ಪ್ರೀತಿಸಲು ಓರ್ವರು ಇರುವಾಗ ಮತ್ತೋರ್ವ ಪ್ರೇಮಿ ಮನೆಗೆ ನುಸುಳುವುದು ಹೇಗೆ?

@ ಇಬ್ನು ಮುಹಮ್ಮದ್

ಅನಿರೀಕ್ಷಿತವಾದ ಮಳೆ ಪ್ರಾರಂಭವಾಯಿತು. ಮಳೆಯು ಜೋರಾದಂತೆ ವಾಹನ ಮುಂದೆ ಚಲಿಸುವುದು ತ್ರಾಸದಾಯಕವಾಗುತ್ತಾ ಬಂತು. ಕೊನೆಗೆ ಒಂದೆಡೆ ನಿಲ್ಲಿಸಿ ಪಕ್ಕದಲ್ಲಿದ್ದ ಅಂಗಡಿಯೊಳಗೆ ಪ್ರವೇಶಿಸಿದೆ. ಆದರೆ ಮಳೆ ಮತ್ತು ಜೋರಾಗುತ್ತಾ ಸುರಿಯುತ್ತಿತ್ತು. ಮೊಬೈಲು ತೆರೆದು ವಾರ್ತೆಗಳತ್ತ ದೃಷ್ಟಿ ಹಾಯಿಸಿದೆ. ಒಂದೇ ಸಮಯದಲ್ಲಿ ಒಂದೇ ತರಹದ ಹಲವು ವಾರ್ತೆಗಳು ಗಮನಕ್ಕೆ ಬಂತು. ಪ್ರಿಯಕರನ ಜೊತೆ ಸೇರಿ ಪತ್ನಿಯಿಂದ ಪತಿಯ ಕೊಲೆಗೆ ಯತ್ನವೆಂಬುದೇ ಹೆಚ್ಚಿನ ವರದಿಯಾಗಿತ್ತು. ಬೇರೆ ಬೇರೆ ಕಡೆಗಳಿಂದ ಒಂದೇ ಸಮಯದಲ್ಲಿ ಬಂದ ವಾರ್ತೆಯಿದು. ಸಂಕ್ಷಿಪ್ತವಾಗಿ ಹೇಳುವುದಾದರೆ ಇದೊಂದು ಸಾಂಕ್ರಾಮಿಕ ರೋಗವಾಗಿ ಮಾರ್ಪಡುವಂತಿತ್ತು.

ದಾಂಪತ್ಯ ಸಂಬಂಧವೆಂಬುದು ಜಗತ್ತಿನ ಅತಿ ಶ್ರೇಷ್ಠವಾದ ಸಂಬಂಧಗಳಲ್ಲಿ ಒಂದಾಗಿದೆ. ವಸ್ತ್ರಗಳಂತೆ ಅಂಟಿಕೊಂಡಿರುವ ಸಂಬಂಧ. ಯಾರೂ ಇಲ್ಲದ ಸ್ಥಿತಿಯಲ್ಲಿ ಎಲ್ಲವೂ ಆಗುವಂತಹ ಸ್ಥಿತಿ. ಕುಟುಂಬ ಸಂಬಂಧದ ಮೈಲುಗಲ್ಲು ಈ ಸಂಬಂಧವಾಗಿದೆ.

ಹೊರ ದೇಶಗಳು ಹೊರ ರಾಜ್ಯಗಳಿಂದ ಕೇಳಿ ಬರುತ್ತಿರುವ ವಾರ್ತೆಗಳು ಈಗ ನಮ್ಮ ಊರು ಗಲ್ಲಿಗಳಲ್ಲಿ ಕೇಳಿ ಬರತೊಡಗಿದೆ. ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಕೊಲ್ಲುವ ಪ್ರಕರಣಗಳು ವ್ಯಾಪಕವಾಗುತ್ತಿದೆ. ಮೂರ್ನಾಲ್ಕು ಮಕ್ಕಳನ್ನು ಹೊಂದಿದಂತಹ ಮಹಿಳೆಯರು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಹಾಕುವ ವರದಿಗಳಿಗೆ ಇಂದು ಕೊರತೆಯಿಲ್ಲ. ತನ್ನ ಹಸ್ತದಿಂದಲೇ ತನ್ನ ಪತಿಯನ್ನು ಕೊಂದು ಮುಗಿಸುವ ಹಂತಕ್ಕೆ ಮಹಿಳೆ ಬೆಳೆದಿದ್ದಾಳೆ. ಹಿಂದಿನ ದಿನಗಳಲ್ಲಿ ಇಂತಹ ವರದಿಗಳು ಅನ್ಯ ರಾಜ್ಯಗಳಿಂದ ಕೇಳಿ ಬರುತ್ತಿತ್ತು.

ಪ್ರೀತಿ, ಸ್ನೇಹ ಧಾರೆಯೆರೆಯಲು ಓರ್ವರು ಇರುವಾಗ ಮತ್ತೋರ್ವ ಪ್ರೇಮಿ ಮನೆಗೆ ನುಸುಳುವುದಾದರೂ ಹೇಗೆ ಎಂಬುದು ಅಧ್ಯಯನ ಮಾಡಬೇಕಾದ ವಿಚಾರವಾಗಿದೆ. ಒಂದೇ ವೇಳೆ ಓರ್ವ ಮಹಿಳೆಗೆ ಈರ್ವರನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಹೇಳುವುದಿದೆ. ಕುಟುಂಬ ಸಂಬಂಧಗಳಿಂದ ಸ್ನೇಹ, ಪ್ರೀತಿ ಎಂಬುದು ಮನೆಯ ಮೆಟ್ಟಿಲಿಳಿದು ಹೊರಗೆ ಹೋಗುತ್ತಿದೆಯೇ ಎಂಬುದರ ಕುರಿತು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಯೆಂಬುದು ಕುಟುಂಬದಲ್ಲಿ ಧಾರಾಳವಾಗಿರಬೇಕು. ಕೇವಲ ಲೈಂಗಿಕವಾದ ಸಂಬಂಧ ಮಾತ್ರವಿದ್ದರೆ ಅದು ಕಡಿಮೆಯಾದಂತೆ ಘಟಿಸಬಾರದಂತಹ ಘಟನೆಗಳು ಸಂಭವಿಸಲು ಕಾರಣವಾಗುತ್ತದೆ.

ಸಮಾಜವು ದುರ್ಬಲಗೊಳ್ಳುವ ಮುಖ್ಯ ಕಾರಣಗಳಲ್ಲಿ ಒಂದು ಕುಟುಂಬ ಸಂಬಂಧದಲ್ಲಿನ ಬಿರುಕು ಎಂಬುದಾಗಿದೆ. ಪತಿ-ಪತ್ನಿಯರ ನಡುವಿನ ಜಗಳವನ್ನು ನೋಡಿ ಪಿಶಾಚಿಯು ಅತೀ ಹೆಚ್ಚು ಸಂತೋಷಗೊಳ್ಳುವನು ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ.

ಕುಟುಂಬವೆಂಬುದು ಪತಿ ಮತ್ತು ಪತ್ನಿಯೆಂಬ ಎರಡು ಶಕ್ತಿಗಳ ಸಮ್ಮಿಲನವಾಗಿದೆ. ಕುಟುಂಬದ ಅದು ಭದ್ರತೆಯ ತಳಹದಿಯಾಗಿದೆ. ಈ ಅಡಿಪಾಯದಲ್ಲಿ ಬಿರುಕುಂಟಾದರೆ ಕುಟುಂಬ ಹೆಚ್ಚು ಬಾಳಿಕೆ ಬರದು. ಸಣ್ಣ ಸಣ್ಣ ಬಿರುಕು ಉಂಟಾದರೂ ಅದು ಕುಟುಂಬವನ್ನು ಬಾಧಿಸುತ್ತದೆ. ಇಂದು ಅದು ನಡೆಯುತ್ತಿದೆ. ಮೂವತ್ತೊಂದು ವರ್ಷಗಳ ಕಾಲ ಒಂದಾಗಿ ಜೀವಿಸಿ ದವರು. ಪರಸ್ಪರ ಬೇರ್ಪಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಅದು ಇಂದು ಸಾಮಾನ್ಯವಾಗಿದೆ.

ಕುಟುಂಬ ಸಂಬಂಧವೆಂಬುದು ಸಂಕೋಲೆಯಂತೆ. ಅದು ಒಂದಾಗಿ ನಿಂತರೆ ಬಲಿಷ್ಠವಾಗಿರುವುದು. ಅದನ್ನುಪಯೋಗಿಸಿ ಎಂತಹದ್ದನ್ನೂ ದಮನಿಸಬಹುದು. ಅದು ತುಂಡಾಗಿ ಹೋದರೆ ಬಳಿಕ ಅದು ಒಂದು ಭಾರ ಮಾತ್ರವಾಗಿರುತ್ತದೆ. ಹಾಗೆಯೇ ಕುಟುಂಬವೂ ಜೀವನವೂ ಇತರರಿಗೆ ಭಾರವಾಗಿ ಪರಿಣಮಿಸುವುದು.

ಕುಟುಂಬ ಸಂಬಂಧಗಳ ಬಗ್ಗೆ ನಾವು ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. ಆ ಸಮಯವು ನಮ್ಮಿಂದ ಮೀರುತ್ತಿದೆ. ಮಗಳು ಒಂದು ದಾರಿಯಾದರೆ ಮಾತೆ ಮತ್ತೊಂದು ಹಾದಿ ಎಂಬಂತಹ ವಾತಾವರಣ ಕುಟುಂಬದಲ್ಲಿ ಮೂಡಿ ಬರಬಾರದು. ಕುಟುಂಬದಲ್ಲಿ ಬಿರುಕು ಮೂಡುವಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಬಳಿಕ ಅದು ಗಂಭೀರ ಸಮಸ್ಯೆಯಾಗಿ ಮಾರ್ಪಡುವುದು. ಅದು ಮಾರಕವಾಗಿ ಕುಟುಂಬಕ್ಕೆ ಪರಿಣಮಿಸಬಹುದು. ಪ್ರವಾದಿವರ್ಯರ(ಸ) ಕಾಲದಲ್ಲಿ ಯಹೂದಿಗಳ ಕುರಿತು ಹೇಳಿದಾಗ ಕುರ್‍ಆನ್, “ಅವರು ಅಲ್ಲಾಹನು ಒಂದು ಸೇರಿಸಿ ಜೊತೆಯಾಗಿರಬೇಕಾದುದನ್ನು ಕಡಿದು ಹಾಕಿದರು” ಎಂದು ಹೇಳಿದೆ. ಗಾಯಗಳಲ್ಲಿ ಕೀವು ಬರುವುದು ಬಹಳ ಸುಲಭ ಎಂಬುದನ್ನು ನಾವು ಸ್ಮರಿಸಬೇಕು.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *