ಇಸ್ಲಾಮ್: ವ್ಯಾವಹಾರಿಕ ಕೌಶಲ್ಯದ ಪ್ರಾಮುಖ್ಯತೆ

@ ಸೈಯ್ಯದ್ ಕಾಝಿಂ

ಒಬ್ಬ ವ್ಯಕ್ತಿ; ಇತರೆ ವ್ಯಕ್ತಿಗಳು ಹಾಗೂ ಗುಂಪುಗಳೊಂದಿಗೆ ನಡೆಸುವ ಸಂಭಾಷಣೆ ಮತ್ತು ಸಂವಹನ ಪ್ರಕ್ರಿಯೆಯು ವ್ಯಾವಹಾರಿಕ ಕೌಶಲ್ಯವಾಗಿದೆ.

ಈ ಕೌಶಲ್ಯವು ಕೇವಲ ನಮ್ಮ ಮಾತುಗಾರಿಕೆಗೆ ಸೀಮಿತವಾಗಿರದೇ ನಮ್ಮಲ್ಲಿನ ವಿಶ್ವಾಸ, ಇತರರ ಮಾತುಗಳನ್ನು ಆಲಿಸುವ ಮತ್ತು ಅರ್ಥೈಸುವ ಸಾಮಥ್ರ್ಯಗಳ ಕುರಿತು ಈ ಕೌಶಲ್ಯವು ಮಾನದಂಡವಾಗುತ್ತದೆ.

ಸಮಸ್ಯೆಗಳನ್ನು ಬಗೆಹರಿಸುವುದು, ನಿರ್ಧಾರಗಳನ್ನು ಕೈಗೊಳ್ಳುವುದು ತನ್ನದೇ ಸಮಸ್ಯೆಗಳನ್ನು ನಿಭಾಯಿಸಲು ಪ್ರಯತ್ನಿಸುವುದು ಇವುಗಳೆಲ್ಲವೂ ವ್ಯಾವಹಾರಿಕ ಕೌಶಲ್ಯದ ಭಾಗವಾಗಿದೆ.

ಈ ವ್ಯಾವಹಾರಿಕ ಕೌಶಲ್ಯವು ನಮಗೆ ವ್ಯಕ್ತಿಗಳೊಂದಿಗೆ ಧನಾತ್ಮಕ ಸಂವಹನಕ್ಕೆ ದಾರಿ ಮಾಡಿ ಕೊಡುತ್ತದೆ. ಸಾಮಾಜಿಕ ಮತ್ತು ಮಾನಸಿಕ ಬದುಕಿನ ಸಂತೃಪ್ತಿಗಾಗಿ ಈ ವ್ಯಾವಹಾರಿಕ ಕೌಶಲ್ಯವು ಸ್ನೇಹಮಯ ಜೀವನವನ್ನು ನಡೆಸಲು ಸಹಾಯಕವಾಗುವುದು.

ವ್ಯಾವಹಾರಿಕ ಕೌಶಲ್ಯವನ್ನು ಚೆನ್ನಾಗಿ ಬಲ್ಲ ವ್ಯಕ್ತಿಗಳು ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಅವರು ಶಾಂತ ಹಾಗೂ ಆತ್ಮವಿಶ್ವಾಸ ಪೂರ್ಣ ವರ್ಚಸ್ಸಿಗೆ ಒಳಗಾಗಿರುತ್ತಾರಲ್ಲದೇ ಇತರರಿಗೆ ಹೆಚ್ಚಾಗಿ ಪ್ರೀತಿಯಿಂದಲೇ ಆಕರ್ಷಕವಾಗುವ ಗುಣಗಳನ್ನು ಒಳಗೊಂಡಿರುತ್ತಾರೆ.

ತನ್ನ ವ್ಯಾವಹಾರಿಕ ಕೌಶಲ್ಯಗಳ ಬಗ್ಗೆ ಪ್ರಜ್ಞನಾಗಿರುವ ವ್ಯಕ್ತಿಯು ತನ್ನನ್ನು ಸ್ವತಃ ಸುಧಾರಿಸಲು ಮತ್ತು ತನ್ನ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಾನೆ.

ಅಲ್ಲಾಹನು ಪವಿತ್ರ ಕುರ್‍ಆನಿನಲ್ಲಿ ಈ ರೀತಿ ಆಜ್ಞಾಪಿಸಿರುವನು. “ನಿಮಗೆ ಯಾರಾದರೂ ಸಾದರದಿಂದ ಸಲಾಮ್ ಹೇಳಿದರೆ ಅದಕ್ಕಿಂತಲೂ ಉತ್ತಮ ರೀತಿಯಿಂದ ಅಥವಾ ಕನಿಷ್ಠ ಪಕ್ಷ ಅದೇ ರೀತಿಯಲ್ಲಿ ಪ್ರತಿ ಸಲಾಮ್ ಹೇಳಿರಿ. ನಿಶ್ಚಯವಾಗಿಯೂ ಅಲ್ಲಾಹ್ ಸಕಲ ವಿಷಯಗಳ ಲೆಕ್ಕ ಪರಿಶೋಧಿಸುವವನಾಗಿರುತ್ತಾನೆ.” (ಪವಿತ್ರ ಕುರ್‍ಆನ್ 4:83)

ಪವಿತ್ರ ಕುರ್‍ಆನ್ ಯಾರಾದರೂ ಸಲಾಮ್ ತಿಳಿಸಿದಲ್ಲಿ ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ಅಥವಾ ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರು ಹೇಳಿದಷ್ಟರ ಮಟ್ಟಿಗೆಯಾದರೂ ಸಲಾಮ್‍ಗೆ ಉತ್ತರಿಸಬೇಕು. ಈ ರೀತಿ ಪರಸ್ಪರ ಶುಭಾಶಯವನ್ನು ಸ್ವೀಕರಿಸುವ ಮತ್ತು ನೀಡುವ ಪ್ರಕ್ರಿಯೆಯು ವ್ಯಕ್ತಿಗಳ ನಡುವಿನ ಸಂಬಂಧದ ಸ್ಥಾಪನೆಗೆ ಪೂರಕವಾಗುವುದು ಎಂದಿದೆ.

ಅಲ್ಲಾಹನು ಮಾನವರಿಗೆ ನೀಡಿದ ಅಪೂರ್ವ ಅನುಗ್ರಹಗಳಲ್ಲಿ ಮಾತನಾಡುವ ಕೌಶಲ್ಯವೂ ಒಂದಾಗಿದೆ. ಪ್ರತಿಯೊಬ್ಬ ಮಾನವನೂ ತನಗೆ ಬೇಕಾದ ರೀತಿಯಲ್ಲಿ ಸಂಬಂಧ ಸ್ಥಾಪಿಸುವ ಅಥವಾ ಅದರಿಂದ ಹೊರಗುಳಿಯ ಬಯಸುವ ಸಾಮಥ್ರ್ಯವನ್ನು ಹೊಂದಿದ್ದಾನೆ.

ಆದರೆ ಇಸ್ಲಾಮ್ ವೈಯಕ್ತಿಕ ಬೆಳವಣಿಗೆ, ಸದಾ ಧನಾತ್ಮಕ ಸ್ವಭಾವಕ್ಕೆ ಆದ್ಯತೆ ನೀಡುತ್ತದೆ. ಅಲ್ಲಾಹನು ಪವಿತ್ರ ಕುರ್‍ಆನಿನಲ್ಲಿ ಜನರೊಂದಿಗೆ ಒಳ್ಳೆಯ ಮಾತುಗಳನ್ನೇ ಆಡಬೇಕೆಂದು ಆಜ್ಞಾಪಿಸಿರುವನು. ಅಲ್ಲಾಹ್ ಮತ್ತು ಅಂತ್ಯ ದಿನದ ಮೇಲೆ ವಿಶ್ವಾಸವಿಡುವವನು ಉತ್ತಮ ಮಾತುಗಳನ್ನಾಡಬೇಕು ಅಥವಾ ಮೌನ ವಹಿಸಬೇಕು ಎಂದು ಪ್ರವಾದಿಯವರು(ಸ) ಕಲಿಸಿ ಕೊಟ್ಟಿರುವರು.

ಅಂದರೆ ನಮ್ಮ ಮಾತುಗಳು ಸಂತೃಪ್ತಿದಾಯಕ ಮಾತುಗಳಾಗಿರಬೇಕು ಎಂಬುದು ಇದರಿಂದ ತಿಳಿದು ಬರುತ್ತದೆ. ವ್ಯಕ್ತಿಯ ಮಾತುಗಳು ಇನ್ನೋರ್ವ ವ್ಯಕ್ತಿಯ ಮನಸಿನಾಳಕ್ಕೆ ತಲುಪುವ ಹಾಗೂ ಅವರ ಆತ್ಮಕ್ಕೆ ಸಂತೃಪ್ತಿಯನ್ನು ನೀಡುವ ಮಾತುಗಳಾಗಿರಬೇಕು. ಅವುಗಳು ಜನರಿಗೆ ಸಂತೋಷವನ್ನೂ, ಪ್ರೇರಣೆಯನ್ನು ನೀಡುವ ಮಾತುಗಳಾಗಿರಬೇಕು. ಅವುಗಳು ಆಶಾದಾಯಕ ಭಾವನೆಯನ್ನು ಹುಟ್ಟಿಸುವವುಗಳಾಗಿರಬೇಕು. ಈ ಜಗತ್ತಿನಲ್ಲಿ ಆಶಾದಾಯಕತ್ವಕ್ಕೆ ನಾವು ಪ್ರೇರಕರಾಗಿರಬೇಕೇ ಹೊರತು ಜನರನ್ನು ನಿರುತ್ತೇಜನಗೊಳಿಸುವವರಾಗಬಾರದು.

“….ಅವರೊಡನೆ ಸೌಜನ್ಯದ ಮಾತುಗಳನ್ನಾಡಿರಿ” (4:8) ಎಂದು ಪವಿತ್ರ ಕುರ್‍ಆನ್ ಆಜ್ಞಾಪಿಸಿರುತ್ತದೆ. ಸತ್ಯವನ್ನು ಹೇಳುವಾಗ ಅದನ್ನು ಸಮಾಧಾನದಿಂದ ಹೇಳಿರಿ. ಅದರಲ್ಲಿ ಕೋಪ ಮತ್ತು ದ್ವೇಷವನ್ನು ತುಂಬಬೇಡಿರಿ ಎಂಬುದು ಇದರರ್ಥವಾಗಿದೆ.

ಅಲ್ಲಾಹನು ಪವಿತ್ರ ಕುರ್‍ಆನಿನಲ್ಲಿ ಈ ರೀತಿ ಆಜ್ಞಾಪಿಸುತ್ತಾನೆ.
“ಸತ್ಯವಿಶ್ವಾಸಿಗಳೇ, ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತನ್ನೇ ಆಡಿರಿ.” (33:70)

ಅಬೂ ಮೂಸಾ ಅಲ್-ಅಶಅರೀಯವರು ವರದಿ ಮಾಡುತ್ತಾರೆ. ನಾನು ಪ್ರವಾದಿವರ್ಯರ(ಸ) ಬಳಿ “ಮುಸ್ಲಿಮರಲ್ಲಿ ಯಾರು ಅತಿ ಉತ್ತಮರು” ಎಂದು ಪ್ರಶ್ನಿಸಿದೆ. ಪ್ರವಾದಿವರ್ಯರು(ಸ) ಈ ರೀತಿ ಉತ್ತರಿಸಿದರು, “ಓರ್ವನ ನಾಲಗೆ ಮತ್ತು ಕೈಗಳಿಂದ ಇತರ ಮುಸ್ಲಿಮರು ಸುರಕ್ಷಿತರಾಗಿರುವವನು.”
ಪ್ರವಾದಿ ಮುಹಮ್ಮದ್(ಸ)ರವರು ಸತ್ಯವನ್ನೇ ಮಾತನಾಡುತ್ತಿದ್ದರು. ಅವರು ಉದಾರಿಯಾಗಿದ್ದರು. ತಮ್ಮ ಸಂಗಾತಿಗಳನ್ನು ಮತ್ತು ಇತರೆ ಅಪರಿಚಿತರನ್ನು ನಗು ಮುಖ ಮತ್ತು ಮೃದು ಸ್ವಭಾವದಿಂದಲೇ ಸ್ವೀಕರಿಸುತ್ತಿದ್ದರು.

ಇಬ್ಬರು ಮುಸ್ಲಿಮರು ಪರಸ್ಪರ ಭೇಟಿಯಾದಲ್ಲಿ ಹಸ್ತಲಾಘವ ಮಾಡಿ ಅಲ್ಲಾಹನನ್ನು ಸ್ತುತಿಸಬೇಕು ಮತ್ತು ಆತನಲ್ಲಿ ಕ್ಷಮೆ ಯಾಚಿಸಬೇಕು, ಅಲ್ಲಾಹನು ಅವರನ್ನು ಕ್ಷಮಿಸುವನು ಎಂದು ಪ್ರವಾದಿಯವರು(ಸ) ಕಲಿಸಿ ಕೊಟ್ಟಿದ್ದಾರೆ. ಪರಸ್ಪರ ಭೇಟಿಯಾದಾಗ ಕೈ ಕುಲುಕುವುದು ಆತ್ಮವಿಶ್ವಾಸದ ವೃದ್ಧಿಗೂ ಆತ್ಮೀಯತೆಗೂ ಅವರಲ್ಲಿನ ವ್ಯಾವಹಾರಿಕ ಕೌಶಲ್ಯದ ನಿರ್ವಹಣೆಗೂ ಸಹಾಯಕವಾಗುತ್ತದೆ.

ಪ್ರವಾದಿ ಮುಹಮ್ಮದ್(ಸ)ರವರು ತಮ್ಮ ಎಲ್ಲ ಸಂಬಂಧಿಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಅವರ ಚಿಕ್ಕಪ್ಪ ಅಬೂ ಜಹಲ್ ಪ್ರವಾದಿವರ್ಯರಿಗೆ(ಸ) ಕಿರುಕುಳವನ್ನು ನೀಡಿದರೂ ಅವರಿಗೆ ಪ್ರತ್ಯುತ್ತರಿಸಲಿಲ್ಲ. ವೈರತ್ವವನ್ನೂ ಪ್ರತೀಕಾರವನ್ನೂ ಪಡೆಯದೇ ಅವರು ಎಲ್ಲವನ್ನೂ ಅಲ್ಲಾಹನಿಚ್ಛೆಗೆ ಒಪ್ಪಿಸಿ ಬಿಟ್ಟರು.

ಅಬೂ ತಾಲಿಬ್ ರವರು 40 ವರ್ಷಗಳ ಕಾಲ ಪ್ರವಾದಿ ಮುಹಮ್ಮದ್(ಸ)ರವರನ್ನು ಸಂರಕ್ಷಿಸಿದಾಗಲೂ ಪ್ರವಾದಿವರ್ಯರು(ಸ) ತಮ್ಮ ಅಪೂರ್ವ ಪ್ರೀತಿಯನ್ನು ಅವರಿಗೆ ಧಾರೆಯೆರೆದರು. ಆದರೆ ಅಬೂ ತಾಲಿಬ್‍ರು ಇಸ್ಲಾಮ್ ಸ್ವೀಕರಿಸಿರಲಿಲ್ಲ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು. ತಮ್ಮ ಸಂಬಂಧಿಕರಲ್ಲಿ ಹೆಚ್ಚಿನವರು ಇಸ್ಲಾಮ್ ಸ್ವೀಕರಿಸದಿದ್ದರೂ ಪ್ರವಾದಿಯವರು(ಸ) ಅವರನ್ನು ಬಲುವಾಗಿ ಪ್ರೀತಿಸುತ್ತಿದ್ದರು. ಮಾತ್ರವಲ್ಲ, ಅವರೆಲ್ಲರೂ ಖುರೈಶರು ಹೇರಿದ ಆರ್ಥಿಕ, ಸಾಮಾಜಿಕ ಬಹಿಷ್ಕಾರವನ್ನು ಮೂರು ವರ್ಷಗಳ ಕಾಲ ಸಹಿಸಿಕೊಂಡರು.

ಪ್ರವಾದಿವರ್ಯರ(ಸ) ಪ್ರಿಯ ಪತ್ನಿಯಾದ ಖದೀಜಾ(ರ)ರವರ ಮರಣಾನಂತರವೂ ಅವರ ಸಹೋದರಿ ಹಾಲಾ ಹಾಗೂ ಅವರ ಗೆಳತಿಯರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಿದರು. ಯಾವಾಗಲೆಲ್ಲ ಪ್ರಾಣಿ ಬಲಿ ನೀಡಲಾಗುತ್ತಿತ್ತೋ ಆವಾಗಲೆಲ್ಲ ಪ್ರವಾದಿವರ್ಯರು(ಸ) ಖದೀಜಾ(ರ) ರವರ ಸ್ನೇಹಿತೆಯರಿಗೆ ಅದರ ಮಾಂಸವನ್ನು ಕಳುಹಿಸಿ ಕೊಡುತ್ತಿದ್ದರು. ತಮ್ಮ ಸಂಬಂಧಿಕರನ್ನು ಭೇಟಿಯಾಗುತ್ತಿದ್ದರಲ್ಲದೇ ಅವರೊಂದಿಗೆ ಸಮಯ ಕಳೆಯುತ್ತಿದ್ದರು.

ಪ್ರವಾದಿ ಮುಹಮ್ಮದ್(ಸ)ರು ತಮ್ಮ ಎಲ್ಲ ಪತ್ನಿಯರೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಿದ್ದರು. ಅವರನ್ನು ಸುಂದರ ಹೆಸರುಗಳಿಂದ ಕರೆಯುತ್ತಿದ್ದರು. ಪ್ರವಾದಿಯವರ(ಸ) ಮರಣಾ ನಂತರ ಅಬೂಬಕರ್ ಸಿದ್ದೀಕ್(ರ) ಮತ್ತು ಉಮರ್(ರ)ರವರು ಅವರ ಪತ್ನಿಯರನ್ನು ಭೇಟಿಯಾಗಲು ತೆರಳಿದಾಗಲೆಲ್ಲ ಅವರು ರೋದಿಸುತ್ತಿದ್ದರು. ಪ್ರವಾದಿಯವರು(ಸ) ಅವರೆಲ್ಲರ ಮೇಲೂ ಬಲವಾದ ಪ್ರೀತಿ ಮತ್ತು ಗಾಢವಾದ ಪ್ರಭಾವವನ್ನು ಬೀರಿದ್ದರು. ಅವರು ದೀನ ಮತ್ತು ಉದಾರಿ ಪತಿಯಾಗಿದ್ದರು. ಅವರೆಂದಿಗೂ ಪತ್ನಿಯರೊಂದಿಗೆ ಗಡುಸಾದ ಅಥವಾ ಒರಟು ಸ್ವಭಾವವನ್ನು ತೋರ್ಪಡಿಸಲಿಲ್ಲ. ಅವರು ಎಲ್ಲ ಪತ್ನಿಯರೊಂದಿಗೆಯೂ ಪ್ರೀತಿ ಪೂರ್ಣ ಸಂಬಂಧವನ್ನು ಸಂಸ್ಥಾಪಿಸಿದ್ದರು. ಇದರಿಂದಾಗಿ ಅವರ ಪ್ರತಿಯೊಬ್ಬ ಪತ್ನಿಯೂ ತಾನು ಪ್ರವಾದಿವರ್ಯರ(ಸ) ಅತಿಯಾದ ಪ್ರೀತಿಗೆ ಪಾತ್ರರಾದವರೆಂದು ತಿಳಿಯುತ್ತಿದ್ದರು. ಪ್ರವಾದಿವರ್ಯರು(ಸ) ಕಲಿಸಿಕೊಟ್ಟ ವ್ಯಾವಹಾರಿಕ ಕೌಶಲ್ಯವು ನಮಗೆಲ್ಲರಿಗೂ ಮಾದರಿಯಾಗಿದೆ.

 ಪ್ರವಾದಿವರ್ಯರು(ಸ) ಓರ್ವ ಮಾದರಿ ತಂದೆಯಾಗಿದ್ದರು. ಅವರು ತಮ್ಮ ಎಲ್ಲ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಅತಿಯಾದ ಆತ್ಮೀಯತೆಯಿಂದ ನೋಡಿಕೊಂಡರು. ಅವರೆಲ್ಲರನ್ನೂ ಉತ್ತಮ ಕರ್ಮಗಳನ್ನು ಸಂಸ್ಥಾಪಿಸಲು ಮತ್ತು ಪರಲೋಕದ ಬಗ್ಗೆ ಭಯ ಪಡಲು ಬೋಧಿಸುವುದನ್ನು ಪ್ರವಾದಿವರ್ಯರು(ಸ) ಎಂದಿಗೂ ಮರೆಯಲಿಲ್ಲ. ತಮ್ಮ ಮೊಮ್ಮಕ್ಕಳಾದ ಹಸನ್(ರ) ಮತ್ತು ಹುಸೈನ್(ರ)ರನ್ನು ಅವರು ಬೆನ್ನ ಮೇಲೆ ಕೂರಿಸಿಕೊಂಡರು.

ಪ್ರವಾದಿವರ್ಯರ(ಸ) ಜೀವನದಲ್ಲಿ ಪುತ್ರಿ ಫಾತಿಮಾ(ರ)ರವರ ಆಗಮನವಾದಾಗ ಪ್ರವಾದಿವರ್ಯರು(ಸ) ತೋರಿದ ವ್ಯಾವಹಾರಿಕ ಕೌಶಲ್ಯವು ಉನ್ನತ ಮಟ್ಟದ್ದಾಗಿತ್ತು. ಅವರು(ಸ) ಫಾತಿಮಾ(ರ)ರ ಕೈಯನ್ನು ಹಿಡಿದುಕೊಳ್ಳುತ್ತಿದ್ದರು. ತಾವು ಕುಳಿತಲ್ಲಿ ತಮ್ಮ ಸನಿಹವೇ ಕುಳ್ಳಿರಿಸುತ್ತಿದ್ದರು. ಅವರ ಕುಟುಂಬ ಮತ್ತು ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಅವರಿಗೆ ತಮ್ಮ ತಂದೆಯ ಪ್ರೀತಿಯನ್ನು ಧಾರೆ ಎರೆಯುತ್ತಿದ್ದರು ಮತ್ತು ಅವರಿಗೆ ಪ್ರಶಂಸೆಯನ್ನು ನೀಡುತ್ತಿದ್ದರು.

ಪ್ರವಾದಿವರ್ಯರನ್ನು(ಸ) ಅವರ ಸಂಗಾತಿಗಳು ಭೇಟಿಯಾಗಲು ಬಂದಾಗ ಅವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರನ್ನೂ ಅಭಿಸಂಬೋಧಿಸಿ ಕುಶಲೋಪರಿ ವಿಚಾರಿಸುತ್ತಿದ್ದರು. ಪ್ರತಿಯೊಬ್ಬರನ್ನೂ ಅವರಿಗಿಷ್ಟವಿಲ್ಲದ ವಿಷಯಗಳಿಂದ ದೂರವಿಟ್ಟು ಮಾತನಾಡುತ್ತಿದ್ದರು. ಅವರ ಸಂಗಾತಿಗಳು; ಮುಸ್ಲಿಮೇತರರ ಮೇಲೆ ಕೋಪಗೊಂಡಾಗಲೆಲ್ಲ ಅವರನ್ನು ಅವರು ಸಮಾಧಾನ ಪಡಿಸುತ್ತಿದ್ದರು. ಮುಸ್ಲಿಮೇತರರ ಮೇಲೆ ಅವರ ವ್ಯಾವಹಾರಿಕ ಕೌಶಲ್ಯವು ಬಲವಾದ ಪ್ರಭಾವವನ್ನು ಬೀರುತ್ತಿತ್ತು ಮತ್ತು ಹಲವರು ಅವರ ಮಾತುಗಳ ಸತ್ಯವನ್ನು ಅರಿತು ಇಸ್ಲಾಮ್ ಸ್ವೀಕರಿಸುತ್ತಿದ್ದರು.

ಇಸ್ಲಾಮ್ ಜನರಿಗೆ ಸಂಘಟಿತವಾಗಿ ಬದುಕಲು ಮತ್ತು ಕೆಲಸ ಮಾಡಲು ಆಜ್ಞಾಪಿಸುತ್ತದೆ. ಪ್ರತಿಯೊಂದು ಗುಂಪು ಅತ್ಯುತ್ತಮ ಪ್ರತಿಫಲ ಪಡೆಯಬೇಕಾದಲ್ಲಿ ಉತ್ತಮ ವ್ಯಾವಹಾರಿಕ ಕೌಶಲ್ಯವನ್ನು ಹೊಂದಬೇಕಾದುದು ಅತ್ಯಗತ್ಯ. ಯಾರನ್ನಾದರೂ ಭೇಟಿಯಾದಾಗ ಪ್ರವಾದಿಯವರು(ಸ) ತಮ್ಮ ಸಂಪೂರ್ಣ ಗಮನವನ್ನು ಅವರತ್ತ ಹರಿಸುತ್ತಿದ್ದರು. ಅವರನ್ನು ಬರಮಾಡಿಕೊಳ್ಳುತ್ತಿದ್ದರು ಹಸ್ತಲಾಘವ ಮಾಡಿ ಶುಭಾಶಯ ಕೋರುತ್ತಿದ್ದರು. ಅವರ ಪ್ರತಿಯೊಂದು ಮಾತನ್ನೂ ಆಲಿಸುತ್ತಿದ್ದರು. ತಮ್ಮಿಂದ ಅವರ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾದಲ್ಲಿ ಅವರಿಗೆ ಸಲಹೆಯನ್ನು ನೀಡುತ್ತಿದ್ದರು. ವ್ಯಾವಹಾರಿಕ ಕೌಶಲ್ಯಕ್ಕೆ ಅತ್ಯಗತ್ಯವಾಗಿ ಸರಳ ಮತ್ತು ಉದಾರತೆಯನ್ನೊಳಗೊಂಡ ನಮ್ರ ಮಾತುಗಳು ಅತ್ಯಗತ್ಯ.

ಪ್ರವಾದಿವರ್ಯರ(ಸ) ಜೀವನದ ಪ್ರತಿಯೊಂದು ಘಟನಾವಳಿಗಳೂ ಕೂಡಾ ಅವರಲ್ಲಿನ ವ್ಯಾವಹಾರಿಕ ಕೌಶಲ್ಯದ ಮೇಲೆ ಬೆಳಕು ಚೆಲ್ಲುತ್ತವೆ. ಪ್ರವಾದಿಯವರು(ಸ) ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಏಕ ರೂಪದ ವ್ಯಾವಹಾರಿಕ ಜೀವನವನ್ನು ಅಳವಡಿಸಿದ್ದರು. ಅವರ ಮಾತುಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತಿರಲಿಲ್ಲ. ಅವರ ಮಕ್ಕಳು, ಪತ್ನಿಯರು, ಸಂಗಾತಿಗಳು, ಅನ್ಯ ಧರ್ಮೀಯರೆಲ್ಲರಲ್ಲಿಯೂ ಬದಲಾವಣೆಯ ಪ್ರತೀಕವಾಗಿದ್ದವು. ಒಂದು ವೇಳೆ ಸಾಕಾರಾತ್ಮಕ ಮಾತುಗಾರಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಖಂಡಿತವಾಗಿಯೂ ಧನಾತ್ಮಕ ಪ್ರತಿಕ್ರಿಯೆಯು ಲಭಿಸುವುದು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *