ಪ್ರಾಣಿಗಳ ವಧೆಯು ಕ್ರೌರ್ಯವಲ್ಲವೇ?

ಪ್ರಶ್ನೆ: ಪ್ರಾಣಿ ದಯೆಯ ಕುರಿತು ಹೆಚ್ಚು ಚರ್ಚಿಸುವ ಇಸ್ಲಾಮ್ ಮೃಗ ಮತ್ತು ಇತರ ಜೀವಿಗಳೊಂದಿಗೆ ತೋರಿಸುವುದು ಕ್ರೌರ್ಯವಲ್ಲವೇ? ಅವುಗಳಿಗೆ ಚೂರಿ (ದಿಬಹ್) ಹಾಕುವುದು ಸರಿಯೇ?

ಉತ್ತರ: ಭೂಮಿಯಲ್ಲಿರುವ ಎಲ್ಲ ಜೀವಿಗಳೊಂದಿಗೆ ಕರುಣೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಆದೇಶಿಸುತ್ತದೆ.

ಪ್ರವಾದಿ(ಸ) ಹೇಳಿದ್ದಾರೆ. “ಭೂಮಿಯಲ್ಲಿರುವವರೊಡನೆ ಕುರಣೆ ತೋರಿಸಿರಿ. ಮೇಲಿರುವವನು ನಿಮ್ಮೊಡನೆ ಕರುಣೆ ತೋರಿಸುವನು” (ತಬ್‍ರಾನಿ).

ಕರಣೆಯಿಲ್ಲದವನ ಮೇಲೆ ಕಾರುಣ್ಯವಿಲ್ಲ. (ಬುಖಾರಿ, ಮುಸ್ಲಿಮ್)

“ದೌರ್ಭಾಗ್ಯದವನಲ್ಲದೆ ಕರುಣೆಯಿಲ್ಲದವನಾಗಲಾರ” (ಅಬೂ ದಾವೂದ್)

ಇಸ್ಲಾಮ್ ಭೂಮಿಯ ಸಕಲ ಜೀವಿಗಳನ್ನು ಮನುಷ್ಯರಂತೆಯೇ ಇರುವ ಸಮುದಾಯವಾಗಿ ಪರಿಗಣಿಸುತ್ತದೆ. ಅಲ್ಲಾಹನು ಹೇಳುತ್ತಾನೆ, “ಭೂಮಿಯ ಮೇಲೆ ಚಲಿಸುವ ಪ್ರಾಣಿಗಳನ್ನೂ ವಾಯುವಿನಲ್ಲಿ ರೆಕ್ಕೆಗಳಿಂದ ಹಾರಾಡುವ ಪಕ್ಷಿಗಳನ್ನೂ ನೋಡಿಕೊಳ್ಳಿರಿ ಇವೆಲ್ಲವೂ ನಿಮ್ಮಂತೆಯೇ ಇರುವ ವರ್ಗಗಳು.”(ಪವಿತ್ರ ಕುರ್ ಆನ್, 6:38)

ಮಾನವರು ಧಿಕ್ಕಾರಿಗಳಾದ ಕೂಡಾ ಇತರ ಜೀವಿಗಳನ್ನು ಪರಿಗಣಿಸಿ ಮಳೆ ಸುರಿಯುವುದೆಂದು ಪ್ರವಾದಿ(ಸ) ಕಲಿಸಿದ್ದಾರೆ. “ಜನರು ಝಕಾತ್ ನೀಡದಿದ್ದರೆ ಮಳೆ ಸ್ಥಗಿತಗೊಳ್ಳುತ್ತಿತ್ತು. ಹಾಗಿದ್ದರೂ ಜೀವ ಜಂತುಗಳ ಕಾರಣದಿಂದ ಮಳೆ ಸುರಿಯುತ್ತದೆ. (ಇಬ್ನು ಮಾಜ)

ಜೀವವಿರುವ ಎಲ್ಲ ಜೀವಿಗಳಿಗೆ ಸಹಾಯ ಮಾಡುವುದು ಮತ್ತು ಸೇವೆಗೈಯುವುದು ಪುಣ್ಯ ಕರ್ಮವಾಗಿದೆಯಷ್ಟೇ. ಪ್ರವಾದಿ(ಸ) ಹೇಳುತ್ತಾರೆ. “ಹಸಿ ಕರುಳಿರುವ ಯಾವುದೇ ಜೀವಿಯ ವಿಷಯದಲ್ಲಿ ಕೂಡಾ ನಿಮಗೆ ಪುಣ್ಯವಿದೆ.” (ಬುಖಾರಿ)

ಪ್ರವಾದಿವರ್ಯರು(ಸ) ಹೇಳುತ್ತಾರೆ, “ಓರ್ವನು ಒಂದು ದಾರಿಯಲ್ಲಿ ಸಾಗುತ್ತಿರುವಾಗ ಬಾಯಾರಿ ಬಳಲಿದನು. ಅವನು ಅಲ್ಲಿ ಒಂದು ಬಾವಿಯನ್ನು ನೋಡಿದನು. ಅದಕ್ಕಿಳಿದು ನೀರು ಕುಡಿದನು. ಹೊರ ಬಂದಾಗ ಒಂದು ನಾಯಿ ಬಾಯಾರಿಕೆ ತಡೆಯಲಾಗದೆ ಮಣ್ಣನ್ನು ಮೂಸುವುದು ನೋಡಿದನು. ‘ಈ ನಾಯಿಗೆ ತುಂಬ ಬಾಯಾರಿಕೆಯಾಗಿದೆ, ನನಗೆ ಬಾಯಾರಿಕೆ ಆದಂತೆ” ಎಂದು ಸ್ವಗತ ನುಡಿದು ಆತ ಬಾವಿಗಿಳಿದು, ಬೂಟ್‍ನಲ್ಲಿ ನೀರು ತುಂಬಿಸಿ ಅದನ್ನು ಬಾಯಲ್ಲಿ ಕಚ್ಚಿ ಹಿಡಿದು ಮೇಲೆ ಬಂದು ನಾಯಿಗೆ ಕುಡಿಸಿದನು. ಅವನ ಈ ಕಾರ್ಯದಿಂದ ಅಲ್ಲಾಹನು ಸಂತುಷ್ಟಗೊಂಡನು, ಮತ್ತು ಅವನನ್ನು ಕ್ಷಮಿಸಿದನು.” ಇದನ್ನು ಆಲಿಸಿದ ಅಲ್ಲಿದ್ದ ಪ್ರವಾದಿ(ಸ) ಸಂಗಾತಿಗಳು ಕೇಳಿದರು, ಮೃಗಗಳ ವಿಷಯದಲ್ಲಿಯೂ ನಮಗೆ ಪ್ರತಿಫಲವಿದೆಯೇ? ಪ್ರವಾದಿ(ಸ) ಹೇಳಿದರು, ಹಸಿ ಕರುಳಿರುವ ಎಲ್ಲ ಜೀವಿಯ ವಿಷಯದಲ್ಲಿಯೂ ನಿಮಗೆ ಪ್ರತಿಫಲ ಇದೆ (ಬುಖಾರಿ, ಮುಸ್ಲಿಮ್).

ಇನ್ನೊಂದು ಘಟನೆಯನ್ನು ಪ್ರವಾದಿ(ಸ) ಹೀಗೆ ವಿವರಿಸುತ್ತಾರೆ. ಒಂದು ನಾಯಿ ಬಾವಿಯ ಸುತ್ತಲೂ ಓಡಾಡುತ್ತಿತ್ತು. ಕಠಿಣವಾದ ಬಾಯಾರಿಕೆಯ ಕಾರಣದಿಂದ ಅದು ಸಾಯಲು ತಯಾರಾಗಿತ್ತು. ಅದನ್ನು ನೋಡಿ ಇಸ್ರಾಯಿಲರ ಒರ್ವ ವ್ಯಭಿಚಾರಿಣಿ ಮಹಿಳೆ ತನ್ನ ಬೂಟನ್ನು ಕಳಚಿ ಅದರಲ್ಲಿ ನೀರು ತಂದು ನಾಯಿಗೆ ಕುಡಿಸಿ ತಾನೂ ಕುಡಿದಳು. ಅದರಿಂದಾಗಿ ಅವಳನ್ನು ಅಲ್ಲಾಹನು ಕ್ಷಮಿಸಿದನು.” (ಬುಖಾರಿ)

ಯಾವ ಜೀವಿಗೂ ಉಪದ್ರವ ನೀಡುವುದು ಪಾಪವಾಗುವುದು. ಅದನ್ನು ಪ್ರವಾದಿ(ಸ) ಬಲವಾಗಿ ನಿಷೇಧಿಸಿರುವರು. ಪ್ರವಾದಿ(ಸ) ಹೇಳಿದರು. “ಬೆಕ್ಕಿನ ಕಾರಣದಿಂದ ಓರ್ವ ಮಹಿಳೆ ಶಿಕ್ಷೆಗೀಡಾದಳು. ಅವಳು ಅದು ಹಸಿದು ಸಾಯುವವರೆಗೂ ಕಟ್ಟಿ ಹಾಕಿದ್ದಳು. ಹೀಗೆ ಅವಳು ನರಕವಾಸಿಯಾದಳು (ಬುಖಾರಿ, ಮುಸ್ಲಿಮ್)

ಇದೇ ರೀತಿಯಲ್ಲಿ ಮೃಗಗಳಿಗೆ ಕಲ್ಲೆಸೆಯುವುದು, ಜೇನ್ನೋಣ, ಇರುವೆಯಂತಿರುವ ಜೀವಿಗಳನ್ನು ಕೊಲ್ಲುವುದನ್ನು ಕೂಡಾ ಪ್ರವಾದಿವರ್ಯರು(ಸ) ನಿಷೇಧಿಸಿದ್ದಾರೆ. (ಮುಸ್ಲಿಮ್, ಅಬೂ ದಾವೂದ್)

ಪ್ರವಾದಿ(ಸ) ಹೇಳುತ್ತಾನೆ ಯಾರಾದರೂ ಒಂದು ಹಕ್ಕಿಯನ್ನು ಅನವಶ್ಯಕವಾಗಿ ಕೊಂದರೆ ಅಂತ್ಯ ದಿನದಲ್ಲಿ ಅದು ಆರ್ತನಾದಗೈಯುತ್ತಾ ಅಲ್ಲಾಹನೊಡನೆ ಹೇಳುವುದು, ನನ್ನ ಪ್ರಭು ಇಂತಹವರು ನನ್ನನ್ನು ಅನಾವಶ್ಯಕವಾಗಿ ಕೊಂದಿರುತ್ತಾರೆ. ಉಪಯೋಗಕ್ಕಾಗಿ ಅವರು ನನ್ನನ್ನು ಕೊಂದಿರುವುದಿಲ್ಲ. (ಸನಾಇ, ಇಬ್ನು ಹಬ್ಬಾಸ್)

ಪ್ರವಾದಿ(ಸ) ಚಳಿಯಿಂದ ರಕ್ಷಣೆ ಪಡೆಯಲಿಕ್ಕಾಗಿ ಬೆಂಕಿ ಉರಿಸಿದ ಸಂಗಾತಿಗಳೊಡನೆ, ಇರುವೆ ಸುಟ್ಟು ಹೋಗಲು ಕಾರಣವಾಗಬಹುದೇ ಎಂಬ ಸಂದೇಹದಲ್ಲಿ ಅದನ್ನು ಆರಿಸಿ ಬಿಡುವಂತೆ ಆದೇಶಿಸಿದರಲ್ಲದೆ, ಒಂಟೆಯನ್ನು ಕಟ್ಟಿ ಹಾಕಿ ಅದಕ್ಕೆ ಆಹಾರ ನೀಡದೆ ಹಸಿಯುವಂತೆ ಮಾಡಿದವನನ್ನು ಬಲವಾಗಿ ಎಚ್ಚರಿಸಿದರು ಮತ್ತು ಮೃಗಗಳ ಮುಖಕ್ಕೆ ಮುದ್ರೆ ಹಾಕುವುದನ್ನು, ಬೆನ್ನಿಗೆ ಬರೆ ಎಳೆಯುವುದನ್ನು ನಿಷೇದಿಸಿರುತ್ತಾರೆ. ಪ್ರಾಣಿಗಳ ಹೊರ ಭಾಗವನ್ನು ಆಸನ ಮಾಡಬಾರದೆಂದೂ ಆಜ್ಞಾಪಿಸಿದ್ದಾರೆ. ಮಾತ್ರವಲ್ಲ ಮರಗಳ ಮೇಲೆಯೂ ದಯೆ ತೋರಿಸಬೇಕೆಂದು ಉಪದೇಶಿಸಿದ್ದಾರೆ. ಮರಕ್ಕೆ ಕಲ್ಲೆಸದ ಹುಡುಗನಿಗೆ ಪ್ರವಾದಿ(ಸ) ಹೇಳಿದರು, `ಇನ್ನು ಮೇಲೆ ನೀನು ಯಾವ ಮರಕ್ಕೂ ಕಲ್ಲೆಸೆಯಬಾರದು. ಕಲ್ಲಿನಿಂದ ಪೆಟ್ಟಾಗಿ ಅದಕ್ಕೆ ನೋವಾಗುವುದು.” “ಈ ರೀತಿ ಪ್ರಪಂಚದ ಪ್ರತಿಯೊಂದರ ಮೇಲೆ ತುಂಬು ಕರುಣೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಆಗ್ರಹಿಸುತ್ತದೆ.

ಪ್ರತಿಯೊಂದೂ ಇಲ್ಲಿ ಆಹಾರದಿಂದಲೇ ಬದುಕುವುದು. ಸಸ್ಯ, ಪ್ರಾಣಿ, ಜಂತು ಜಲ ಜೀವಿ ಜಾನುವಾರು ಹಕ್ಕಿಗಳು ಆಹಾರ ಉಪಯೋಗದಿಂದಲೇ ಬದುಕುತ್ತವೆ. ಅದು ಆಗಬೇಕಾದರೆ ಪ್ರತಿಯೊಂದೂ ಇನ್ನೊಂದನ್ನು ಆಹಾರವಾಗಿ ಉಪಯೋಗಿಸಬೇಕಾಗುವುದು.

ಸಸ್ಯಗಳನ್ನು ತಮ್ಮ ಅಸ್ತಿತ್ವಕ್ಕಾಗಿ ಬೇರೆ ಸಸ್ಯಗಳನ್ನು ಉಪಯೋಗಿಸುವುದು. `ಅಪೂರ್ವವಾದ ಕೆಲವು ಸಸ್ಯಗಳು ಜೀವಿಗಳನ್ನು ಆಹಾರವಾಗಿ ಸೇವಿಸುತ್ತದೆ. ಪ್ರಾಣಿಗಳು; ಸಸ್ಯಗಳನ್ನೂ ಬೇರೆ ಜೀವಿಗಳನ್ನೂ ತಿನ್ನುವುದು. ಗಾಳಿಯಲ್ಲಿ, ನೀರಲ್ಲಿ, ದಡದಲ್ಲಿ, ಕಡಲಿನಲ್ಲಿರುವ ಜೀವಿಗಳೆಲ್ಲವು ತಮ್ಮ ಅಸ್ತಿತ್ವಕ್ಕಾಗಿ ಸಸ್ಯಗಳನ್ನು ಮತ್ತು ಇತರ ಜೀವಿಗಳನ್ನು ಆಹಾರವಾಗಿ ಉಪಯೋಗಿಸುತ್ತದೆ. ಇದರಲ್ಲಿ ಪ್ರತಿಯೊಂದು ಜೀವಿಗಲು ಅದರ ಶಾರೀರಿಕ ವ್ಯವಸ್ಥೆಗೆ ಅನುಗುಣವಾದ ಜೀವನ ಪದ್ಧತಿಯಿದೆ. ಮೊಲ ಸಸ್ಯಹಾರಿಯಾಗಿರುವುದರಿಂದ ಅದಕ್ಕೆ ಅನುಗುಣವಾದ ಹಲ್ಲುಗಳು ಮತ್ತು ಹೊಟ್ಟೆಯಿದೆ. ಸಿಂಹ ಮಾಂಸಹಾರಿಯಾಗಿರುವುದರಿಂದ ಅದರ ಬಾಯಿ ಮತ್ತು ಹೊಟ್ಟೆಯು ಅದಕ್ಕೆ ತಕ್ಕಂತಿದೆ. ಮಾನವನನ್ನು ಸಸ್ಯಾಹಾರ ಮತ್ತು ಮಾಂಸ ಆಹಾರ ಈ ಎರಡನ್ನೂ ಭಕ್ಷಿಸುವ ರೀತಿಯಲ್ಲಿ ಸೃಷ್ಟಿಸಲಾಗಿದೆ. ಪೂರ್ಣ ಸಸ್ಯಾಹಾರಿಗಳಾದ ಆಡು, ದನ, ಕುರಿ ಮುಂತಾದವುಗಳ ಹಲ್ಲುಗಳು ಸಸ್ಯಾಹಾರ ಮಾತ್ರ ಭಕ್ಷಣೆ ಮಾಡಲು ಸಾಧ್ಯವಿರುವ ರೀತಿಯಲ್ಲಿ ರಚನೆಗೊಂಡಿದೆ. ಸಂಪೂರ್ಣ ಮಾಂಸಹಾರಿಯಾದ ಹುಲಿ ಮುಂತಾದವುಗಳ ಹಲ್ಲು ಅಗಲ ಮತ್ತು ಚೂಪಾದವು ಆಗಿದೆ. ಅಥವಾ ಮನುಷ್ಯನನ್ನು ಮಿಶ್ರಹಾರಿಯಾಗಿಯೇ ಸೃಷ್ಟಿಸಲಾಗಿದೆ.

ಪಚನಾಂಗಗಳ ಸ್ಥಿತಿಯೂ ಇದೇ ರೀತಿಯಲ್ಲಿವೆ. ಸಸ್ಯಾಹಾರಿಗಳಿಗೆ ಸಸ್ಯಾಹಾರವು ಮಾತ್ರ ಕರುಗುವಂತಹ, ಮಾಂಸಾಹಾರಿಗಳಿಗೆ ಅದಕ್ಕೆ ಸೂಕ್ತವಾಗುವಂತಹ ಪಚನಾಂಗಗಳಿವೆ. ಪಚನಾಂಗಗಳಲ್ಲಿ ಮಾನವರ ಪಚನಾಂಗ ಎರಡು ರೀತಿಯ ಆಹಾರವನ್ನೂ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಲ್ಲುಗಳು ಕೂಡಾ ಎರಡು ರೀತಿಯ ಆಹಾರ ಭಕ್ಷಣೆಗೆ ಯೋಗ್ಯವಿರುವಂತೆ ರಚನೆಯಾಗಿದೆ.

ಈ ಭೂಮಿಯಲ್ಲಿರುವುದೆಲ್ಲವೂ ಮಾನವನಿಗಾಗಿ ಸೃಷ್ಟಿಸಲಾಗಿದೆ. ಮತ್ತು ಭೂಮಿಯಲ್ಲಿ ಅವನೇ ಕೇಂದ್ರ ಬಿಂದುವಾಗಿರುವನು. “ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ” (ಪವಿತ್ರ ಕುರ್ ಆನ್.31-20)

ಜಾನುವಾರುಗಳಲ್ಲಿ ಸವಾರಿ ಮತ್ತು ಹೊರೆ ಹೊರುವುದಕ್ಕಾಗಿ, ಉಪಯೋಗವಾಗುವವುಗಳನ್ನು ತಿನ್ನಲು, ಮತ್ತು ಹಾಸಲು ಉಪಯೋಗವಾಗುವವುಗಳನ್ನೂ ಉಂಟು ಮಾಡಿದವನು ಅವನೇ (ಅಲ್ಲಾಹನೇ) ಅಲ್ಲಾಹ್ ದಯಪಾಲಿಸಿದ ವಸ್ತುಗಳಿಂದ ತಿನ್ನಿರಿ ಶೈತಾನನ್ನು ಅನುಸರಿಸ ಬೇಡಿರಿ. (ಪವಿತ್ರ ಕುರ್ ಆನ್.6:142)

ವಾಸ್ತವದಲ್ಲಿ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದೆ. ಅವುಗಳ ಉದರದೊಳಗೆ ಏನಿರುವುದೋ ಅದರಿಂದ ನಾವು ನಿಮಗೊಂದು ವಸ್ತುವನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಬೇರೆ ಬೇರೆ ಪ್ರಯೋಜನಗಳೂ ಇವೆ. ಅವುಗಳನ್ನು ನೀವು ತಿನ್ನುತ್ತೀರಿ. (ಪವಿತ್ರ ಕುರ್ ಆನ್,23-21)

ನಿಮಗಾಗಿ ಸಮುದ್ರಗಳನ್ನು ನಿಯಂತ್ರಿಸಿ ನೀವು ಅದರಿಂದ ತಾಜಾ ಮಾಂಸ ಪಡೆದು ತಿನ್ನಲಾಗುವಂತೆಯೂ ಅದರಿಂದ ನೀವು ಧರಿಸುವ ಅಲಂಕಾರ ಸಾಧನಗಳನ್ನು ಹೊರ ತೆಗೆಯುವಂತೆಯೂ ಮಾಡಿದವನು ಅವನೇ(ಅಲ್ಲಾಹನೇ). (ಪವಿತ್ರ ಕುರ್ ಆನ್,16:14)

ಭೂಮಿಯಲ್ಲಿರುವುದೆಲ್ಲವೂ ಮನುಷ್ಯರಿಗಾಗಿ ಸೃಷ್ಟಿಸಲಾಗಿದೆ ಎಂಬ ವಾಸ್ತವವನ್ನು ನಿರಾಕರಿಸುವವರೇ ಪ್ರಾಯೋಗಿಕವಾಗಿ ಅದಕ್ಕನುಸಾರವೇ ನಿಲುವು ತಳೆಯುತ್ತಾರೆ. ಮನುಷ್ಯ ತನ್ನ ಹಿತಕ್ಕಾಗಿ ಭೂಮಿಯನ್ನು ಮೊಗೆಯುತ್ತಾನೆ. ಬಾವಿ-ಕೊಳಗಳನ್ನು ಅಗೆಯುತ್ತಾನೆ. ರಸ್ತೆ ಸೇತುವೆ ನಿರ್ಮಿಸುತ್ತಾನೆ. ಮನೆ ಕಟ್ಟುತ್ತಾನೆ. ಇದನ್ನು ಮಾಡುವಾಗ ಅಲ್ಲಿದ್ದ ಜೀವಿಗಳಿಗೆ ಏನು ಸಂಭವಿಸುವುದೆಂದು ಪರಿಗಣಿಸುವುದಿಲ್ಲ. ಎಲ್ಲ ಜೀವಿಗಳು ಬದುಕುವ ಹಕ್ಕನ್ನು ಹೊಂದಿರುವ ಭೂಮಿಯಲ್ಲಿ ನಾವು ಬಾವಿ-ರಸ್ತೆಗಳನ್ನು ಮಾಡುತ್ತಿದ್ದೇವೆ ಎಂದು ನಾವು ಯೋಚಿಸುವುದೇ ಇಲ್ಲ. ಇದೇ ರೀತಿ ಸಸ್ಯಗಳೂ ಫಲ ಮರಗಳೂ ಬೆಳೆಗಳೆಲ್ಲವೂ ಮನುಷ್ಯನ ಹಿತಕ್ಕೆ ಬಳಕೆಯಾಗುತ್ತಿವೆ. ಆದುದರಿಂದ ಭೂಮಿ ಮತ್ತು ಅದರಲ್ಲಿರುವುದೆಲ್ಲವೂ ಮನುಷ್ಯನಿಗಾಗಿ ಸಜ್ಜುಗೊಳಿಸಲಾಗಿದೆಯೆಂಬ ಸತ್ಯವನ್ನು ಪ್ರಾಯೋಗಿಕ ಹಂತದಲ್ಲಿ ಅಂಗೀಕರಿಸದಿರುವವರು ಯಾರೂ ಇಲ್ಲ.

ಯಾವ ಜೀವಿಯನ್ನು ಕೊಲ್ಲುವುದಿಲ್ಲ ಎಂಬುದು ಅಹಿಂಸೆಯ ಉದ್ದೇಶವಾಗಿದೆ. ಅದಕ್ಕೆ ತಕ್ಕಂತೆ ಬದುಕುತ್ತಿರುವವರು ಯಾರೂ ಈ ಭೂಮಿಯಲ್ಲಿ ಇಲ್ಲ. ಮಾಂಸಾಹಾರ ಭಕ್ಷಿಸದಿರುವವರು. ಸಸ್ಯಾಹಾರ ಭಕ್ಷಣೆ ಮಾಡುತ್ತಿರುವರಲ್ಲವೇ. ಆದುದರಿಂದ ಮಾಂಸ ತಿನ್ನುವವರಂತೆ ಸಸ್ಯ ತಿನ್ನುವವರೂ ಜೀವಹಾನಿ ಮಾಡುವವರೂ ಸಸ್ಯಗಳಿಗೆ ನೋವುಂಟು ಮಾಡುವವರೂ ಆಗಿದ್ದಾರೆ.

ಯಾವ ಮನುಷ್ಯನೂ ಶರೀರಕ್ಕೆ ಗಾಯವಾದರೆ ಅದರಲ್ಲಿರುವ ವಿಷಾಣಗಳಿಗೆ ಔಷಧಿ ಹಾಕಿ ಕೊಲ್ಲುತ್ತಾನೆ. ಉದಾ: ಕ್ರಿಮಿಗಳನ್ನು ನಾಶ ಮಾಡುವುದು, ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುವ ಮಲಿನ ನೀರಿನಲ್ಲಿ ವಿಷ ಹಾಕಿ ಅವುಗಳನ್ನು ಕೊಲ್ಲುತ್ತಾನೆ. ಮೊಟ್ಟೆ ಮತ್ತು ಸೊಳ್ಳೆಗಳನ್ನು ನಾಶ ಮಾಡುತ್ತಾನೆ. ಒಟ್ಟಾರೆ ಯಾವುದಾದರೊಂದು ಜೀವಿಯನ್ನು ವಧಿಸದಿರುವವರು ಯಾರೂ ಈ ಲೋಕದಲ್ಲಿ ಇಲ್ಲ. ಇರಲೂ ಸಾಧ್ಯವೂ ಇಲ್ಲ.

ಮನುಷ್ಯ ಸಮಾಜದ ಸುಗಮ ಅಸ್ತಿತ್ವಕ್ಕಾಗಿ ವಿಷಾಣುಗಳನ್ನು ಕೊಲ್ಲ ಬಹುದಾದರೆ ಅದೇ ವಿಷಯದಲ್ಲಿ ಅತ್ಯುತ್ತಮ ಪೋಷಕಾಹಾರ ಎಂಬ ನೆಲೆಯಲ್ಲಿಯೂ ಮಾಂಸವನ್ನು ಉಪಯೋಗಿಸಬಹುದಾಗಿದೆ. ಪ್ರೋಟೀನ್, ಕಬ್ಬಿಣ ಸತ್ವ, ವಿಟಮಿನ್ ಬಿ% ನಿಯಾಸಿನ್ ಮುಂತಾದವುಗಳು ಮಾಂಸಾಹಾರದಲ್ಲಿ ಧಾರಾಳವಾಗಿ ಇದೆ ಎಂಬುದು ವಾಸ್ತವ.

ಸಸ್ಯಗಳನ್ನೂ, ಪ್ರಾಣಿಗಳನ್ನು, ಅಣುಗಳನ್ನು ತಮ್ಮ ಅಸ್ತಿತ್ವ ಉಳಿಸುವುದಕ್ಕಾಗಿ ಕೊಲ್ಲಬಹುದೆಂದು ತೀರ್ಮಾನಿಸಿರುವವರು ಜನ ಸಮೂಹಕ್ಕೆ ಆಹಾರವಾದ ಮಾಂಸವನ್ನು ತ್ಯಜಿಸಬೇಕೆಂದು ಹೇಳುವುದು ಸಂಪೂರ್ಣ ಅರ್ಥಹೀನವಾದ ವಿಚಾರವಾಗಿದೆ. ಆದ್ದರಿಂದಲೇ ಜೀವ ಜಾಲಗಳ ಮೇಲೆ ಪರಮಾವಧಿ ಕರುಣೆ ತೋರುತ್ತಿರುವ ಇಸ್ಲಾಮ್ ಅವುಗಳ ಮಾಂಸ ಆಹಾರ ಅನುವದನೀಯ ಗೊಳಿಸಿದೆ. ಜಗತ್ತಿನ ಕೋಟ್ಯಾಂತರ ಮಂದಿ ಮಾಂಸಹಾರ ಸೇವಿಸುತ್ತಿದ್ದಾರೆ. ಅದನ್ನು ನಿಷೇಧಿಸುವುದು ಸಮಾಜ ದ್ರೋಹವೂ ಜೀವ ವಿರೋಧಿಯೂ ಆಗಿದೆ.

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *