ಕುರ್‍ಆನ್ ಪಾರಾಯಣದಲ್ಲಿ ಶಿಸ್ತು?

ಪ್ರಶ್ನೆ:ನಮಾಝ್‍ನಲ್ಲಿ ಕುರ್‍ಆನ್ ಅಧ್ಯಾಯಗಳನ್ನು ಓದುವುದರಲ್ಲಿ ಏನಾದರೂ ಶಿಸ್ತು ಇದೆಯೇ? ಅಧ್ಯಾಯಗಳನ್ನು ಕುರ್‍ಆನ್‍ನಲ್ಲಿರುವ ಕ್ರಮಕ್ಕೆ ವಿರುದ್ಧವಾಗಿ ಓದಬಹುದೇ?

ಉತ್ತರ: ಕುರ್‍ಆನ್ ಪಾರಾಯಣ ಮಾಡುವಾಗ ಪಾಲಿಸಬೇಕಾದ ಶಿಸ್ತುಗಳನ್ನೆಲ್ಲಾ ನಮಾಝ್‍ನಲ್ಲಿ ಸೂರಃಗಳನ್ನು ಓದುವಾಗಲೂ ಪಾಲಿಸಬೇಕು. ಅದು ಸುಂದರವೂ, ಸುಸ್ಪಷ್ಟವೂ ಭಕ್ತಿಯಿಂದ ಕೂಡಿದ್ದೂ ಆಗಿರಬೇಕು ಎಂಬುದು ಕುರ್‍ಆನ್ ಪಾರಾಯಣದಲ್ಲಿನ ಪ್ರಥಮ ಶಿಸ್ತಾಗಿದೆ.

ಪ್ರವಾದಿ(ಸ) ಕಲಿಸಿದ್ದಾರೆ. “ಕುರ್‍ಆನ್‍ನ ಮೂಲಕ ನಿಮ್ಮ ಸ್ವರಗಳನ್ನು ಸುಂದರಗೊಳಿಸಿರಿ.” ಇನ್ನೊಂದು ಹದೀಸ್‍ನಲ್ಲಿ ಅವರು(ಸ) ಹೇಳಿದ್ದಾರೆ, “ಯಾರು ಪಾರಾಯಣ ಆಲಿಸುವಾಗ ಅವನು ಭಕ್ತನೆಂದು ನಿಮಗೆ ಭಾಸವಾಗುತ್ತದೆಯೋ, ಅವನೇ ಕುರ್‍ಆನ್‍ನ ಮೂಲಕ ಸ್ವರವನ್ನು ಉತ್ತಮಗೊಳಿಸಿದವನಾಗಿರುತ್ತಾನೆ.”

ತಿಲಾವತ್‍ನ ಸುಜೂದ್‍ನ ಸ್ಥಳಗಳಿಗೆ ತಲುಪುವಾಗ ಸುಜೂದ್ ನಿರ್ವಹಿಸುವುದೂ ಕುರ್‍ಆನ್ ಪಾರಾಯಣದ ಶಿಸ್ತುಗಳಲ್ಲಿ ಸೇರಿದೆ. ಕರುಣೆಯನ್ನು ಪರಾಮರ್ಶಿಸುವ ಸೂಕ್ತಗಳನ್ನು ಓದುವಾಗ ಅಲ್ಲಾಹನ ಕರುಣೆಗಾಗಿ ಪ್ರಾರ್ಥಿಸುವುದು, ಶಿಕ್ಷೆಯನ್ನು ಪರಾಮರ್ಶಿಸುವ ಸೂಕ್ತಗಳನ್ನು ಓದುವಾಗ ಶಿಕ್ಷೆಗಳಿಂದ ಅಭಯ ಯಾಚಿಸುವುದು ಅಲ್ಲಾಹನ ಮಹತ್ವದ ಕುರಿತು ಸೂಕ್ತಗಳನ್ನು ಪಾರಾಯಣಗೈಯುವಾಗ ಅವನಿಗೆ ಸ್ತುತಿ ಸ್ತೋತ್ರಗಳನ್ನು ಅರ್ಪಿಸುವುದು ಮೊದಲಾದವುಗಳು ನಮಾಝ್‍ನಲ್ಲೂ ನಮಾಝ್ ಅಲ್ಲದ ವೇಳೆಯಲ್ಲೂ ಕುರ್‍ಆನ್ ಪಾರಾಯಣ ಮಾಡುವಾಗ ಪಾಲಿಸಬೇಕಾದ ಸುನ್ನತ್ ಗಳಾಗಿವೆ. ಇವು ಹದೀಸ್‍ಗಳ ಮೂಲಕ ದೃಢಪಟ್ಟಿದೆ ಎಂದು ಇಮಾಮ್ ನವವಿ(ರ) ಪ್ರಸ್ತಾಪಿಸಿದ್ದಾರೆ.

ನಮಾಝ್‍ನಲ್ಲಿ ಪಾರಾಯಣಗೈಯಲಾಗುವ ಸೂಕ್ತಗಳು ಕುರ್‍ಆನ್‍ನಲ್ಲಿರುವ ಕ್ರಮ ಪ್ರಕಾರವಾಗಿರಬೇಕು ಅಥವಾ ಅದಕ್ಕೆ ವಿರುದ್ಧವಾಗಿರಬೇಕು ಎಂದು ಸೂಚಿಸುವ ಪುರಾವೆಗಳಿಲ್ಲ. ನಮಾಝ್ ನಿರ್ವಹಿಸುವವನಿಗೆ ಕುರ್‍ಆನ್‍ನಿಂದ ಓದಲು ಸಾಧ್ಯವಿರುವ ಭಾಗವನ್ನು ಓದಲು ತಿಳಿಯುವಷ್ಟು ಓದಬಹುದು ಎಂದು ಆಧಾರಗಳು ಸೂಚಿಸುತ್ತವೆ. ಆದರೆ ಆಯತ್‍ಗಳ ವಿಷಯದಲ್ಲಿ ಅದು ಕುರ್‍ಆನ್‍ನಲ್ಲಿರುವ ಕ್ರಮ ಪ್ರಕಾರವೇ ಓದಬೇಕು. ಮೊದಲಿನ ರಕಅತ್‍ನಲ್ಲಿ ಎರಡನೇ ರಕಅತ್‍ಗಿಂತ ಅಲ್ಪ ಹೆಚ್ಚು ಓದುವುದು ಪ್ರವಾದಿಯವರ(ಸ) ಚರ್ಯೆಯಾಗಿತ್ತು ಎಂದು ಬುಖಾರಿ, ಮುಸ್ಲಿಮ್, ಅಬೂ ಕತಾದರಿಂದ ಉದ್ಧರಿಸಲ್ಪಟ್ಟ ಒಂದು ಹದೀಸ್‍ನಲ್ಲಿ ಬಂದಿದೆ.

ನಮಾಝ್‍ನಲ್ಲಿ ಸೂರಃಗಳ ಅಲ್ಪ ಭಾಗ ಓದುವುದು, ಸೂರಃವನ್ನು ವಿಭಜಿಸಿ ಎರಡು ರಕಅತ್‍ಗಳಲ್ಲಿ ಓದುವುದು, ಕುರ್‍ಆನ್‍ನಲ್ಲಿರುವ ಅಧ್ಯಾಯಗಳ ಕ್ರಮಗಳ ಸಂಖ್ಯೆಗಳಿಗೆ ವಿರುದ್ಧವಾಗಿ ಮೊದಲ ಸೂರಃ ಕೊನೆಯಲ್ಲೂ ಕೊನೆಯ ಸೂರಃ ಮೊದಲೂ ಓದುವುದು ಅಪ್ರಿಯವಾಗಿದೆ ಎಂದು ಇಮಾಮ್ ಮಾಲಿಕ್ ಹಾಗೂ ಇಮಾಮ್ ಶಾಫಿಈ ಅಭಿಪ್ರಾಯ ಪಟ್ಟಿದ್ದಾರೆ. ಸೂರಃಗಳನ್ನು ಕುರ್‍ಆನ್ ನಲ್ಲಿರುವ ಕ್ರಮಕ್ಕೆ ವಿರುದ್ಧವಾಗಿ ಓದುವುದು ಕರಾಹತ್ತಾಗಿದೆ ಎಂದು ಇಮಾಮ್ ಅಹ್ಮದ್ ಹಾಗೂ ಹನಫಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *