರಿಂದ ನಗರವನ್ನು ಪ್ರವೇಶಿಸುವುದೇ ಉತ್ತಮವೆಂದು ನೀವು ಮನಗಂಡಿದ್ದರೆ ಹಾಗೆಯೇ ಮಾಡಿರಿ. ಅವರೆಡೆಗೆ ಸೇನೆಯನ್ನು ಕಳುಹಿಸಿರಿ. ಎದುರಾಳಿಗಳ ಮುಂದೆ ಅವರ ನಾಡಿಗೆ ಪ್ರವೇಶಿಸಿರಿ. ಅವರು ಸಂಧಿಗೆ ಸಿದ್ಧರಿದ್ದರೆ ಸಂಧಿ ಮಾಡಿಕೊಳ್ಳಿರಿ.”

ಸ್ವತಃ ಖಲೀಫ ಉಮರ್ ಯುದ್ಧದ ಯೋಜನೆ ಮತ್ತು ಯುದ್ಧಕ್ಕೆ ನಾಯಕತ್ವವನ್ನು ವಹಿಸಿಕೊಂಡಿರುವರೆಂಬ ವಿಚಾರ ಶತ್ರುಗಳಿಗೂ ಮನವರಿಕೆಯಾಗಿತ್ತು. ಇದನ್ನು ಅರ್ಥಮಾಡಿಕೊಂಡ ಪರ್ಶಿಯದ ಸೇನಾ ನಾಯಕ ಹೀಗೆ ಹೇಳಿದನು, “ನಮ್ಮನ್ನು ಯುದ್ಧ ರಂಗದಲ್ಲಿ ಸೋಲಿಸುವುದು ಉಮರ್ ಆಗಿದ್ದಾರೆ.” ಮತ್ತೊಮ್ಮೆ ಇದೇ ನಾಯಕ ಜಿಗುಪ್ಸೆಯುತವಾಗಿ ಹೀಗೆ ಹೇಳಿದನು, “ಹೌದು, ಈ ನಾಯಿಗಳೊಡನೆ ಮಾತಾಡುವುದು ಮತ್ತು ಅವರಿಗೆ ವಿಷಯಗಳನ್ನೆಲ್ಲ ಕಲಿಸಿಕೊಡುತ್ತಿರುವುದು ಅವರೇ ಆಗಿದ್ದಾರೆ.”

ಯುದ್ಧ ಕಾರ್ಯಾಚರಣೆಗೆ ಸಂಬಂಧಿಸಿ ಸ್ಪಷ್ಟವಾದ ಜ್ಞಾನವನ್ನು ಹೊಂದಿ ಅರಿತು ಅರ್ಥೈಸಿಕೊಂಡು ಖಲೀಫ ಸ್ಪಷ್ಟವಾದ ಸೂಚನೆಗಳನ್ನು ನೀಡಿದರು. ತನ್ನ ಸೈನಿಕರ ಅಸಹಾಯಕ ಸ್ಥಿತಿಗಳನ್ನೆಲ್ಲ ಅವರು ಮನಗಂಡರು. ಆಗಲೆಲ್ಲ ಅದಕ್ಕೆ ತಕ್ಕಂತೆ ಆಜ್ಞೆಗಳನ್ನು ನೀಡಿದರು. ಅವರು ತನ್ನ ಸೈನಿಕರೊಡನೆ ಪುತ್ರವತ್ಸಲನಾದ ತಂದೆ ತನ್ನ ಮಕ್ಕಳೊಡನೆ ವಾತ್ಸಲ್ಯದಿಂದ ವರ್ತಿಸುವಂತೆ ವರ್ತಿಸಿದರು. ಸೈನಿಕರ ತಪ್ಪುಗಳು ಮತ್ತು ದೌರ್ಬಲ್ಯಗಳನ್ನು ಕ್ಷಮಿಸಿದರು. ತಮ್ಮ ಸೈನಿಕರಿಗೆ ಅಪಾಯಗಳಾದಾಗ ತುಂಬಾನೇ ನೊಂದುಕೊಂಡರು. ಅವರಿಗೆ ಬಂದೆರಗಿರುವ ಕಷ್ಟಗಳ ಬಗ್ಗೆ ನೆನೆಯುತ್ತಾ ಕಣ್ಣೀರಿಟ್ಟರು. ಸೈನಿಕರು ನಾಶವಾಗುವಂತಹ ಯಾವ ಕಾರ್ಯಕ್ಕೂ ಅವರು ಅನುಮತಿ ಕೊಡಲೇ ಇಲ್ಲ.

ಉಮರ್‍ ರಷ್ಟು ತನ್ನ ಸೈನಿಕರ ಕುರಿತು ಕಾಳಜಿ ಇರಿಸಿ ಕೊಂಡು ಅವರ ಮೂಲಕ ಇಷ್ಟು ಸಮರ್ಥವಾಗಿ ಸೇನಾ ಕಾರ್ಯಾಚರಣೆಗಳನ್ನು ಮಾಡಿದ ಮತ್ತು ಸೈನಿಕರನ್ನು ಅಪಾರವಾಗಿ ಪ್ರೀತಿಸಿದ ಯಾವುದೇ ಸೇನಾಧಿಪತಿಯನ್ನು ಇತಿಹಾಸದುದ್ದಕ್ಕೂ ಕಂಡು ಹುಡುಕಲು ಸಾಧ್ಯವೇ ಇಲ್ಲ. ಆದ್ದರಿಂದ ಸೈನಿಕರ ಮೂಲಕ ಉಮರ್ ಸಾಟಿಯಿಲ್ಲದ ವಿಜಯವನ್ನು ಸಂಪಾದಿಸಿದರು ಮತ್ತು ಪ್ರೀತಿ ಆತ್ಮೀಯತೆಗಳನ್ನು ಸಂಪಾದಿಸಲು ಉಮರ್ ರಿಗೆ ಸಾಧ್ಯವಾಯಿತು.

ಇಸ್ಲಾಮೀ ರಾಷ್ಟ್ರ ಮತ್ತು ಸಮಾಜದ ಅತೀದೊಡ್ಡ ಹೊಣೆಗಾರಿಕೆ ಧರ್ಮ ಸಂಸ್ಥಾಪನೆಯಾಗಿದೆಯಷ್ಟೇ. ಇಸ್ಲಾಮೀ ಕಾನೂನನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕ್ರತಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಆದರ್ಶ ಪ್ರಚಾರ ಮತ್ತು ಸತ್ಯಬೋಧನೆ ನಡೆಸುವುದು ಅದರ ನಾಯಕರ ಕರ್ತವ್ಯವಾಗಿದೆ. ಆಡಳಿತಾಧಿಕಾರಿಗಳು ಇಸ್ಲಾಮನ್ನು ಇತರರಿಗೆ ಪರಿಚಯಿಸಲು ಗರಿಷ್ಠ ಪ್ರಯತ್ನ ನಡೆಸಬೇಕಾಗಿದೆ.

ಇಸ್ಲಾಮೀ ರಾಷ್ಟ್ರವು ಅತೀ ಹೆಚ್ಚು ಅಭಿವೃದ್ಧಿ ಹೊಂದಿರುವುದು ಖಲೀಫ ಉಮರ್‍ ರ ಕಾಲದಲ್ಲಾಗಿತ್ತು. ಉಮರ್ ಇಸ್ಲಾಮೀ ಪ್ರಚಾರ ಕಾರ್ಯದಲ್ಲಿ ಆಯುಧ ಎತ್ತಬಾರದೆನ್ನುವ ದೃಢ ಸಂಕಲ್ಪವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಹೀಗೇಕೆಂದರೆ ಇಸ್ಲಾಮಿನ ಶಿಕ್ಷಣವೇ ಅದು ಆಗಿದೆ. ಇಸ್ಲಾಮಿನಲ್ಲಿ ಮನ ಪರಿವರ್ತನೆಯಾಗಿ ಧರ್ಮದ ಪರಿವರ್ತನೆಯಾಗಬೇಕೆನ್ನುವುದು ಕಡ್ಡಾಯವೆನಿಸಿದ ವಿಚಾರವಾಗಿದೆ.

ಅಂದು ಮುಸ್ಲಿಮರು ಸಮಾಜದ ಮುಂದೆ ಸತ್ಯ ಧರ್ಮದ ಯಥಾ ಚಿತ್ರಣವನ್ನು ಮಂಡಿಸಿದರು. ಅದನ್ನು ತಮ್ಮ ಜೀವನದ ಮೂಲಕ ಪ್ರಾಯೋಗಿಕವಾಗಿ ಜಾರಿಗೆ ತಂದರು. ಇದು ಧರ್ಮ ಪ್ರಚಾರಕ್ಕೆ ಅವರು ಅನುಸರಿಸಿದ ಮಾದರಿಯಾಗಿದೆ. ಈ ಕಾರ್ಯಕ್ಕೆ ಫಲವೂ ದೊರಕಿತು. ಯಾಕೆಂದರೆ ಧರ್ಮ ಪ್ರಚಾರ ಕ್ಷೇತ್ರದಲ್ಲಿ ಇಸ್ಲಾಮೀ ಸಮಾಜದ ಪರಿಶುದ್ಧ ಜೀವನ ಗುಣ ವಿಶೇಷತೆಗಳು ಬಲಶಾಲಿ ಆಯುಧದಂತೆ ಕೆಲಸ ಮಾಡಿದವು.

ನಿರ್ಬಂಧಿತ ಸ್ಥಿತಿಯಲ್ಲಿ ಧರ್ಮ ಬೋಧನೆ ಆಗದಂತೆ ಮತ್ತು ಆ ಹಂತಕ್ಕೆ ತಲುಪದಂತೆ ಖಲೀಫ ನೋಡಿಕೊಂಡರು. ತನ್ನ ಸ್ವಂತ ಸೇವಕನೇ ಇಸ್ಲಾಮಿನಲ್ಲಿ ವಿಶ್ವಾಸ ತರಲು ಬಯಸದಿದ್ದಾಗ ಅವನಿಗೆ ಅವನಿಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ನೀಡಿದರು.

ಉಮರ್ ಬಿನ್ ಕತ್ತಾಬ್‍ರ ಖಿಲಾಫತ್ ಕಾಲದಲ್ಲಿ ಸಕಲ ಸೇನಾ ತಂಡಗಳು ಪ್ರಪ್ರಥಮವಾಗಿ ಆಯಾ ಪ್ರದೇಶದ ನಿವಾಸಿಗಳನ್ನು ಸತ್ಯ ಮಾರ್ಗಕ್ಕೆ ಕರೆಯುತ್ತಿದ್ದರು. ಇಸ್ಲಾಮೀ ತತ್ವಗಳನ್ನು ಅವರ ಮುಂದೆ ಪ್ರಸ್ತುಪಡಿಸಿ ಅದನ್ನು ಸ್ವೀಕರಿಸುವಂತೆ ಅವರನ್ನು ವಿನಂತಿಸುವುದು ಅವರ ರೂಢಿಯಾಗಿತ್ತು. ಇನ್ನು ಸೇನಾ ನಾಯಕತ್ವಕ್ಕೆ ಶಕ್ತಿ ಸಾಮರ್ಥ್ಯ ಅರ್ಹತೆಯಿರುವವರನ್ನೇ ನಿಯೋಜಿಸಲಾಗುತ್ತಿತ್ತು. ಇರಾಕ್, ಈಜಿಪ್ಟ್, ಪರ್ಶಿಯ, ಸಿರಿಯ, ಜೋರ್ಡಾನ್ ಮೊದಲಾದ ಪ್ರದೇಶಗಳ ಜನರ ಮುಂದೆ ಇಸ್ಲಾಮನ್ನು ಬಹಳ ಸಮರ್ಥವಾಗಿ ಅವರು ಮಂಡಿಸಿದರು. ಆದರೆ ಇವೆಲ್ಲಕ್ಕಿಂತ ಮುಸ್ಲಿಮರ ಪರಿಶುದ್ಧ ಜೀವನ ರೀತಿ ಜನರನ್ನು ಹೆಚ್ಚು ಆಕರ್ಷಿಸಿದವು. ಇದು ಹೆಚ್ಚು ಧರ್ಮ ಪ್ರಚಾರ ಕಾರ್ಯದಲ್ಲಿ ಪ್ರಯೋಜನವಾಯಿತು.

ರೋಮನ್ ಪ್ರತಿನಿಧಿಯಾದ ಜಾರ್ಜ್ ಇಸ್ಲಾಮೀ ಪಾಳಯಕ್ಕೆ ಬಂದಾಗ ಮುಸ್ಲಿಮರ ವರ್ತನೆ, ಜೀವಿಸುವ ರೀತಿ, ಗುಣನಡೆತೆಗಳಿಗೆ ಮಾರು ಹೋಗಿ ಸತ್ಯಧರ್ಮ ಸ್ವೀಕರಿಸಿದ್ದರು. ಈ ಘಟನೆಯನ್ನು ಈ ಹಿಂದೆ ವಿವರವಾಗಿ ಚರ್ಚಿಸಲಾಗಿದೆ. ಈ ರೀತಿ ಮುಸ್ಲಿಮರ ಆದರ್ಶೀಯ ನಡಾವಳಿಗಳು, ಆದರ್ಶ ವ್ಯಕ್ತಿತ್ವ ವೈಶಿಷ್ಟ್ಯಗಳು ಹಾಗೂ ಮುಸ್ಲಿಮರ ಉನ್ನತ ಗುಣಗಳು ಒಟ್ಟು ಮೇಳೈಸಿದ್ದರಿಂದ ಇತರ ಜನರನ್ನು ಇವೆಲ್ಲ ಹೆಚ್ಚು ಆಕರ್ಷಿಸಿದ ಚುಂಬಕ ಶಕ್ತಿಯಾಗಿ ಪರಿವರ್ತನೆಯಾಗಿತ್ತು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *