ಹೊಸ ವರ್ಷ – ಹೊಸ ತೀರ್ಮಾನಗಳು

ಮತ್ತೊಂದು ಹೊಸ ವರ್ಷಕ್ಕೆ ಕಾಲಿರಿಸಿದ್ದೇವೆ. ಮನೆ ಕಛೇರಿಗಳ ಗೋಡೆಗಳನ್ನು ಅಲಂಕರಿಸಿದ 2017ರ ಕ್ಯಾಲೆಂಡರು ನಮಗೆ ವಿದಾಯದ ಸೂಚನೆಯನ್ನು ನೀಡಿ ತನ್ನ ಕರ್ತವ್ಯ ಮುಗಿಸಿ ವಿರಮಿಸುತ್ತಿದೆ. ಪುನಃ ಹೊಸ ವರ್ಷದ ಸಂಭ್ರಮ. ವಿವಿಧ ರೀತಿಯಲ್ಲಿ ಈ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಕುಣಿದು ಕುಪ್ಪಳಿಸಿ ಕುಡಿದು ತೂರಾಡಿ ಎಲ್ಲವನ್ನೂ ಕಳೆದುಕೊಳ್ಳುವವರ ಸಂಖ್ಯೆಯು ವರ್ಷಗಳು ಉರುಳಿದಂತೆ ಹೆಚ್ಚಾಗುತ್ತಲೇ ಇದೆ. ನಾವು ಈ ಬಾರಿ ಹೊಸ ತೀರ್ಮಾನಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಬೇಕಿದೆ. ವರ್ಷ ಪೂರ್ತಿ ಮಾನಸಿಕ ನೆಮ್ಮದಿ, ಆರೋಗ್ಯದೊಂದಿಗೆ ಜೀವಿಸಲು ಇದು ಸರ್ವರಿಗೂ ಸಹಕಾರಿಯಾಗಲಿ ಎಂಬುದು ಹೊಸ ವರ್ಷದ ಶುಭ ಹಾರೈಕೆ.

ಪ್ರೀತಿಸುವವರಿಗಾಗಿ ಸಮಯವನ್ನು ಮೀಸಲಿರಿಸುವೆ
ಈ ಯುಗದಲ್ಲಿ ಬದುಕುತ್ತಿರುವ ನಾವು ನಮ್ಮ ಬಹುಪಾಲು ಸಮಯ ವನ್ನು ಉಪಕರಣಗಳೊಂದಿಗೆ ವ್ಯಯಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲೆಲ್ಲ ಅಳುವುದು, ನಗುವುದು ಮತ್ತು ಮಾತನಾಡುವುದು, ಭಾವನೆಗಳನ್ನು ಹಂಚಿಕೊಳ್ಳುವುದು ಎಲ್ಲ ಕೆಲಸಗಳನ್ನು ಮೊಬೈಲ್ ನಿರ್ವಹಿಸುತ್ತಿದೆ. ದೈಹಿಕವಾಗಿ ಮನೆಯಲ್ಲಿ ಎಲ್ಲರೂ ಉಪಸ್ಥಿತರಿದ್ದರೂ ಅಪರಿಚಿತರಂತೆ ವರ್ತಿಸುತ್ತಿದ್ದೇವೆ. ಈ ಮಧ್ಯೆ ವೃದ್ಧರಾದ ತಂದೆ-ತಾಯಿಯರಿಗೆ ಹದಿಹರೆಯದ ಮಕ್ಕಳಿಂದ ಮಾತು, ನಗುವನ್ನು ಬಯಸುವ ಮಧ್ಯ ವಯಸ್ಕ ಹೆತ್ತವರು ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದ ಬೇಸತ್ತಿದ್ದಾರೆ. ಹೊಸ ವರ್ಷದಲ್ಲೊಂದಿಷ್ಟು ಹೊಸ ತೀರ್ಮಾನವನ್ನು ಮಾಡಬೇಕಿದೆ. ಮನೆಯಲ್ಲಿರುವಾಗ ಮೊಬೈಲ್‍ನ ಬಳಕೆ ಕನಿಷ್ಠಗೊಳಿಸುತ್ತೇನೆ. ಮಕ್ಕಳು, ಹೆತ್ತವರು, ಒಡಹುಟ್ಟಿದವರೊಂದಿಗೆ ಹೆಚ್ಚು ಸಮಯವನ್ನು ವಿನಿಯೋಗಿಸುತ್ತೇನೆ ಎಂದು ಇಂದೇ ತೀರ್ಮಾನಿಸಿ ಬಿಡಿ. ಒಂದು ವರ್ಷದೊಳಗೆ ನಿಮ್ಮ ಮತ್ತು ನಿಮ್ಮ ಮನೆ ಮಂದಿಯ ಸಂಬಂಧಗಳಲ್ಲಿ ಯಾವ ರೀತಿಯ ಅದ್ಭುತ ಪರಿಣಾಮಗಳಾಗುತ್ತವೆ, ಕಾದು ನೋಡಿ.

ಸಾಮಾಜಿಕ ಜಾಲತಾಣಗಳನ್ನು ಅನಗತ್ಯವಾಗಿ ಬಳಕೆ ಮಾಡುವುದಿಲ್ಲ
ಸೋಶಿಯಲ್ ಮೀಡಿಯಾಗಳು ನಮ್ಮನ್ನು ಸಂಪೂರ್ಣ ನಿಯಂತ್ರಿಸಿ ಮುಂದಕ್ಕೊಯ್ಯುವ ದಿನಗಳಲ್ಲಿ ನಾವಿಂದು ಬದುಕುತ್ತಿದ್ದೇವೆ. ಕನಿಷ್ಠ ಹತ್ತು ನಿಮಿಷಕ್ಕೊಮ್ಮೆಯಾದರೂ ಮೊಬೈಲನ್ನು ಎತ್ತಿಕೊಂಡು ಮೆಸೇಜ್‍ಗಳನ್ನು ನೋಡದ ವಾಟ್ಸಪ್, ಫೇಸ್‍ಬುಕ್ ಜಾಲಾಡದ ವ್ಯಕ್ತಿಗಳು ವಿರಳ. ನಮ್ಮ ಬಹುಪಾಲು ಸಮಯ ಇದರಲ್ಲಿ
ದುರುಪಯೋಗವಾಗುತ್ತಿದೆ. ಈ ಮಾಧ್ಯಮಗಳನ್ನು ಯಾವುದಕ್ಕೆ ಉಪಯೋಗಿಸಬೇಕು. ಯಾಕಾಗಿ ಬಳಸಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರುವುದು ಅತಿ ಅಗತ್ಯ. ಇವುಗಳ ದುರುಪಯೋಗ ಕುಟುಂಬವನ್ನು ಒಡೆಯುತ್ತಿದೆ. ದಂಪತಿಗಳನ್ನು ಬೇರ್ಪಡಿಸುತ್ತಿವೆ. ಮಕ್ಕಳನ್ನು ದಾರಿ ತಪ್ಪುವಂತೆ ಪ್ರೇರೇಪಿಸುತ್ತಿವೆ ಎಂಬುದನ್ನು ಮರೆಯಬಾರದು. ಇತರರನ್ನು ಹಳಿಯಲು, ಮನ ನೋಯಿಸಲು, ಕೀಳಾಗಿಸಲು ಅನಗತ್ಯವಾಗಿ ಈ ಮಾಧ್ಯಮಗಳನ್ನು ಬಳಸುವುದಿಲ್ಲ. ಯಾವುದೇ (ಫೇಕ್) ಅವಾಸ್ತವಿಕ ಸುದ್ದಿಗಳನ್ನು ನಾನು ಪಾರ್ವರ್ಡ್ ಮಾಡುವುದಿಲ್ಲ ಎಂದು ಇಂದೇ ತೀರ್ಮಾನಿಸಿ ಬಿಡೋಣ.

ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚುತ್ತೇನೆ
ಮಿತಿ ಇಲ್ಲದ ಆಗ್ರಹಗಳು, ನಮ್ಮ ಮೇಲೆ ನಮಗೆ ನಿಯಂತ್ರಣವಿಲ್ಲದೆ ಹೋದುದು ನಮ್ಮ ಕಾಲು ಹಾಸಿಗೆಯಿಂದ ಹೊರಬೀಳುತ್ತಿರುವುದಕ್ಕೆ ಪ್ರಮುಖ ಕಾರಣಗಳು. ಸಾಲದ ಶೂಲದಲ್ಲಿ ಮುಳುಗೇಳುತ್ತಿರುವ, ಬಡ್ಡಿಯಲ್ಲಿ ಕೊಳೆಯುತ್ತಿರುವ ಅನೇಕರ ಆರ್ಥಿಕತೆಯು ದಿಗಿಲು ಮೂಡಿಸುವಂತಹದ್ದಾಗಿದೆ. ನಮ್ಮ ಹಿರಿಯರ ಸರಳ ಜೀವನ, ಉನ್ನತ ಚಿಂತನೆಗೆ ನಾವು ಮನಸ್ಸು ಮಾಡಬೇಕಿದೆ. ಹಣ ಸಂಪಾದನೆಗೆ, ಜೀವನಾಧಾರವನ್ನು ವಿಶಾಲಗೊಳಿಸಲು ವಿವಿಧ ಪ್ರಾಮಾಣಿಕ ಮಾರ್ಗಗಳನ್ನು ಕಂಡುಕೊಳ್ಳುವುದರ ಜೊತೆಗೆ, ಹಣವನ್ನು ಇತಿಮಿತಿಯಲ್ಲಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಭವಿಷ್ಯವಾದ ಮಕ್ಕಳ ಅಭ್ಯಾಸವನ್ನು ಸರಿಪಡಿಸಬೇಕು. ಅವರು ಆಶಿಸಿದ್ದೆಲ್ಲವನ್ನು ಖರೀದಿಸಿ ಕೊಡುವ ರೋಬೊಟ್‍ಗಳಾಗಿ ನಾವು ಮಾರ್ಪಡಬಾರದು. ಹಣದ ಸರಿಯಾದ ಉಪಯೋಗವನ್ನು ಮಕ್ಕಳಿಗೂ ಅಭ್ಯಾಸ ಮಾಡಿಸಬೇಕಿದೆ. ಕೇಳಿದಕ್ಕೆಲ್ಲ ಹಣವನ್ನು ಒದಗಿಸುವ ಹೆತ್ತವರನ್ನೇ ಎ.ಟಿ.ಎಂ. ಮೆಷಿನ್‍ನಂತೆ ಮಕ್ಕಳು ಬಳಸುತ್ತಾರೆ. ನೆನಪಿರಲಿ.

ಒಂದಷ್ಟು ಹೊಸ ಪುಸ್ತಕಗಳನ್ನು ಓದುತ್ತೇನೆ
ಮೇಧಾವಿಗಳು ಹೆಚ್ಚು ಓದುವವರಾಗಿರುತ್ತಾರೆ. ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ದಿನಚರಿಯನ್ನು ಗಮನಿಸಿದರೆ ಅವರು ದಿನದ ಹೆಚ್ಚು ಸಮಯವನ್ನು ಓದುವುದರಲ್ಲಿ ಕಳೆಯುವವರಾಗಿರುತ್ತಾರೆ. ಓದು ನಮ್ಮನ್ನು ಬೆಳೆಸುತ್ತದೆ. ವಿವಿಧ ರೀತಿಯ ಪುಸ್ತಕಗಳು ನಮ್ಮ ಅರಿವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ನಮ್ಮ ಭಾಷೆ ಉತ್ತಮವಾಗುತ್ತದೆ. ನಮ್ಮಲ್ಲಿ ಧೈರ್ಯ ಮೂಡುತ್ತದೆ. ನಾವು ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಮಕ್ಕಳಲ್ಲಿಯೂ ಆ ಬಗ್ಗೆ ಅಭಿರುಚಿ ಉಂಟಾಗುತ್ತದೆ. ಸದಭಿರುಚಿಯ ಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿಕೊಡುವಲ್ಲಿ ಹೆತ್ತವರು ಕಾಳಜಿ ವಹಿಸಬೇಕು. ಮಕ್ಕಳನ್ನು ಪುಸ್ತಕ ಮಳಿಗೆಗಳಿಗೆ ಕರೆದುಕೊಂಡು ಹೋಗಬೇಕು. ಅವರಿಗೆ ಉಡುಗೊರೆಯ ರೂಪದಲ್ಲಿ ಪುಸ್ತಕಗಳನ್ನು ನೀಡಬೇಕು. ಪುಸ್ತಕಗಳಿಗೆ ವ್ಯಯಿಸುವ ಹಣವನ್ನು ವ್ಯರ್ಥವೆಂದು ತಿಳಿಯಬಾರದು. ಮನೆಗೊಂದು ಗ್ರಂಥಾಲಯವನ್ನು ರಚಿಸುವ ಮನಸ್ಸು ಮಾಡಬೇಕು. ಈ ವರ್ಷ ಪೂರ್ತಿ ಹೊಸ ಪುಸ್ತಕಗಳನ್ನು ಖರೀದಿಸಿ ಓದುತ್ತೇನೆ ಎಂಬುದಾಗಿ ತೀರ್ಮಾನಿಸಿಕೊಳ್ಳಿ.

ನೆರೆಹೊರೆಯವರೊಂದಿಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವೆ
ನಮ್ಮ ಪ್ರತಿಯೊಂದು ಕಷ್ಟ ಸುಖಗಳಿಗೆ ತಕ್ಷಣ ಓಗೊಡುವ ಸಾಮಥ್ರ್ಯವಿರುವವರು ನಮ್ಮ ನೆರೆ ಮನೆಯವರು. ಇಂದು ನೆರೆಹೊರೆಯವರೊಂದಿಗೆ ಸಂಬಂಧ ಹೊಂದದಿರುವುದೇ ಒಂದು ಫ್ಯಾಶನ್ ಆಗಿ ಮಾರ್ಪಟ್ಟಿದೆ. ಅವರು ಯಾರ ರಗಳೆಗೂ ಇಲ್ಲ. ಅವರಷ್ಟಕ್ಕೆ ಅವರು. ಬಾಗಿಲು ಹಾಕಿಕೊಂಡರೆ ಯಾವುದಕ್ಕೂ ತಲೆ ಹಾಕುವುದಿಲ್ಲ ಎಂಬಿತ್ಯಾದಿ ಮಾತುಗಳನ್ನು ಸಂಭಾವಿತರ ಲಕ್ಷಣವೆಂದು ಕೊಳ್ಳಲಾಗುತ್ತದೆ. ಆದರೆ ನೆರೆಮನೆಯವರೊಂದಿಗೆ ಸುಮಧುರ ಸಂಬಂಧ ಇರಲೇಬೇಕು. ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು. ಅನಗತ್ಯ ವಿಚಾರಗಳಿಗೆ ಮೂಗು ತೂರಿಸಲೇ ಬಾರದು. ಆದರೆ ಅವರು ತಿಂದಿದ್ದಾರೆಯೇ, ಆರೋಗ್ಯದಿಂದಿದ್ದಾರೆಯೇ? ಮರಣ ಸಂಭವಿಸಿದೆಯೇ ಎಂಬುದು ಕೂಡಾ ತಿಳಿಯದೆ ಇರುವ ಸಂಭಾವಿತರ ವರ್ತನೆ ಆಕ್ಷೇಪಾರ್ಹ. ಉತ್ತಮ ಮಾತುಗಳ ವಿನಿಮಯ, ತಯಾರಿಸಿದ ಆಹಾರ ಪದಾರ್ಥಗಳ ವಿನಿಮಯ, ಹಬ್ಬಗಳ ಸಂದರ್ಭಗಳಲ್ಲಿ ಸಿಹಿ ತಿಂಡಿ ಉಡುಗೊರೆ ವಿನಿಮಯ ಇತ್ಯಾದಿ ನಮ್ಮ ಸಂಸ್ಕøತಿಯಾಗಿ ಮಾರ್ಪಡಬೇಕು. ಆಗ ಹಳಸಿದ ಸಂಬಂಧಗಳು ಪುನಃ ಉತ್ತಮಗೊಳ್ಳಲು ಸೌಹಾರ್ದದ ವಾತಾವರಣ ನೆಲೆಗೊಳ್ಳಲು ಕಾರಣವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಮ್ಮ ಮುಚ್ಚಿದ ಬಾಗಿಲುಗಳೇ ಅನೇಕ ರೀತಿಯ ಅಪನಂಬಿಕೆಗಳನ್ನು ಬೆಳೆಸಿ ಪೋಷಿಸಲು ಕಾರಣವಾಗುತ್ತಿದೆ. ಆದುದರಿಂದ ನಾವು ಈ ಬಾರಿ ನೆರೆ ಹೊರೆಯವರನ್ನು ಗೌರವಿಸುವ ಪ್ರೀತಿಯ ಆತ್ಮೀಯತೆಯ ವಾತಾವರಣವನ್ನು ಬೆಳೆಸುತ್ತೇವೆಂದು ತೀರ್ಮಾನಿಸೋಣ.

ಸಮಾಜ ಮುಖಿ ಕೆಲಸಗಳಿಗಾಗಿ ಸಮಯವನ್ನು ಹೊಂದಿಸುವೆ
ನಮ್ಮ ಪೈಕಿ ಹೆಚ್ಚಿನವರು ಕೇವಲ ತಮ್ಮ ಬಗ್ಗೆ ಮಾತ್ರ ಚಿಂತಿಸುವವರಾಗಿ ಮಾರ್ಪಟ್ಟಿದ್ದಾರೆ. ನಾನು, ನನ್ನ ಉದ್ಯೋಗ, ನನ್ನ ಕುಟುಂಬ- ಇದರಾಚೆ ಯೋಚಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಸಮಾಜದ ಇತರರ ಬಗ್ಗೆ, ಸಹಜೀವಿಗಳ ಬಗ್ಗೆ ನಮ್ಮ ಹೊಣೆಗಾರಿಕೆ ಬಹಳಷ್ಟಿದೆ. ಅವುಗಳಿಗಾಗಿ ನಮ್ಮ ಸಮಯವನ್ನು ಹೊಂದಿಸಿಕೊಳ್ಳಬೇಕು. ನೊಂದವರ ಕಣ್ಣೀರೊರೆಸಲು, ನೋವಿನಲ್ಲಿದ್ದವರನ್ನು ಸಂತೈಸಲು ಆಘಾತಕ್ಕೊಳಗಾದವರನ್ನು ಚೇತರಿಸಿಕೊಳ್ಳುವಂತೆ ಮಾಡಲು, ಮರ್ದಿತರಿಗೆ ನೆರವಾಗಲು, ಮರ್ದಕರ ಕೈಯನ್ನು ತಡೆಯಲು ಈ ರೀತಿಯ ವಿವಿಧ ಕೆಲಸಗಳನ್ನು ನಾವು ನೆರವೇರಿಸಬೇಕಿದೆ. ವಿಧವೆಯರ, ಅನಾಥರ, ದರಿದ್ರರ, ದಿಕ್ಕಿಲ್ಲದವರ ಪಾಲಿಗೆ ನಾವು ಆಶಾಕಿರಣವಾಗಿ ಮಾರ್ಪಡಬೇಕಾದ ಅಗತ್ಯವಿದೆ. ನಮ್ಮ ಕೆಲಸಗಳ ಬಳಿಕ ಬಿಡುವು ಮಾಡಿಕೊಂಡು ಈ ರೀತಿಯ ಸಹಾಯ ಒದಗಿಸುವ ಸಮಾಜ ಸೇವೆ ಮಾಡುವ ಸಂಘಟನೆಗಳೊಂದಿಗೆ ಕೈ ಸೇರಿಸಬೇಕು. ನಮ್ಮಿಂದಾಗುವ ಸಕಲ ಸಹಾಯ ನೆರವನ್ನು ತನು ಮನ ಧನದ ಮೂಲಕ ನೀಡಬೇಕು. ನಮ್ಮ ಕಾರಣದಿಂದ ಒಂದು ಕುಟುಂಬವು ಚೆನ್ನಾಗಿ ಮುನ್ನಡೆದರೆ ಈ ಜಗತ್ತಿನ ಎಲ್ಲ ಸಂಪತ್ತುಗಳಿಗಿಂತ ಅದು ಶ್ರೇಷ್ಠ ಎಂಬುದನ್ನು ಮರೆಯಬಾರದು. ಆದುದರಿಂದ ಈ ಹೊಸ ವರ್ಷದಲ್ಲಿ ನನ್ನಿಂದಾದಷ್ಟು ಸಮಯವನ್ನು ಇಂತಹ ಚಟುವಟಿಕೆಗಳಿಗೆ ಮೀಸಲಿಡುತ್ತೇನೆಂದು ತೀರ್ಮಾನಿಸೋಣ ಅಲ್ಲವೇ?

ಹಸಿವಾದಾಗ ಮಾತ್ರ ತಿನ್ನುವೆ ಆಹಾರ ಪೋಲು ಮಾಡಲಾರೆ
ನಮ್ಮ ಆಸ್ಪತ್ರೆಗಳು, ಕ್ಲಿನಿಕ್‍ಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಮುಖ್ಯ ಕಾರಣ ನಾವು ತಿನ್ನುವ ಆಹಾರ ಪದ್ಧತಿ. ಆಹಾರವನ್ನು ಹಸಿವಾಗದಿದ್ದರೂ ತಿನ್ನುವುದು ಮನುಷ್ಯರು ಮಾತ್ರ. ಮನುಷ್ಯರ ಹೊರತು ಇತರ ಯಾವ ಜೀವಿಯೂ ಹಸಿವಾಗದಿದ್ದರೆ ತಿನ್ನುವುದಿಲ್ಲ. ತಿನ್ನುವುದು, ನಿರಂತರ ಏನನ್ನಾದರೂ ಮೆಲ್ಲುತ್ತಿರುವುದು, ಹೊತ್ತು ಗೊತ್ತಿಲ್ಲದೆ ತಿನ್ನುವುದು. ತಡ ರಾತ್ರಿಯ ವೇಳೆ ಹೊಟ್ಟೆ ತುಂಬಾ ತಿನ್ನುವುದು ಫ್ಯಾಶನ್ ಆಗಿದೆ. ಆದರೆ ಇದುವೇ ನಮ್ಮನ್ನು ಅತಿ ಹೆಚ್ಚು ಅನಾರೋಗ್ಯಕ್ಕೆ ಈಡು ಮಾಡುತ್ತಿದೆ. ಪುಕ್ಕಟೆ ಸಿಗುತ್ತದೆಯೆಂದು ಮದುವೆ ಮನೆ, ಸಮಾರಂಭ, ಪಾರ್ಟಿಗಳಲ್ಲಿ ಬೇಕಾಬಿಟ್ಟಿ ಹಾಕಿಸಿಕೊಂಡು ಕೊನೆಗೆ ಎಲ್ಲವನ್ನೂ ತಿಂದು ಮುಗಿಸಲಿಕ್ಕಾಗದೆ ಕಸದ ತೊಟ್ಟಿಗೆ ಸುರಿಯುವುದು ಇಂದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ದುಷ್ಟತೆಯನ್ನು ನಾವು ಅಸಹಾಯಕರಂತೆ ನೋಡಿ ಮೂಕ ಪ್ರೇಕ್ಷಕರಾಗುತ್ತಿದ್ದೇವೆ. ನಾವು ನಮ್ಮಲ್ಲಿ ಬದಲಾವಣೆಯನ್ನು ತರಬೇಕು. ನಾನು ಒಂದು ತುತ್ತು ಆಹಾರವನ್ನು ಪೋಲು ಮಾಡುವುದಿಲ್ಲ. ಅನಗತ್ಯ ಆಹಾರ ಸೇವಿಸುವುದಿಲ್ಲ ಎಂಬುದಾಗಿ ನಮ್ಮಲ್ಲೇ ತೀರ್ಮಾನಿಸಿಕೊಳ್ಳಬೇಕು. ಕನಿಷ್ಠ ಪಕ್ಷ ನಮ್ಮ ಮಕ್ಕಳಿಗೆ ನಮ್ಮ ಕುಟುಂಬಕ್ಕೆ ಈ ಶಿಕ್ಷಣವನ್ನು ನೀಡಬೇಕು. ಈ ಬಗ್ಗೆ ಜಾಗೃತಿಯನ್ನುಂಟು ಮಾಡಲು ವಿವಿಧ ಮಾಧ್ಯಮಗಳ ಮೂಲಕ ನಿರಂತರ ಪ್ರಯತ್ನಿಸುತ್ತಿರಬೇಕು. ಒಪ್ಪೊತ್ತಿನ ಆಹಾರಕ್ಕೆ ಪರದಾಡುತ್ತಿರುವ, ಅಪೌಷ್ಠಿಕತೆಯಿಂದ ಸಾವನ್ನಪ್ಪುತ್ತಿರುವ ಲಕ್ಷಾಂತರ ಮಕ್ಕಳಿರುವ ಒಂದು ದೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಆಹಾರ, ನೀರು ಪೋಲಾಗದಂತೆ ನೋಡಿಕೊಳ್ಳುತ್ತೇನೆ ಎಂಬ ದೃಢ ನಿಶ್ಚಯವನ್ನು ಇಂದೇ ಮಾಡಿಕೊಳ್ಳೋಣ. 

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *