ರಮಝಾನಿಗೆ ವಿದಾಯ ಕೋರುವ ಮುನ್ನ…

@ ಅಬೂ ಸಲ್‍ವಾನ್

ಆದಿಪಿತ ಆದಮ್(ಅ) ಮತ್ತು ಹವ್ವಾರನ್ನು ಸೃಷ್ಟಿಸಿರುವುದರಲ್ಲಿ ನಮಗೆ ದಾರಾಳ ಸಂದೇಶವಿದೆ. ಯಾವ ರೀತಿ ಮನುಷ್ಯನನ್ನು ಶೈತಾನನು ಪ್ರಲೋಭಿಸುತ್ತಾನೆಂಬುದಕ್ಕೆ ಬಹಳ ಸ್ಪಷ್ಟವಾದ ಉದಾಹರಣೆಯನ್ನು ಅಲ್ಲಾಹನು ಈ ಮೂಲಕ ನಮಗೆ ತಿಳಿಸಿದ್ದಾನೆ.

ಅಲ್ಲಾಹನು ಭೂಮಿ ಆಕಾಶದಷ್ಟು ವಿಶಾಲವಾದ ಸ್ವರ್ಗಕ್ಕೆ ಆದಮ್(ಅ) ಮತ್ತು ಹವ್ವಾರನ್ನು ಕಳುಹಿಸಿದನು. ಒಂದು ವೃಕ್ಷವನ್ನು ಹೊರತು ಪಡಿಸಿ ಅವರಿಗೆ ಎಲ್ಲಿಗೆ ಬೇಕಾದರೂ ಹೋಗಲು ವಿಹರಿಸಲು ಅವರಿಗೆ ಅಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಆದರೆ ಅಲ್ಲಿ ಅವರಿಂದ ಒಂದು ಕೊರತೆ ಸಂಭವಿಸಿತು. ಅದರಿಂದಾಗ ಅವರು ಆ ವಿಶಾಲವಾದ ಸ್ವರ್ಗದಿಂದಲೇ ಹೊರ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದೇವಾದೇಶವನ್ನು ಪಾಲಿಸಿ ಆ ವೃಕ್ಷವನ್ನು ಅವರು ನಿರ್ಲಕ್ಷಿಸಿದ್ದರೆ ಸಮಸ್ಯೆಯೇ ಉಂಟಾಗುತ್ತಿರಲಿಲ್ಲ. ಆದರೆ ಆ ವಿಶಾಲವಾದ ಜಗತ್ತಿನಲ್ಲಿ ಆ ಒಂದು ವೃಕ್ಷದತ್ತ ಆದಮ್(ಅ)ರನ್ನು ಸೆಳೆಯಲು ಪಿಶಾಚಿಗೆ ಸಾಧ್ಯವಾಯಿತು. ವಿಶಾಲವಾದ ಒಳಿತಿನ ಜಗತ್ತಿನಿಂದ ಕೆಡುಕಿನಿಂದ ಆವೃತವಾದ ಇಕ್ಕಟ್ಟಿನ ಸ್ಥಳಕ್ಕೆ ತರಬೇಕೆಂಬುದು ಪಿಶಾಚಿಯ ಉದ್ದೇಶವಾಗಿತ್ತು. ಅದರಲ್ಲಿ ಆತ ಯಶಸ್ಸು ಕಂಡನು.

ಇಂದು ಕೂಡಾ ಶೈತಾನನು ಅದನ್ನೇ ಮಾಡುತ್ತಿದ್ದಾನೆ. ಅದರಲ್ಲಿ ಹೆಚ್ಚಿನವರು ದುರ್ಬಲ ಮನಸ್ಸಿನವರು ಬಲಿಯಾಗುತ್ತಾರೆ. ಸ್ವರ್ಗದ ಕುರಿತು ಕುರ್‍ಆನ್ ಪರಾಮರ್ಶಿಸುವಾಗ ವಿಶಾಲತೆಯನ್ನೂ ನರಕದ ವಿಚಾರ ಬಂದಾಗ ಇಕ್ಕಟ್ಟಿನಿಂದ ಕೂಡಿದ್ದಾಗಿ ಇರುವುದಾಗಿ ಹೇಳುತ್ತದೆ. ವಿಶ್ವಾಸವೆಂಬುದು ಹೃದಯ ವೈಶಾಲ್ಯವಾಗಿದೆ. ಹೃದಯದ ಸಂಕೀರ್ಣತೆ ಪಿಶಾಚಿಯದ್ದಾಗಿದೆ.

ಹೃದಯ ವೈಶಾಲ್ಯ ರಮಝಾನ್ ಚಾಲನೆ ನೀಡುತ್ತದೆ. ಮನುಷ್ಯನ ಸ್ವೇಚ್ಛೆ ಮತ್ತು ಚಿತ್ತಗಳನ್ನು ಪಿಶಾಚಿ ಗುರಿಯಾಗಿರಿಸುತ್ತದೆ. ಆ ಇಚ್ಛೆ ಮತ್ತು ಚಿತ್ತಾಕಾಂಕ್ಷೆಗಳನ್ನು ತಡೆದು ರಮಝಾನ್ ಹಿಡಿದಿಡುತ್ತದೆ. ಒಂದು ವಿಚಾರವನ್ನು ಇಪ್ಪತ್ತೊಂದು ದಿವಸಗಳ ಕಾಲ ನಿರಂತರವಾಗಿ ಮಾಡಿದರೆ ಅದು ಜೀವನದ ಭಾಗವಾಗಿ ಮಾರ್ಪಡುತ್ತದೆ. ಅಂದರೆ ರಮಝಾನಿನ ಮೂವತ್ತು ದಿವಸಗಳ ನಿರಂತರವಾದ ಆಚಾರ ಅನುಷ್ಟಾನಗಳು ಆ ತಿಂಗಳು ಕೊನೆಗೊಳ್ಳುವವರೆಗೆ ಎಂಬುದು ಹಲವರ ಅನುಭವವಾಗಿದೆ.

ರಮಝಾನ್ ಮುಗಿದ ತಕ್ಷಣ ಆ ತಕ್ವಾ ಹೊರಟು ಹೋಗುತ್ತದೆ. ಇಲ್ಲಿ ಪಿಶಾಚಿಯು ತನ್ನ ಪ್ರಾಬಲ್ಯ ಮೆರೆಯುತ್ತಾನೆ. ರಮಝಾನಿನಲ್ಲಿ ಬಂಧಿಸಲ್ಪಟ್ಟ ಪಿಶಾಚಿಗಳನ್ನು ಸ್ವಾಗತಿಸಲು ಸಿದ್ಧರಾಗಿರುವ ರೀತಿಯಲ್ಲಿ ಜನರು ವರ್ತಿಸುವುದು ಕಂಡು ಬರುತ್ತದೆ. ಕೆಲವರಂತೂ ರಮಝಾನಿನಲ್ಲಿ ಏನಾದರೂ ಜಗಳ ಸಂಭವಿಸಿದರೆ ಈಗ ರಮಝಾನ್ ಉಪವಾಸ ಇದೆ, ಈಗ ಬೇಡ ಯಾವುದಕ್ಕೂ ರಮಝಾನ್ ಮುಗಿಯಲಿ ಆ ಮೇಲೆ ನೋಡೋಣ ಎಂದು ಬೆದರಿಕೆ ಹಾಕುವುದನ್ನೂ ನಾವು ಕಾಣುತ್ತೇವೆ. ಮತ್ತೆ ಅದೇ ಹಿಂದಿನ ಸ್ಥಿತಿಗೆ ತಲುಪುವುದನ್ನು ನಾವು ಕಾಣುತ್ತೇವೆ. ರಮಝಾನಿನಲ್ಲಿ ಮಾತ್ರ ಮುಸ್ಲಿಮರಾಗಿ ರುವವರನ್ನೂ ನಾವು ಕಾಣುತ್ತೇವೆ.

ಎದ್ದು ನಿಂತು ಕುಳಿತು ಎಡೆಬಿಡದೆ ಕುರ್‍ಆನ್ ಪಾರಾಯಣದಲ್ಲಿ ನಿರತರಾದವರನ್ನು ನಾವು ಕಾಣುತ್ತೇವೆ. ಎಷ್ಟೋ ಬಾರಿ ಕುರ್‍ಆನ್ ಸಂಪೂರ್ಣ ಓದಿ ಮುಗಿಸುವವರನ್ನೂ ಕಾಣುತ್ತೇವೆ. ಅಲ್ ಹಮ್ದುಲಿಲ್ಲಾಹ್. ಬಹಳ ಸಂತೋಷದ ವಿಚಾರ. ಕುರ್‍ಆನಿನೊಂದಿಗಿರುವ ಒಡನಾಟವನ್ನು ಅಭಿನಂದಿಸಲೇಬೇಕು. ಆದರೆ ಅದು ಆ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ನಮ್ಮ ಜೀವನದ ಭಾಗವಾಗಬೇಕು. ಅದು ನಮ್ಮ ಬಾಳಿನ ಬೆಳಕಾಗಬೇಕು. ಮುಂದಿನ ರಮಝಾನಿಗೆ ದೂಳು ಕೊಡವಿ ಕುರ್‍ಆನ್ ತೆರೆಯುವ ಸಂದರ್ಭ ನಮ್ಮಲ್ಲಿ ಬರಲೇಬಾರದು.

ಅದೇ ರೀತಿ ನಮಾಝ್‍ನ ವಿಚಾರದಲ್ಲಿಯೂ ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕು. ಅದನ್ನು ಕೂಡಾ ಜೀವನದಲ್ಲಿ ಸಂಪೂರ್ಣವಾಗಿ ಸಂಘಟಿತವಾಗಿ ಅಳವಡಿಸಿಕೊಳ್ಳಬೇಕು. ಶವ್ವಾಲ್ ಚಂದ್ರ ದರ್ಶನವಾಗಿ ಈದ್ ಮುಗಿದ ಬಳಿಕ ಮಸೀದಿ ಬಿಕೋ ಎನ್ನತೊಡಗುತ್ತದೆ. ಅಲ್ಲಿ ರಮಝಾನಿನಲ್ಲಿದ್ದ ಜನ ಜಂಗುಳಿ ಇರುವುದಿಲ್ಲ. ಆ ಲವಲವಿಕೆ ಜನರಲ್ಲಿರುವುದಿಲ್ಲ. ಮಸೀದಿ ತುಂಬಾ ಹರಡಿಟ್ಟಿದ್ದ ಚಾಪೆ ಚದ್ದರಗಳಲ್ಲಿ ಕೆಲವೊಂದನ್ನು ಹೊರತು ಪಡಿಸಿ ಉಳಿದವುಗಳನ್ನು ಮಡಚಿಡಲಾಗುತ್ತದೆ. ಮತ್ತೆ ಅದನ್ನು ಬಿಚ್ಚಲು ಶಅಬಾನ್ ಬರಬೇಕು ಅಥವಾ ಯಾವುದಾದರೂ ಕಾರ್ಯಕ್ರಮ ನಡೆಯಬೇಕು. ಭಕ್ತರಾಗಿ ಮಸೀದಿಯತ್ತ ಟೋಪಿ ಜುಬ್ಬಾ ಧರಿಸಿ ಧಾವಿಸಿದವರು ಸಂಪೂರ್ಣ ಬದಲಾಗಿ ಪಕ್ಕಾ ವ್ಯವಹಾರಸ್ಥರಾಗಿ ಮಾರ್ಪಡುವುದು ಕಂಡು ಬರುತ್ತದೆ. ತರಬೇತಿಯ ಮಾಸವೆಂಬುದು ಆ ತಿಂಗಳಿಗೆ ಮಾತ್ರ ಸೀಮಿತವಾಗುತ್ತದೆ, ನಿಜವಾಗಿ ಅದು ಹಂತ ಹಂತವಾಗಿ ಜೀವನದಲ್ಲಿ ಅನುಷ್ಠಾನಿಸಬೇಕು. ಇದಕ್ಕೆ ಹೊರತಾಗಿದ್ದರೆ ಪ್ರವಾದಿವರ್ಯರು(ಸ) ಹೇಳಿದ ಮಾತಿಗೆ ಅದು ಪೂರಕವಾಗಿರುತ್ತದೆ. “ಹಸಿವು ದಾಹ ಹೊರತುಪಡಿಸಿ ಬೇರೇನೂ ಗಳಿಸಲು ಸಾಧ್ಯವಾಗದ ಉಪವಾಸಿಗರು.”

ಆ ಹಸಿವು ದಾಹದಿಂದ ಪಡೆದ ತರಬೇತಿ ಜೀವನದಲ್ಲಿ ಅನುಷ್ಠಾನಕ್ಕೆ ಬರದೇ ಇದ್ದರೆ ಅದು ವಿಫಲವೆಂಬುದನ್ನು ಅರ್ಥೈಸಿಕೊಳ್ಳಬೇಕು. ಮರು ದಿನವೇ ಸಂಪೂರ್ಣವಾಗಿ ಪಿಶಾಚಿಯ ಜೀವನ ಶೈಲಿಯನ್ನು ಅರಗಿಸಿಕೊಳ್ಳುವ ತವಕ ಪಿಶಾಚಿಯನ್ನೇ ಆಶ್ಚರ್ಯಕ್ಕೀಡು ಮಾಡಬಹುದು. ಜಮಾಅತ್ತಾಗಿ ಕಡ್ಡಾಯ ನಮಾಝ್ ನಿರ್ವಹಿಸಲು ರಮಝಾನಿನಲ್ಲಿ ನಾವು ಮೀಸಲಿಟ್ಟ ಸಮಯವನ್ನು ಆ ನಂತರದ ದಿನಗಳಲ್ಲಿ ಮುಂದುವರಿಸಬೇಕು. ವ್ಯವಹಾರದ ನಿಭಿಡತೆ ನಮಗೆ ಎಷ್ಟೇ ಇದ್ದರೂ ರಮಝಾನನ್ನು ಮಾದರಿಯಾಗಿಸಿಕೊಳ್ಳಬೇಕು. ಅದು ನಮಾಝ್‍ಗೆ ಮಾತ್ರವಲ್ಲ ಜೀವನದ ಎಲ್ಲ ರಂಗಗಳಿಗೆ ರಮಝಾನ್ ಮಾದರಿಯಾದರೆ ಆ ರಮಝಾನ್ ಸಾರ್ಥಕವಾಗುವುದು.

ರಮಝಾನ್ ಒಂದು ಮಹತ್ತರವಾದ ಆರಾಧನಾ ಕರ್ಮವಾಗಿದೆ. ಈ ತಿಂಗಳು ಪುಣ್ಯಗಳ ವಸಂತ ಮಾಸವಾಗಿದೆ. ಪುಣ್ಯಗಳನ್ನು ಗಳಿಸಿಕೊಳ್ಳಲು ವಿಶ್ವಾಸಿಗಳು ಹಾತೊರೆಯುವ ಮಾಸವಿದು. ಅಲ್ಲಾಹನಿಂದ ಬಹಳಷ್ಟು ಕೊಡುಗೆಗಳಿರುವ ಈ ಮಾಸದ ಸದುಪಯೋಗಕ್ಕೆ ಪ್ರತಿಯೊಬ್ಬ ಸತ್ಯವಿಶ್ವಾಸಿ ಕಾತರದಿಂದ ಇರುತ್ತಾನೆ. ಈ ರಮಝಾನಿನ ಉಪವಾಸ ಸತ್ಯ ವಿಶ್ವಾಸಿಯ ಜೀವನದ ಮೈಲುಗಲ್ಲು ಎನ್ನಬಹುದು. ಪುಣ್ಯಗಳನ್ನು ಆವಾಹಿಸಿಕೊಳ್ಳುವ ಸುವರ್ಣಾವಕಾಶದ ಮಾಸವಾಗಿದೆ. ಇದು ಸತ್ಯವಿಶ್ವಾಸಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇಷ್ಟೊಂದು ಸುದೀರ್ಘವಾದ ಆರಾಧನೆ ಇಸ್ಲಾಮಿನಲ್ಲಿ ಬೇರೆ ಕಾಣ ಸಿಗದು. ಹಗಲಿನಲ್ಲಿ ಉಪವಾಸದಂತೆ ರಾತ್ರಿ ಹೊತ್ತಿನಲ್ಲಿಯೂ ಆರಾಧನಾ ನಿರತನಾಗುತ್ತಾರೆ. ರಾತ್ರಿ ಹಗಲುಗಳೆನ್ನದೆ ಪುಣ್ಯಗಳಿಸುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಒಂದು ತಿಂಗಳು ಸಂಪೂರ್ಣವಾಗಿ ಆರಾಧನಾ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಅಲ್ಲಾಹನಿಗಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಸತ್ಯವಿಶ್ವಾಸಿ ತನ್ನ ಜೀವನದ ಮೂಲಕ ಸಾರುತ್ತಾನೆ. ತನ್ನ ಸಂಪತ್ತನ್ನು ಅಲ್ಲಾಹನ ಮಾರ್ಗದಲ್ಲಿ ವ್ಯಯಿಸುತ್ತಾನೆ. ಆದ್ದರಿಂದ ಸತ್ಯ ವಿಶ್ವಾಸಿಯಾದವನಿಗೆ ರಮಝಾನ್ ಮಾತ್ರ ಪುಣ್ಯಗಳಿಸುವ ಮಾಸವಾಗಬಾರದು. ಅದು ಇತರ ತಿಂಗಳಿಗೂ ಪಸರಿಸಬೇಕಾದ ಅಗತ್ಯವಿದೆ. ಈದ್ ಬಂದ ಕೂಡಲೇ ಪುಣ್ಯಗಳನ್ನೆಲ್ಲಾ ಗಂಟು ಮೂಟೆ ಕಟ್ಟಿ ಹೂಳಿಡುವ ಕಾಯಕ ನಡೆಯಬಾರದು. ಕುರ್‍ಆನ್ ಹೇಳಿದ ಪ್ರಕಾರ ಸತ್ಯವಿಶ್ವಾಸಿ ಒಂದು ಉತ್ತಮವಾದ ವೃಕ್ಷವಾಗಿದ್ದಾನೆ. ಅದರಿಂದ ಒಳಿತುಗಳ ಮಾತ್ರ ಸಿಗುವುದು. ಅದರ ಮಧ್ಯೆ ಅದಕ್ಕೆ ಏನಾದರೂ ಕ್ರಿಮಿ ಕೀಟಗಳು ಬಾಧಿಸುತ್ತವೆ. ಕ್ರಿಮಿ ಕೀಟಗಳು ಬಂದಾಗ ತೌಬಾ ಮತ್ತು ಇಸ್ತಿಗ್ಫಾರ್ ಅದಕ್ಕೆ ಸಿಂಪಡಿಸುವ ಔಷಧಿಯಾಗಿದೆ.

ಶೈತಾನನ್ನು ನೀವು ಶತ್ರುವಾಗಿ ಪರಿಗಣಿಸಿರಿ ಎಂದು ಆದಮ್(ಅ)ರಿಗೆ ಅಲ್ಲಾಹನು ಉಪದೇಶಿಸಿರುವುದನ್ನು ಕುರ್‍ಆನ್ ಸ್ಪಷ್ಟಪಡಿಸುತ್ತದೆ. ಆಮಿಶಗಳಿಗೆ ಮಾನವನು ಬೇಗ ಬಲಿಯಾಗುತ್ತಾನೆಂಬುದು ಕೂಡಾ ಇಬ್ಲೀಸನಿಗೆ ತಿಳಿದಿದೆ. ಆದ್ದರಿಂದ ಪಿಶಾಚಿಯ ದುರ್ಭೋದನೆಯ ಕುರಿತು ಹಲವು ಕಡೆ ಎಚ್ಚರಿಸಲಾಗಿದೆ. ಆದರೂ ಮನುಷ್ಯನು ಆ ಪಿಶಾಚಿಯ ಕುಚೇಷ್ಟೆಗೆ ಆಹಾರವಾಗುತ್ತಾನೆ. ರಮಝಾನಿನ ನಂತರದ ದಿನಗಳಲ್ಲಿ ನಾವು ಶೈತಾನನ ಆಮಿಷದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ. ಸತ್ಯವಿಶ್ವಾಸದ ವೈಶಾಲ್ಯದಿಂದ ಕೆಡುಕಿನತ್ತ ಸಾಗದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ನಮ್ಮ ರಮಝಾನನ್ನು ನಾವು ಸಾರ್ಥಕ ಗೊಳಿಸಬೇಕಾಗಿದೆ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *