ಸೋಲೊಪ್ಪಿಕೊಳ್ಳುವುದು

 – ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)

ನನ್ನ ಸೋಲನ್ನು ಒಪ್ಪಿಕೊಳ್ಳುವುದು ಒಂದು ಉತ್ತಮ ಗುಣ. ಹಾಗೆ ಮಾಡಿದರೆ ಮನುಷ್ಯನು ಮತ್ತೆ ಕಷ್ಟಪಟ್ಟು ತನ್ನ ಸೋಲನ್ನು ಗೆಲುವಾಗಿ ಬದಲಾಯಿಸಬಲ್ಲನು. ಸೋಲೊಪ್ಪಿಕೊಳ್ಳುವುದು ಇದೇ ದೃಢ ನಿಶ್ಚಯದ ಪ್ರಕಟನೆಯಾಗಿದೆ. ಸೋತ ಬಳಿಕ ಸೋಲನ್ನು ಒಪ್ಪಿಕೊಳ್ಳುವುದು ಮತ್ತೆ ಗೆಲುವಿನತ್ತ ಬೆಳೆಸುವ ಪ್ರಯಾಣದ ಪ್ರಥಮ ಹೆಜ್ಜೆಯಾಗಿದೆ.

ನಾವು ಸೋತ ಬಳಿಕವೂ ಸೋಲನ್ನು ಒಪ್ಪಿಕೊಳ್ಳದೇ ಇದ್ದರೆ, ನಾವು ಸೋತ ಬಳಿಕ ಎಲ್ಲಿ ನಿಂತಿರುತ್ತೇವೋ ಅಲ್ಲೇ ನಿಂತು ಬಿಡುವೆವು. ಹೊಸ ಪ್ರಯಾಣ ಬೆಳೆಸುವ ಸ್ಥಿತಿಯಲ್ಲಿರಲಾರೆವು.

ಸೋಲನ್ನು ಒಪ್ಪಿಕೊಳ್ಳುವುದೆಂದರೆ ನಾನು ಸ್ಪರ್ಧೆಯ ಓಟದಲ್ಲಿ ಹಿಂದೆ ಬಿದ್ದಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವುದಾಗಿದೆ. ಸೋಲನ್ನು ಒಪ್ಪಿಕೊಳ್ಳದಿದ್ದರೆ ನಾನು ಸ್ಪರ್ಧೆಯ ಓಟದಲ್ಲಿ ಮುಂದಿರುವೆನು ಎಂದು ಹೇಳಿದಂತಾಗುವುದು. ನಿಜವಾಗಿ ಹಿಂದೆ ಇದ್ದು ಮುಂದೆ ಇರುವೆನೆಂಬ ಭ್ರಮೆಯಲ್ಲಿ ಸಿಲುಕಿದವನು ಕಾರ್ಯಕಾರಣದ ಈ ಲೋಕದಲ್ಲಿ ಖಂಡಿತ ಯಶಸ್ಸು ಸಾಧಿಸಲಾರನು.

ಸೋಲನ್ನು ಒಪ್ಪಿಕೊಳ್ಳುವುದು ಪರಾಕ್ರಮವಾಗಿದೆ. ಸೋತ ಬಳಿಕವೂ ಸೋಲನ್ನು ಒಪ್ಪಿಕೊಳ್ಳದಿರುವುದು ಹೇಡಿತನವಾಗಿದೆ. ಮನುಷ್ಯನು ಯಾವಾಗಲೂ ಪರಾಕ್ರಮಿಯಾಗಬೇಕೇ ಹೊರತು ಹೇಡಿಯಾಗಬಾರದು.

ಈ ಲೋಕದಲ್ಲಿ ಒಮ್ಮೆ ಸೋಲಾದರೆ ಮತ್ತೊಮ್ಮೆ ಗೆಲುವಾಗುತ್ತದೆ. ಸೋಲು-ಗೆಲುವುಗಳಿಂದ ಮೇಲೆದ್ದು ಯೋಚಿಸಬಲ್ಲವನೇ ದೊಡ್ಡ ಮನುಷ್ಯ. ಅವನು ಸೋಲು ಗೆಲುವುಗಳಿಂದ ಪ್ರಭಾವಿತನಾಗದೆ ತನ್ನ ಅಭಿಪ್ರಾಯವನ್ನು ರೂಪಿಸುತ್ತಾನೆ. ಸೋಲಿನಿಂದ ಕುಗ್ಗದೆ ಗೆಲುವಿನಿಂದ ಹಿಗ್ಗದೆ ಇರುವವರು ಮಾತ್ರ ತಮ್ಮ ಉನ್ನತ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ಅವರೇ ಈ ಲೋಕದಲ್ಲಿ ತಮ್ಮ ಧ್ಯೇಯವನ್ನು ಸಾಧಿಸುವವರು. ಈ ಉನ್ನತ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳದವರು ಜೀವನದ ಬಿರುಗಾಳಿಗೆ ಸಿಲುಕಿದಾಗ ತತ್ತರಿಸುತ್ತಾರೆ. ಅವರು ತಮ್ಮ ಉದ್ದೇಶಿತ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುವುದಿಲ್ಲ.

ಸೋಲನ್ನು ಒಪ್ಪಿಕೊಂಡವನು ಸೋಲನ್ನೇ ಗೆಲುವಿನ ಸೋಪಾನವಾಗಿ ಮಾಡಿಕೊಳ್ಳುತ್ತಾನೆ. ಏಕೆಂದರೆ ಅವನು ಬಾಹ್ಯ ಜಗತ್ತಿನಲ್ಲಿ ತಾತ್ಕಾಲಿಕವಾಗಿ ಸೋತಿದ್ದಾನೆ ಮಾತ್ರ. ಅವನು ತನ್ನ ಒಳಗಿನ ಲೋಕದಲ್ಲಿ ವಿಜಯಿಯಾಗಿಯೇ ಹೊರ ಹೊಮ್ಮಿದ್ದಾನೆ. ಅವನು ತನ್ನ ದೈಹಿಕ ಸೋಲನ್ನು ತನ್ನ ಮಾನಸಿಕ ಸೋಲಾಗಿ ಮಾರ್ಪಡಲು ಬಿಡಲಿಲ್ಲ. ಯಾರು ಸೋಲನ್ನು ಒಪ್ಪಿಕೊಳ್ಳುವುದಿಲ್ಲವೋ ಅವನು ಆ ವಿಷಯವನ್ನು ತನ್ನ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಡಿಸಿಕೊಳ್ಳುತ್ತಾನೆ. ಅನಂತರ ಅವನು ತಪ್ಪಿನ ಮೇಲೆ ತಪ್ಪು ಮಾಡುತ್ತಾ ಸಾಗುತ್ತಾನೆ. ಅವನು ನಿರಂತರ ಸೋಲುತ್ತಲೇ ಹೋಗುವನು. ಅವನಿಗೆ ಮತ್ತೆ ಗೆಲುವು ಸಾಧಿಸುವ ಅವಕಾಶವೇ ಇರಲಾರದು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *