ಚಿಂತನೆ: ನಾಲ್ಕು ಗುಣಗಳು

  • ಸಂಗ್ರಹ: ಎನ್.ಎಂ. ಪಡೀಲ್

ಅನ್ ಅಬ್ದುಲ್ಲಾಹಿಬಿನ್ ಅಮ್ರ್ ವ ಅನ್ನ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮ್ ಕಾಲ ಅರ್ಬಉ ಇದಾ ಕುನ್ನ ಫೀಕ ಫಲಾ ಅಲೈಕ ಮಾಫಾತಕ ಮಿನದ್ದುನ್ಯಾ: ಸಿದ್ಕುಲ್ ಹದೀಸಿ ವ ಹಿಫ್ದುಲ್ ಅಮಾನತಿ ವ ಹುಸ್ನುಲ್ ಕುಲ್ಕಿ ವ ಇಫ್ಪತು ಮತ್‍ಅಮಿನ್.
ಅಬ್ದುಲ್ಲಾಹಿಬ್ನು ಅಮ್ರ್(ರ) ವರದಿ ಮಾಡಿದ್ದಾರೆ. ಪ್ರವಾದಿ(ಸ) ಹೇಳಿದರು: “ನಿಮ್ಮಲ್ಲಿ ನಾಲ್ಕು ವಿಶಿಷ್ಟ ಗುಣಗಳಿದ್ದರೆ ಇಹಲೋಕದಲ್ಲಿ ಯಾವ ನಷ್ಟ ಸಂಭವಿಸಿದರೂ ನೀವು ಅದಕ್ಕಾಗಿ ದುಃಖಿಸಬೇಕಾಗಿಲ್ಲ. ಅವು ಹೀಗಿವೆ: ಸತ್ಯ ಸಂಧ ಮಾತು, ಹೊಣೆ ಸಂರಕ್ಷಣೆ, ಸದ್ಗುಣ ಮತ್ತು ಉತ್ತಮ ಆಹಾರ ಸಂಪಾದನೆ. (ಸಹೀಹುಲ್ ಜಾಮಿಅ 3741, ಅಲ್‍ಬಾನಿ)

ಸಕಲ ಸದ್ಗುಣಗಳ ಸಾಕಾರಕ್ಕಾಗಿ ನನ್ನನ್ನು ನೇಮಿಸಲಾಗಿದೆಯೆಂದು ಪ್ರವಾದಿಯವರು(ಸ) ಹೇಳಿದ್ದಾರೆ. ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಇತ್ಯಾದಿ ಎಲ್ಲ ಸಂಸ್ಕರಣೆಗೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಪ್ರವಾದಿಯವರು(ಸ) ಜಗತ್ತಿಗೆ ಕಲಿಸಿ ಅದನ್ನು ವ್ಯವಹಾರಿಕಗೊಳಿಸಿ ತೋರಿಸಿದರು. ವ್ಯಕ್ತಿಯು ಸಮಾಜದ ಮೂಲ ಘಟಕ. ಆದ್ದರಿಂದ ವ್ಯಕ್ತಿಯ ಸಂಸ್ಕರಣೆಗೆ ಅವರು ಹೆಚ್ಚು ಒತ್ತು ನೀಡಿದರು. ಈ ಹದೀಸಿನಲ್ಲಿ ವೈಯಕ್ತಿಕ ಸಂಸ್ಕರಣೆಗೆ ಸಂಬಂಧಿಸಿ 4 ವಿಶಿಷ್ಟ ಗುಣಗಳನ್ನು ಎತ್ತಿ ಹೇಳಲಾಗಿದೆ.

1. ಸತ್ಯಸಂಧ ಮಾತು:
ಮಾತು-ಕೃತಿಗಳಲ್ಲಿ ಸತ್ಯನಿಷ್ಠೆ ಪಾಲಿಸುವ ಸಮಾಜದ ಜತೆ ಸೇರಬೇಕೆಂದು ಪವಿತ್ರ ಕುರ್‍ಆನ್ ಆದೇಶಿಸಿದೆ. “ವಿಶ್ವಾಸಿಗಳೇ, ನೀವು ಅಲ್ಲಾಹನ ಭಯವಿರಿಸಿರಿ ಮತ್ತು ಸತ್ಯಸಂಧರ ಜತೆ ಸೇರಿರಿ.” (ಅತ್ತೌಬ: 119)  ಸತ್ಯ ಸಂಧತೆಯಿಂದ ವ್ಯಕ್ತಿಯು ಸಮಾಜದಲ್ಲಿ ಎಲ್ಲರ ಗೌರವ ಮತ್ತು ಮಾನ್ಯತೆಗೆ ಪಾತ್ರನಾಗುತ್ತಾನೆ.” ಅಪಾಯಕಾರಿಯೆನಿಸಿದರೂ ಸತ್ಯವನ್ನು ಬಿಗಿ ಹಿಡಿಯಿರಿ. ಖಂಡಿತ, ಅದರಲ್ಲಿಯೇ ವಿಜಯವಿದೆ. (ಇಬ್ನು ಅಬಿದ್ದುನ್ಯಾ) ಎಂಬ ಪ್ರವಾದಿ ವಚನವು ಅತಿ ವಿಷಮ ಪರಿಸ್ಥಿತಿಗಳಲ್ಲಿಯೂ ಸತ್ಯದಲ್ಲಿ ಅಚಲವಾಗಿರಲು ಸತ್ಯ ವಿಶ್ವಾಸಿಗಳಿಗೆ ಪ್ರೇರಕವಾಗಬೇಕು.

2. ಕರ್ತವ್ಯ ಪಾಲನೆ:


ಇದರ ಕುರಿತು ಪ್ರವಾದಿಯವರು(ಸ) ವಿಶ್ವಾಸಿ ಸಮೂಹಕ್ಕೆ ಬಹಳ ಗಂಭೀರವಾಗಿ ಉಪದೇಶಿಸಿದ್ದಾರೆ. “ಮಾನವನು ಕರ್ತವ್ಯ ಪ್ರಜ್ಞೆಯನ್ನು ಕಳೆದು ಕೊಂಡರೆ ನೀವು ಅಂತ್ಯ ದಿನವನ್ನು ನಿರೀಕ್ಷಿಸಬಹುದು” ಎಂದು ಪ್ರವಾದಿ(ಸ) ಮುನ್ನೆಚ್ಚರಿಕೆ ನೀಡಿದ್ದಾರೆ. ಕರ್ತವ್ಯ ಪ್ರಜ್ಞೆಯಿಲ್ಲದ ವ್ಯಕ್ತಿ, ಸಮಾಜ ಮತ್ತು ಸರಕಾರವು ನಾಶದ ಅಂಚಿನಲ್ಲಿದೆಯೆಂಬ ಸೂಚನೆಯನ್ನು ಪ್ರವಾದಿಯವರು(ಸ) ನೀಡಿದ್ದಾರೆ.

ಅಬೂ ಸುಫ್‍ಯಾನ್(ರ), ಅವರು ವಿಶ್ವಾಸಿಯಾಗುವುದಕ್ಕಿಂತ ಮುಂಚೆ ಪ್ರವಾದಿಯವರ(ಸ) ರಾಯಭಾರದ ಕುರಿತು ಹಿರ್ಕಲ್ ರಾಜನ ಮುಂದೆ ವಿವರಿಸಿದ್ದರು. ಹಿರ್ಕಲ್ ಕೇಳಿದರು: “ಮುಹಮ್ಮದ್ ನಿಮಗೆ ಯಾವ ಆದೇಶ ನೀಡದ್ದಾರೆ?”
ಅಬೂ ಸುಫ್ಯಾನ್: “ನಮಾಝ್, ಸತ್ಯನಿಷ್ಠೆ, ಪ್ರಾಮಾಣಿಕತೆ, ಒಪ್ಪಂದ ಪಾಲನೆ, ಕರ್ತವ್ಯ ನಿರ್ವಹಣೆ- ಇವು ಮುಹಮ್ಮದ್ ಜನರಿಗೆ ನೀಡುತ್ತಿರುವ ಆದೇಶ.”

“ಓರ್ವರೊಡನೆ ಏನಾದರೂ ಮಾತಾಡಿದರೆ, ಆ ಮಾತು ಒಂದು ಹೊಣೆಗಾರಿಕೆ (ಅಮಾನತ್) ಆಗಿದೆ” ಎಂಬ ಪ್ರವಾದಿ ವಚನವು ಅತಿ ಚಿಕ್ಕ ವಿಷಯದಲ್ಲಿಯೂ ಪ್ರಾಮಾಣಿಕತೆ ಪಾಲಿಸಬೇಕೆಂದು ಎಚ್ಚರಿಸುತ್ತದೆ. “ಪ್ರಾಮಾಣಿಕತೆ (ಅಮಾನತ್) ಇಲ್ಲದವನಿಗೆ ಈಮಾನಿಲ್ಲ. ಕರಾರು ಪಾಲಿಸದವನಿಗೆ ಧರ್ಮವಿಲ್ಲ” ಎಂದು ಇನ್ನೊಂದೆಡೆ ಪ್ರವಾದಿಯವರು(ಸ) ಹೇಳಿದ್ದಾರೆ.

3. ಸದ್ಗುಣ:


ಓರ್ವರು ಹಲವೊಮ್ಮೆ ಕೇವಲ ಗುಣ ನಡತೆಗಳಿಂದ ಮಿತ್ರ ಅಥವಾ ಶತ್ರುವಾಗುತ್ತಾರೆ. ವಿಶ್ವಾಸಿಯು ಯಾವಾಗಲು ಉತ್ತಮ ಸದ್ಗುಣ ಸಂಪನ್ನನಾಗಿರಬೇಕು. “ನೀವು ಒರಟು ಸ್ವಭಾವಿ ಮತ್ತು ಕಠೋರ ಹೃದಯದವರಾಗಿರುತ್ತಿದ್ದರೆ ಜನರು ನಿಮ್ಮ ಬಳಿಗೆ ಬರುತ್ತಿರಲಿಲ್ಲ” (ಆಲಿ ಇಮ್ರಾನ್ : 159) ಎಂದು ಕುರ್‍ಆನ್ ಪ್ರವಾದಿಯವರನ್ನು(ಸ) ಎಚ್ಚರಿಸಿದೆ.

ಜನರು ಎಷ್ಟೇ ಒರಟಾಗಿ ಮಾತಾಡಿದರೂ ವಿಶ್ವಾಸಿಯು ಸೌಮ್ಯತೆಯನ್ನು ತೊರೆಯುವುದಿಲ್ಲ. ಪ್ರವಾದಿಯವರು(ಸ) ಹೇಳಿದರು: “ಜನರೊಡನೆ ಹೆಚ್ಚು ಬೆರೆತು ಅವರ ಉಪಟಳವನ್ನು ಸಹಿಸುವ ವಿಶ್ವಾಸಿಯು, ಅವರ ಉಪಟಳವನ್ನು ಸಹಿಸಲಾಗದ ವಿಶ್ವಾಸಿಗಿಂತ ಉತ್ತಮನು.” (ಅಹ್ಮದ್)

4. ಸಮ್ಮತಾರ್ಹ ಆಹಾರ ಸಂಪಾದನೆ:


ಮಾತು ಕೃತಿಗಳಲ್ಲಿ ಸಜ್ಜನಿಕೆಯನ್ನು ಪಾಲಿಸುವ ಓರ್ವ ವಿಶ್ವಾಸಿಗೆ ಪರಿಶುದ್ಧ ಮಾರ್ಗಗಳಿಂದ ವಿನಾ ಆಹಾರ ಸಂಪಾದನೆ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲ, ಅದು ಕಡ್ಡಾಯವಾಗಿದೆ.

ಪ್ರವಾದಿಯವರು(ಸ) ಹೇಳಿದ್ದಾರೆ: “ಸಮ್ಮತಾರ್ಹ ಆಹಾರ ಸಂಪಾದನೆಯು ಕಡ್ಡಾಯ ಕರ್ಮಗಳ ಬಳಿಕದ ಕಡ್ಡಾಯ ಕರ್ತವ್ಯವಾಗಿದೆ. (ತ್ವಬ್ರಾನಿ, ಬೈಹಕಿ)

ಅಕ್ರಮ ಮಾರ್ಗದ ಆಹಾರ ಸಂಪಾದನೆಯು ಹಲವೊಮ್ಮೆ ಪ್ರಾರ್ಥನೆಯ ತಿರಸ್ಕಾರದ ಕಾರಣವಾಗುವುದೆಂದು ಪ್ರವಾದಿಯವರು(ಸ) ಎಚ್ಚರಿಸಿರುವುದು ಇಲ್ಲಿ ಗಮನಾರ್ಹ.

ಸನ್ಮಾರ್ಗದಲ್ಲಿ ಆಹಾರ ಸಂಪಾದಿಸುವ ಶ್ರೇಷ್ಠತೆಯ ಕುರಿತು ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ: “ಕೆಲವು ಪಾಪಗಳಿವೆ. ನಮಾಝ್, ದಾನ ಅಥವಾ ಹಜ್ಜ್ ಇತ್ಯಾದಿ ಅವುಗಳಿಗೆ ಪರಿಹಾರವಾಗುವುದಿಲ್ಲ. ಆದರೆ ಜೀವನೋಪಾಯದ ಪರಿಶ್ರಮವು ಅದನ್ನು ಅಳಿಸಿ ಬಿಡುತ್ತದೆ.” (ತ್ವಬ್ರಾನಿ)

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *