ಕೋಪ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

ಖ್ಯಾತ ದಾರ್ಶನಿಕ ಸಾಕ್ರೆಟಿಸ್‍ನ ಪತ್ನಿ ಸಾಂತಿಪ್ಪೆ ಕೋಪಿಷ್ಠೆ ಮತ್ತು ಕ್ರೂರ ಸ್ವಭಾವದವಳಾಗಿದ್ದಳು. ಪತಿಯ ಮಹತ್ವವನ್ನು ಅರಿಯಲು ಸಾಂತಿಪ್ಪೆಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಆಕೆ ಯಾವಾಗಲೂ ಪತಿಗೆ ಕೀಟಲೆ ಕೊಟ್ಟು ಅವರ ನೆಮ್ಮದಿ ಕೆಡಿಸುತ್ತಿದ್ದಳು. ಒಮ್ಮೆ ಸಾಂತಿಪ್ಪೆ ಪತಿಯನ್ನು ತೀವ್ರವಾಗಿ ಆಕ್ಷೇಪಿಸಿ ಕಠಿಣವಾಗಿ ತರಾಟೆಗೆ ತೆಗೆದು ಕೊಂಡಳು. ಆದರೂ ಸಾಕ್ರೆಟಿಸ್ ಕೋಪಗೊಳ್ಳಲಿಲ್ಲ. ಪತ್ನಿಯ ಮತ್ಸರ ಮತ್ತಷ್ಟು ಹೆಚ್ಚಿತು. ಆಕೆ ಒಳಗೆ ಹೋಗಿ ಒಂದು ಪಾತ್ರೆಯಲ್ಲಿ ಕೊಳಕು ನೀರು ತಂದು ಸಾಕ್ರೆಟಿಸನ ತಲೆಗೆ ಸುರಿದಳು. ಆದರೂ ಅವರು ಏನು ನಡೆದಿಲ್ಲವೆಂಬಂತೆ ವರ್ತಿಸಿದರು. ಆಗ ಸಾಂತಿಪ್ಪೆ ಸೋಲೊಪ್ಪಿಕೊಳ್ಳಬೇಕಾಯಿತು. ಕೊಳಕು ನೀರಿನಿಂದ ತೊಯ್ದು ಹೋಗಿದ್ದ ಸಾಕ್ರೆಟಿಸ್ ನಗುತ್ತಾ ಹೀಗೆಂದರು- “ನಲ್ಲೆ! ನಿನ್ನ ಅಟ್ಟಹಾಸವು ಗುಡುಗಿಗೆ ಸಮಾನವಾಗಿತ್ತು. ಗುಡುಗಿನ ನಂತರ ಚೆನ್ನಾಗಿ ಮಳೆಯಾಗಬೇಕು. ಈ ಮಳೆ ಬಾರದಿದ್ದರೆ ಆಶ್ಚರ್ಯವಾಗುತ್ತಿತ್ತು.”

ಮನುಷ್ಯನು ದೇವನ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠನಾಗಿದ್ದಾನೆ. ತನಗಿಂತ ಶಕ್ತಿ ಶಾಲಿಯಾದವುಗಳನ್ನು ನಿಯಂತ್ರಿಸಲು ಅವನಿಗೆ ಸಾಧ್ಯವಿದೆ. ಆತನ ಬುದ್ದಿ ಶಕ್ತಿ, ವಿವೇಚನೆ ಮತ್ತು ಸಂವಹನ ಸಾಮರ್ಥ್ಯವು ಇತರೆಲ್ಲ ಜೀವಿಗಳಿಗಿಂತ ಮಿಗಿಲಾಗಿದೆ. ಆದರೂ ಆತ ಪ್ರಪಂಚದಲ್ಲಿ ಅತ್ಯಂತ ದಾರಿಗೆಟ್ಟವನೂ ನೀಚನೂ ಆಗಿ ಮಾರ್ಪಡುತ್ತಾನೆ. ಪರಿಶುದ್ಧ ಜೀವನದ ಮೂಲಕ ದೇವಚರರ ಮಟ್ಟಕ್ಕೇರಲು ಸಾಧ್ಯವಾಗುವ ಮನುಷ್ಯನು, ಪಾಪ ಕೂಪದಲ್ಲಿ ಬಿದ್ದಾಗ ಪಿಶಾಚಿಗಳ ಪಾತಾಳವನ್ನು ವಿೂರಿಸುತ್ತಾನೆ.

ಮನುಷ್ಯನನ್ನು ನೀಚನೂ ನಿಕೃಷ್ಟನೂ ಆಗಿ ಮಾರ್ಪಡಿಸುವುದರಲ್ಲಿ ಆತನ ಕೋಪವು ಗಣನೀಯ ಪಾತ್ರ ವಹಿಸುತ್ತದೆ. ಹೆಚ್ಚಿನವರು ಸಣ್ಣ ಪುಟ್ಟ ವಿಷಯಕ್ಕೆ ಕೋಪಿಸಿ ಕೊಳ್ಳುತ್ತಾರೆ. ಕೋಪ ಬಂದಾಗ ತನ್ನನ್ನು ಮರೆಯುತ್ತಾನೆ. ಅಂತರಂಗದಲ್ಲಿ ಕ್ರೋಧಾಗ್ನಿಯ ಪರ್ವತವು ಸ್ಫೋಟಗೊಂಡ ಕೂಡಲೇ ಹೆಚ್ಚಿನವರ ಯೋಚನಾ ಶಕ್ತಿ ಅಳಿದು ಹೋಗುತ್ತದೆ. ಆಗ ಅವಿವೇಕವು ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಆಗ ಅನೇಕರು ನ್ಯಾಯ-ಅನ್ಯಾಯವನ್ನು ವಿವೇಚಿಸದೆ ವರ್ತಿಸುತ್ತಾರೆ. ಜಗತ್ತಿನಲ್ಲಿ ನಡೆಯುವ ಹೆಚ್ಚಿನ ಅನ್ಯಾಯ ಅತ್ಯಾಚಾರಗಳಿಗೆ ಇದುವೇ ಹೇತುವಾಗುತ್ತದೆ.

ತಮಗಿಷ್ಟವಿಲ್ಲದ್ದನ್ನು ನೋಡಿದಾಗ, ಕೇಳಿದಾಗ, ತಿಳಿದಾಗ ಕೋಪಬಾರದವರು ಯಾರೂ ಇರಲಾರರು. ಅಧ್ಯಾತ್ಮಿಕ ತರಬೇತಿಯ ಮೂಲಕ ಮನಸ್ಸನ್ನು ಪರಿಶುದ್ಧಗೊಳಿಸಿ ಕೊಂಡವರು ಮಾತ್ರ ಅಂತಹ ಸಂದರ್ಭಗಳಲ್ಲಿ ಕೋಪವನ್ನು ನಿಯಂತ್ರಿಸಬಲ್ಲರು. ಕೋಪವನ್ನು ನಿಯಂತ್ರಿಸಲಾರದವರು ಮಾಡುವ ಕುಕೃತ್ಯಗಳು ವೀಕ್ಪಕರ ದೃಷ್ಟಿಯಲ್ಲಿ ಅವರನ್ನು ನಗೆಪಾಟಲಿಗೀಡು ಮಾಡುತ್ತದೆ. ಅವರು ಶಾಂತಚಿತ್ತರಾದ ಬಳಿಕ ತಮ್ಮ ಕುಕೃತ್ಯಗಳ ಬಗ್ಗೆ ತಾವೇ ಖೇದ ಮತ್ತು ನಾಚಿಕೆ ಪಡುತ್ತಾರೆ.

ಸಾಕ್ರೆಟಿಸ್‍ನಂತೆ ಸಹನೆ ಕೈಗೊಳ್ಳುವುದು ಮತ್ತು ಇತರರ ಕೋಪವನ್ನು ಚಾಕಚಕ್ಯತೆಯಿಂದ ನಿಭಾಯಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದರೂ ಅತ್ಯಂತ ಕೋಪ ಉಂಟು ಮಾಡುವ ವಿಷಯಗಳನ್ನು ಕಂಡಾಗ ತನ್ನನ್ನು ನಿಯಂತ್ರಿಸಲು ಶಾಂತಚಿತ್ತವನ್ನು ಕಾಪಾಡಿ ಕೊಳ್ಳಬಲ್ಲವರೇ ವಿವೇಕಮತಿಗಳು.

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *