Breaking News
Home / ಲೇಖನಗಳು / ಹಲಾಲ್ ಎಂಬ ಬುರ್ಖಾದೊಳಗೆ ಅಡಗಿರುವ ದಂಧೆಕೋರರು

ಹಲಾಲ್ ಎಂಬ ಬುರ್ಖಾದೊಳಗೆ ಅಡಗಿರುವ ದಂಧೆಕೋರರು

ಹಲಾಲ್ (ಶುದ್ಧ) ಅನ್ನುವ ಅರಬಿ ಪದ ಮತ್ತು ಅದು ಕಟ್ಟಿಕೊಡುವ ಪರಿಕಲ್ಪನೆಯ ಮೇಲೆ ಮುಸ್ಲಿಮರಿಗೆ ವಿಶೇಷ ಆಸಕ್ತಿಯಿದೆ. ಇದಕ್ಕೆ ಬಹುಮುಖ್ಯ ಕಾರಣ- ಇಸ್ಲಾಮ್ ಪ್ರತಿಪಾದಿಸುವ ಜೀವನ ಪದ್ಧತಿ. ನಿಮ್ಮ ಸಂಪಾದನೆ ಶುದ್ಧ (ಹಲಾಲ್) ಆಗಿರಬೇಕು ಎಂದು ಇಸ್ಲಾಮ್ ಮುಸ್ಲಿಮರಿಗೆ ಕರೆ ಕೊಡುತ್ತದೆ. ಬಡ್ಡಿಯನ್ನು ಅದು ಅಶುದ್ಧ(ಹರಾಮ್)ತೆಯ ಪಟ್ಟಿಯಲ್ಲಿ ಸೇರಿಸಿದೆ. ಯಾರು ಶುದ್ಧವಲ್ಲದ ವ್ಯವಹಾರದಲ್ಲಿ ತೊಡಗುತ್ತಾರೋ ಮತ್ತು ಆ ಮೂಲಕ ಹರಿದು ಬಂದ ಆದಾಯದಿಂದ ಬದುಕುತ್ತಾರೋ ಅವರೆಲ್ಲರನ್ನೂ ದೇವನು ಕಟಕಟೆಯಲ್ಲಿ ನಿಲ್ಲಿಸುತ್ತಾನೆ ಅನ್ನುವ ಎಚ್ಚರಿಕೆಯನ್ನೂ ಇಸ್ಲಾಮ್ ನೀಡುತ್ತದೆ.

ಯಾವುದೇ ಉದ್ಯಮ, ವ್ಯವಹಾರ, ಹೂಡಿಕೆ ಮತ್ತು ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಜಾಗತಿಕ ಮುಸ್ಲಿಮರು ಎದುರಿಸುತ್ತಿರುವ ಬಹುದೊಡ್ಡ ಸವಾಲು ಇದು. ಜಗತ್ತು ನಡೆಯುತ್ತಿರುವುದೇ ಬಡ್ಡಿಯನ್ನು ನೆಚ್ಚಿಕೊಂಡು. ಜಗತ್ತಿನ ರಾಷ್ಟ್ರಗಳಿಗೆ ಸಾಲ ಕೊಡುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ತೊಡಗಿ ಧರ್ಮಸ್ಥಳದ ಸ್ವಸಹಾಯ ಸಂಘದವರೆಗೆ ಮತ್ತು ಹಳ್ಳಿಗಳಿಗೆ ತೆರಳಿ ಕೈ ಸಾಲ ನೀಡುವ ಖಾಸಗಿ ವ್ಯಕ್ತಿಗಳ ವರೆಗೆ ಎಲ್ಲರೂ ಬಡ್ಡಿಯನ್ನೇ ಆಶ್ರಯಿಸಿಕೊಂಡಿದ್ದಾರೆ. ಇಂಥ ಸ್ಥಿತಿಯಲ್ಲಿ, ಮುಸ್ಲಿಮರ ಮುಂದೆ ಎರಡು ಆಯ್ಕೆಗಳಿರುತ್ತವೆ. 1. ಅನಿವಾರ್ಯವೆಂಬ ಸಮರ್ಥನೆಯನ್ನು ಕೊಟ್ಟುಕೊಂಡು ಬಡ್ಡಿ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ಹೋಗುವುದು. 2. ಬಡ್ಡಿ ಆಧಾರಿತ ಸರ್ವ ವ್ಯವಹಾರಗಳಿಗೂ ಬೆನ್ನು ಹಾಕಿಕೊಂಡು ಬದುಕುವುದು.

ನಿಜವಾಗಿ, ಹಲಾಲ್ ಬೋರ್ಡ್‍ನೊಂದಿಗೆ ಹುಟ್ಟಿಕೊಳ್ಳುವ ವಿವಿಧ ವ್ಯವಹಾರಗಳ ಮೂಲ ಗುರಿ ಇವರೇ. ಇವರ ಸಂಖ್ಯೆ ದೊಡ್ಡದಿದೆ ಅಥವಾ ಹಲಾಲ್ ವ್ಯವಹಾರವೆಂಬ ಪರಿಕಲ್ಪನೆಯು ಪ್ರಾಯೋಗಿಕವಾಗಿ ಯಶಸ್ವಿಯಾಗಬೇಕು ಎಂದು ಬಯಸುವವರ ಸಂಖ್ಯೆ ಧಾರಾಳವಿದೆ. ಆದರೆ, ಇವರೆಲ್ಲರಲ್ಲಿರುವ ದೌರ್ಬಲ್ಯ ಏನೆಂದರೆ, ಆರ್ಥಿಕ ವ್ಯವಹಾರದಲ್ಲಿ ನುಸುಳಿಕೊಂಡಿರುವ ಬಡ್ಡಿಯ ವಿವಿಧ ರೂಪಗಳನ್ನು ಅರಿತುಕೊಳ್ಳುವುದಕ್ಕೆ ವಿಫಲವಾಗುವುದು ಅಥವಾ ಆ ಬಗ್ಗೆ ಉದಾಸೀನ ತೋರುವುದು. ಆದ್ದರಿಂದ, ದೋಚಲು ಸಿದ್ಧವಾಗಿರುವ ತಿಮಿಂಗಿಲಗಳ ಬಾಯಿಗೆ ಮೊದಲು ಬಲಿಯಾಗುವುದು ಇಂಥವರೇ. ಬಡ್ಡಿಯ ಬಗ್ಗೆ ಒಲವು ಇಲ್ಲದ ಆದರೆ, ಬಡ್ಡಿ ಮುಕ್ತ ಆರ್ಥಿಕ ವ್ಯವಹಾರದಿಂದ ಯಶಸ್ಸು ಕಷ್ಟಸಾಧ್ಯ ಎಂದು ಆಂತರಿಕವಾಗಿ ನಂಬಿರುವ ‘ಅತಂತ್ರ ಸ್ಥಿತಿ’ಯ ಮುಸ್ಲಿಮರನ್ನು ಮರುಳು ಮಾಡುವುದಕ್ಕೆ ದೋಚುವವರು ಮೊದಲು ತಂತ್ರವನ್ನು ಹೆಣೆಯುತ್ತಾರೆ.

ಹಾಗಂತ, ಅನೇಕ ಬಾರಿ ಈ ದೋಚುವವರಿಗೆ ಗೊತ್ತಿರುವ ಸತ್ಯ ಈ ದೋಚಿಸಿಕೊಳ್ಳುವವರಿಗೂ ಗೊತ್ತಿರುತ್ತದೆ. ನಾವು ಮಾಡುವ ಹೂಡಿಕೆ ಮತ್ತು ಅದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು ಬರುವ ಲಾಭವು ಬಡ್ಡಿಯ ಇನ್ನೊಂದು ರೂಪ ಎಂಬುದನ್ನು ಹೂಡಿಕೆದಾರರ ಒಳಮನಸ್ಸು ಒಪ್ಪಿರುತ್ತದೆ. ಆದರೆ ಬಹಿರಂಗವಾಗಿ ಈ ದೋಚುವವರು ಮತ್ತು ಈ ದೋಚಿಸಿಕೊಳ್ಳುವ ಹೂಡಿಕೆದಾರರು ಅದನ್ನು ಆಡಿಕೊಳ್ಳುವುದಿಲ್ಲ. ಠೇವಣಿಗೆ ಬ್ಯಾಂಕುಗಳು ನೀಡುವ ಹಣವನ್ನು ಮಾತ್ರ ಬಡ್ಡಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಬ್ಯಾಂಕೇತರ ಉಳಿದ ವ್ಯವಹಾರಗಳನ್ನು ‘ಹಲಾಲ್’ ಎಂದು ಸಮರ್ಥಿಸಿಕೊಳ್ಳುವ ಕುರುಡುತನ ಎರಡೂ ಕಡೆಯಿಂದಲೂ ನಡೆಯುತ್ತದೆ.

ನಿಜವಾಗಿ, ಬೆಂಗಳೂರಿನ ಐಎಂಎಯಂಥ ಸಂಸ್ಥೆಗಳ ಯಶಸ್ಸಿನಲ್ಲಿ ಇಂಥ ಕುರುಡು ಸಮರ್ಥನೆಗಳ ಪಾಲು ದೊಡ್ಡದಿದೆ. ತನ್ನಲ್ಲಿ ಹೂಡಿಕೆ ಮಾಡುವವರಿಗೆ ಪ್ರತಿ ತಿಂಗಳೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭವನ್ನು ಕೊಡುತ್ತಿರುತ್ತೇನೆ ಎಂದು ಭರವಸೆ ಕೊಟ್ಟ ಐಎಂಎಗೂ ಬ್ಯಾಂಕ್‍ನ ಬಡ್ಡಿಗೂ ದೊಡ್ಡ ವ್ಯತ್ಯಾಸವೇನೂ ಇಲ್ಲ. ವ್ಯತ್ಯಾಸ ಇರುವುದು ಹಲಾಲ್ ಎಂಬ ಬೋರ್ಡ್‍ನಲ್ಲಿ ಮಾತ್ರ. ಬ್ಯಾಂಕುಗಳು ಕೂಡ ಐಎಂಎ ಸಂಸ್ಥೆಯಂತೆಯೇ ಕಾರ್ಯ ನಿರ್ವಹಿಸುತ್ತವೆ. ಅವು ತನ್ನಲ್ಲಿ ಠೇವಣಿ ಇಡುವ ಗ್ರಾಹಕರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹೆಚ್ಚುವರಿ ಹಣವನ್ನು ನೀಡುತ್ತಿರುತ್ತದೆ ಮತ್ತು ಅದಕ್ಕುಂಟಾಗುವ ಯಾವುದೇ ನಷ್ಟಕ್ಕೆ ಗ್ರಾಹಕನನ್ನು ಹೊಣೆ ಮಾಡುವುದಿಲ್ಲ. ಐಎಂಎಯ ವ್ಯವಹಾರವೂ ಹೀಗೆಯೇ.

ನಿಜವಾಗಿ, ಬಡ್ಡಿ ರಹಿತ ಆರ್ಥಿಕ ವ್ಯವಹಾರ ಎಂಬುದು ಇದಕ್ಕಿಂತ ಭಿನ್ನವಾದುದು. ಅಲ್ಲಿ ಲಾಭ ಮತ್ತು ನಷ್ಟ ಎರಡನ್ನೂ ಸ್ವೀಕರಿಸಿಕೊಳ್ಳುವುದಕ್ಕೆ ಹೂಡಿಕೆದಾರ ಸಿದ್ಧನಿರಬೇಕಾಗುತ್ತದೆ. ಅಂದರೆ, ಐಎಂಎಯಲ್ಲಿ ಹಣವನ್ನು ಹೂಡುವ ಹೂಡಿಕೆದಾರ ಲಾಭವನ್ನು ಮಾತ್ರವಲ್ಲ, ನಷ್ಟವನ್ನು ಸ್ವೀಕರಿಸಿಕೊಳ್ಳುವುದಕ್ಕೂ ಸಿದ್ಧನಿರಬೇಕು. ಅದರರ್ಥ- ಪ್ರತಿ ತಿಂಗಳೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭವನ್ನು ನೀಡುತ್ತೇನೆನ್ನುವ ಐಎಂಎಯ ಭರವಸೆಯೇ ಅಸಂಬದ್ಧ ಅಥವಾ ಹಲಾಲ್ ರಹಿತ. ಯಾವುದೇ ವ್ಯವಹಾರದಲ್ಲಿ ಯಾವಾಗಲೂ ನಿರ್ದಿಷ್ಟ ಪ್ರಮಾಣದಲ್ಲಿ ಲಾಭ ಮಾತ್ರ ಆಗುತ್ತಿರುತ್ತದೆ ಮತ್ತು ನಷ್ಟವೇ ಆಗುವುದಿಲ್ಲ ಎಂದು ವಾದಿಸಿದಂತೆಯೇ ಇದು. ಬ್ಯಾಂಕ್‍ಗಳು ಹೀಗೆ ಹೇಳುವುದನ್ನು ಬಡ್ಡಿ ಎಂದು ಹೇಳುತ್ತಲೇ, ಐಎಂಎನಂಥ ಸಂಸ್ಥೆಗಳು ಹಲಾಲ್ ಎಂಬ ಬೋರ್ಡ್ ತೂಗು ಹಾಕಿಕೊಂಡು ಇದನ್ನೇ ಹೇಳಿದಾಗ ಧರ್ಮಬದ್ಧ ಆಗುವುದನ್ನು ಬೋದಾಳತನ ಎಂದಷ್ಟೇ ಹೇಳಬೇಕಾಗುತ್ತದೆ.

ಅಂದಹಾಗೆ,
‘ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ’ ಎಂಬಂಥ ಮನಸ್ಸಿನವರನ್ನು ದೋಚುವುದಕ್ಕೆ ಭಯಂಕರ ಜಾಣತನವೇನೂ ಬೇಕಾಗಿಲ್ಲ. ಹಲಾಲ್ ಎಂಬ ಬೋರ್ಡೊಂದೇ ಅವರನ್ನು ಸೆಳೆಯುವುದಕ್ಕೆ ಸಾಕಾಗುತ್ತದೆ. ‘ದೇವನ ಹೆಸರಲ್ಲಿ ಚೂರಿ ಹಾಕಿದ ಪ್ರಾಣಿಯ ಮಾಂಸವನ್ನು ಮಾತ್ರ ಮುಸ್ಲಿಮರು ತಿನ್ನುತ್ತಾರೆ’ ಎಂಬ ಕಾರಣಕ್ಕಾಗಿ ‘ಹಲಾಲ್ ಚಿಕನ್ ಸ್ಟಾಲ್’ ಎಂಬುದಾಗಿ ಬೋರ್ಡ್ ಹಾಕಿಕೊಳ್ಳುವಂತೆಯೇ ಕೆಲವರು, ತಮ್ಮ ಖತರ್ನಾಕ್ ವ್ಯವಹಾರಗಳನ್ನು ‘ಹಲಾಲ್’ ಎಂಬ ಬುರ್ಖಾದೊಳಗೆ ಅಡಗಿಸಿಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ವಿವಿಧ ತಂತ್ರಗಳನ್ನು ಹೆಣೆಯುತ್ತಾರೆ. ವಿವಿಧ ವೇಷಗಳನ್ನು ಕಟ್ಟುತ್ತಾರೆ. ತಾವು ಹೇಗೆ ಪರಿಶುದ್ಧರು ಎಂಬುದನ್ನು ಮನವರಿಕೆ ಮಾಡಿಸುವುದಕ್ಕೆ ಧಾರ್ಮಿಕ ವ್ಯಕ್ತಿತ್ವಗಳನ್ನೂ ದುರುಪಯೋಗಿಸುತ್ತಾರೆ. ಅದೇವೇಳೆ, ಸೈದ್ಧಾಂತಿಕವಾಗಿ ಮತ್ತು ವೈಚಾರಿಕವಾಗಿ ದುರ್ಬಲರಾಗಿರುವ ಮತ್ತು ಅದರಂತೆ ನಟಿಸುವ ಎರಡೂ ಬಗೆಯ ಮುಸ್ಲಿಮರಿಗೆ ಹಣ ಮೊಟ್ಟೆ ಇಡುವುದು ಮುಖ್ಯವಾಗಿರುತ್ತದೆಯೇ ಹೊರತು ಹಲಾಲ್ ಮುಖ್ಯವಾಗಿರುವುದಿಲ್ಲ. ಜೊತೆಗೇ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಈ ಸಂಸ್ಥೆಗಳು ತಮ್ಮ ಹೆಸರಿನ ಮೊದಲು ಹಲಾಲ್ ಎಂದು ಘೋಷಿಸಿಕೊಂಡಿರುವುದೇ ಇವರಿಗೆ ಸಾಕಾಗಿರುತ್ತದೆ. ನಿಜವಾಗಿ, ಈಗಾಗಲೇ ಬಾಗಿಲು ಮುಚ್ಚಿ ಓಡಿ ಹೋಗಿರುವ ಮಹಾರಾಷ್ಟ್ರ ಅಪೆಕ್ಸ್ ಬ್ಯಾಂಕ್, ವಿನಿವಿಂಕ್ ಶಾಸ್ತ್ರಿ, ಅಗ್ರಿಗೋಲ್ಡ್, ವಿಕ್ರಂ ಇನ್ವೆಸ್ಟ್‍ಮೆಂಟ್, ಡ್ರೀಮ್ಸ್ ಜಿಕೆ, 500 ಕೋಟಿ ವಂಚಿಸಿದ ಷಣ್ಮುಗಂ ಫೈನಾನ್ಸ್, ಹಿಂದೂಸ್ತಾನ್ ಇನ್ಫಾಕಾಂ, ಗೃಹ ಕಲ್ಯಾಣ್, ಹರ್ಷ ಎಂಟರ್‍ಟೈನ್‍ಮೆಂಟ್, ಸೆವೆನ್ ಹಿಲ್ಸ್, ಗ್ರೀನ್ ಬರ್ಡ್ ಆಗ್ರೋ ಫಾರ್ಮ್, ಅಜಮೇರಾ ಗ್ರೂಪ್ ಇತ್ಯಾದಿ ಇತ್ಯಾದಿಗಳು ತಮ್ಮ ಹೆಸರಿನ ಮುಂದೆ ಹಲಾಲ್ ಎಂದು ಬರೆದುಕೊಂಡರೆ ಹೇಗೋ ಬಹುತೇಕ ಹಾಗೆಯೇ ಈ ಹಲಾಲ್ ಸಂಸ್ಥೆಗಳು. ಎಲ್ಲವೂ ದಂಧೆಗಳೇ. ತಮ್ಮ ತಮ್ಮ ಉದ್ಧೇಶವನ್ನು ಜಾರಿಗೊಳಿಸುವುದಕ್ಕೆ ಯಾವೆಲ್ಲ ಮುಖವಾಡವನ್ನು ಹಾಕಿಕೊಳ್ಳಬೇಕೋ ಅವೆಲ್ಲವನ್ನೂ ಹಲಾಲ್ ಬೋರ್ಡು ಹಾಕಿದ ಮತ್ತು ಹಾಕದ ಸಂಸ್ಥೆಗಳೆರಡೂ ಮಾಡುತ್ತವೆ. ಮೌಲ್ವಿಯನ್ನೋ ಸ್ವಾಮೀಜಿಗಳನ್ನೋ ಇವು ಸಂದರ್ಭಾನುಸಾರ ಬಳಸಿಕೊಳ್ಳುತ್ತವೆ. ಜಾಹೀರಾತುಗಳನ್ನು ನೀಡುತ್ತಿರುತ್ತವೆ. ಸಂಸ್ಥೆಯ ವ್ಯವಹಾರ ಎಷ್ಟೆಷ್ಟು ಕೋಟಿಗೇರಿದೆ ಮತ್ತು ಎಂಥೆಂಥ ಅಗ್ರಗಣ್ಯ ಶ್ರೀಮಂತರು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಬಾಯಿಂದ ಬಾಯಿಗೆ ಹರಡುತ್ತಿರುತ್ತದೆ. ಈ ವಿಷಯದಲ್ಲಿ ಮಾತ್ರವಲ್ಲ, ಕೊನೆಗೆ ಬಾಗಿಲು ಮುಚ್ಚುವ ರೀತಿಯಲ್ಲೂ ಈ ಎರಡೂ ರೀತಿಯ ಸಂಸ್ಥೆಗಳಲ್ಲಿ ಏಕರೂಪ ಇರುತ್ತದೆ. ಬೋರ್ಡ್‍ನಲ್ಲಿ ಹಲಾಲ್ ಎಂದು ಬರೆದಿದ್ದರೂ ಇಲ್ಲದಿದ್ದರೂ.

ಅಂದಹಾಗೆ,
ಬಡ್ಡಿ ಎಂಬುದು ಶೋಷಕ ವ್ಯವಸ್ಥೆಯ ಪ್ರತಿನಿಧಿ. ದುರ್ಬಲನ ಅಸಹಾಯಕತೆಯನ್ನು ದುರುಪಯೋಗಿಸುವ ಅತಿಕ್ರೂರ ರಕ್ತ ಹೀರುವ ವ್ಯವಸ್ಥೆ. ಇದು ಜಿಗಣೆಯಂತೆ. ಒಮ್ಮೆ ತಗುಲಿಕೊಂಡರೆ ಮತ್ತೆ ಕಳಚಲು ಅಸಾಧ್ಯ ಅನ್ನುವ ಸ್ಥಿತಿಗೆ ತಲುಪಿಸುತ್ತದೆ. ಇಸ್ಲಾಮ್ ಬಡ್ಡಿಯನ್ನು ವಿರೋಧಿಸುವುದಕ್ಕೆ ಅದರ ಈ ಶೋಷಕ ಗುಣವೇ ಮೂಲ ಕಾರಣ. ಅಂದಹಾಗೆ, ಇಂಡೋನೇಷ್ಯಾವೂ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಬಡ್ಡಿ ರಹಿತವಾದ ಆರ್ಥಿಕ ವ್ಯವಸ್ಥೆಯಿದೆ. ನಮ್ಮ ದೇಶದಲ್ಲೂ ಕೆಲವು ಸಂಘ ಸಂಸ್ಥೆಗಳು ಸಣ್ಣ ಮಟ್ಟದಲ್ಲಾದರೂ ಇದನ್ನು ಪ್ರಾಯೋಗಿಕವಾಗಿ ಜಾರಿಯಲ್ಲಿಟ್ಟಿವೆ ಮತ್ತು ಯಶಸ್ವಿಯಾಗಿವೆ.

ವಿಶೇಷ ಏನೆಂದರೆ, ಇವು ತಮ್ಮ ಹೆಸರಿನ ಮುಂದೆ ಹಲಾಲ್ ಬೋರ್ಡನ್ನು ತಗುಲಿಸಿಕೊಂಡಿಲ್ಲ ಮತ್ತು ಆ ಕಾರಣದಿಂದಲೋ ಏನೋ ಸಾರ್ವಜನಿಕ ಚರ್ಚೆಗೂ ಒಳಗಾಗುತ್ತಿಲ್ಲ. ಐಎಂಎಯ ನೆಪದಲ್ಲಾದರೂ ಮಾಧ್ಯಮಗಳು ಇಂಥ ಸಂಸ್ಥೆಗಳನ್ನು ಹುಡುಕಿ ಸುದ್ದಿ ಮಾಡುವ ಪ್ರಯತ್ನ ನಡೆಸಲಿ.

  • ಎ. ಕೆ. ಕುಕ್ಕಿಲ

About editor

Check Also

ಇಸ್ಲಾಮಿನಲ್ಲಿ ಕುಟುಂಬ ಸಂಬಂಧಗಳ ಪ್ರಾಮುಖ್ಯತೆ

ಯಾರು ಅಲ್ಲಾಹನು, ಅಂತ್ಯ ದಿನದಲ್ಲಿ ವಿಶ್ವಾಸ ಇರಿಸಿದ್ದಾನೋ ಅವನು ಕುಟುಂಬ ಸಂಬಂಧವನ್ನು ಅಸ್ತಿತ್ವದಲ್ಲಿರಿಸಿಕೊಳ್ಳಲಿ'(ಬುಖಾರಿ) ಕುಟುಂಬ ಸಂಬಂಧ ಕಡಿದುಕೊಂಡವರು ಸ್ವರ್ಗ ಪ್ರವೇಶಿಸುವುದಿಲ್ಲ. …

Leave a Reply

Your email address will not be published. Required fields are marked *