ದೈವಿಕ ತೀರ್ಮಾನವನ್ನು ಕೇಳಿ ಪಡೆದ ಖೌಲಾ

@ ಶೈಖ್ ಮುಹಮ್ಮದ್ ಕಾರಕುನ್ನು

ಪ್ರವಾದಿವರ್ಯರ(ಸ) ಆರಂಭ ಕಾಲದಲ್ಲಿ ಅರಬಿಗಳ ಮಧ್ಯೆ ಝಿಹಾರ್ ಎಂಬ ವಿವಾಹ ವಿಚ್ಛೇದನ ಪದ್ಧತಿ ಚಾಲ್ತಿಯಲ್ಲಿತ್ತು. ಪತ್ನಿಯೊಡನೆ ಪತಿಯು ‘ನೀನು ನನಗೆ ತಾಯಿಯ ಬೆನ್ನಿನಂತೆ’ ಎಂದು ಹೇಳುವುದನ್ನು ಝಿಹಾರ್ ಎನ್ನಲಾಗುತ್ತಿತ್ತು ಅಥವಾ ಇನ್ನು ಮುಂದೆ ನಾನು ಮತ್ತು ನೀನು ಲೈಂಗಿಕವಾಗಿ ಸಂಬಂಧವೇರ್ಪಟ್ಟರೆ ಅದು ತಾಯಿಯೊಂದಿಗೆ ಸೇರಿದಂತೆ’ ಎಂದು ಇದರ ಅರ್ಥ.

ಹೀಗೆ ಹೇಳಿ ಬಿಟ್ಟರೆ ದಂಪತಿಗಳ ನಡುವೆ ಸಂಪೂರ್ಣ ಸಂಬಂಧ ಕಡಿಯಲಾಗುತ್ತಿತ್ತು. ಆ ಬಳಿಕ ಸಂಬಂಧ ಮರು ಸ್ಥಾಪಿಸಲಾಗುತ್ತಿರಲಿಲ್ಲ. ಯಾಕೆಂದರೆ ಮಾತೆಯೊಂದಿಗೆ ಯಾವುದೇ ಕಾರಣಕ್ಕೂ ಸಂಬಂಧ ಸಲ್ಲದು ಅಲ್ಲವೇ? ಓರ್ವ ಮಹಿಳೆ ಒಮ್ಮೆ ತಾಯಿಯಾದರೆ ಮತ್ತೆ ಅದರಿಂದ ಹೊರ ಬರಲಾಗದು. ಆದ್ದರಿಂದ ಈ ವಿವಾಹ ಸಂಬಂಧವು ಅದರಿಂದ ಅಂತ್ಯವಾಗುತ್ತಿತ್ತು.

ಇಸ್ಲಾಮೀ ಸಮುದಾಯದಲ್ಲಿ ನಾಲ್ವರು ಈ ಅನಾಚಾರದಲ್ಲಿ ಒಳಗಾಗಿದ್ದರು ಎಂದು ಇತಿಹಾಸ ಹೇಳುತ್ತಿದೆ. ಅದರಲ್ಲಿ ಔಸ್ ಬಿನ್ ಸಾಮಿತ್‍ರ ಪ್ರಮಾದವು ಹೆಚ್ಚು ಸುದ್ದಿಯಾಗಿತ್ತು. ಅವರು ಪ್ರವಾದಿಯವರ(ಸ) ಪ್ರಮುಖ ಸಂಗಾತಿ ಉಬಾದ ಬಿನ್ ಸಾಮಿತ್‍ರ ಸಹೋದರನಾಗಿದ್ದರು. ವೃದ್ಧರಾಗಿದ್ದ ಅವರಿಗೆ ಒಮ್ಮೆ ತೀವ್ರ ಸಿಟ್ಟು ಬಂತು. ಅವರ ಪತ್ನಿ ಖೌಲಾರವರು ಖಸ್ರಜ್ ಗೋತ್ರದ ಸಅಲಬ್‍ರ ಮಗಳು. ಔಸ್ ಬಿನ್ ಸಾಮಿತ್‍ರು ಮುಂಗೋಪದಿಂದ ತನ್ನ ಪತ್ನಿಗೆ ಝಿಹಾರ್ ಕೂಡಾ ಹೇಳಿ ಬಿಟ್ಟರು.

ಇದರಿಂದ ತೀವ್ರ ನೊಂದ ಖೌಲಾ ಪ್ರವಾದಿವರ್ಯರನ್ನು (ಸ) ಭೇಟಿಯಾಗಿ ಘಟನೆಯನ್ನು ವಿವರಿಸಿದರು. ಬಳಿಕ ಈ ರೀತಿ ಕೇಳಿದರು. “ಅಲ್ಲಾಹನ ಪ್ರವಾದಿಗಳೇ, ನನ್ನ ಹಾಗೂ ನನ್ನ ಮಗಳ ಬಾಳು ದ್ವಂಸವಾಗುವುದನ್ನು ತಡೆಯಲು ಏನಾದರೂ ದಾರಿ ಇದೆಯೇ? ಕೂಡಲೇ ಪ್ರವಾದಿಯವರು(ಸ), ಈ ವಿಚಾರದಲ್ಲಿ ನನಗೆ ಅಲ್ಲಾಹನಿಂದ ಯಾವುದೇ ಆದೇಶ ಬಂದಿಲ್ಲ. ನೀವು ಅವರಿಗೆ ನಿಷಿದ್ಧಗೊಳಿಸಲ್ಪಟ್ಟಿದ್ದೀರಿ ಎಂದು ನನಗೆ ಅನಿಸುತ್ತದೆ” ಎಂದು ಹೇಳಿದರು.

ಈ ಉತ್ತರ ಕೇಳಿ ಅವರು ತೀವ್ರ ಕಳವಳಕ್ಕೀಡಾದರು. ತನ್ನ ಹಾಗೂ ತನ್ನ ಮಗಳ ಮತ್ತು ವೃದ್ಧರಾದ ನನ್ನ ಪತಿಯ ಜೀವನವು ಬರಡಾಗದಿರಲು ನೆರವಾಗುವಂತೆ ಮೊರೆಯಿಟ್ಟರು. ಪ್ರವಾದಿ ಅದನ್ನೇ ಉತ್ತರಿಸುತ್ತಿದ್ದರು. ಆಗ ಹಠಾತ್ತನೆ ಪ್ರವಾದಿವರ್ಯರಿಗೆ(ಸ) ದಿವ್ಯವಾಣಿ ಅವತೀರ್ಣವಾಯಿತು.

“ನಿಮ್ಮೊಡನೆ ತನ್ನ ಪತಿಯ ವಿಷಯದಲ್ಲಿ ವಾದಿಸುತ್ತಿರುವ ಹಾಗೂ ಅಲ್ಲಾಹನೊಡನೆ ಮೊರೆಯಿಡುತ್ತಲಿರುವ ಸ್ತ್ರೀಯ ಮಾತನ್ನು ಅಲ್ಲಾಹನು ಆಲಿಸಿದನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದಾನೆ. ಅವನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ. ನಿಮ್ಮ ಪೈಕಿ ತಮ್ಮ ಪತ್ನಿಯರನ್ನು`ಝಿಹಾರ್’ ಮಾಡುವವರ ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರೇ ಅವರ ತಾಯಂದಿರು. ಇವರು ಅತ್ಯಂತ ಅಪ್ರಿಯ ಹಾಗೂ ಸುಳ್ಳಾದ ಒಂದು ಮಾತನ್ನು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಬಹಳ ಮನ್ನಿಸುವವನೂ ಮಹಾ ಕ್ಪಮಾಶೀಲನೂ ಆಗಿರುತ್ತಾನೆ.”(ಅಲ್ ಮುಜಾದಲಾ: 1-2)

ಈ ಸೂಕ್ತಗಳ ಮೂಲಕ ಅಲ್ಲಾಹನು ಅನಿಸ್ಲಾಮಿಕ ಕಾಲದ ಅನಾಚಾರಕ್ಕೊಂದು ಅಂತ್ಯ ಹಾಡಿ ಝಿಹಾರ್ ಎಂಬ ವಿವಾಹ ವಿಚ್ಛೇದನವನ್ನು ರದ್ದುಗೊಳಿಸಿದನು. ಅದರಿಂದ ವಿವಾಹ ಸಂಬಂಧವು ಬೇರ್ಪಡದು ಎಂಬುದನ್ನು ಇಸ್ಲಾಮ್ ಸ್ಪಷ್ಟ ಪಡಿಸಿತು. ಮಾತ್ರವಲ್ಲ ಅದೊಂದು ಮಹಾ ಪಾಪವೆಂದೂ ಸಾರಿತು. ಅದು ಅತ್ಯಂತ ನೀಚವೂ, ಪೊಳ್ಳೂ ಎಂದೂ ಶಾಸನ ಬರೆಯಿತು. ಈ ಘಟನೆಯು ಖೌಲಾರನ್ನು ಪ್ರಸಿದ್ಧವಾಗಿಸಿತು. ಅಲ್ಲಾಹನ ಮಧ್ಯ ಪ್ರವೇಶಕ್ಕೆ ಕಾರಣವಾದ ಈ ಯಾಚನೆಯ ಮೂಲಕ ಅವರು ಖ್ಯಾತರಾದರು. “ದೈವಿಕ ನಿರ್ಣಯವನ್ನು ಕೇಳಿ ಪಡೆದವಳು” ಎಂಬ ಹೆಸರು ಅವರಿಗೆ ಲಭಿಸಿತು. ಒಮ್ಮೆ ಖಲೀಫಾ ಉಮರ್ ಫಾರೂಕ್ ಆಡಳಿತದ ಕಾಲದಲ್ಲಿ ದಾರಿ ಮಧ್ಯೆ ಖೌಲಾರವರನ್ನು ಭೇಟಿಯಾದಾಗ ನಡೆದ ಸಂಭಾಷಣೆಯೂ ಗಮನಾರ್ಹ.

ಝಿಹಾರ್‍ಗೆ ಸಂಬಂಧಿಸಿ ಕುರ್‍ಆನ್ ಸೂಕ್ತ ಅವತೀರ್ಣವಾದಾಗ ಇದಕ್ಕೆ ಸಂಬಂಧಿಸಿದ ಮೂರು ಘಟನೆಗಳನ್ನು ಉದ್ಧರಿಸಲಾಗಿದೆ. ಅದರಲ್ಲಿ ಸಲಮತ್ ಬಿನ್ ಸಖ್ರ್ ಬಿಯಾದಿಯವರದ್ದಾಗಿದೆ. ಅವರು ಅತೀವ ಲೈಂಗಿಕಾಸಕ್ತಿಯುಳ್ಳ ವ್ಯಕ್ತಿಯಾಗಿದ್ದರು. ಅವರು ರಮಝಾನಿನಲ್ಲಿ ಹಗಲಿನ ವೇಳೆ ಉಪವಾಸ ವ್ರತಧಾರಿಯಾಗಿರುವಂತೆಯೇ ಎಲ್ಲಿ ಪತ್ನಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ಏರ್ಪಡುವೆನೋ ಎಂಬ ಭೀತಿಯಿಂದ ಪತ್ನಿಯನ್ನು ಝಿಹಾರ್ ಮಾಡಿದ್ದರು. ಆದರೆ ಅದನ್ನು ಅವರಿಂದ ಪಾಲಿಸಲಾಗಲಿಲ್ಲ. ರಮಝಾನಿನ ಒಂದು ರಾತ್ರಿ ಅವರು ಪತ್ನಿಯೊಡನೆ ಲೈಂಗಿಕ ಸಂಬಂಧದಲ್ಲಿ ಏರ್ಪಟ್ಟರು. ಪಶ್ಚಾತ್ತಾಪ ಭಾವನೆಯಿಂದ ಮರುದಿನ ಪ್ರವಾದಿವರ್ಯರನ್ನು(ಸ) ಬೇಟಿಯಾಗಿ ಘಟನೆಯನ್ನು ವಿವರಿಸಿದರು.

ಓರ್ವರು ಬಾಯಿಯಿಂದ ತಾಯಿ ಎಂದು ಹೇಳಿದ ಕೂಡಲೇ ಆಕೆ ತಾಯಿಯಾಗಲಾರಳು. ಮಾತೆಯ ಸ್ಥಾನ ಗೌರವವು ಮಹತ್ವಪೂರ್ಣವಾದುದು. ಅದಕ್ಕಾಗಿ ಪೃಕೃತಿದತ್ತವಾಗಿಯೋ, ಧಾರ್ಮಿಕ ಪರವಾಗಿಯೋ, ಕಾನೂನು ಪರವಾಗಿಯೋ ಅಥವಾ ಇನ್ಯಾವುದೋ ಕಾರಣಕ್ಕಾಗಿಯೋ ಹೆಂಡತಿ ತಾಯಿಯಾಗಲಾರಳು. ಆದ್ದರಿಂದ ಪತ್ನಿಯನ್ನು ತಾಯಿಯೊಂದಿಗೆ ಸಮಾನವಾಗಿ ಹೋಲಿಸುವುದು ಮಹಾ ಪಾಪವಾಗಿದೆ. ಅತ್ಯಂತ ನೀಚವಾದ ಹೇಳಿಕೆಯದು. ಅದಕ್ಕೆ ಪ್ರಾಯಶ್ಚಿತ್ತ ಅನಿವಾರ್ಯವಾಗಿದೆ. ಅಲ್ಲಾಹನು ಹೇಳುತ್ತಾನೆ,
“ತಮ್ಮ ಪತ್ನಿಯರನ್ನು ‘ಝಿಹಾರ್’ ಮಾಡಿದವರು ಅನಂತರ ತಾವು ಹೇಳಿದ ಮಾತಿನಿಂದ ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವುದಕ್ಕೆ ಮುಂಚೆ ಒಬ್ಬ ಗುಲಾಮನನ್ನು ವಿಮೋಚಿಸಬೇಕಾಗುವುದು. ಹೀಗೆ ನಿಮಗೆ ಉಪದೇಶ ನೀಡಲಾಗುತ್ತದೆ ಮತ್ತು ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿತಿರುವನು. ಯಾರಿಗಾದರೂ ಗುಲಾಮನು ಸಿಗದಿದ್ದರೆ- ಅವರಿಬ್ಬರು ಪರಸ್ಪರರನ್ನು ಸ್ಪರ್ಶಿಸುವುದಕ್ಕೆ ಮುಂಚೆ- ಅವನು ನಿರಂತರವಾಗಿ ಎರಡು ತಿಂಗಳ ಉಪವಾಸ ವ್ರತವನ್ನು ಆಚರಿಸಬೇಕು. ಇದಕ್ಕೂ ಅಶಕ್ತನಾಗಿರುವವನು ಅರುವತ್ತು ಮಂದಿ ದರಿದ್ರರಿಗೆ ಊಟ ಕೊಡಬೇಕು. ನೀವು ಅಲ್ಲಾಹ್ ಮತ್ತು ಅವನ ರಸೂಲರ ಮೇಲೆ ವಿಶ್ವಾಸವಿರಿಸುವಂತಾಗಲಿಕ್ಕಾಗಿ ಈ ಆಜ್ಞೆಯನ್ನು ನೀಡಲಾಗುತ್ತಿದೆ. ಇವು ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟಿರುವ ಮೇರೆಗಳು ಮತ್ತು ಸತ್ಯ ನಿಷೇಧಿಗಳಿಗೆ ವೇದನಾಯುಕ್ತ ಯಾತನೆಯಿದೆ.” (ಅಲ್ ಮುಜಾದಲಾ 3-4)

ಒಮ್ಮೆ ಔಸ್ ಬಿನ್ ಸಾಮಿತ್ ಮತ್ತು ಸಲಮತ್ ಬಿನ್ ಸಖ್ರ್‍ರೊಡನೆ ಗುಲಾಮರನ್ನು ವಿಮೋಚಿಸುವಂತೆ ಪ್ರವಾದಿಗಳು ಆದೇಶಿಸಿದರು. ಔಸ್ ಮತ್ತು ಸಲಮ ಇಬ್ಬರೂ ತಮ್ಮ ತೊಂದರೆಗಳನ್ನು ವಿವರಿಸಿದರು. ಆಗ ಪ್ರವಾದಿಗಳು “ಎರಡು ತಿಂಗಳು ನಿರಂತರ ಉಪವಾಸವಿರುವಂತೆ ಆದೇಶಿಸಿದರು. ಇದನ್ನು ಕೇಳಿದ ಔಸ್, “ಮೂರು ಹೊತ್ತಿನ ಅಹಾರ ಸೇವಿಸದಿದ್ದರೆ ಕಣ್ಣಿಗೆ ರೋಗ ಬಾಧಿಸುವ ಗೋತ್ರಜರು ನಾವು” ಎಂದು ಹೇಳಿದರು. ಸಲಮರ ಉತ್ತರ ಮತ್ತೊಂದಾಗಿತ್ತು. ಅವರು “ಉಪವಾಸದ ಸಂದರ್ಭದಲ್ಲಿನ ಪ್ರಮಾದದಿಂದ ಈ ಅಪಾಯಕ್ಕೆ ನಾನು ಸಿಲುಕಿದ್ದೇನೆ” ಎಂದು ಹೇಳಿದರು. ಆಗ ಪ್ರವಾದಿಗಳು “ಇಬ್ಬರೂ ಅರುವತ್ತು ಅನಾಥರಿಗೆ ಅನ್ನದಾನ ಮಾಡಿರಿ” ಎಂದು ಹೇಳಿದರು.

ಆಗ ಔಸ್ “ನಾನು ಅಷ್ಟೊಂದು ಸ್ಥಿತಿವಂತನಲ್ಲ. ತಾವು ನೆರವಾದರೆ ಮಾತ್ರ ಸಾಧ್ಯ?” ಎಂದು ಹೇಳಿದರು. ಹಾಗೇ ಪ್ರವಾದಿಗಳು ಅವರಿಗೆ ಅರುವತ್ತು ಮಂದಿ ಅನಾಥರಿಗೆ ಎರಡು ಹೊತ್ತಿಗಾಗುವಷ್ಟು ಅನ್ನಾಹಾರವನ್ನು ನೀಡಿದರು. ಇನ್ನು ಸಲಮರ ಪ್ರತಿಕ್ರಿಯೆಯೂ ಇದೇ ರೀತಿ ಇತ್ತು. ಅವರು, ನಾವು ಕಡು ಬಡವರು ಎಂದು ಹೇಳಿದರು. ಆಗ ಸುರೈಖ್ ಗೋತ್ರದವರು ಕಳುಹಿಸಿದ ಝಕಾತಿನಿಂದ ಅರುವತ್ತು ಮಂದಿಗೆ ಬೇಕಾಗುವಷ್ಟು ಆಹಾರವನ್ನು ಅವರಿಗೆ ನೀಡಿದರು.
ಆದರೆ ವ್ಯತ್ಯಸ್ತ ವ್ಯಕ್ತಿಗಳ ಹೆಸರಿನಲ್ಲಿ ಬರೆಯಲಾದ ಈ ಎರಡೂ ಘಟನೆಗಳು ಒಂದೇ ವಿಷಯದ ಕುರಿತಾಗಿತ್ತು. ಏನೇ ಆಗಲಿ, ಈ ಎರಡಕ್ಕಿಂತಲೂ ಹೆಚ್ಚು ಪ್ರಸಿದ್ಧಿಯಾದುದು ಖೌಲಾ ಬಿಂತಿ ಸಅಲಬ್‍ರ ಪತಿ ಔಸ್ ಬಿನ್ ಸಾಮಿತ್‍ರ ಘಟನೆಯಾಗಿದೆ.

ಝಿಹಾರ್ ಮಾಡಿದ ಬಳಿಕ ಪ್ರಾಯಶ್ಚಿತ್ತ ನೀಡುವವರೆಗೆ ಪತ್ನಿಯೊಂದಿಗಿನ ಲೈಂಗಿಕ ಸಂಬಂಧವು ನಿಷಿದ್ಧವಾಗಿದೆ. ಆ ಸಂದರ್ಭದಲ್ಲಿ ಅವಳು ಪತ್ನಿಯೂ ಅಲ್ಲ. ಅನ್ಯಳೂ ಅಲ್ಲ. ಝಿಹಾರ್ ಮಾಡಿದ ಮಹಿಳೆಯೊಂದಿಗೆ ದಾಂಪತ್ಯ ಸಂಬಂಧವನ್ನು ಮುಂದುವರಿಸುವುದಿಲ್ಲವೆಂದಾದರೆ ಪ್ರಾಯಶ್ಚಿತ್ತದ ಅಗತ್ಯವಿಲ್ಲವೆಂಬುದು ವಿದ್ವಾಂಸರ ಅಭಿಪ್ರಾಯ.

ಪುರುಷರು ಮಾಡುವ ಝಿಹಾರ್‍ನಲ್ಲಿ ಮಹಿಳೆಗೆ ಯಾವುದೇ ಪಾತ್ರವಿಲ್ಲದಿದ್ದರೂ ಅವರು ಅನುಭವಿಸುವ ದಾಂಪತ್ಯ ಜೀವನದ ನಷ್ಟದ ಯಾತನೆಯನ್ನು ಇಲ್ಲವಾಗಿಸಲು ಪುರುಷರಿಗೆ ಪ್ರಾಯಶ್ಚಿತ್ತವನ್ನು ಕಡ್ಡಾಯಗೊಳಿಸಲಾಗಿದೆ. ಈ ವಿಚಾರವಾಗಿ ಇಸ್ಲಾಮೀ ಆಡಳಿತವಿದೆಯೆಂದಾದಲ್ಲಿ ನ್ಯಾಯಾಲಯವನ್ನೂ ಸಮೀಪಿಸಬಹುದು.

ಇಸ್ಲಾಮೀ ಸಮಾಜದಲ್ಲಿ ಈ ಹೀನವಾದ ಕ್ರಮವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕುರ್‍ಆನಿನ ಈ ಘೋಷಣೆಯಿಂದ ಸಾಧ್ಯವಾಯಿತು. ಅದರಿಂದ ಮಹಿಳಾ ಸಮಾಜವು ಅನುಭವಿಸುವ ತೀವ್ರ ತೆರನಾದ ಸಂಕಷ್ಟವೊಂದಕ್ಕೆ ಅಂತ್ಯ ಹಾಡಲು ಸಾಧ್ಯವಾಯಿತು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *