ಹ. ಆಯಿಶಾ(ರ) ಮತ್ತು ಪರ್ದಾ

@ ಮಾಯಿಲ್ ಖೈರಾಬಾದಿ

ಹ. ಹಸ್ಸಾನ್(ರ)ರು ಆಯಿಶಾ(ರ)ರ ಬಳಿ ಬಂದಾಗ ಅವರನ್ನು ಗೌರವದಿಂದ ಕುಳ್ಳಿರಿಸುತ್ತಿದ್ದರು. “ಇವರು ಪ್ರವಾದಿಯವರನ್ನು(ಸ) ಪ್ರಶಂಸಿಸುವವರಾಗಿದ್ದಾರೆ” ಎಂದು ಜನರಲ್ಲಿ ಹೇಳುತ್ತಿದ್ದರು. ಹಸ್ಸಾನ್(ರ)ರ ಕಾವ್ಯವನ್ನು ಆಲಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು.

ಒಂದು ಸ್ವಾರಸ್ಯಕರ ಘಟನೆ. ಓರ್ವ ವ್ಯಕ್ತಿಯ ಬಗ್ಗೆ ಆತ ಕೆಟ್ಟವನೆಂದು ಭಾವಿಸುತ್ತಿದ್ದರು. ಆತ ಸಾವನ್ನಪ್ಪಿದಾಗ ಆಯಿಶಾ(ರ)ರು ದುಆಕ್ಕಾಗಿ ಕೈಗಳನ್ನೆತ್ತಿದರು. ಅಲ್ಲಿ ಉಪಸ್ಥಿತರಿದ್ದ ಶಿಷ್ಯರು ಆಶ್ಚರ್ಯಚಕಿತರಾಗಿ ಆ ವ್ಯಕ್ತಿ ಇಂತಿಂತಹವನಾಗಿದ್ದಾನೆಂದರು. ಆಗ ಆಯಿಶಾ(ರ)ರು “ಮೃತರ ಒಳಿತಿನ್ನು ಸ್ಮರಿಸಿರಿ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ” ಎಂದರು.

ಪರಾಕ್ರಮ:
ಅಲ್ಲಾಹನ ಹೊರತು ಬೇರಾರಿಗೂ ಅವರು(ರ) ಭಯ ಪಡುತ್ತಿರಲಿಲ್ಲ. ರಾತ್ರಿ ವೇಳೆ ಕಬರಸ್ತಾನಕ್ಕೆ ಹೋಗುತ್ತಿದ್ದರು. ಯುದ್ಧ ಮೈದಾನದಲ್ಲಿ ರಕ್ತಸಿಕ್ತರಾದ ಗಾಯಾಳುಗಳಿಗೆ ನೀರು ಕುಡಿಸುತ್ತಿದ್ದರು. ಕಂದಕ ಯುದ್ಧದಲ್ಲಿ ಇಡೀ ಅರಬ್ ಮದೀನಾದ ಮೇಲೆ ಮುತ್ತಿಗೆ ಹಾಕಿದಾಗ ಮುಸ್ಲಿಮರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆಯಿಶಾ(ರ)ರು ಆಗಾಗ್ಗೆ ಹೋಗಿ ಯುದ್ಧ ಮೈದಾನವನ್ನು ನೋಡುತ್ತಿದ್ದರು. ಯುದ್ಧದಲ್ಲಿ ಪಾಲ್ಗೊಳ್ಳಲು ಹಲವು ಬಾರಿ ಪ್ರವಾದಿಯವರಲ್ಲಿ(ಸ) ಅನುಮತಿ ಕೇಳಿದರು. ಆದರೆ ಅನುಮತಿ ಸಿಗಲಿಲ್ಲ. ಜಮಲ್ ಯುದ್ಧದಲ್ಲಿ ಹ. ಅಲೀ(ರ)ಯವರ ವಿರುದ್ಧ ಪಾಲ್ಗೊಂಡು ಯುದ್ಧ ಮಾಡಿದ ಬಗ್ಗೆ ನಾವು ಈಗಾಗಲೇ ತಿಳಿಸಿದ್ದೇವೆ. ಅಲೀ(ರ)ಯವರ ಯೋಧ ಆಯಿಶಾ (ರ)ರ ಒಂಟೆಯ ಕಾಲುಗಳನ್ನು ಕತ್ತರಿಸಿದಾಗ ಆಯಿಶಾ(ರ)ರು ಯುದ್ಧ ರಂಗದಿಂದ ಹಿಂದೆ ಸರಿದಿದ್ದರು. ಈ ಸಂದರ್ಭದಲ್ಲಿ ಸಹೋದರ ಮುಹಮ್ಮದ್ ಬಿನ್ ಅಬೂಬಕರ್ ಪಲ್ಲಕ್ಕಿಯ ಒಳಗಡೆ ಕೈ ಹಾಕಿ ಸಹೋದರಿಯನ್ನು ಬೀಳುವುದರಿಂದ ರಕ್ಷಿಸಿದಾಗ ಅವರನ್ನು ಗದರಿಸಿ “ಯಾರು?” ಎಂದು ಕೇಳಿದರು.

ಪರ್ದಾ:
ಪರ್ದಾದ ಶಿಷ್ಟಾಚಾರ ಆಯಿಶಾ(ರ)ರಲ್ಲಿ ಅಧಿಕವಿತ್ತು. ಒಮ್ಮೆ ಓರ್ವ ವ್ಯಕ್ತಿ ಮನೆಗೆ ಬಂದರು. ಅವರ ಸೋದರನ ಪತ್ನಿ ಹ. ಆಯಿಶಾ(ರ)ರಿಗೆ ಹಾಲುಣಿಸಿದ್ದರು. ಆಯಿಶಾ(ರ)ರು ಅವರಿಂದ ಪರ್ದಾ ಮಾಡಿದಾಗ ಆ ವ್ಯಕ್ತಿಯು, “ನಾನು ನಿಮ್ಮ ಚಿಕ್ಕಪ್ಪನಾಗಿದ್ದೇನೆ” ಎಂದರು. ಆಗ ಆಯಿಶಾ(ರ)ರು, “ನಾನು ನಿಮ್ಮ ಅತ್ತಿಗೆಯ ಹಾಲು ಕುಡಿದಿದ್ದೇನೆ. ನಿಮ್ಮ ಪತ್ನಿಯದಲ್ಲ” ಎಂದರು. ಅಷ್ಟರಲ್ಲೇ ಅಲ್ಲಿಗೆ ಆಗಮಿಸಿದ ಪ್ರವಾದಿಯವರು(ಸ), “ಅವರು ನಿಮ್ಮ ಚಿಕ್ಕಪ್ಪ ಆಗಿದ್ದಾರೆ. ಮುಂದೆ ಬಾ” ಎಂದರು.

– ಹಜರುಲ್ ಅಸ್ವದ್ ಅನ್ನು ಚುಂಬಿಸುವುದಕ್ಕೆ ಅಧಿಕ ಪುಣ್ಯವಿದೆ. ಆದರೆ ಜನಸಂದಣಿಯಿಂದಾಗಿ ಅವರೆಂದಿಗೂ ಪ್ರಯತ್ನಿಸಲಿಲ್ಲ. ಒಮ್ಮೆ ಕೆಲವು ಸವತಿಯರು, “ಬನ್ನಿ ನಾವು ನಿಮ್ಮನ್ನು ಸುತ್ತವರಿಯುತ್ತೇವೆ” ಎಂದರು. ಆದರೂ ಆಯಿಶಾ(ರ)ರು ಅದಕ್ಕೆ ಸಮ್ಮತಿಸಲಿಲ್ಲ. ತವಾಫ್ ಮಾಡುವಾಗ ಮುಖದ ಮೇಲೆ ಪರದೆ ಹಾಕುತ್ತಿದ್ದರು. ಆಯಿಶಾ(ರ)ರು ತವಾಫ್ ಮಾಡುವ ವೇಳೆ ಪುರುಷರು ಮುತಾಫ್ ಅನ್ನು ಖಾಲಿ ಮಾಡುತ್ತಿದ್ದರು.

– ಕುರುಡರಿಂದಲೂ ಪರ್ದಾ ಮಾಡುತ್ತಿದ್ದರು. ಒಮ್ಮೆ ಓರ್ವ ಕುರುಡ ವ್ಯಕ್ತಿ ಇದನ್ನು ಆಕ್ಷೇಪಿಸಿದಾಗ, “ನೀನು ಕುರುಡನಾಗಿದ್ದೀ ನಾನಲ್ಲ” ಎಂದರು. ವಾಸ್ತವವಾಗಿ ಕುರುಡ ಸಹಾಬಿಯಾಗಿದ್ದ ಉಮ್ಮು ಮಕ್ತೂಮ್‍ರೊಂದಿಗೆ ಈ ಘಟನೆ ಸಂಭವಿಸಿದಾಗ ಪ್ರವಾದಿಯವರು(ಸ) ಇದೇ ಮಾತನ್ನು ಹ. ಆಯಿಶಾ(ರ)ರಿಗೆ ಹೇಳಿದ್ದರು. ಆದುದರಿಂದ ಆಯಿಶಾ(ರ)ರು ಕುರುಡರಿಂದಲೂ ಪರ್ದಾ ಮಾಡುತ್ತಿದ್ದರು.

– ಹ. ಉಮರ್ ಫಾರೂಕ್(ರ)ರನ್ನು ಹ. ಆಯಿಶಾ(ರ)ರ ಕೋಣೆಯಲ್ಲಿ ದಫನ ಮಾಡಿದಾಗ ಮೃತರಿಂದ ಪರ್ದಾ ಮಾಡುವ ಅವಶ್ಯಕತೆ ಇಲ್ಲದಿದ್ದರೂ ಆಯಿಶಾ(ರ)ರು ಆ ಕೋಣೆಯನ್ನು ತೊರೆದಿದ್ದರು.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *