ಹ. ಆಯಿಶಾ(ರ)ರ ಆರಾಧನೆಗಳು

@ ಮಾಯಿಲ್ ಖೈರಾಬಾದಿ

ಒಮ್ಮೆ ಹಜ್ಜ್ ಸಂದರ್ಭದಲ್ಲಿ ನಗುತ್ತಾ ಬಂದ ಕೆಲ ಯುವಕರು, “ಓರ್ವ ವ್ಯಕ್ತಿ ಡೇರೆಯ ಹಗ್ಗದಲ್ಲಿ ಸಿಲುಕಿದ ಕಾರಣ ಅವರ ಕುತ್ತಿಗೆಯು ಉಳುಕಿ ಹೋಗಿದೆ. ಇದನ್ನು ಕಂಡು ನಮಗೆ ನಗು ತಡೆಯಲಾಗಿಲ್ಲ” ಎಂದರು. ಅವರನ್ನು ಉಪದೇಶಿಸಿದ ಆಯಿಶಾ(ರ)ರು, “ಇತರರು ಸಂಕಷ್ಟದಲ್ಲಿರುವುದನ್ನು ಕಂಡು ನಗಬಾರದು. ಯಾವುದೇ ಓರ್ವ ಮುಸ್ಲಿಮನಿಗೆ ಒಂದು ಮುಳ್ಳು ಚುಚ್ಚಿದರೂ ಅಥವಾ ಆತನ ಮೇಲೆ ಯಾವುದೇ ಸಂಕಷ್ಟ ಎರಗಿದರೂ ಅಲ್ಲಾಹನು ಆತನ ದರ್ಜೆಯನ್ನು ಉನ್ನತಗೊಳಿಸುವನು ಹಾಗೂ ಆತನ ಪಾಪಗಳನ್ನು ಮನ್ನಿಸುವನು” ಎಂದರು.

ಸಾವಿರಾರು ಸಲಹೆ-ಸೂಚನೆ ಉಪದೇಶಗಳಲ್ಲಿ ಕೆಲವೊಂದನ್ನು ಮಾತ್ರ ನಾವು ಉಲ್ಲೇಖಿಸಿದ್ದೇವೆ. ಒಂದು ವೇಳೆ ಅಲ್ಲಾಹನು ಅನುಗ್ರಹಿಸಿದರೆ ಹಾಗೂ ನಾವು ಅನುಸರಿಸಿದರೆ ಇದರಲ್ಲಿ ಎಲ್ಲಾ ಸ್ತ್ರೀ-ಪುರುಷರಿಗೂ ಪಾಠವಿದೆ.

ಹ. ಆಯಿಶಾ(ರ)ರ ಜ್ಞಾನ ಮತ್ತು ಅನುಸರಣಾ ಮಾದರಿ:
ಹ. ಆಯಿಶಾ(ರ)ರ ಜ್ಞಾನ, ತರಬೇತಿ, ಸುಧಾರಣಾ ರೀತಿ ನಮ್ಮೆಲ್ಲರ ಮುಂದಿದೆ. ಈಗ ಅವರು ಸ್ವತಃ ಎಷ್ಟು ಅನುಸರಣಾಶೀಲರಾಗಿದ್ದರು ಎಂಬುದನ್ನು ತಿಳಿಯುವುದು ಆವಶ್ಯಕ. ಇತರರನ್ನು ಉಪದೇಶಿಸಿ ಸ್ವತಃ ಅನುಸರಿಸದ ವ್ಯಕ್ತಿಯನ್ನು, “ಎಲ್ಲರಿಗೂ ಉಪದೇಶಿಸುವವ ಸ್ವತಃ ತಿರಸ್ಕ್ರತ” (ಅವಮಾನಕ್ಕೊಳಗಾದವ)” ಎನ್ನಲಾಗುತ್ತದೆ.

ಪ್ರವಾದಿಯವರು(ಸ) ಸಹಾಬಿಗಳಲ್ಲಿ ಯಾರಿಗಾದರೂ ಒಮ್ಮೆ ತಡೆದರೆ ಅದು ಮತ್ತೆಂದೂ ಸಹಾಬಿಗಳಿಂದ ಪುನರಾವರ್ತಿತವಾಗುತ್ತಿರಲಿಲ್ಲ ಎಂಬುದು ಸಹಾಬಿವರ್ಯರ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ.

ಪ್ರವಾದಿಯವರು(ಸ) ಆಯಿಶಾ(ರ)ರಿಗೆ ಅವರ ಬಾಲ್ಯ ಕಾಲದಿಂದಲೇ ತರಬೇತಿ ನೀಡಿದ್ದರು. ಅವರು(ರ) ಪ್ರವಾದಿ(ಸ)ರ ಒಂದೊಂದು ನಡೆ-ನುಡಿಗಳನ್ನು ನೋಡುತ್ತಿದ್ದರು ಮತ್ತು ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ನಾವಿಲ್ಲಿ ಹ. ಆಯಿಶಾ(ರ)ರ ಅನುಸರಣಾ ಮಾದರಿಯನ್ನು ಉಲ್ಲೇಖಿಸುತ್ತೇವೆ. ಸ್ತ್ರೀ-ಪುರುಷರೆಲ್ಲರಿಗೂ ಅವರು ಅನುಸರಣೆಯು ಮಾದರಿ ಯೋಗ್ಯವಾಗಿದೆ. ಮೊಟ್ಟ ಮೊದಲನೆಯದಾಗಿ ಆರಾಧನೆಯ ರೀತಿಯನ್ನು ನೋಡೋಣ.

ಆರಾಧನೆ:
ಕಡ್ಡಾಯ ಆರಾಧನೆಗಳಲ್ಲಿ ಸಹಾಬಿವರ್ಯರ ಪ್ರತಿಬಂಧವು ಹೆಚ್ಚು ಪ್ರಖ್ಯಾತಿ ಪಡೆದಿದೆ. ಹ. ಆಯಿಶಾ(ರ)ರು ಫರ್ಝ್ (ಕಡ್ಡಾಯ) ನಮಾಝ್ ಗಳ ಜೊತೆಗೆ ಹೆಚ್ಚಿನ ಸಮಯವನ್ನು ನಫೀಲ್ (ಐಚ್ಛಿಕ) ನಮಾಝ್‍ಗಳಲ್ಲಿ ಕಳೆಯುತ್ತಿದ್ದರು. ಚಾಶ್ತ್ ನ (ಪೂರ್ವಾಹ್ನದ ಐಚ್ಛಿಕ ನಮಾಝ್) ನಮಾಝ್ ಅನ್ನು ಪ್ರವಾದಿ(ಸ)ರ ಜೀವನ ಕಾಲದಲ್ಲೇ ತಪ್ಪದೇ ನಿರ್ವಹಿಸುತ್ತಿದ್ದರು. ಪ್ರವಾದಿಯವರ(ಸ) ನಿಧನದ ನಂತರವೂ ಚಾಶ್ತ್ ನ ನಮಾಝ್ ಅನ್ನು ಎಂದಿಗೂ ಬಿಡಲಿಲ್ಲ. ಇದರ ಕುರಿತು ಆಯಿಶಾ(ರ)ರು ಹೇಳುತ್ತಾರೆ, “ಒಂದು ವೇಳೆ ನನ್ನ ತಂದೆ ಗೋರಿಯಿಂದ ಎದ್ದು ಬಂದು ತಡೆದರೂ ನಾನು ಎಂದಿಗೂ ಇದನ್ನು ತೊರೆಯಲಾರೆ” ಎಂದರು.

ಪ್ರವಾದಿಯವರ(ಸ) ಮೇಲೆ ತಹಜ್ಜುದ್ ನಮಾಝ್ ಕಡ್ಡಾಯವಾಗಿತ್ತು. ಆದರೆ ಸಮುದಾಯದ ಮೇಲೆ ಇದು ಕಡ್ಡಾಯವಲ್ಲ. ಆದರೂ ಪ್ರವಾದಿಯವರು(ಸ) ತಹಜ್ಜುದ್ ನಮಾಝ್ ನಿರ್ವಹಿಸುವಂತೆ ಸಹಾಬಿವರ್ಯರನ್ನು ಪ್ರೇರೇಪಿಸುತ್ತಿದ್ದರು. ಹ. ಆಯಿಶಾ(ರ)ರಿಗೆ ರಾತ್ರಿ ವೇಳೆ ನಿದ್ದೆಯಿಂದ ಎಚ್ಚರಿಸುತ್ತಿದ್ದರು. ಹೀಗೆ ಆಯಿಶಾ(ರ)ರು ಪ್ರವಾದಿಯವರ(ಸ) ಜೀವನ ಕಾಲದಿಂದಲೇ ತಹಜ್ಜುದ್ ನಮಾಝ್ ಅನ್ನು ತಪ್ಪದೇ ನಿರ್ವಹಿಸುವ ಅಭ್ಯಾಸ ಬೆಳೆಯಿಸಿಕೊಂಡರು. ಪ್ರವಾದಿಯವರ(ಸ) ನಂತರವೂ ಎಂದಿಗೂ ತಹಜ್ಜುದ್ ನಮಾಝ್ ಅನ್ನು ಬಿಡಲಿಲ್ಲ. ಒಂದು ವೇಳೆ ತಹಜ್ಜುದ್‍ನ ಸಮಯದಲ್ಲಿ ಎಚ್ಚರವಾಗದಿದ್ದರೆ ಮುಂಜಾವಿಗೆ ಎದ್ದು ಮೊದಲು ತಹಜ್ಜುದ್ ನಮಾಝ್ ನಿರ್ವಹಿಸಿ ಬಳಿಕ ಫಜರ್ ನಮಾಝ್ ಮಾಡುತ್ತಿದ್ದರು.

ಒಮ್ಮೆ ಹ. ಕಾಸಿಮ್ (ಸಹೋದರ ಪುತ್ರ)ರು ಮುಂಜಾವಿನ ವೇಳೆ ಆಯಿಶಾ(ರ)ರ ಕೋಣೆಗೆ ಆಗಮಿಸಿದರು. ಆಯಿಶಾ(ರ)ರು ಫಜರ್‍ ನಲ್ಲಿ ಹೆಚ್ಚಿನ ರಕಅತ್‍ಅನ್ನು ನಿರ್ವಹಿಸುತ್ತಿರುವುದನ್ನು ಕಂಡು, “ಫಜರ್‍ ನಲ್ಲಿ ಹೆಚ್ಚಿನ ರಕಅತ್ ಏಕೆ?” ಎಂದು ಕೇಳಿದರು. ಆಯಿಶಾ(ರ)ರು, “ಇದು ತಹಜ್ಜುದ್ ನಮಾಝ್ ನಿರ್ವಹಿಸಲು ಸಾಧ್ಯವಾಗಲಿಲ್ಲ. ತಹಜ್ಜುದ್ ನಮಾಝ್ ನಿರ್ವಹಿಸದಿರಲು ನನ್ನಿಂದ ಸಾಧ್ಯವಿಲ್ಲ” ಎಂದರು.

ರಮಝಾನಿನಲ್ಲಿ ತರಾವೀಹ್ ನಮಾಝ್‍ಗಾಗಿ ಸೇವಕನಾದ ಝಕ್ವಾನ್‍ನನ್ನು ತಯಾರುಗೊಳಿಸುತ್ತಿದ್ದರು. ಆತ ಇಮಾಮ್ ಆಗಿ ನಿಲ್ಲುತ್ತಿದ್ದ, ಆಯಿಶಾ(ರ)ರು ಆತನ ಹಿಂದೆ ನಿಂತು ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು.

ರಮಝಾನಿನ ಉಪವಾಸವನ್ನು ಹೊರತು ಪಡಿಸಿ ಆಯಿಶಾ(ರ)ರು ಇತರ ದಿನಗಳಲ್ಲೂ ಉಪವಾಸವನ್ನಾಚರಿಸುತ್ತಿದ್ದರು. ಅರಫಾದ ದಿನ ತಪ್ಪದೇ ಉಪವಾಸವನ್ನಾಚರಿಸುತ್ತಿದ್ದರು. ಒಮ್ಮೆ ಅರಫಾದ ದಿನವು ಅತೀ ಹೆಚ್ಚು ಸೆಖೆ ಹಾಗೂ ತಾಪದಿಂದ ಕೂಡಿತ್ತು. ಅಂದು ಎಂದಿನಂತೆ ಆಯಿಶಾ(ರ)ರು ಉಪವಾಸ ಹಿಡಿದಿದ್ದರು. ತಾಪದಿಂದಾಗಿ ತಲೆ ಮೇಲೆ ಆಗಾಗ್ಗೆ ನೀರನ್ನು ಚಿಮುಕಿಸುತ್ತಿದ್ದರು. ಅಷ್ಟರಲ್ಲೇ ಸಹೋದರ ಅಬ್ದುರ್ರಹ್ಮಾನ್‍ರು ಅಲ್ಲಿಗೆ ಆಗಮಿಸಿದರು. “ಇಷ್ಟು ತಾಪದಲ್ಲಿ ಐಚ್ಛಿಕ ಉಪವಾಸವಿಡುವ ಆವಶ್ಯಕತೆ ಏನಿತ್ತು?” ಎಂದರು. ಆಗ ಆಯಿಶಾ(ರ)ರು, ಪ್ರವಾದಿಯವರು(ಸ) ಈ ರೀತಿ ಹೇಳಿದ್ದಾರೆ, “ಯಾರು ಅರಫಾದ ದಿನ ಉಪವಾಸವ ನ್ನಾಚರಿಸುತ್ತಾರೋ ಅವರ ಇಡೀ ವರ್ಷದ ಪಾಪಗಳು ಮನ್ನಿಸಲ್ಪಡುತ್ತವೆ. ಆದುದರಿಂದ ನಾನು ಅರಫಾ ದಿನದ ಉಪವಾಸವನ್ನು ಬಿಡಲಾರೆ” ಎಂದರು. ಆಯಿಶಾ(ರ)ರು ಪ್ರತೀ ವರ್ಷ ತಪ್ಪದೇ ಹಜ್ಜ್ ನಿರ್ವಹಿಸುತ್ತಿದ್ದರು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *