ಮಧ್ಯ ಪ್ರದೇಶದಲ್ಲಿ ಹಾಜರಿ ಕರೆಯುವಾಗ ವಿದ್ಯಾರ್ಥಿಗಳು ಜೈಹಿಂದ್ ಹೇಳಬೇಕು

ಭೋಪಾಲ್, ಮೇ 17: ಮಧ್ಯ ಪ್ರದೇಶದ ಶಾಲೆಗಳಲ್ಲಿ ಹಾಜರಿ ಕರೆಯುವಾಗ ವಿದ್ಯಾರ್ಥಿಗಳು ಯೆಸ್ ಮೇಮ್, ಎಸ್ ಸಾರ್ ಎಂದು ಹೇಳುವಂತಿಲ್ಲ. ದೇಶ ಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ಸರಕಾರ ಜೈ ಹಿಂದ್ ಎಂದು ಹೇಳಬೇಕೆಂದು ಶಾಲೆಗಳಿಗೆ ಆದೇಶ ಹೊರಡಿಸಿದೆ.

ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸತ್ನಾ ಜಿಲ್ಲೆಯ ಶಾಲೆಗಳಲ್ಲಿ ಈ ರೀತಿ ಪ್ರಯೋಗಿಸಿ ಯಶಸ್ಸು ಸಿಕ್ಕಿತ್ತು. ಯೆಸ್ ಮೇಮ್, ಯೆಸ್ ಸಾರ್ ಹೇಳುವುದರಿಂದ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಯುವುದಿಲ್ಲ ಎಂದು ಮಧ್ಯ ಪ್ರದೇಶ ಶಿಕ್ಷಣ ಸಚಿವ ಈ ಹಿಂದೆ ಹೇಳಿದ್ದರು.

ರಾಜ್ಯದ 1.22 ಲಕ್ಷ ಶಾಲೆಗಳಲ್ಲಿ ಜೈಹಿಂದ್ ಹೇಳುವುದು ಇನ್ನು ಕಡ್ಡಾಯವಾಗಲಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಇದು ಕಡ್ಡಾಯವಲ್ಲ ಎಂದು ಸಚಿವರು ಹೇಳಿದ್ದಾರೆ.

ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಇದು ಒಳ್ಳೆಯ ಆರಂಭ ಎಂದು ಅವರು ಹೇಳಿದ್ದಾರೆ. ಈ ನಿರ್ಧಾರವನ್ನು ಧನಾತ್ಮಕವಾಗಿ ಪರಿಗಣಿಸಬೇಕೆಂದು ಕೂಡಾ ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ಹೇಳಿದರು. ಎಲ್ಲ ದಿವಸವೂ ಧ್ವಜಾರೋಹಣ ಮಾಡಿ ರಾಷ್ಟ್ರ ಗೀತೆ ಹಾಡಬೇಕೆಂದು ಬಿಜೆಪಿ ಸರಕಾರ ಮಧ್ಯ ಪ್ರದೇಶದ ಶಾಲೆಗಳಿಗೆ ಈ ಹಿಂದೆ ಆದೇಶ ಹೊರಡಿಸಿತ್ತು.

ಇದೇ ವೇಳೆ ಮಧ್ಯ ಪ್ರದೇಶ ಸರಕಾರದ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದೆ. ದೇಶ ಪ್ರೇಮದ ಹೆಸರಲ್ಲಿ ಹೇರಿಕೆ ನಡೆಸುವುದು ಸರಿಯಲ್ಲ. ಹಾಜರಿ ಕರೆಯುವಾಗ ಜೈಹಿಂದ್ ಹೇಳುವುದನ್ನು ಕಡ್ಡಾಯಗೊಳಿಸುವ ಬದಲಾಗಿ ಮೌಲ್ಯಾಧಾರಿತ ಶಿಕ್ಷಣ ಕೊಡಲು ಸರಕಾರ ಪ್ರಯತ್ನಿಸಬೇಕೆಂದು ಕಾಂಗ್ರೆಸ್ ನಾಯಕ ಕೆಕೆ ಮಿಶ್ರ ಹೇಳಿದ್ದಾರೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *